2024ರ ಲೋಕಸಭಾ ಚುನಾವಣೆ ಎದುರಿಸಲು ಪಕ್ಷಗಳು ಸಜ್ಜಾಗಿವೆ, ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಪಕ್ಷಗಳು ಜನರ ಎದುರು ಹೋಗಲಿವೆ ಎಂಬುದೂ ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಕೆಟಿಂಗ್ ಕೌಶಲದಲ್ಲಿ ತರಬೇತಿ ಪಡೆದವರಲ್ಲ. ಆದರೆ ಜನಸಮೂಹದ ಆಸಕ್ತಿ ಕೆರಳಿಸಬಲ್ಲ ಸಾಮರ್ಥ್ಯ ಅವರಲ್ಲಿದೆ. ಎಂದಿಗೂ ಕುಂದದ ಶಕ್ತಿ ಅವರಲ್ಲಿದೆ. ಎದುರಾಳಿಗಳ ಮೇಲೆ ಹಠಾತ್ತನೆ ಎರಗುವ, ತಮ್ಮಲ್ಲಿನ ಎಲ್ಲ ಸಂಪನ್ಮೂಲಗಳನ್ನೂ ಬಳಸಿಕೊಳ್ಳುವ, ಯಾವುದೇ ಟೀಕೆಗಳು ತಮ್ಮ ಹಾದಿಗೆ ಅಡ್ಡವಾಗಿ ಬರದಂತೆ ನೋಡಿಕೊಳ್ಳುವ ಚಾಕಚಕ್ಯತೆ ಇದೆ. ರಾಮ ಮಂದಿರವನ್ನು ಉದ್ಘಾಟಿಸುವ ಘೋಷಣೆಯನ್ನು ಮೋದಿ ಅವರು ಮಾಡಿದ್ದಾರೆ. ಚುನಾವಣೆಯಲ್ಲಿ ಜನರ ಬೆಂಬಲ ಪಡೆಯಲು ರಾಮನ ಹೆಸರು ಬಳಕೆಯಾಗಲಿದೆ.
ಬಾಬರಿ ಮಸೀದಿ ಧ್ವಂಸದ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ರಾಮನ ಜಪವು ಬಿಜೆಪಿಗೆ ರಾಜಕೀಯವಾಗಿ ಲಾಭ ಆಗುವುದಿಲ್ಲ ಎಂದು ಯಾರಾದರೂ ಊಹಿಸಿದ್ದರೇ? ನಿರೀಕ್ಷೆಗಳು ಸುಳ್ಳಾದವು. ಮಂಡಲ್ ಆಯೋಗದ ವರದಿಯ ನಂತರದಲ್ಲಿ ಉದಯಿಸಿದ ಶಕ್ತಿಗಳ ಪರಿಣಾಮವಾಗಿ ಬಿಜೆಪಿಯ ಪ್ರಭಾವವು ಬಾಬರಿ ಮಸೀದಿ ಧ್ವಂಸದ ನಂತರದಲ್ಲಿ ಒಮ್ಮೆ ಉತ್ತರಪ್ರದೇಶದಲ್ಲಿಯೂ ಕುಗ್ಗಿತ್ತು. ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ನೇಪಥ್ಯಕ್ಕೆ ಸರಿದ ನಂತರದಲ್ಲಿ ಎಲ್.ಕೆ.ಅಡ್ವಾಣಿ ಅವರಿಗೆ ಪ್ರಧಾನಿ ಸ್ಥಾನ ಪಡೆಯಲು ರಾಮನಾಮ ನೆರವಿಗೆ ಬರಲಿಲ್ಲ. ಭಾರತದ ಅತ್ಯಂತ ಜನಪ್ರೀತಿಯ ಪ್ರಧಾನಿ ವಾಜಪೇಯಿ 2004ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದ ಮೈತ್ರಿಕೂಟ ಎದುರು ಸೋಲು ಅನುಭವಿಸಿದರು. ಸೋನಿಯಾ ಅವರು ವಿದೇಶಿ ಮೂಲದ ಮಹಿಳೆ ಎಂಬ ಮೂದಲಿಕೆಗೆ ಒಳಗಾಗಿದ್ದರೂ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನಕ್ಕೆ ತರುವ ಮೂಲಕ ಸತತ ಎರಡು ಅವಧಿಗೆ ದೇಶ ಆಳಿದರು.
ಆರ್‌ಎಸ್‌ಎಸ್ ನಿಯಂತ್ರಣದಲ್ಲಿ ಇರುವ ಬಿಜೆಪಿಯು 2014ರ ಲೋಕಸಭಾ ಚುನಾವಣೆಗೂ ಮೊದಲು, ಪಕ್ಷದ ಸಹಸಂಸ್ಥಾಪಕ ಅಡ್ವಾಣಿ ಅವರನ್ನು ತೆರೆಯ ಹಿಂದಕ್ಕೆ ಕಳುಹಿಸಿತು. ರಾಮ ಮಂದಿರ ನಿರ್ಮಿಸುವ ಭರವಸೆ ಇತ್ತು ಪಕ್ಷವನ್ನು ಬಡಿದೆಬ್ಬಿಸಿದ್ದವರು ಅಡ್ವಾಣಿ. ತಮಗೆ ಸೂಕ್ತ ಮಾನ್ಯತೆ ಸಿಗಲಿಲ್ಲ ಎಂದು ಅವರು ತಮ್ಮ ಮೇಲಿನ ವಿಶ್ವಾಸ ಕಳೆದುಕೊಂಡಿದ್ದರೇ? ಬಿಜೆಪಿಯು ಮೋದಿ ಅವರನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು. ಮೋದಿ ಅವರು ತಮ್ಮ ಚರಿಷ್ಮಾ, ತಮಗೆ ಇದ್ಧ ಸಮರ್ಥ ಆಡಳಿತಗಾರ ಎಂಬ ಹೆಸರು, ಬಲಿಷ್ಠ ಹಿಂದೂ ನಾಯಕ ಎಂಬ ಖ್ಯಾತಿ ಬಳಸಿಕೊಂಡು, ಕಾಂಗ್ರೆಸ್ ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳು ಪಾಲಿಸಿಕೊಂಡು ಬಂದಿದ್ದ ಮುಸ್ಲಿಂ ತುಷ್ಟೀಕರಣದ ರಾಜಕಾರಣವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿ ಪ್ರವರ್ಧಮಾನಕ್ಕೆ ಬಂದರು. ರಾಮ ಮಂದಿರದ ವಿಚಾರವು ತೆರೆಮರೆಯಲ್ಲಿ ಇತ್ತಾದರೂ ಮೋದಿ ಅವರು ಗೆಲುವು ಸಾಧಿಸಿದ್ದಕ್ಕೆ ಕಾರಣ ಅವರು ಒಳ್ಳೆಯ ಆಡಳಿತ ಹಾಗೂ ಅಭಿವೃದ್ಧಿಯ ಭರವಸೆ ನೀಡಿದ್ದು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಭರವಸೆಯು ಜನಮೂಹಕ್ಕೆ ಹತ್ತಿರವಾಯಿತು.
ಇಂದು ರಾಮ ಮಂದಿರವನ್ನು ಮೋದಿ ಅವರು ಹಿಂದೂಗಳಿಗೆ ನೀಡುತ್ತಿರುವ ಕೊಡುಗೆ ಎಂಬಂತೆ ಪ್ರಶಂಸಿಸಲಾಗುತ್ತಿದೆ. ಅಯೋಧ್ಯೆಗೆ ಬಂದಿಳಿದ ಮೊದಲ ವಿಮಾನ ಹಾಗೂ ಅಲ್ಲಿ ನಿರ್ಮಿಸಲಾಗಿರುವ ಹೊಸ ವಿಮಾನ ನಿಲ್ದಾಣವನ್ನು ಮೋದಿ ಅವರು ಪರಂಪರೆ ಹಾಗೂ ಅಭಿವೃದ್ಧಿ, ನಂಬಿಕೆ ಮತ್ತು ಆಧುನಿಕತೆಯ ಹಾದಿಯಲ್ಲಿ ಭಾರತ ಇರಿಸಿರುವ ದಾಪುಗಾಲನ್ನು ಸೂಚಿಸುತ್ತಿದೆ ಎಂದು ಹೇಳಿದ್ದಾರೆ.
ಮುಸ್ಲಿಮರ ಕುರಿತು ನಕಾರಾತ್ಮಕ ಚಿತ್ರಣ ಮುಂದಿಟ್ಟು ಹಿಂದೂಗಳ ಮತವನ್ನು ಒಗ್ಗೂಡಿಸುವ ತಂತ್ರಗಾರಿಕೆಯು ದೇಶದ ದಕ್ಷಿಣದಲ್ಲಿ ಕೆಲಸಕ್ಕೆ ಬಂದಿಲ್ಲ. ಪಂಜಾಬ್, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಕೂಡ ಕಳೆದ ಚುನಾವಣೆಗಳಲ್ಲಿ ಅದು ಕೆಲಸಕ್ಕೆ ಬಂದಿಲ್ಲ.
ರಾಹುಲ್ ಗಾಂಧಿ ಅವರು ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದು ರಾಮ ಮಂದಿರದ ಉದ್ಘಾಟನೆಗೂ ಮೊದಲು ಆರಂಭವಾಗಲಿದೆ. ಇದು 14 ರಾಜ್ಯಗಳಲ್ಲಿ ಸಂಚರಿಸಲಿದ್ದು, ಗುಜರಾತ್‌ನಲ್ಲಿ ಕೊನೆಗೊಳ್ಳಲಿದೆ. ಈ ಯಾತ್ರೆ ಕೂಡ ಹಿಂದಿನ ಭಾರತ್ ಜೋಡೊ ಯಾತ್ರೆಯ ರೀತಿಯಲ್ಲಿಯೇ ಜನರಲ್ಲಿ ಉತ್ಸಾಹ ಮೂಡಿಸುವಂತೆ ಇರಲಿದೆಯೇ? ಹಿಂದಿನ ಯಾತ್ರೆ ಬೀರಿದ್ದಂತಹ ಪರಿಣಾಮ ಬೀರಲಿದೆಯೇ? ಭಾರತ್ ಜೋಡೊ ಯಾತ್ರೆ ಆರಂಭಿಸಿದಾಗ ರಾಹುಲ್ ಅವರ ಬಗ್ಗೆ ಕೆಲವರು ಹಾಸ್ಯ ಮಾಡಿದ್ದರು. ಆದರೆ ಜನರ ಬಗ್ಗೆ ರಾಹುಲ್ ಹೊಂದಿರುವ ನಿಜವಾದ ಕಳಕಳಿಯು ಕೋಟ್ಯಂತರ ಹೃದಯಗಳನ್ನು ಗೆದ್ದುಕೊಂಡಿತು.
ಚೀನಾದಲ್ಲಿ ಮಾವೊ ಕ್ರಾಂತಿಗಾಗಿ ಯಾತ್ರೆ ನಡೆಸಿದ್ದರು, ಭಾರತದಲ್ಲಿ ಮಹಾತ್ಮ ಗಾಂಧಿ ಅಹಿಂಸೆಯ ಮಂತ್ರ ಜಪಿಸುತ್ತ ಬ್ರಿಟಿಷರ ಕಾನೂನುಗಳನ್ನು ವಿರೋಧಿಸಿ ಯಾತ್ರೆ ಕೈಗೊಂಡಿದ್ದರು. ಆಗ, ಸಮುದ್ರದಲ್ಲಿ ಭಾರಿ ಅಲೆಗಳು ಏಳುವಂತೆ ಜನಸ್ಪಂದನ ದೊರೆತಿತ್ತು. ರಾಹುಲ್ ಅವರು ನೀಡಲು ಮುಂದಾಗಿರುವ ಸಂದೇಶ ಏನು? ಇಂಡಿಯಾ ಮೈತ್ರಿಕೂಟ ಹಾಗೂ ಅದರ ಭಿನ್ನದನಿಯ ನಾಯಕರು ಎಲ್ಲಿದ್ದಾರೆ? ಮೋದಿ ಅವರ ವ್ಯಕ್ತಿತ್ವ, ಹಿಂದೂ ಮೊದಲು ಎಂಬ ಸಿದ್ಧಾಂತ ಹಾಗೂ ಭಾರತದ ಬಗ್ಗೆ ಅವರು ಹೊಂದಿರುವ ದೃಷ್ಟಿಕೋನಕ್ಕೆ ಪರ್ಯಾಯವಾಗಿ ಈ ನಾಯಕರು, ಜನರ ಹೃದಯದಲ್ಲಿ ಸ್ಥಾನ ಪಡೆಯುವಂತಹ ಬಲವಾದ ಸಂದೇಶ ನೀಡುತ್ತಿದ್ದಾರೆಯೇ?
ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜಯಪ್ರಕಾಶ ನಾರಾಯಣ ಅವರು ದೇಶದ ಜನರಿಗೆ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದಾಗ, ಇಡೀ ದೇಶ ಒಗ್ಗಟ್ಟಿನಿಂದ ಎದ್ದುನಿಂತಿತ್ತು. ಇಂದಿರಾ ಗಾಂಧಿ ಅವರು ಚುನಾವಣೆ ನಡೆಸಲು ಮುಂದಾದಾಗ ಜನತಾ ಪಕ್ಷ ಹಾಗೂ ಇತರ ಹಲವು ವಿರೋಧ ಪಕ್ಷಗಳು ಒಗ್ಗಟ್ಟಾದವು, ಇಂದಿರಾ ಅವರನ್ನು ಸೋಲಿಸಿದವು. ಉದ್ದೇಶದಲ್ಲಿ ಒಗ್ಗಟ್ಟು ಮೂಡಿದ್ದ ಪರಿಣಾಮವಾಗಿ ವಿರೋಧ ಪಕ್ಷಗಳು ಜಯ ಸಾಧಿಸಲು ಸಾಧ್ಯವಾಯಿತು. ಹಿಂದೆ ಇಂದಿರಾ ವಿರುದ್ಧ ಇದ್ದಂತಹ ಕೋಪದ ಅಲೆ ಮೋದಿ ಅವರ ವಿರುದ್ಧ ದೇಶದಾದ್ಯಂತ ಕಾಣಿಸುತ್ತಿದೆಯೇ? ಜನರು ‘ಇಂಡಿಯಾ’ ಮೈತ್ರಿಕೂಟದ ನಾಯಕರ ಹಿಂದೆ ಸಾಗಬೇಕು ಎಂದಾದರೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಅವರ ವಿರುದ್ಧ ಸೃಷ್ಟಿಯಾದಂತಹ ಜನಾಕ್ರೋಶ ಸೃಷ್ಟಿಯಾಗಬೇಕು. ಅದು, ಇಂದು ಕಂಡುಬರುತ್ತಿದೆಯೇ? ಅಂಥದ್ದೊಂದು ಆಕ್ರೋಶ ಇದೆ ಎಂದು ಭಾವಿಸುವುದು ಭ್ರಮೆಯಾದೀತು.
ಕಾಂಗ್ರೆಸ್ಸಿನಲ್ಲಿ ರಾಹುಲ್ ಗಾಂಧಿ ಅವರು ಈಗಲೂ ಹೈಕಮಾಂಡ್ ಆಗಿಯೇ ಮುಂದುವರಿದಿದ್ದಾರೆ. ರಾಹುಲ್ ಮತ್ತು ಅವರ ತಂಡವು ಈ ಸಂದರ್ಭದಲ್ಲಿ ಯಾತ್ರೆಯನ್ನು ಕೈಗೊಳ್ಳುವ ಬದಲು ತಮ್ಮ ಎಲ್ಲ ಶಕ್ತಿಯನ್ನು, ಸಮಯವನ್ನು ‘ಇಂಡಿಯಾ’ ಮೈತ್ರಿಕೂಟದ ನಾಯಕರ ಜೊತೆ ಸೀಟು ಹಂಚಿಕೆ ಸೂತ್ರ ಅಂತಿಮಗೊಳಿಸಲು ಕೆಲಸ ಮಾಡಬೇಕಲ್ಲವೇ? ಚುನಾವಣೆ ಎದುರಿಸಲು ಸಾಮಾನ್ಯ ಕನಿಷ್ಠ ಕಾರ್ಯಸೂಚಿ, ತಂತ್ರಗಾರಿಕೆ, ಜನರಿಗೆ ಎಲ್ಲರೂ ಒಟ್ಟಾಗಿ ರವಾನಿಸಬೇಕಿರುವ ಸಂದೇಶ ಏನು ಎಂಬುದನ್ನು ತೀರ್ಮಾನ ಮಾಡಬೇಕಲ್ಲವೇ? ಎಲ್ಲರೂ ಒಟ್ಟಾಗಿ ಕುಳಿತು ‘ಇಂಡಿಯಾ’ ಮೈತ್ರಿಕೂಟವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ತೀರ್ಮಾನಿಸಬೇಕು ಅಥವಾ ತಮ್ಮ ನಾಯಕನನ್ನು ಹೇಗೆ ಆಯ್ಕೆ ಮಾಡುತ್ತೇವೆ ಎಂಬುದನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಅಲ್ಲವೇ?
ಮೋದಿ ಅವರು ಪ್ರತಿಪಾದಿಸುವುದು ಏನು ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಬಲಿಷ್ಠ ಹಿಂದೂ ರಾಷ್ಟ್ರ, ಅಭಿವೃದ್ಧಿ ಹೊಂದಿದ ಹಾಗೂ ಮಿಲಿಟರಿ ದೃಷ್ಟಿಯಿಂದ ಶಕ್ತಿಯುತವಾದ ಭಾರತವನ್ನು ನಿರ್ಮಾಣ ಮಾಡುವುದು ಅವರ ಪ್ರತಿಪಾದನೆಗಳಲ್ಲಿ ಸೇರಿದೆ. ಆದರೆ, ಸಮಾಜದ ಎಲ್ಲ ವರ್ಗಗಳನ್ನೂ ಜೊತೆ ಸೇರಿಸಿಕೊಳ್ಳದೆ, ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರು ಇದನ್ನು ಸಾಧಿಸಬಲ್ಲರೇ ಎಂಬುದು ಚರ್ಚೆಗೆ ಅರ್ಹವಾದ ವಿಚಾರ. ‘ಇಂಡಿಯಾ’ ಮೈತ್ರಿಕೂಟ ಪ್ರತಿಪಾದಿಸುತ್ತಿರುವುದು ಏನು ಎಂಬುದು ಯಾರಿಗಾದರೂ ಗೊತ್ತಿದೆಯೇ? ತುರ್ತು ಪರಿಸ್ಥಿತಿಯ ನಂತರದಲ್ಲಿ ಇಂದಿರಾ ಗಾಂಧಿ ಅವರನ್ನು ವಿರೋಧಿಸುವುದು ಮಾತ್ರವೇ ಅವರನ್ನು ಸೋಲಿಸಲು ಸಾಕಾಗಿತ್ತು. ಆದರೆ ಜಯಪ್ರಕಾಶ ನಾರಾಯಣ ಅವರಂತಹ ನಾಯಕ ಇಲ್ಲದಿರುವಾಗ, ಮೋದಿ ಅವರನ್ನು ವಿರೋಧಿಸಿದ ಮಾತ್ರಕ್ಕೆ ಜಯ ಸಿಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.