ಕಬ್ಬಿನ ತೋಟಕ್ಕೆ ಕಾಡಾನೆಗಳ ದಾಳಿ, ಆನೆ ತುಳಿತದಿಂದ ಬೆಳೆ ನೆಲಸಮ, ಗಜಪಡೆ ಆಕ್ರೋಶಕ್ಕೆ ನಾಲ್ವರ ಬಲಿ, ಕೊಟ್ಟಿಗೆಗೆ ನುಗ್ಗಿ ಕರುವನ್ನು ಹೊತ್ತೊಯ್ದ ಹುಲಿ, ಶಾಲೆಗೆ ನುಗ್ಗಿದ ಚಿರತೆ... ಹೀಗೆ ಮಾನವ– ಪ್ರಾಣಿ ಸಂಘರ್ಷದ ಪ್ರಕರಣಗಳು ವರ್ಷದುದ್ದಕ್ಕೂ ವರದಿಯಾಗುತ್ತಲೇ ಇರುತ್ತವೆ. ದೇಶದಾದ್ಯಂತ ಎಲ್ಲೆಲ್ಲಿ ವನ್ಯಜೀವಿಗಳ ಆವಾಸವಿದೆಯೋ ಅದರ ಸುತ್ತಲೂ ಇರುವ ಮಾನವ ವಾಸ್ತವ್ಯದ ನೆಲೆಗಳಲ್ಲಿ ಇಂತಹ ಪ್ರಕರಣಗಳು ಸಾಮಾನ್ಯ ಎನಿಸಿಬಿಟ್ಟಿವೆ.
ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಹುಲಿಗಳ ಚಟುವಟಿಕೆ ಜಾಸ್ತಿ ಆಗಿರುವುದರಿಂದ ಜಕ್ನಿಧಾರ್ ತಾಲ್ಲೂಕಿನ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಇತ್ತೀಚೆಗೆ ಅನಿರ್ದಿಷ್ಟ ಅವಧಿಗೆ ರಜೆ ನೀಡಲಾಗಿತ್ತು. ದೇಶದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂಬ ಖುಷಿಯ ಬೆನ್ನಲ್ಲೇ ಹುಲಿ ಮತ್ತು
ಮನುಷ್ಯರ ನಡುವಿನ ಸಂಘರ್ಷಗಳೂ ಹೆಚ್ಚುತ್ತಿರುವುದು ಸಂರಕ್ಷಣೆ ಮತ್ತು ಸಂಘರ್ಷ ನಿಯಂತ್ರಣ ಕ್ರಮಗಳು ಹಿಡಿಯಬೇಕಾದ ಹೊಸ ಹಾದಿಯ ಅನಿವಾರ್ಯವನ್ನು ಎತ್ತಿ ತೋರಿಸುತ್ತಿವೆ.
ಹೆಚ್ಚಿನ ಸಂದರ್ಭಗಳಲ್ಲಿ ಅರಣ್ಯ ಪ್ರದೇಶದಲ್ಲಿ ಆಹಾರ, ನೀರಿನ ಕೊರತೆ ಉಂಟಾದಾಗ ಅವು ಜನಬಾಹುಳ್ಯದ ಪ್ರದೇಶಗಳ ಕಡೆ ಬರುತ್ತವೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ಪಕ್ಷಿಧಾಮ, ಸಂರಕ್ಷಿತ ಅರಣ್ಯ ಪ್ರದೇಶ ಎಂಬುದನ್ನು ಲೆಕ್ಕಿಸದೆ ವನ್ಯಜೀವಿ ವಲಯಗಳ ಹೃದಯ ಭಾಗದಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸಿ ಅಲ್ಲಿನ ನೈಸರ್ಗಿಕ ಸ್ವರೂಪಕ್ಕೆ ಧಕ್ಕೆ ಉಂಟು ಮಾಡಿದ್ದೇವೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಘೇಂಡಾಮೃಗ, ಆನೆ, ಹುಲಿಗಳ ಸುಭದ್ರ ಆವಾಸವೆನಿಸಿದೆ. ದುರದೃಷ್ಟವೆಂಬಂತೆ, ಅರಣ್ಯ ವ್ಯಾಪ್ತಿಯುದ್ದಕ್ಕೂ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 37, ವನ್ಯಪ್ರಾಣಿಗಳ ನೆಮ್ಮದಿಗೆ ಭಂಗ ತರುತ್ತಿದೆ. ನಮ್ಮ ರಾಜ್ಯದ ಬಂಡೀಪುರ ಕಾಡಿನಲ್ಲೂ ಹೆದ್ದಾರಿ ಹಾದು ಹೋಗಿರುವುದರಿಂದ ವನ್ಯಜೀವಿಗಳ ವಾಸ್ತವ್ಯ ಮತ್ತು ಚಲನವಲನಗಳ ಮೇಲೆ ಅನಗತ್ಯ ಒತ್ತಡ ಸೃಷ್ಟಿಯಾಗಿದೆ. ಪರಿಸರಸ್ನೇಹಿಯಲ್ಲದ ಅವೈಜ್ಞಾನಿಕ ಯೋಜನೆಗಳನ್ನು ಸರ್ಕಾರಗಳು ಎಗ್ಗಿಲ್ಲದೆ ಜಾರಿ ಮಾಡುತ್ತಿವೆ.
ಇವರನ್ನು ನಂಬಿ ಕೂತರೆ ಪ್ರಯೋಜನವಿಲ್ಲ ಎಂದು ತಿಳಿದ ಸ್ವತಂತ್ರ ತಜ್ಞರು, ಅರಣ್ಯ ಇಲಾಖೆಯ ಕೆಲವು ನಿಷ್ಠಾವಂತ ಅಧಿಕಾರಿಗಳು ತಂತ್ರಜ್ಞಾನದ ನೆರವಿನಿಂದ ಪ್ರಾಣಿ– ಮಾನವ ಸಂಘರ್ಷಗಳನ್ನು ತಪ್ಪಿಸುವ ಇಲ್ಲವೇ ನಿಯಂತ್ರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಭವಿಷ್ಯದ ತಂತ್ರಜ್ಞಾನ ಎಂದೇ ಬಿಂಬಿತಗೊಳ್ಳುತ್ತಿರುವ ಯಾಂತ್ರಿಕ ಬುದ್ಧಿಮತ್ತೆಯನ್ನು (ಯಾಂಬು) ಈಗ ಮಾನವ– ಪ್ರಾಣಿ ಸಂಘರ್ಷದ ಸಮಸ್ಯೆಗಳನ್ನು ಬಗೆಹರಿಸಲು ಸಹ ಬಳಸ ಲಾಗುತ್ತಿದೆ. ಸಾಫ್ಟ್‌ವೇರ್ ಎಂಜಿನಿಯರುಗಳು, ಡೀಪ್ ಲರ್ನಿಂಗ್ ತಜ್ಞರು ದಿನಕ್ಕೊಂದು ಹೊಸ ಉಪಕರಣವನ್ನು ಸಿದ್ಧಪಡಿಸುತ್ತಿದ್ದಾರೆ. ಅಚ್ಚರಿ ಎಂದರೆ, ಇವರ ಜೊತೆಗೆ ಈಗ ಕೇರಳದ ಹತ್ತನೇ ತರಗತಿಯ ವಿದ್ಯಾರ್ಥಿಗಳೂ ಕೈಜೋಡಿಸಿದ್ದಾರೆ!
ಎರ್ನಾಕುಲಂನ ಭವನ್ಸ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾಗಿರುವ ಜಯಸೂರ್ಯ ಮತ್ತು ಶಿವಾನಿ ಇಬ್ಬರೂ ಸೇರಿ ಮಾಡಿರುವ ಯಾಂಬು ಆಧಾರಿತ ‘ಸ್ಮಾರ್ಟ್ ಅಲರ್ಟ್ ಸಿಸ್ಟಮ್ ಫಾರ್ ಫಾರ್ಮರ್ಸ್’ (ಎಸ್‌ಎಎಸ್‌ಎಫ್) ಎಂಬ ಆವಿಷ್ಕಾರವು ವನ್ಯಪ್ರಾಣಿ ದಾಳಿಗಳಿಂದ ರೈತರ ಬೆಳೆಯನ್ನು ರಕ್ಷಿಸುವಲ್ಲಿ ನೆರವಾಗುತ್ತಿದೆ. ಬೇಸಿಗೆ ರಜೆಯಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಲು ಶುರು ಮಾಡಿದ ಇಬ್ಬರಿಗೂ ಆನೆಗಳು ಮಾಡುವ ದಾಳಿಯಿಂದ ರೈತರ ಬೆಳೆ ನಾಶ, ಪ್ರಾಣಹಾನಿಯ ಬಗ್ಗೆ ತಿಳಿದಿತ್ತು. ರೈತರು ಹೊಲದ ಸುತ್ತಲೂ ಹಾಕಿಸಿದ ವಿದ್ಯುತ್ ಮತ್ತು ಮುಳ್ಳುತಂತಿ ಬೇಲಿಗಳಿಗೆ ಸಿಲುಕಿ ಪ್ರಾಣಿಗಳು ಗಂಭೀರವಾಗಿ ಗಾಯಗೊಳ್ಳುವುದು ಇಲ್ಲವೇ ಸಾವನ್ನಪ್ಪುವುದನ್ನು ಕಂಡು ಬಹಳ ನೊಂದಿದ್ದರು. ಅದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕೆಂದು ಶಿಕ್ಷಕರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನ
ದಿಂದ ಯಾಂಬು ಆಧಾರಿತ ತಂತ್ರಜ್ಞಾನವನ್ನು ರೂಪಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
ಇವರು ರೂಪಿಸಿರುವ ಯಾಂಬು ಆಧಾರಿತ ಕ್ಯಾಮೆರಾಗಳು, ವನ್ಯಪ್ರಾಣಿಗಳು ಜಮೀನಿನ ಹತ್ತಿರ ಬಂದ ತಕ್ಷಣ ರೈತರ ಮೊಬೈಲ್ ಫೋನಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿಕೊಡುತ್ತವೆ. ಮತ್ತೆ ಅದೇ ಸಾಧನದಿಂದ ಹೊಮ್ಮುವ ಶ್ರವಣಾತೀತ (ಅಲ್ಟ್ರಾಸೋನಿಕ್) ತರಂಗಗಳು ಪ್ರಾಣಿಗಳಿಗೆ ಅಲ್ಪಮಟ್ಟದ ಕಿರಿಕಿರಿ ಉಂಟು ಮಾಡುತ್ತವೆ. ಆಗ ಪ್ರಾಣಿಗಳು ಕಾಡಿಗೆ ಹಿಂದಿರುಗುತ್ತವೆ. ಕೇರಳದ ಅರಣ್ಯ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಈ ಆವಿಷ್ಕಾರವನ್ನು ಬಳಸಲು ಉತ್ಸುಕರಾಗಿದ್ದಾರೆ.
ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ವರ್ಷಕ್ಕೆ ಏಳರಿಂದ ಹತ್ತು ಸಾವಿರ ಮಾನವ- ವನ್ಯಜೀವಿ ಸಂಘರ್ಷಗಳು ಜರುಗುತ್ತವೆ. ಹೆಚ್ಚಿನವು ಆನೆ ದಾಳಿಗಳಿಗೆ ಸಂಬಂಧಿಸಿರುತ್ತವೆ. 2022- 23ರಲ್ಲಿ 8,873 ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ 4,193 ಪ್ರಕರಣಗಳು ಆನೆ ದಾಳಿಗೆ ಸಂಬಂಧಿಸಿದ್ದವು. 193 ಹುಲಿ, 1,524 ಕಾಡುಹಂದಿ, 244 ಚಿರತೆ ಮತ್ತು 32 ಕಾಡುಕೋಣಗಳ ದಾಳಿ ಪ್ರಕರಣಗಳಿದ್ದವು. ಒಟ್ಟು 93 ಜನ ಪ್ರಾಣ ಕಳೆದುಕೊಂಡಿದ್ದರು. ಅವರಲ್ಲಿ 27 ಜನರ ಸಾವಿಗೆ ಆನೆ ದಾಳಿ ಕಾರಣವಾಗಿತ್ತು.
ಹೋದ ವರ್ಷ ಕೇರಳದಲ್ಲಿ ಆನೆ ದಾಳಿಗಳಿಂದ 17 ಮಂದಿ ಪ್ರಾಣ ಕಳೆದುಕೊಂಡಿದ್ದರು. ಜಾರ್ಖಂಡ್ ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ ನೂರು ಜನ ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಹಿಂದಿನ ಐದು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ವನ್ಯಪ್ರಾಣಿ ದಾಳಿಯಿಂದ 148 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಅಸ್ಸಾಂ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ವರ್ಷವೊಂದಕ್ಕೆ ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾಗುವವರ ಸಂಖ್ಯೆ 450ರಿಂದ 500ರಷ್ಟು ಇದೆ.
ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಕೂಲ ಕಲ್ಪಿಸಲು ನೈಸರ್ಗಿಕ ಕಾಡುಗಳು ಒತ್ತುವರಿಯಾಗುತ್ತಿವೆ. ಪ್ರಾಣಿಗಳು ತಮ್ಮ ನೆಲೆಯಿಂದ ಮನುಷ್ಯ ವಾಸದ ಪ್ರದೇಶಗಳಿಗೆ ಬರುತ್ತಿವೆ. ಅವುಗಳನ್ನು ದೂರ ಓಡಿಸಲು ಜನ ತಮಟೆ ಬಾರಿಸುವುದು, ಪಟಾಕಿ ಸಿಡಿಸುವುದು, ಜೋರಾಗಿ ಕೂಗುವುದು, ದೊಣ್ಣೆಗಳಿಂದ ಬಡಿಯುವುದು, ಬೆಂಕಿ ಹಚ್ಚುವಂತಹ ಕ್ರಮಗಳಿಗೆ ಮುಂದಾಗುತ್ತಾರೆ. ಇದರಿಂದ ಕೆಲವೊಮ್ಮೆ ಪ್ರಾಣಿಗಳು ಹಿಮ್ಮೆಟ್ಟಿದರೂ ಅನೇಕ ಸಲ ಮನುಷ್ಯರ ಮೇಲೆ ದಾಳಿ ಮಾಡಿದ ಪ್ರಕರಣಗಳು ನಡೆದಿವೆ. ಮೊದಮೊದಲು ಪಟಾಕಿ ಸದ್ದಿಗೆ, ಬೆಂಕಿಗೆ ಹೆದರುತ್ತಿದ್ದ ಆನೆಗಳು ಕ್ರಮೇಣ ಅದಕ್ಕೆ ಹೊಂದಿ ಕೊಂಡುಬಿಟ್ಟವು. ಆಕ್ರೋಶಗೊಂಡ ರೈತರು ತೋಟ, ಹೊಲಗಳಿಗೆ ಹಾಕಿಸಿದ ವಿದ್ಯುತ್ ಬೇಲಿ, ಮುಳ್ಳುತಂತಿ ಬೇಲಿಗೆ ಸಿಲುಕಿ ಸಾವನ್ನಪ್ಪಿದವು ಮತ್ತು ಗಾಯಗೊಂಡವು. ಹೊಲಗಳಿಗೆ ವಿದ್ಯುತ್ ಬೇಲಿ ಹಾಕಿಸಿದ ರೈತರ ಮೇಲೆ ಕೇಸುಗಳು ಬಿದ್ದವು. ವನ್ಯಪ್ರಾಣಿ– ಮಾನವ ಸಂಘರ್ಷ ಹೊಸ ರೂಪವನ್ನೇ ಪಡೆಯಿತು.
ಆಗ ನಮ್ಮ ಕೈ ಹಿಡಿದದ್ದು ನೂತನ ತಂತ್ರಜ್ಞಾನ ಮತ್ತು ಅದರ ಸಾಧನಗಳು. ಉತ್ತರಾಖಂಡದ ರೂರ್ಕಿಯ ‘ರೋಟರ್ ಪ್ರೆಸಿಷನ್’ ಸಮೂಹವು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಯಾಂಬು ಆಧಾರಿತ ಡ್ರೋನ್ ಅನ್ನು ನಿರ್ಮಿಸಿದ್ದು, ಅದು ಕೆನ್ ನದಿಯ ಮೊಸಳೆಗಳ ಮೇಲೆ ನಿರಂತರ ನಿಗಾ ಇಡುತ್ತದೆ. ಬೆಂಗಳೂರಿನ ಕಂಪನಿಯೊಂದು ನಿರ್ಮಿಸಿರುವ ‘ಭಗೀರ’ ಎಂಬ ಮೊಬೈಲ್ ಆ್ಯಪ್ ಅರಣ್ಯಗಳಿಗೆ ಜಂಗಲ್ ಸಫಾರಿಗೆಂದು ಬರುವ ವಾಹನಗಳ ವೇಗ ಪತ್ತೆ ಮಾಡುತ್ತದೆ. ‘ಗರುಡ’ ಎಂಬ ಇನ್ನೊಂದು ಆ್ಯಪ್ (ಕಿರುತಂತ್ರಾಂಶ) ಯಾಂಬು ಮತ್ತು ಐಓಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಆಧರಿಸಿದ್ದು, ಅರಣ್ಯದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆ ತಕ್ಷಣದ ಮಾಹಿತಿ– ಚಿತ್ರಸಹಿತ ಸಂದೇಶವನ್ನು ಮೊಬೈಲ್ ಫೋನ್ ಮತ್ತು ಸಿ.ಸಿ. ಟಿ.ವಿ. ಕ್ಯಾಮೆರಾಗಳಿಗೆ ಕಳಿಸುತ್ತದೆ. ಇದನ್ನು ಗಮನಿಸುವ ಅರಣ್ಯ ಪಾಲಕರು ಸರಿಯಾದ ಸಮಯಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಮಹಾರಾಷ್ಟ್ರದ ಚಂದ್ರಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಅರಣ್ಯದಂಚಿನ ಹಳ್ಳಿಗಳ ಬಳಿ ಹುಲಿ ಬಂದರೆ ಅರಣ್ಯದ ಸರಹದ್ದಿನಲ್ಲಿ ನಿಯೋಜಿಸಿರುವ ಕ್ಯಾಮೆರಾಗಳು ಯಾಂಬು ನೆರವಿನಿಂದ ಸುತ್ತಲಿನ 13 ಹಳ್ಳಿಗಳ ಜನರ ಮೊಬೈಲ್ ಫೋನುಗಳಿಗೆ ಸಂದೇಶ ಕಳಿಸುತ್ತವೆ.
ವನ್ಯಜೀವಿ ಮತ್ತು ಮಾನವರು ಸಹಬಾಳ್ವೆಯ ಸೂತ್ರ ಅನುಸರಿಸಿದಾಗ ಮಾತ್ರ ಸಂಘರ್ಷಗಳು ಕಡಿಮೆ ಆಗುತ್ತವೆ. ಒಂದೆಡೆ, ಜನರ ಆಸ್ತಿ ಮತ್ತು ಪ್ರಾಣಹರಣ, ಇನ್ನೊಂದೆಡೆ, ವನ್ಯಜೀವಿ ಸಂತತಿಯ ಶಾಶ್ವತ ನಾಶ, ಇವೆರಡನ್ನೂ ಕಡೆಗಣಿಸಿರುವ ಅಭಿವೃದ್ಧಿ ಕೆಲಸಗಳು ಸುಸ್ಥಿರ ಅಭಿವೃದ್ಧಿಯ ತತ್ವಗಳನ್ನೇ ಪ್ರಶ್ನಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.