ಗ್ರಾಮೀಣ ಮಕ್ಕಳ ಆರೈಕೆ ಕೇಂದ್ರಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ, ಭಾರತದಲ್ಲಿ ಹುಟ್ಟಿನಿಂದ ಐದು ವರ್ಷದವರೆಗಿನ 43 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಧಿಕ ತೂಕ ಇರುವುದನ್ನು ಗುರುತಿಸಲಾಗಿದೆ. ದೇಶದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಸಮೀಕ್ಷೆಗೆ ಒಳಗಾದ ಮಕ್ಕಳ ಪೈಕಿ ಶೇಕಡ 6ರಷ್ಟು ಮಕ್ಕಳು ಬೊಜ್ಜು ಹೊಂದಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ. ಇದರೊಂದಿಗೆ ತೀವ್ರ ಮತ್ತು ಮಧ್ಯಮ ಪ್ರಮಾಣದ ಅಪೌಷ್ಟಿಕತೆ ಇರುವ ಮಕ್ಕಳ ಪ್ರಮಾಣವೂ ಇಷ್ಟೇ ಇದೆ.
2035ರ ವೇಳೆಗೆ ಬಾಲ್ಯದ ಬೊಜ್ಜು ವಾರ್ಷಿಕವಾಗಿ ಶೇಕಡ 9ರಷ್ಟು ಏರಿಕೆಯಾಗಲಿದೆ ಎನ್ನುವ ವಿಷಯ ನಿಜಕ್ಕೂ ಆತಂಕವನ್ನು ಮೂಡಿಸುತ್ತದೆ. ನಗರ ಪ್ರದೇಶದ ಉಳ್ಳವರ ಮಕ್ಕಳಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಕಾಣಿಸುತ್ತಿದ್ದ ಈ ಬೊಜ್ಜು ಇದೀಗ ನಗರ-ಹಳ್ಳಿ, ಶ್ರೀಮಂತರು-ಬಡವರು, ಮಕ್ಕಳು-ವಯಸ್ಕರು ಎನ್ನುವ ಭೇದವಿಲ್ಲದೆ ಜಗತ್ತಿನೆಲ್ಲೆಡೆ ಕಾಡುತ್ತಿರುವ ಅತಿದೊಡ್ಡ ಆರೋಗ್ಯ ಸಮಸ್ಯೆ. ಈಗಂತೂ ಐದು ವರ್ಷದ ಕೆಳಗಿನ ಮಕ್ಕಳಲ್ಲಿ ಬೊಜ್ಜಿನ ಏರಿಕೆ ತೀವ್ರಗತಿಯಲ್ಲಿದೆ.
ಮಕ್ಕಳು ಗುಂಡುಗುಂಡಾಗಿದ್ದಷ್ಟೂ ಚಂದ ಮತ್ತು ಆರೋಗ್ಯಕರ ಎನ್ನುವ ತಪ್ಪು ನಂಬಿಕೆ ನಮ್ಮದು. ಎರಡು ವರ್ಷದ ಒಳಗಿನ ಮಕ್ಕಳಿಗೆ ಹಾಲುಮೈ ಇರುವುದು ಸಹಜವಾದರೂ ನಂತರ ಬೊಜ್ಜು ಇದ್ದಲ್ಲಿ ಆರೋಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳಾಗಬಹುದು. ಆಸ್ತಮಾ, ಮಧುಮೇಹ, ಮೂಳೆ ಮತ್ತು ಸಂಧಿ ನೋವು, ಉಸಿರಾಟದಲ್ಲಿ ವ್ಯತ್ಯಾಸ, ಚರ್ಮದ ತೊಂದರೆಗಳು, ಪಾರ್ಶ್ವವಾಯು ಹೀಗೆ ನೂರೆಂಟು ಬಾಧೆಗಳ ಜತೆ ಮಕ್ಕಳಲ್ಲಿ ಬೆಳವಣಿಗೆಯ ಹಂತದಲ್ಲೂ ವ್ಯತ್ಯಾಸವನ್ನು ಕಾಣಬಹುದು. ಬೊಜ್ಜಿರುವ ಮಕ್ಕಳು ಇತರರಿಂದ ಅಪಹಾಸ್ಯಕ್ಕೆ ಒಳಗಾಗಿ ಕೀಳರಿಮೆ ಮತ್ತು ಖಿನ್ನತೆಯಿಂದ ಬಳಲಬಹುದು.
ಬೊಜ್ಜಿಗೆ ಅನೇಕ ಕಾರಣಗಳಿದ್ದರೂ ದೋಷಪೂರಿತ ಆಹಾರ ಪದ್ಧತಿ, ಒತ್ತಡದ ಜೀವನಶೈಲಿ ಮತ್ತು ದೈಹಿಕ ಶ್ರಮವಿಲ್ಲದ ಆರಾಮದಾಯಕ ಜೀವನ ಮುಖ್ಯವಾದವು. ದೇಹದಲ್ಲಿ ಬೊಜ್ಜು ಹೆಚ್ಚುತ್ತಿದೆ, ಆದರೆ ಬೇಕಾದ ಪೌಷ್ಟಿಕಾಂಶ ಸಿಗುತ್ತಿದೆಯೇ? ಇಲ್ಲ! ಏಕೆಂದರೆ ಪೌಷ್ಟಿಕತೆ ಇರುವ ಹಣ್ಣು-ತರಕಾರಿ, ಬೇಳೆ-ಕಾಳುಗಳ ಬೆಲೆ ಗಗನಕ್ಕೇರಿದೆ. ಮನೆಮಟ್ಟಿಗೆ ತರಕಾರಿ ಪೂರೈಸುತ್ತಿದ್ದ ಹಿತ್ತಲು, ಕೈತೋಟಗಳು ಹಳ್ಳಿಗಳಲ್ಲೂ ಮಾಯವಾಗಿ ವಾಣಿಜ್ಯ ಬೆಳೆಗಳು ಆಕ್ರಮಿಸಿವೆ. ಕೊಳ್ಳಲು ದುಬಾರಿ, ಅಡುಗೆ ಮಾಡಲು ಸಮಯವಿಲ್ಲ. ಹೀಗಿರುವಾಗ ಮಕ್ಕಳ ಹೊಟ್ಟೆ ತುಂಬಿಸಲು ನೆರವಿಗೆ ಬರುವುದು ಯಾವ ಮೂಲೆಯಲ್ಲಿಯೂ ಸಿಗುವ ಬಣ್ಣ ಬಣ್ಣದ ಸೋಡಾ ಪಾನೀಯ ಮತ್ತು ಆಕರ್ಷಕ ಪ್ಯಾಕ್‍ಗಳಲ್ಲಿ ಇರುವ ಕರಿದ ತಿಂಡಿಗಳು! ಕೊಬ್ಬು, ಸಕ್ಕರೆಯ ಅಂಶ ಹೆಚ್ಚಿರುವ ಇವು ಮಕ್ಕಳ ಬಾಯಿಗೆ ರುಚಿಸುತ್ತವೆ, ಸುಲಭವಾಗಿ ಕಡಿಮೆ ಬೆಲೆಗೆ ದೊರಕುತ್ತವೆ ಮತ್ತು ಸಿದ್ಧಪಡಿಸುವ ಶ್ರಮವಿಲ್ಲ. ಹೀಗಾಗಿ ಮಕ್ಕಳು ಆಹಾರ ತಿಂದಾಗ ಬೊಜ್ಜಿನ ಜತೆ ಅಪೌಷ್ಟಿಕತೆಯೂ ಹೆಚ್ಚುತ್ತದೆ!
ಕಬಡ್ಡಿ , ಚಿನ್ನಿದಾಂಡು, ಕುಂಟೆಬಿಲ್ಲೆ, ಲಗೋರಿ, ಮರಕೋತಿ ಆಟ ಇವೆಲ್ಲವೂ ಇಂದಿನ ಬಹುತೇಕ ಮಕ್ಕಳಿಗೆ ಅಪರಿಚಿತ ಪದಗಳು. ತಂತ್ರಜ್ಞಾನದ ನೆರವಿನಿಂದ, ಸುಧಾರಿಸಿದ ಆರ್ಥಿಕ ಮಟ್ಟದಿಂದ ಇಂದು ಎಲ್ಲರ ಕೈಗೂ ಮೊಬೈಲ್ ಫೋನ್, ಮನೆ ಮನೆಯಲ್ಲೂ ಟಿ.ವಿ. ಇದರಿಂದ ಆದ ಅನುಕೂಲಗಳ ಜತೆಗೆ ಅನನುಕೂಲಗಳೂ ಬಹಳಷ್ಟಿವೆ. ಮಕ್ಕಳ ಆಟ ಏನಿದ್ದರೂ ಮೊಬೈಲ್ ಫೋನ್, ವಿಡಿಯೊ ಗೇಮ್‌ಗಳಲ್ಲಿ! ದಿನಗೂಲಿ ಕೆಲಸ ಮಾಡುವ ಅದೆಷ್ಟೋ ತಾಯಂದಿರು ಮರದ ನೆರಳಿನಲ್ಲಿ ಒಂದೆರಡು ವರ್ಷದ ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಹಿಡಿಸಿ, ಚಿಪ್ಸ್ ಪ್ಯಾಕೆಟ್ ಕೊಟ್ಟು ಗಂಟೆಗಟ್ಟಲೇ ಸುಮ್ಮನಿರಿಸುವುದು ಸಾಮಾನ್ಯ ದೃಶ್ಯವಾಗಿದೆ. ಸ್ಥಳ, ಸನ್ನಿವೇಶ ಬದಲಾದರೂ ಈ ರೀತಿ ಚಟುವಟಿಕೆ ಇಲ್ಲದ, ಬೇಡದ್ದನ್ನು ತಿನ್ನುವ ಜೀವನಶೈಲಿ ಎಲ್ಲೆಡೆ ಕಂಡುಬರುತ್ತದೆ!
ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ತಡೆಗಟ್ಟಲು ಹುಟ್ಟಿನಿಂದಲೇ ಸರಿಯಾದ ಆಹಾರಕ್ರಮದ ರೂಢಿಯಾಗಬೇಕು. ಮಗುವಿಗೆ ಮೊದಲ ಆರು ತಿಂಗಳು ಸ್ತನ್ಯಪಾನದ ನಂತರ ಪೌಷ್ಟಿಕವಾದ ಪೂರಕ ಆಹಾರ ನೀಡಬೇಕು. ಹುಟ್ಟಿನಿಂದ ಐದು ವರ್ಷದ ಮಕ್ಕಳಿಗೆ, ಸರಿಯಾದ ಆಹಾರವನ್ನು ತಯಾರಿಸುವುದಷ್ಟೇ ಅಲ್ಲ ಸಮಯಕ್ಕೆ ಸರಿಯಾಗಿ ತಿನ್ನುವ ಕ್ರಮವನ್ನು ರೂಢಿ ಮಾಡಿಸಲು ಪೋಷಕರ ಮೇಲ್ವಿಚಾರಣೆ ಅಗತ್ಯ. ಬೆಳೆಯುವ ಮಕ್ಕಳಿಗೆ ಆಗಾಗ್ಗೆ ಹಸಿವಿನ ಜೊತೆಗೆ ಬಾಯಿರುಚಿಗಾಗಿ ತಿನ್ನುವ ಅಭ್ಯಾಸ ಇರುತ್ತದೆ. ಎರಡು ಊಟಗಳ ನಡುವೆ ಮಕ್ಕಳು ಸೇವಿಸುವುದು ಕರಿದ ತಿನಿಸು, ಬೇಕರಿ ತಿಂಡಿಗಳನ್ನು! ಇದನ್ನು ತಪ್ಪಿಸಿ ಆರೋಗ್ಯಕರವಾದ ತಿಂಡಿಯನ್ನು ತಿನ್ನುವ ಅಭ್ಯಾಸ ಮಾಡಿಸಬೇಕು. ಆದರೆ ಇದು ಈಗಿನ ಬದಲಾದ ಪರಿಸ್ಥಿತಿಯಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯವೇ?
ಪ್ರತಿನಿತ್ಯ ಕೃಷಿ ಅಥವಾ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯ ದಂಪತಿಗೆ ಇರುವಾಗ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗುವುದು ಕಷ್ಟಸಾಧ್ಯ. ಮಗು ಮನೆಯಲ್ಲಿಯೇ ಇರುವ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಅದಕ್ಕೆ ಸೂಕ್ತ ಆಹಾರ ದೊರೆಯುವುದಿಲ್ಲ. ತಾಯಿಗೂ ಸದಾ ಒತ್ತಡದಲ್ಲಿಯೇ ಕೆಲಸ ಮಾಡುವ ಸಂದರ್ಭ ಎದುರಾಗುತ್ತದೆ. ಈ ದಿಸೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ತೆರೆಯಲಾಗುತ್ತಿರುವ ‘ಕೂಸಿನಮನೆ’ ಶಿಶುಪಾಲನಾ ಕೇಂದ್ರ ಉತ್ತಮವಾದ ಯೋಜನೆ. ಗ್ರಾಮೀಣ ಮಹಿಳೆಯರು ಆರು ತಿಂಗಳಿನಿಂದ ಮೂರು ವರ್ಷದ ಒಳಗಿನ ಮಕ್ಕಳನ್ನು ಕೂಸಿನಮನೆಯಲ್ಲಿ ಬಿಡಬಹುದು. ಪ್ರತಿ ಕೇಂದ್ರಕ್ಕೆ ಹತ್ತು ಜನ ತರಬೇತಿ ಹೊಂದಿರುವ ಮಕ್ಕಳ ಆರೈಕೆದಾರರು ಇರಲಿದ್ದು ಶಿಶುಗಳಿಗೆ ಪೂರಕ ಪೌಷ್ಟಿಕ ಆಹಾರದ ಸೌಲಭ್ಯವನ್ನೂ ಇದು ಒಳಗೊಂಡಿದೆ.
ಇದರೊಂದಿಗೆ ಬೆಳಗಿನ ತಿಂಡಿಯನ್ನು ತಿನ್ನದೇ ಇರುವುದು ಇಂದಿನ ಮಕ್ಕಳ ಸಾಮಾನ್ಯ ಅಭ್ಯಾಸ. ತಡವಾಗಿ ಮಲಗಿ-ಏಳುವುದು, ಗಡಿಬಿಡಿಯಲ್ಲಿ ಒಂದಿಷ್ಟು ತಿಂದು ಅಥವಾ ತಿನ್ನದೇ ಓಡುವುದು ಇಂದಿನ ಜೀವನಶೈಲಿ. ಆಹಾರ ತಜ್ಞರ ಪ್ರಕಾರ, ನಮ್ಮ ಇಡೀ ದಿನದ ಆಹಾರ ಅಗತ್ಯದ ಶೇಕಡ 25ರಷ್ಟು ಭಾಗವನ್ನು ಬೆಳಗಿನ ತಿಂಡಿ ಒಳಗೊಂಡಿರಬೇಕು. ಬೆಳಗಿನ ತಿಂಡಿ ಸರಿಯಾಗಿ ಸಿಕ್ಕಾಗ ಪೌಷ್ಟಿಕಾಂಶಗಳು ಪೂರೈಕೆಯಾಗಿ ಆ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಚುರುಕಾಗಿರುತ್ತಾರೆ. ಬೆಳಿಗ್ಗೆ ತಿಂಡಿ ಬಿಟ್ಟಾಗ ನಂತರ ಹಸಿವೆಯಾಗಿ ಮಧ್ಯಾಹ್ನದ ಹೊತ್ತಿಗೆ ಮಿತಿಮೀರಿ ತಿನ್ನುವ ಸಂಭವ ಹೆಚ್ಚು. ಅಲ್ಲದೆ ಮಧ್ಯಮಧ್ಯ ಬಾಯಾಡಿಸುವ ಚಟವು ಬೊಜ್ಜಿಗೆ ಕಾರಣವಾಗುತ್ತದೆ. ಆದ್ದರಿಂದ ಬೆಳಗಿನ ತಿಂಡಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು.
ಮೂರು ವರ್ಷದ ಮೇಲಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಸಿಗಬೇಕೆಂದು ಸರ್ಕಾರ ಶ್ರಮಿಸುತ್ತಿದೆ. ಪ್ರತಿನಿತ್ಯ ಅಂಗನವಾಡಿಯಲ್ಲಿ ಬೆಳಿಗ್ಗೆ ಮೊಳಕೆಕಾಳು, ಮಧ್ಯಾಹ್ನ ತರಕಾರಿ ಸಾಂಬಾರ್, ವಾರದಲ್ಲಿ ಎರಡು ದಿನ ಮೊಟ್ಟೆ, ಸಂಜೆ ಹಾಲು ಮತ್ತು ಶೇಂಗಾ ಚಿಕ್ಕಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಆಹಾರದ ಕಚ್ಚಾ ಸಾಮಗ್ರಿಯ ಬೆಲೆ ಹೆಚ್ಚಳ, ಸ್ವಚ್ಛಗೊಳಿಸುವುದು, ಸಾಗಣೆ ಮತ್ತು ನಿರ್ವಹಣೆ, ಆಹಾರದ ಗುಣಮಟ್ಟ, ಪ್ರಮಾಣ, ಸರಬರಾಜಿನ ಕುರಿತು ಬಹಳಷ್ಟು ದೂರುಗಳು ಕೇಳಿಬರುತ್ತಿವೆ. ಅವುಗಳನ್ನು ಗಂಭೀರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಅಗತ್ಯ. ಹಾಗೆಯೇ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ವಿಧಾನದಲ್ಲಿ ಮಕ್ಕಳಿಗೆ ಆಹಾರವನ್ನು ನೀಡುವ ಬಗ್ಗೆ ತರಬೇತಿ ಸಿಗಬೇಕು.
ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜಿನ ನಿಯಂತ್ರಣಕ್ಕೆ ಮಾತ್ರವಲ್ಲ, ದೈಹಿಕ ಮತ್ತು ಬೌದ್ಧಿಕ ವಿಕಸನಕ್ಕೂ ಸರಿ ಪ್ರಮಾಣದ, ಸಮತೋಲಿತ ಆಹಾರ ಸಿಗಬೇಕು. ಅದನ್ನು ಸಾಧ್ಯವಾಗಿಸುವಲ್ಲಿ ಸರ್ಕಾರದೊಂದಿಗೆ ಸಮುದಾಯವೂ ಜತೆಯಾಗಬೇಕು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.