ಟಿ.ವಿ. ವಾಹಿನಿಯೊಂದರ ಸಂದರ್ಶನ ಮುಗಿಸಿ ಹೊರಬಂದಾಗ ಒಬ್ಬ ಅಭಿಮಾನಿ ಹೇಳಿದ ಮಾತು ‘ಮೇಡಂ, ನಿಮ್ಮ ಸಂದರ್ಶನ ನೋಡಿ ಕನ್ನಡ ಮೀಡಿಯಂ ಪಾಠ ಕೇಳಿದ ಹಾಗೆ ಆಯ್ತು. ಈಗ ಪೂರ್ತಿಯಾಗಿ ಕನ್ನಡ ಮಾತಾಡುವವರು ಸಿಕ್ತಾರಾ ಅಂತ ಹುಡುಕೋ ಕಾಲ’. ಹೆಮ್ಮೆ, ಸಂತಸ ಎನಿಸುವ ಬದಲು ಖೇದ, ಅಚ್ಚರಿಯಾಯಿತು. ನಮ್ಮ ಮಾತೃಭಾಷೆಯನ್ನೇ ‘ಪೂರ್ತಿಯಾಗಿ’ ಮಾತನಾಡಲಾಗದ ಸ್ಥಿತಿ ಬಂದಿದೆ ಎಂಬ ನೋವು.
ವೃತ್ತಿಜೀವನದಲ್ಲಿ ಮೊನ್ನೆ ಹಳ್ಳಿಯ ಹೆಣ್ಣುಮಗಳೊಬ್ಬಳು ಬಂದು ಹೇಳಿದ್ದು ‘ವಾಮಿಟ್ಟಾಗ್ತಿದೆ ಡಾಕ್ಟ್ರೇ’. ನಾನು ಅದೆಷ್ಟು ಬಾರಿ ವಾಂತಿಯ ವಿವರ ಕೇಳಿದಾಗ್ಯೂ ಆಕೆ ಮಾತ್ರ ಮಾತಾಡಿದ್ದು ತನ್ನ ‘ವಾಮಿಟ್ಟಿ’ನ ಬಗೆಗೇ. ಒಂದೂ ಇಂಗ್ಲಿಷ್ ಪದ ಉಪಯೋಗಿಸದೆ, ಅಚ್ಚ ಕನ್ನಡದಲ್ಲಿ ಮಾತನಾಡಿದೆವೆಂದರೆ ಜನ ‘ಅರ್ಥವಾಗುತ್ತಿಲ್ಲ’ ಎನ್ನುವಷ್ಟು, ನಮ್ಮ ಮಕ್ಕಳು ಕಣ್ಣರಳಿಸಿ ‘ಅರ್ಥವಾಗ್ತಿಲ್ಲ, ಸರಿಯಾಗಿ ಹೇಳು’ ಎನ್ನುವಷ್ಟು ನಮ್ಮನ್ನು ‘ಜಾಗತಿಕ ಭಾಷೆ’ಯಾದ ಇಂಗ್ಲಿಷ್ ಆವರಿಸಿದೆ!
ಬಾಂಗ್ಲಾದೇಶವು ಬಂಗಾಲಿ ಭಾಷೆಯೇ ತನ್ನ ಕೇಂದ್ರ ಭಾಷೆ ಆಗಿರಬೇಕು ಎಂದು ‘ಏಕುಶೆ ಫೆಬ್ರುವರಿ’ಯಂದು (ಫೆ. 21) ಹಟ ಹಿಡಿದು ಭಾಷಾ ಆಂದೋಲನ ನಡೆಸಿದ್ದು, ಹಲವರು ಪ್ರಾಣ ತೆತ್ತಿದ್ದು, ಪಾಕಿಸ್ತಾನವು ವಿಭಜನೆಯಾಗಿ ಬಾಂಗ್ಲಾದೇಶ ಆಗಲು ಇದು ಪ್ರಮುಖ ಕಾರಣವಾದದ್ದು ಇಂದು ಇತಿಹಾಸ. ಆ ಇತಿಹಾಸದ ತುಣುಕೇ ಈಗ ಯುನೆಸ್ಕೊ ಪ್ರತಿವರ್ಷ ಆಚರಿಸುತ್ತಿರುವ ಫೆಬ್ರುವರಿ 21ರ ‘ಅಂತರರಾಷ್ಟ್ರೀಯ ಮಾತೃಭಾಷಾ ದಿನ’. 2000ನೇ ಇಸವಿಯಿಂದ ಪ್ರತಿವರ್ಷ ನಡೆಯುತ್ತಿರುವ ಮಾತೃಭಾಷಾ ದಿನ ಸಾಂಸ್ಕೃತಿಕ- ಭಾಷಾ ವೈವಿಧ್ಯವನ್ನು ಉಳಿಸಲು ಶ್ರಮಿಸುತ್ತಿದೆ. ಮತ್ತೆ ಮತ್ತೆ ನಮ್ಮನ್ನು ಎಚ್ಚರಿಸುತ್ತಿದೆ. ಮಲ್ಟಿಲಿಂಗ್ವಲ್ ಎಜುಕೇಷನ್ ಈಸ್ ಎ ಪಿಲ್ಲರ್ ಆಫ್ ಇಂಟರ್‌ಜನರೇಷನಲ್ ಲರ್ನಿಂಗ್– ಬಹುಭಾಷಾ ಶಿಕ್ಷಣ ಎಂಬುದು ತಲೆಮಾರಿನಿಂದ ತಲೆಮಾರಿಗೆ ನಡೆಯುವ ಕಲಿಕೆಯಲ್ಲಿ ಮುಖ್ಯ ಆಧಾರಸ್ತಂಭ ಎಂಬುದು ಈ ಬಾರಿಯ ಧ್ಯೇಯ.
ಅಜ್ಜ-ಅಜ್ಜಿ ಹಾಗೂ ಇತರರಿಂದ ಮಕ್ಕಳು ಅನೌಪಚಾರಿಕವಾಗಿ ಕಲಿಯುವ ವಿವಿಧ ವಿಷಯಗಳ ಜ್ಞಾನವು ಮಾತೃಭಾಷೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಸಂಸ್ಕೃತಿಯನ್ನು ದಾಟಿಸುತ್ತದೆ, ಬೆಳೆಸುತ್ತದೆ ಮತ್ತು ಉಳಿಸುತ್ತದೆ ಎನ್ನುವುದು ಇದರ ಸಾರಾಂಶ.
ಭಾಷೆಗಳು ಸತ್ತು ಹೋಗುತ್ತಿವೆ! ಬಹು ವೇಗವಾಗಿ! ಪ್ರತಿ 14 ದಿನಗಳಿಗೊಂದು ಭಾಷೆ ಜಗತ್ತಿನಲ್ಲಿ ನಶಿಸಿಹೋಗುತ್ತಿದೆ. ಕೈತೋಟಕ್ಕೆ ನನ್ನ ಅಮ್ಮ ಮತ್ತು ಮಗನೊಂದಿಗೆ ಕಾಲಿಟ್ಟೆ ಎಂದರೆ, ಅಮ್ಮ ಅಲ್ಲಿರುವ ಹತ್ತು ಹಲವು ಗಿಡ, ಹೂವುಗಳ ಹೆಸರು ಹೇಳಬಲ್ಲರು. ನಾನು ಕೆಲವನ್ನು ಗುರುತಿಸಬಲ್ಲೆ. ನನ್ನ ಮಗನಿಗೆ ಗೊತ್ತಿರುವ ಹೆಸರುಗಳು ಬಲು ಕಡಿಮೆ. ನನ್ನಮ್ಮನಿಗೆ ಗಿಡಗಳ ಹೆಸರಷ್ಟೇ ಅಲ್ಲ, ಅವುಗಳ ಉಪಯೋಗ, ಔಷಧಿಯಾಗಿ ಅವುಗಳ ಬಳಕೆ, ಯಾವುದನ್ನು ತಿನ್ನುವಂತಿಲ್ಲ ಎಲ್ಲವೂ ಗೊತ್ತು. ನನಗೆ, ನನ್ನ ಮಗನಿಗೆ ಪುಸ್ತಕದ ಜ್ಞಾನ ಮಾತ್ರ ಗೊತ್ತು! ಆ ಪುಸ್ತಕದ ಜ್ಞಾನದಿಂದ ನನಗೆ ಗೊತ್ತಿರುವ ಕಿಂಚಿತ್ ಅನ್ನು ‘ಜಗತ್ತು’ ಎಂದು ನಾವಂದುಕೊಂಡಿರುವ ಜನಕ್ಕೆ ತಿಳಿಸಲು ಇಂದಿನ ಜಾಗತಿಕ ಭಾಷೆ ‘ಇಂಗ್ಲಿಷ್’ ಬೇಕು! ಆದರೆ ಇದು ನಮ್ಮ ಗ್ರಹಿಕೆ ಮಾತ್ರ, ಅರ್ಧ ಸತ್ಯ ಮಾತ್ರ. ಅದನ್ನೇ ಸತ್ಯವೆಂದು ನಾವು ನಂಬಿ ಇತರ ಭಾಷೆಗಳನ್ನು, ಇಂಗ್ಲಿಷ್ ಗೊತ್ತಿದ್ದರೂ ತಮ್ಮ ಮಾತೃಭಾಷೆಯನ್ನು ಅಭಿಮಾನದಿಂದ ಮಾತನಾಡುವ ನನ್ನಮ್ಮನಂತಹ ಜನರಲ್ಲಿ ಇರುವ ಅಗಾಧ ಜ್ಞಾನವನ್ನು ಮೂಲೆಗೆ ಸರಿಸುತ್ತಿದ್ದೇವೆ.
ತನ್ನ ಮಾತೃಭಾಷೆಯನ್ನು ಬಹುವಾಗಿ ಗೌರವಿಸುವ ಜಪಾನ್‍ನಲ್ಲಿ ಪ್ರತಿ ವಿಶ್ವವಿದ್ಯಾಲಯದಲ್ಲಿಯೂ ಭಾಷಾಂತರಕ್ಕೆಂದೇ ಇಲಾಖೆಯಿದೆ. ವಿಜ್ಞಾನದಲ್ಲಿ ಯಾವ ನಿಯತಕಾಲಿಕವಾದರೂ ಸರಿಯೇ, ಅದು ಹೊರಬಂದ ಕೆಲವೇ ದಿನಗಳಲ್ಲಿ ಅದರ ಜಪಾನಿ ಅವತರಣಿಕೆ ವಿಜ್ಞಾನಿಗಳಿಗೆ ಲಭ್ಯ. ಅಂದರೆ, ನಮಗೆ ಜ್ಞಾನ ಬೇಕೆಂದರೆ ನಾವು ನಮ್ಮ ಮಾತೃಭಾಷೆಯನ್ನು ಬಿಡಬೇಕು, ಇಂಗ್ಲಿಷ್ ರೂಢಿಸಿಕೊಳ್ಳಬೇಕು ಎನ್ನುವುದು ನಿಜವಲ್ಲ. ಹಾಗೆ ನೋಡಿದರೆ, ತಿಳಿವನ್ನು, ಮಾಹಿತಿಯನ್ನು ಪಡೆಯುವಲ್ಲಿ ಭಾಷೆ ಒಂದು ಮಾಧ್ಯಮ ಮಾತ್ರ. ಆದರೆ ಮಾತೃಭಾಷೆಯನ್ನು ಕಲಿಯುವುದು, ಮಾತನಾಡುವುದು ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ಒಂದು ಭಾಷೆ ನಶಿಸುವಾಗ ಅದು ಒಂದು ಸಂಸ್ಕೃತಿಯನ್ನೂ ತನ್ನೊಡನೆ ಒಯ್ಯುತ್ತದೆ. ಒಂದಿಡೀ ಜ್ಞಾನಕೋಶ ಇಲ್ಲವಾಗುತ್ತದೆ!
ಹೀಗೆ ಮಾತೃಭಾಷೆಯನ್ನು ಜನ ತಮ್ಮ ದಿನನಿತ್ಯದ ಭಾಷೆಯಾಗಿ ಆರಿಸಿಕೊಳ್ಳದಿರುವುದಕ್ಕೆ ಹಲವು ಸಂಕೀರ್ಣ ಅಂಶಗಳು ಕಾರಣವಾಗುತ್ತವೆ. ಜಾಗತಿಕ ಭಾಷೆಯಾಗಿ ಇಂಗ್ಲಿಷ್ ರೂಪುಗೊಂಡಿರುವುದರ ಹಿಂದಿನ ಅಂಶಗಳೂ ಇದಕ್ಕೆ ಸಂಬಂಧಿಸಿದವೇ ಆಗಿವೆ. ಇಂಗ್ಲಿಷ್ ಭಾಷೆ ಅಂದಾಕ್ಷಣ ಅದು ನಮ್ಮ ಮನಸ್ಸಿನಲ್ಲಿ ಒಡನೆ ಮೂಡಿಸುವ ಕಲ್ಪನೆಗಳು ಸುಲಭ, ಹೆಚ್ಚು ಅವಕಾಶಗಳು, ಸಾಮಾಜಿಕ ಗುರುತಿಸುವಿಕೆ, ಒಳ್ಳೆಯ ಉದ್ಯೋಗ... ಚೀನಾದಲ್ಲಿ ‘ಗಾಓಕೋ’ ಎಂಬ ಪರೀಕ್ಷೆಯನ್ನು 8 ಕೋಟಿ ಪ್ರೌಢಶಾಲಾ ವಿದ್ಯಾರ್ಥಿಗಳು ಬರೆಯುತ್ತಾರೆ. ಇದನ್ನು ತೇರ್ಗಡೆಯಾಗಲು ವಿದ್ಯಾರ್ಥಿಯೊಬ್ಬಳು ದಿನಕ್ಕೆ 12 ಗಂಟೆಗಳ ಕಾಲ ಓದಬೇಕು. ಅದರಲ್ಲಿ ಶೇಕಡ 25ರಷ್ಟು ಅಂಕ ಇಂಗ್ಲಿಷ್ ಭಾಷೆಯ ಪಾಲು. ಅಂದರೆ ಇಂಗ್ಲಿಷ್ ಕಲಿಯಲು ಕಷ್ಟಪಟ್ಟಷ್ಟು, ಚೀನೀ ಭಾಷೆಯನ್ನು ಉಳಿಸಿಕೊಳ್ಳಲು ಅವರು ಕಿಂಚಿತ್ ಗಮನ ನೀಡುವುದೂ ಕಷ್ಟ ಎನ್ನುತ್ತವೆ ಅಧ್ಯಯನಗಳು.
ಹಾಗಿದ್ದರೆ ಇಂಗ್ಲಿಷ್‍ನ ಮೇಲೇ ಎಲ್ಲ ದೂಷಣೆಯನ್ನೂ ಹೊರಿಸಬೇಕೇ? ಜಗತ್ತಿನ ಎರಡನೇ ಭಾಷೆಯಾಗಿ ಇಂಗ್ಲಿಷ್ ಮೆರೆಯಲಿ. ಆದರೆ ನಮ್ಮ ಮಾತೃಭಾಷೆ ನಮ್ಮ ಜೀವನ ಎಂಬ ಸತ್ಯವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಅಮೆರಿಕ, ಇಂಗ್ಲೆಂಡ್ ದೇಶಗಳು ನಾವು ಇಂಗ್ಲಿಷ್ ಕಲಿಯುವಂತೆ ಮಾಡಿ, ನಮ್ಮ ಮೇಲೆ ಇಂಗ್ಲಿಷ್ ಹೇರಿವೆ ಎನ್ನುವುದು ನಿಜವಲ್ಲ. ಅವು ನಮ್ಮ ಮೇಲೆ ಹೇರುತ್ತವೆ ಎನ್ನುವುದಕ್ಕಿಂತ, ಜಗತ್ತು ಎಳೆದು ಅದನ್ನು ತನ್ನ ತಲೆಯ ಮೇಲೆ ಹೊತ್ತುಕೊಳ್ಳುತ್ತಿದೆ ಎನ್ನುವುದೇ ಸರಿ.
ಜಗತ್ತಿಗೆ ಹಲವು ಸಾರ್ವತ್ರಿಕ ಭಾಷೆಗಳಿವೆ. ವಿಜ್ಞಾನದ ಭಾಷೆಯಾಗಿ ಗಣಿತವಿದೆ. ಹಲವು ಸಂಕೇತಗಳಿವೆ; ಭಾವನೆಗಳಿಗೆ ಶಬ್ದ ನೀಡುವ ಸಂಗೀತವೆಂಬುದೂ ವಿಶ್ವಭಾಷೆಯೇ. ಗಣಿತ-ವಿಜ್ಞಾನ-ಸಂಗೀತವನ್ನು ಉಳಿಸಿಕೊಂಡು, ಮುಂದುವರಿಸಿಕೊಂಡು ಬಂದರೂ ಶತಶತಮಾನಗಳ ಕಾಲ ಭಾಷೆಗಳ ವೈವಿಧ್ಯ ಉಳಿದುಕೊಂಡೇ ಬಂದಿತ್ತಷ್ಟೆ. ಅಂದಮೇಲೆ ಇಂಗ್ಲಿಷ್ ಬರಲೆಂದು, ಬರಬೇಕೆಂದು ಅಥವಾ ಬಂದೀತೆಂದು ನಾವು ಮಾತೃಭಾಷೆಯನ್ನು ದೂರ ಸರಿಸಬೇಕಿಲ್ಲ.
ಮಾತೃಭಾಷಾ ಪರಿಣತಿ ಇತರ ಭಾಷೆಗಳಲ್ಲಿ ಪರಿಣತಿಯನ್ನು ಸುಲಭ, ಸುಗಮವಾಗಿಸುತ್ತದೆ ಎಂಬುದು ಅಧ್ಯಯನಗಳಿಂದ ನಿರೂಪಿತವಾದ ಸತ್ಯ. ಅಷ್ಟೇಅಲ್ಲ, ಇತರ ಭಾಷೆಗಳಲ್ಲಿ ಸೃಜನಶೀಲ ಅಭಿವ್ಯಕ್ತಿಯನ್ನೂ ಅದು ಸಾಧ್ಯವಾಗಿಸುತ್ತದೆ ಎಂಬುದಕ್ಕೆ ನಮ್ಮೆದುರೇ ನಿದರ್ಶನಗಳಿವೆ. ಕನ್ನಡದಲ್ಲಂತೂ ಮರಾಠಿ ಮಾತೃಭಾಷೆಯಾಗಿದ್ದ ಬೇಂದ್ರೆ, ತಮಿಳು ಮನೆಮಾತಾಗಿದ್ದ ಮಾಸ್ತಿ, ಕೊಂಕಣಿ ಮನೆಮಾತಾಗಿದ್ದ ಗಿರೀಶ್ ಕಾರ್ನಾಡರು ಕನ್ನಡದಲ್ಲಿ ಜ್ಞಾನಪೀಠ ಪಡೆದದ್ದನ್ನು ನೋಡಿದ್ದೇವೆ. ಖಲೀಲ್ ಗಿಬ್ರಾನ್ ತನ್ನ ತತ್ತ್ವ-ಕಲ್ಪನೆಗಳ ಮೂಲವನ್ನು ಹಳ್ಳಿಯ ಅರೇಬಿಕ್ ಸಂಸ್ಕೃತಿ- ಭಾಷೆಗಳಲ್ಲಿ ಗುರುತಿಸುತ್ತಾನೆ. ನಂತರ ಇಂಗ್ಲಿಷ್‍ನಲ್ಲಿ ಬರೆದರೂ, ಅದು ವಿಶೇಷ ಎನಿಸಿಕೊಂಡಿದ್ದಕ್ಕೆ ತನ್ನ ಮೂಲವೇ ಕಾರಣ ಎಂದು ಒಪ್ಪಿಕೊಳ್ಳುತ್ತಾನೆ.
ಒಂದು ದೇಶವನ್ನು ಕೊಲ್ಲಬೇಕೆಂದರೆ, ಅದರ ಭಾಷೆಯನ್ನು ಕೊಲ್ಲಬೇಕಂತೆ, ಅದರ ಜನರನ್ನಲ್ಲ! ತಮ್ಮ ಭಾಷೆಯನ್ನು ಅತಿಯಾಗಿ ಪ್ರೀತಿಸುವ, ಅದನ್ನು ಸಂರಕ್ಷಿಸುವ ದೊಡ್ಡ ಮೊತ್ತದ ಹಣ ವ್ಯಯಿಸುವ ಜರ್ಮನಿ, ಫ್ರಾನ್ಸ್ ಮತ್ತು ಜಪಾನ್ ಸಮಾಜಗಳಿಗೆ ಇದರ ಅರಿವಿದೆ. ಹಾಗಾಗಿಯೇ ಅವರು ಮೇಲೆ ಮೇಲೆ ಹತ್ತುವಾಗ, ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತುವಾಗ ತಮ್ಮ ಭಾಷೆಯನ್ನೂ ಜತನದಿಂದ ಒಯ್ಯುತ್ತಾರೆ, ಉಳಿಸುತ್ತಾರೆ. ನಮ್ಮದೇ ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳವೂ ಈ ವಿಷಯದಲ್ಲಿ ಮಾತೃಭಾಷಾ ಪ್ರೀತಿ ಹೊಂದಿರುವಂತಹವೇ. ಎಷ್ಟೇ ಒಳ್ಳೆಯ ಇಂಗ್ಲಿಷ್ ಬರುತ್ತಿರಲಿ, ಎಂತಹ ಅಂತರರಾಷ್ಟ್ರೀಯ ಸಮ್ಮೇಳನವೇ ಆಗಿರಲಿ, ಮತ್ತೊಬ್ಬ ಮಲಯಾಳಿ ಎದುರು ಸಿಕ್ಕರೆ ಮಲಯಾಳಂ ಮಾತು ಅಲ್ಲಿ ಕೇಳದೇ ಇರುವುದಿಲ್ಲ.
ದೈನಂದಿನ ಜೀವನದಲ್ಲಿ ಕನ್ನಡವನ್ನು ಬಳಸುವ ಸುಲಲಿತ ಮಾರ್ಗವನ್ನು ನಾವು ಆರಿಸಿಕೊಳ್ಳಬೇಕಾಗಿದೆ. ಮಕ್ಕಳೊಡನೆ ಮಾತನಾಡುವಾಗ ಕನ್ನಡವನ್ನು ಮಾತನಾಡುವ ಅಭ್ಯಾಸ ನಮಗೆ ಬೇಕೇ ಬೇಕು. ವೇದಿಕೆಯ ಮೇಲೆ ಭಾಷಣ ಮಾಡುವಾಗ ಯಾರಾದರೊಬ್ಬರು ಆಯ್ಕೆಯಿಂದಲೇ ಕನ್ನಡದಲ್ಲಿ ಭಾಷಣ ಮಾಡಬಹುದು. ಸರಾಗವಾಗಿ ಇಂಗ್ಲಿಷ್ ಬರುತ್ತಿದ್ದೂ ಕನ್ನಡದಲ್ಲಿ ಮಾತನಾಡಲು ಸಾಧ್ಯವಿದೆ ಎಂಬುದನ್ನು ಸಹಜ ಸಂಗತಿ ಎಂದು ಒಪ್ಪಿಕೊಳ್ಳಬೇಕಾಗಿದೆ. ಕಷ್ಟಪಟ್ಟು ಇಂಗ್ಲಿಷ್ ಕಲಿಯುವ ಮಕ್ಕಳು, ಅದರೊಂದಿಗೆ ಮಾತೃಭಾಷೆಯಲ್ಲಿ ಪರಿಣತಿ ಹೊಂದಿರುವುದು ತಮಗೆ ಮುಂದೆ ಅನಂತ ಸಾಧ್ಯತೆ, ಅವಕಾಶಗಳನ್ನು ತೆರೆಯುತ್ತದೆ ಎಂದು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
************
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.