ADVERTISEMENT

ವಿಶ್ಲೇಷಣೆ: ಚಿತ್ರರಂಗ ಮತ್ತು ಪಟ್ಟಭದ್ರರ ಏಕಸ್ವಾಮ್ಯ

ಸಿನಿಮಾ ನೀತಿ, ಸಹಾಯಧನ ನೀತಿ, ಪ್ರದರ್ಶನ ನೀತಿ: ಬೇಕು ಆಮೂಲಾಗ್ರ ಬದಲಾವಣೆ

ಕೇಸರಿ ಹರವು
Published 9 ಜನವರಿ 2024, 19:24 IST
Last Updated 9 ಜನವರಿ 2024, 19:24 IST
<div class="paragraphs"><p>ವಿಶ್ಲೇಷಣೆ: ಚಿತ್ರರಂಗ ಮತ್ತು ಪಟ್ಟಭದ್ರರ ಏಕಸ್ವಾಮ್ಯ</p></div>

ವಿಶ್ಲೇಷಣೆ: ಚಿತ್ರರಂಗ ಮತ್ತು ಪಟ್ಟಭದ್ರರ ಏಕಸ್ವಾಮ್ಯ

   

ಹದಿನೈದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರುವರಿ 29ರಿಂದ ಮಾರ್ಚ್‌ 7ರವರೆಗೂ ನಡೆಯಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆಯನ್ನು ತಮ್ಮಲ್ಲೇ ಇರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೋಮುಸೌಹಾರ್ದ, ಸಮಾನತೆ, ಲಿಂಗ ಸಮಾನತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಅಂತಹ ಚಲನಚಿತ್ರಗಳನ್ನು ಹೆಚ್ಚು ಜನಪ್ರಿಯಗೊಳಿಸುವ ದಿಸೆಯಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ’ ಎಂದು ಹೇಳಿದ್ದಾರೆ.

ಭಾರತವೂ ಸೇರಿದಂತೆ ಜಗತ್ತಿನ ಹಲವಾರು ಪ್ರಜಾ ಪ್ರಭುತ್ವ ರಾಷ್ಟ್ರಗಳು ಬಲಪಂಥೀಯ ಏಕಾಧಿಪತ್ಯದ ಕಡೆಗೆ, ಭೂಮಿಯ ಸಂಪನ್ಮೂಲಗಳನ್ನು ಬಂಡವಾಳಶಾಹಿ ಗಳಿಗೆ ಒಪ್ಪಿಸಿ ಕೈತೊಳೆದುಕೊಳ್ಳುವ ಕಡೆಗೆ ಮತ್ತು ಪ್ರಜೆಗಳ ಖಾಸಗಿತನ, ಅಭಿವ್ಯಕ್ತಿಯನ್ನು ಮೊಟಕುಗೊಳಿಸಿ, ಅವರ ಸ್ವಾತಂತ್ರ್ಯವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವು ದರ ಕಡೆಗೆ ಚಲಿಸುತ್ತಿವೆ. ಇಂತಹ ಕಾಲಮಾನದಲ್ಲಿ ಸಿದ್ದರಾಮಯ್ಯ ಅವರ ಈ ಹೇಳಿಕೆ ಅತ್ಯಂತ ಸ್ವಾಗತಾರ್ಹ.

ADVERTISEMENT

ಈ ಹೇಳಿಕೆಯು ರಾಜ್ಯದ ಎಲ್ಲ ಸಾಮಾಜಿಕ, ಆರ್ಥಿಕ ಮತ್ತು ಮಾನವಿಕ ರಂಗಗಳ ವಿಚಾರದಲ್ಲಿ ಈ ಸರ್ಕಾರಕ್ಕೆ ಇರುವ ಸಮಾಜವಾದಿ ಮತ್ತು ಸಮಾನತಾ ವಾದಿ ಆಶಯಗಳನ್ನು ಮುಂದಿಡುತ್ತದೆ. ಹಾಗೆಯೇ ಮುಂದುವರಿಯಬೇಕಷ್ಟೇ. ಪ್ರಸ್ತುತ ಇದು ಕರ್ನಾಟಕದ ಚಲನಚಿತ್ರರಂಗಕ್ಕೆ ಮತ್ತು ಈ ವರ್ಷದ ಅಂತರ
ರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಂಬಂಧಿಸಿರುವುದರಿಂದ, ನಾನು ಅಷ್ಟಕ್ಕೇ ಸೀಮಿತಗೊಳಿಸಿ ಮುಂದುವರಿಸುತ್ತೇನೆ.

ಈ ಹೇಳಿಕೆಯ ಆಶಯಕ್ಕೆ ಪೂರಕವಾದ ವಾತಾವರಣ ರಾಜ್ಯದ ಚಿತ್ರರಂಗದಲ್ಲಿ ಇದೆಯೇ, ಇಲ್ಲವಾದರೆ, ಅಂತಹ ಗುಣಾತ್ಮಕ ವಾತಾವರಣವನ್ನು ಈ ಸರ್ಕಾರ ನಿರ್ಮಿಸಿ ಕೊಡಲು ಮುಂದಾಗುತ್ತದೆಯೇ ಎನ್ನುವ ಮುಖ್ಯ ಪ್ರಶ್ನೆ ಏಳುತ್ತದೆ.

ಚಿತ್ರೋದ್ಯಮಕ್ಕೂ ಚಿತ್ರಮಾಧ್ಯಮಕ್ಕೂ ಇರುವ ಕಂದಕ, ವೈರುಧ್ಯಗಳು ಸಾಮಾನ್ಯವಾಗಿ ಸರ್ಕಾರಗಳಿಗೆ ಕಾಣುವುದಿಲ್ಲ, ಕಂಡರೂ ಅಷ್ಟಾಗಿ ಗಣನೆಗೆ ತೆಗೆದು ಕೊಳ್ಳುವುದಿಲ್ಲ. ಏಕೆಂದರೆ, ಆಯಾ ಕಾಲದಲ್ಲಿ ಪ್ರಕಾಶಿ ಸುವ ತಾರೆಯರು, ಪ್ರಭಾವಿಗಳು ಮತ್ತು ಸ್ಥಾಪಿತ ಹಿತಾಸಕ್ತರು ಎಲ್ಲರಿಗೂ ಕಾಣುವಂತೆ ಸರ್ಕಾರಕ್ಕೂ ಕಂಡಿ ರುತ್ತಾರೆ. ಅವರುಗಳನ್ನೇ ಚಿತ್ರರಂಗದ ಪ್ರತಿನಿಧಿಗಳು ಎಂದು ಸರ್ಕಾರಗಳು ಗುರುತಿಸಿ, ಅವರನ್ನು ಚಿತ್ರರಂಗಕ್ಕೆ ಸಂಬಂಧಿಸಿದ ನೀತಿ ನಿರೂಪಣೆ, ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತವೆ.

ಚಿತ್ರೋದ್ಯಮವು ತನ್ನ ಮಿತಿಯಲ್ಲಿಯೇ ಚಿತ್ರಮಾಧ್ಯ ಮದ ತುಡಿತಗಳನ್ನು ಗೌರವಿಸುವ ಕಾಲವೊಂದಿತ್ತು. ಆದರೆ ಈಚಿನ ದಶಕಗಳಲ್ಲಿ, ವಾಣಿಜ್ಯವೇ ಚಲನಚಿತ್ರಗಳ ತಯಾರಿಕೆ ಮತ್ತು ಪ್ರದರ್ಶನದ ಆದ್ಯತೆಯ ಗುರಿ ಎಂದು ನಂಬಿ ಬಂಡವಾಳ ಹೂಡುವ ಚಿತ್ರೋದ್ಯಮಿ ಗಳು ಚಿತ್ರಮಾಧ್ಯಮದಲ್ಲಿನ ಸೃಜನಶೀಲ, ಕಲಾತ್ಮಕ ಮತ್ತು ಸಾಮಾಜಿಕ ಜವಾಬ್ದಾರಿಗಳಿಗೆ ಸಾಮಾನ್ಯವಾಗಿ ಹೆಚ್ಚು ಪ್ರಾಶಸ್ತ್ಯ ನೀಡುತ್ತಿಲ್ಲ. ತೀರಾ ಈಚಿನ ವರ್ಷಗಳಲ್ಲಿ ನಡೆದ ಕೆಲವು ವಿದ್ಯಮಾನಗಳು ಇದನ್ನು ಪುಷ್ಟೀಕರಿಸುತ್ತವೆ.

ಚಲನಚಿತ್ರವೊಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣೀಕರಣಗೊಂಡಿತೆಂ
ದರೆ, ಆ ಚಿತ್ರದ ನಿರ್ಮಾಪಕ ಇಡೀ ದೇಶದಲ್ಲಿ ಅಧಿಕೃತ ನಿರ್ಮಾಪಕ ಎನಿಸಿಕೊಳ್ಳುತ್ತಾನೆ. ಆತನಿಗೆ ಇಲ್ಲಿಯ ಒಂದು ವಾಣಿಜ್ಯ ಮಂಡಳಿಯಲ್ಲಿ ಪೂರ್ಣಪ್ರಮಾಣದ ಸದಸ್ಯತ್ವ ಹಾಗೂ ವೋಟಿನ ಹಕ್ಕು ಪ್ರಾಪ್ತವಾಗುತ್ತಿತ್ತು. ಡಿಜಿಟಲೀಕರಣದಿಂದಾಗಿ ಯುವ, ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಯಿತು. ನಮ್ಮಲ್ಲಿ ಪ್ರತಿವರ್ಷ ನಿರ್ಮಾಣಗೊಳ್ಳುವ ಚಿತ್ರಗಳ ಸಂಖ್ಯೆ ನಾಲ್ಕಾರು ಪಟ್ಟು ಹೆಚ್ಚಿತು. ಆದರೆ, ಕೆಲವು ಪಟ್ಟಭದ್ರರು ತಮ್ಮ ಏಕಸ್ವಾಮ್ಯವನ್ನು ಗಟ್ಟಿಗೊಳಿಸಿಕೊಳ್ಳುವ ಸಲುವಾಗಿ, ಅಂತಹ ಬಹುತೇಕ ಚಿತ್ರಗಳು ತೆರೆಕಾಣಲಾಗದ ಪರಿಸ್ಥಿತಿ ನಿರ್ಮಿಸಿ ದರು. ಅವರಿಗೆ ನಜರೊಪ್ಪಿಸುವವರ ಚಿತ್ರಗಳು ಮಾತ್ರ ತೆರೆಕಾಣುವಂತಾಯಿತು. ಅಲ್ಲದೆ, ಅವರನ್ನು ಇನ್ನಷ್ಟು ದೂರ ಇಡುವ ಉದ್ದೇಶದಿಂದ, ‘ತೆರೆಕಂಡ ಚಿತ್ರಗಳ ನಿರ್ಮಾಪಕರಿಗಷ್ಟೇ ವೋಟಿನ ಹಕ್ಕು’ ಎಂದು ಆ ವಾಣಿಜ್ಯ ಮಂಡಳಿಯ ನಿಯಮಾವಳಿಯಲ್ಲಿ ಪ್ರಜಾ
ಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಬದಲಾವಣೆಯನ್ನು 2016ರಲ್ಲಿ ತಂದರು. ಮತ್ತೊಂದು ವಾಣಿಜ್ಯ ಮಂಡಳಿ ಸ್ಥಾಪನೆಯಾದರೂ ನಿರ್ಮಾಣ, ಪ್ರದರ್ಶನ ವ್ಯವಸ್ಥೆಯಲ್ಲಿ ಹೆಚ್ಚೇನೂ ಬದಲಾವಣೆ ಆಗಲಿಲ್ಲ.

ಹಿಂದಿನ ವರ್ಷದ ಅಂತ್ಯದಲ್ಲಿ, ಕೆಲವು ಕಾರಣ ಗಳಿಂದ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಕೆಲಸ ಸ್ಥಗಿತಗೊಂಡಿದ್ದರಿಂದ ಕನ್ನಡದ ಹಲವಾರು ಚಿತ್ರಗಳು ಡಿಸೆಂಬರ್ 31ರ ಒಳಗೆ ಪ್ರಮಾಣಪತ್ರ
ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವುಗಳಲ್ಲಿ ಬಹಳಷ್ಟು ಚಿತ್ರಗಳು ರಾಷ್ಟ್ರೀಯ ಮತ್ತು ಅಂತರ
ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಉದ್ದೇಶವನ್ನು ಹೊಂದಿದ್ದವು. ಕೆಲವು ದೊಡ್ಡ ನಿರ್ಮಾಪಕರು ಇಂತಹ ‘ತೆರೆಕಾಣಲಾಗದ’ ಚಿತ್ರಗಳ ನೂಕುನುಗ್ಗಲಿನಿಂದಾಗಿ ತಮ್ಮ ದೊಡ್ಡ ಬಜೆಟ್ ಚಿತ್ರಗಳು ಸರ್ಟಿಫೈ ಆಗಲು ಸಾಧ್ಯ ಆಗುತ್ತಿಲ್ಲ ಎಂದು ದೂರಿದರು.

ಹೀಗೆ ಹಲವಾರು ರೀತಿಯಲ್ಲಿ ಸಣ್ಣ, ಹೊಸ ಮತ್ತು ಉತ್ಸಾಹಿ ನಿರ್ಮಾತೃಗಳ ಬಗ್ಗೆ ಮುಖ್ಯವಾಹಿನಿ ಚಿತ್ರರಂಗ ದಲ್ಲಿ ಒಂದು ರೀತಿಯ ಅಸಡ್ಡೆಯ ವಾತಾವರಣವೇ ಇದೆ. ಹೊಸ ಬಂಡವಾಳ, ಹೊಸ ಪ್ರತಿಭೆಗಳು ಹರಿದು ಬಂದರೂ ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂತೆ ಆಗಿದೆ. ಇದರಿಂದಾಗಿ ಚಿತ್ರರಂಗ ಹೊಸ ಹರಿವಿನ, ಸೃಜನ ಶೀಲತೆಯ ಕೊರತೆಯಿಂದ ಸೊರಗುತ್ತಿದೆ. ಮಾಧ್ಯಮ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಬಂಡವಾಳ, ಪ್ರೋತ್ಸಾಹ ದೊರಕದೆ ನಲುಗುತ್ತಿದೆ. ಹೀಗಿರುವಾಗ, ಉದ್ಯಮಪತಿಗಳನ್ನು ಮಾತ್ರ ಚಿತ್ರರಂಗದ ಪ್ರತಿನಿಧಿಗಳು ಎಂದು ಸರ್ಕಾರ ಗುರುತಿಸಿದರೆ, ಅದು ಏಕಸ್ವಾಮ್ಯದ ಕೋಟೆಯನ್ನಷ್ಟೇ ಪರಿಗಣಿಸಿ, ಚಿತ್ರಮಾಧ್ಯಮವನ್ನು ದೂರವಿಟ್ಟಂತೆ ಆಗುತ್ತದೆ. ಮುಖ್ಯಮಂತ್ರಿಯವರ ಹೇಳಿಕೆ ಪ್ರಾಮಾಣಿಕತೆ ಇಲ್ಲದ ಜುಮ್ಲಾ ಎಂಬಂತಾಗುತ್ತದೆ. ಅದು ಸರ್ಕಾರದ ಆಶಯಗಳಿಗೆ ತೊಡಕುಗಳನ್ನು ಒಡ್ಡುವ ಸಾಧ್ಯತೆಯೇ ಹೆಚ್ಚು.

ಇಲ್ಲಿ ಚಿತ್ರೋದ್ಯಮವೆಂದರೆ ‘ವ್ಯಾಪಾರಿ’ ಚಿತ್ರಗಳು, ಚಿತ್ರಮಾಧ್ಯಮವೆಂದರೆ ‘ಕಲಾತ್ಮಕ’ ಚಿತ್ರಗಳು ಎಂದು ಕೆಲವು ಚಿತ್ರಾಸಕ್ತರೂ ಸೇರಿದಂತೆ ಅನೇಕರು ನಂಬಿರುವ ಅರ್ಥದಲ್ಲಿ ಹೇಳುತ್ತಿಲ್ಲ. ಮಾಧ್ಯಮದ ಏಳಿಗೆಗಾಗಿ ಬೇಕಾದ ವಾಣಿಜ್ಯೀಕರಣಕ್ಕೂ ಏಕಸ್ವಾಮ್ಯದ ಅತಿ ವಾಣಿಜ್ಯೀಕರಣಕ್ಕೂ ದೊಡ್ಡ ವ್ಯತ್ಯಾಸವಿದೆ. ಅಲ್ಲದೆ, ಏಕಸ್ವಾಮ್ಯ ವ್ಯವಸ್ಥೆಯು ಮುಖ್ಯಮಂತ್ರಿಯವರ ಹೇಳಿಕೆಯಲ್ಲಿನ ಮೌಲ್ಯಗಳುಳ್ಳ ಚಲನಚಿತ್ರಗಳನ್ನು ತಯಾರಿಸಬಾರದು ಎಂದೇನೂ ಇಲ್ಲ. ಆದರೆ, ಕಾರ್ಪೊರೇಟ್ ವಲಯ ಹಾಗೂ ಸಾಂಪ್ರದಾಯಿಕ ಕ್ಯಾಪಿಟಲಿಸಂನಿಂದ ಸಮಾಜವಾದಿ ಚಿಂತನೆಯ ಉತ್ಪನ್ನಗಳನ್ನು ನಿರೀಕ್ಷಿಸುವುದು ಎಂದರೆ, ಅವುಗಳ ಹುನ್ನಾರಗಳ ಖೆಡ್ಡಾಕ್ಕೆ ನಾವೇ ಹೋಗಿ ಬಿದ್ದಂತೆ ಆಗುತ್ತದೆ.

ಈ ಸೂಕ್ಷ್ಮ ವ್ಯತ್ಯಾಸವನ್ನು ಸರ್ಕಾರ ಮತ್ತು ಮುಖ್ಯಮಂತ್ರಿಯವರು ಅವಶ್ಯವಾಗಿ ಗುರುತಿಸಬೇಕು. ಅವರ ಹೇಳಿಕೆಯಲ್ಲಿನ ಮೌಲ್ಯಗಳುಳ್ಳ ಚಲನಚಿತ್ರಗಳಿಗೆ ಸರ್ಕಾರದ ಪ್ರೋತ್ಸಾಹವಿದೆ ಎಂಬುದೇ ಈ ಸರ್ಕಾರದ ಬದ್ಧ ನಿಲುವಾಗಿದ್ದರೆ, ಮಾಧ್ಯಮದ ಹೊಸಹೊಸ ಬೆಳವಣಿಗೆಗಳನ್ನು ಅಭ್ಯಸಿಸುವ, ಅಂತಹ ಪ್ರಯೋಗ
ಗಳಲ್ಲಿ ತೊಡಗಿಕೊಳ್ಳಲು ಬಯಸುವ ಹೊಸ ಪೀಳಿಗೆಗಳನ್ನು ಹಲವು ದೇಶಗಳಲ್ಲಿ ಉತ್ತೇಜಿಸುತ್ತಿರುವಂತೆ ವೈಜ್ಞಾನಿಕ ವಾಗಿ ಉತ್ತೇಜಿಸಬೇಕು. ಹೊಸ ಬಂಡವಾಳ, ಉದ್ಯಮ ಶೀಲತೆ ಮತ್ತು ಪ್ರತಿಭೆಗೆ ಇಲ್ಲಿ ಸಮಾನ ಅವಕಾಶ ಇರುವ ಮುಕ್ತ ಸಾಮಾಜಿಕ, ವ್ಯಾವಹಾರಿಕ ವಾತಾವರಣವನ್ನು ಸೃಷ್ಟಿಸಬೇಕು. ಆ ದಿಸೆಯಲ್ಲಿ ನಮ್ಮಲ್ಲಿರುವ ಚಲನಚಿತ್ರ ನೀತಿ, ಸಹಾಯಧನ ನೀತಿ ಮತ್ತು ಪ್ರದರ್ಶನ ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಬೇಕು.

ಇವು ದಶಕಗಳಿಂದಲೂ ಹೊಸ ಪ್ರತಿಭೆಗಳು ಆಗ್ರಹಿಸು ತ್ತಿರುವ ಬೇಡಿಕೆಗಳು. ಚಲನಚಿತ್ರ ಮಾಧ್ಯಮದಲ್ಲಿ ಕ್ರಿಯಾಶೀಲತೆ ಹೆಚ್ಚಿದಷ್ಟೂ ಚಿತ್ರೋದ್ಯಮವು ವಾಣಿಜ್ಯ ಆಯಾಮದಿಂದಷ್ಟೇ ಅಲ್ಲದೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಆಯಾಮಗಳಲ್ಲೂ ಪ್ರಗತಿ ಸಾಧಿಸುತ್ತದೆ. ಮರಾಠಿ, ಮಲಯಾಳಂ ಚಿತ್ರರಂಗಗಳಲ್ಲಿ ಇಂದು ಆಗಿರುವ ಬದಲಾವಣೆಗಳನ್ನು ನಾವು ಗಮನಿಸಿದರೂ ಸಾಕು, ಮಾಧ್ಯಮದ ದೃಷ್ಟಿಯಿಂದ ನಾವೆಷ್ಟು ಹಿಂದುಳಿದಿದ್ದೇವೆ ಎಂದು ಅರ್ಥವಾಗುತ್ತದೆ. ಅದಕ್ಕೆ ಇಲ್ಲಿನ ನಿರುತ್ತೇಜಕ ವಾತಾವರಣ ಮತ್ತು ಸರ್ಕಾರದ ಮಟ್ಟದಲ್ಲೂ ಏಕಸ್ವಾಮ್ಯ ಸಾಧಿಸಿರುವ ಪಟ್ಟಭದ್ರ ಚಿತ್ರೋದ್ಯಮಿಗಳು ಕಾರಣ. ಅದನ್ನು ತೊಡೆದುಹಾಕುವ ದೊಡ್ಡ ಆಶ್ವಾಸನೆಯನ್ನು ಸಿದ್ದರಾಮಯ್ಯ ಅವರ ಹೇಳಿಕೆ ನೀಡುತ್ತಿದೆ. ಅದನ್ನು ಒಣಗಲು ಬಿಡದೆ, ಆದಷ್ಟು ಬೇಗ ಆಗುವಂತೆ ಮಾಡುವುದು ಅವರ ಜವಾಬ್ದಾರಿಯಾಗಿದೆ.

ಲೇಖಕ: ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ

ಕೇಸರಿ ಹರಿವೂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.