ADVERTISEMENT

ವಿಶ್ಲೇಷಣೆ | ಹಿಮಾಲಯದ ಮಾತು ಆಲಿಸಬೇಕಿದೆ

ಹಿಮಾಲಯವೆಂದರೆ ಸ್ಥಳಗಳಷ್ಟೇ ಅಲ್ಲ; ಅದು ಅಲ್ಲಿನ ಜನರನ್ನೂ ಒಳಗೊಳ್ಳುತ್ತದೆ

ಯೋಗೇಂದ್ರ ಯಾದವ್
Published 18 ಅಕ್ಟೋಬರ್ 2024, 0:01 IST
Last Updated 18 ಅಕ್ಟೋಬರ್ 2024, 0:01 IST
   

ಸೋನಮ್ ವಾಂಗ್ಚುಕ್ ಅವರು ಲೇಹ್‌ನಿಂದ ದೆಹಲಿಯವರೆಗೆ ನಡೆಸಿದ ಐತಿಹಾಸಿಕ ಪಾದಯಾತ್ರೆಯು ರಾಮಮನೋಹರ ಲೋಹಿಯಾ ಅವರು ಹೇಳಿದ್ದ ‘ಹಿಮಾಲಯ ನೀತಿ’ಯೊಂದು ಭಾರತಕ್ಕೆ ಅಗತ್ಯವಿದೆ ಎಂಬುದನ್ನು ನೆನಪಿಸಿಕೊಡಬೇಕಿದೆ. ಭಾರತ–ಚೀನಾ ಗಡಿಗೆ ಸನಿಹದ ಪ್ರಜೆಗಳ ಒಂದು ಗುಂಪು ಒಂದು ತಿಂಗಳಲ್ಲಿ ಸರಿಸುಮಾರು 1,000 ಕಿ.ಮೀ. ನಡೆದು ತಮ್ಮ ರಾಷ್ಟ್ರದ ರಾಜಧಾನಿಗೆ ಬಂದಾಗ, ಅವರ ಮಾತು ಆಲಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ಆದರೆ, ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆಯನ್ನು (ಈಗ ಬಿಎನ್‌ಎಸ್‌ಎಸ್‌ ಸೆಕ್ಷನ್‌ 163) ಹೇರಿ, ಕಾರಣವಿಲ್ಲದೆ ವಶಕ್ಕೆ ಪಡೆದು, ಲಡಾಖ್ ಭವನದಲ್ಲಿ ಅನಧಿಕೃತವಾಗಿ ಬಂಧಿಸಿ, ಉಪವಾಸ ಸತ್ಯಾಗ್ರಹಕ್ಕೆ ಸ್ಥಳ ನೀಡಲು ನಿರಾಕರಿಸುವ ಮೂಲಕ ಅವರನ್ನು ಸ್ವಾಗತಿಸಲಾಯಿತು.

ಲಡಾಖ್‌ನ ಜನರ ಪ್ರತಿಭಟನೆಯು ಲೇಹ್‌ ಸರ್ವೋಚ್ಚ ಸಂಘಟನೆ ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಒಕ್ಕೂಟದ ನಾಯಕತ್ವದಲ್ಲಿ ತಿಂಗಳುಗಳಿಂದ ನಡೆಯುತ್ತಿದೆ. ಆದರೆ ಅದು ರಾಷ್ಟ್ರಮಟ್ಟದಲ್ಲಿ ಅಗತ್ಯ ಗಮನವನ್ನು ಸೆಳೆದಿಲ್ಲ. ಲಡಾಖ್‌ನಲ್ಲಿನ ಪ್ರತಿಭಟನೆಯು ಹಿಮಾಲಯ ಪ್ರದೇಶದಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವಂತೆ ಕಾಣುವ ಹಲವು ಪ್ರತಿಭಟನೆಗಳ ಪೈಕಿ ಒಂದು. ಆದರೆ ಈ ಪ್ರತಿಭಟನೆಗಳನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳಬೇಕಿದೆ: ಸಂವಿಧಾನದ 370ನೇ ವಿಧಿಯ ಅಡಿ ನೀಡಿದ್ದ ವಿಶೇಷ ಸ್ಥಾನಮಾನ ಇಲ್ಲವಾದ ನಂತರದ ಕಾಶ್ಮೀರ, ಉತ್ತರಾಖಂಡದಲ್ಲಿನ ಭಾರಿ ಭೂಕುಸಿತ, ನೇಪಾಳದ ಆಡಳಿತದಲ್ಲಿನ ಬದಲಾವಣೆ, ಸಿಕ್ಕಿಂನಲ್ಲಿ ಹಠಾತ್ ಪ್ರವಾಹ, ಭೂತಾನ್‌ ದೇಶ ಚೀನಾಕ್ಕೆ ಹತ್ತಿರವಾಗುತ್ತಿರುವುದು, ಅಸ್ಸಾಂನಲ್ಲಿ ಎನ್‌ಪಿಆರ್ ಸಮಸ್ಯೆ, ಮಣಿಪುರದ ನಾಗರಿಕ ಸಂಘರ್ಷ... ಇವುಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಿಮಾಲಯ ಪ್ರದೇಶಕ್ಕೆ ಸೇರಿದ ರಾಜ್ಯಗಳ ಸಮಸ್ಯೆಗಳ ನಡುವಿನ ಅಂತರ್‌ ಸಂಬಂಧವನ್ನು ಗುರುತಿಸಿ ಸಮಗ್ರವಾದ ದೃಷ್ಟಿಕೋನವನ್ನು ಹೊಂದಬೇಕು ಎಂದು ಲೋಹಿಯಾ ಅವರು 70 ವರ್ಷಗಳ ಹಿಂದೆ ಹೇಳಿದ್ದರು. ಪಶ್ಚಿಮದಲ್ಲಿ ಪಖ್ತೂನಿಸ್ತಾನದಿಂದ ಪೂರ್ವದಲ್ಲಿ ಬರ್ಮಾವರೆಗೆ ಚಾಚಿಕೊಂಡಿರುವ ಹಿಮಾಲಯ ಪರ್ವತ ಪ್ರದೇಶದ ಜನರ ವಿಚಾರದಲ್ಲಿ ತಾರ್ಕಿಕ
ವಾದ, ಪ್ರಜಾತಾಂತ್ರಿಕವಾದ ದೃಷ್ಟಿಕೋನವನ್ನು ಭಾರತ ರೂಪಿಸಿಕೊಳ್ಳಬೇಕು ಎಂದು ಅವರು ಬಯಸಿದ್ದರು.

ಸ್ವಾತಂತ್ರ್ಯ ದೊರೆತ ಆರಂಭದ ವರ್ಷಗಳಲ್ಲಿ, ಚೀನಾದ ಆಕ್ರಮಣದ ಭೀತಿ ಇದ್ದಾಗ, ಹಿಮಾಲಯದ ನೀತಿಗಳ ರಾಜಕೀಯ ಆಯಾಮಗಳ ವಿಚಾರದಲ್ಲಿ ಲೋಹಿಯಾ ಪ್ರಮುಖವಾಗಿ ಕಳವಳ ಹೊಂದಿದ್ದರು. ಅವರು ಭಾರತದಲ್ಲಿನ ಹಾಗೂ ಭಾರತದ ಹೊರಗಿನ ಹಿಮಾಲಯ ಪ್ರದೇಶದ ಜನರ ಪ್ರಜಾತಾಂತ್ರಿಕ ಹಕ್ಕುಗಳ ಪರವಾಗಿ ಇದ್ದರು. ಟಿಬೆಟ್ ಮತ್ತು ನೇಪಾಳದ ಜನರು ಅಲ್ಲಿನ ಆಡಳಿತಗಾರರ ವಿರುದ್ಧ ನಡೆಸುತ್ತಿದ್ದ ಹೋರಾಟಗಳಿಗೆ ಭಾರತ ಬೆಂಬಲ ನೀಡುವುದರ ಪರ ಇದ್ದರು, ಕಾಶ್ಮೀರದ ಬಂಡುಕೋರರ ಜೊತೆ ಪ್ರಜಾತಾಂತ್ರಿಕವಾಗಿ ಮಾತುಕತೆ ನಡೆಸಬೇಕು ಎನ್ನುತ್ತಿದ್ದರು, ಈಶಾನ್ಯ ರಾಜ್ಯಗಳಲ್ಲಿ ಆದಿವಾಸಿಗಳನ್ನು ಇತರರಿಂದ ಭೌತಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರತ್ಯೇಕಿಸಬೇಕು ಎನ್ನುವ ವೆರಿಯರ್ ಎಲ್ವಿನ್ ನೀತಿಯನ್ನು ವಿರೋಧಿಸಿದ್ದರು.

ADVERTISEMENT

ಆದರೆ, ಚೀನಾದ ವಿಸ್ತರಣಾವಾದ ಹಾಗೂ ಭಾರತದ ವಿಚಾರದಲ್ಲಿ ಅದು ಹೊಂದಿದ್ದ ಆಕ್ರಮಣಕಾರಿ ಧೋರಣೆಯ ವಿಚಾರದಲ್ಲಿ ಕುರುಡಾಗಿದ್ದ ನೆಹರೂ ಅವರ ನೀತಿಗಳಿಗೆ ಸಂಬಂಧಿಸಿದಂತೆ ಲೋಹಿಯಾ ತೀಕ್ಷ್ಣವಾದ ಭಿನ್ನಾಭಿಪ್ರಾಯ ಹೊಂದಿದ್ದರು. ಹಿಮಾಲಯ ನೀತಿಗಳಿಗೆ ಸಂಬಂಧಿಸಿದ ಲೋಹಿಯಾ ಚಿಂತನೆಗಳು ಹಲವು ಹಂತಗಳಲ್ಲಿ ಜನರನ್ನು ಒಂದುಗೂಡಿಸುವ ಮಾತುಗಳನ್ನಾಡುತ್ತವೆ. ಹಿಮಾಲಯ ಪ್ರದೇಶದ ಬೇರೆ ಬೇರೆ ರಾಜ್ಯಗಳ ಜನರ ನಡುವೆ ಒಗ್ಗಟ್ಟು, ಗಡಿ ಪ್ರದೇಶಗಳಲ್ಲಿ ಭಾರತದ ಜನರು ಹಾಗೂ ನೆರೆಯ ದೇಶಗಳ ಜನರ ನಡುವೆ ಒಗ್ಗಟ್ಟು, ಹಿಮಾಲಯ ಪ್ರದೇಶದ ಸಂಸ್ಕೃತಿ ಹಾಗೂ ಸಮಾಜವು ಭಾರತದ ಇತರ ಕಡೆಗಳ ಜೊತೆ ಒಗ್ಗಟ್ಟು ಸಾಧಿಸಬೇಕು ಎಂಬುದು ಅವರ ಆಲೋಚನೆಯಾಗಿತ್ತು. ಹಿಮಾಲಯ ಪ್ರದೇಶದ ಆಚೆಗಿನ ಪ್ರಮುಖರ ಪೈಕಿ ಬಹಳ ಕಡಿಮೆ ಮಂದಿಯಲ್ಲಿ (ಬಹುಶಃ ರಾಹುಲ ಸಾಂಕೃತ್ಯಾಯನ ಹಾಗೂ ಕೃಷ್ಣನಾಥ್ ಅವರನ್ನು ಹೊರತುಪಡಿಸಿ) ಲೋಹಿಯಾ ಅವರಲ್ಲಿ ಇದ್ದಂತಹ ನಿಲುವು ಇತ್ತು.

ಹಿಮಾಲಯ ಪ್ರದೇಶದ ಬಗ್ಗೆ ಗಮನ ನೀಡಬೇಕಾದ ಅಗತ್ಯವಿದೆ ಎಂಬುದಷ್ಟನ್ನೇ ವಾಂಗ್ಚುಕ್ ಮತ್ತು ಅವರ ಸಂಗಡಿಗರು ಹೇಳುತ್ತಿಲ್ಲ. ನಮ್ಮ ಕಾಲಘಟ್ಟಕ್ಕೆ ಹಿಮಾಲಯ ನೀತಿ ಯಾವ ಅರ್ಥ ನೀಡಬೇಕು ಎಂಬ ಬಗ್ಗೆ ನಮ್ಮ ಅರಿವನ್ನು ಕೂಡ ಅವರು ಹೆಚ್ಚುಮಾಡುತ್ತಿದ್ದಾರೆ. ಲಡಾಖ್‌ಗೆ ಪ್ರಜಾತಾಂತ್ರಿಕ ಆಡಳಿತವನ್ನು ಅವರು ಕೇಳುತ್ತಿದ್ದಾರೆ. ತಮ್ಮಿಂದ ಆಯ್ಕೆಯಾದ ಹಾಗೂ ತಮಗೆ ಉತ್ತರದಾಯಿ ಆದ ಸರ್ಕಾರ ಬೇಕು ಎಂದು ಅಲ್ಲಿನ ಜನ ಬಯಸುತ್ತಿದ್ದಾರೆ. ಲಡಾಖ್‌ನ ಜನಸಂಖ್ಯೆ ಸರಿಸುಮಾರು 3 ಲಕ್ಷ ಮಾತ್ರ. ಅಯೋಧ್ಯೆ ಅಥವಾ ಹಿಸಾರ್‌ನಂತಹ ಸಣ್ಣ ನಗರದಲ್ಲಿರುವಷ್ಟು ಜನಸಂಖ್ಯೆ ಇದು. ಆದರೆ ಲಡಾಖ್‌ನ ವಿಸ್ತೀರ್ಣ 59 ಸಾವಿರ ಚದರ ಕಿ.ಮೀ. ಇದು ಜಮ್ಮು ಮತ್ತು ಕಾಶ್ಮೀರಕ್ಕಿಂತ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನ ಒಟ್ಟು ವಿಸ್ತೀರ್ಣಕ್ಕಿಂತ ದೊಡ್ಡದು. ಈ ಪ್ರದೇಶಕ್ಕೆ ಇಬ್ಬರು ಸಂಸದರು ಏಕಿರಬಾರದು,
ರಾಜ್ಯಸಭೆಯಲ್ಲಿ ಒಂದು ಪ್ರಾತಿನಿಧ್ಯ ಏಕಿರಬಾರದು?

ಲಡಾಖ್‌ಗೆ ಸಂವಿಧಾನದ ಆರನೆಯ ಪರಿಚ್ಛೇದದ ಅಡಿ ಹೆಚ್ಚಿನ ಸ್ಥಾನಮಾನ ನೀಡಬೇಕು ಎಂಬ ಪ್ರಧಾನ ಬೇಡಿಕೆಯನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ. ಇದು ದೊರೆತರೆ, ಭಿನ್ನ ಆದಿವಾಸಿ ಸಮುದಾಯಗಳು ಇರುವ ಅಲ್ಲಿನ ಎಂಟೂ ಜಿಲ್ಲೆಗಳಿಗೆ ತಮ್ಮದೇ ಆದ ಸ್ವಾಯತ್ತ ಜಿಲ್ಲಾ ಮಂಡಳಿಗಳನ್ನು ರಚಿಸಿಕೊಳ್ಳಲು, ಆಂತರಿಕ ಆಡಳಿತಕ್ಕೆ ಉತ್ತರದಾಯಿತ್ವ ಹೊಂದಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಣ್ಣದಾದ ಆದಿವಾಸಿ ಸಮುದಾಯಗಳಿಗೆ ಕೂಡ ತಮ್ಮ ಸಂಸ್ಕೃತಿ ಮತ್ತು ಅಸ್ಮಿತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಬಿಜೆಪಿಯು ಇದನ್ನು ತನ್ನ ಪ್ರಣಾಳಿಕೆಯಲ್ಲಿ ಭರವಸೆ ರೂಪದಲ್ಲಿ ನೀಡಿತ್ತು.

ಅವರ ಚಳವಳಿಯು ರಾಜಕೀಯ ಬೇಡಿಕೆಗಳಿಗೆ ಸೀಮಿತವಾಗಿಲ್ಲ. ಅವರು ಸ್ಥಳೀಯರಿಗೆ ಜಮೀನು, ಉದ್ಯೋಗ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕೇಳುತ್ತಿದ್ದಾರೆ. ಅನಿಯಂತ್ರಿತವಾದ ಜಲವಿದ್ಯುತ್ ಯೋಜನೆಗಳನ್ನು ಅವರು ವಿರೋಧಿಸುತ್ತಿದ್ದಾರಾದರೂ ‘ಅಭಿವೃದ್ಧಿ’ಗೆ ಅವರ ವಿರೋಧವಿಲ್ಲ. ವಾಂಗ್ಚುಕ್ ಅವರು ಎಂಜಿನಿಯರಿಂಗ್ ಪದವೀಧರ. ಅವರು ಅಭಿವೃದ್ಧಿಯಲ್ಲಿ ಪಾಲು ಕೊಡಿ ಎಂದಷ್ಟೇ ಕೇಳುತ್ತಿಲ್ಲ, ಅಭಿವೃದ್ಧಿಯ ಹೊಸ ಮಾದರಿಯನ್ನು ಅವರು ಬಯಸುತ್ತಿದ್ದಾರೆ. 

ವಾಂಗ್ಚುಕ್ ಅವರ ಉಪವಾಸವನ್ನು ಇತರ ಪ್ರತಿಭಟನೆಗಳಿಗಿಂತ ಭಿನ್ನವಾಗಿಸುವುದೇ ಇದು. ತಮ್ಮ ಜನರ ಪರವಾಗಿ ವಾಂಗ್ಚುಕ್ ಅವರು ಸಕಾರಣಗಳಿಂದ ಕೂಡಿದ ರಾಜಕೀಯ ಬೇಡಿಕೆಗಳನ್ನು ಇರಿಸಿದ್ದಾರೆ. ಆಕ್ರಮಣಕಾರಿ ಧೋರಣೆ ತಳೆಯದೆಯೇ ಅವರು ದೃಢವಾದ ನಿಲುವು ತಾಳಿದ್ದಾರೆ. ಹೀಗಾಗಿಯೇ ಅವರನ್ನು ನಿಭಾಯಿಸುವುದು ಹೇಗೆ ಎಂಬುದು ದೆಹಲಿ ಪೊಲೀಸರಿಗೆ ಅರ್ಥವಾಗುತ್ತಿಲ್ಲ. ಬಹಳ ಎತ್ತರದ ವ್ಯಕ್ತಿತ್ವದವರಾಗಿ ಕಾಣುತ್ತಿರುವ ವಾಂಗ್ಚುಕ್, ಅಧಿಕಾರದ ಕೇಂದ್ರಗಳಿಗೆ ಅಭಿವೃದ್ಧಿಯ ಪರ್ಯಾಯ ನೋಟವನ್ನು, ಶಿಕ್ಷಣಕ್ಕೆ ಹೊಸ ಆಯಾಮವನ್ನು, ಇಂಧನದ ಬಗ್ಗೆ ಹೊಸ ದೃಷ್ಟಿಕೋನ
ವನ್ನು ನೀಡುತ್ತಿದ್ದಾರೆ. 

ಹಿಮಾಲಯ ನೀತಿ ಎಂಬುದು ಲೋಹಿಯಾ ಕಾಲಘಟ್ಟದಲ್ಲಿ ಹೊಸ ಪರಿಕಲ್ಪನೆ ಆಗಿತ್ತು. ಆದರೆ ಇದು ಈಗ ಅಕಡೆಮಿಕ್ ಹಾಗೂ ಸಾಮಾಜಿಕ ಕಾರ್ಯಕರ್ತರ ವಲಯದಲ್ಲಿ ಪರಿಚಿತವಾಗಿದೆ. ಅನಿಯಂತ್ರಿತ ನಿರ್ಮಾಣ ಕಾರ್ಯಗಳನ್ನು ತಾಳಿಕೊಳ್ಳಲು ಆಗದ ಪ್ರದೇಶ ಇದು ಎಂಬ ಚಿತ್ರಣ ಕಾವ್ಯಗಳಲ್ಲಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ದೃಷ್ಟಿಕೋನವು ರಕ್ಷಣೆಯನ್ನು ಕೇಂದ್ರೀಕರಿಸಿಕೊಂಡಿದೆ. ಹಿಮಾಲಯ ಅಂದರೆ ಒಂದಿಷ್ಟು ಸ್ಥಳಗಳು ಮಾತ್ರವೇ ಅಲ್ಲ, ಅದು ಅಲ್ಲಿನ ಜನರನ್ನೂ ಒಳಗೊಳ್ಳುತ್ತದೆ ಎಂಬುದನ್ನು ಪ್ರಭುತ್ವವು ಅರ್ಥ ಮಾಡಿಕೊಳ್ಳಬೇಕಿದೆ.

ನವದೆಹಲಿಯಲ್ಲಿ ವಾಂಗ್ಚುಕ್ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು ಅಕ್ಟೋಬರ್ 15ಕ್ಕೆ ಹತ್ತನೆಯ ದಿನ ಪ್ರವೇಶಿಸಿತು. ಅವರು ಬಹಳ ಸರಳವಾಗಿ ಕೇಳುತ್ತಿರುವುದು ಪ್ರಧಾನಿ, ಗೃಹ ಸಚಿವ ಅಥವಾ ರಾಷ್ಟ್ರಪತಿ ಜತೆ ಒಂದು ಮಾತುಕತೆಗೆ ಅವಕಾಶವನ್ನು. ಲಡಾಖ್‌ನ ಜನರ ಪರವಾಗಿ ಬೇಡಿಕೆಗಳನ್ನು ದೇಶದ ಪ್ರಮುಖರ ಮುಂದೆ ಅವರು ಇರಿಸಬೇಕಿದೆ. ವಾಂಗ್ಚುಕ್ ಅವರು ಹಿಮಾಲಯವನ್ನು, ಅಲ್ಲಿನ ಋಷಿಸದೃಶ ವಿವೇಕವನ್ನು ದೆಹಲಿಗೆ ಹೊತ್ತುತಂದಿದ್ದಾರೆ. ನಮ್ಮ ರಾಜಕೀಯ ನಾಯಕತ್ವವು ಹಿಮಾಲಯದ ಜನರ ಮಾತನ್ನು ಆಲಿಸುತ್ತದೆ ಎಂಬ ನಿರೀಕ್ಷೆ ಹೊಂದಬೇಕೇ? ಹಿಮಾಲಯದ ರೋಷ ದೆಹಲಿಯನ್ನು ಪ್ರವೇಶಿಸುವುದನ್ನು ನಾವು ಕಾಯುತ್ತಿದ್ದೇವೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.