ಒಂದು ಪ್ರದೇಶವಾಗಿ, ದೇಶವಾಗಿ ಮತ್ತು ವಿಶ್ವವಾಗಿ ನಾವಿಂದು ಅನುಭವಿಸುತ್ತಿರುವ ಸಂಕಷ್ಟಗಳು ಒಂದಲ್ಲ, ಎರಡಲ್ಲ. ಅಸಂಖ್ಯಾತ ವೈರುದ್ಧ್ಯಗಳಿಂದ ಕೂಡಿದ ಈ ನಮ್ಮ ಸಮಾಜವನ್ನು ಮೈತ್ರಿಯ ಬೆಸುಗೆಯಲ್ಲಿ ಬೆಸೆಯಲು ಅನೇಕ ಮಹನೀಯರು, ಧೀಮಂತರು ಪ್ರಯತ್ನ ನಡೆಸಿದ್ದಾರೆ. ಅಂಥವರಲ್ಲಿ ಪ್ರೀತಿಯಿಂದ ಬಾಪೂ ಎಂದೂ ಗೌರವದಿಂದ ಮಹಾತ್ಮ ಎಂದೂ ನಾವು ಕರೆಯುವ ಮೋಹನದಾಸ ಕರಮಚಂದ ಗಾಂಧಿ ಅವರನ್ನು ನೆನಪಿಸಿಕೊಳ್ಳುವ ದಿನ ಇದು.
ತಾತ್ವಿಕವಾಗಿ ದಟ್ಟವಾದ ಗಾಂಧೀಜಿಯವರ ‘ಚಿಂತನವಿಶ್ವ’ ಹಾಗೂ ಅದರಿಂದ ಬೇರ್ಪಡಿಸಲಾಗದ ಅವರ ‘ಕರ್ಮಪ್ರಪಂಚ’ದಲ್ಲಿ ಗಹನವಾದ ಮತ್ತು ಇಂದಿನ ನಮ್ಮ ಸಂಕಷ್ಟದ ಕಾಲದಲ್ಲಿ ಪ್ರಮುಖವಾಗುವ ಅನೇಕ ಸಂಗತಿಗಳಿವೆ. ಈ ಕುರಿತು ವಿಶ್ವದಾದ್ಯಂತ ಗಂಭೀರವಾದ ಅಧ್ಯಯನಗಳೂ ನಡೆದಿವೆ.
ಗಾಂಧಿಯವರ ಚಿಂತನಶೀಲ, ಕ್ರಿಯಾಶೀಲ ಬಾಳ್ವೆಯಲ್ಲಿ ಅಹಿಂಸೆ ಪ್ರತ್ಯೇಕವಾದುದಲ್ಲ. ಅದವರ ಬದುಕಿನ ಜೀವಧಾತು. ಒಂದರ್ಥದಲ್ಲಿ ಗಾಂಧಿಯವರ ಈ ವಿಶ್ವನೋಟವು ಸಮಗ್ರ ನೋಟವೂ ಹೌದು. ಗಾಂಧಿಯವರ ಚಿಂತನೆಯ ಜಗತ್ತಿನಲ್ಲಿ ಹಾಸುಹೊಕ್ಕಂತಿರುವ ಅಹಿಂಸೆಯು ತತ್ವವೂ ಹೌದು, ಪಥವೂ ಹೌದು, ವಿಚಾರವೂ ಹೌದು, ಆಚಾರವೂ ಹೌದು, ಸಾಧನೆಯೂ ಹೌದು, ಸಾಧನವೂ ಹೌದು. ಗಾಂಧಿಯವರ ಪ್ರಕಾರ, ಅಹಿಂಸೆಯೆಂದರೆ ಮೈತ್ರಿ. ನಮ್ಮ ಸುತ್ತಲಿನ ಚರಾಚರ ಪ್ರಪಂಚದ ಜೊತೆಗೆ ನಮಗಿರುವ ಅವಿನಾಭಾವ ಸಂಬಂಧ ಮತ್ತು ಅದರ ಅರಿವು. ಹಾಗೆಯೇ ಅಹಿಂಸೆಯೆಂದರೆ ಸಾಮುದಾಯಿಕ ಸಹಬಾಳ್ವೆಯಲ್ಲೇ ಸಾರ್ಥಕ್ಯವನ್ನು ಕಂಡುಕೊಳ್ಳುವುದು. ಜೊತೆಗೆ ಅಹಿಂಸೆಯೆಂದರೆ ಕಾಯಕದ ಕುರಿತು ನಮಗಿರಬೇಕಾದ ನಿಷ್ಠೆ ಮತ್ತು ಶಿಸ್ತು. ಕೊನೆಯದಾಗಿ, ಅಹಿಂಸೆಯೆಂದರೆ ಅಧಿಕಾರದ ಎದುರು ಮತ್ತು ಸತ್ಯದ ಪರವಾಗಿ ದಿಟ್ಟತನದಿಂದ ನಿಲ್ಲುವ ಸ್ಥೈರ್ಯ.
ಗಾಂಧಿಯವರ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಇತಿಹಾಸಕಾರ ವಿನಯಲಾಲ್, ಅಹಿಂಸೆಯ ಕುರಿತು ಮಹತ್ವದ ಸಂಗತಿಯೊಂದನ್ನು ಪ್ರಸ್ತಾಪಿಸುತ್ತಾರೆ. ಗಾಂಧಿಯವರಿಗೆ ಅಹಿಂಸೆಯೆಂದರೆ ಹಿಂಸೆಯ ಗೈರುಹಾಜರಿಯಷ್ಟೇ ಅಲ್ಲ, ಬದುಕಿನ ಶ್ರದ್ಧಾಕೇಂದ್ರವೂ ಹೌದು. ಅಹಿಂಸೆಯ ಕುರಿತಾದ ಗಾಂಧಿಯವರ ಈ ತಿಳಿವನ್ನು ಕ್ರೈಸ್ತ ತತ್ವಜ್ಞಾನಿ ಸಂತ ಆಗಸ್ಟಿನ್‌ನ (354- 430) ‘ಒಳಿತಿನ’ ಕಲ್ಪನೆಯ ಜೊತೆ ವಿನಯಲಾಲ್ ಹೋಲಿಸುತ್ತಾರೆ. ಆಗಸ್ಟಿನ್‍ಗೆ ಒಳಿತು ಎಂದರೆ ಕೆಡುಕಿನ ಅನುಪಸ್ಥಿತಿ ಮಾತ್ರವಲ್ಲ, ಅದೊಂದು ಸಕಾರಾತ್ಮಕವಾದ ನೈತಿಕ, ಆಧ್ಯಾತ್ಮಿಕ ನೋಟವೂ ಹೌದು. ಗಾಂಧಿಯವರ ಅಹಿಂಸೆಯ ಕುರಿತಾದ ಶ್ರದ್ಧೆಗೂ ಆಗಸ್ಟಿನ್‍ನ ಒಳಿತಿನ ಕುರಿತಾದ ಆಧ್ಯಾತ್ಮಿಕ ನೋಟಕ್ಕೂ ಇರುವ ಸಹಸಂಬಂಧ ಅಚ್ಚರಿ ಹುಟ್ಟಿಸುವಂಥದ್ದೇನಲ್ಲ. ಪಶ್ಚಿಮದ ಅನೇಕ ಕ್ರೈಸ್ತ ಧರ್ಮೀಯ ಚಿಂತಕರಿಂದ ಆಳವಾದ ಪ್ರಭಾವವನ್ನು ಪಡೆದಿರುವ ಗಾಂಧಿಯವರಿಗೆ ನೇರವಾಗಿಯೋ ಪರೋಕ್ಷವಾಗಿಯೋ ಆಗಸ್ಟಿನ್‍ನ ಈ ಆಧ್ಯಾತ್ಮಿಕ ನೋಟ ತಲುಪಿರುವುದು ಸಹಜವೇ ಆಗಿದೆ.
ಈ ಮಾತುಗಳನ್ನು ಆಧಾರವಾಗಿಟ್ಟು ಗಾಂಧಿಯವರ ಚಿಂತನೆಯನ್ನು ಪರಿಶೀಲಿಸುವುದಾದರೆ, ಅಹಿಂಸೆಯೆಂಬುದು ಗಾಂಧಿಯವರಿಗೆ ವಿಶೇಷವಾದ ಆಧ್ಯಾತ್ಮಿಕ ಅನುಭೂತಿ. ಅನುಭೂತಿಯ ಜೊತೆಯಲ್ಲಿ, ಅಹಿಂಸೆಯು ಗಾಂಧಿಯವರ ಲೋಕಜ್ಞಾನದ ಒಂದು ಅವಿಚ್ಛಿನ್ನ ಭಾಗವೂ ಹೌದು. ತಮ್ಮ ಕ್ರಿಯಾಶೀಲ ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಹಾಗೂ ನಿರ್ದಿಷ್ಟ ರಾಜಕೀಯ ಒತ್ತಡಗಳ ಸಮಕ್ಷಮದಲ್ಲಿ ಚಿಗುರೊಡೆದ ಗಾಂಧಿಯವರ ಅಹಿಂಸೆಯೆನ್ನುವ ತತ್ವಪಥವು ಮನುಷ್ಯನ ಬದುಕನ್ನು ಆವರಿಸಿರುವ ಹಿಂಸೆಯನ್ನು ಬದಿಗೆ ಸರಿಸಿ ನಿಲ್ಲುವ ನೈತಿಕ ಊರುಗೋಲು ಕೂಡ ಹೌದು. ದಕ್ಷಿಣ ಆಫ್ರಿಕಾದಲ್ಲಿನ ತಮ್ಮ ಸಂಘರ್ಷಮಯ ರಾಜಕಾರಣದಿಂದ ಆರಂಭಿಸಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಏಳುಬೀಳುಗಳಲ್ಲಿ ವಿಕಾಸ ಹೊಂದಿ, ಭಾರತ ವಿಭಜನೆಯ ಕಡುಹಿಂಸೆಯ ಅಗ್ನಿಕುಂಡದಲ್ಲಿ ತಾತ್ವಿಕವಾಗಿ ಸೂಕ್ಷ್ಮಗೊಂಡ ಗಾಂಧಿಯವರ ಅಹಿಂಸೆಯ ಕುರಿತಾದ ಕಾಣ್ಕೆಯನ್ನು ಒಂದರ್ಥದಲ್ಲಿ ಘೋರ ತಪಸ್ಸಿನ ಕೊನೆಗೆ ಸಂತನೊಬ್ಬ ಗಳಿಸಿಕೊಳ್ಳುವ ಸಾಕ್ಷಾತ್ಕಾರವೂ ಹೌದು ಎಂದು ಪರಿಭಾವಿಸಬಹುದು. ಹಾಗೆಯೇ ಬುದ್ಧನಂತೆ ಅಥವಾ ಜೀಸಸ್‍ನಂತೆ ಮನುಷ್ಯ ಬದುಕಿನ ಕಷ್ಟ-ಕೋಟಲೆಗಳ ನಡುವೆ ದಕ್ಕಿಸಿಕೊಂಡ ಲೋಕಾನುಭೂತಿಯೆಂದೂ ತಿಳಿದುಕೊಳ್ಳಬಹುದು.
ಅಹಿಂಸೆಯ ಕುರಿತಾದ ಗಾಂಧಿಯವರ ಚಿಂತನೆಯನ್ನು ಪಶ್ಚಿಮದ ಮತ್ತೊಬ್ಬ ಪ್ರಮುಖ ದಾರ್ಶನಿಕ ಇಮಾನ್ಯುವೆಲ್ ಕಾಂಟ್‌ನ (1724-1804) ವಿಶೇಷವಾದ ಲೌಕಿಕ ಅನುಭೂತಿಯೊಂದರ ಜೊತೆಗೂ ಹೋಲಿಸಬಹುದಾಗಿದೆ. ಕಾಂಟ್‍ನ ಅತ್ಯಂತ ಅಮೂರ್ತವಾದ ತತ್ವಜ್ಞಾನ ಮತ್ತು ಗಾಂಧಿಯವರ ಅನುಭವನಿಷ್ಠವಾದ ಅಹಿಂಸೆಯ ರಾಜಕಾರಣ ಸಂಪೂರ್ಣವಾಗಿ ಭಿನ್ನಭಿನ್ನವಾದವು. ಹಾಗಿದ್ದರೂ ಗಾಂಧಿಯವರು ಅಹಿಂಸೆಗೆ ನೀಡಿರುವ ಮಹತ್ವವನ್ನು ಅರಿಯಲು ಈ ಹೋಲಿಕೆಯನ್ನು ಮಾಡುವುದು ಸೂಕ್ತ. ದಾರ್ಶನಿಕ ಚಳವಳಿಯ (ದಿ ಎನ್‍ಲೈಟನ್‍ಮೆಂಟ್) ಸಂದರ್ಭದ ಮಹತ್ವದ ತತ್ವಜ್ಞಾನಿಯಾದ ಕಾಂಟ್, ತನ್ನ ಕಣ್ಣೆದುರಿನಲ್ಲೇ ಧರ್ಮವು ಅದರ ಪಾರಮ್ಯವನ್ನು ಕಳೆದುಕೊಂಡಾಗ ಮನುಷ್ಯನ ಬದುಕನ್ನು ಸಂತೈಸಬಲ್ಲ, ಸಲಹಬಲ್ಲ, ವಿಘಟನೆಯ ವಿನಾಶದಿಂದ ರಕ್ಷಿಸಬಲ್ಲ ತತ್ವ ಯಾವುದು ಎನ್ನುವ ಕುರಿತು ಆಳವಾಗಿ ಚಿಂತನೆ ನಡೆಸುತ್ತಾನೆ. ಆತನ ಪ್ರಕಾರ ‘ನ್ಯಾಯ’ವೇ ಧರ್ಮಕ್ಕೆ ಬದಲಿಯಾಗಬಲ್ಲ ಪರಮೋಚ್ಚ ಪ್ರಶ್ನಾತೀತ ತತ್ವ.
ಕಾಂಟ್ ತನ್ನ ಚಿಂತನೆಯಲ್ಲಿ ಕಂಡುಕೊಂಡ ನ್ಯಾಯವೆನ್ನುವ ತತ್ವದಂತೆಯೇ ಗಾಂಧಿ ತಮ್ಮ ಕಣ್ಣಮುಂದಿನ ಸುಡುವಾಸ್ತವ ಪ್ರಪಂಚದ ಅನುಭವದ ಹಿನ್ನೆಲೆಯಲ್ಲಿ ಕಂಡುಕೊಂಡ ಪ್ರಶ್ನಾತೀತ ತತ್ವವೇ ಅಹಿಂಸೆ. ಈ ಮಾತಿನ ಅರ್ಥ, ಗಾಂಧಿಯವರು ಕಾಂಟ್‍ನನ್ನು ತಿಳಿದುಕೊಂಡಿದ್ದರೆಂದಾಗಲೀ ಅಥವಾ ಕಾಂಟ್‍ನ ವಿಚಾರಗಳಿಂದ ಪ್ರಭಾವಿತರಾಗಿದ್ದರೆಂದಾಗಲೀ ಅಲ್ಲ. ಯಾವುದೇ ಶ್ರೇಷ್ಠ ವಿಚಾರವು ಯಾವುದೇ ಕಾಲಕ್ಕೆ ಯಾವುದೇ ಚಿಂತಕನಿಗೆ ಸೀಮಿತವಾಗಿ ಇರುವುದಿಲ್ಲ. ಮಾನವ ಚಿಂತನೆಯ ಶ್ರೇಷ್ಠ ಕಾಣ್ಕೆಗಳು ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಚಿಂತಕರುಗಳಲ್ಲಿ ವಿಶಿಷ್ಟ ರೀತಿಯಲ್ಲಿ ಮರು ಅಭಿವ್ಯಕ್ತಿಯನ್ನು ಪಡೆಯುತ್ತವೆ. ಈ ಅರ್ಥದಲ್ಲಿ, ಹದಿನೆಂಟನೆಯ ಶತಮಾನದ ಕಾಂಟ್‍ನಿಗೂ ಇಪ್ಪತ್ತನೆಯ ಶತಮಾನದ ಗಾಂಧಿಗೂ ನಂಟು ಇರಲು ಸಾಧ್ಯ.
ಭಾರತೀಯ ಸಮಾಜದಲ್ಲಿ ಅಹಿಂಸೆಯನ್ನು ಒಂದು ತತ್ವವಾಗಿ ಮತ್ತು ಕ್ರಿಯೆಯಾಗಿ ಪರಿಚಯಿಸುವಾಗ ಗಾಂಧಿ ಅವರಿಗಿದ್ದ ಸ್ಪಷ್ಟತೆ ಅನೇಕ ಬಾರಿ ದಿಟ್ಟವಾಗಿಯೇ ವ್ಯಕ್ತಗೊಂಡಿದೆ. ಆ ಅರಿವು ಏನೆಂದರೆ, ಮನುಷ್ಯರು ಒಂದು ಸಾಮಾಜಿಕ ಸಂಬಂಧದಲ್ಲಿದ್ದಾಗ ಮಾಡುವ ಯಾವುದೇ ಕೆಲಸ, ಅವರಿರುವ ಇತರ ಸಾಮಾಜಿಕ ಸಂಬಂಧಗಳ ಮೇಲೂ ಪರಿಣಾಮವನ್ನು ಬೀರುತ್ತದೆ ಎಂಬುದು. ಅಂದರೆ ಒಬ್ಬರ ಕ್ರಿಯೆ ಮತ್ತೊಬ್ಬರ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ವಿವರಿಸುವುದಾದರೆ, ನಮ್ಮಲ್ಲಿ ಅಧಿಕ ಮುಖ ಬೆಲೆಯ ನೋಟು ರದ್ದತಿ ಮಾಡಲಾಯಿತು. ಇದರಿಂದ ದೇಶದ ಬಡಪಾಯಿಗಳೇನಕರು ಪಡಬಾರದ ಕಷ್ಟ ಅನುಭವಿಸಿದರು. ಕೆಲವರಂತೂ ಸತ್ತೇಹೋದರು.
ನೋವಿಗೆ ಕಾರಣರಾದವರು ನೋವನ್ನು ಅನುಭವಿಸುತ್ತಾರೋ ಇಲ್ಲವೋ ಆದರೆ ಉಳಿದವರೆಲ್ಲರೂ ಅನುಭವಿಸಬೇಕಾಗುತ್ತದೆ. ಇದು ಪಕ್ಕಾ ಸಾಮುದಾಯಿಕ ಪರಿಕಲ್ಪನೆ. ‘ಬೇರೆಯವರು ಮಾಡಿದ ಅನ್ಯಾಯಕ್ಕೆ ನಾನೂ ಹೊಣೆಗಾರ’ ಎಂಬ ಜವಾಬ್ದಾರಿ. ಅಹಿಂಸೆಯ ಹಿಂದೆ ಇರುವುದು ಇಂತಹ ಸಾಮುದಾಯಿಕ ಚಿಂತನೆ. ‘ಇಡಿಯ ವಿಶ್ವ ನನ್ನ ಭಾಗ. ನಾನು ವಿಶ್ವದ ಒಂದು ಭಾಗ’ ಎಂಬ ಆಧ್ಯಾತ್ಮಿಕ ತಿಳಿವಳಿಕೆಯಿಂದ ಗಾಂಧಿಯವರ ಅಹಿಂಸೆಯ ಚಿಂತನೆ ಹೊರಹೊಮ್ಮಿದೆ.
ಗಹನವಾದ ಸಾಧನೆಗಾಗಿ ಗಾಂಧಿ ಅಹಿಂಸೆಯ ರಾಜಕಾರಣ ಮಾಡಿದರು. ಅವರ ಧ್ಯೇಯವು ಲೋಕದ ಒಳಿತು ಸಾಧಿಸುವುದು. ಆದರೆ ಗಾಂಧಿಯವರು ಮಾಡಲು ಒದ್ದಾಡಿದ ಈ ಒಳಿತಿನ ಬಗ್ಗೆ ಭಾರತದ ಒಳಗೆ ಭಿನ್ನಮತಗಳಿದ್ದವು. ಗಾಂಧಿಯವರು ತಮ್ಮ ಕಾರ್ಯದ ಬಗ್ಗೆ ಹೇಗೆ ಮತ್ತು ಏನು ಯೋಚನೆ ಮಾಡುತ್ತಿದ್ದರೋ ಹಾಗೆಯೇ ಉಳಿದವರೂ ಅವರನ್ನು ನೋಡಬೇಕೆಂದೇನೂ ಇಲ್ಲವಲ್ಲ. ಹಾಗಾಗಿ, ಕೆಲವು ಗುರುತಿಸುವಿಕೆಗಳು ಸಾಮಾಜಿಕ ಸಂಬಂಧಗಳಲ್ಲಿ ಅಪಗುರುತಿಸುವಿಕೆ ಆಗುತ್ತವೆ. ಇವನ್ನು ‘ಮಿಸ್ ರೀಡಿಂಗ್’ಗಳು ಅಥವಾ ‘ಡಿಫರೆಂಟ್ ರೀಡಿಂಗ್’ಗಳು ಎಂದೂ ಹೇಳಬಹುದು.
ಇಂತಹ ಭಿನ್ನ ಓದುಗಳಲ್ಲಿ ಒಂದು ಬಗೆಯ ಓದು ಗಾಂಧಿಯವರ ಹತ್ಯೆ ಮಾಡಿದೆ, ಇನ್ನೊಂದು ದ್ವೇಷಿಸಿದೆ, ಮತ್ತೊಂದು ಟೀಕಿಸಿದೆ, ಇನ್ನು ಕೆಲವು ಗಾಂಧಿಯವರನ್ನು ವಿಮರ್ಶಿಸಿವೆ ಮತ್ತು ಕೆಲವು ಗಾಂಧಿಯವರನ್ನು ಚಾರಿತ್ರಿಕವಾಗಿ ಮರುನಿರೂಪಿಸಿವೆ. ಓದಿನ ಈ ಬಹುರೂಪವು ಅಹಿಂಸೆಯನ್ನು ಮಾತ್ರವಲ್ಲ, ‘ಚಿಂತನೆ’ ಎಂಬ ಬೌದ್ಧಿಕ ಕೆಲಸದ ಬಗೆಗೂ ‘ಚಿಂತನೆ’ ನಡೆಸುವಂತೆ ನಮ್ಮನ್ನು ಒತ್ತಾಯಿಸುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.