ಅಕ್ಟೋಬರ್ ತಿಂಗಳ ಮೊದಲ ವಾರದಿಂದಲೂ ಸ್ವೀಡನ್ನಿನ ಸ್ವೀಡಿಷ್ ಅಕಾಡೆಮಿಯ ಮುಚ್ಚಿದ ಬಾಗಿಲು ತೆರೆದು ನೊಬೆಲ್ ವಕ್ತಾರರು ಆಗಾಗ್ಗೆ ನೊಬೆಲ್ ಪ್ರಶಸ್ತಿ ವಿಜೇತರನ್ನು ಘೋಷಿಸುತ್ತಿದ್ದರು. ಎಲ್ಲೂ ಭಾರತೀಯ ಹೆಸರುಗಳ ಸುಳಿವಿರಲಿಲ್ಲ. ಭಾರತೀಯ ಪ್ರತಿಭೆಗಳು ಈ ಸಲ ಶಾರ್ಟ್‌ಲಿಸ್ಟ್ ಆಗಿದ್ದ ಸುದ್ದಿಯೂ ಇರಲಿಲ್ಲ. ಸಮಾಧಾನಕರವೆಂಬಂತೆ ಮೊದಲ ಬಾರಿಗೆ ಏಷ್ಯಾದ ಲೇಖಕಿಯೊಬ್ಬ
ರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆಯಾಯಿತು.
ದಕ್ಷಿಣ ಕೊರಿಯಾದ ಹಾನ್ ಕಾಂಗ್‌ರ ಸಮಗ್ರ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಘೋಷಿಸಿದ ಆಯ್ಕೆ ಸಮಿತಿ, ಆಕೆಯ ‘ಕಾವ್ಯಾತ್ಮಕ ಗದ್ಯ’ವನ್ನು ವಿಶೇಷವಾಗಿ ಗುರುತಿಸಿತ್ತು. ಆಕೆಯ ‘ದ ವೆಜಿಟೇರಿಯನ್’ ಕಾದಂಬರಿಗೆ 2007ರಲ್ಲಿ ‘ಮ್ಯಾನ್ ಬುಕರ್’ ಪ್ರಶಸ್ತಿಯೂ ಬಂದಿತ್ತು. ‘ದ ವೆಜಿಟೇರಿಯನ್’ ಕಾದಂಬರಿಯನ್ನು ಓದಲಾರಂಭಿಸಿದೆ. ಕಾದಂಬರಿಯ ನಾಯಕಿಗೆ ಒಂದು ರಾತ್ರಿ ಕನಸು ಬೀಳುತ್ತದೆ. ಆಕೆ ಮೇಲೆದ್ದವಳೇ ರೆಫ್ರಿಜಿರೇಟರ್‌ನಲ್ಲಿದ್ದ ಮಾಂಸವನ್ನೆಲ್ಲ ಹೊರಗೆಸೆಯುತ್ತಾಳೆ. ಸಸ್ಯಾಹಾರ ಶುರು ಮಾಡಿದ ಆಕೆಯ ದೇಹ ಸೊರಗತೊಡಗುತ್ತದೆ. ಗಂಡ, ತಂದೆ, ತಾಯಿ ಕಳವಳಗೊಳ್ಳುತ್ತಾರೆ. ತಂದೆ ಬಲವಂತದಿಂದ ಆಕೆಯ ಬಾಯಿಗೆ ಮಾಂಸ ತುರುಕುತ್ತಾನೆ. ಹಿಂಸೆಯ ವಾತಾವರಣ ಸೃಷ್ಟಿಯಾಗುತ್ತದೆ.
ಈ ದೃಶ್ಯಗಳನ್ನು ಓದುತ್ತಾ ನನ್ನ ಆರೋಗ್ಯವೇ ಕೆಡತೊಡಗಿತು! ಕಾದಂಬರಿಯೊಂದನ್ನು ಯಾವ ಮಾನದಂಡಗಳಿಂದಲಾದರೂ ಶ್ರೇಷ್ಠವೆನ್ನಲಿ, ಅದು ಓದುವವರ ಆರೋಗ್ಯವನ್ನು ಕಾಪಾಡದಿದ್ದರೆ ಅದನ್ನು ಓದುವುದು ಕಷ್ಟ! ಈಚೆಗೆ ಜಾಗತಿಕ ಪ್ರಶಸ್ತಿಗಳನ್ನು ಪಡೆದ ಕೆಲವು ಕಾದಂಬರಿಗಳನ್ನು ಓದಿದರೆ ಪಶ್ಚಿಮದ ವಿಮರ್ಶಾ ಮಾನದಂಡಗಳ ಬಗೆಗೇ ಅನುಮಾನಗಳೇಳುತ್ತವೆ. ಈ ಆಯ್ಕೆಗಳಲ್ಲಿ ಭಾಗಿಯಾಗುವವರು ತಾವು ಆವರೆಗೆ ಕಂಡರಿಯದ ಅನುಭವವನ್ನು, ವ್ಯಕ್ತಿ-ವ್ಯಕ್ತಿಗಳ ನಡುವಣ ಹಿಂಸೆಯನ್ನು ಬಿಂಬಿಸುವ ಕಾದಂಬರಿಗಳನ್ನೇ ಆಯ್ಕೆ ಮಾಡುತ್ತಿರುವಂತಿದೆ. ಇಂಥ ಆಯ್ಕೆಗಳ ನಡುವೆ, ಓದಿನ ಆನಂದ ಕೊಡುವ, ವಿಶಿಷ್ಟ ಪ್ರಾದೇಶಿಕ ಅನುಭವವನ್ನು ಹೇಳುವ ‘ಕಾನೂರು ಹೆಗ್ಗಡಿತಿ’, ‘ಥಿಂಗ್ಸ್ ಫಾಲ್ ಅಪಾರ್ಟ್’ ಥರದ ಕೃತಿಗಳು ಗೆಲ್ಲುವುದು ಕಷ್ಟವೇನೊ!
ಆದರೂ, ಹಿಂದಿನ 125 ವರ್ಷಗಳಲ್ಲಿ ಜಗತ್ತಿನ ದೊಡ್ಡ ಲೇಖಕ, ಲೇಖಕಿಯರ ಶ್ರೇಷ್ಠ ಕೃತಿಗಳಿಗೆ ನೊಬೆಲ್ ಪ್ರಶಸ್ತಿ ಬಂದಿದೆ. ನೊಬೆಲ್ ಕಮಿಟಿಯು ಆಯ್ಕೆಯಲ್ಲಿ ಎಡವಿದ ಉದಾಹರಣೆಗಳೂ ಇವೆ. 1901ರಲ್ಲಿ ನೊಬೆಲ್ ಪ್ರಶಸ್ತಿಗಳ ಘೋಷಣೆಯಾದ ವರ್ಷ ರಷ್ಯಾದ ಟಾಲ್‌ಸ್ಟಾಯ್ ಬರವಣಿಗೆ ಉತ್ತುಂಗದಲ್ಲಿತ್ತು. ಶೇಕ್‌ಸ್ಪಿಯರ್ ನಂತರದ ದೊಡ್ಡ ಲೇಖಕರೆಂದರೆ ಟಾಲ್‌ಸ್ಟಾಯ್ ಎಂಬ ಅಭಿಪ್ರಾಯ ಪ್ರಚಲಿತವಿತ್ತು. ಆದರೆ ಫ್ರೆಂಚ್ ಕವಿ ಸಲ್ಲಿ ಪ್ರಧೋಮ್‌ಗೆ ಮೊದಲ ನೊಬೆಲ್ ಪ್ರಶಸ್ತಿ ಬಂತು. ಅಂದರೆ, ಯುರೋಪಿಯನ್ ವಿಮರ್ಶೆ ಟಾಲ್‌ಸ್ಟಾಯ್ ಶ್ರೇಷ್ಠತೆಯನ್ನು ಗುರುತಿಸಲು ಇನ್ನೂ ಸಮರ್ಥವಾಗಿರಲಿಲ್ಲ! ಮುಂದಿನ ವರ್ಷ ಟಾಲ್‌ಸ್ಟಾಯ್ ‘ನನಗೆ ನೊಬೆಲ್ ಪ್ರಶಸ್ತಿ ಕೊಡಬೇಡಿ’ ಎನ್ನುತ್ತಾ, ‘ಆ ಹಣ ನೋವು ತರಬಲ್ಲದು’ ಎಂದಿದ್ದರು. ಮೊದಲ ನೊಬೆಲ್ ಪ್ರಶಸ್ತಿ ಪಡೆದ ಪ್ರಧೋಮ್ ಈಗ ಹೇಳಹೆಸರಿಲ್ಲದಂತೆ ಆಗಿದ್ದಾರೆ!
1958ರಲ್ಲಿ ನೈಜೀರಿಯಾದ ಯುಗಪ್ರವರ್ತಕ ಲೇಖಕ ಚಿನುವ ಅಚಿಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್’ ಪ್ರಕಟವಾಗಿ ಆಫ್ರಿಕನ್ ಸಾಹಿತ್ಯದ ನವೋದಯಕ್ಕೆ ನಾಂದಿ ಹಾಡಿತು. ಈ ಕಾದಂಬರಿ ಪ್ರಕಟವಾಗಿ ಜಗತ್ತಿನಾದ್ಯಂತ ಚರ್ಚೆಯಾಗಿ ದಶಕಗಳಾದರೂ ಅಚಿಬೆಯ ಬರವಣಿಗೆಯ ಮಹತ್ವ ನೊಬೆಲ್ ಸಮಿತಿಗೆ ಅರಿವಾಗಲಿಲ್ಲ. ವಸಾಹತುಶಾಹಿ ತಂದ ಆಘಾತ, ದುರಂತ, ಚಲನೆಗಳ ಕತೆ ಹೇಳುವ ಇದು ಆಫ್ರಿಕಾದ ಕತೆಯನ್ನಷ್ಟೇ ಅಲ್ಲ, ವಸಾಹತೀಕರಣಕ್ಕೊಳಗಾದ ಎಲ್ಲ ದೇಶಗಳ ಅನುಭವವನ್ನೂ ಪ್ರತಿ
ನಿಧಿಸುತ್ತದೆ. ಜಗತ್ತಿನಾದ್ಯಂತ ಪಠ್ಯಪುಸ್ತಕವಾಗಿರುವ ಈ ‘ಕ್ಲಾಸಿಕ್’ನ ಎರಡು ಕೋಟಿ ಪ್ರತಿಗಳು ಖರ್ಚಾಗಿವೆ! ಮುಂದೆಯೂ ಮಹತ್ವದ ಕಾದಂಬರಿಗಳನ್ನು ಬರೆದ ಅಚಿಬೆಗೆ ನೊಬೆಲ್ ಪ್ರಶಸ್ತಿ ಬರಲೇ ಇಲ್ಲ. ಬದಲಿಗೆ, ಪಶ್ಚಿಮದಲ್ಲಿ ಹೆಚ್ಚು ಹೆಸರಾಗಿದ್ದ ನೈಜೀರಿಯಾದ ವೊಲೆ ಶೋಯಿಂಕಾ ಅವರಿಗೆ ಬಂತು.
ಭಾರತೀಯ ಮೂಲದ ಮನೆತನದಲ್ಲಿ ಹುಟ್ಟಿದ ಕೆರಿಬಿಯನ್ ಲೇಖಕ ವಿ.ಎಸ್.ನೈಪಾಲ್‌ಗೆ ನೊಬೆಲ್ ಪ್ರಶಸ್ತಿ ಬಂತು. 1981ರಲ್ಲಿ ‘ಮಿಡ್ ನೈಟ್ಸ್ ಚಿಲ್ಡ್ರನ್’ ಬರೆದು ಪ್ರಖ್ಯಾತರಾದ ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಕರ್ನಾಟಕದ ವಿಜಯನಗರ ಸಾಮ್ರಾಜ್ಯವನ್ನು ವಸ್ತುವಾಗಿಸಿಕೊಂಡು 2023ರಲ್ಲಿ ‘ವಿಕ್ಟರಿ ಸಿಟಿ’ ಎಂಬ ಅದ್ಭುತ ಕಾದಂಬರಿ ಬರೆದರು. ಅವರಿಗೆ ನೊಬೆಲ್ ಪ್ರಶಸ್ತಿ ಬರುವ ಸೂಚನೆಗಳೇ ಕಾಣುತ್ತಿಲ್ಲ. ಝೆಕೊಸ್ಲೋವಾಕಿಯಾದ ಅನನ್ಯ ಕಾದಂಬರಿಕಾರ ಮಿಲನ್ ಕುಂದೇರ ಅವರಿಗೆ ನೊಬೆಲ್ ಪ್ರಶಸ್ತಿ ಬರಲೇ ಇಲ್ಲ. ಆದರೆ ಭಾರತವನ್ನು ಕಾಯಂ ವಸಾಹತುವನ್ನಾಗಿ ಇರಿಸಿಕೊಳ್ಳಲು ಪ್ರಯತ್ನಿಸಿದ್ದ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್‌ಗೆ 1953ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಬಂತು. ಇವತ್ತು ಅವರೊಬ್ಬ ‘ಲೇಖಕ’ ಎಂದು ಆಣೆ ಮಾಡಿ ಹೇಳಿದರೂ ಒಪ್ಪುವವರಿಲ್ಲ! ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಅಹಿಂಸಾತ್ಮಕ ಚಳವಳಿಯನ್ನು ಮುನ್ನಡೆಸಿದ ಗಾಂಧೀಜಿಗೆ 1948ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಕೊಡುವ ಬಗ್ಗೆ ಚರ್ಚೆ ನಡೆದಿತ್ತು. ಗಾಂಧೀಜಿಯ ಹತ್ಯೆಯಾಗಿದ್ದರಿಂದ ನೊಬೆಲ್ ಪ್ರಶಸ್ತಿ ತಪ್ಪಿಹೋಯಿತು. ಕಾರಣ, ಮರಣೋತ್ತರವಾಗಿ ನೊಬೆಲ್ ಪ್ರಶಸ್ತಿ ಕೊಡುವ ಪರಿಪಾಟವಿಲ್ಲ. ಈ ನಡುವೆ ನೊಬೆಲ್ ಪ್ರಶಸ್ತಿಯನ್ನು ನಿರಾಕರಿಸಿದವರೂ ಇದ್ದಾರೆ. ಜರ್ಮನಿಯ ಅಸ್ತಿತ್ವವಾದಿ ಲೇಖಕ ಜಾನ್ ಪಾಲ್ ಸಾರ್ತರ್, ‘ಈ ಪ್ರಶಸ್ತಿ ನನ್ನ ಬರವಣಿಗೆಯ ಪ್ರಭಾವವನ್ನು ಕುಂದಿಸುತ್ತದೆ’ ಎಂಬ ಕಾರಣಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. 1974ರಲ್ಲಿ ವಿಯೆಟ್ನಾಂನ ಕ್ರಾಂತಿಕಾರಿ ನಾಯಕ ಲಿ ದಕ್ ಥೊಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದಾಗ ಅವರು ಹೀಗೆ ಹೇಳಿದರು: ‘ವಿಯೆಟ್ನಾಂನಲ್ಲಿ ಶಾಂತಿ ಸ್ಥಾಪನೆ
ಯಾಗಿಲ್ಲ; ನಾನು ಪ್ರಶಸ್ತಿಯನ್ನು ಒಪ್ಪಿಕೊಳ್ಳುವುದಿಲ್ಲ’.
ನೊಬೆಲ್ ಸಮಿತಿ ಹಲವು ದೇಶಗಳ ಸಾಹಿತ್ಯ ಅಕಾಡೆಮಿಗಳನ್ನೂ ಸಂಪರ್ಕಿಸುತ್ತಿರುತ್ತದೆ. ಭಾರತದ ಕೇಂದ್ರ ಸಾಹಿತ್ಯ ಅಕಾಡೆಮಿಯು ಮೂರು ಸಲ ಕುವೆಂಪು ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಮಲಯಾಳದ ತಕಳಿ ಶಿವಶಂಕರ್ ಪಿಳ್ಳೈ, ತಮಿಳಿನ ಜಯಕಾಂತನ್ ಹೆಸರುಗಳೂ ಶಿಫಾರಸಾಗಿದ್ದವು. ಕೇರಳದ ಎಂ.ಟಿ.ವಾಸುದೇವನ್ ನಾಯರ್ ಅವರ ‘ರಂಡಾಮೂಳಂ’ನ ಇಂಗ್ಲಿಷ್ ಅನುವಾದ ‘ದ ಸೆಕೆಂಡ್ ಟರ್ನ್’ ಬಂದಾಗ, ನಾಯರ್‌ಗೆ ನೊಬೆಲ್ ಪ್ರಶಸ್ತಿ ಬರಬಹುದೆಂಬ ಸುದ್ದಿಯಿತ್ತು. ಇವೆಲ್ಲ ಸ್ವೀಡನ್ ತನಕ ತಲುಪಿದ್ದವೋ ಇಲ್ಲವೋ!
ಈಚಿನ ವರ್ಷಗಳಲ್ಲಿ ಭಾರತದಲ್ಲಿ ಹಬ್ಬಿರುವ ಹಿಂಸೆ, ಸರ್ವಾಧಿಕಾರ, ವಿಭಜಕ ಪ್ರವೃತ್ತಿ, ಸೂಕ್ಷ್ಮಜ್ಞರ ಸುತ್ತ ಬೇಹುಗಾರಿಕೆಯ ವಾತಾವರಣ, ಲಿಟರರಿ ಫೆಸ್ಟಿವಲ್‌ಗಳ ಅತಿಥಿಗಳ ಆಯ್ಕೆಯಲ್ಲೂ ಸಾಂಸ್ಕೃತಿಕ ಹದ್ದುಗಳ ಮಧ್ಯಪ್ರವೇಶ... ಇವೆಲ್ಲ ಇರುವ ಅಸಾಹಿತ್ಯಕ ವಾತಾವರಣದಲ್ಲಿ ಗಂಭೀರ ಸಾಹಿತ್ಯ ಚರ್ಚೆಗಳು ಕೇಂದ್ರಕ್ಕೆ ಬರುವುದು ಕಷ್ಟ. ಇಂಥ ಗುಮಾನಿಯ ವಾತಾವರಣದಲ್ಲಿ ಪ್ರತಿಭೆಗಳು ಕಮರತೊಡಗುತ್ತವೆ. ಆದರೆ, ಒಮ್ಮೊಮ್ಮೆ ಇಂಥ ಸನ್ನಿವೇಶಗಳೇ ಸವಾಲಾಗಿ ಸಾಹಿತ್ಯಕ ಪ್ರತಿಭೆ ಸ್ಫೋಟಗೊಳ್ಳುವುದುಂಟು. ಕಮ್ಯುನಿಸ್ಟ್ ಸರ್ವಾಧಿಕಾರದ ಗೋಚರ-ಅಗೋಚರ ಹಿಂಸೆಗಳಿಗೆ ತುತ್ತಾದ ಮಿಲನ್ ಕುಂದೇರ ಅವರ ಕಾದಂಬರಿಗಳು ದಮನದ ಕಾಲದಲ್ಲಿನ ಪ್ರತಿಭಾಸ್ಫೋಟಕ್ಕೆ ಸಾಕ್ಷಿಯಂತಿವೆ. ಸರ್ಕಾರಗಳಿಂದ ಕಿರುಕುಳಕ್ಕೆ ತುತ್ತಾಗಿರುವ ಅರುಂಧತಿ ರಾಯ್ ಈ ದಮನದ ವಾತಾವರಣದಲ್ಲೇ ‘ದ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್’ ಎಂಬ ಮಹತ್ವಾಕಾಂಕ್ಷೆಯ ಕಾದಂಬರಿ ಬರೆದರು. ಅರುಂಧತಿ ರಾಯ್, ಅಮಿತಾವ್ ಘೋಷ್ ಥರದವರ ಬರವಣಿಗೆಗಳಲ್ಲಿ ನೊಬೆಲ್ ಪ್ರಶಸ್ತಿಯ ಮಹತ್ವಾಕಾಂಕ್ಷೆಯಂತೂ ಇದೆ.
ಕೊನೆಯದಾಗಿ, ನೊಬೆಲ್ ಪ್ರಶಸ್ತಿಯ ಹಿನ್ನೆಲೆ: ಹತ್ತೊಂಬತ್ತನೆಯ ಶತಮಾನದ ಕೊನೆಗೆ, ಡೈನಮೈಟ್‌ನಂತಹ ಸ್ಫೋಟಕ ವಸ್ತುಗಳನ್ನು ಉತ್ಪಾದಿಸಿದ ಸ್ವೀಡನ್ನಿನ ಆಲ್ಫ್ರೆಡ್ ನೊಬೆಲ್ ಅಪಾರ ಹಣ ಮಾಡಿದ. ಅವನ ಬಗ್ಗೆ ಜನರಿಗೆ ಅಸಹ್ಯವಿತ್ತು. ಆಲ್‌ಫ್ರೆಡ್‌ನ ಸೋದರ ತೀರಿಕೊಂಡಾಗ ಆಲ್‌ಫ್ರೆಡ್ಡನೇ ತೀರಿಕೊಂಡನೆಂದು
ಭಾವಿಸಿದ ಪತ್ರಿಕೆಗಳು ‘ಸಾವಿನ ವ್ಯಾಪಾರಿಯ ಸಾವು’ ಎಂದು ಬರೆದವು! ಆಗ ಎಚ್ಚೆತ್ತ ಆಲ್‌ಫ್ರೆಡ್ ‘ಮಾನವಕುಲಕ್ಕೆ ಅಸಾಧಾರಣ ಕೊಡುಗೆ’ಗಾಗಿ ಐದು ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಿ ಅದಕ್ಕಾಗಿ ಹಣ ತೆಗೆದಿಟ್ಟ; ಡೈನಮೈಟ್‌ನಿಂದ ಬಂದ ಹಣದ ಸೂತಕ ಕಳೆದುಕೊಂಡ! ಕಾಲಾನಂತರ ನೊಬೆಲ್ ಪ್ರಶಸ್ತಿಗಳು ಜಗತ್ತಿನ ಅತ್ಯುನ್ನತ ಪ್ರಶಸ್ತಿಗಳಾದವು. ಪ್ರತಿ ಅಕ್ಟೋಬರ್‌ನಲ್ಲಿ ನೊಬೆಲ್ ಮಾಯಾಜಿಂಕೆಯು ಲೋಕದ ಸಾವಿರಾರು ಪ್ರತಿಭಾಶಾಲಿಗಳೆದುರು ಮಿಂಚಿ ಮಾಯವಾಗುತ್ತಲೇ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.