ADVERTISEMENT

ವಿಶ್ಲೇಷಣೆ | ಪ್ರತಿಭಾವಂತ ವಿದ್ಯಾರ್ಥಿಗೆ ಸವಾಲು!

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೂಡಿಹಾಕಿ, ಗಂಟೆಗಟ್ಟಲೆ ಓದಿಸುವುದು ಪ್ರತಿಭೆಯ ದಮನವೇ ವಿನಾ ವಿಕಾಸ ಅಲ್ಲ

ಅರವಿಂದ ಚೊಕ್ಕಾಡಿ
Published 23 ಆಗಸ್ಟ್ 2024, 0:27 IST
Last Updated 23 ಆಗಸ್ಟ್ 2024, 0:27 IST
   

ಪ್ರತಿಭಾವಂತರು ಎಂದರೆ ಯಾರು ಎಂಬುದು ಬಹುಕಾಲದಿಂದ ಚಾಲ್ತಿಯಲ್ಲಿರುವ ಪ್ರಶ್ನೆ. ಅದರ ಜೊತೆಯಲ್ಲೇ ಅತಿ ಹೆಚ್ಚು ಅಂಕ ಗಳಿಸುವವರು, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುವವರು, ಅಧ್ಯಯನದಲ್ಲಿ ಬಹಳ ಆಸಕ್ತರಾಗಿರುವವರನ್ನೆಲ್ಲ‌ ಪ್ರತಿಭಾವಂತರು ಎನ್ನುವ ಪರಿಕಲ್ಪನೆಯ ಮೂಲಕ ಗುರುತಿಸುವ ಪರಿಪಾಟವೂ ಶಿಕ್ಷಣ ವ್ಯವಸ್ಥೆಯಲ್ಲಿ ಇದೆ.

ಅವರವರ ಆಸಕ್ತಿಯ ವಿಷಯ ಸಿಕ್ಕಾಗ ಎಲ್ಲರೂ ಪ್ರತಿಭಾವಂತರೇ ಆಗಿರುತ್ತಾರೆ ಎನ್ನುವುದು ವಿಶಾಲ ವ್ಯಾಪ್ತಿಯ ಶೈಕ್ಷಣಿಕ ತತ್ವಶಾಸ್ತ್ರೀಯ ದೃಷ್ಟಿಕೋನವಾಗಿದೆ. ನಿಗದಿತ ಪಠ್ಯಪುಸ್ತಕಗಳನ್ನು ಆಧರಿಸಿದ ಕಲಿಕೆಯಲ್ಲಿ ದಕ್ಷತೆಯನ್ನು ತೋರಿಸುವವರು ಪ್ರತಿಭಾವಂತರು ಎನ್ನುವುದು ಸಂಕುಚಿತ ವ್ಯಾಪ್ತಿಯ, ಆದರೆ ವಾಸ್ತವದಲ್ಲಿ ಬಹುಮಟ್ಟಿಗೆ ಸಾರ್ವತ್ರಿಕವಾಗಿ ಒಪ್ಪಿತವಾಗಿರುವ ದೃಷ್ಟಿಕೋನ. ಇಲ್ಲಿನ ಚರ್ಚೆಯು ಸಂಕುಚಿತ ವ್ಯಾಪ್ತಿಯಲ್ಲಿ ಪ್ರತಿಭಾವಂತರೆಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ.

ಸಮಾಜದಲ್ಲಿ ಬಹಳ ಪ್ರತಿಭಾವಂತರಾದವರು ಮತ್ತು ಕಲಿಕೆಯಲ್ಲಿ ತೀರಾ ಹಿಂದುಳಿದವರ ಸಂಖ್ಯೆ ಕಡಿಮೆಯೇ ಇರುತ್ತದೆ. ಮಧ್ಯಮ ಮಟ್ಟದ ಕಲಿಕಾ ಸಾಮರ್ಥ್ಯ ಹೊಂದಿರುವವರ ಸಂಖ್ಯೆ ಜಾಸ್ತಿ ಇರುತ್ತದೆ. ಪಠ್ಯ ರಚನೆ, ಪಾಠ ಬೋಧನೆ, ಪರೀಕ್ಷಾ ವ್ಯವಸ್ಥೆಯೆಲ್ಲವೂ ಸಾಮಾನ್ಯವಾಗಿ ಬೌದ್ಧಿಕವಾಗಿ ಮಧ್ಯಮ ಮಟ್ಟದ ಸಾಮರ್ಥ್ಯ ಹೊಂದಿರುವವರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ನಡೆಯುತ್ತವೆ. ಪ್ರತಿಭಾವಂತರಿಗಾಗಿ ಅವುಗಳನ್ನು ಹಿಗ್ಗಿಸುವ, ಕಲಿಕಾ ಹಿಂದುಳಿದವರಿಗಾಗಿ ಕುಗ್ಗಿಸುವ ಶೈಕ್ಷಣಿಕ ವಿಧಾನಗಳನ್ನು ಅಲ್ಲಲ್ಲಿಗೆ ಹೊಂದಿಸಿಕೊಂಡು ಹೊಂದಾಣಿಕೆ ಮಾಡಲಾಗುತ್ತದೆ. ಹೀಗಿರುವ ಸನ್ನಿವೇಶದಲ್ಲಿ ಪ್ರತಿಭೆಯು ರಾಷ್ಟ್ರದ ಆಸ್ತಿ, ಅದನ್ನು ಉತ್ತೇಜಿಸಬೇಕು ಎಂಬ ಕಲ್ಪನೆ ಇರಿಸಿಕೊಂಡು  ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಜವಾಹರ್ ನವೋದಯ ಶಾಲೆಗಳನ್ನು ತೆರೆಯಿತು. ಕಾಲಾನುಕ್ರಮದಲ್ಲಿ ಆ ಮಾದರಿಯ ಹಲವು ಖಾಸಗಿ ಶಾಲೆಗಳು ತೆರೆಯಲ್ಪಟ್ಟವು. ಇಂದು ಅಸ್ತಿತ್ವದಲ್ಲಿರುವ ಖಾಸಗಿ ಶಾಲೆಗಳು, ಮುಖ್ಯವಾಗಿ ಖಾಸಗಿ ಪಿ.ಯು. ಕಾಲೇಜುಗಳೆಲ್ಲವೂ ತಮ್ಮಲ್ಲಿ ಇರುವವರೆಲ್ಲರೂ ಪ್ರತಿಭಾವಂತರು ಎಂದು ಬಿಂಬಿಸಿಕೊಳ್ಳುತ್ತಿವೆ. ಏಕೆಂದರೆ ‘ಆರ್ಟ್ಸ್ ಪಿ.ಯು. ಕಾಲೇಜು’ಗಳು ತೀರಾ ವಿರಳ.‌ ಎಲ್ಲವೂ ‘ಸೈನ್ಸ್ ಪಿ.ಯು. ಕಾಲೇಜು’ಗಳು ಮತ್ತು ನೀಟ್, ಸಿಇಟಿ ಕೋಚಿಂಗ್ ಪ್ರಧಾನ ಕಾಲೇಜುಗಳು. ಹಾಗಿದ್ದರೆ ಆರ್ಟ್ಸ್, ಕಾಮರ್ಸ್‌ನಂತಹ ಕ್ಷೇತ್ರಗಳಲ್ಲಿ ಪ್ರತಿಭಾವಂತರಿಲ್ಲವೇ ಅಥವಾ ಪ್ರತಿಭಾವಂತರಿಗಾಗಿ ಇಂತಹ ಕಾಲೇಜುಗಳೇ ಅಗತ್ಯವಿಲ್ಲವೆ?

ADVERTISEMENT

ಅಂದರೆ ವರ್ತಮಾನದ ಶಿಕ್ಷಣೋದ್ಯಮವು ‘ಪ್ರತಿಭೆ’ ಎಂಬ ಪರಿಕಲ್ಪನೆಯನ್ನು ‘ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಯ ಸರಕು’ ಎಂಬರ್ಥದಲ್ಲಿ ಪರಿವರ್ತಿಸಿ ಅದನ್ನು ಇನ್ನಷ್ಟು ಸಂಕುಚಿತಗೊಳಿಸಿದೆ. ಹೀಗೆ ಪರಿವರ್ತಿಸುವ ಪ್ರಕ್ರಿಯೆಯಲ್ಲಿಯೂ ಕಾಲೇಜುಗಳಿಗೆ ಪ್ರವೇಶಾತಿಯನ್ನು ಹೆಚ್ಚಿಸುವ ಉದ್ದೇಶದಿಂದ, ವಿಜ್ಞಾನದಲ್ಲಿ ನಿರಾಸಕ್ತರಾದವರನ್ನು, ಕಲಿಕೆಯಲ್ಲಿ ಮಧ್ಯಮ ಮಟ್ಟದ ಬೌದ್ಧಿಕ ಸಾಮರ್ಥ್ಯ ಹೊಂದಿದವರನ್ನು, ಕಲಿಕೆಯಲ್ಲಿ ಹಿಂದುಳಿದವರನ್ನು ತಮ್ಮಲ್ಲಿ ತಂದುಬಿಟ್ಟರೆ ಅತ್ಯಂತ ಪ್ರತಿಭಾವಂತರನ್ನಾಗಿ ರೂಪಿಸಲಾಗುತ್ತದೆ ಎಂಬ ನಂಬಿಕೆಯನ್ನು ಸೃಷ್ಟಿಸಿವೆ.

ಈ ನಂಬಿಕೆಯನ್ನು ಬಲಪಡಿಸುವುದು ಸಂಸ್ಥೆಗಳು ಕೊಡುವ ವಾರ್ಷಿಕ ಪರೀಕ್ಷಾ ಫಲಿತಾಂಶಗಳು.‌ ಕಲಿಕಾ ದಕ್ಷತೆಯನ್ನು ಕಲಿಕೆಯನ್ನು ನಿರ್ವಹಿಸುವ ರೀತಿಯ ಆಧಾರದಲ್ಲಿ ಮೌಲ್ಯಮಾಪನ ಮಾಡಿದರೆ ಶೇಕಡ 98ರಷ್ಟು ಅಂಕಗಳನ್ನೇ ಪಡೆದ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತರಾದವರು, ಕಲಿಕಾ ಮಧ್ಯಮ ಮಟ್ಟದವರು ಮತ್ತು ಕಲಿಕಾ ಹಿಂದುಳಿದವರ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ.‌ ಆದರೆ ವಿದ್ಯಾರ್ಥಿಗಳ ಶ್ರಮ, ಕಾರ್ಯವನ್ನು ನಿರ್ವಹಿಸುವ ರೀತಿಯ ಆಧಾರದಲ್ಲಿ ಮೌಲ್ಯಮಾಪನ ಮಾಡುವುದಿಲ್ಲ ಅಷ್ಟೆ.

ಹೀಗಿರುವ ಶೈಕ್ಷಣಿಕ ವ್ಯವಸ್ಥೆ ‘ಅತ್ಯುತ್ತಮ’ವನ್ನು ತೋರಿಸುವುದರ ಹಿಂದೆ, ಬೆಳಿಗ್ಗೆ ನಾಲ್ಕು ಗಂಟೆಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿ, ನಾಲ್ಕೂವರೆಯಿಂದ ಓದಿಸಿ, ಒಂಬತ್ತೂವರೆಯಿಂದ ಸಂಜೆ ನಾಲ್ಕೂವರೆವರೆಗೆ ತರಗತಿ ನಡೆಸಿ, ಆರರಿಂದ ರಾತ್ರಿ ಹನ್ನೊಂದರವರೆಗೆ ಓದಿಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ತರುವ ಉದ್ದೇಶವೇ ಇರುತ್ತದೆ.‌ ನಿಜವಾಗಿ ಕಲಿಕೆಯಲ್ಲಿ ಬಹಳ ಮುಂದಿರುವ ವಿದ್ಯಾರ್ಥಿಗಳಿಗೆ ಸೀಮಿತ ಪಠ್ಯಪುಸ್ತಕದಲ್ಲಿ ಅತ್ಯುತ್ತಮ‌ ಅಂಕಗಳನ್ನು ಪಡೆಯಲು ಇಷ್ಟೊಂದು ಸಮಯ ಓದಬೇಕಾದ ಅಗತ್ಯ ಇರುವುದಿಲ್ಲ.‌ ಅದರ ಅಗತ್ಯ ಇರುವುದು ಕಲಿಕಾ ಹಿಂದುಳಿದವರಿಗೆ. ಕಲಿಕಾ ಹಿಂದುಳಿದವರಿಗಾಗಿ ಇರುವ ಕಲಿಕಾ ತಂತ್ರವನ್ನೇ ಪ್ರತಿಭಾವಂತರಿಗೂ ಅನ್ವಯಿಸಲಾಗುತ್ತದೆ!

ಪ್ರತಿಭಾವಂತರಿಗೆ ಒಂದು ಸಲ ಓದಿದಾಗಲೇ ಅರ್ಥವಾಗಿರುತ್ತದೆ. ಆದರೂ ಅಂತಹವರನ್ನು ಒಂದೇ ಸಲಕ್ಕೆ ಅರ್ಥ ಆಗದವರೊಂದಿಗೆ ಕೂರಿಸಿ, ದಿನದಲ್ಲಿ ಸುಮಾರು 8-10 ಗಂಟೆ ಕಟ್ಟಿಹಾಕಿಟ್ಟುಕೊಂಡಂತೆ ಓದಿಸುವುದು ಪ್ರತಿಭಾವಂತರಿಗೆ ಯಾತನೆಯ ಅನುಭವವೇ ವಿನಾ ಬೇರೇನಲ್ಲ. ಜೊತೆಗೆ ಅವರ ಸಾಮರ್ಥ್ಯ ಪೋಲಾಗುತ್ತದೆ. ಒಂದೇ ಸಲದ ಓದಿನಲ್ಲಿ ಪಠ್ಯವನ್ನು ಅರ್ಥ ಮಾಡಿಕೊಂಡವರು ಆಮೇಲೆ ಕಾದಂಬರಿಯನ್ನೊ, ಕಥೆಯನ್ನೊ ಅಥವಾ ಬೇರೇನನ್ನಾದರೂ ಓದಬಹುದು. ಆದರೆ ಪಾಠ ಬಿಟ್ಟು ಬೇರೆ ಓದಲು ಅವಕಾಶವಿಲ್ಲ! ಇಲ್ಲಿ ನಡೆಯುತ್ತಾ ಇರುವುದು ಪ್ರತಿಭಾವಂತರ ಪ್ರತಿಭೆಯ ದಮನವೇ ವಿನಾ ವಿಕಾಸ ಅಲ್ಲ.

ನನ್ನ ತಿಳಿವಳಿಕೆಗೆ ಬಂದ ಒಂದು ಸಂಗತಿ ಹೀಗಿದೆ. ನಿರ್ದಿಷ್ಟ ಕಾಲೇಜಿಗೆ ಒಳ್ಳೆಯ ಹೆಸರಿದೆ ಎಂದು ಬಹುದೂರದಿಂದ ಒಬ್ಬ ವಿದ್ಯಾರ್ಥಿನಿ ಹೋಗಿ ಸೇರಿದಳು. ಪಾಲಕರು ಸಾಲ ಮಾಡಿ ಹಣ ತಂದು ಆಕೆ ಸುರಕ್ಷಿತವಾಗಿ ಉಳಿದುಕೊಳ್ಳುವಂತಹ ಪ್ರತ್ಯೇಕ ವ್ಯವಸ್ಥೆಯನ್ನೆಲ್ಲ ಮಾಡಿದರು. ಕೊನೆಗೆ ಆಕೆ ಭ್ರಮನಿರಸನಕ್ಕೆ ಒಳಗಾದಳು. ಏಕೆಂದರೆ ಆಕೆಯ ಇಂಗ್ಲಿಷ್ ಭಾಷಾ ತಜ್ಞತೆಯು ಆಕೆಗೆ ಒದಗಿಸಲಾದ ಉಪನ್ಯಾಸಕರ ಇಂಗ್ಲಿಷ್ ಭಾಷಾ ತಜ್ಞತೆಗಿಂತ ಉನ್ನತ ಮಟ್ಟದಲ್ಲಿತ್ತು. ವಿದ್ಯಾರ್ಥಿಗಳು ಸವಾಲಿನ ರೂಪದ ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸಲು ಸಾಧ್ಯವಾಗದೆ, ಯೂಟ್ಯೂಬ್ ಲಿಂಕ್ ಕೊಟ್ಟು ‘ನೋಡಿ ತಿಳಿದುಕೊಳ್ಳಿ’ ಎಂದು ಮಾರ್ಗದರ್ಶನ ಮಾಡುವ ಅಧ್ಯಾಪಕರಿದ್ದಾರೆ. ಕೊಡಬೇಕಾದ ವಿವರಣೆ ಕೊಟ್ಟು ನಂತರ ಯೂಟ್ಯೂಬ್ ಲಿಂಕ್ ಕೊಡುವುದು ಸರಿಯಾದ ವಿಧಾನ.

ಅಧ್ಯಾಪಕರ ಪರಿಸ್ಥಿತಿ ಏಕೆ ಹೀಗಾಗುತ್ತಿದೆ ಎಂದರೆ, ಶಾಲಾ ಕಾಲೇಜಿಗೆ ಅತ್ಯುನ್ನತ ಅಂಕಗಳು ಬರುವಂತೆ ಮಾಡಬೇಕು ಎಂಬುದು ಸರ್ಕಾರಿ ಮತ್ತು ಖಾಸಗಿ ವ್ಯವಸ್ಥೆಯ ಸಾಮಾನ್ಯ ಧೋರಣೆಯಾಗಿದೆ. ಉಳಿದಂತೆ ಸರ್ಕಾರಿ ವ್ಯವಸ್ಥೆಯಲ್ಲಿ ಅಧ್ಯಾಪಕರಿಗೆ ಒಳ್ಳೆಯ ವೇತನವೇ ಇದೆ. ಆದರೆ ಒಂದು ತರಗತಿಯಲ್ಲಿ ಪಾಠ ಬೋಧಿಸಬೇಕಾದರೆ ಅದರ ಎರಡು ಪಟ್ಟು ಸಮಯವನ್ನು ಪಾಠ ಬೋಧನೆಯ ಸಿದ್ಧತೆಗೆ ಕೊಡಬೇಕಾಗುತ್ತದೆ ಎಂಬ ಪರಿಕಲ್ಪನೆಯು ವ್ಯವಸ್ಥೆಯಿಂದಲೇ ಹೊರಟುಹೋಗಿದೆ. ಅಧ್ಯಾಪಕರು, ಉಪನ್ಯಾಸಕರನ್ನು ಆಡಳಿತಾತ್ಮಕ ಕಾರ್ಯಗಳು, ಅನಗತ್ಯ ದೀರ್ಘ ಮೀಟಿಂಗುಗಳು, ಆನ್‌ಲೈನ್ ಮೀಟಿಂಗುಗಳಿಗೆಲ್ಲ ತೊಡಗಿಸಲಾಗುತ್ತಿದೆ. ಅದರ ಪರಿಣಾಮ ‘ಓದಿಸುವ’ ಪ್ರಕ್ರಿಯೆ ಚಾಲ್ತಿಯಲ್ಲಿದೆಯೇ ವಿನಾ ‘ಬೋಧನಾ ಸಿದ್ಧತೆ’ಯ ಪರಿಕಲ್ಪನೆ ಚಾಲ್ತಿಯಲ್ಲಿ ಉಳಿದಿಲ್ಲ.

ಖಾಸಗಿ ವ್ಯವಸ್ಥೆಗೆ ಬಂದರೆ, ಪೋಷಕರು ಆಕರ್ಷಣೆಗೆ ಒಳಗಾಗುವುದು ಶಾಲಾ ಕಾಲೇಜುಗಳ ಕಟ್ಟಡ, ಹವಾನಿಯಂತ್ರಿತ ಕೊಠಡಿಗಳು, ಅಲ್ಲಿನ ವಾರ್ಷಿಕ ಫಲಿತಾಂಶ, ಇಂಗ್ಲಿಷ್‌ನಲ್ಲಿ ಮಾತನಾಡುವುದು, ಕಂಪ್ಯೂಟರ್‌ಗಳು, ಪ್ರಾಜೆಕ್ಟರ್‌ಗಳು, ಮಕ್ಕಳನ್ನು ಕಟ್ಟಿ ಕೂರಿಸಿ ಓದಿಸುವಂತಹ ಗೋಚರಿತ ಸಂಗತಿಗಳಿಗೇ ವಿನಾ ತಮ್ಮ ಮಕ್ಕಳಿಗೆ ಪ್ರತಿಭಾವಂತ ಅಧ್ಯಾಪಕರು ಬೇಕು ಎಂದು ಯೋಚಿಸುವುದಿಲ್ಲ. ಅಧ್ಯಾಪಕರಿಗೆ ಅವರ ಶ್ರಮಕ್ಕಿಂತ ಕಡಿಮೆ ವೇತನ ಇರುತ್ತದೆ. ಆಗ, ರೂಪಕಾತ್ಮಕವಾಗಿ ಹೇಳುವುದಾದರೆ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುವ ಅಧ್ಯಾಪಕರು ಸಿಗುತ್ತಾರೆ, ಆದರೆ ಶೇಕ್ಸ್‌ಪಿಯರ್ ನಾಟಕವನ್ನು ವಿಮರ್ಶೆಗೆ ಒಡ್ಡಬಲ್ಲ ಅಧ್ಯಾಪಕರು ಸಿಗುವುದಿಲ್ಲ. ಆಡಳಿತ ಮಂಡಳಿಗಾಗಲಿ, ಪಾಲಕರಿಗಾಗಲಿ ಅಂತಹ ಅಧ್ಯಾಪಕರ ಅಗತ್ಯ ಹೊಳೆಯುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳ ವಿಕಾಸ ಆಗಬೇಕಾದರೆ ಆ ಬಗೆಯ ಅಧ್ಯಾಪಕರ ಅಗತ್ಯ ಇರುತ್ತದೆ. ಆಡಳಿತ ಮಂಡಳಿಗಳಿಗೆ ಸಾಮಾನ್ಯವಾಗಿ ತಾವು ಹೇಳಿದಂತೆ ಕೇಳುವ ಅಧ್ಯಾಪಕರು ಬೇಕು. ಆದರೆ ಪ್ರತಿಭಾವಂತರು ಹೇಳಿದ ಹಾಗೆ ಕೇಳುವುದಿಲ್ಲ. ಶೈಕ್ಷಣಿಕ ಸಂಗತಿ ಬಂದಾಗ ಪ್ರಶ್ನಿಸುತ್ತಾರೆ, ವಾಗ್ವಾದಕ್ಕಿಳಿಯುತ್ತಾರೆ.‌ ಅಂತಹ ಅಧ್ಯಾಪಕರನ್ನು ನಿರ್ವಹಿಸಬೇಕಾದರೆ ಅವರನ್ನು ಬೌದ್ಧಿಕವಾಗಿಯೇ ಮುಖಾಮುಖಿಯಾಗಬಲ್ಲಷ್ಟು ದಕ್ಷತೆ ಇರುವ ಆಡಳಿತ ಮಂಡಳಿ ಅಥವಾ ಆಡಳಿತಗಾರರು ಬೇಕಾಗುತ್ತಾರೆ.

ಆಡಳಿತಾತ್ಮಕ ವ್ಯವಸ್ಥೆಯಲ್ಲೇ ಪ್ರತಿಭೆಯ ಸಮಸ್ಯೆ ಇದ್ದಾಗ, ಅದು ಬಯಸುವುದು ಪ್ರತಿಭಾವಂತರನ್ನಲ್ಲ, ಹೇಳಿದ ಹಾಗೆ ಕೇಳುವ ಸಿಬ್ಬಂದಿಯನ್ನು. ಪ್ರತಿಭಾವಂತ ಸಿಬ್ಬಂದಿಯ ಪ್ರತಿಭೆಗೆ ತಕ್ಕ ವೇತನವನ್ನು ಕೊಡುವ ಪರಿಕಲ್ಪನೆ ಬಹುತೇಕ ಆಡಳಿತ ಮಂಡಳಿಗಳ ಬಳಿ ಇಲ್ಲ. ಇವೆಲ್ಲದರ ಪರಿಣಾಮವಾಗಿ, ನಿಜವಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭೆಯ ವಿಕಾಸಕ್ಕೆ ಪೂರಕವಾದ ಶೈಕ್ಷಣಿಕ ಸನ್ನಿವೇಶ ಇಲ್ಲವಾಗುತ್ತದೆ. ಪಾಲಕರು ಸರಿಯಾದ ಶೈಕ್ಷಣಿಕ ಪರಿಕಲ್ಪನೆಗಳು, ತಮ್ಮ ಮಕ್ಕಳ ಅಗತ್ಯಗಳನ್ನು ಅರ್ಥ ಮಾಡಿಕೊಂಡು ತಮ್ಮ ಬೇಡಿಕೆಯನ್ನು ಸಾಮೂಹಿಕ ಗಟ್ಟಿ ಧ್ವನಿಯಾಗಿ ಹೇಳಲು ತೊಡಗುವುದೇ ಈ ಸಮಸ್ಯೆಯನ್ನು ನಿವಾರಿಸುವ ಪ್ರಾರಂಭಿಕ ಹೆಜ್ಜೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.