ADVERTISEMENT

ವಿಶ್ಲೇಷಣೆ: ಸುಸ್ಥಿರ ಕೃಷಿಯಿಂದ ಮಾಲಿನ್ಯ ತಡೆ

ಈ ಕಾರ್ಯಕ್ಕೆ ಪೂರಕವಾದ ತಂತ್ರಜ್ಞಾನ ರೂಪಿಸುವುದು ಆದ್ಯತೆಯಾಗಬೇಕು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 0:36 IST
Last Updated 25 ಜುಲೈ 2024, 0:36 IST
<div class="paragraphs"><p>ವಿಶ್ಲೇಷಣೆ</p></div>

ವಿಶ್ಲೇಷಣೆ

   

ಈ ವರ್ಷದ ಜೂನ್ ತಿಂಗಳಿನಲ್ಲಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯೊಂದು ಐರ್ಲೆಂಡ್‌ ರೈತರನ್ನು ಕೆರಳಿಸಿತ್ತು. ಮುಂದಿನ ಮೂರು ವರ್ಷಗಳಲ್ಲಿ ಎರಡು ಲಕ್ಷ ಹಸುಗಳನ್ನು ವಧೆ ಮಾಡುವ ಉದ್ದೇಶದ ಆದೇಶವೊಂದನ್ನು ಹೊರಡಿಸಲು ಸರ್ಕಾರವು ಗುಟ್ಟಾಗಿ ಮಾಡಿಕೊಂಡ ತಯಾರಿಯ ಸುದ್ದಿಯು ಮಾಧ್ಯಮಗಳಿಗೆ ಸೋರಿಕೆ ಆಗಿಬಿಟ್ಟಿತ್ತು.

ವಧೆಗೆ ಒಳಗಾಗುವ ಹಸುಗಳ ಪರಿಹಾರಾರ್ಥವಾಗಿ ದೊಡ್ಡ ಮಟ್ಟದ ಹಣ ನೀಡುವುದಾಗಿ ಸರ್ಕಾರವು ರೈತರಿಗೆ ಭರವಸೆ ನೀಡುವುದರಲ್ಲಿತ್ತು. ಜಾನುವಾರು ವಧೆಯ ಮಾಹಿತಿ ಸೋರಿಕೆಯಾಗಿ ಜನರಿಗೆ ತಿಳಿದದ್ದೇ ತಡ, ಭಾರಿ ಪ್ರತಿಭಟನೆ ವ್ಯಕ್ತವಾಯಿತು. ಜನರ ಆಕ್ರೋಶಕ್ಕೆ ಮಣಿದ ಸರ್ಕಾರ ಸದ್ಯಕ್ಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ‘ನಾವಿನ್ನೂ ಲೆಕ್ಕ ಹಾಕುತ್ತಿದ್ದೇವೆ. ವಧಿಸುತ್ತೇವೆ ಎಂದು ಎಲ್ಲಿ ಆದೇಶ ಮಾಡಿದ್ದೇವೆ? ಯಾಕೀ ಪ್ರತಿಭಟನೆ?’ ಎಂದು ತಿಪ್ಪೆ ಸಾರಿಸಿ ಕೈ ತೊಳೆದುಕೊಂಡಿದೆ.

ADVERTISEMENT

ಸಾಕಿದ ದನ–ಕರುಗಳಿಂದ ಹೊಮ್ಮುವ ಮೀಥೇನ್, ವಾತಾವರಣದ ಶಾಖವನ್ನು ತ್ವರಿತಗತಿಯಲ್ಲಿ ಏರಿಸುತ್ತಿದೆ ಎಂಬ ಅಂಶದ ಆಧಾರದ ಮೇಲೆ ಜಾನುವಾರುಗಳ ವಧೆಗೆ ಯೋಜಿಸಿದ್ದ ಐರ್ಲೆಂಡ್‌ ಸರ್ಕಾರವು ರೈತರ ಪ್ರತಿಭಟನೆಗೆ ಹೆದರಿ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ.

ಜಗತ್ತಿನಾದ್ಯಂತ ಜಾರಿಯಲ್ಲಿರುವ, ಚಾಲ್ತಿಯಲ್ಲಿರುವ ಕೃಷಿ ಪದ್ಧತಿಗಳಿಂದ ವಾಯುಗುಣ ಹದಗೆಡುತ್ತಿದೆ ಎಂಬ ಹೇಳಿಕೆ ವಿಶ್ವ ವೇದಿಕೆಗಳಲ್ಲಿ ಪ್ರಕಟಗೊಳ್ಳಲು ಶುರುವಾಗಿ ಒಂದು ದಶಕವೇ ಕಳೆದಿದೆ. ಆರ್ಥಿಕ ಸುಧಾರಣೆ ಬಯಸುತ್ತಿರುವ ದೇಶಗಳಲ್ಲಿ ಕೃಷಿ ಮತ್ತು ಜಾನುವಾರು ಸಾಕಣೆ ಮುಖ್ಯ ಚಟುವಟಿಕೆಯಾಗಿದೆ. ಜನರಿಗೆ ಅನ್ನ, ಬಟ್ಟೆ, ವಸತಿ ಕಲ್ಪಿಸುವಲ್ಲಿ ಕೃಷಿ ವಲಯ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರದ ಬಳಕೆ ನಡೆಯುವುದರಿಂದ ಭೂಮಿಯ ಸತ್ವ ನಾಶವಾಗಿ ನೆಲ, ಜಲ ಮಾಲಿನ್ಯ ಎರಡೂ ಏಕಕಾಲಕ್ಕೆ ಸಂಭವಿಸುತ್ತಿವೆ. ಕೋಟ್ಯಂತರ ಸಂಖ್ಯೆಯಲ್ಲಿರುವ ಜಾನುವಾರುಗಳು ತಮ್ಮ ತೇಗು ಮತ್ತು ಸಗಣಿಯ ಮೂಲಕ ಅತ್ಯಧಿಕ ಪ್ರಮಾಣದ ಮೀಥೇನ್ ಹೊಮ್ಮಿಸುತ್ತಿರುವುದು ನಿಜವಾದ್ದರಿಂದ ಅದನ್ನು ನಿಯಂತ್ರಿಸಲೇಬೇಕಿದೆ.

ಆದ್ದರಿಂದ ಉನ್ನತ ಆರ್ಥಿಕ ಆದಾಯವಿರುವ ದೇಶಗಳೀಗ ಕೃಷಿ ಕ್ಷೇತ್ರದ ಕಡೆ ಹೆಚ್ಚಿನ ಗಮನ ಹರಿಸಲು ಶುರುಮಾಡಿವೆ. ಕೃಷಿಯಿಂದ ಹೊಮ್ಮುತ್ತಿರುವ ಶಾಖವರ್ಧಕ ಅನಿಲಗಳನ್ನು ಹೇಗಾದರೂ ಮಾಡಿ ನಿಯಂತ್ರಿಸಲೇಬೇಕೆಂದು ವಿವಿಧ ಯೋಜನೆಗಳನ್ನು ರೂಪಿಸುತ್ತಿವೆ. ಆಹಾರ ಭದ್ರತೆಯನ್ನು ಕಾಪಾಡುತ್ತಲೇ ಕೃಷಿ ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ತೊಡೆಯುವ ನಿರ್ಧಾರ ಮಾಡಿರುವ ಮುಂದುವರಿದ ದೇಶಗಳು, ಜಾನುವಾರುಗಳ ವಧೆಗೂ ಕೈ ಹಾಕಿರುವುದು ಈಗ ವಿವಾದ ಸೃಷ್ಟಿಸಿದೆ.

ವಾಸ್ತವದಲ್ಲಿ ನಮ್ಮ ಕೃಷಿ ಪದ್ಧತಿಗಳಿಂದ ಭೂಮಿಯ ವಾತಾವರಣಕ್ಕೆ ಶಾಖವರ್ಧಕ ಅನಿಲಗಳು ಸೇರ್ಪಡೆಯಾಗುತ್ತಿರುವುದು ನಿಜ. ಸಾಧಾರಣ ಕಾರ್ಬನ್ ಡೈ ಆಕ್ಸೈಡ್‌ಗಿಂತ ನಲವತ್ತು ಪಟ್ಟು ಅಪಾಯಕಾರಿಯಾಗಿರುವ ಮೀಥೇನ್‌ನ ನಿಯಂತ್ರಣ ಆಗಲೇಬೇಕು ಮತ್ತು ಸಾರಜನಕಯುಕ್ತ ರಸಗೊಬ್ಬರಗಳಿಂದ ಹೊಮ್ಮುವ ನೈಟ್ರಸ್ ಆಕ್ಸೈಡ್‌ ಭೂಮಿಯ ಬಿಸಿ ಹೆಚ್ಚಿಸುವ ಪ್ರಮುಖ ಶಾಖವರ್ಧಕ ಅನಿಲವಾಗಿದ್ದು, ಅದರ ನಿಯಂತ್ರಣಕ್ಕೂ ಕ್ರಮ ವಹಿಸಬೇಕಿದೆ. ಪಳೆಯುಳಿಕೆ ಇಂಧನದಿಂದ ಹೊಮ್ಮುವ ಮೀಥೇನ್, ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡನ್ನು (ಇಂಡೈ) ಸೇರಿಸುತ್ತದೆ. ತಜ್ಞರು ಮೀಥೇನ್ ಅನಿಲವನ್ನು ‘ಶಾರ್ಟ್‌ ಲಿವ್ಡ್ ಪಲ್ಯೂಟೆಂಟ್’ ಎಂದು ಕರೆದಿದ್ದಾರೆ. ನೈಸರ್ಗಿಕವಾಗಿ ತರಿ ಭೂಮಿ, ಕೆರೆ ಕುಂಟೆ, ಜೊಂಡು ತುಂಬಿದ ಹೊಂಡ, ಹಸಿರು ಮೇಯುವ ಪ್ರಾಣಿ ಹಾಗೂ ಗೆದ್ದಲುಗಳಿಂದ ಮತ್ತು ತೈಲ- ಅನಿಲ ಬಾವಿ, ಕೃಷಿ ಮೂಲಗಳಿಂದ ಮೀಥೇನ್ ಹೊಮ್ಮುತ್ತದೆ.

ವಾತಾವರಣದಲ್ಲಿರುವ ಮೀಥೇನ್‌ನ ಆಯಸ್ಸು ಬರೀ 12 ವರ್ಷಗಳಾದರೆ, ಇಂಡೈ 200 ವರ್ಷಗಳವರೆಗೂ ನಮ್ಮ ನಡುವೆಯೇ ಇದ್ದು ತೊಂದರೆ ಕೊಡುತ್ತದೆ. ಇಂಡೈಗಿಂತ ಮೀಥೇನ್ 84 ಪಟ್ಟು ಹೆಚ್ಚು ಪ್ರಮಾಣದಲ್ಲಿ ಭೂಮಿಯ ಬಿಸಿಯನ್ನು ಹಿಡಿದಿಡುವುದರಿಂದ ಅದನ್ನು ‘ಸೂಪರ್ ವಾರ್ಮರ್’ ಎಂದು ಕರೆಯುತ್ತಾರೆ. ದಾಖಲೆಗಳ ಪ್ರಕಾರ, ಕೃಷಿಯಿಂದ ಶೇ 40, ಪಳೆಯುಳಕೆ (ಫಾಸಿಲ್) ಇಂಧನಗಳಿಂದ ಶೇ 35 ಮತ್ತು ತ್ಯಾಜ್ಯದಿಂದ ಶೇ 20ರಷ್ಟು ಮೀಥೇನ್ ಹೊರಬರುತ್ತಿದೆ. ‘ವರ್ಲ್ಡ್ ಮೀಥೇನ್ ಅಸೆಸ್ಮೆಂಟ್’ ಪ್ರಕಾರ, ಕಲ್ಲಿದ್ದಲು ಗಣಿ, ತೈಲ ಮತ್ತು ಅನಿಲ ಬಾವಿಗಳಿಂದ ಸೋರುವ ಮೀಥೇನನ್ನು ಹಿಡಿದಿಟ್ಟರೆ ಭಾರಿ ಪ್ರಮಾಣದ ಮೀಥೇನ್ ಮಾಲಿನ್ಯ ತಡೆಯಬಹುದು.

ಮೀಥೇನ್ ನಿಯಂತ್ರಣಕ್ಕಾಗಿ– ಕೃಷಿ ಕ್ಷೇತ್ರದಿಂದ ಹೊಮ್ಮುವ ಮೀಥೇನ್ ನಿಯಂತ್ರಿಸಲು ಈಗಾಗಲೇ ಎರಡು ವಿಶ್ವ ಮಟ್ಟದ ಒಪ್ಪಂದಗಳಾಗಿವೆ, ಒಡಂಬಡಿಕೆಗಳಾಗಿವೆ. ಅಮೆರಿಕದ ಎನ್‌ವಿರಾನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಲೆಕ್ಕಾಚಾರದ ಪ್ರಕಾರ, ವಿಶ್ವದ ಶಾಖವರ್ಧಕ ಅನಿಲಗಳ ಪೈಕಿ ಮೀಥೇನ್‌ನ ಪಾಲು ಶೇ 16ರಷ್ಟಿದ್ದರೆ, ನೈಟ್ರಸ್ ಆಕ್ಸೈಡ್‌ನ ಪಾಲು ಶೇ 6ರಷ್ಟಿದೆ. 2021ರ ಜಾಗತಿಕ ಮೀಥೇನ್‌ ಒಡಂಬಡಿಕೆಗೆ ವಿಶ್ವದ 149 ದೇಶಗಳು ಸಹಿ ಮಾಡಿವೆ. ಇನ್ನೈದು ವರ್ಷಗಳಲ್ಲಿ ಮೀಥೇನ್ ಹೊಮ್ಮುವಿಕೆಯನ್ನು ಶೇ 25ರಷ್ಟು ಕಡಿಮೆ ಮಾಡುತ್ತೇವೆ ಎಂದು ಸಹಿ ಮಾಡಿರುವ ದೇಶಗಳು, ಕಡಿತವಾದ ನಂತರ ವಾತಾವರಣದ ಮೀಥೇನ್‌ನ ಪ್ರಮಾಣ 2020ರಲ್ಲಿ ಇದ್ದಷ್ಟು ಇರುತ್ತದೆ ಎಂದಿವೆ.

ಐರೋಪ್ಯ ದೇಶಗಳು ‘ಗ್ರೀನ್ ಡೀಲ್’ ಎಂಬ ಒಡಂಬಡಿಕೆ ಮಾಡಿಕೊಂಡಿದ್ದು, 2030ರ ವೇಳೆಗೆ ಶೇ 55ರಷ್ಟು ಶಾಖವರ್ಧಕ ಅನಿಲಗಳನ್ನು ನಿಯಂತ್ರಿಸುವ ನಿರ್ಧಾರ ಮಾಡಿವೆ. ಅಲ್ಲದೆ ಪ್ರಕೃತಿ ಪುನರ್‌ಸ್ಥಾಪನಾ ಕಾನೂನಿನಂತೆ (ನೇಚರ್ ರೆಸ್ಟೊರೇಷನ್ ಲಾ) ಯುರೋಪಿನ ನೆಲದ ಶೇ 20ರಷ್ಟು ಭಾಗವನ್ನು ಹಸಿರಿನಿಂದ ಸಮೃದ್ಧಗೊಳಿಸುತ್ತೇವೆ ಎಂದಿವೆ.

ಮೇಲಿನ ಒಪ್ಪಂದಗಳಂತೆ ಶಾಖವರ್ಧಕ ಅನಿಲಗಳನ್ನು ನಿಯಂತ್ರಿಸಲು ದೇಶಗಳು ಮಾಡುತ್ತಿರುವ ಕೆಲಸಗಳಿಂದ ನಿರೀಕ್ಷಿತ ಫಲ ಅಷ್ಟು ಸುಲಭವಾಗಿ ಸಿಗುವುದಿಲ್ಲ ಎನ್ನುತ್ತಾರೆ ತಜ್ಞರು. ಜಾನುವಾರುಗಳು ರೈತರ ಬಹುದೊಡ್ಡ ಆದಾಯದ ಮೂಲ ಎಂಬುದನ್ನು ಸರ್ಕಾರಗಳು ಮರೆಯಬಾರದು, ಅದನ್ನು ಮರೆತು ಅವುಗಳನ್ನು ವಧಿಸುತ್ತೇವೆ ಎನ್ನುವುದು ಬೇಜವಾಬ್ದಾರಿತನದ ಪರಮಾವಧಿ ಎನ್ನುತ್ತಾರೆ.

ಐರೋಪ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸೀತಾವಾನ್ ಕಿಂಪೆಮಾ ‘2022ರಲ್ಲಿ ಕೃಷಿ ಕ್ಷೇತ್ರವು ಶೇ 65ರಷ್ಟು ಸಾರಜನಕ ಹೊಮ್ಮುವಿಕೆಯನ್ನು ಕಡಿತಗೊಳಿಸಿತ್ತು. ಆದರೆ ಸರಕು ಸಾಗಣೆ ಮತ್ತು ಔದ್ಯೋಗಿಕ ರಂಗಗಳಿಂದ ಅಂಥ ಯಾವ ಕೊಡುಗೆಯೂ ಇರಲಿಲ್ಲ. ಅವರಿಗೆ ಸಂಪೂರ್ಣ ವಿನಾಯಿತಿ ನೀಡಿ, ಭೂಮಿಯ ಬಿಸಿ ಏರಲು ಕೃಷಿ ಪದ್ಧತಿಗಳೇ ಕಾರಣ ಎನ್ನುವವರು ಇದನ್ನೇಕೆ ಗಮನಿಸುತ್ತಿಲ್ಲ ಎಂದು ಕೇಳುತ್ತಾರೆ. ಕೃಷಿಯಿಂದ ಮಾತ್ರ ಮೀಥೇನ್ ಹೊಮ್ಮುತ್ತಿಲ್ಲ, ಪಳೆಯುಳಿಕೆ ಇಂಧನ ಬಳಕೆಯಿಂದಲೂ ಮೀಥೇನ್ ಯಥೇಚ್ಛವಾಗಿ ಹೊಮ್ಮುತ್ತಿರುವುದು ಯಾಕೆ ಕಾಣಿಸುತ್ತಿಲ್ಲ ಎಂದು ಸಿಟ್ಟಿಗೇಳುವ ಸೀತಾವಾನ್, ಕೃಷಿಗೆ ಖಳನಾಯಕನ ಪಟ್ಟ ಕಟ್ಟುತ್ತಿರುವುದು ಸರಿಯಲ್ಲ ಎನ್ನುತ್ತಾರೆ.

ಮೀಥೇನ್‌ನಲ್ಲಿ ಬಯೊಜೆನಿಕ್ ಮತ್ತು ಪಳೆಯುಳಿಕೆ ಎಂಬ ಎರಡು ವಿಧಗಳಿವೆ. ಗಿಡ– ಮರ ಮತ್ತು ಪ್ರಾಣಿಗಳಿಂದ ಉದಿಸುವ ಮೀಥೇನ್ ಬಯೊಜೆನಿಕ್ ಎನಿಸಿದರೆ, ಲಕ್ಷಾಂತರ ವರ್ಷಗಳಿಂದ ಭೂಮಿಯ ಅಡಿ ಬಂದಿಯಾಗಿರುವುದು ಪಳೆಯುಳಿಕೆ ಎನಿಸುತ್ತದೆ. ಜೈವಿಕ ಮೀಥೇನ್ ವಾತಾವರಣದಲ್ಲಿ ಹತ್ತು ವರ್ಷಗಳ ಕಾಲ ಇರುತ್ತದೆ ಮತ್ತು ಅಂತಿಮವಾಗಿ ಇಂಡೈ ಆಗಿ ಬದಲಾಗಿ ಸಸ್ಯಗಳನ್ನು ಸೇರುತ್ತದೆ. ಮೇವಿನ ಮೂಲಕ ಪ್ರಾಣಿಗಳ ಹೊಟ್ಟೆ ಸೇರುತ್ತದೆ. ನಂತರ ಪ್ರಾಣಿಗಳ ತೇಗು ಮತ್ತು ಸಗಣಿಯ ಮೂಲಕ ವಾತಾವರಣಕ್ಕೆ ವಾಪಸ್ ಸೇರುತ್ತದೆ. ಜಾನುವಾರುಗಳು ಇರುವವರೆಗೂ ಈ ಚಕ್ರ ಸುತ್ತುತ್ತಲೇ ಇರುತ್ತದೆ.

ಕೃಷಿಯಿಂದ ಹೊಮ್ಮುವ ಶಾಖವರ್ಧಕ ಅನಿಲಗಳನ್ನು ನಿಯಂತ್ರಿಸಿ ನೈಸರ್ಗಿಕ ಪ್ರದೇಶಗಳನ್ನು ಕಾಪಾಡಲು ವಿಶ್ವದಾದ್ಯಂತ ಇರುವ ರೈತರ ನೆರವಿಗೆ ನಿಲ್ಲಲೇಬೇಕಾದ ಅನಿವಾರ್ಯ ಇದೆ. ಆಹಾರದ ವಿಷಯದಲ್ಲಿ ದನದ ಮಾಂಸೋದ್ಯಮ ಅತಿಹೆಚ್ಚಿನ ಶಾಖವರ್ಧಕ ಅನಿಲಗಳನ್ನು ಹೊರಸೂಸುತ್ತದೆ. ಅದಕ್ಕೆ ಸಿಗುತ್ತಿರುವ ಹಣಕಾಸಿನ ಬೆಂಬಲ ಕಡಿಮೆಯಾಗಬೇಕು ಎಂಬುದು ತಜ್ಞರ ಮಾತು.

ವಿಶ್ವದಲ್ಲಿ ಈಗ 140 ಕೋಟಿ ಜಾನುವಾರುಗಳಿವೆ. ಹೆಚ್ಚು ಜಾನುವಾರು, ಹೆಚ್ಚು ಮಾಂಸ ಉತ್ಪಾದನೆ ಸಮಸ್ಯೆ ಅಲ್ಲ. ಸಾಕಣೆ ಮತ್ತು ಉತ್ಪಾದನಾ ವಿಧಾನಗಳು ಸುಸ್ಥಿರ ಅಭಿವೃದ್ಧಿ ಮಾದರಿಗೆ ಹೊಂದುತ್ತಿಲ್ಲ. ಈಗಿರುವ ತಂತ್ರಜ್ಞಾನ ಅದಕ್ಕೆ ಪೂರಕವಾಗಿಲ್ಲ. ವಿಜ್ಞಾನ ಇಲ್ಲಿ ತನ್ನ ಶಕ್ತಿಯನ್ನು ತೋರಿಸಬೇಕು. ಸುಸ್ಥಿರ ಕೃಷಿಗೆ ಬೇಕಾದ ತಂತ್ರಜ್ಞಾನವನ್ನು ರೂಪಿಸುವುದು ಆದ್ಯತೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.