ADVERTISEMENT

ವಿಶ್ಲೇಷಣೆ | ‘ನಿಮ್ಮ ಭ್ರಷ್ಟಾಚಾರ’ದಿಂದ ಸಮಸ್ಯೆ!

ವ್ಯಕ್ತಿ ಯಾವ ಪಕ್ಷವನ್ನು ಬೆಂಬಲಿಸುತ್ತಿದ್ದಾನೆ ಎಂಬುದು ಆತನ ನಿಲುವು ಏನಾಗಿರುತ್ತದೆ ಎಂಬುದನ್ನು ನಿರ್ಧರಿಸುತ್ತಿದೆ

ಪ್ರೊ. ಸಂದೀಪ್ ಶಾಸ್ತ್ರಿ
Published 13 ಆಗಸ್ಟ್ 2024, 0:17 IST
Last Updated 13 ಆಗಸ್ಟ್ 2024, 0:17 IST
   

ಕರ್ನಾಟಕದ ರಾಜಕಾರಣದಲ್ಲಿ ಎರಡು ವಾರಗಳಿಂದ ಯಾವ ಲಗಾಮೂ ಇಲ್ಲದ ಕೆಸರೆರಚಾಟವೊಂದು ನಡೆದಿದೆ. ಹಿಂದೆಂದೂ ಕಾಣದಂತಹ ಬಗೆಯಲ್ಲಿ ಇದು ಆಗಿದೆ. ಆರೋಪ ಹಾಗೂ ಪ್ರತ್ಯಾರೋಪಗಳು ಭಾರಿ ಪ್ರಮಾಣದಲ್ಲಿ ನಡೆದಿವೆ. ಪ್ರತಿ ರಾಜಕೀಯ ಪಕ್ಷವೂ ತನ್ನ ಎದುರಾಳಿ ಪಕ್ಷವು ಭ್ರಷ್ಟಾಚಾರದ ಮೂರ್ತರೂಪ ಎಂಬ ಆರೋಪ ಹೊರಿಸುವುದರಲ್ಲಿ ಬಹಳ ಸಂತೋಷವನ್ನು ಕಾಣುತ್ತಿದೆ.

ಇಲ್ಲಿ ‘ನಿಮ್ಮ ಭ್ರಷ್ಟಾಚಾರ’ ಹಾಗೂ ‘ನನ್ನ ಭ್ರಷ್ಟಾಚಾರ’ ಎಂಬ ಸಮರವೊಂದು ನಡೆದಿದೆ. ಒಂದು ತಪ್ಪು ಇನ್ನೊಂದು ತಪ್ಪನ್ನು ಸರಿಪಡಿಸಲು ಯತ್ನಿಸುತ್ತಿರುವಂತೆ ಕಾಣುತ್ತಿದೆ. ರಾಜಕೀಯ ಕೆಸರೆರಚಾಟವು ತೀರಾ
ಕೆಳಮಟ್ಟವನ್ನು ತಲುಪಿರುವುದು ಬಹಳ ಸ್ಪಷ್ಟವಾಗಿದೆ. ಪ್ರತಿ ರಾಜಕೀಯ ವ್ಯಕ್ತಿ, ಸಂಸ್ಥೆಯ ಮಟ್ಟದಲ್ಲಿ ನೈತಿಕತೆಯು ನಿಧಾನವಾಗಿ ಕುಸಿಯುತ್ತ ಸಾಗಿದೆ.

ರಾಜಕೀಯ ಮೇಲಾಟದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟವು ತಮ್ಮ ಗುರಿ ಸಾಧನೆಗೆ ಯಾವ ಹೆಜ್ಜೆ ಇರಿಸುವುದಕ್ಕೂ ಹಿಂಜರಿಯುತ್ತಿಲ್ಲ. ಎರಡೂ ಕಡೆಯವರು ತಮ್ಮ ಎದುರಾಳಿ ಗುಂಪಿನ ಮೇಲೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ, ನಿಯಮಗಳನ್ನು ಉಲ್ಲಂಘಿಸಿದ, ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ, ಪಾರದರ್ಶಕವಾಗಿ ನಡೆದುಕೊಂಡಿಲ್ಲದ, ಭ್ರಷ್ಟಾಚಾರದಲ್ಲಿ ತೊಡಗಿದ ಆರೋಪಗಳನ್ನು ಹೊರಿಸುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯ ಮೊದಲು ಶುರುವಾಗಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ತಿಂಗಳ ನಂತರವೂ ಮುಂದುವರಿದಿದೆ.

ADVERTISEMENT

ತಾನು ನಡೆದುಬಂದ ಹಾದಿಯನ್ನು ಸಮರ್ಥಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಎದುರಾಳಿಯ ಮೇಲೆ ಆಕ್ರಮಣ ನಡೆಸುವ ಈ ಕಾರ್ಯತಂತ್ರ ಮತ್ತು ಪರಸ್ಪರ ಸಂಬಂಧವಿರುವ ಮೂರು ಬೆಳವಣಿಗೆಗಳಿಗೆ
ನಂಟು ಇದೆ. ಮೊದಲನೆಯದಾಗಿ, ಭ್ರಷ್ಟಾಚಾರದ ವಿರುದ್ಧದ ಸಮರವೆಂಬುದು ಜನರಲ್ಲಿನ ಗ್ರಹಿಕೆಗಳ ಮಟ್ಟದಲ್ಲಿಯೂ ಇರುತ್ತದೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕತ್ವವು ತಮ್ಮ ಎದುರಾಳಿಗಳನ್ನು
ಗುರಿಯಾಗಿಸಿಕೊಂಡು ಕಾರ್ಯತಂತ್ರ ರೂಪಿಸುತ್ತವೆ ಅಥವಾ ತಮ್ಮ ಸಾಧನೆಗಳನ್ನು ಬಿಂಬಿಸಲು ಕಾರ್ಯತಂತ್ರ ರೂಪಿಸುತ್ತವೆ. ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆಯ ವಿಚಾರ ಬಂದಾಗ, ಆಳುವ ಪಕ್ಷಗಳಿಗೆಲ್ಲ ತಮ್ಮನ್ನು ಸಮರ್ಥಿಸಿಕೊಳ್ಳಲು ಬಹಳಷ್ಟು ಸಂಗತಿಗಳಿರುತ್ತವೆ. ಅವು ವಿರೋಧ ಪಕ್ಷಗಳ ಮೇಲೆ ಆಕ್ರಮಣಕಾರಿ ಧೋರಣೆ ತಳೆಯುತ್ತವೆ. 

ಅದೇ ರೀತಿಯಲ್ಲಿ, ವಿರೋಧ ಪಕ್ಷದ ಸಾಲಿನಲ್ಲಿ ಇದ್ದಾಗ ಅದು ತಾನು ಅಧಿಕಾರದಲ್ಲಿ ಇದ್ದಾಗ ಮಾಡಿದ್ದನ್ನು ಹೆಚ್ಚಾಗಿ ಹೇಳಲು ಮುಂದಾಗುವುದಿಲ್ಲ. ಆದರೆ, ಆಗ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷದ ಮೇಲೆ ಆಕ್ರಮಣ ನಡೆಸುತ್ತದೆ. ಆ ಮೂಲಕ, ಜನರಲ್ಲಿ ಗ್ರಹಿಕೆಯೊಂದನ್ನು ಮೂಡಿಸುವ ಸಮರವೊಂದು ಶುರುವಾಗುತ್ತದೆ. ಎದುರಾಳಿಯ ಮೇಲೆ ದಾಳಿ ನಡೆಸುವ ತೀರ್ಮಾನವೊಂದು ಅದಾಗಲೇ ಆಗಿಬಿಟ್ಟಿರುತ್ತದೆ. 

ಆಕ್ರಮಣ ನಡೆಸಬೇಕು ಎಂಬುದನ್ನು ತೀರ್ಮಾನಿಸಿಕೊಂಡ ನಂತರದಲ್ಲಿ ಪಕ್ಷಗಳು ಅದಕ್ಕೆ ಬೇಕಿರುವ ಅಸ್ತ್ರಗಳು ಏನಿವೆ ಎಂಬುದನ್ನು ಶೋಧಿಸಲು ಮುಂದಾಗುತ್ತವೆ. ಅಂದರೆ, ಮೊದಲೇ ಕೈಗೊಂಡ ತೀರ್ಮಾನವನ್ನು ಸಮರ್ಥಿಸಲು ಕಾರಣಗಳನ್ನು ಹುಡುಕುತ್ತವೆ! ಕೊನೆಯಲ್ಲಿ, ತಮಗೆ ಏನೇ ಸಿಕ್ಕಿದರೂ ಆ ವಿಷಯವನ್ನು ಬಳಸಿಕೊಂಡು ಎದುರಾಳಿಗಳ ಮೇಲೆ ಆರೋಪ ಮಾಡಲಾಗುತ್ತದೆ. ಎರಡನೆಯ ವಿಚಾರವು ಮೊದಲನೆಯದರೊಂದಿಗೆ ಸಹಜವಾಗಿಯೇ ಬೆಸೆದುಕೊಂಡಿದೆ. ಕರ್ನಾಟಕದ ರಾಜಕಾರಣದಲ್ಲಿ ಬಹಳ ಪ್ರಬಲವಾದ ಧ್ರುವೀಕರಣ ಆಗಿದೆ. ಜನರು ವಿಭಿನ್ನ ರಾಜಕೀಯ ಪಕ್ಷಗಳ ಜೊತೆ ಬಲವಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ಪಕ್ಷಗಳ ಜೊತೆ ಗುರುತಿಸಿಕೊಂಡಿರುವ ಜನರ ಅಭಿಪ್ರಾಯ ಅವರು ಬೆಂಬಲಿಸುವ ರಾಜಕೀಯ ಪಕ್ಷಗಳ ಮೂಲಕ ತೀರ್ಮಾನವಾಗುತ್ತಿದೆ. ಯಾವ ವಿಚಾರದಲ್ಲಿ ಯಾರ ವಿಚಾರ, ನಿಲುವು ಏನಿರುತ್ತದೆ ಎಂಬುದು ಅವರು ಯಾರ ಜೊತೆ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಆಧರಿಸಿರುತ್ತದೆ.

ಎರಡು ದತ್ತಾಂಶಗಳು ಇಲ್ಲಿ ಪ್ರಮುಖವಾಗುತ್ತವೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಲೋಕನೀತಿ ಮತ್ತು ಸಿಎಸ್‌ಡಿಎಸ್‌ ಸಂಸ್ಥೆಗಳು ನಡೆಸಿದ ಸಮೀಕ್ಷೆಯು ಆಡಳಿತಾರೂಢ ಬಿಜೆಪಿಗೆ ಇನ್ನೊಂದು ಅವಧಿಗೆ ಸರ್ಕಾರವನ್ನು ಮುನ್ನಡೆಸಲು ಅವಕಾಶ ಸಿಗಬೇಕೇ ಎಂಬ ಪ್ರಶ್ನೆಯನ್ನು ಮತದಾರರ ಮುಂದೆ ಇರಿಸಿತ್ತು. ಇದಕ್ಕೆ ಬಂದ ಪ್ರತಿಕ್ರಿಯೆಗಳು ಸ್ಪಷ್ಟವಾಗಿ ಪಕ್ಷಗಳ ನೆಲೆಯಲ್ಲೇ ಇದ್ದವು. ಬಿಜೆಪಿಗೆ ಮತ ಚಲಾಯಿಸಿದ ಶೇ 89ರಷ್ಟು ಮಂದಿ ಈ ಪ್ರಶ್ನೆಗೆ ‘ಹೌದು’ ಎಂದೂ, ಕಾಂಗ್ರೆಸ್ಸಿಗೆ ಮತ ಚಲಾಯಿಸಿದ್ದ ಶೇ 85ರಷ್ಟು ಮಂದಿ ‘ಬೇಡ’ ಎಂದೂ ಉತ್ತರಿಸಿದ್ದರು. ಆ ಸಂದರ್ಭದಲ್ಲಿ ಜೆಡಿಎಸ್‌ಗೆ ಮತ ನೀಡಿದ್ದ ಶೇ 75ರಷ್ಟು ಮಂದಿ ‘ಬೇಡ’ ಎಂದೇ ಹೇಳಿದ್ದರು.

2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಲೋಕನೀತಿ–ಸಿಎಸ್‌ಡಿಎಸ್‌ ಚುನಾವಣೋತ್ತರ ಸಮೀಕ್ಷೆಯಲ್ಲಿ, ‘ಕೇಂದ್ರದಲ್ಲಿ ಬಿಜೆಪಿಗೆ ಇನ್ನೊಂದು ಅವಧಿಗೆ ಅವಕಾಶ ನೀಡಬೇಕೇ’ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಕರ್ನಾಟಕದ ಬಿಜೆಪಿ ಮತದಾರರ ಪೈಕಿ ಶೇ 78ರಷ್ಟು ಮಂದಿ ‘ನೀಡಬೇಕು’ ಎಂದು ಉತ್ತರಿಸಿದರು. ಕಾಂಗ್ರೆಸ್ ಮತದಾರರ ಪೈಕಿ ಶೇ 65ರಷ್ಟು ಮಂದಿ ‘ನೀಡಬಾರದು’ ಎಂದರು. ಕುತೂಹಲದ ಸಂಗತಿಯೆಂದರೆ, ಈ ಬಾರಿ ಜೆಡಿಎಸ್‌ ಮತದಾರರ ಪೈಕಿ ಶೇ 92ರಷ್ಟು ಮಂದಿ ‘ಇನ್ನೊಂದು ಅವಧಿಗೆ ಅವಕಾಶ ನೀಡಬೇಕು’ ಎಂದರು.

ಇದರ ಇಂಗಿತಾರ್ಥ ಏನು ಎಂಬುದು ಬಹಳ ಸ್ಪಷ್ಟವಾಗಿದೆ. ವ್ಯಕ್ತಿ ಯಾವ ಪಕ್ಷವನ್ನು ಬೆಂಬಲಿಸುತ್ತಿದ್ದಾನೆ ಎಂಬುದು ಆತನ ನಿಲುವು ಏನಾಗಿರುತ್ತದೆ ಎಂಬುದನ್ನು ನಿರ್ಧರಿಸುತ್ತಿದೆ. ಅಂದರೆ, ಇಲ್ಲಿ ಜನರಲ್ಲಿ ಮೂಡುವ ಗ್ರಹಿಕೆಯನ್ನು ಆಧರಿಸಿದ ಸಮರವು ಬಹಳ ಮಹತ್ವ ಪಡೆದುಕೊಳ್ಳುತ್ತದೆ. 

ಮೂರನೆಯದು, ಪಕ್ಷಗಳು ತಮ್ಮ ಬೆಂಬಲಿಗರನ್ನು ಖುಷಿಪಡಿಸಲು ಬಹಳ ಆಸಕ್ತಿ ತೋರುತ್ತಿವೆ ಹಾಗೂ ಅವರನ್ನು ತಮ್ಮ ಜೊತೆ ಇರಿಸಿಕೊಳ್ಳಲು ಉತ್ಸುಕವಾಗಿವೆ. ಇದಕ್ಕಾಗಿ, ಆ ಪಕ್ಷಗಳು ಎದುರಾಳಿ ಪಕ್ಷವನ್ನು ‘ಭ್ರಷ್ಟ’ ಎಂದು ಚಿತ್ರಿಸಲು ಯತ್ನಿಸುವುದು ಏಕೆ? ಎದುರಾಳಿ ಪಕ್ಷದ ಪ್ರತಿಬಿಂಬವೇ ತಾನು ಎಂಬುದನ್ನು ಆ ಪಕ್ಷವು ಮರೆಯುತ್ತಿದೆಯೇ? ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಇರುವ ಆಂತರಿಕ ಗುಂಪುಗಾರಿಕೆಯನ್ನು ಗಮನಿಸಿದರೆ, ಒಂದು ಪಕ್ಷವು ಎದುರಾಳಿ ಪಕ್ಷವನ್ನು ರಾಜಕೀಯವಾಗಿ ವಿರೋಧಿಸುತ್ತ ಇರುತ್ತದೆಯಾದರೂ, ಪಕ್ಷದೊಳಗಿನ ವ್ಯಕ್ತಿಗಳು ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲಿಕ್ಕೆ ಕೂಡ ಯತ್ನಿಸುತ್ತ ಇರುತ್ತಾರೆ.

ರಾಜಕೀಯ ಪಕ್ಷಗಳು ಮಾಡುವ ಮನವಿಗಳು ರಾಜ್ಯದ ಎಲ್ಲರನ್ನೂ ಉದ್ದೇಶಿಸಿರುತ್ತವೆಯೇ? ಮನವಿಗಳು ಎಲ್ಲರನ್ನೂ ಉದ್ದೇಶಿಸಿರುತ್ತವೆಯೇ ಅಥವಾ ಮನವಿ ಮಾಡುವ ವ್ಯಕ್ತಿಯ ಬೆಂಬಲಿಗರನ್ನು ಒಗ್ಗಟ್ಟಾಗಿ ಇರಿಸಿಕೊಳ್ಳುವ ಉದ್ದೇಶವನ್ನು ಮಾತ್ರ ಹೊಂದಿರುತ್ತವೆಯೇ? ಈ ಪ್ರಶ್ನೆಗಳಿಗೆ ಹೊಂದಿಕೊಂಡಿರುವ ಇನ್ನೊಂದು ಸಂಗತಿಯೆಂದರೆ, ಸರ್ಕಾರದ ನಿಯಂತ್ರಣದಲ್ಲಿ ಇರುವ ಸಂಸ್ಥೆಗಳು ನಿಷ್ಪಕ್ಷಪಾತ ಎಂಬ ನಂಬಿಕೆ ಸಾರ್ವಜನಿಕರಲ್ಲಿ ಕಡಿಮೆ ಆಗುತ್ತಿರುವುದು. 2024ರ ಲೋಕಸಭಾ ಚುನಾವಣೆಗೂ ಮೊದಲು ನಡೆದ ಸಿಎಸ್‌ಡಿಎಸ್–ಲೋಕನೀತಿ ಸಮೀಕ್ಷೆಯು ಪ್ರಮುಖ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಜನರ ಮುಂದೆ ಇರಿಸಿತ್ತು. ಸಂಸ್ಥೆಗಳನ್ನು ರಾಜಕೀಯ ಹಗೆ ತೀರಿಸಿಕೊಳ್ಳಲು ಬಳಸಲಾಗುತ್ತಿದೆ
ಎಂದು ಹೇಳಿದವರ ಸಂಖ್ಯೆಯು ಸಂಸ್ಥೆಗಳು ತಮ್ಮ ವ್ಯಾಪ್ತಿಯ ಒಳಗೇ ಕೆಲಸ ಮಾಡುತ್ತಿವೆ ಎಂದು ಹೇಳಿದವರ ಸಂಖ್ಯೆಗಿಂತ ಹೆಚ್ಚಿತ್ತು.

ಇವೆಲ್ಲವೂ ನಮ್ಮನ್ನು ಮುಟ್ಟಿಸುವುದು ಒಂದು ಸಿನಿಕ ತೀರ್ಮಾನಕ್ಕೆ. ರಾಜಕೀಯ ಪಾತ್ರಧಾರಿಗಳು ತಮ್ಮ ಬಗ್ಗೆ ಅವಲೋಕನ ನಡೆಸದೆ ತಮ್ಮ ವಿರೋಧಿಗಳ ಮೇಲೆ ಮಾತ್ರ ಆಕ್ರಮಣ ನಡೆಸುತ್ತಿರುತ್ತಾರೆ. ತಾವು ಯಾರನ್ನು ವಿರೋಧಿಸುತ್ತಿರುತ್ತಾರೋ ಅವರಂತೆಯೇ ತಾವೂ ಆಗಿದ್ದೇವೆಯೇ ಎಂಬ ಅವಲೋಕನ ಅವರ ಕಡೆಯಿಂದ ನಡೆಯುವುದಿಲ್ಲ. ಎಲ್ಲೆಡೆಯೂ ಇರುವ ಭ್ರಷ್ಟಾಚಾರವು ಇಲ್ಲಿ ಚಿಂತೆಗೆ ಕಾರಣವಾಗುವುದಿಲ್ಲ, ಬದಲಿಗೆ ‘ನಿಮ್ಮ’ ಭ್ರಷ್ಟಾಚಾರ ಮಾತ್ರವೇ ಇಲ್ಲಿ ಮುಖ್ಯವಾಗುತ್ತದೆ. ‘ನೀನು’ ಮತ್ತು ‘ನಾನು’ ನಡುವಿನ ಈ ಸಮರದಲ್ಲಿ ನಿಜವಾದ ಸಮಸ್ಯೆಗಳು ನೇಪಥ್ಯಕ್ಕೆ ಸರಿಯುತ್ತವೆ. ಮರೆವಿನಿಂದ ಈ ರೀತಿ ಆಗುವುದಿಲ್ಲ; ಸರ್ವಸಮ್ಮತಿಯಿಂದ ಹೀಗೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.