ADVERTISEMENT

ವಿಶ್ಲೇಷಣೆ | ಅಂತರಂಗದಲಿ ಉಷೆಯಿಲ್ಲದ ಬಹಿರಂಗದ ವೇಷ

ಗತದಲ್ಲಿ ಗಾಯವಷ್ಟೇ ಅಲ್ಲ, ಗಾಯ ಮಾಯಿಸುವ ಮಂತ್ರದಂಡಗಳೂ ಇವೆಯೆಂಬುದು ಮರೆವಿಗೆ ಸರಿದಿದೆ

ಡಾ.ಸಬಿತಾ ಬನ್ನಾಡಿ
Published 20 ಡಿಸೆಂಬರ್ 2022, 21:30 IST
Last Updated 20 ಡಿಸೆಂಬರ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಬ್ಬರಿಗೊಬ್ಬರ ಬೆಂಬಲ, ವಿಶ್ವಾಸ, ತುಂಬಿ ತುಳುಕುವ ನಗು. ಹೊರಗಿನಿಂದ ನೋಡಿದರೆ ಬಡತನದ ಪ್ರತೀಕ
ದಂತಿರುವ ಚಿಕ್ಕ ಮನೆ. ಮನೆಯೊಡೆಯ ಚೆಂಬನ್‌ ಕುಂಜುವಿಗೆ ಒಂದು ದೋಣಿ ಮತ್ತು ಬಲೆ ಕೊಂಡು ಕೊಳ್ಳಬೇಕು ಎಂಬುದು ಜೀವಮಾನದ ಆಸೆ. ಅದಕ್ಕಾಗಿ ಹೆಂಡತಿಯ ಬೆಂಬಲದ ಜೊತೆಗೆ ಪಾರಿಕುಟ್ಟಿ ಎಂಬ ಯುವಕನೂ ಸಹಾಯ ಮಾಡುತ್ತಾನೆ. ಆಸೆ ಈಡೇರುತ್ತದೆ.

ಚೆಂಬನ್‍ಕುಂಜುವಿಗೆ ಶ್ರೀಮಂತರ ಬದುಕಿನ ಭೋಗವನ್ನು ಹತ್ತಿರದಿಂದ ನೋಡುತ್ತಾ, ಆಸೆ ಹೆಮ್ಮರ ವಾಗತೊಡಗುತ್ತದೆ. ಇನ್ನಷ್ಟು ದೋಣಿ ಬೇಕು, ತಾನು ದೋಣಿ ಖರೀದಿಸಿದವನಿಗೆ ಇರುವಂತಹ ಹೆಂಡತಿ ಬೇಕು, ದೊಡ್ಡ ಮನೆ ಬೇಕು... ಈಗ ನಿಧಾನಕ್ಕೆ ಆತ ಶ್ರೀಮಂತ ನಾಗುತ್ತಾ ಹೆಂಡತಿಯೆಡೆಗೆ ನಿರ್ಲಕ್ಷ್ಯ, ಕಷ್ಟದಲ್ಲಿ ಕೈಹಿಡಿದ ಪಾರಿಕುಟ್ಟಿಗೇ ದ್ರೋಹ ಮಾಡತೊಡಗು
ತ್ತಾನೆ. ಅವನು ದಿವಾಳಿ ಆಗುವಂತೆ ಮಾಡುತ್ತಾನೆ. ಹೆಂಡತಿ ಅನಾರೋಗ್ಯದಿಂದ ಸಾಯುತ್ತಾಳೆ. ತಾನು ದೋಣಿ ಖರೀದಿಸಿದವನ ಹೆಂಡತಿ ಈಗ ವಿಧವೆ. ಅವಳನ್ನು ಮದುವೆಯಾಗುತ್ತಾನೆ. ಶ್ರೀಮಂತ ಚೆಂಬನ್‍ಕುಂಜು ಈಗ ದೊಡ್ಡ ಮನೆಯ ಒಡೆಯ. ಆದರೀಗ ಮನೆಯ ಆತ್ಮವಾಗಿದ್ದ ನಗು ಮಾಯವಾಗಿದೆ. ಹೊರಗಿನಿಂದ ನೋಡಿದರೆ ಆತ ಈಗ ತುಂಬ ‘ಏಳಿಗೆ’ ಹೊಂದಿದ್ದಾನೆ! ಇದು, ತಕಳಿ ಶಿವಶಂಕರ್ ಪಿಳ್ಳೈ ಅವರು ಬರೆದ ಮಲಯಾಳಂ ಕಾದಂಬರಿ ‘ಚೆಮ್ಮೀನ್’ನಲ್ಲಿ ಬರುವ ಕತೆಯ ಒಂದು ಎಳೆ.

ಈ ಚೆಂಬನ್‍ಕುಂಜು ನಾವು ‘ಭಾವಿಸಿರುವ’ ಅಭಿವೃದ್ಧಿಯ ರೂಪಕವಾಗಿ ಸದಾ ನನ್ನನ್ನು ಕಾಡುತ್ತಾನೆ. ಇದು ಒಬ್ಬ ವ್ಯಕ್ತಿಯ ಕತೆಯಲ್ಲ. ನಾವು ರೂಪಿಸುವ ಸಂಸ್ಥೆಗಳು, ದೇಶ ಕಟ್ಟುವ ಮಾದರಿಗಳು ಎಲ್ಲದರಲ್ಲೂ, ಅಲ್ಲಿನ ಸದಸ್ಯರು ಪರಸ್ಪರ ವಿಶ್ವಾಸ, ಪ್ರೀತಿ, ಕಾಳಜಿಯಿಂದ ಒಬ್ಬರಿಗೊಬ್ಬರು ಒದಗಿಬರಬೇಕು. ಸಣ್ಣ ಮಟ್ಟದಲ್ಲಿದ್ದಾಗ ಇವುಗಳನ್ನೆಲ್ಲಾ ಅನುಭವಿಸುವ ನಾವು, ಅದು ದೊಡ್ಡದಾಗತೊಡಗಿದಂತೆ ‘ಅಪರಿಚಿತ’ರಾಗತೊಡಗುತ್ತೇವೆ. ಆ ಅಪರಿಚಿತತೆಗಾಗಿ ಹಗಲಿರುಳೂ ಕೆಲಸ ಮಾಡುತ್ತಾ, ಹಣದ ಹರಿವು ಹೆಚ್ಚಾಗುವುದು, ಜೊತೆಗೇ ಸಾಲದ ಪ್ರಮಾಣವೂ ಹೆಚ್ಚಾಗುತ್ತಾ ಅನುಮಾನ, ಅವಿಶ್ವಾಸ, ಅಸಮಾಧಾನ, ಕ್ರೌರ್ಯವೂ ಮೇರೆ ಮೀರತೊಡಗುತ್ತವೆ.

ADVERTISEMENT

ಈ ಅಭಿವೃದ್ಧಿ ಅಥವಾ ಏಳಿಗೆಯ ಕಲ್ಪನೆಯಲ್ಲೇ ತೊಡಕುಗಳಿವೆ. ಕೈಗಾರಿಕಾ ಕ್ರಾಂತಿಯ ನಂತರದಲ್ಲಿ ಮನುಷ್ಯರ ಬದುಕುಗಳನ್ನು ವಿವರಿಸಿಕೊಳ್ಳುವ ಕ್ರಮದಲ್ಲಿ ಆದ ದೋಷವನ್ನು ಮೌಲ್ಯವಾಗಿಸಿ ಜಗತ್ತಿನಾದ್ಯಂತ ಪಸರಿಸುವಲ್ಲಿ ಬ್ರಿಟಿಷ್‌ ವಸಾಹತುಶಾಹಿ ಮಾಡಿದ ಕೆಲಸದಿಂದ ಸದ್ಯಕ್ಕಂತೂ ಬಿಡುಗಡೆ ಕಾಣುತ್ತಿಲ್ಲ. ಇದನ್ನು ನಮ್ಮೊಳಗು ಎಷ್ಟು ಆಳವಾಗಿ ಪ್ರೀತಿಸುತ್ತಿದೆಯೆಂದರೆ, ಬಾಯಿಯಲ್ಲಿ ನಾವು ನಮ್ಮ ಸಂಸ್ಕೃತಿ, ಸ್ವದೇಶಿ, ಇತಿಹಾಸ ಎಂದೆಲ್ಲಾ ಮಾತಾಡುತ್ತಾ ಅಂತರಂಗದಲ್ಲಿ ಅದಕ್ಕೆ ವಿರುದ್ಧ ವಾದುದನ್ನೇ ಪೋಷಿಸುತ್ತೇವೆ.

ನಾವು ಈಗೀಗ ಇತಿಹಾಸ ಬದಲಿಸುವ ನೆಪದಲ್ಲಿ, ಬ್ರಿಟಿಷ್ ವಸಾಹತುಶಾಹಿ ಇಲ್ಲಿತ್ತು ಎಂಬುದನ್ನೇ ಮರೆಸಲು ನೋಡುತ್ತಿದ್ದೇವೆ. ನಮಗೀಗ ಅವರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿದ್ದಕ್ಕಿಂತಲೂ ಮುಸ್ಲಿಮರ ವಿರುದ್ಧ ಹೋರಾಡಿದವರನ್ನು ಮುನ್ನೆಲೆಗೆ ತರಬೇಕೆಂಬ ತರಾತುರಿ ಹೆಚ್ಚತೊಡಗಿದೆ. ಯಾಕೆಂದರೆ ಅಂತರಾಳದಲ್ಲಿ ನಾವು ಬ್ರಿಟಿಷ್ ಮೌಲ್ಯಗಳನ್ನು ಆರಾಧಿಸುತ್ತೇವೆ. ಮೂಲವಾಸಿಗಳ ಜ್ಞಾನ, ಬದುಕು, ಆಸ್ತಿಗಳನ್ನು ನಾಶ ಮಾಡಿ ಸಾಮ್ರಾಜ್ಯ ಕಟ್ಟಿದವರು ಬ್ರಿಟಿಷರು. ತಮ್ಮ ಸಂಪತ್ತು, ತಂತ್ರಜ್ಞಾನ ಮತ್ತು ಅಧಿಕಾರದ ಠೇಂಕಾರದ ಮುಂದೆ ಎಲ್ಲರೂ ಶರಣಾಗುವಂತೆ ಮಾಡಿದವರು. ಇಂದು ಅವರ ಮೂಲದೇಶ ಇಂಗ್ಲೆಂಡ್ ಆರ್ಥಿಕವಾಗಿ ಹಿಂದೆ ಬೀಳುತ್ತಿರುವುದನ್ನು ಕೆಲವರು ಸಂಭ್ರಮಿಸುವಾಗಲೂ, ನಾವು ಅವರದೇ ನೆರಳುಗಳಾಗಿ ಅದೇ ಠೇಂಕಾರವನ್ನು ಅದರ್ಶವಾಗಿಸಿಕೊಳ್ಳುತ್ತಿದ್ದೇವೆ ಎಂಬುದೂ ನಮ್ಮ ಮಹಾಮರೆವಿನ ಭಾಗವೇ ಆಗಿದೆ.

2017ರಲ್ಲಿ ‘ವಿಕ್ಟೋರಿಯಾ ಮತ್ತು ಅಬ್ದುಲ್ಲಾ’ ಎಂಬ ನಿಜ ಕತೆಯನ್ನು ಆಧರಿಸಿದ ಸಿನಿಮಾ ಬಂದಿತ್ತು. ವಿಕ್ಟೋರಿಯಾ ಮತ್ತು ಅಬ್ದುಲ್ಲಾ ಇಂಗ್ಲೆಂಡ್ ಹಾಗೂ ಭಾರತವು ಪ್ರತಿನಿಧಿಸುವ ಸಂಸ್ಕೃತಿಯ ಫಲದ ಪ್ರತಿನಿಧಿಗಳಾಗಿ ನನಗೆ ಕಾಣಿಸುತ್ತಾರೆ. ಜಗತ್ತಿನಾದ್ಯಂತ ಕೊಳ್ಳೆಹೊಡೆದ ಮೇರೆಯಿಲ್ಲದ ಶ್ರೀಮಂತಿಕೆ ಮತ್ತು ರಾಜಸತ್ತೆಯ ಒಡತಿ ವಿಕ್ಟೋರಿಯಾ. ಯಾರ ಅಂಕೆಗೂ ಒಳಪಡದ ಆಕೆಯನ್ನು ಸುತ್ತುವರಿದ ದೊಡ್ಡ ಪಡೆ ಇದೆ. ಒಳಗೊಳಗೇ ಅವಳನ್ನು ಇಷ್ಟಪಡದವರೂ ಎದುರಿಗೆ ನಾಜೂಕು ನಟನೆಯಲ್ಲಿ ಪಳಗಿಹೋಗಿ
ದ್ದಾರೆ. ತಮ್ಮಿಚ್ಛೆಯಂತೆ ಅವಳನ್ನು ನಿಯಂತ್ರಿಸುತ್ತಿರುತ್ತಾರೆ. ವಯಸ್ಸಾದ ಆಕೆಗೆ ಇಷ್ಟೆಲ್ಲಾ ಇದ್ದೂ ಒಂಟಿತನ ಕಾಡುತ್ತಿದೆ. ಅಕ್ಷರಶಃ ಎಸೆದ ಮೂಟೆಯಂತೆ ಬಿದ್ದುಕೊಳ್ಳುವ ಆಕೆಯನ್ನು ಬೆಳಗಿನಲ್ಲಿ ಸೇವಕಿಯರು ಉರುಳಿಸಿ, ಎಬ್ಬಿಸಿ ಹೆಣಕ್ಕೆ ಶೃಂಗಾರ ಮಾಡಿದಂತೆ ಮಾಡಿಸಿ ಅಂದಿನ ಯಾಂತ್ರಿಕ ಸಭೆ, ಸಮಾರಂಭಗಳಿಗೆ ಸಜ್ಜುಗೊಳಿಸಬೇಕು.

ಹೀಗಿರುವಾಗ ಭಾರತದ ಬ್ರಿಟಿಷ್ ಆಡಳಿತದಲ್ಲಿ ಯುವ ಗುಮಾಸ್ತನಾಗಿದ್ದ ಅಬ್ದುಲ್‍ ಕರೀಮ್ ಆಕೆಯ ಗೋಲ್ಡನ್‍ ಜುಬಿಲಿ ಆಚರಣೆಗೆ ಒಂದು ಚಿನ್ನದ ನಾಣ್ಯದ ಉಡುಗೊರೆಯನ್ನು ಕೊಡಲು ಹೋಗಿ ಅವಳ ಗಮನ ಸೆಳೆಯುತ್ತಾನೆ. ಅವನ ಮುಗ್ಧ ಧೈರ್ಯ, ತುಂಟಾಟಿಕೆ, ಚುರುಕುತನ ಎಲ್ಲವೂ ಅಜ್ಜಿಯನ್ನು ಸೆಳೆದು ಅವಳಲ್ಲಿ ಜೀವನೋತ್ಸಾಹ ಪುಟಿದು, ಹೊಸದನ್ನು ಕಲಿಯುವ ಉಮೇದು ಹುಟ್ಟುತ್ತದೆ. ಅವನು ತನ್ನ ಬಳಿಯೇ ಇರುವಂತೆ ಮಾಡಲು ಉರ್ದು ಕಲಿಸುವ ಗುರುವಾಗಿ ಅವನನ್ನು ನೇಮಿಸಿಕೊಳ್ಳುತ್ತಾಳೆ. ಈ ಬಡವನ ಚೈತನ್ಯ ಅವಳ ಶವಸದೃಶ ಶ್ರೀಮಂತಿಕೆಯ ಜಡತ್ವವನ್ನು ಅಲುಗಾಡಿಸುತ್ತದೆ. ಹಾಗೆಯೇ ಅವಳ ಸುತ್ತ ಇರುವ ಬಂಟರುಗಳ ಎದೆಬಡಿತವನ್ನು ಹೆಚ್ಚಿಸುತ್ತದೆ. ವ್ಯಕ್ತಿಗತ ಸ್ವಾರ್ಥದ ಮೂಟೆಗಳನ್ನು ಹೊತ್ತು ದೇಶ, ರಾಜಪ್ರೇಮದ ಕವಚ ಧರಿಸಿರುವವರು ಇದನ್ನು ಹೇಗಾದರೂ ಮುರಿಯುವ ಷಡ್ಯಂತ್ರ ಹೂಡುತ್ತಿರುತ್ತಾರೆ. ರಾಣಿಯ ಸಾವಿನೊಂದಿಗೆ ಅವನು ರಾಣಿಯೊಂದಿಗೆ ಕಳೆದ ದಿನಗಳ ಎಲ್ಲ ದಾಖಲೆಗಳನ್ನೂ ಅಮಾನುಷವಾಗಿ ಸುಟ್ಟು ಅವನನ್ನು ಭಾರತಕ್ಕೆ ಅಟ್ಟುತ್ತಾರೆ. ಆ ಮೂಲಕ ಅವರು ಭಾರತದ ಬದುಕಿನ ಲೋಕನೋಟವೊಂದನ್ನೂ ಸುಟ್ಟು ಹಾಕುತ್ತಾರೆ.

ಭಾರತವು ಜಗತ್ತಿಗೆ ನೀಡಿದ ಲೋಕನೋಟಗಳನ್ನು ನಾವು ಧಾರ್ಮಿಕತೆಯ ಮುಸುಕಿನೊಳಗೆ ಹೀಗೇ ಸುಟ್ಟುಹಾಕಲು ನಿರಂತರ ಪ್ರಯತ್ನ ಮಾಡಿದ್ದೇವೆ, ಮಾಡುತ್ತಿದ್ದೇವೆ. ಧಾರ್ಮಿಕ ಆಚರಣೆಯ ಬಗೆಗೆ ನಮಗಿರುವ ಮೋಹವು ಈ ಲೋಕನೋಟಗಳನ್ನು ಬದುಕಿನ ಭಾಗವಾಗಿಸಿಕೊಳ್ಳುವುದರ ಬಗೆಗೆ ಇಲ್ಲವೇ ಇಲ್ಲ. ಹಾಗೆ ಇರುವವರು ಅಲ್ಪಸಂಖ್ಯೆಯಲ್ಲಿದ್ದಾರೆ. ಆಕ್ರಮಣ, ಅಧಿಕಾರದ ಚಾಟಿ, ನಿಯಂತ್ರಣಗಳ ಮೂಲಕ ಬಹುಮತಿತ್ವವನ್ನು ಹತ್ತಿಕ್ಕುವುದು ಇಲ್ಲೂ ನಿರಂತರವಾಗಿ ನಡೆದುಕೊಂಡು ಬಂದ ನಡೆಯೇ. ಆದರೆ ಅದನ್ನು ಎದುರಿಸಲು ಭಾರತವು ಮತ್ತೆ ಮತ್ತೆ ಹೆಕ್ಕಿಕೊಟ್ಟಿದ್ದು ಪ್ರೀತಿ, ಮಮತೆಯ ದಾರಿಯನ್ನೇ. ಬುದ್ಧ, ಮಹಾವೀರ, ಶರಣರು, ಸಿಖ್‍ ಗುರುಪಂಥ, ಸೂಫಿ ಸಂತರು, ದಾಸರು, ತತ್ವಪದಕಾರರು, ಜನಪದ ದೈವಗಳಾದ ಸಾಂಸ್ಕೃತಿಕ ನಾಯಕರು, ಯಾರನ್ನೇ ನೋಡಿದರೂ ಇಲ್ಲಿ ಎಲ್ಲರನ್ನೂ ಒಳಗೊಳ್ಳುವ, ಸಾಮುದಾಯಿಕ ಏಳಿಗೆಯ, ಜೊತೆಗೇ ಅಂತರಂಗದ ತಂಪಿನಲ್ಲಿ ದೇಹ ಭಾವಗಳನ್ನು ಕಾಪಿಟ್ಟುಕೊಳ್ಳುವ, ಇವೆಲ್ಲದರ ಜೊತೆಗೆ ಸುತ್ತಲಿನ ಪ್ರಕೃತಿಯನ್ನು ನಮ್ಮೊಂದಂಗವಾಗಿ ಪೊರೆಯುವ ಲೋಕನೋಟವೇ ಮುನ್ನೆಲೆಗೆ ಬರುತ್ತದೆ. ಆದರೆ ನಾವಿಂದು ಸಂಪೂರ್ಣ ವಿರುದ್ಧಗತಿಯಲ್ಲಿ ನಡೆಯುತ್ತಿದ್ದೇವೆ.

ಪೌರುಷದ ಅಟ್ಟಹಾಸ, ದಬ್ಬಾಳಿಕೆ, ನಿಯಂತ್ರಣಗಳನ್ನು ಹೀರೊಯಿಸಂ ಆಗಿಸುವ ಪ್ರವೃತ್ತಿ, ಪ್ರಕೃತಿಯ ಮೇಲಿನ ದಾಳಿಯೇ ಮೂಲವಾದ ಅಭಿವೃದ್ಧಿ ಯೋಜನೆಗಳು, ವ್ಯಕ್ತಿ ಆರಾಧನೆಯ ಮೇರೆಮೀರಿದ ಪ್ರತಿಕ್ರಿಯೆಗಳು, ಕೊನೆಯಿಲ್ಲದ ಭೋಗದ ದಾಹದಿಂದ ಛಿದ್ರಗೊಂಡ ಮನಸ್ಸುಗಳು, ಪ್ರತೀ ಸಂಸ್ಥೆಯಲ್ಲೂ ರಾಜಕೀಯ ಮೇಲಾಟಗಳು, ಕುಟುಂಬಗಳಲ್ಲಿ ಅಸಂತೃಪ್ತಿ... ಒಮ್ಮೆ ನಿಲುಗಡೆ ತೆಗೆದುಕೊಂಡು ಯೋಚಿಸಬಾರದೇ?

ಉತ್ತರ ಕೊರಿಯಾದ ‘ದೊರೆ’ ನಾಟಕ ನೋಡಿದ ಹುಡುಗರನ್ನು ಗಲ್ಲಿಗೆ ಹಾಕುತ್ತಾನೆ. ಇರಾನಿನ ‘ದೊರೆ’ ಹಿಜಾಬ್‍ ವಿರೋಧಿಸಿದ ಆಟಗಾರನನ್ನು ಗಲ್ಲಿಗೇರಿ ಸುತ್ತಾನೆ. ನಮ್ಮ ದೊರೆಗಳು ಬಣ್ಣ ಬಳಿದು ಶಾಲೆ ಉದ್ಧಾರ ಮಾಡುತ್ತೇವೆ ಎನ್ನುತ್ತಾ ಮನಸ್ಸು ರಿಪೇರಿ ಮಾಡಹೊರಡುವುದೂ ಇಂತಹ ನಡೆಗಳ ಮುನ್ನುಡಿ ಎಂದರೆ ಉರಿದು ಬೀಳುತ್ತಾರೆ. ಆಧುನಿಕ ಯಾಂತ್ರಿಕತೆಯ ಸ್ವರ್ಗ ಮತ್ತು ಮನೋವಿಕೃತಿಯ ಮೇಲಾಟಗಳು ಚೆಂಬನ್ ಕುಂಜುವಿನ ಮನೆಯ ದುರಂತದಂತೆ, ಮನುಷ್ಯಸಮಾಜ ವೆಂಬ ಗುಡಿಯೊಳಗಿನ ನಗುವನ್ನು ಕಿತ್ತುಕೊಳ್ಳುತ್ತಿರುವುದನ್ನು ಎಲ್ಲ ರೀತಿಯ ದೊರೆಗಳಿಗೂ ಪ್ರಜೆಗಳಿಗೂ ಕಾಣಿಸಲು ತುರ್ತಾಗಿ ಕನ್ನಡಿಯೊಂದು ಬೇಕಾಗಿದೆ.

ಲೇಖಕಿ: ಪ್ರಾಧ್ಯಾಪಕಿ
ಸರ್ಕಾರಿ ಪ್ರಥಮದರ್ಜೆ ಕಾಲೇಜು, ತರೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.