‘ಒಂದು ಆರೋಗ್ಯ’ (ಮಾನವ ಸೇರಿದಂತೆ ಜೀವಸಂಕುಲ ಹಾಗೂ ಪರಿಸರದ ಆರೋಗ್ಯ ಕಾಪಾಡುವಿಕೆ) ಎಂಬುದು ಸಕಲ ಜೀವಿಗಳ ಆರೋಗ್ಯದ ಕಡೆಗೂ ಲಕ್ಷ್ಯ ಹರಿಸುವಂತಹ ವಿಶಾಲ ದೃಷ್ಟಿಕೋನವನ್ನು ಹೊಂದಿದ ಒಂದು ಪರಿಕಲ್ಪನೆ. ಮಾನವನ ಆರೋಗ್ಯವು ಪ್ರಾಣಿಗಳ ಆರೋಗ್ಯ ಹಾಗೂ ಆರೋಗ್ಯಕರ ಪರಿಸರದ ಜತೆಯಲ್ಲಿ ಹೇಗೆ ನಿಕಟ ಸಂಪರ್ಕವನ್ನು ಹೊಂದಿದೆ ಎಂಬುದನ್ನೂ ಇದು ಪರಿಶೋಧಿಸುತ್ತದೆ. ಕೋವಿಡ್–19 ಕಾಯಿಲೆಯು ಹೇಗೆಲ್ಲ ಜಗತ್ತನ್ನು ಕಾಡಿದೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಇದನ್ನು ಪ್ರಾಣಿಜನ್ಯ ಕಾಯಿಲೆ ಎಂದು ಗುರುತಿಸಲಾಗಿದೆ. ಪ್ರಾಣಿಜನ್ಯ ಕಾಯಿಲೆಯೆಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವಂತಹ ಕಾಯಿಲೆ. ಹಂದಿ ಜ್ವರ, ಹಕ್ಕಿ ಜ್ವರ ಮತ್ತು ವೆಸ್ಟ್ ನೇಲ್ ಸೋಂಕಿನಿಂದ ಬರುವ (ಸೊಳ್ಳೆಗಳಿಂದ ಹರಡುವ ಜ್ವರ) ಕಾಯಿಲೆಯ ಬಿಸಿಯನ್ನು ನಾವು ಇತ್ತೀಚೆಗಷ್ಟೆ ಅನುಭವಿಸಿದ್ದೇವೆ. ರೇಬಿಸ್ ಕಾಯಿಲೆಯಂತೂ ಬಹುಕಾಲದಿಂದ ನಮ್ಮನ್ನು ಕಾಡುತ್ತಿದೆ.
ಈಗ, ಮಂಕಿಪಾಕ್ಸ್ ಎಂಬ ಇನ್ನೊಂದು ಪ್ರಾಣಿಜನ್ಯ ಕಾಯಿಲೆಯ ಭಯ ನಮ್ಮನ್ನು ಆವರಿಸಿದೆ. ಈ ಕಾಯಿಲೆಯು ಜಗತ್ತಿನ 75 ದೇಶಗಳಲ್ಲಿ ಹರಡಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಜುಲೈ 23ರಂದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು (ಪಿಎಚ್‌ಇಐಸಿ) ಘೋಷಿಸಿದೆ. ಭಾರತದಲ್ಲಿ ಇದುವರೆಗೆ ‘ಮಂಕಿಪಾಕ್ಸ್’ನ ಎಂಟುಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯು ಆತುರದ ನಿರ್ಧಾರ ಎಂದು ತೋರಬಹುದಾದರೂ, ಇತ್ತೀಚಿನ ಕೋವಿಡ್–19ರ ಅನುಭವದ ಹಿನ್ನೆಲೆಯಲ್ಲಿ ಈ ಕ್ರಮದ ಹಿಂದೆ ಒಂದು ತರ್ಕ ಇದೆ. ಸೋಂಕು ಹರಡುವುದನ್ನು ತಡೆಗಟ್ಟಲು ಜಾಗೃತಿ ಮೂಡಿಸುವುದು, ಕಣ್ಗಾವಲು ಇಡುವುದು ಮತ್ತು ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವುದು ಮತ್ತು ಈ ಪ್ರಕ್ರಿಯೆಗಳ ಮೂಲಕ ಜಗತ್ತಿನ ರಾಷ್ಟ್ರಗಳು ಸಮಗ್ರವಾಗಿ ಸನ್ನದ್ಧಗೊಳ್ಳುವಂತೆ ಮಾಡುವುದು ಅದರ ಮುಖ್ಯ ಉದ್ದೇಶ. ಭಾರತ ಸರ್ಕಾರವೂ ಮಂಕಿಪಾಕ್ಸ್ ಕಾಯಿಲೆ ನಿರ್ವಹಣೆಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
ಇಷ್ಟಕ್ಕೂ ಮಂಕಿಪಾಕ್ಸ್ ಎಂದರೇನು? ನಮ್ಮಲ್ಲಿ ಬಹುತೇಕರಿಗೆ ಇದು ಹೊಸ ಪದವಾಗಿದೆ. ನಾವು ಈಗಾಗಲೇ ಸ್ಮಾಲ್‌ಪಾಕ್ಸ್ (ಸಿಡುಬು) ಮತ್ತು ಚಿಕನ್‌ಪಾಕ್ಸ್ ಹೆಸರುಗಳನ್ನು ಕೇಳಿದ್ದೇವೆ ಮತ್ತು ಆ ಕಾಯಿಲೆಗಳ ಸ್ವರೂಪ ಕೂಡ ತಕ್ಕಮಟ್ಟಿಗೆ ನಮಗೆ ಗೊತ್ತು. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಈ ಕಾಯಿಲೆ 2–4 ವಾರಗಳವರೆಗೆ ಕಾಡುತ್ತದೆ ಮತ್ತು ಕಾಯಿಲೆಪೀಡಿತರಲ್ಲಿ ಸಾವಿನ ಪ್ರಮಾಣ ಶೇ 3ರಿಂದ ಶೇ 6ರಷ್ಟಿದೆ. ಸಿಡುಬಿನ ಹೋಲಿಕೆ ಇದ್ದರೂ ಇದರ ತೀವ್ರತೆ ಅಷ್ಟಿಲ್ಲ ಮತ್ತು ಮರಣದ ಅಪಾಯ ಕೂಡ ಕಡಿಮೆ. ಮಂಕಿಪಾಕ್ಸ್ ಪೀಡಿತರಲ್ಲೂ ಸಿಡುಬುಪೀಡಿತರಿಗೆ ಆಗುವಂತೆಯೇ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಊತ ಕಾಣಿಸಿಕೊಂಡು ಅದರಲ್ಲಿ ಕೀವು ತುಂಬಿಕೊಳ್ಳುತ್ತದೆ. ಜ್ವರ, ಚಳಿ, ತಲೆನೋವು, ಸ್ನಾಯು ಸೆಳೆತ, ಬಳಲಿಕೆ ಈ ಕಾಯಿಲೆಯ ಇತರ ಸಾಮಾನ್ಯ ಲಕ್ಷಣಗಳು.
ಚರ್ಮದ ಮೇಲಿನ ಗಾಯದ ಸಂಪರ್ಕ ಇಲ್ಲವೆ ಸೋಂಕುಪೀಡಿತ ವ್ಯಕ್ತಿ ಬಳಸಿದ ವಸ್ತುಗಳ ಸಂಪರ್ಕದಿಂದ ಈ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದುವರೆಗಿನ ಪ್ರಕರಣಗಳ ಪ್ರಸರಣಕ್ಕೆ ಅತ್ಯಂತ ನಿಕಟ ಸಂಪರ್ಕವೇ ಕಾರಣ ಎಂದು ಗೊತ್ತಾಗಿದೆ. ಸಾಮಾನ್ಯವಾಗಿ, ಸೋಂಕಿನ ಸಂಪರ್ಕಕ್ಕೆ ಬಂದು 5–21 ದಿನಗಳಲ್ಲಿ ಕಾಯಿಲೆಯ ಲಕ್ಷಣಗಳು ಗೋಚರಿಸಲು ಆರಂಭಿಸುತ್ತವೆ. ಚರ್ಮದ ಮೇಲೆ ಕೆಂಪು ಗುಳ್ಳೆಗಳು ಏಳುವುದು, ಬಾಯಲ್ಲಿ ಹುಣ್ಣು ಆಗುವುದು, ಕಣ್ಣುಗಳ ಸುತ್ತ ಊತ ಕಾಣಿಸಿ ಕೊಳ್ಳುವುದು– ಇವು ಮುಖ್ಯ ಲಕ್ಷಣಗಳು. ಚರ್ಮದ ಮೇಲಿನ ಗುಳ್ಳೆಗಳು ಊದಿಕೊಂಡು, ಕೀವು ತುಂಬಿ ಕೊಳ್ಳುವುದರಿಂದ ನೋವು ಉಲ್ಬಣಗೊಳ್ಳುತ್ತದೆ.
ಭಾರತ ಸರ್ಕಾರದ ಮಾರ್ಗಸೂಚಿ ಪ್ರಕಾರ, ಸೋಂಕಿನ ಸಂಪರ್ಕಕ್ಕೆ ಬಂದ ವ್ಯಕ್ತಿಗಳು 21 ದಿನಗಳ ವರೆಗೆ ಇತರರ ಸಂಪರ್ಕಕ್ಕೆ ಬಾರದಂತೆ ಬೇರೆಯಾಗಿ ಉಳಿಯಬೇಕು. ಮಾಸ್ಕ್ ಧರಿಸಬೇಕು ಮತ್ತು ಕೈಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಚರ್ಮದ ಮೇಲಿನ ಗುಳ್ಳೆಗಳು ಒಣಗುವವರೆಗೆ ಅವುಗಳ ಮೇಲೆ ಯಾವಾಗಲೂ ಹೊದಿಕೆ ಹಾಕಿರಬೇಕು. ಸಿಡುಬು ನಿರ್ಮೂಲನೆಗೆ ಬಳಸಲಾಗುತ್ತಿದ್ದ ಲಸಿಕೆಗಳೇ ಮಂಕಿ ಪಾಕ್ಸ್ ಕಾಯಿಲೆಗೂ ಪರಿಣಾಮಕಾರಿ ಮದ್ದು ಎಂದು ನಿರೂಪಿತವಾಗಿದೆ. ಆದರೆ, ಈ ಲಸಿಕೆಗಳು ಅಗತ್ಯ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ.
ಕೋವಿಡ್–19 ಇನ್ನೂ ಕಾಡುತ್ತಲೇ ಇರುವಾಗ ಹೊಸದೊಂದು ಕಾಯಿಲೆ ಬೇರೆ ದಾಂಗುಡಿ ಇಟ್ಟಿರುವು ದರಿಂದ ಜನರಲ್ಲಿ ಆತಂಕ ಮೂಡಿರುವುದು ಸಹಜ. ಆಫ್ರಿಕಾದಿಂದ ಹೊರಗೆ, ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ಮಂಗಗಳು ಹೆಚ್ಚಾಗಿದ್ದ ಪ್ರದೇಶದಲ್ಲಿ (1958) ಒಂದು ಬಾರಿ ಮಾತ್ರ ಈ ಕಾಯಿಲೆ ಕಾಣಿಸಿ ಕೊಂಡಿತ್ತು. ನಂತರದ ದಿನಗಳಲ್ಲಿ ಜಗತ್ತು ಈ ಕಾಯಿಲೆ ಯನ್ನು ಬಹುತೇಕ ಮರೆತೇಬಿಟ್ಟಿತ್ತು. ಆಫ್ರಿಕಾದ ಕೇಂದ್ರ ಹಾಗೂ ಪಶ್ಚಿಮ ಭಾಗದ ಮಳೆಕಾಡುಗಳ ಸುತ್ತಲಿನ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಕಾಯಿಲೆಯ ಪ್ರಕರಣಗಳ ಸಂಖ್ಯೆ 1986ರಿಂದ ಈಚೆಗೆ 20 ಪಟ್ಟು ವೃದ್ಧಿಯಾಗಿದೆ. ಹೀಗಾಗಿ, ಸದ್ಯ ಹರಡುತ್ತಿರುವ ಸೋಂಕು ಕಳವಳ ಉಂಟು ಮಾಡಿದೆ. ಕಾಯಿಲೆ ಈಗ ಕ್ಷಿಪ್ರವಾಗಿ ಹರಡುತ್ತಿರುವುದು ನಿಜವಾದರೂ ಅದರ ಅಸ್ತಿತ್ವ ಸಾವಿರಾರು ವರ್ಷಗಳಿಂದಲೂ ಇದೆ. ಈ ಕಾಯಿಲೆಯ ಕುರಿತು ಹಲವು ತಪ್ಪು ಕಲ್ಪನೆಗಳೂ ಇವೆ. ಹಾಗೆ ನೋಡಿದರೆ, ಈ ಕಾಯಿಲೆಗೂ ಹೆಸರಿಗೂ ಸಂಬಂಧವಿಲ್ಲ. ಏಕೆಂದರೆ, ಇದೇನು ಮಂಗಗಳಿಂದ ಬರುವ ಕಾಯಿಲೆ ಅಲ್ಲ. ಈ ಕಾಯಿಲೆಗೆ ದಂಶಕಗಳೇ ಕಾರಣ ಎಂದು ನಂಬಲಾಗಿದ್ದು, ಮಂಗಗಳು ಮತ್ತು ಮಾನವರು ಬಾಧಿತರು. ಅಲ್ಲದೆ, ಮೊದಲು ಆಫ್ರಿಕಾದಲ್ಲಿ ಕಾಣಿಸಿಕೊಂಡ ಕಾಯಿಲೆ ಕೂಡ ಇದಲ್ಲ. ಸಮರ್ಪಕ ಪ್ರಮಾಣದ ಲಸಿಕೆ ಪೂರೈಕೆಯಿಲ್ಲದೆ ಆ ಭಾಗದಲ್ಲಿ ಈ ಕಾಯಿಲೆ ಇನ್ನೂ ಉಳಿದುಕೊಂಡಿದೆ ಅಷ್ಟೆ. ಈಗಲೂ ಸಿಡುಬು ತಡೆಗಟ್ಟುವ 3.1 ಕೋಟಿ ಲಸಿಕೆಗಳ ದಾಸ್ತಾನಿದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಆದರೆ, ಆ ಲಸಿಕೆಗಳನ್ನು ಆರ್ಥಿಕವಾಗಿ ಬಲಾಢ್ಯವಾಗಿರುವ ಪಾಶ್ಚಿಮಾತ್ಯ ದೇಶಗಳು ಖರೀದಿಸುತ್ತವೆಯೇ ಹೊರತು ಅಲ್ಲಿಗಿಂತ ಮೂರು ಪಟ್ಟು ಹೆಚ್ಚು ಪ್ರಕರಣಗಳು ವರದಿಯಾದ ಆಫ್ರಿಕಾಕ್ಕೆ ಸಿಗುತ್ತಿಲ್ಲ.
ಮಂಕಿಪಾಕ್ಸ್ ಸೋಂಕು ಹರಡುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದು, ಪರಿಸರದ ಅವನತಿ ಹೆಚ್ಚುತ್ತಿರುವುದು ಮತ್ತು ಪ್ರಾಣಿಗಳಲ್ಲಿ ಈ ಸೋಂಕು ಇರುವ ಕಾಡುಗಳ ಸುತ್ತ ಜನವಸತಿ ಪ್ರದೇಶಗಳು ತಲೆ ಎತ್ತುತ್ತಿರುವುದು ಇದಕ್ಕೆ ಕಾರಣ. ವನ್ಯಜೀವಿಗಳ ಆವಾಸಸ್ಥಾನ ನಾಶ ಗೊಳಿಸುವ, ಕ್ಷಿಪ್ರವಾಗಿ ನಗರೀಕರಣಗೊಳಿಸುವ ಈ ಪ್ರವೃತ್ತಿ ಹೀಗೇ ಮುಂದುವರಿದರೆ ಜನವಸತಿ ಪ್ರದೇಶಗಳ ಜತೆ ಕಾಡುಪ್ರಾಣಿಗಳ ಸಂಪರ್ಕ ಹೆಚ್ಚಿ, ಪ್ರಾಣಿಜನ್ಯ ಕಾಯಿಲೆಗಳು ವೇಗವಾಗಿ ಹರಡುವ ಭೀತಿ ಇದೆ. ಪರಿಸರ ವ್ಯವಸ್ಥೆ ಹೀಗೆ ಛಿದ್ರವಾದಾಗ ಸೋಂಕುಗಳು ತಮ್ಮ ನೈಸರ್ಗಿಕ ಆತಿಥೇಯರಿಂದ ಹೊರಹೋಗುವುದು ಸಹಜವೇ. ಹೊಸ ಆತಿಥೇಯರ ಹುಡುಕಾಟದಲ್ಲಿರುವ ಅವುಗಳಿಗೆ ಮಾನವರು ಸುಲಭವಾಗಿ ಸಿಗುತ್ತಾರೆ. ಅದೇ ರೀತಿ, ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ ಚಟುವಟಿಕೆಗಳು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದ್ದು, ಇದರಿಂದ ಸೋಂಕುಗಳು ಕ್ಷಿಪ್ರ ಗತಿಯಲ್ಲಿ ಬೆಳೆಯಲು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ, ಹಿಂದೆ ಕೇಳಿರದಿದ್ದ ಕಾಯಿಲೆಗಳು ಮಾನವನನ್ನು ಕಾಡುವ ಭೀತಿ ಇನ್ನೂ ಹೆಚ್ಚಾಗುತ್ತಿದೆ. ಸ್ಥಳೀಯ ಇಲ್ಲವೆ ಪ್ರಾದೇಶಿಕವಾಗಿ ಕಾಡು ತ್ತಿದ್ದ ಸೋಂಕುಗಳು ಪ್ರವಾಸ ಮತ್ತು ವ್ಯಾಪಾರದ ತೀವ್ರ ವೃದ್ಧಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಹರಡುವುದು ಕಷ್ಟವೇನಲ್ಲ.
ಒಂದು ಆರೋಗ್ಯದ ಪರಿಕಲ್ಪನೆಯು ಎಲ್ಲ ತಜ್ಞರನ್ನು ಒಂದೆಡೆಗೆ ತರುವಂಥದ್ದು. ಮನುಷ್ಯರ ವೈದ್ಯರು, ನರ್ಸ್‌ಗಳು, ಪ್ರಾಣಿಗಳ ವೈದ್ಯರು, ಕೃಷಿ ಕಾರ್ಯಕರ್ತರು, ಪರಿಸರವಾದಿಗಳು, ವನ್ಯಜೀವಿತಜ್ಞರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, ಆರೋಗ್ಯದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನ ಇದಾಗಿದೆ. ಇಂತಹ ಪ್ರಯತ್ನಗಳಿಗೆ ಜಾಗತಿಕ ಮಟ್ಟದಲ್ಲಿ ಬೆಂಬಲ ಸಿಕ್ಕರೆ ಪ್ರಾಣಿ ಜನ್ಯ ಕಾಯಿಲೆಗಳ ಹರಡುವಿಕೆ ತಡೆಗಟ್ಟಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.