ಈ ತಿಂಗಳ ಎರಡರಂದು ಗಾಂಧಿ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಈ ವರ್ಷ ಒಂದು ವಿಶೇಷವಿದೆ. ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನವು 1924ರಲ್ಲಿ ಬೆಳಗಾವಿಯಲ್ಲಿ ನಡೆಯಿತು. ಆ ಅಧಿವೇಶನಕ್ಕೀಗ ನೂರು ವರ್ಷ. ಆ ಕುರಿತ ಚರ್ಚೆಗಳು ವಿಧ್ಯುಕ್ತವಾಗಿ ಸಾಂಪ್ರದಾಯಿಕವಾಗಿ ನಡೆಯಬಹುದಾದ ಸಾಧ್ಯತೆಗಳಿವೆ.
ಹಾಗೆ ನೋಡಿದರೆ, ಗಾಂಧಿ ಹತ್ಯೆಯ ನಂತರ ನಡೆದ ಗಾಂಧಿ ಕುರಿತಾದ ಆಚರಣೆಗಳು ವಿಧ್ಯುಕ್ತ ಸಾಂಪ್ರದಾಯಿಕ ಆಚರಣೆಗಳಾದವೇ ವಿನಾ ಗಾಂಧೀಜಿಯೊಂದಿಗೆ ಜನಸಮುದಾಯಕ್ಕೆ ಸಂಪರ್ಕ ಕಲ್ಪಿಸುವ ವೈಚಾರಿಕ ವಿಧಾನವೊಂದು ರೂಪುಗೊಳ್ಳಲಿಲ್ಲ. ಅಂತಹ ವಿಧಾನ ರೂಪುಗೊಳ್ಳಬೇಕಾದರೆ ವೈಚಾರಿಕ ಮಾದರಿಗಳ ಅಗತ್ಯವಿರುತ್ತದೆ. ಅಂತಹ ಮಾದರಿಗಳು ಜನರ ನಡುವೆಯೇ ಇರುತ್ತವೆ. ಏಕೆಂದರೆ ಗಾಂಧಿ ಚಿಂತನೆಯು ಎಲ್ಲಿಂದಲೋ ತಂದು ಗುಡ್ಡೆ ಹಾಕಿದ ಜ್ಞಾನವಲ್ಲ. ಬರೀ ಪುಸ್ತಕಗಳಿಂದ ಗಳಿಸಿದ ಜ್ಞಾನವಲ್ಲ. ಜನರು ಬಾಳಿದ ಜೀವನದ ಜ್ಞಾನ. ಆದ್ದರಿಂದ ಮಾದರಿಗಳು ಇರುತ್ತವೆ, ಗುರುತಿಸುವ ಕೆಲಸ ನಡೆಯಬೇಕಷ್ಟೆ. ಸ್ವಾವಲಂಬನೆಯು ಗಾಂಧಿಯವರ ತತ್ವ. ಸರಳತೆಯೂ ಅವರ ತತ್ವವೇ. ಇವೆರಡರ ನಡುವೆ ಸಂಬಂಧವಿದೆ. ಅವಶ್ಯಕತೆ ಜಾಸ್ತಿಯಾದಷ್ಟೂ ಪರಾವಲಂಬನೆಯೂ ಜಾಸ್ತಿಯಾಗುತ್ತದೆ. ಉದಾಹರಣೆಗೆ, ಬರೆಯಲು ಟೇಬಲ್ ಬೇಕು ಅನಿಸಿದಾಗ ಟೇಬಲ್ ಲೇಖಕನ ಅವಶ್ಯಕತೆಯಾಗುತ್ತದೆ. ಆಗ ಲೇಖಕ ಟೇಬಲ್‌ನ ಅವಲಂಬಿಯಾಗುತ್ತಾನೆ. ನೆಲದ ಮೇಲೇ ಕುಳಿತು ಬರೆಯಬಲ್ಲವನಿಗೆ ಟೇಬಲ್ ಅವಶ್ಯಕತೆಯಲ್ಲ. ಅವನು ಟೇಬಲ್‌ನ ಅವಲಂಬಿಯಾಗುವ ಅಗತ್ಯವೂ ಇಲ್ಲ. ಸ್ವಾವಲಂಬನೆ ಮತ್ತು ಸರಳತೆಗೆ ಈ ರೀತಿಯ ಸಂಬಂಧವಿದೆ.
ಆದರೆ ಸರಳತೆ ಎಲ್ಲಿಯತನಕ ಎಂಬುದು ಇಲ್ಲಿರುವ ಪ್ರಶ್ನೆ. ಗ್ರೀಕ್ ಪುರಾಣದಲ್ಲಿ ಬರುವ ಡಯೋಜನಿಸ್, ಒಂದು ಸಲ ಕೊಳದಿಂದ ನಾಯಿಯೊಂದು ನೀರು ಕುಡಿಯುವುದನ್ನು ನೋಡಿ, ‘ಈ ನಾಯಿ ಎಂಥಾ ವಿವೇಕಿ, ನೀರು ಕುಡಿಯಲು ಪಾತ್ರೆಯ ಅಗತ್ಯವಿಲ್ಲವೆಂದು ಅದಕ್ಕೆ ಗೊತ್ತಿದೆ’ ಎಂದುಕೊಂಡು, ತನ್ನ ಬಳಿ ಇದ್ದ ಏಕೈಕ ವಸ್ತುವಾಗಿದ್ದ ನೀರು ಕುಡಿಯುವ ಪಾತ್ರೆಯನ್ನು ಎಸೆಯುತ್ತಾನೆ. ಇದು ಸರಳತೆ ಮತ್ತು ಸ್ವಾವಲಂಬನೆಯ ತೀರಾ ‘ಅತಿ’ ಎನಿಸುವಂತಹ ಸ್ಥಿತಿಯಾಗಿದೆ.
ಆಹಾರ ತಿನ್ನಿಸುವುದಕ್ಕೂ ರೋಬೊದ ಸಹಾಯ ಬೇಕು ಎನ್ನುವುದು ಅವಲಂಬನೆಯಿಂದ ಉಂಟಾಗುವ ಮತ್ತೊಂದು ‘ಅತಿ’ಯನ್ನೇ ಸೂಚಿಸುತ್ತದೆ. ಈ ಅತಿಗಳ ನಡುವೆ ಒಂದು ಸಾಮಾನ್ಯ ಸ್ಥಿತಿಯನ್ನು ಕಾಯ್ದುಕೊಳ್ಳುವುದನ್ನು ಗಾಂಧಿ ತತ್ವಗಳಲ್ಲಿ ಕಾಣಬಹುದು. ‘ಹಿಂದ್ ಸ್ವರಾಜ್’ನಲ್ಲಿ ಯಂತ್ರ ನಾಗರಿಕತೆಯನ್ನು ವಿರೋಧಿಸುವ ಗಾಂಧಿಯವರು, ಮನುಷ್ಯನ ಉದ್ಯೋಗಕ್ಕೆ ಧಕ್ಕೆಯಾಗದ ಮಟ್ಟಿಗೆ ಯಂತ್ರಗಳ ಬಳಕೆಯನ್ನು ಒಪ್ಪಿಕೊಳ್ಳುತ್ತಾರೆ. ಅಂದರೆ ಅಲ್ಲಿನ ಆಶಯವು ಮನುಷ್ಯನ ಉದ್ಯೋಗಗಳು ಹೊರಟು ಹೋಗಬಾರದು ಎಂಬ ಕುರಿತಾಗಿದೆಯೇ ವಿನಾ ಯಂತ್ರಗಳನ್ನೇ ಅಳವಡಿಸಿಕೊಳ್ಳಬಾರದು ಎಂಬುದಲ್ಲ.
ಬೇಕೆನಿಸಿದ್ದು ಲಭ್ಯವಾಗದೇ ಇದ್ದರೆ ವಿಚಲಿತಗೊಳ್ಳದೆ ಬದುಕಲು ಸಾಧ್ಯ ಎಂಬ ಒಂದು ಪ್ರಜ್ಞೆ ಸ್ವಾವಲಂಬನೆಗೆ ಅಗತ್ಯವಿದೆ. ಗಾಂಧಿ ಚಿಂತನೆಯನ್ನು ಸಮಾಜದಲ್ಲಿ ಬೆಳೆಸುವುದೆಂದರೆ ಈ ಪ್ರಜ್ಞೆಯನ್ನು ಬೆಳೆಸುವುದಾಗಬೇಕು.
ಗಾಂಧಿ ತತ್ವಗಳು ಬದುಕಿನ ಸಹಜ ಲಯದಿಂದ ಆರಿಸಿಕೊಂಡವೇ ಆಗಿವೆ. ಸತ್ಯಾಗ್ರಹದ ಪರಿಕಲ್ಪನೆಗೂ ಮಕ್ಕಳ ಹಟಕ್ಕೂ ಸಂಬಂಧವನ್ನು ಕಾಣಬಹುದು. ತಂದೆ– ತಾಯಿಯಿಂದ ಏನಾದರೂ ಆಗಬೇಕಾಗಿದೆ ಎಂದು ಮಕ್ಕಳಿಗೆ ಒಂದು ಸಲ ಅನಿಸಿದರೆ ಸಾಕು, ಆಮೇಲೆ ಅದು ಸಿಗುವ ತನಕವೂ ಮಕ್ಕಳು ಬಿಡುವುದಿಲ್ಲ. ಹಿರಿಯರು ಯಾವ ಶಿಕ್ಷೆಯನ್ನು ಕೊಟ್ಟರೂ ನಂತರವೂ ಅವರು ತಮ್ಮ ಬೇಡಿಕೆಯನ್ನು ಕೈಬಿಡುವುದಿಲ್ಲ. ನಮ್ಮ ಸಾಂಸಾರಿಕ ಬದುಕಿನಲ್ಲಿ ಕಾಣಿಸುವ ತೀರಾ ಸಾಮಾನ್ಯವೆನಿಸುವ ಈ ಸಂಗತಿಯೇ ಒಂದು ಖಚಿತ ಸೈದ್ಧಾಂತಿಕ ರೂಪದಲ್ಲಿ ಮರು ವಿನ್ಯಾಸಗೊಳಿಸಲ್ಪಟ್ಟಾಗ ‘ಸತ್ಯಾಗ್ರಹ’ ಆಗುತ್ತದೆ. ಸತ್ಯಾಗ್ರಹವು ಮಕ್ಕಳ ಬೇಡಿಕೆಗಳ ಹಟದಷ್ಟೇ ಸರಳವಾದದ್ದು ಎಂಬುದನ್ನು ಮನವರಿಕೆ ಮಾಡಲು ಹೊರಟಾಗ ಗಾಂಧಿಯವರ ವಿಚಾರಗಳು ಜನರ ಸಹಜ ಬದುಕಿನೊಂದಿಗೆ ವೈಚಾರಿಕವಾಗಿ ಸಂಪರ್ಕವನ್ನು ಸ್ಥಾಪಿಸಿಕೊಳ್ಳುತ್ತವೆ.
ಇಂದು ಗಾಂಧಿಯವರನ್ನು ನಾನಾ ಕಾರಣಗಳಿಗಾಗಿ ಮತ್ತು ಕಾರಣ ಇಲ್ಲದೆ ಇದ್ದಾಗಲೂ ಟೀಕೆ ಮಾಡಲಾಗುತ್ತಿದೆ. ಮುಖ್ಯವಾಗಿ, ಅಹಿಂಸೆಯ ತತ್ವ ಬಹಳಷ್ಟು ಟೀಕೆಗೆ ಒಳಗಾಗಿದೆ. ಆದರೆ ಬ್ರಿಟಿಷ್ ಸೈನ್ಯದಲ್ಲಿದ್ದ ಸೈನಿಕರು, ಪೊಲೀಸ್ ವ್ಯವಸ್ಥೆಯಲ್ಲಿದ್ದ ಪೊಲೀಸರು ಯಾರು? ಎಲ್ಲರೂ ಭಾರತೀಯರೇ. ಆಗ ಸಶಸ್ತ್ರ ಹೋರಾಟ ನಡೆಸಿದ್ದರೆ, ಭಾರತೀಯರು ಭಾರತೀಯರನ್ನೇ ಕೊಂದುಕೊಳ್ಳಬೇಕಾದ ಪರಿಸ್ಥಿತಿಯನ್ನು ತಮ್ಮ ‘ಅಹಿಂಸೆ’ಯ ತತ್ವದ ಮೂಲಕ ಗಾಂಧೀಜಿ ಬದಲಾಯಿಸಿದರು. ಇದು ಅಂದಿನ ಜನಜೀವನದ ವಾಸ್ತವಿಕ ಸತ್ಯವಾಗಿತ್ತು. ಜನಜೀವನದ ಸಹಜ ಸತ್ಯಗಳನ್ನು ಹೇಳಿದಾಗ ಜನರಿಗೆ ಗಾಂಧಿಯವರ ತತ್ವದೊಂದಿಗೆ ವೈಚಾರಿಕ ಸಂಪರ್ಕ ಏರ್ಪಡಲು ಸಾಧ್ಯವಾಗುತ್ತದೆ.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿ ಭಾಗವಹಿಸುವುದಕ್ಕಿಂತ ಮೊದಲು ನಡೆದ ಹಿಂಸಾತ್ಮಕ ಹೋರಾಟಗಳೇನೂ ಯಶಸ್ವಿಯಾಗಿರಲಿಲ್ಲ. ಎಷ್ಟು ಸಶಸ್ತ್ರ ಬಂಡಾಯಗಳು ನಡೆದರೂ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿರಲಿಲ್ಲ. ಗಾಂಧಿಯವರು ಸಮುದಾಯದ್ವೇಷ ವಾದಕ್ಕೆ ವಿರುದ್ಧವಾಗಿ ಇದ್ದರು. ಇಂದು ಸಮುದಾಯದ್ವೇಷ ವಾದವನ್ನು ಪ್ರತಿಪಾದಿಸುವ ಯಾರು ಕೂಡ ಯಾವ ಸಮುದಾಯದೊಂದಿಗೂ ಸಂಪರ್ಕವನ್ನೇ ಕಡಿದುಕೊಂಡಿಲ್ಲ. ಕೊಡು-ಕೊಳ್ಳುವ ವ್ಯವಹಾರಗಳು, ಸಂಬಂಧಗಳೆಲ್ಲವೂ ಎಲ್ಲ ಸಮುದಾಯಗಳೊಂದಿಗೆ ಎಲ್ಲರಿಗೂ ಇವೆ. ಗಾಂಧಿಯವರನ್ನು ವಿರೋಧಿಸಲಿಕ್ಕಾಗಿ ಇರುವ ಹಿಂಸಾವಾದವನ್ನು ಪ್ರತಿಪಾದಿಸುವ ತಂಡಗಳೆಲ್ಲವೂ ಅವು ಪ್ರತಿಭಟಿಸಬೇಕಾಗಿ ಬಂದಾಗ ಧರಣಿ ಸತ್ಯಾಗ್ರಹ, ರ‌್ಯಾಲಿ, ಕಪ್ಪುಪಟ್ಟಿಯಂತಹ ತಂತ್ರಗಳ ಮೊರೆ ಹೋಗುತ್ತವೆಯೇ ವಿನಾ ಬಾಂಬ್ ಹಿಡಿದುಕೊಂಡು ಸಶಸ್ತ್ರ ದಾಳಿ ಮಾಡುವುದಿಲ್ಲ.
ಗಾಂಧಿಯವರನ್ನು ಟೀಕಿಸುವವರು ಕೂಡ ಅನುಸರಿಸುತ್ತಿರುವುದು ಅವರ ತತ್ವಗಳನ್ನೇ. ಏಕೆಂದರೆ ಮಾಡಲು ಸಾಧ್ಯವಾಗುವುದು ಅಷ್ಟನ್ನೆ. ವಾಸ್ತವದ ಈ ಸಾಧ್ಯತೆಯನ್ನು ಮನವರಿಕೆ ಮಾಡಿದಾಗ ಗಾಂಧಿ ತತ್ವಗಳು ವೈಚಾರಿಕ ಸಂಪರ್ಕವನ್ನು ಪಡೆಯುತ್ತವೆ.
‘ಚರಕದಿಂದ ಸ್ವಾತಂತ್ರ್ಯ ಬಂತಾ?’ ಎಂಬ ಗಾಂಧಿ ವಿರೋಧಿಯಾದ ಜನಪ್ರಿಯ ಪ್ರತಿಪಾದನೆಯೊಂದಿದೆ. ಇವತ್ತು ಇದನ್ನು ಕೇಳುವಾಗ ಎಲ್ಲರಿಗೂ ಒಂದು ಕ್ಷಣಕ್ಕೆ ‘ಹೌದಲ್ಲ, ನೂಲು ತೆಗೆದರೆ ಸ್ವಾತಂತ್ರ್ಯ ಸಿಗುತ್ತದೆಯೇ’ ಎಂದೇ ಅನಿಸುತ್ತದೆ. ಆದರೆ ಆ ಕಾಲಕ್ಕೆ ಭಾರತದಲ್ಲಿ ಬ್ರಿಟಿಷರ ಬಟ್ಟೆ ವ್ಯಾಪಾರ ಅವರ ವರಮಾನದ ಪ್ರಮುಖ ಮೂಲವಾಗಿತ್ತು. ದುಂಡುಮೇಜಿನ ಪರಿಷತ್ತಿಗೆ ಲಂಡನ್‌ಗೆ ಗಾಂಧಿ ಹೋಗಿದ್ದಾಗ ಮ್ಯಾಂಚೆಸ್ಟರ್‌ನ ಗಿರಣಿ ಕಾರ್ಮಿಕ ವರ್ಗವು ತಮ್ಮ ಉದ್ಯೋಗ ನಾಶವಾಗುವಂತೆ ಮಾಡಿದವರು ಎಂದು ಗಾಂಧಿ ವಿರುದ್ಧ ಪ್ರತಿಭಟನೆಯನ್ನೂ ಮಾಡಿತ್ತು. ಅಂದರೆ ಚರಕ ಚಳವಳಿಯು ಬ್ರಿಟಿಷರನ್ನು ಆರ್ಥಿಕವಾಗಿ ದುರ್ಬಲಗೊಳ್ಳುವಂತೆ ಮಾಡಿದ ಚಳವಳಿಯೂ ಆಗಿತ್ತು.
ವೈಸರಾಯ್ ವವೆಲ್ ಅವರು, ‘ಭಾರತವನ್ನು ಇನ್ನು ನಿಯಂತ್ರಿಸಬೇಕಾದರೆ ಬ್ರಿಟನ್‌ನಿಂದ ಹಣ ತರಬೇಕಷ್ಟೆ’ ಎಂದು ಬ್ರಿಟಿಷ್ ಸರ್ಕಾರಕ್ಕೆ 1942ರಲ್ಲಿ ಪತ್ರ ಬರೆದಿದ್ದರು. ಈ ಇಡೀ ಪ್ರಕ್ರಿಯೆಯಲ್ಲಿ ಗಾಂಧಿಯವರ ಚರಕ ಚಳವಳಿಯ ಪಾತ್ರ ಎಷ್ಟಿದೆ ಎಂಬುದು ಅರ್ಥ ಆಗಬೇಕಾದರೆ ವಾಸ್ತವಿಕ ನೆಲೆಯಲ್ಲಿ ಗಾಂಧಿ ತತ್ವಗಳನ್ನು ಮನವರಿಕೆ ಮಾಡಿಕೊಡಬೇಕು. ಅಂದರೆ ಗಾಂಧಿ ತತ್ವಗಳು ನಮ್ಮ ಜೀವನಕ್ಕೆ ಯಾವ ರೀತಿ ಉಪಯುಕ್ತವಾಗುತ್ತವೆ, ಗಾಂಧಿ ಆ ಕಾಲದಲ್ಲಿ ಯಾಕೆ ಆ ರೀತಿ ವರ್ತಿಸಿದರು ಎಂಬುದೆಲ್ಲ ಗೊತ್ತಾಗಬೇಕಾದರೆ ವಾಸ್ತವಿಕ ನೆಲೆಯಲ್ಲಿ ಗಾಂಧಿಯವರನ್ನು ವೈಚಾರಿಕವಾಗಿ ಜನಜೀವನದೊಟ್ಟಿಗೆ ಸಂಪರ್ಕಿಸುವ ಕಾರ್ಯವನ್ನು ಮಾಡಬೇಕು.
ಇತ್ತೀಚೆಗೆ ಗಾಂಧಿ ವಿರೋಧಿಗಳ ಆರ್ಭಟವು ಬಹಳ ಮಂದಿಗೆ ಅಸಂತೋಷವನ್ನು ಉಂಟು ಮಾಡಿರುವುದು ನಿಜ. ಇದಕ್ಕೆ ತಕ್ಕ ಕಾನೂನು ಕ್ರಮಗಳ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಮಾತನಾಡುವವರ ಬಾಯಿ ಮುಚ್ಚಿಸಲು ಕಾನೂನು ಸಹಾಯ ಮಾಡಬಹುದು, ಆದರೆ ಮಾತನಾಡುವವರ ಅಭಿಪ್ರಾಯವನ್ನೇ ಅದು ಬದಲಿಸುವುದಿಲ್ಲ. ಅಭಿಪ್ರಾಯವೇ ಬದಲಾಗಬೇಕಾದರೆ ಅರಿವು ಹುಟ್ಟಬೇಕು. ಅದನ್ನು ಗಾಂಧಿಯವರ ಅಸ್ತಿತ್ವ ನಮ್ಮ ಬದುಕಿನಲ್ಲಿ ಸಹಜವಾಗಿ ಹೇಗೆ ಬಂದಿದೆ ಎಂದು ಮನವರಿಕೆ ಮಾಡುವ ಮೂಲಕವೇ ಸಾಧಿಸಲು ಸಾಧ್ಯವಾಗುತ್ತದೆ.
ಕುವೆಂಪು, ಬೇಂದ್ರೆ, ಪು.ತಿ.ನ, ಡಿ.ವಿ.ಜಿ, ಅಡಿಗ ಮುಂತಾದವರು ಗಾಂಧಿ ಬಗ್ಗೆ ಬರೆದ ಕವಿತೆಗಳಲ್ಲಿ ಗಾಂಧಿಯವರ ಮೇಲೆ ಇದ್ದ ಅಪಾರ ಗೌರವವನ್ನು ಕಾಣಬಹುದು. ಆದರೆ 1990ರ ಸುಮಾರಿನ ನಂತರ ಬಂದ ಗಾಂಧಿಯವರ ಕುರಿತ ಬಹುತೇಕ ಕವಿತೆಗಳು ಗಾಂಧಿಯವರ ಮುಂದೆ ತಮಗಾಗಬೇಕಾದ್ದು ಆಗುತ್ತಿಲ್ಲ ಎಂದು ದೂರು ಕೊಡುವಂತೆಯೋ, ಗಾಂಧಿ ಮಾಡಿದ್ದು ಸರಿಯಾಗಲಿಲ್ಲ ಎಂದು ಗಾಂಧಿಗೆ ಅರ್ಥ ಮಾಡಿಸುವಂತೆಯೋ ಇವೆಯೇ ವಿನಾ ಗಾಂಧಿ ಚಿಂತನೆಗಳ ಬಗೆಗಿನ ಶ್ರದ್ಧೆಯಂತೆ ಕಾಣುವುದಿಲ್ಲ.
ತಮಗಾಗದವರನ್ನು ಎದುರಿಸಲಿಕ್ಕಾಗಿ ಗಾಂಧಿಯ ಬಗ್ಗೆ ಮಾತನಾಡುತ್ತಾ ಹೋದರೆ ಗಾಂಧಿ ಎಂದೂ ತಮ್ಮ ಜೀವನದ ಭಾಗವಾಗಿ ಜನರಿಗೆ ಗೊತ್ತಾಗುವುದೇ ಇಲ್ಲ. ಆದ್ದರಿಂದ ಗಾಂಧಿಯವರನ್ನು ವೈಚಾರಿಕವಾಗಿ ಜನಜೀವನಕ್ಕೆ ಸಂಪರ್ಕಿಸುವಂತೆ ಹೇಳುವ ಕ್ರಮವೊಂದನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.