ADVERTISEMENT

ವಿಶ್ಲೇಷಣೆ | ಸತ್ವಪರೀಕ್ಷೆಗೆ ಸಿದ್ಧವಿದೆಯೇ ಕಾಂಗ್ರೆಸ್‌?

ದೇಶದಲ್ಲಿ ಮೊದಲಿನ ಸ್ಥಿತಿಗೆ ಮರಳುವಂತಾಗಲು ಪಕ್ಷ ಬಹಳಷ್ಟು ಪ್ರಯಾಸಪಡಬೇಕಾಗುತ್ತದೆ

ಪ್ರಜಾವಾಣಿ ವಿಶೇಷ
Published 14 ಅಕ್ಟೋಬರ್ 2024, 0:58 IST
Last Updated 14 ಅಕ್ಟೋಬರ್ 2024, 0:58 IST
   

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿನ ಅನಿರೀಕ್ಷಿತ ಸೋಲು ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿನ ಕಳಪೆ ಪ್ರದರ್ಶನವು ಕಾಂಗ್ರೆಸ್‌ ಪಕ್ಷವನ್ನು ಧೃತಿಗೆಡಿಸಿವೆ. ಅಷ್ಟೇ ಅಲ್ಲ, ಇವು ಇನ್ನು ಕೆಲವೇ ವಾರಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭಾ ಚುನಾವಣೆಗಳ ಮೇಲೂ ಪರಿಣಾಮ ಬೀರಬಹುದು. ಈ ಪರಿಣಾಮ ಬೇರೆ ಬೇರೆ ರೀತಿಯಾಗಿರಬಹುದು. ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯ ನಂತರ ದೊರೆತ ಉಮೇದು ಕಡಿಮೆ ಆಗಬಹುದು, ಪಕ್ಷದ ಕಾರ್ಯಕರ್ತರು ನಿರುತ್ಸಾಹಗೊಳ್ಳಬಹುದು, ಮಿತ್ರಪಕ್ಷಗಳ ಜೊತೆಗಿನ ಕ್ಷೇತ್ರ ಹೊಂದಾಣಿಕೆಯ ಮಾತುಕತೆಯಲ್ಲಿ ಕಾಂಗ್ರೆಸ್‌ನ ಪ್ರಭಾವ ಕೂಡ ಕುಗ್ಗಬಹುದು.

ಲೋಕಸಭೆ ಚುನಾವಣೆಯ ಹಣಾಹಣಿಯಲ್ಲಿ ಮಹಾರಾಷ್ಟ್ರದಲ್ಲಿ ಛಲದಿಂದ ಕೆಲಸ ಮಾಡಿ, 48 ಸ್ಥಾನಗಳ ಪೈಕಿ 30ರಲ್ಲಿ ಗೆಲುವು ಸಾಧಿಸಿದ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್‌ ಆಘಾಡಿಯು ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲಲು ಮೊದಲಿಗಿಂತ ಹೆಚ್ಚು ಕೆಚ್ಚಿನಿಂದ ಪ್ರಯತ್ನಿಸುವುದೇ ಎಂದು ನೋಡಬೇಕು. ಆದರೆ, ಇದು ಮತದಾರರ ಮೇಲೆ ಪರಿಣಾಮ ಉಂಟು ಮಾಡುವುದೇ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಭಾರತದ ಪ್ರತಿ ರಾಜ್ಯವೂ ವಿಭಿನ್ನ, ವೈವಿಧ್ಯ. ಪ್ರತಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳೂ ಬೇರೆ ಬೇರೆ.

ಈ ದಿಸೆಯಲ್ಲಿ ಹರಿಯಾಣದ ಫಲಿತಾಂಶ ಹಾಗೂ ಮುಂಬರುವ ಮಹಾರಾಷ್ಟ್ರ ಚುನಾವಣೆಯನ್ನು ಗಮನಿಸೋಣ. ಹರಿಯಾಣದಲ್ಲಿ ಹೆಚ್ಚಿನ ಹಣಾಹಣಿ ಇದ್ದದ್ದು ಎರಡು ರಾಷ್ಟ್ರೀಯ ಪಕ್ಷಗಳ ನಡುವೆ. ಮಹಾರಾಷ್ಟ್ರದಲ್ಲಿ 6 ಮುಖ್ಯ ಪಕ್ಷಗಳಿವೆ. ಹರಿಯಾಣದಲ್ಲಿ ರೈತರ ಉತ್ಪನ್ನಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಒಂದು ಮುಖ್ಯ ಬೇಡಿಕೆ. ಮಹಾರಾಷ್ಟ್ರದಲ್ಲಿ ಇದು ಮಹತ್ವದ ಬೇಡಿಕೆ ಆಗಿಲ್ಲ. ಅಲ್ಲಿನ ರೈತರ ಬೇಡಿಕೆಗಳು ತಮ್ಮ ಬೆಳೆಗಳಿಗೆ ಒಳ್ಳೆಯ ಬೆಲೆ, ಸಾಲಮನ್ನಾ, ಮಳೆಯಿಂದಾದ ಬೆಳೆ ನಷ್ಟಕ್ಕೆ ಪರಿಹಾರದಂತಹವು.

ADVERTISEMENT

ಹಿಂದಿನ ವರ್ಷದ ವಿಧಾನಸಭಾ ಚುನಾವಣೆಗಳನ್ನು ಗಮನಿಸಿದರೆ, ಮೇ ತಿಂಗಳಲ್ಲಿ ನಡೆದ ಕರ್ನಾಟಕದ ಚುನಾವಣೆಯು ನವೆಂಬರ್‌ನಲ್ಲಿ ನಡೆದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದರೂ ಅಲ್ಲಿನ ಜನರ ಸಮಸ್ಯೆ, ಬೇಡಿಕೆಗಳೇ ಬೇರೆಯಾಗಿದ್ದವು. ಉತ್ತರದ ಈ ಸೋಲುಗಳ ನಂತರ ‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನ ಬಲ ಕಡಿಮೆಯಾಗುವ ಲಕ್ಷಣಗಳು ಆಗಲೇ ಕಾಣುತ್ತಿವೆ. ಉತ್ತರಪ್ರದೇಶದಲ್ಲಿ 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್‌ ಇದರಲ್ಲಿ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇರಾದೆ ಹೊಂದಿತ್ತು. ಆದರೆ ಸಮಾಜವಾದಿ ಪಕ್ಷ 6 ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇಂಡಿಯಾ ಮೈತ್ರಿ ಕೂಟದ ಶಿವಸೇನಾ, ಆರ್‌ಜೆಡಿ, ಎನ್‌ಸಿ, ಜೆಎಂಎಂ ಈ ಎಲ್ಲ ಪಕ್ಷಗಳೂ ಕಾಂಗ್ರೆಸ್‌ ಅನ್ನು ಟೀಕಿಸಿವೆ. 

ಇನ್ನು ತಾನು ಗೆದ್ದೇ ಗೆಲ್ಲುತ್ತೇನೆಂಬ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ಗೆ ಹರಿಯಾಣದಲ್ಲಿ ಆಗಿದ್ದಾದರೂ ಏನು? ಇದಕ್ಕೆ ಕಾರಣಗಳು ಅನೇಕ. ಮೊದಲನೆಯದಾಗಿ, ಒಬ್ಬ ನಾಯಕ (ಭೂಪಿಂದರ್‌ ಸಿಂಗ್‌ ಹೂಡ), ಒಂದು ಕುಟುಂಬ ಹಾಗೂ ಒಂದು ಜಾತಿಯ (ಜಾಟ್‌) ಮೇಲೆ ಪಕ್ಷದ ವಿಪರೀತ ಅವಲಂಬನೆ. ಪಕ್ಷದ ಇತರ ಮುಖಂಡರಾದ ದಲಿತ ನಾಯಕಿ ಸೆಲ್ಜಾ ಹಾಗೂ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಕಡೆಗಣಿಸಲಾಯಿತು. ಸಂಸದೆ ಸೆಲ್ಜಾ ಪ್ರಚಾರದಿಂದ ದೂರ ಉಳಿದರು. ಫಲಿತಾಂಶದ ಬಳಿಕ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಸೆಲ್ಜಾ ಅವರು ಹೂಡ ಗುಂಪನ್ನು ತರಾಟೆಗೆ ತೆಗೆದುಕೊಂಡರು: ‘ಕಾಂಗ್ರೆಸ್‌ಗೆ ಇದು ನಂಬಲಾಗದ ಸೋಲು. ಈ (ಹೂಡ) ಗುಂಪು (ಹೂಡ, ಅವರ ಮಗ ದೀಪಿಂದರ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ದಲಿತ ನಾಯಕ ಉದಯ್‌ ಭಾನ್‌, ಪಕ್ಷದ ಹರಿಯಾಣ ಉಸ್ತುವಾರಿ ದೀಪಕ್‌ ಬಬಾರಿಯಾ) ಟಿಕೆಟ್‌ ಹಂಚಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ನನ್ನ ಜೊತೆ ಅವರು ಯಾರೂ ಮಾತ ನಾಡುತ್ತಿರಲಿಲ್ಲ. ಈ ಗುಂಪು ಹರಿಯಾಣ ಮತದಾರರನ್ನು ಲಘುವಾಗಿ ತೆಗೆದುಕೊಂಡಿತು’.

ಟಿಕೆಟ್‌ ಹಂಚಿಕೆಯಲ್ಲಿ ಸಿಂಹಪಾಲು ಪಡೆದ ಹೂಡ ಬಣ, 90 ಕ್ಷೇತ್ರಗಳ ಪೈಕಿ 72ರಲ್ಲಿ ತನ್ನ ಗುಂಪಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಪಕ್ಷ ಸೋಲಲು ಇದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅನೇಕ ವಿಧಾನಸಭಾ ಸದಸ್ಯರು ಜನಪ್ರಿಯತೆ ಕಳೆದುಕೊಂಡಿದ್ದರೂ ಅವರಿಗೇ ಟಿಕೆಟ್‌ ಕೊಡಲಾಯಿತು. ಪಕ್ಷದ 36 ಬಂಡುಕೋರ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಇದರಲ್ಲಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿತು. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗದಿರುವುದು ಕಾಂಗ್ರೆಸ್‌ಗೆ ಮುಳುವಾಯಿತು.

ಜಾಟ್‌ ಸಮುದಾಯಕ್ಕೆ ಮಾತ್ರ ಮಣೆ ಹಾಕಿದ್ದನ್ನು ಬಿಜೆಪಿ ಬಳಸಿಕೊಂಡಿತು. ‘ಕಾಂಗ್ರೆಸ್‌ಗೆ ಮತ ಹಾಕಿದರೆ ನಿಮಗೆ ಸಿಕ್ಕುವುದು ಜಾಟ್ ಸಮುದಾಯದ ಸರ್ಕಾರ’ ಎಂದ ಬಿಜೆಪಿ, ಕಾಂಗ್ರೆಸ್‌ ಪಕ್ಷವು ದಲಿತರೂ ಸೇರಿದಂತೆ ಬೇರೆ ಎಲ್ಲ ಸಮುದಾಯಗಳನ್ನೂ ಕಡೆಗಣಿಸಿದೆ ಎಂದು ಮತದಾರರಿಗೆ ಮನದಟ್ಟು ಮಾಡಿಕೊಡುವಲ್ಲಿ ಸಫಲವಾಯಿತು. ಜನರಲ್ಲಿ ಈ ಭಾವನೆಯನ್ನು ಹೋಗಲಾಡಿಸಲು ಕಾಂಗ್ರೆಸ್‌ ನಾಯಕತ್ವ ಏನನ್ನೂ ಮಾಡಲಿಲ್ಲ. 

ಹರಿಯಾಣದಲ್ಲಿ ಒಟ್ಟು 36 ಜಾತಿಗಳಿವೆ ಎನ್ನುವುದು ಬಹಳ ಹಿಂದಿನಿಂದಲೂ ಕೇಳಿಬರುವ ಮಾತು. ಈ ಬಾರಿಯ ಪ್ರಚಾರದಲ್ಲಿ ಬಿಜೆಪಿ ಮುಖಂಡರು ‘ನಮ್ಮ ಬಳಿ 35 ಜಾತಿಗಳಿವೆ. ಇನ್ನುಳಿದ ಒಂದು ಜಾತಿಯ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳುತ್ತಾ ಬಂದರು. ಇಲ್ಲಿ ಒಂದು ಜಾತಿ ಎಂದರೆ ಜಾಟ್‌ ಎಂದರ್ಥ. ಬಿಜೆಪಿಯು ಜಾಟ್‌ ಸಮುದಾಯವನ್ನು ಹೊರತುಪಡಿಸಿ ಬೇರೆ ಜಾತಿಗಳಿಗೆ ಪ್ರಾಮುಖ್ಯ ಕೊಟ್ಟಿತು. ಇದರಲ್ಲಿ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಮುಖವಾದವು. ಈ ವರ್ಗಗಳನ್ನು ಬಿಜೆಪಿ ಮೊದಲಿನಿಂದಲೂ ಕಡೆಗಣಿಸಲಿಲ್ಲ. ಒಬಿಸಿ ವರ್ಗದವರೇ ಆದ ಮನೋಹರ ಲಾಲ್‌ ಖಟ್ಟರ್‌ ಮತ್ತು ಆನಂತರ ಸೈನಿ ಅವರನ್ನು ಪಕ್ಷವು ಮುಖ್ಯಮಂತ್ರಿ ಯನ್ನಾಗಿ ಮಾಡಿತು. 

ಜಾಟ್‌ ಸಮುದಾಯವನ್ನು ಕಾಂಗ್ರೆಸ್‌ ಓಲೈಸಿದರೂ ಆ ಸಮುದಾಯದ ಮತಗಳು ಇಂಡಿಯನ್‌ ನ್ಯಾಷನಲ್‌ ಲೋಕದಳ, ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಹಂಚಿಹೋದವು. ಅದೇ ರೀತಿ ಪರಿಶಿಷ್ಟರ ಮತಗಳೂ ಬಿಜೆಪಿ, ಕಾಂಗ್ರೆಸ್‌ ಮತ್ತು ಬಿಎಸ್‌ಪಿಗೆ ಹಂಚಿಹೋದವು. ಲೋಕದಳ- ಬಿಎಸ್‌ಪಿ ಮೈತ್ರಿಕೂಟ ಒಟ್ಟು ಸುಮಾರು ಶೇ 6ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಹೆಚ್ಚಾಗಿ ಜಾಟ್‌ ಹಾಗೂ ಪರಿಶಿಷ್ಟರ ಮತಗಳು ಒಳಗೊಂಡಿವೆ. ಪರಿಶಿಷ್ಟರಿಗೆ ಮೀಸಲಾದ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 9 ಹಾಗೂ ಬಿಜೆಪಿ 8 ಕ್ಷೇತ್ರಗಳನ್ನು ತಮ್ಮದಾಗಿಸಿ ಕೊಂಡವು. ಏಪ್ರಿಲ್‌- ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ, ಈ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 13ರಲ್ಲಿ ಮುನ್ನಡೆ ಸಾಧಿಸಿತ್ತು. ಆ ಮುನ್ನಡೆಯನ್ನು ವಿಧಾನಸಭಾ ಚುನಾವಣೆಯಲ್ಲಿ ಕಾಯ್ದುಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲ ವಾಗಿದೆ. ಉದಯ್‌ ಭಾನ್‌ ಕೂಡ ಸೋಲನ್ನಪ್ಪಿದರು. 

ತಾವೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸ ಹಾಗೂ ಒಳಜಗಳವು ಪಕ್ಷ ಸೋಲಲು ಪ್ರಮುಖ ಕಾರಣಗಳು. ಪಕ್ಷವನ್ನು ಒಟ್ಟಾಗಿ ಕೊಂಡೊಯ್ಯಲು ಅಥವಾ ಗುಂಪುಗಾರಿಕೆಯನ್ನು ಹೋಗಲಾಡಿಸಲು ಹೈಕಮಾಂಡ್‌ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇದರ ಜೊತೆಗೆ ಗ್ಯಾರಂಟಿಗಳ ಭರವಸೆ ಕೂಡ ಕಾಂಗ್ರೆಸ್‌ನ ಕೈಹಿಡಿಯಲಿಲ್ಲ. 

ಕಾಂಗ್ರೆಸ್– ಬಿಜೆಪಿ ನಡುವೆ ನೇರ ಸ್ಪರ್ಧೆ ಇರುವ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ದಯನೀಯವಾಗಿದೆ. ಹಿಂದಿನ 12 ವರ್ಷಗಳಲ್ಲಿ ಪಕ್ಷ ಎಲ್ಲೂ ಸತತ ಎರಡನೇ ಬಾರಿ ಜಯ ಗಳಿಸಿಲ್ಲ. ಆದರೆ ಬಿಜೆಪಿ ಕೆಲವು ರಾಜ್ಯಗಳಲ್ಲಿ ಹ್ಯಾಟ್ರಿಕ್‌ ಜಯ ಗಳಿಸಿದೆ: ಗುಜರಾತ್‌ (2001ರಿಂದ ಅಧಿಕಾರದಲ್ಲಿದೆ), ಮಧ್ಯಪ್ರದೇಶ (2003ರಿಂದ, ಆದರೆ 2018– 20ರಲ್ಲಿ 15 ತಿಂಗಳು ಬಿಟ್ಟು), ಉತ್ತರಾಖಂಡ ಮತ್ತು ಈಗ ಹರಿಯಾಣ. ಹಿಮಾಚಲ ಪ್ರದೇಶವೊಂದನ್ನು ಬಿಟ್ಟರೆ ಉತ್ತರ ಭಾರತದಲ್ಲಿ ಹಿಂದಿನ 6 ವರ್ಷಗಳಲ್ಲಿ ಬಿಜೆಪಿಯನ್ನು ಕಾಂಗ್ರೆಸ್‌ ನೇರ ಹಣಾಹಣಿಯಲ್ಲಿ ಒಮ್ಮೆಯೂ ಸೋಲಿಸಿಲ್ಲ. 

ಈ ಎಲ್ಲಾ ವಿಷಯಗಳನ್ನು ಗಮನಿಸಿದರೆ, ದೇಶದಲ್ಲಿ ತಾನು ಮೊದಲಿನ ಸ್ಥಿತಿಗೆ ಮರಳುವಂತಾಗಲು ಕಾಂಗ್ರೆಸ್‌ ಬಹಳಷ್ಟು ಪ್ರಯಾಸ ಪಡಬೇಕಾಗುತ್ತದೆ ಹಾಗೂ ಇದಕ್ಕೆ ಅನೇಕ ವರ್ಷಗಳೇ ಬೇಕಾಗಬಹುದು. ಆ ಶ್ರಮಕ್ಕೆ, ದೀರ್ಘ ಸಮಯದ ಪರೀಕ್ಷೆಗೆ ಪಕ್ಷ ತಯಾರಿದೆಯೇ?

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.