ADVERTISEMENT

ವಿಶ್ಲೇಷಣೆ: ‘ಮುಳುಗು’ ಈಗ ಸಾಮಾಜಿಕ ಬಿಕ್ಕಟ್ಟು!

ಈಜು ಕಲಿಸುವುದನ್ನು ಶಿಕ್ಷಣ ಕ್ರಮದಲ್ಲಿ ಅಳವಡಿಸಬೇಕಾದ ಅಗತ್ಯ ಬಂದಿದೆ

ಗುರುರಾಜ್ ಎಸ್.ದಾವಣಗೆರೆ
Published 21 ನವೆಂಬರ್ 2024, 21:07 IST
Last Updated 21 ನವೆಂಬರ್ 2024, 21:07 IST
   

ಮೈಸೂರಿನ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು, ಮಂಗಳೂರಿನ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಪ್ರಾಣ ಬಿಟ್ಟಿರುವ ದಾರುಣ ಪ್ರಕರಣವು ಸುರಕ್ಷಾ ಕ್ರಮಗಳ ಲೋಪದ ಬಗ್ಗೆ ಪ್ರಶ್ನೆ ಎತ್ತುವುದರ ಜೊತೆಗೆ ನೀರಿನಲ್ಲಿ ಮುಳುಗುವುದು ಅಪಘಾತವಷ್ಟೇ ಅಲ್ಲ ಅದೊಂದು ಸಾಮಾಜಿಕ ಬಿಕ್ಕಟ್ಟು ಎಂಬುದನ್ನು ಸಾರಿ ಹೇಳುತ್ತಿದೆ.

ಮೂರು ತಿಂಗಳ ಹಿಂದೆ ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ದೆಹಲಿಯ ರಾಜೇಂದ್ರ ನಗರದ ಕೋಚಿಂಗ್ ಸಂಸ್ಥೆಯೊಂದರ ನೆಲಮಾಳಿಗೆಯ ತರಗತಿ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಮಳೆನೀರು ತುಂಬಿಕೊಂಡಾಗ, ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.ಈ ಪ್ರಕರಣವು ಕೋಚಿಂಗ್ ಸಂಸ್ಥೆಗಳು ಇರುವ ಜಾಗದ ಅವ್ಯವಸ್ಥೆಯ ಚಿತ್ರಣ ನೀಡಿತ್ತಾದರೂ ಬಾಳಿ ಬದುಕಬೇಕಾದ ಹರೆಯದ ಯುವಕರು ಅಸಹಾಯಕರಂತೆ ಸಾವನ್ನಪ್ಪಿದ್ದು ಬಹಳ ದೊಡ್ಡ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿತ್ತು. ವಿದ್ಯಾರ್ಥಿಗಳ ಇಂತಹ ಸಾವು ಜನರು ಎಲ್ಲಿ, ಯಾವಾಗ ಮತ್ತು ಹೇಗೆ ಬೇಕಾದರೂ ಮುಳುಗಿ ಸಾಯಬಹುದು ಎಂಬ ವ್ಯಂಗ್ಯವನ್ನು ಧ್ವನಿಸುತ್ತಿತ್ತು.

ಹದಿನೈದು ವರ್ಷಗಳ ಹಿಂದೆ ನಮ್ಮ ರಾಜ್ಯದ ಅಪ್ರತಿಮ ಗಾಯಕ ಜಿ.ವಿ.ಅತ್ರಿ ಮತ್ತವರ ಕುಟುಂಬದ ಆರು ಜನ ಶೃಂಗೇರಿ ಬಳಿಯ ತುಂಗಾ ನದಿಯ ಸೊಂಟದೆತ್ತರದ ನೀರಿಗೆ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡ ದುರ್ಘಟನೆಯನ್ನು ನಾವಿನ್ನೂ ಮರೆತಿಲ್ಲ.

ADVERTISEMENT

ನದಿ, ಸಮುದ್ರ, ಬಾವಿ, ಕೊಳ, ಕೆರೆ, ಹಳ್ಳ, ಕ್ವಾರಿ ಪ್ರವಾಹ ಮತ್ತು ಸುಳಿಗಳಲ್ಲಿ ಸಿಲುಕಿ ಮುಳುಗುವುದನ್ನು ಸಾಮಾನ್ಯ ಘಟನೆ ಎಂಬಂತೆ ಜನ ಸ್ವೀಕರಿಸುತ್ತಾರೆ. ಆದರೆ ಈಜುಕೊಳ, ನೀರಿನ ತೊಟ್ಟಿ, ಸಂಪು, ಅಪಾರ್ಟ್‌ಮೆಂಟ್‌ಗಳ ನೆಲಮಹಡಿಗಳ ಸಣ್ಣ ಆಳದ ನೀರಿನಲ್ಲಿ ಮುಳುಗಿ ಸಾಯುವುದರ ಬಗ್ಗೆ ತೀವ್ರ ಆತಂಕಪಡುತ್ತಾರೆ. ಸತ್ತವರ ಅಜಾಗರೂಕತೆ ಏನೇ ಇರಲಿ, ಸಂಬಂಧಿಸಿದವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಯಾರದೋ ನಿರ್ಲಕ್ಷ್ಯ, ಅಜಾಗರೂಕತೆಯಿಂದ ಹೀಗಾಗಿದೆ ಎಂಬ ಕಾರಣಕ್ಕೆ, ಸಂಬಂಧಿಸಿದ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸುವುದನ್ನೇ ನೆಚ್ಚಿಕೊಂಡು ಕೂರುವ ನಾವು, ನೀರಿನಲ್ಲಿ ಮುಳುಗಿ ಪ್ರಾಣ ಬಿಡುವ ಪ್ರಕರಣಗಳು ಸಾಮಾಜಿಕ ಸಮಸ್ಯೆಯ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸುತ್ತಿಲ್ಲ.

ಅಂಕಿ ಅಂಶಗಳ ಪ್ರಕಾರ, ಪ್ರತಿ ತಾಸಿಗೆ 42 ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ, ವಾರ್ಷಿಕ 2.36 ಲಕ್ಷ ಜನ ನೀರಿನಲ್ಲಿ ಮುಳುಗುವುದರಿಂದ ಸಾಯುತ್ತಿದ್ದಾರೆ ಮತ್ತು ಅದರಲ್ಲಿ ಶೇಕಡ 20ರಷ್ಟು ಮಂದಿ ಒಂದರಿಂದ 14ರ ವಯೋಮಾನದ ಒಳಗಿನ ಮಕ್ಕಳೇ ಆಗಿರುತ್ತಾರೆ. ಇದು ಅಪೌಷ್ಟಿಕತೆ, ಮಲೇರಿಯಾದಿಂದ ಸಾಯುವವರಿಗಿಂತ ಹೆಚ್ಚು. ನೀರಿನ ಸೆಳೆತಕ್ಕೆ ಸಿಲುಕಿ ಉಗಾಂಡ, ವಿಯೆಟ್ನಾಂ ದೇಶಗಳಲ್ಲಿ ಎಳೆಯ ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದಾರೆ. ಬಾಂಗ್ಲಾದೇಶದ ಶೇ 43ರಷ್ಟು ಶಿಶುಮರಣಗಳು ನೀರಿನಲ್ಲಿ ಮುಳುಗುವುದರಿಂದ ಸಂಭವಿಸುತ್ತಿವೆ. ಅಮೆರಿಕದಲ್ಲಿ ಮಕ್ಕಳು ಈಜುಕೊಳ ಮತ್ತು ಮನೆಯ ಬಿಸಿನೀರಿನ ಟಬ್‌ಗಳಲ್ಲಿ  ಮುಳುಗುತ್ತಿದ್ದಾರೆ.

ನಮ್ಮ ದೇಶದ ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳು ಶಾಲೆ ತಲುಪಲು, ರಭಸದಿಂದ ಹರಿಯುವ, ಮೊಸಳೆ, ಹಾವುಗಳಿರುವ ನದಿಗಳ ಮೇಲೆ ನಿರ್ಮಿಸಲಾದ ಸಂಕಗಳನ್ನು ಬಳಸಿ, ಒಂದು ಕಡೆಯಿಂದ ಇನ್ನೊಂದು ಕಡೆ ಕೈಯಲ್ಲಿ ಜೀವ ಹಿಡಿದು ಸಾಗುವುದನ್ನು ಕಂಡು ‘ಅಯ್ಯೋ ಈ ಮಕ್ಕಳು ಅದೆಷ್ಟು ಕಷ್ಟಪಡುತ್ತಿದ್ದಾರೆ’ ಎಂದು ನೊಂದುಕೊಳ್ಳುತ್ತೇವೆ. ಆದರೆ ಪರಿಹಾರ ರೂಪವಾಗಿ ಏನನ್ನೂ ಮಾಡದ ನಿರ್ಲಜ್ಜತನ ಬೆಳೆಸಿಕೊಂಡಿದ್ದೇವೆ.

ಆತ್ಮಹತ್ಯೆಗೆಂದು ನೀರಲ್ಲಿ ಮುಳುಗಿ ಸಾಯುವವರ ಸಂಖ್ಯೆ ಅಷ್ಟೇನೂ ದೊಡ್ಡದಿಲ್ಲ. ತೆಪ್ಪ, ದೋಣಿಗಳಲ್ಲಿ ಸಂಚರಿಸುವಾಗ ಆಗುವ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ದೊಡ್ಡದಿದೆ. ಪ್ರಾಕೃತಿಕ ಅವಘಡಗಳಲ್ಲಿ ಕೊಚ್ಚಿ ಹೋಗುವವರು, ಸುನಾಮಿಗೆ ಸಿಲುಕಿ ಕಾಣೆಯಾಗುವವರು, ಪ್ರವಾಹಗಳಲ್ಲಿ ಸಿಲುಕಿ ಪ್ರಾಣ ಬಿಡುವವರು ಎಷ್ಟು ಎಂಬ ಬಗ್ಗೆ ಸ್ಪಷ್ಟ ದಾಖಲೆಗಳು ಇಲ್ಲ.

ಪ್ರವಾಸ ಹೋದಾಗ ಅಜಾಗರೂಕತೆ ಕಾರಣಕ್ಕೆ, ಮೀನು ಹಿಡಿಯುವಾಗ, ದೋಣಿ ನಡೆಸುವಾಗ ಆಯತಪ್ಪಿ ನೀರಿಗೆ ಬಿದ್ದು ಸಾವು ತಂದುಕೊಳ್ಳುವವರೂ ಇದ್ದಾರೆ. ಎಲ್ಲವನ್ನೂ ಪರಿಗಣಿಸಿದರೆ ಮುಳುಗಿ ಸಾಯುವವರ ಸಂಖ್ಯೆಯು ಮೇಲೆ ಹೇಳಿದ್ದಕ್ಕಿಂತ ಐದಾರುಪಟ್ಟು ಜಾಸ್ತಿ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಅಭಿಪ್ರಾಯಪಟ್ಟಿದೆ. ಆದರೂ ನಮ್ಮ ಗಮನ ಇದರ ಕಡೆ ಇಲ್ಲ.

ಎಂಜಿನಿಯರಿಂಗ್ ಪದವಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ನೀರಿನ ಆಳ, ಅಕಸ್ಮಾತ್ ಆಯತಪ್ಪಿ ಕೆಳಗೆಬಿದ್ದರೆ, ಮುಳುಗುವಂತಾದರೆ, ಈಜಲು ಬಾರದಿದ್ದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ತಿಳಿದಿದ್ದವೋ ಇಲ್ಲವೋ ಹೇಳುವವರಿಲ್ಲ. ಆದರೆ ರೆಸಾರ್ಟ್ ನಡೆಸುವವರು ನೀರಿಗಿಳಿಯುವವರ ರಕ್ಷಣೆಗೆ ಒದಗಿಸಬೇಕಾದ ರಕ್ಷಣಾ ಪರಿಕರ, ಹೇಗೆ ಉಪಯೋಗಿಸಬೇಕೆಂಬುದರ ಪ್ರಾತ್ಯಕ್ಷಿಕೆ, ಎಲ್ಲಿ ಎಷ್ಟು ಅಡಿ ಆಳವಿದೆ, ಕಾಲಡಿಯ ನೆಲ ಎಲ್ಲಿ ಜಾರುತ್ತದೆ, ಈಜಲು ಬರದಿದ್ದವರು ಎಷ್ಟು ಆಳದವರೆಗೆ ಸುರಕ್ಷಿತವಾಗಿ ಇರಬಹುದು, ಅಪಾಯದ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು, ಸಹಾಯಕ್ಕಾಗಿ ಯಾರನ್ನು ಕರೆಯಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡಲೇಬೇಕು. ಪ್ರವಾಸ ಕೈಗೊಳ್ಳುವವರು, ವಿದ್ಯಾರ್ಥಿಗಳು, ಸ್ಥಳೀಯರ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.

ವಿಶ್ವಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ, ಮುಳುಗಿ ಸಾಯುವವರ ಪೈಕಿ ಶೇ 90ರಷ್ಟು ಜನ ಕೆಳ ಮತ್ತು ಮಧ್ಯಮ ಆದಾಯವಿರುವ ದೇಶಗಳ ಪ್ರಜೆಗಳು ಎಂಬ ದತ್ತಾಂಶ ದೊರಕಿದೆ. ಇವರಲ್ಲಿ ಮುಂದುವರಿದ ದೇಶಗಳ ಬಡವರು ಸಹ ಇದ್ದಾರೆ. ಇದು ಹೊಸ ಚಿಂತನೆಗೆ ದಾರಿ ಮಾಡಿದೆ. ಪ್ರವಾಹಗಳ ಸಂದರ್ಭಗಳಲ್ಲಿ ಅಸುನೀಗುವವರ ಒಟ್ಟು ಸಂಖ್ಯೆಯಲ್ಲಿ ಶೇ 75ರಷ್ಟು ಜನ ನೀರಿನಲ್ಲಿ ಮುಳುಗುವುದರಿಂದಲೇ ಸಾಯುತ್ತಾರೆ. ಮುಳುಗುವುದರಿಂದ ಸಾಯುವವರ ಕುರಿತಾದ ಜಾಗತಿಕ ಮಟ್ಟದ ವರದಿಯೊಂದನ್ನು ವಿಶ್ವ ಆರೋಗ್ಯ ಸಂಸ್ಥೆಯು 10 ವರ್ಷಗಳ ಹಿಂದೆ ಪ್ರಕಟಿಸಿತ್ತು. ಮುಳುಗು ಅವಘಡಗಳನ್ನು ತಡೆಯಲು ಸರಿಯಾದ ಅಧ್ಯಯನ, ನೀತಿ ಮತ್ತು ಕಾರ್ಯ ಚೌಕಟ್ಟುಗಳನ್ನು ಹಾಕಿಕೊಳ್ಳುವಂತೆ ದೇಶಗಳಿಗೆ ತಾಕೀತು ಮಾಡಿತ್ತು.

ನಡೆದ ಅಧ್ಯಯನಗಳ ಫಲಶ್ರುತಿಯು ಕೆಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆ ನೀಡಿತು. 2021ರ ಏಪ್ರಿಲ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಚರ್ಚೆಗೆ ಬಂದ ಈ ವಿಷಯವು ಮುಳುಗುವುದರ ವಿರುದ್ಧ ಸಮರ ಸಾರುವ ವಿಶ್ವವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ತೀರ ಪ್ರದೇಶಗಳಲ್ಲಿ ಬದುಕುವ, ಯಾವುದೇ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಸಾಯಬಹುದಾದ 12 ಕೋಟಿ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ವಾಯುಗುಣ ತ್ವರಿತವಾಗಿ ಹದಗೆಡುತ್ತಿರುವುದರಿಂದ ಜಲಪ್ರಳಯ, ಚಂಡಮಾರುತ, ಪ್ರವಾಹ, ಸುನಾಮಿಗಳ ಸಂಖ್ಯೆ ಏರಲಿದೆ ಎಂದಿರುವ ವಿಶ್ವಸಂಸ್ಥೆಯು ರಭಸದಿಂದ ಹರಿಯುವ ನೀರಿನ ಸಂಪರ್ಕಕ್ಕೆ ಬರುವವರ ಸಂಖ್ಯೆಯು ಹಲವು ಪಟ್ಟು ಹೆಚ್ಚಲಿದೆ ಎಂದಿದೆ.

ವಿಶ್ವಸಂಸ್ಥೆಯ ನಿರ್ದೇಶನದಂತೆ ಈಗ ಕೆಲವು ದೇಶಗಳು ತಮ್ಮ ಜನರ ಹಾಗೂ ಮಕ್ಕಳ ಸುರಕ್ಷತೆಗೆ ಒತ್ತು ನೀಡುವ ಹಲವು ಕ್ರಮಗಳನ್ನು ಜಾರಿಗೆ ತಂದಿವೆ. ವಿಯೆಟ್ನಾಂ ದೇಶದಲ್ಲಿ ಈಜು ಕಲಿಯುವಿಕೆಯನ್ನು ಶಿಕ್ಷಣದ ಭಾಗವನ್ನಾಗಿಸಲಾಗಿದೆ. ಶಾಲೆಯ ಮಕ್ಕಳು ಹೈಸ್ಕೂಲು ಶಿಕ್ಷಣ ಮುಗಿಸುವಷ್ಟರೊಳಗೆ 25 ಮೀಟರ್‌ವರೆಗೆ ಕಡ್ಡಾಯವಾಗಿ ಈಜಬೇಕು ಮತ್ತು 30 ಸೆಕೆಂಡುಗಳವರೆಗೆ ಸುರಕ್ಷಾ ಕವಚವಿಲ್ಲದೆ ನೀರಿನಲ್ಲಿ ತೇಲಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ.

ಬಾಂಗ್ಲಾದೇಶವು ‘ಆಂಚಲ್’ ಎಂಬ ಸಮುದಾಯ ಚಟುವಟಿಕೆ ಆಧಾರಿತ ಯೋಜನೆ ರೂಪಿಸಿದ್ದು, ಒಂದರಿಂದ ಐದರ ವಯೋಮಾನದ ಶಿಶುಗಳನ್ನು ನೀರಿನ ಅಪಾಯದಿಂದ ರಕ್ಷಿಸುವುದರ ಜವಾಬ್ದಾರಿಯನ್ನು ಶಿಶು ಆರೈಕೆ ಕೇಂದ್ರಗಳಿಗೆ ವಹಿಸಿದೆ. ಆಗಿನಿಂದ ನೀರಿನಲ್ಲಿ ಮುಳುಗಿ ಸಾಯುವ ಮಕ್ಕಳ ಸಂಖ್ಯೆ 88ರಷ್ಟು ಕಡಿಮೆಯಾಗಿದೆ ಎಂಬ ಲೆಕ್ಕ ಸಿಕ್ಕಿದೆ. ನಮ್ಮ ದೇಶದಲ್ಲಿ ಮುಳುಗುವಿಕೆ ತಡೆಯುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸ್ಟ್ರ್ಯಾಟಿಜಿಕ್ ಫ್ರೇಮ್‌ವರ್ಕ್ ಫಾರ್ ಡ್ರೌನಿಂಗ್ ಪ್ರಿವೆನ್ಷನ್ ಕಾರ್ಯಕ್ರಮವು ಕಳೆದ ವರ್ಷ ರೂಪುಗೊಂಡಿದೆ.

ಮುಳುಗುವುದನ್ನು ಬರೀ ಅಪಘಾತದಂತೆ ನೋಡದೆ, ಅದಕ್ಕಿರುವ ಆರ್ಥಿಕ, ಸಾಮಾಜಿಕ ಕಾರಣಗಳನ್ನು ಗುರುತಿಸುವ ಕೆಲಸ ಈಗ ನಡೆದಿದೆ. ಮುಳುಗುವುದನ್ನು ತಡೆಯಲು ಸರ್ಕಾರಿ ಕಾರ್ಯಕ್ರಮಗಳೇ ಆಗಬೇಕೆಂದಿಲ್ಲ. ಇದಕ್ಕೆ ಹಲವು ಇಲಾಖೆಗಳ ಸಹಯೋಗ ಬೇಕು. ಜನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇತರ ಕೌಶಲಗಳಂತೆ ಈಜುವುದನ್ನು ಮಕ್ಕಳಿಗೆ ಕಲಿಸಬೇಕು. ಕಂಪ್ಯೂಟರ್ ಕಲಿಕೆಯ ಕಡೆಗಷ್ಟೇ ಆದ್ಯತೆ ನೀಡಿದರೆ ಸಾಲದು. ಈಜು ಕಲಿಕೆಗೂ ಪ್ರಾಮುಖ್ಯ ಇರಬೇಕು. ಜನ ನೀರಿಗಿಳಿಯುವ ಮುನ್ನ ಅಗತ್ಯವಿರುವ ಎಚ್ಚರಿಕೆ ವಹಿಸಬೇಕು. ಸರ್ಕಾರಗಳು ನೀತಿ, ನಿಬಂಧನೆ, ಕಾನೂನು ಜಾರಿಗೆ ತಂದು ಅಗತ್ಯ ಸೌಕರ್ಯ ಒದಗಿಸಿ, ವ್ಯವಸ್ಥೆಯ ದೋಷ ನಿವಾರಣೆ ಮಾಡಬೇಕು. ಕೊಳಗಳ ಬಳಿ ರಕ್ಷಣಾ ಸಿಬ್ಬಂದಿ ಇರುವುದನ್ನು ಕಡ್ಡಾಯಗೊಳಿಸಬೇಕು. ಜೊತೆಗೆ ಈಜು ಕಲಿಸುವುದನ್ನು ಶಿಕ್ಷಣ ಕ್ರಮದಲ್ಲಿ ಅಳವಡಿಸಿದರೆ ಮುಳುಗುವುದರಿಂದ ಸಂಭವಿಸುವ ಪ್ರಾಣಹಾನಿಯನ್ನು ಗಣನೀಯ ಪ್ರಮಾಣದಲ್ಲಿ ತಡೆಗಟ್ಟಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.