ADVERTISEMENT

ವಿಶ್ಲೇಷಣೆ | ಹರಿಯಾಣ ಚುನಾವಣೆ: ಆಗಲಿದೆ ಅಗ್ನಿಪರೀಕ್ಷೆ

ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು, ಕಸಿದುಕೊಳ್ಳಲು ಕಾಂಗ್ರೆಸ್‌ ತೀವ್ರ ಪ್ರಯತ್ನ

ಬಿ.ಎಸ್‌.ಅರುಣ್‌
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
   

ಹರಿಯಾಣ ವಿಧಾನಸಭೆಗೆ ಈ ತಿಂಗಳ 5ರಂದು ಚುನಾವಣೆ ನಡೆಯಲಿದೆ. ಇದು, ಬಿಜೆಪಿ ಹಾಗೂ ಕಾಂಗ್ರೆಸ್‌ ಈ ಎರಡು ಪಕ್ಷಗಳಿಗೂ ಅಗ್ನಿಪರೀಕ್ಷೆ ಆಗಲಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಗೆ. ಅದಕ್ಕೆ ಬಹಳಷ್ಟು ಕಾರಣಗಳಿವೆ. ರಾಜ್ಯದಲ್ಲಿ 2014ರಿಂದಲೂ ಅಧಿಕಾರದಲ್ಲಿರುವ ಈ ಪಕ್ಷಕ್ಕೆ ಈಗ ಹ್ಯಾಟ್ರಿಕ್‌ ಜಯ ನಿರೀಕ್ಷೆಯ ಸಮಯ. ಆದರೆ ಪಕ್ಷ ಈಗ ಸಂಕಷ್ಟದಲ್ಲಿ ಇರುವಂತೆ ಕಾಣುತ್ತದೆ.

2014ರ ಚುನಾವಣೆಯಲ್ಲಿ, ಒಟ್ಟು 90 ಕ್ಷೇತ್ರಗಳ ಪೈಕಿ 47ರಲ್ಲಿ ಗೆದ್ದಿದ್ದ ಬಿಜೆಪಿ, 2019ರಲ್ಲಿ ಬಹುಮತ ಗಳಿಸಲು ವಿಫಲವಾಗಿತ್ತು. ಆಗ 40 ಸ್ಥಾನಗಳನ್ನು ಗಳಿಸಿದ್ದ ಅದು, ಪ್ರಾದೇಶಿಕ ಪಕ್ಷವಾದ ಜನನಾಯಕ್‌ ಜನತಾ ಪಾರ್ಟಿ (ಜೆಜೆಪಿ) ಜೊತೆಗೂಡಿ ಸರ್ಕಾರ ರಚನೆ ಮಾಡಿತು. ಆದರೆ, ಜೆಜೆಪಿಯು 2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯ ಸಖ್ಯ ತೊರೆದು ಸರ್ಕಾರದಿಂದ ಹೊರಬಂದಿತು.

ಇನ್ನು ಲೋಕಸಭಾ ಚುನಾವಣೆಯನ್ನು ಗಣನೆಗೆ ತೆಗೆದುಕೊಂಡರೆ, 2019ರಲ್ಲಿ ರಾಜ್ಯದ ಎಲ್ಲಾ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ, 2024ರಲ್ಲಿ ಬರೀ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಶಕ್ತವಾಯಿತು. ಉಳಿದ ಐದು ಕ್ಷೇತ್ರಗಳನ್ನು ಕಾಂಗ್ರೆಸ್‌ ತನ್ನ ಮುಡಿಗೇರಿಸಿಕೊಂಡಿತು. 2019ರ ಲೋಕಸಭಾ ಚುನಾವಣೆಯಲ್ಲಿ ಶೇ 58.02ರಷ್ಟು ಮತ ಗಳಿಸಿದ್ದ ಬಿಜೆಪಿ, ಅದೇ ವರ್ಷದಲ್ಲಿ ನಡೆದ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಶೇ 36.49ರಷ್ಟು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಶೇ 46.11ರಷ್ಟು ಮತಗಳನ್ನು ಗಳಿಸಿತು.

ADVERTISEMENT

ಕಾಂಗ್ರೆಸ್‌ ಸ್ಥಿತಿ ಉತ್ತಮಗೊಂಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಶೇ 28.42ರಷ್ಟು, 2019ರ ವಿಧಾನಸಭಾ ಚುನಾವಣೆಯಲ್ಲಿ ಶೇ 28.08ರಷ್ಟು ಮತಗಳನ್ನು ಕಾಂಗ್ರೆಸ್‌ ಪಡೆದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಈ ಮತಪ್ರಮಾಣವು ಶೇ 43.56ಕ್ಕೆ ಏರಿದೆ. ಅಂದರೆ, ಏಪ್ರಿಲ್- ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಥಿತಿ ನಿರೀಕ್ಷೆಗೂ ಮೀರಿ ಚೇತರಿಕೆ ಕಂಡಿದೆ.

ಇನ್ನು ಬೇರೆ ಕಾರಣಗಳನ್ನು ನೋಡೋಣ. ಬಿಜೆಪಿಯು ಅಕಸ್ಮಾತ್‌ ಹರಿಯಾಣದಲ್ಲಿ ಸೋತರೆ, ಪಂಜಾಬ್‌, ಹಿಮಾಚಲಪ್ರದೇಶ, ದೆಹಲಿ ಜೊತೆಗೆ, ಉತ್ತರ ಭಾರತದಲ್ಲಿ ಅದು ಮತ್ತೊಂದು ರಾಜ್ಯವನ್ನು ಕಳೆದುಕೊಂಡ ಹಾಗೆ ಆಗುತ್ತದೆ. ಇದು, ನವೆಂಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. 2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಯೋಜಿಸಿದ್ದ, ಆದರೆ ಹರಿಯಾಣ- ಪಂಜಾಬ್‌ನ ರೈತರು ತೀವ್ರವಾಗಿ ವಿರೋಧಿಸಿದ್ದ ‘ಕೃಷಿ ಕಾಯ್ದೆ’ಗಳು ಈಗಲೂ ಆ ಸೋಲಿನ ಹಿಂದೆ ಕೆಲಸ ಮಾಡಿವೆ ಎನ್ನುವ ಸಂದೇಶ ಹೋಗಬಹುದು. ಜೊತೆಗೆ ನಿರುದ್ಯೋಗ, ಸೇನಾ ನೇಮಕಾತಿಗಾಗಿ ಕೇಂದ್ರ ಜಾರಿಗೆ ತಂದಿರುವ ‘ಅಗ್ನಿಪಥ್‌’ ಯೋಜನೆಯ ಬಗ್ಗೆ ಯುವಕರಲ್ಲಿ ಇರುವ ಅಸಮಾಧಾನ, ಜಾಟ್‌ ಸಮುದಾಯಕ್ಕೆ ಸೇರಿದ ಮಹಿಳಾ ಕುಸ್ತಿಪಟುಗಳ ಮೇಲೆ, ಸಂಸದರಾಗಿದ್ದ ಬಿಜೆಪಿ ನಾಯಕ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಎಸಗಿದರು ಎನ್ನಲಾದ ಲೈಂಗಿಕ ಶೋಷಣೆ- ಈ ಎಲ್ಲ ಕಾರಣಗಳಿಂದ ಕೇಸರಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ನಾಲ್ಕು ತಿಂಗಳ ಹಿಂದೆ ಬಿಜೆಪಿಯು ಐದು ಲೋಕಸಭಾ ಕ್ಷೇತ್ರಗಳಲ್ಲಿ ಸೋಲು ಕಾಣುವುದಕ್ಕೆ ಈ ವಿಷಯಗಳೇ ಕಾರಣಗಳಾಗಿದ್ದವು. ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬಿಜೆಪಿಯ ಪ್ರಾಬಲ್ಯ ಕ್ಷೀಣಿಸುತ್ತಿದೆ ಎನ್ನಲಾಗಿದೆ. ಅನೇಕ ಕಡೆಗಳಲ್ಲಿ ಬಿಜೆಪಿ ನಾಯಕರು, ಅಭ್ಯರ್ಥಿಗಳಿಗೆ ಘೇರಾವ್‌ ಮಾಡಲಾಗಿದೆ. ಹಲವೆಡೆ ಸಭೆಗಳನ್ನು ಬಹಿಷ್ಕರಿಸಲಾಗಿದೆ.

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ಕೂಡ ಬಹಳಷ್ಟು ಸದ್ದು ಮಾಡಿತ್ತು. ಅನೇಕ ಹಿರಿಯರು ಹಾಗೂ ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಅವರಲ್ಲಿ ಹೆಚ್ಚಿನವರು ಪಕ್ಷ ಬಿಟ್ಟಿದ್ದಾರೆ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಪ್ರಮುಖರು ಹಿಸ್ಸಾರ್‌ನಿಂದ ಕಣದಲ್ಲಿರುವ, ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎಂದೇ ಹೆಸರಾಗಿರುವ ಸಾವಿತ್ರಿ ಜಿಂದಾಲ್.‌ ಹರಿಯಾಣ ತನ್ನ ಹಿಡಿತದಲ್ಲಿ ಇಲ್ಲದಿದ್ದರೆ ಒಂದು ಸಂಪದ್ಭರಿತ ರಾಜ್ಯವು ಬಿಜೆಪಿಯ ಕೈಬಿಟ್ಟಂತೆ ಆಗುತ್ತದೆ ಕೂಡ. 

ದೆಹಲಿಗೆ ಹೊಂದಿಕೊಂಡಂತೆ ಇರುವ ಹರಿಯಾಣದ ಗುರುಗ್ರಾಮವು ವಿಶ್ವದ ಅನೇಕ ಜಾಗತಿಕ ಕಂಪನಿಗಳನ್ನು ಹೊಂದಿರುವಂತಹ, ದೇಶದ ಅತಿ ದೊಡ್ಡ ನಗರಗಳಲ್ಲಿ ಒಂದು. ಈ ರಾಜ್ಯ ಕೂಡ ಕಾಂಗ್ರೆಸ್‌ ತೆಕ್ಕೆಗೆ ಜಾರಿದರೆ, ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾವತಿ ಮಾಡುವ ಪ್ರತಿಷ್ಠಿತ ನಗರಗಳಲ್ಲಿ ಒಂದಾದ ಗುರುಗ್ರಾಮದ ಮೇಲಿನ ಹಿಡಿತವೂ ಬಿಜೆಪಿಗೆ ಇಲ್ಲವಾಗುತ್ತದೆ. ಬೆಂಗಳೂರು ಹಾಗೂ ಹೈದರಾಬಾದ್‌ನಂತೆ ಈ ನಗರವೂ ದೇಶದ ಬಹುಮುಖ್ಯ ನಗರಗಳಲ್ಲಿ ಒಂದಾಗಿದೆ. 

ಹಾಗೆಂದು, ಕಾಂಗ್ರೆಸ್‌ನ ಪರಿಸ್ಥಿತಿ ಬಹಳಷ್ಟು ಆಶಾದಾಯಕ ಎಂದು ಹೇಳಲಾಗದು. ಆಂತರಿಕ ಸಮಸ್ಯೆಗಳೇ ಅದಕ್ಕೆ ಮುಳುವಾಗಬಹುದು. ಪಕ್ಷದ ಪ್ರಮುಖ ನಾಯಕ ಹಾಗೂ ಎರಡು ಬಾರಿ ಮುಖ್ಯಮಂತ್ರಿ
ಯಾಗಿದ್ದ ಭೂಪಿಂದರ್‌ ಸಿಂಗ್‌ ಹೂಡ ಅವರನ್ನು ದಲಿತ ನಾಯಕಿ ಹಾಗೂ ಸಂಸದೆ ಸೆಲ್ಜಾ, ಮುಖಂಡ ಹಾಗೂ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಿರೋಧಿಸುತ್ತಾರೆ. ಸೆಲ್ಜಾ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಸಿಗಲಿಲ್ಲವೆಂದು ಕೆಲವು ದಿನ ಪಕ್ಷದ ಪ್ರಚಾರದಿಂದ ದೂರವೇ ಉಳಿದಿದ್ದರು, ಬಳಿಕ ರಾಹುಲ್ ಗಾಂಧಿ ಅವರ ಜೊತೆ ಮಾತ್ರ ಪ್ರಚಾರದಲ್ಲಿ ಕಾಣಿಸಿಕೊಂಡರು. ಕಾಂಗ್ರೆಸ್‌ನ ಇನ್ನೊಂದು ತಲೆನೋವೆಂದರೆ, ಪ್ರಾದೇಶಿಕ ಪಕ್ಷಗಳು ಮತ್ತು ಅವುಗಳಿಂದ ಆಗಬಹುದಾದ ಬಿಜೆಪಿ ವಿರುದ್ಧದ ಮತ ವಿಭಜನೆಯ ಸಾಧ್ಯತೆ. ಜೆಜೆಪಿ ಮತ್ತು ಉತ್ತರ ಪ್ರದೇಶದ ಸಂಸದ ಚಂದ್ರಶೇಖರ ಆಜಾದ್‌ ಅವರ ಆಜಾದ್‌ ಸಮಾಜ್‌ ಪಾರ್ಟಿ ನಡುವಿನ ಮೈತ್ರಿ ಹಾಗೂ ಇಂಡಿಯನ್‌ ನ್ಯಾಷನಲ್‌ ಲೋಕದಳ– ಬಹುಜನ ಸಮಾಜ ಪಕ್ಷದ ನಡುವಿನ ಮೈತ್ರಿ ತನ್ನ ಮತಗಳನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್‌ನ ಚಿಂತೆ (ಕಾಂಗ್ರೆಸ್‌ ಈ ನಾಲ್ಕೂ ಪಕ್ಷಗಳನ್ನು ‘ವೋಟ್‌ ಕಟ್ಟರ್ಸ್‌’ ಎಂದು ಕರೆಯುತ್ತದೆ). ಇದಕ್ಕೆ ಕಾರಣ ಜೆಜೆಪಿ ಹಾಗೂ ಲೋಕದಳದ ಮುಖ್ಯ ಮತ ಗಳಿಕೆಯು ರಾಜ್ಯದಲ್ಲಿ ಸುಮಾರು ಶೇ 27ರಷ್ಟಿರುವ ಜಾಟ್‌ ಸಮುದಾಯದ ಮೇಲೆ, ಆಜಾದ್‌ ಪಕ್ಷ ಮತ್ತು ಬಿಎಸ್‌ಪಿಯು ಸುಮಾರು ಶೇ 20ರಷ್ಟಿರುವ ದಲಿತರ ಮತಗಳ ಮೇಲೆ ಅವಲಂಬಿತವಾಗಿವೆ. ಕಾಂಗ್ರೆಸ್‌ ಬೇರೆ ಸಮುದಾಯಗಳ ಜೊತೆಗೆ ಈ ಎರಡೂ ಸಮುದಾಯಗಳ ಮೇಲೆ ಹೆಚ್ಚು ಕಣ್ಣಿಟ್ಟಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 17 ಮೀಸಲು ಕ್ಷೇತ್ರಗಳಿವೆ. 47 ಕ್ಷೇತ್ರಗಳಲ್ಲಿ ಪರಿಶಿಷ್ಟ ಸಮುದಾಯಗಳ ಮತಸಂಖ್ಯೆ ಶೇ 20ರಷ್ಟಿದೆ. 

ಕಾಂಗ್ರೆಸ್‌ ಮತ್ತು ಎಎಪಿ (ಆಮ್‌ ಆದ್ಮಿ ಪಕ್ಷ) ನಡುವಿನ ಹೊಂದಾಣಿಕೆಯ ಮಾತುಕತೆ ಫಲಪ್ರದವಾಗಲಿಲ್ಲ. ಆದರೆ ಎಎಪಿ ಯಾವುದೇ ಪಕ್ಷಕ್ಕೆ ಹಾನಿ ಉಂಟು ಮಾಡುವಷ್ಟು ಶಕ್ತಿಯುತವಾಗಿಲ್ಲ ಎನ್ನಲಾಗುತ್ತಿದೆ. ಬೇರೆ ರಾಜ್ಯಗಳಂತೆ ಹರಿಯಾಣದಲ್ಲೂ ಜಾತಿಯ ಪ್ರಭಾವ ಅಧಿಕವಾಗಿದೆ. ಪಂಜಾಬ್‌ನಿಂದ ಬೇರ್ಪಟ್ಟು 1966ರಲ್ಲಿ ಹರಿಯಾಣ ರಾಜ್ಯ ಸ್ಥಾಪನೆಯಾದಾಗಿನಿಂದಲೂ ಜಾಟ್‌ ಸಮುದಾಯ ಅನೇಕ ಬಾರಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದೇವಿಲಾಲ್‌, ಅವರ ಮಗ ಓಂ ಪ್ರಕಾಶ್‌ ಚೌಟಾಲಾ, ಬನ್ಸಿಲಾಲ್‌ ಹಾಗೂ ಹೂಡ ಈ ಸಮುದಾಯದಿಂದ ಮುಖ್ಯಮಂತ್ರಿಗಳಾಗಿದ್ದವರಲ್ಲಿ ಪ್ರಮುಖರು. ಕಾಂಗ್ರೆಸ್‌, ಜಾಟ್‌ ಸಮುದಾಯದ ಹೆಚ್ಚಿನ ಬೆಂಬಲ ಪಡೆದಿದೆ.

2014ರಲ್ಲಿ ಬಿಜೆಪಿಯು ಜಾಟ್‌ ಸಮುದಾಯದ ಬಲವನ್ನು ಮುರಿದು ಹೊಸ ಜಾತಿ ಲೆಕ್ಕಾಚಾರ ಹಾಕಿ, ಜಾಟ್‌ ಅಲ್ಲದ ಹಿಂದುಳಿದ ಸಮುದಾಯಗಳ ಬೆಂಬಲದಿಂದ ಸರ್ಕಾರ ರಚಿಸಿತು. ಹಿಂದುಳಿದ ಖತ್ರಿ ಸಮಾಜದ ಮನೋಹರಲಾಲ್‌ ಖಟ್ಟರ್ ಮುಖ್ಯಮಂತ್ರಿಯಾದರು. ನಂತರ ಬಿಜೆಪಿಯ ಬಲ ಕುಸಿಯತೊಡಗಿದ್ದನ್ನು ಮನಗಂಡ ಪಕ್ಷ ಇದೇ ವರ್ಷದ ಮಾರ್ಚ್‌ನಲ್ಲಿ ಅವರನ್ನು ಕುರ್ಚಿಯಿಂದ ಕೆಳಗಿಳಿಸಿ, ಹಿಂದುಳಿದ ವರ್ಗದವರೇ ಆದ ನಯಾಬ್‌ ಸಿಂಗ್‌ ಸೈನಿ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿತು. ಮುಸ್ಲಿಮರ ಮತಗಳ ಮೇಲೂ ಅದು ಕಣ್ಣಿಟ್ಟಿದೆ. ಹೋದ ವರ್ಷ ಮತೀಯ ಹಿಂಸಾಚಾರ ನಡೆದ ನೂಹ್‌ ಜಿಲ್ಲೆಯಲ್ಲಿ ಆ ಸಮುದಾಯದ ಇಬ್ಬರನ್ನು ಕಣಕ್ಕಿಳಿಸಿದೆ. 

ಪರಿಶಿಷ್ಟರು, ಜಾಟ್‌ ಸಮುದಾಯದವರ ಜೊತೆಗೆ ಕಾಂಗ್ರೆಸ್ಸನ್ನು ಬೆಂಬಲಿಸಿದ ಮಹಿಳೆಯರು, ಯುವಜನ ಹಾಗೂ ರೈತರನ್ನು ಒಳಗೊಂಡ ವರ್ಗಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಿದವು ಎಂದು ಸಿಎಸ್‌ಡಿಎಸ್- ಲೋಕನೀತಿ ಸಮೀಕ್ಷೆ ಹೇಳಿದೆ. 

ಹಾಗೆಂದು ಹರಿಯಾಣದಲ್ಲಿ ಬಿಜೆಪಿಗೆ ಗೆಲುವಿನ ಅವಕಾಶವೇ ಇಲ್ಲ ಎಂದು ಕೂಡ ಹೇಳಲಾಗದು. ಹಿಂದಿನ ಚುನಾವಣೆಯಲ್ಲಿ ಪಕ್ಷ ಗಳಿಸಿದ ಶೇ 46ರಷ್ಟು ಮತಗಳು ಈ ದಿಸೆಯಲ್ಲಿ ಬಹಳ ಮುಖ್ಯ. ಹಾಗೆಯೇ, ಹರಿಯಾಣದಲ್ಲಿ ಹಿಂದುತ್ವದ ಭಾವನೆ ಪ್ರಬಲವಾಗಿದೆ. ಈ ಕಾರಣಗಳಿಂದಾಗಿ, ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಭಾರಿ ಕಸರತ್ತು ನಡೆಸಬೇಕಿದೆ.

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.