ADVERTISEMENT

ವಿಶ್ಲೇಷಣೆ: ಆಹಾರ ನೀತಿಯ ಕೋಮು ರಾಜಕಾರಣ

ಆಹಾರ ಪದ್ಧತಿಯಲ್ಲಿ ಇಂದು ರಾಜಕೀಯದ ಹಸ್ತಕ್ಷೇಪ ಅತಿಯಾಗತೊಡಗಿದೆ

ಎಸ್.ಜಿ.ಸಿದ್ದರಾಮಯ್ಯ
Published 25 ಆಗಸ್ಟ್ 2022, 22:35 IST
Last Updated 25 ಆಗಸ್ಟ್ 2022, 22:35 IST
   

‘ಊಟ ತನ್ನಿಷ್ಟ ನೋಟ ಪರರಿಷ್ಟ’ ಎನ್ನುತ್ತದೆ ಲೋಕೋಕ್ತಿ. ಪ್ರತಿಯೊಂದು ಲೋಕೋಕ್ತಿಯ ಹಿಂದೆ ಅನುಭವವೇ ಪ್ರಮಾಣುವಾಗಿರುತ್ತದೆ. ಅನುಭವವೆಂಬುದು ಕೇವಲ ಒಬ್ಬ ವ್ಯಕ್ತಿಯ ಮಿತಿಯದ್ದಾಗಿರದೇ ಸಮುದಾಯ ವ್ಯಾಪ್ತಿಯಲ್ಲಿ ಹರಿದ ವಿವೇಕವಾಗಿರುತ್ತದೆ. ಪ್ರಸ್ತುತ ಮೇಲಿನ ಲೋಕೋಕ್ತಿಯು ವ್ಯಕ್ತಿಯ ಆಹಾರ ಸೇವನೆ ಮತ್ತು ಉಡುಗೆ ತೊಡುಗೆಗೆ ಸಂಬಂಧಿಸಿದ ವಿಚಾರವನ್ನು ಒಳಗೊಂಡಿದೆ.

ಪ್ರದೇಶ, ಪರಿಸರ, ಲಭ್ಯತೆ, ಅಭ್ಯಾಸ ಮತ್ತು ದೇಹಾನುಕೂಲ ಇವುಗಳು ಕಾರಣವಾದಂತೆ ನಾವು ತಿನ್ನುವ ಆಹಾರದಲ್ಲಿ ಇಷ್ಟಾನಿಷ್ಟಗಳು ರೂಪಿತವಾಗುತ್ತವೆ. ಆದರೆ ಅದೇ ಉಡುಪು ವ್ಯಕ್ತಿಯ ಇಷ್ಟಕ್ಕೆ ಸಂಬಂಧಿಸಿದ ಅಭಿರುಚಿಯ ಪ್ರಶ್ನೆಯಾದರೂ ಬೇರೆಯವರ ಕಣ್ಣಿಗೆ ಚೆನ್ನಾಗಿ ಕಾಣಬೇಕು ಎಂಬುದೇ ಅಲ್ಲಿ ಪ್ರಧಾನ ಅಂಶವಾಗಿರುತ್ತದೆ; ಇದು ಅನ್ಯರ ಮೆಚ್ಚುಗೆಗೆ ಸಂಬಂಧಿಸಿದ ನೋಟದ ವಿಚಾರ. ನಮ್ಮದು ಬಹುತ್ವದ ಸಮಾಜ. ಲೋಕೋ ಭಿನ್ನರುಚಿ ಅನ್ನುವಂತೆ ಭಿನ್ನ ಬಗೆಯ ಸಂಪ್ರದಾಯಗಳು, ಸಂಸ್ಕೃತಿಗಳು, ಆಚಾರ-ವಿಚಾರಗಳು, ನಂಬಿಕೆ-ನಡಾವಳಿಗಳು ಇಲ್ಲಿನ ಬದುಕಾಗಿದೆ. ಇಷ್ಟಲ್ಲದೆ ಇವೆಲ್ಲವನ್ನೂ ನಿಯಂತ್ರಿಸುವ ವರ್ಣವ್ಯವಸ್ಥೆ ಇಂದಿಗೂ ನಮ್ಮಲ್ಲಿ ಜೀವಂತವಿದೆ. ‘ಹೊಲೆಗಂಡಲ್ಲದೆ ಪಿಂಡದ
ನೆಲೆಗಾಶ್ರಯವಿಲ್ಲ’ ಎಂದು ಶರಣರು ಸಾರಿದರು. ‘ಮಾನವ ಮೂಳೆ ಮಾಂಸದ ತಡಿಕೆ’ ಎಂದು ದಾಸರು ಹೇಳಿದರು. ಇಷ್ಟಾದರೂ ಮಡಿ ಮೈಲಿಗೆಗಳ ಕಟ್ಟುಪಾಡುಗಳಲ್ಲಿ ಪವಿತ್ರ- ಅಪವಿತ್ರ, ಪಾಪ- ಪುಣ್ಯಗಳ ಲೆಕ್ಕಾಚಾರ ಹಾಕುವುದು ವರ್ಣವ್ಯವಸ್ಥೆಯ ಮೂಲ ರೋಗವಾಗಿದೆ.

ಹಾಗೆ ನೋಡಿದರೆ ವರ್ಣವ್ಯವಸ್ಥೆಯಲ್ಲಿ ಮಾಂಸಾಹಾರದ ನಿಷೇಧ ಬಂದದ್ದು ಜೈನ- ಬೌದ್ಧ ಧರ್ಮಗಳು ಪ್ರಚಾರ ಮಾಡಿದ ಅಹಿಂಸೆಯ ಪ್ರಭಾವದಿಂದ ಎಂಬುದು ಚಾರಿತ್ರಿಕ ಸತ್ಯ. ಅವರು ಪ್ರತಿಪಾದಿಸಿದ ಅಹಿಂಸೆಯು ಧರ್ಮದ ಹೆಸರಿನಲ್ಲಿ ಯಜ್ಞ-ಯಾಗಗಳಲ್ಲಿ ನಡೆಸುತ್ತಿದ್ದ ಪ್ರಾಣಿಬಲಿಯನ್ನು ವಿರೋಧಿಸುವ ಉದ್ದೇಶ ಹೊಂದಿತ್ತು. ಇದಕ್ಕೂ ಆಹಾರ ನೀತಿಗೂ ಯಾವುದೇ ಸಂಬಂಧವಿಲ್ಲ ಎಂಬುದಕ್ಕೆ ಬುದ್ಧನ ಸೂಕರ ಮಾಂಸ ಸೇವನೆಯ ಪ್ರಸಂಗವೇ ಸಾಕ್ಷಿಯಾಗಿದೆ.

ADVERTISEMENT

ಆ ಧರ್ಮಗಳ ಪ್ರಭಾವದಿಂದ ತಪ್ಪಿಸಿ ಚಾತುರ್ವರ್ಣ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ವೈದಿಕವು ನಡೆಸಿದ ಪ್ರತಿರೋಧದ ಆಚರಣೆಗಳಲ್ಲಿ ‘ಅಹಿಂಸೆ’ ಎಂಬುದು ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎಂಬ ಭಾವಸಂಸ್ಕೃತಿಯ ಆಹಾರ ನೀತಿಯಲ್ಲಿ ಬಂಧಿತವಾಯಿತು. ಇಂಥ ಭಾವವಿಕಾರಗಳನ್ನು ವಿವೇಕಾನಂದರು ‘ಮೆಂಟಲ್ ಸ್ಲಂ’ ಎಂದು ಕರೆದರು. Mental Slum is very dangerous than the material Slum ಎಂದು ಸಾರಿದರು. ವಿವೇಕಾನಂದರ ಈ ಹೇಳಿಕೆಯು ಸಮೂಹ ಸನ್ನಿಯಂತೆ ಸಾಂಕ್ರಾಮಿಕವಾಗಿ ಹರಡುವ ಧಾರ್ಮಿಕ ಅಮಲಿಗೆ ಅರ್ಥಾತ್ ಧರ್ಮಾಂಧತೆಗೆ ಹೆಚ್ಚು ಅನ್ವಯಿಸುತ್ತದೆ.

ಧರ್ಮವೆಂಬುದು ಮಾನವೀಯ ವಿವೇಕವನ್ನು ಒಳಗೊಂಡಿದ್ದಾಗ ಅದರ ನಡೆನುಡಿಗಳೆಲ್ಲವೂ ಸಹ್ಯವಾಗಿ
ರುತ್ತವೆ. ಅದು ತಪ್ಪಿ ಮತಾಂಧ ಭಾವದಲ್ಲಿ ಅದು ವರ್ತಿಸತೊಡಗಿದಾಗ ನೆರೆಹೊರೆಯ ಅನ್ಯಧರ್ಮಗಳ
ಮೇಲೆ ಅದು ದ್ವೇಷದ ಬೆಂಕಿ ಕಾರತೊಡಗುತ್ತದೆ. ಸಹಿಷ್ಣುಭಾವವು ಧರ್ಮದ ಮೂಲದ್ರವ್ಯವಾದರೆ ಪರರ ನಡೆನುಡಿಗಳನ್ನು, ಪರಧರ್ಮದ ಇರುವಿಕೆಯನ್ನು ಅದು ಸಮಾನಶೀಲ ಭಾವದಲ್ಲಿ ಗೌರವಿಸುತ್ತದೆ. ಅಲ್ಲಿಯ ನಡೆನುಡಿಗಳೆಲ್ಲವೂ ಗಂಗೆಯಂತೆ; ಕೊಳೆಯನ್ನು ತೊಳೆಯುವ, ದಾಹವನ್ನು ಪರಿಹರಿಸುವ ಗುಣಧರ್ಮದವುಗಳು. ಅದನ್ನು ಬಿಟ್ಟು ಸ್ವರತಿ ಮೋಹದಲ್ಲಿ ತಾನೇ ಶ್ರೇಷ್ಠ ಉಳಿದವರೆಲ್ಲಾ ನಿಕೃಷ್ಟ ಎಂದು ಬೀಗತೊಡಗಿದರೆ, ಆ ಅಮಲು ಕೊಳಚೆಯಂತೆ ಅಪಾಯಕಾರಿ
ಯಾದುದು. ಕೊಳಚೆ ಚರಂಡಿಯಲ್ಲಿ ಹರಿದು ಹೋಗಲು ಯೋಗ್ಯವಾದುದೇ ವಿನಾ ಬಳಕೆಗೆ ಅರ್ಹವಾದುದಲ್ಲ. ಇದನ್ನೇ ಧರ್ಮಾಂಧತೆ ಎಂದು ಕರೆಯುವುದು.

ಧರ್ಮಾಂಧತೆಯು ಪ್ರಜಾಪ್ರಭುತ್ವದ ಶತ್ರು.
ಪ್ರಜಾಪ್ರಭುತ್ವದ ಮೂಲ ಗುಣವೇ ಸಹನೆ, ಸಹಿಷ್ಣುತೆ; ಜಾತ್ಯತೀತವು ಸಮಾಜಹಿತಕಾರಿಯೂ ಆಗಿ ಸಮಾಜವನ್ನು ಮುನ್ನಡೆಸುವುದು. ಭಾರತದಂತಹ ಬಹುತ್ವಗಳ ಸಮಾಜದಲ್ಲಿ ಧರ್ಮಾಂಧತೆ ಎಂಬುದು ಸಾಂಕ್ರಾಮಿಕವಾದರೆ ಅದು ದೇಶದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತದೆ. ರಾಜಕಾರಣವೆಂಬುದು ಸತ್ಯ ಶುದ್ಧ ಕಾಯಕ ಪ್ರಜ್ಞೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಒಂದು ಸೇವಾ ಕ್ಷೇತ್ರ. ಇಂಥ ಸೇವಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಬರುವ ಜನಪ್ರತಿನಿಧಿಗಳಿಗೆ ವ್ಯಕ್ತಿಗತ ನೆಲೆಯ ನೈತಿಕ ಪರಿಶುದ್ಧತೆ, ಪಾರದರ್ಶಕ ನಡೆ ಬಹಳ ಮುಖ್ಯವಾದವು. ಅನ್ಯ ಧರ್ಮದ ದ್ವೇಷ, ತನ್ನ ಧರ್ಮದ ಅಂಧಮೋಹ ಇರಬಾರದು. ಸರ್ವಧರ್ಮದ ಸಹಿಷ್ಣು ಗುಣದ ಜೊತೆಗೆ ಜಾತ್ಯತೀತವಾದ ನಡೆನುಡಿಯ ಭಾವಸಂಪನ್ನತೆ ಬಹಳ ಮುಖ್ಯ. ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ, ಬೆಳೆಯುತ್ತದೆ.

ಜೀವವನ್ನು ತಿಂದು ಜೀವ ಬದುಕುತ್ತದೆ ಎಂಬುದು ನಿಸರ್ಗ ಸತ್ಯ. ಸಸ್ಯವಾಗಿರಲಿ, ಪ್ರಾಣಿಯಾಗಿರಲಿ ಅದು ಜೀವಸತ್ವದಿಂದ ತಿನ್ನಲು ಯೋಗ್ಯವಾಗಿದ್ದಾಗ ಮಾತ್ರ ಅನ್ನವಾಗಿ ಬಳಕೆಯಾಗುತ್ತದೆ. ಸಸ್ಯಾಹಾರಿಗಳು ಕೆಲವರು ತಾವು ಜೀವವನ್ನು ಕೊಂದು ಜೀವಕ್ಕೆ ಅನ್ನವನ್ನು
ತಿನ್ನುತ್ತಿದ್ದೇವೆ ಎಂಬ ಅರಿವಿಲ್ಲದವರಂತೆ ಮಾಂಸಾಹಾರಿಗಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಸಸ್ಯದ ನೋವು ಕಾಣದ್ದು, ಕೇಳದ್ದು, ಪ್ರಾಣಿಯ ನೋವು ಕಾಣುವುದು, ಕೇಳುವುದು. ಹೀಗಾಗಿ ಹಿಂಸೆಯ ಬಗ್ಗೆ ಮನುಷ್ಯನ ನಿಲುವು ಭಿನ್ನ ಬಗೆಯಲ್ಲಿದೆ. ಇಷ್ಟಿದ್ದರೆ ಅದಕ್ಕೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅವುಗಳ ಹಿಂದೆ ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಎಂಬ ತಾರತಮ್ಯ ಭಾವ ಬೆಳೆದದ್ದು ತಕರಾರಿಗೆ ಮೂಲವಾಗಿದೆ. ಅಷ್ಟೇ ಅಲ್ಲ, ಮಾಂಸಾಹಾರದಲ್ಲಿಯೂ ಮೇಲು-ಕೀಳುಗಳ ಸಮಸ್ಯೆಯನ್ನು ಒಂದು ವರ್ಣದ ಜನ ಹುಟ್ಟುಹಾಕಿದ್ದಾರೆ. ಹೀಗಾಗಿ ಆಹಾರ ನೀತಿಯ ಬಗ್ಗೆ ಒಂದೊಂದು ಧರ್ಮದಲ್ಲಿ ಒಂದೊಂದು ಪ್ರಾಣಿಯ ಬಗೆಗೆ ಅವರದೇ ಆದ ನೀತಿ-ನಿಯಮಗಳ ಹೇರಿಕೆಯಿದೆ. ಇಂದು ಆಹಾರ ಪದ್ಧತಿಯಲ್ಲಿ ರಾಜಕೀಯದ ಹಸ್ತಕ್ಷೇಪ ನಡೆದಿದೆ. ಅದು ಹಿಂದಿನಿಂದಲೂ ನಡೆದುಬಂದ ಹುನ್ನಾರವೇ.

12ನೆಯ ಶತಮಾನದಲ್ಲಿಯೇ ಆಹಾರ ನೀತಿಯ ಬಗ್ಗೆ ಕಾಳವ್ವೆ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರು ಸ್ಪಷ್ಟ ಮಾತುಗಳಲ್ಲಿ ತಿಳಿಹೇಳಿದ್ದಾರೆ.

ಕಾಳವ್ವೆಯ ಒಂದು ವಚನ ಇಂತಿದೆ:

ಕುರಿ ಕೋಳಿ ಕಿರು ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು
ಅವರೆಂತು ಕೀಳುಜಾತಿಯಾದರು ಜಾತಿಗಳು ನೀವೇಕೆ ಕೀಳಾಗಿರೋ?

ಇಲ್ಲಿ ಮಾಂಸ ತಿನ್ನುವವರಲ್ಲೇ ಕೆಲವರನ್ನು ಸ್ಪೃಶ್ಯರು, ಇನ್ನು ಕೆಲವರನ್ನು ಅಸ್ಪೃಶ್ಯರು ಎಂದು ಕಾಣುವ ವರ್ಣನೀತಿಯ ಅವೈಜ್ಞಾನಿಕತೆಯನ್ನು ತರ್ಕಕ್ಕೊಡ್ಡಿದಂತೆ ಕಾಳವ್ವೆ ಪ್ರಶ್ನಿಸಿದ್ದಾಳೆ. ದನದ ಚರ್ಮದಿಂದ ಮಾಡಿದ ಸಿದ್ಧಳಿಕೆ, ಸಗ್ಗಳೆಗಳನ್ನು ತುಪ್ಪ ಮತ್ತು ನೀರು ಸಂಗ್ರಹಕ್ಕೆ ಬಳಸುತ್ತ ದನಭಕ್ಷಣೆಯನ್ನು ವಿರೋಧಿಸುವ ಬುದ್ಧಿಗೇಡಿಗಳನ್ನು ಉಗ್ರವಾಗಿ ಖಂಡಿಸುತ್ತಾಳೆ. 12ನೆಯ ಶತಮಾನದಲ್ಲಿಯೇ ಆಹಾರದ ರಾಜಕಾರಣ ನೀತಿಯನ್ನು ಇಷ್ಟು ಉಗ್ರವಾಗಿ ಖಂಡಿಸಿದ ಕಾಳವ್ವೆಯ ವೈಚಾರಿಕವೂ ವೈಜ್ಞಾನಿಕವೂ ಆದ ತರ್ಕಶುದ್ಧ ಮಾತಿನ ಹಿಂದೆ ಸಾರ್ವಜನಿಕ ಸತ್ಯವಿದೆ.

ಈ ಆಹಾರ ನೀತಿಯ ವಿಕಾರ ಎಲ್ಲಿಗೆ ಬಂದು ನಿಂತಿದೆ ಎಂದರೆ, ಇಂದಿನ ರಾಜಕಾರಣದ ವೋಟು ಗಳಿಕೆಯ ಅಸ್ತ್ರವಾಗಿ ಬಳಕೆಯಾಗುತ್ತಿದೆ. ದೇವಸ್ಥಾನ ಪ್ರವೇಶ ಮಾಡುವಾಗ ಏನು ತಿಂದಿರಬೇಕು, ಏನು ತಿಂದಿರಬಾರದು ಎಂಬ ಭಾವವಿಕಾರಕ್ಕೆ ಪ್ರಚೋದನೆ
ಯಾಗಿದೆ. ಮನುಷ್ಯ ಮಂಗಳನ ಅಂಗಳಕ್ಕೆ ಲಗ್ಗೆ ಇಡುವಷ್ಟು ವಿಜ್ಞಾನದ ಪ್ರಗತಿಯನ್ನು ಸಾಧಿಸುತ್ತಿದ್ದರೂ
ಅವನ ಜಡಬುದ್ಧಿ ಇನ್ನೂ ನೆಲದ ಮೇಲಿನ ಗುಡಿಗುಂಡಾರಗಳಲ್ಲಿ ಮಡಿ ಮೈಲಿಗೆಗಳ ವಿಧಿನಿಷೇಧಗಳ ಕುಬ್ಜತೆಯಲ್ಲಿ ನರಳುತ್ತಿದೆ. ವಿಚಿತ್ರವೆಂದರೆ, ವರ್ಣವ್ಯವಸ್ಥೆ
ಹೇರಿರುವ ಈ ವಿಧಿನಿಷೇಧಗಳು ಒಂದು ವರ್ಣಕ್ಕೆ
ಲಾಭದಾಯಕವಾಗಿವೆ. ಸಾಂಸ್ಕೃತಿಕ, ಬೌದ್ಧಿಕ ಜೀತದಾಳು
ಗಳಾಗಿರುವ ಮಾಂಸಾಹಾರ ಮೂಲದ ಜನಪ್ರತಿನಿಧಿಗಳು ದೇವಸ್ಥಾನ- ದೇವರು- ಆಹಾರ ನೀತಿಯ ಬಗ್ಗೆ
ಮಾತನಾಡುತ್ತಿರುವುದನ್ನು ನೋಡಿದರೆ ಅವರ ಬಗ್ಗೆ
ಕನಿಕರವಾಗುತ್ತಿದೆ. ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ, ಸತ್ಯ ಶುದ್ಧವಲ್ಲದುದು ಕಾಯಕವಲ್ಲ. ವ್ರತವೆಂಬುದು ಜೀವನ ಕಳೆ. ಕಾಯಕ ನಿಷ್ಠೆಯ ಆಚಾರದಲ್ಲಿ ಅನುಭಾವಿಕತೆ
ಯನ್ನು ಕಾಣುವುದೇ ನಿಜವಾದ ಆಧ್ಯಾತ್ಮಿಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.