ಇಡೀ ದೇಶ ಲೋಕಸಭಾ ಚುನಾವಣೆಯಲ್ಲಿ ಮುಳುಗಿರುವ ಕಾಲದಲ್ಲಿ, ಇದೇ ಜೂನ್ ಮೂರರಂದು ಕರ್ನಾಟಕದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳು ನಡೆಯುತ್ತಿವೆ. ಈ ಕ್ಷೇತ್ರಗಳ ‘ಸುಶಿಕ್ಷಿತ’ ಮತದಾರರು ಈ ಚುನಾವಣೆಯ ಮಹತ್ವದ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಕೊಂಚ ಯೋಚಿಸಬಲ್ಲವರು ಕೂಡ ‘ವೋಟಿಗೆ ಎಷ್ಟು ರೇಟು’ ಥರದ ಒಣಹರಟೆಗಳಲ್ಲಿ ಮುಳುಗಿರುವಂತಿದೆ. ಲೋಕಸಭಾ ಚುನಾವಣೆಯಲ್ಲಿ ಸಾಮಾನ್ಯ ಮತದಾರರು ತೋರುತ್ತಿರುವ ಪ್ರಬುದ್ಧ ಪ್ರತಿಕ್ರಿಯೆಗಳು, ಗಂಭೀರ ಸಮಸ್ಯೆಗಳ ಬಗೆಗಿನ ಚರ್ಚೆಗಳು ಈ ಕ್ಷೇತ್ರಗಳಲ್ಲಿ ಕಾಣುತ್ತಿಲ್ಲ. ಇದು ಅಧಿಕೃತ ಶಿಕ್ಷಣಕ್ಕೂ ಮತದಾರರ ರಾಜಕೀಯ ಎಚ್ಚರಕ್ಕೂ ಸಂಬಂಧವಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡುವಂತಿದೆ!
ಪದವೀಧರ ಕ್ಷೇತ್ರಗಳಲ್ಲಿ, ಶಿಕ್ಷಕರ ಕ್ಷೇತ್ರಗಳಲ್ಲಿ ಮತದಾನ ಮಾಡುವವರು ಪದವೀಧರರಾಗಿರಬೇಕು. ಆದರೆ ಈ ಕ್ಷೇತ್ರಗಳ ಅಭ್ಯರ್ಥಿಗಳು ಪದವೀಧರರೇ ಆಗಿರಬೇಕು ಎಂದೇನಿಲ್ಲ! ಕಾಲೇಜು ಶಿಕ್ಷಣವೊಂದೇ ಶಿಕ್ಷಣವಲ್ಲ ಎನ್ನುವುದು ನಿಜ. ಆದರೂ ಮತ ಹಾಕುವವರಿಗೆ ನಿಗದಿಯಾದ ಶಿಕ್ಷಣದ ಮಟ್ಟ ಅವರನ್ನು ಪ್ರತಿನಿಧಿಸುವವರಿಗೆ ಇರಬೇಕಾಗಿಲ್ಲ ಎಂಬುದು ವಿಚಿತ್ರವಾಗಿದೆ. ಈ ಸಲ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ವಿವೇಕಾನಂದ ಎಸ್ಎಸ್ಎಲ್‌ಸಿ ಮುಗಿಸಿದ್ದಾರೆ. ಸ್ಪರ್ಧೆಯಲ್ಲಿರುವ ಮತ್ತೊಬ್ಬ ಅಭ್ಯರ್ಥಿ ಮರಿತಿಬ್ಬೇಗೌಡ ಸ್ನಾತಕೋತ್ತರ ಪದವೀಧರರು. ನೈರುತ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಮಂಜುನಾಥ ಕುಮಾರ್, ಆಗ್ನೇಯ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ವೈ.ಎ. ನಾರಾಯಣಸ್ವಾಮಿ ಉಪನ್ಯಾಸಕ
ರಾಗಿದ್ದವರು. ಈ ಬಗೆಯ ವೈವಿಧ್ಯಗಳ ಹಿನ್ನೆಲೆಯಲ್ಲಿ ಶಿಕ್ಷಕರ ಕ್ಷೇತ್ರಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆರಿಸಲು ಪದವೀಧರರು ಯಾವ ಮಾನದಂಡಗಳನ್ನು ಅನುಸರಿಸುತ್ತಾರೆ ಎಂಬುದು ಸುಶಿಕ್ಷಿತ ವಲಯದ ರಾಜಕೀಯ ಆಯ್ಕೆಯ ರೀತಿಗಳನ್ನು ಅಳೆಯುವ ಮಾನದಂಡವಾಗಬಲ್ಲದು.
ಹಿಂದೊಮ್ಮೆ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರದಿಂದ ಇಂಗ್ಲಿಷ್ ಪ್ರೊಫೆಸರ್ ಕೆ.ಎಸ್.ಭಗವಾನ್ ಅವರು ಸ್ಪರ್ಧಿಸಿದ್ದು ನೆನಪಾಗುತ್ತದೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಭಗವಾನ್ ಗಳಿಸಿದ 2,500ಕ್ಕೂ ಹೆಚ್ಚು ಮತಗಳು ಪದವೀಧರ ಕ್ಷೇತ್ರದ ಮತದಾರರು ಪಕ್ಷಗಳನ್ನು ಮೀರಿ ಸ್ವತಂತ್ರವಾಗಿ ಮತ ಹಾಕಿದ ರೀತಿಯನ್ನೂ ಸೂಚಿಸುತ್ತವೆ. ಇಂಥ ಪ್ರಯೋಗಗಳು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಾದರೂ ನಡೆಯದಿದ್ದರೆ ಇನ್ನೆಲ್ಲಿ ನಡೆಯಬಲ್ಲವು?
ಇಂಥ ಪ್ರಯೋಗಗಳು ಹೆಚ್ಚದಿರಲು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಬೌದ್ಧಿಕ ಜಡತೆಯೂ ಕಾರಣ. ಪ್ರಿನ್ಸಿಪಾಲರೊಬ್ಬರು ಹೇಳುವಂತೆ, ‘ಶಿಕ್ಷಕ ಕ್ಷೇತ್ರದ ಮತದಾರರು ತಮ್ಮ ಶಾಸಕರ ಜೊತೆಗೆ ಶಿಕ್ಷಣದ ಸಮಸ್ಯೆಗಳ ಬಗೆಗೆ ಚರ್ಚಿಸದೆ, ಟ್ರಾನ್ಸ್‌ಫರ್, ಅಪ್ರೂವಲ್‌ಗಳಿಗೆ ಅವರನ್ನು ಆಶ್ರಯಿಸುವುದೇ ಹೆಚ್ಚು’. ವಿದ್ಯಾರ್ಥಿಗಳ ಬದುಕನ್ನು ರೂಪಿಸಬಲ್ಲ ಬೋಧನಾ ಮಾಧ್ಯಮದಂಥ ಪ್ರಶ್ನೆಗಳನ್ನು ಪರಿಷತ್ತಿನಲ್ಲಿ ಚರ್ಚಿಸಬೇಕೆಂದು ಶಾಸಕರನ್ನು ಈ ಮತದಾರ ವಲಯಗಳು ಒತ್ತಾಯಿಸಿದ ಉದಾಹರಣೆಗಳಿಲ್ಲ. ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕೆಳಮನೆಯಲ್ಲಾಗಲೀ ಮೇಲ್ಮನೆಯಲ್ಲಾಗಲೀ ವ್ಯಾಪಕ ಚರ್ಚೆಗೆ ಬರಲಿಲ್ಲ. ಕೇಂದ್ರ ಸರ್ಕಾರವನ್ನು ಮೆಚ್ಚಿಸುವ ಸರ್ಕಾರದ ಆತುರ, ಸಂತೆ ಹೊತ್ತಿಗೆ ಮೂರು ಮೊಳ ನೇಯುವ ‘ಶಿಕ್ಷಣ ತಜ್ಞರು’ಗಳ ‘ಸರ್ಕಾರಿ ಸೇವೆ’ ಎರಡೂ ಸೇರಿ ರಾಜ್ಯದ ಒಂದು ತಲೆಮಾರಿನ ಭವಿಷ್ಯ ತರಾತುರಿಯಲ್ಲಿ ನಿರ್ಧಾರವಾದ ದುರಂತ ನಡೆಯಿತು.
ಮೇಲ್ಮನೆ ಇರುವುದೇ ಸಮಸ್ಯೆಗಳ ಆಳ, ಅಗಲವನ್ನು ಅಧ್ಯಯನ ಮಾಡಿ ಚರ್ಚೆಗಳಿಗೆ ಹೊಸ ದಿಕ್ಕು ಕೊಡುವ ಉದ್ದೇಶದಿಂದ. ಕೆಲವೇ ವರ್ಷಗಳ ಕೆಳಗೆ ಮೇಲ್ಮನೆಯ ಶಾಸಕರ ಬೌದ್ಧಿಕ ಸಿದ್ಧತೆ, ನಿಲುವು ಹಾಗೂ ಸ್ಪಷ್ಟತೆ ಹೊಸ ಚರ್ಚೆಗಳಿಗೆ ಕಾರಣವಾಗುತ್ತಿದ್ದವು. ಪತ್ರಿಕೆಗಳಲ್ಲಿ ಮೇಲ್ಮನೆಯ ಚರ್ಚೆಗಳೇ ಹೆಚ್ಚು ಪ್ರಚಾರ ಪಡೆದ ಉದಾಹರಣೆಗಳಿದ್ದವು. ದಿಟ್ಟ ರಾಜಕಾರಣಿಗಳಾದ ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ ಪರಿಷತ್ತಿನಲ್ಲಿ ಒಂದು ಕಾಲಕ್ಕೆ ಎತ್ತುತ್ತಿದ್ದ ಗಂಭೀರ ಪ್ರಶ್ನೆಗಳು ಸರ್ಕಾರಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದ್ದವು.
ಸಾಮಾಜಿಕ ನ್ಯಾಯದ ದಿಕ್ಕನ್ನೇ ಬದಲಿಸಿದ ಹಿಂದುಳಿದ ವರ್ಗಗಳ ಆಯೋಗದ ವರದಿ ಕೊಟ್ಟ ಎಲ್.ಜಿ. ಹಾವನೂರ್ ಪರಿಷತ್ತಿನಲ್ಲಿ ಇದ್ದರು. ವಿಶಿಷ್ಟ ಸಂಸದೀಯ ಪಟು ರಾಮಕೃಷ್ಣ ಹೆಗಡೆ ವಿಧಾನ
ಪರಿಷತ್ತಿನಲ್ಲಿ 50 ವರ್ಷಗಳ ಕೆಳಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿದ್ದ ಕವಿ ಸಿದ್ಧಲಿಂಗಯ್ಯ ‘ಅಜಲು ಪದ್ಧತಿ’ಯಂಥ ಶೋಷಣೆಯನ್ನು ಪರಿಷತ್ತಿನಲ್ಲಿ ಚರ್ಚಿಸಿ, ಅದು ನಿಷೇಧವಾಗಲು ಕಾರಣರಾದರು. ಮುಂದೆ ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿಗಾಗಿ ಸಿದ್ಧಲಿಂಗಯ್ಯ ಮಂಡಿಸಿದ ಖಾಸಗಿ ಮಸೂದೆಯು ಸದನದ ಒಳಹೊರಗೆ ವ್ಯಾಪಕವಾಗಿ ಚರ್ಚೆಗೊಳಗಾಯಿತು. ಬಂಗಾರಪ್ಪ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿಕೊಂಡಿತು. ಮಸೂದೆಯನ್ನು ತಿರಸ್ಕರಿಸಿದರೆ ಸರ್ಕಾರ ಪ್ರಗತಿ ವಿರೋಧಿಯಾಗುತ್ತದೆ, ಒಪ್ಪಿಕೊಂಡರೆ ಸರ್ಕಾರಕ್ಕೆ ಹಿನ್ನಡೆ. ಆಗ ಸರ್ಕಾರವೇ ಆ ಮಸೂದೆ ಮಂಡಿಸುವುದಾಗಿ ಭರವಸೆ ಕೊಟ್ಟಿತು. ಸಿದ್ಧಲಿಂಗಯ್ಯ ತಮ್ಮ ಖಾಸಗಿ ಮಸೂದೆಯನ್ನು ಹಿಂತೆಗೆದುಕೊಂಡರು. ಕೊನೆಗೂ ಮಸೂದೆ ಜಾರಿಗೆ ಬರಲಿಲ್ಲ. ಬದಲಿಗೆ ಸರ್ಕಾರವು ದಲಿತ, ದಲಿತೇತರರ ನಡುವಣ ವಿವಾಹಗಳಿಗೆ ಪ್ರೋತ್ಸಾಹಧನ ಜಾರಿ ಮಾಡಿತು. ನಂತರದಲ್ಲಿ ಅಂತರ್ಜಾತಿ ವಿವಾಹಿತರಿಗೆ ಶೇಕಡ 1ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿದ ರವಿವರ್ಮ ಕುಮಾರ್ ವರದಿ ಜಾರಿಯಾಗದೇ ಉಳಿದಿದೆ.
ಮೇಲ್ಮನೆಯ ಚರ್ಚೆಯ ಮಟ್ಟವನ್ನು ಮೇಲೇರಿಸುತ್ತಿದ್ದ ಹಲವರು ನೆನಪಾಗುತ್ತಾರೆ: ಟಿ.ಎನ್.ನರಸಿಂಹಮೂರ್ತಿ, ಎಂ.ಆರ್.ತಂಗಾ, ಡಿ.ಎಚ್. ಶಂಕರಮೂರ್ತಿ, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಎಚ್.ಕೆ. ಪಾಟೀಲ, ಎಲ್.ಹನುಮಂತಯ್ಯ, ವೈ.ಎಸ್.ವಿ.ದತ್ತ, ಬಿ.ಕೆ.ಚಂದ್ರಶೇಖರ್, ಬಿ.ಟಿ. ಲಲಿತಾನಾಯಕ್, ಮೋಟಮ್ಮ, ಉಗ್ರಪ್ಪ… ಹೀಗೆ ಮೊನ್ನೆ ಮೊನ್ನೆಯವರೆಗೂ ಪ್ರಖರ ಚರ್ಚೆಗಳನ್ನು ಹುಟ್ಟುಹಾಕಿದವರು ಇಲ್ಲಿದ್ದರು. ಬಿ.ಕೆ. ಹರಿಪ್ರಸಾದ್ ಕೂಡ ಈ ಪರಂಪರೆ ಮುಂದುವರಿಸಿದ್ದಾರೆ.
ಬಹುತೇಕ ರಾಜ್ಯಗಳು ವಿಧಾನಪರಿಷತ್ತನ್ನೇ ರದ್ದು ಮಾಡಿವೆ. ವಿಧಾನಪರಿಷತ್ತನ್ನು ಉಳಿಸಿಕೊಂಡಿರುವ ಏಳು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇಂಥ ಹಿರಿಮೆಯಿರುವ ಕರ್ನಾಟಕದಲ್ಲಿ ಮೇಲ್ಮನೆ ರಿಯಲ್ ಎಸ್ಟೇಟಿನವರ, ದುಡ್ಡುಳ್ಳವರ ಮನೆಯಾಗಬಾರದು. ಅದೇ ರೀತಿ, ಮೇಲ್ಮನೆ ಬರೀ ‘male’ ಮನೆಯಾಗದಂತೆ ಅಥವಾ ಮೇಲ್ವರ್ಗಗಳ ಮನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ರಾಜಕೀಯ ಪಕ್ಷಗಳ ಮೇಲಿದೆ.
ಜೂನ್ ಮೂರರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯನ್ನು ಗಮನಿಸಿ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಲು ತಾತ್ವಿಕವಾಗಿ ಒಪ್ಪಿರುವ ರಾಜ್ಯದ ಪ್ರಮುಖ ಮೂರು ಪಕ್ಷಗಳ ಪೈಕಿ ಯಾವ ಪಕ್ಷವೂ ಒಬ್ಬ ಮಹಿಳೆಗೂ ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ! ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯನ್ನು ಆಧರಿಸಿ ಟಿಕೆಟ್ ಕೊಡುವುದು ಸಹಜ. ಆದರೆ ಸುಶಿಕ್ಷಿತ ಮತದಾರರ ಕ್ಷೇತ್ರಗಳಲ್ಲಾದರೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅವಕಾಶ ಕೊಡುವಂತೆ ಒತ್ತಡ ತರುವ ಜವಾಬ್ದಾರಿ ಮತದಾರರ ಮೇಲೂ ಇರುತ್ತದೆ.
ಇಂಥ ಒತ್ತಾಯಗಳು ಈ ಚುನಾವಣೆಗಳ ಕಾಲ ದಲ್ಲಾದರೂ ಹುಟ್ಟಿದರೆ, ವಿಧಾನಸಭೆಯಿಂದ ಮೇಲ್ಮನೆಗೆ ‘ಶಾಸಕ’ರನ್ನು ಆಯ್ಕೆ ಮಾಡುವಾಗ ಹೆಚ್ಚಿನ ಸಂಖ್ಯೆಯ ‘ಶಾಸಕಿ’ಯರನ್ನು, ದನಿಯಿಲ್ಲದ ಜಾತಿಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂಬ ಒತ್ತಡ ಪಕ್ಷಗಳಲ್ಲಿ ಹುಟ್ಟಬಹುದು. ವೋಟು ಹಾಕಲು ಬೇಕಾದ ಈ ವರ್ಗಗಳು ಪ್ರಾತಿನಿಧ್ಯಕ್ಕೆ ಅಗತ್ಯವಿಲ್ಲ ಎಂಬ ಧೋರಣೆ ಅಮಾನವೀಯ. ವಿಧಾನಸಭೆಯಲ್ಲಿ ಪ್ರಾತಿನಿಧ್ಯವಿಲ್ಲದ ವಲಯಗಳಿಗೆ ಪರಿಷತ್ತಿನಲ್ಲಾದರೂ ಸ್ಥಾನ ಸಿಗುವಂತಾಗಬೇಕು. ಈ ವರ್ಗಗಳನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ಅರ್ಹರನ್ನು ಈ ವಲಯಗಳಿಂದಲೇ ಆಯ್ಕೆ ಮಾಡಬೇಕು.
ಜೂನ್ 13ರಂದು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಅವಕಾಶ ಬಯಸಿದ ಕೆಲವರು ಮೊನ್ನೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಆಗ ಸಿದ್ದರಾಮಯ್ಯ ಅವರು, ‘ಎಷ್ಟು ಜನಕ್ಕೆ ಅವಕಾಶ ಕೊಡೋದು? ನಮ್ಮ ಕಷ್ಟ ನಿಮಗೆ ಅರ್ಥವಾಗಲ್ಲ’ ಅಂದರು. ಅವರ ಈ ‘ಕಷ್ಟ’ಗಳ ಜೊತೆಗೆ ಸಾಮಾಜಿಕ ಪ್ರಾತಿನಿಧ್ಯದ ಹೊಸ ಕಷ್ಟವೂ ಸೇರಿಕೊಳ್ಳಲಿ, ಕೆಳಮನೆಯಲ್ಲಿ ಪ್ರಾತಿನಿಧ್ಯವಿರದ ಜಾತಿ, ವರ್ಗಗಳ ದನಿ ಮೇಲ್ಮನೆಯಲ್ಲಾದರೂ ಕೇಳುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.