ADVERTISEMENT

ಬಜೆಟ್‌ ವಿಶ್ಲೇಷಣೆ | ನೂರು ದಿನಗಳ ಕೆಲಸಕ್ಕೆ ನೂರೆಂಟು ತಕರಾರು? –ಶಾರದಾ ಗೋಪಾಲ

'ಉದ್ಯೋಗ ಖಾತರಿ: ತಳಮಟ್ಟದ ವಾಸ್ತವ'

ಶಾರದಾ ಗೋಪಾಲ, ಧಾರವಾಡ
Published 18 ಫೆಬ್ರುವರಿ 2023, 3:16 IST
Last Updated 18 ಫೆಬ್ರುವರಿ 2023, 3:16 IST
ಶಾರದಾ ಗೋಪಾಲ (ಒಳಚಿತ್ರದಲ್ಲಿ)
ಶಾರದಾ ಗೋಪಾಲ (ಒಳಚಿತ್ರದಲ್ಲಿ)   

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು 2007ರಲ್ಲಿ ಆರಂಭವಾದಾಗಿನಿಂದಲೂ ಆ ಹಳ್ಳಿಯ ಹೆಣ್ಣುಮಕ್ಕಳು ಪಂಚಾಯಿತಿಯಲ್ಲಿ ಕೆಲಸ ದೊರಕಿಸಿಕೊಂಡು, ತಮ್ಮ ತಮ್ಮ ಗುಂಪುಗಳನ್ನು ಆತ್ಮವಿಶ್ವಾಸದಿಂದ ಮುನ್ನಡೆಸುತ್ತಾ ಬಂದಿದ್ದರು. ಆದರೆ ಇತ್ತೀಚೆಗೆ ಅವರನ್ನು ಭೇಟಿಯಾಗಿ ಕೇಳಿದಾಗ, ‘ಕೆಲಸ ಮಾಡುತ್ತಿಲ್ಲರೀ, ದೊಡ್ಡ ಫೋನ್ ಬೇಕಂತೆ, ಎಂಟನೇ ಇಯತ್ತೆ ಪಾಸಾಗಿರಬೇಕಂತೆ. ಎಂಟನೇ ಇಯತ್ತೇನೂ ಪಾಸಾಗಿಲ್ಲ, ದೊಡ್ಡ ಫೋನ್ ಖರೀದಿ ಮಾಡೊ ತಾಕತ್ತೂ ನಮಗಿಲ್ಲ’ ಎಂದ ‘ಕಾಯಕಬಂಧು’ ರುಕ್ಮಿಣಿಯ ನಿಟ್ಟುಸಿರಿನಲ್ಲಿ ಅವಳೊಬ್ಬಳಲ್ಲ, 75 ಹೆಣ್ಣುಮಕ್ಕಳು ಕೆಲಸ ಕಳೆದುಕೊಂಡ ದುಃಖ ತುಂಬಿತ್ತು.

ಖಾನಾಪುರ ತಾಲ್ಲೂಕಿನ ಹಿಂಡಲಗಿ ಎಂಬ ಆ ಹಳ್ಳಿಯಲ್ಲಿ ತಲಾ 25 ಜನರ ಮೂರು ಗುಂಪುಗಳು ಕೆಲಸದಲ್ಲಿ ತೊಡಗಿದ್ದವು. ಆಯಾ ಗುಂಪಿನ ಮುಂದಾಳುಗಳಾದ ಕಾಯಕಬಂಧುಗಳು ಸ್ವಂತ ದುಡ್ಡಿನಲ್ಲಿ ಖರೀದಿಸಿದ ಸ್ಮಾರ್ಟ್‌ಫೋನ್ ಹೊಂದಿರಬೇಕು ಮತ್ತು 8ನೇ ಇಯತ್ತೆ ಪಾಸಾಗಿರಲೇಬೇಕು ಎಂಬ ನಿಯಮದಿಂದಾಗಿ ಮೂರೂ ಗುಂಪಿನ ಕಾಯಕಬಂಧುಗಳು ಕೆಲಸ ಕಳೆದುಕೊಳ್ಳಬೇಕಾ
ಯಿತು. ಎಂಟನೇ ಇಯತ್ತೆ ಪಾಸಾಗಿರುವ, ಸ್ಮಾರ್ಟ್‌ಫೋನ್ ಇರುವ, ಮುಂದಾಳತ್ವ ಇರುವ ಬೇರೆ ಮಹಿಳೆಯರು ಯಾರೂ ಇಲ್ಲದ ಕಾರಣ, ಉಳಿದ ಮಹಿಳೆಯರಿಗೂ ಇಂತಹ ಸ್ಥಿತಿ ಬಂದಿದೆ.

‘ಸ್ಮಾರ್ಟ್‌ಫೋನಿನಲ್ಲಿ ಫೋಟೊಗಳನ್ನು ದಿನಕ್ಕೆ ಎರಡು ಬಾರಿ ಅಪ್‌ಲೋಡ್ ಮಾಡುವ ಕಾರ್ಯ ಸರಾಗವಾಗಿ ಆಗುತ್ತಿದೆ’ ಎಂಬ ಸರ್ಕಾರದ ಹೇಳಿಕೆ ಸಖೇದಾಶ್ಚರ್ಯವನ್ನು ಉಂಟುಮಾಡುತ್ತದೆ. ಎಲ್ಲೆಲ್ಲಿ ಜನ ಕೆಲಸ ಮಾಡುತ್ತಿದ್ದಾರೋ ಅಲ್ಲೆಲ್ಲ ಗ್ರಾಮಗಳ ಸಮೀಪ ಕೆರೆ ಹೂಳೆತ್ತುವ ಕೆಲಸವೆಲ್ಲ ಮುಗಿದು, ಈಗ ದೂರದ ಅರಣ್ಯದಲ್ಲಿ ಟ್ರೆಂಚ್, ಪ್ರಾಣಿಗಳಿಗೆ ಕುಡಿಯುವ ನೀರಿನ ಹೊಂಡಗಳ ನಿರ್ಮಾಣ ಕಾರ್ಯ ನಡೆಯುತ್ತಿರು ವಲ್ಲಿ, ತಲೆಕೆಳಗಾಗಿ ನಿಂತರೂ ನೆಟ್‌ವರ್ಕ್ ಸಿಗುವುದಿಲ್ಲ. ಬಿಹಾರ, ಛತ್ತೀಸಗಡ, ಕರ್ನಾಟಕ, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಆ್ಯಪ್‌ ಅನ್ನು ಬಳಸಲೇಬೇಕೆಂಬ ಒತ್ತಾಯ ಬಂದುದರ ಫಲವಾಗಿ, ಮೇಲೆ ಹೇಳಿ
ದಂತಹ ಬಹಳಷ್ಟು ಕಾಯಕಬಂಧುಗಳು ಕೆಲಸ ಬಿಡಲೇಬೇಕಾಗಿದೆ. ಮಹಿಳೆಯರಲ್ಲಿದ್ದ ಮುಂದಾಳತ್ವವನ್ನು ತಂತ್ರಜ್ಞಾನವು ಹೊಸಕಿ ಹಾಕಿದ ಪ್ರಸಂಗವಿದು.

ADVERTISEMENT

ಇದನ್ನು ವಿರೋಧಿಸಿ ದೇಶದ ಎಲ್ಲೆಡೆ ಧರಣಿ, ಪ್ರದರ್ಶನಗಳು ನಡೆದದ್ದು ಬಹಳಷ್ಟು ಸಲ ವರದಿಯಾಗಿದ್ದರೂ ‘ಫೋಟೊ ಅಪ್‌ಲೋಡ್‌ ಕಾರ್ಯ ಸರಾಗವಾಗಿ ನಡೆದಿದೆ’ ಎನ್ನುವ ಸರ್ಕಾರದ ನಜರಿಗೆ ಅದು ಬೀಳದಿರುವುದು ಆಶ್ಚರ್ಯ. ಶಹರದ ಮನೆಗಳಲ್ಲಿಯೇ ಒಂದುಕಡೆ ಸಿಕ್ಕರೆ ಇನ್ನೊಂದು ಕಡೆ ನೆಟ್‌ವರ್ಕ್ ಸಿಗದ ಸ್ಥಿತಿಯಲ್ಲಿ, ಕಾಡುಮೇಡುಗಳಲ್ಲಿ ಕೆಲಸ ಮಾಡುವವರಿಗೆ ನೆಟ್‌ವರ್ಕ್ ಸಿಗುವುದೆಂಬುದು ಸುಳ್ಳಿನ ಗೋಪುರವಲ್ಲದೇ ಇನ್ನೇನು? ಫೋಟೊದಲ್ಲಿ ಕಾಣಿಸಿಕೊಂಡಿಲ್ಲ ಎಂಬ ಕಾರಣದಿಂದಾಗಿ ವಾರದಲ್ಲಿ ಮೂರು ಹಾಜರಿಗಳನ್ನು ಕಳೆದುಕೊಂಡಿರುವ ಅದೆಷ್ಟೋ ಉದಾಹರಣೆಗಳು ಇಂಡಿ ತಾಲ್ಲೂಕಿನ ಪಂಚಾಯಿತಿಗಳಲ್ಲಿ ಸಿಗುತ್ತವೆ.

ಕೆಲಸದ ಜಾಗದಲ್ಲಿ ಫೋಟೊ ಅಪ್‌ಲೋಡ್ ಮಾಡುವುದು ಕಷ್ಟವಾಗುತ್ತಿರುವುದನ್ನು ತಿಳಿದು ಸರ್ಕಾರವು ಆಫ್‌ಲೈನ್ ಫೋಟೊಗಳನ್ನು ಅಪ್‌ಲೋಡ್ ಮಾಡುವುದರ ಬಗ್ಗೆಯೂ ಮಾತಾಡಿತು. ಒಂದು ತಗ್ಗನ್ನು ಮುಚ್ಚಲು ಇನ್ನೊಂದು ಗುಂಡಿಯನ್ನು ತೋಡಿದ ಕತೆಯಿದು. ಕೂಲಿ ಪಾವತಿಯ ವಿಷಯದಲ್ಲಿ ಸರ್ಕಾರ ಈ ರೀತಿಯ ಪ್ರಯೋಗಗಳನ್ನು ಮಾಡುವುದು ಸಮಂಜಸವಲ್ಲ. ಕೆಲಸ ಮಾಡಿದವರಿಗೆ ಕೊಡಬೇಕಾದ ಕೂಲಿಯನ್ನು ತಕ್ಷಣವೇ ಪಾವತಿ ಮಾಡುವುದು ಸರ್ಕಾರದ ಜವಾಬ್ದಾರಿ. ಅದನ್ನವರು ಯಾವ ನೆವ ಹೇಳಿಯೂ
ತಪ್ಪಿಸಿಕೊಳ್ಳಲಾಗದು.

2023–24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಉದ್ಯೋಗ ಖಾತರಿಗೆ ಹಿಂದಿನ ವರ್ಷಕ್ಕಿಂತ ಕಡಿಮೆ ಹಣ ಇಟ್ಟಿರುವುದಲ್ಲದೆ ತನ್ನ ಈ ನಡೆಗೆ ಕೆಲವು ಅಂಶಗಳ ಸಮರ್ಥನೆ ಕೊಟ್ಟಿರುವುದನ್ನು ನೋಡಿದರೆ, ನಿಜ ಪರಿಸ್ಥಿತಿಯ ಕಲ್ಪನೆಯೇ ಅದಕ್ಕಿಲ್ಲವೋ ಅಥವಾ ಗ್ರಾಮೀಣ ಉದ್ಯೋಗದ ಬಗ್ಗೆ ಅಷ್ಟು ಉಪೇಕ್ಷೆಯೋ ಅರ್ಥವಾಗುವುದಿಲ್ಲ.

‘2022- 23ರಲ್ಲಿ ಶೇ 99.81ರಷ್ಟು ಬೇಡಿಕೆಗೆ ತಕ್ಕಂತೆ ಕೆಲಸ ಸಿಕ್ಕಿದೆ. ಕೆಲಸ ಕೇಳಿಯೂ ಸಿಕ್ಕಿಲ್ಲದ ಉದಾಹರಣೆ ಇಲ್ಲವೇ ಇಲ್ಲ’ ಎನ್ನುತ್ತದೆ ಸರ್ಕಾರ. ಆದರೆ ಎಂ.ಐ.ಎಸ್. ಅಂದರೆ ‘ಮಾಹಿತಿ ನಿರ್ವಹಣಾ ವ್ಯವಸ್ಥೆ’ಯಡಿ ಕಂಪ್ಯೂಟರಿನಲ್ಲಿ ತೋರಿಸಿದ ಸಂಖ್ಯೆಯೇ ಕೆಲಸಕ್ಕೆ ಇರುವ ಬೇಡಿಕೆಯ ನಿಜವಾದ ಸಂಖ್ಯೆ ಅಲ್ಲ. ಜನರ ಬೇಡಿಕೆಗಳನ್ನು ಅಲ್ಲಲ್ಲಿಯೇ ತಿರಸ್ಕರಿಸಿ ಹಿಂದಕ್ಕೆ ಕಳುಹಿಸುವುದನ್ನು ನಾವು ತಳಮಟ್ಟದಲ್ಲಿ ನೋಡುತ್ತಿದ್ದೇವೆ.

ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಒಂದು ಅಧ್ಯಯನವು ತೋರಿಸಿರುವಂತೆ, ಕೆಲಸ ಬೇಕಾಗಿದ್ದರೂ ತಮ್ಮ ಅರ್ಜಿ ಸ್ವೀಕೃತವಾಗಿಲ್ಲದ ಕಾರಣದಿಂದ ಮನೆಯಲ್ಲೇ ಕುಳಿತಿರುವ ಅದೆಷ್ಟೋ ಗುಂಪುಗಳಿವೆ. ಉದ್ಯೋಗ ಖಾತರಿಯಲ್ಲಿ ಯಾವ ರೀತಿಯಲ್ಲಿ ಉದ್ಯೋಗ ಚೀಟಿಗಳನ್ನು ಪಡೆಯಬಹುದು, ಯಾವ ರೀತಿಯಲ್ಲಿ ಅರ್ಜಿ ಹಾಕಬೇಕು ಎನ್ನುವುದರ ಬಗ್ಗೆಯೆಲ್ಲ ಇನ್ನೂ ಸ್ವಲ್ಪವೂ ಅರಿವಿಲ್ಲದ ಅನೇಕ ಪ್ರದೇಶಗಳು ದೇಶದ ಎಲ್ಲ ಭಾಗಗಳಲ್ಲೂ ಇವೆ. ‘ಇದು ಸಿಗುವ ಕೆಲಸವಲ್ಲ ಬಿಡು’ ಎಂದು ಕೈಚೆಲ್ಲಿ ಬೇರೆಡೆ ಕೆಲಸ ಹುಡುಕಿ ಹೋಗಿರುವಂಥ ಪ್ರಸಂಗಗಳು ಬೇಕಾದಷ್ಟು ಇವೆ. ಸರ್ಕಾರದಿಂದ ಹಣ ಬಿಡುಗಡೆಯೇ ಆಗದ ಕಾರಣ ಪಂಚಾಯಿತಿಗಳು ಕೆಲಸದ ಅರ್ಜಿಗಳನ್ನು ನಿರಾಕರಿಸುವುದು ಎಲ್ಲೆಡೆ ಕಾಣಸಿಗುತ್ತದೆ. ದೆಹಲಿಯಲ್ಲಿ ಕುಳಿತು ಕಂಪ್ಯೂಟರಿನಲ್ಲಿ ಬಂದ ಮಾಹಿತಿಯನ್ನು ಮಾತ್ರ ನೋಡುವ ಅಧಿಕಾರಿ ವರ್ಗಕ್ಕೆ ಹಳ್ಳಿಗಳಲ್ಲಿ ನಡೆದಿರುವುದು ತಿಳಿಯುವ ಬಗೆಯಾದರೂ ಹೇಗೆ?

‘ಈ ಸಲದ ಬಜೆಟ್‌ನಲ್ಲಿ 60,000 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಅದು ಸಾಕು. ಅಕಸ್ಮಾತ್ ಇನ್ನೂ ಹೆಚ್ಚಿನ ಬೇಡಿಕೆ ಬಂದರೆ ಕೊಡೋಣ’ ಎನ್ನುತ್ತಿದೆ ಸರ್ಕಾರ. ಆದರೆ ಪ್ರತಿವರ್ಷವೂ ಹಿಂದಿನ ವರ್ಷದ ಕೂಲಿ ಬಾಕಿ ಇರುವುದನ್ನು ನೋಡುತ್ತಲೇ ಇದ್ದೇವೆ. ಈ ವರ್ಷ
ಫೆಬ್ರುವರಿಯಲ್ಲಿಯೇ 10,000 ಕೋಟಿ ರೂಪಾಯಿ ಪಾವತಿಯಾಗಬೇಕಿರುವುದು ಬಾಕಿಯಿದೆ. ಕೂಲಿ ಹಣ ಪಾವತಿ ತಡವಾಗುವುದು ಮತ್ತು ಆ ಕಾರಣಕ್ಕಾಗಿ ಕೆಲಸ ಕೊಡಲು ನಿರಾಕರಿಸುವ ವಿಷವೃತ್ತವನ್ನು ಭೇದಿಸುವುದಕ್ಕಾಗಿಯೇ ಉದ್ಯೋಗ ಖಾತರಿಗಾಗಿ ಹೆಚ್ಚಿನ ಹಣ ಮೀಸಲಿಡುವುದು ಅತಿ ಅವಶ್ಯ. ಸರ್ಕಾರದ ಮೂರನೆಯ ಸಮರ್ಥನೆ ಏನೆಂದರೆ, ಸಮಯಕ್ಕೆ ಸರಿಯಾಗಿ ಕೂಲಿಯು ‘ಜನರೇಟ್’ ಆಗುತ್ತಿದೆ. ಫೆಬ್ರುವರಿ 7ರ ವರದಿಯ ಪ್ರಕಾರ, ಶೇ 95.97ರಷ್ಟು ಮಂದಿಗೆ 15 ದಿನಗಳೊಳಗಾಗಿ ಕೂಲಿಯನ್ನು ಕೊಡಲಾಗಿದೆ ಎಂಬುದು. ಚೋದ್ಯವೆಂದರೆ ಕೂಲಿಪಾವತಿ ಆಗುತ್ತಿದೆ ಎಂದು ಹೇಳುವ ಬದಲಿಗೆ ‘ಜನರೇಟ್ ಆಗುತ್ತಿದೆ’ ಎನ್ನುತ್ತದೆ ಅದು. ಹಣ ಪಾವತಿಯ ಆದೇಶಗಳು ಜನರೇಟ್ ಆದ ನಂತರವೂ ಹಣಪಾವತಿ ಆಗುತ್ತಿಲ್ಲವೆಂಬುದು ಎಲ್ಲರಿಗೂ ಗೊತ್ತು.

ಯಾವಾಗಾದರೊಮ್ಮೆ ಆಗುವ ಅಪರೂಪದ ಪ್ರಸಂಗ ಇದಲ್ಲ. ಬದಲಿಗೆ, ಕೂಲಿ ಪಾವತಿ ಆದರೆ ಅದೇ ದೊಡ್ಡ ಸುದ್ದಿ. ನಾಲ್ಕು ಬೇರೆಬೇರೆ ರಾಜ್ಯಗಳಲ್ಲಿ ಮಾಡಿದ, ಎರಡು ಸಾವಿರ ಕೂಲಿಕಾರರನ್ನು ಒಳಗೊಂಡ ಸಮೀಕ್ಷೆಯು ಕೋವಿಡ್ ವೇಳೆ ಬರೀ ಶೇ 36ರಷ್ಟು ಕುಟುಂಬಗಳಿಗೆ ಕೂಲಿ ಹಣ ಪಾವತಿಯಾಗಿದ್ದನ್ನು ಎತ್ತಿ ತೋರಿಸುತ್ತದೆ.

ಫೆಬ್ರುವರಿಯಿಂದ ‘ಆಧಾರ್‌’ಗೆ ಅನುಗುಣವಾಗಿ ಮಾತ್ರವೇ ಹಣ ಪಾವತಿಯಾಗುವುದೆಂಬ ಆದೇಶವು ಈಗಾಗಲೇ ಎಲ್ಲ ಪಂಚಾಯಿತಿಗಳಿಗೆ ತಲುಪಿದೆ. ಅಂದರೆ ಕೂಲಿಕಾರರ ಬ್ಯಾಂಕ್ ಖಾತೆ ಮತ್ತು ಅವರ ಜಾಬ್ ಕಾರ್ಡ್ ಎರಡೂ ಆಧಾರ್‌ನ ಜೊತೆ ಜೋಡಣೆಯಾಗಿದ್ದರೆ ಮಾತ್ರ ಕೂಲಿಪಾವತಿ! ಕೂಲಿಕಾರರು ಕೆಲಸ ಬಿಟ್ಟು ಪಂಚಾಯಿತಿ, ಬ್ಯಾಂಕ್ ಎಂದು ಅಲೆದಾಡಬೇಕೀಗ. ಬಜೆಟ್ ಮಂಡಿಸುವಾಗಿನ ಹಣಕಾಸು ಸಚಿವಾಲಯದ ಹೇಳಿಕೆ ಮತ್ತು ಅದರ ಮಾಹಿತಿ ಮೂಲಗಳನ್ನು ಸಚಿವಾಲಯವು ಪುನರ್‌ಪರೀಕ್ಷಿಸುವ ಅಗತ್ಯ ಎದ್ದು ಕಾಣಿಸುತ್ತಿದೆ. ಸುಳ್ಳಿನ ಗೋಪುರ ಬಹುಕಾಲ ನಿಲ್ಲದು. ಆ ಗೋಪುರದೊಂದಿಗೆ ಸರ್ಕಾರದ ಮೇಲಿಟ್ಟ ವಿಶ್ವಾಸ ಮತ್ತು ಕಾಯ್ದೆಯ ಆಶಯ ಸ್ತಂಭವೂ ಕೆಳಗುರುಳಿ ಬೀಳುವ ಸಾಧ್ಯತೆ ಬಹಳಷ್ಟಿರುತ್ತದೆ.

ಗ್ರಾಮೀಣ ಉದ್ಯೋಗ ಖಾತರಿಯ ಡಿಜಿಟಲೀಕರಣ, ಆ್ಯಪ್ ಆಧಾರಿತ ಹಾಜರಿ ಹಾಗೂ ಆಧಾರ್ ಆಧಾರಿತ ಹಣ ಪಾವತಿಯ ವಿರುದ್ಧ ಉದ್ಯೋಗ ಖಾತರಿಯ ರಾಷ್ಟ್ರ ಮಟ್ಟದ ಒಕ್ಕೂಟವು ಅನಿರ್ದಿಷ್ಟ ಅವಧಿಯ ಧರಣಿಯನ್ನು ದೆಹಲಿಯ ಜಂತರ್‌ಮಂತರ್‌ನಲ್ಲಿ ಆರಂಭಿಸಿದೆ. ನೂರು ದಿನಗಳ ಕೆಲಸಕ್ಕೆ ನೂರು ದಿನಗಳ ಸತ್ಯಾಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.