ADVERTISEMENT

ವಿಶ್ಲೇಷಣೆ: ಅರ್ಜೆಂಟೀನಾ ಬಿಕ್ಕಟ್ಟು ಮತ್ತು ಡಾಲರೀಕರಣ

ಆರ್ಥಿಕ ತುರ್ತುಪರಿಸ್ಥಿತಿ ಘೋಷಣೆ, ಹಲವು ಕ್ರಮ ಜಾರಿ

ವೇಣುಗೋಪಾಲ್‌ ಟಿ.ಎಸ್‌.
Published 17 ಜನವರಿ 2024, 21:37 IST
Last Updated 17 ಜನವರಿ 2024, 21:37 IST
   

ಜೇವಿಯರ್ ಮಿಲೆ, ಅರ್ಜೆಂಟೀನಾದ ಹೊಸ ಅಧ್ಯಕ್ಷ. ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ದೇಶದ ಕೇಂದ್ರೀಯ ಬ್ಯಾಂಕಿನ ಪ್ರತಿಕೃತಿಯನ್ನು ಕೋಲಿನಿಂದ ಒಡೆದುಹಾಕುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕೇಂದ್ರೀಯ ಬ್ಯಾಂಕನ್ನು ಮುಚ್ಚುವುದು ಚುನಾವಣೆ ವೇಳೆ ಅವರು ನೀಡಿದ್ದ ಭರವಸೆಯೂ ಆಗಿತ್ತು. ಹಾಗೆಯೇ ದೇಶದ ಕರೆನ್ಸಿಯಾದ ಪೆಸೊವನ್ನು ರದ್ದುಗೊಳಿಸಿ, ಅಮೆರಿಕದ ಡಾಲರನ್ನು ತಮ್ಮ ದೇಶದ ಕರೆನ್ಸಿಯನ್ನಾಗಿಸುವುದಾಗಿ ಘೋಷಿಸಿದ್ದಾರೆ. ಖರ್ಚಿಗೆ ಕತ್ತರಿ ಹಾಕುವುದು, ತೆರಿಗೆಯಲ್ಲಿ ಕಡಿತ, ಸರ್ಕಾರದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದು,ಸಚಿವರ ಸಂಖ್ಯೆಯನ್ನು ಇಳಿಸುವುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವಿಮೆ ಆಧಾರಿತ ವ್ಯವಸ್ಥೆಯನ್ನಾಗಿ ರೂಪಿಸುವುದು ಇವೆಲ್ಲಾ ಅವರ ಯೋಜನೆಗಳು. ಒಟ್ಟಾರೆ ಅವರ ಪ್ರಕಾರ, ಆರ್ಥಿಕತೆಯ ನಿರ್ವಹಣೆಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿಗಳು ಇರಬಾರದು.  

ಅರ್ಜೆಂಟೀನಾದಲ್ಲಿ ಆರ್ಥಿಕತೆ ಹದಗೆಟ್ಟಿದೆ. ಹಣದುಬ್ಬರ ವಿಪರೀತಕ್ಕೆ ಹೋಗಿದೆ. ಇಂದು ಇದ್ದ ಬೆಲೆ ನಾಳೆ ಇರುವುದಿಲ್ಲ. ಜಿಡಿಪಿ ನಿರಂತರವಾಗಿ ಕುಸಿಯುತ್ತಿದೆ. ವಿತ್ತೀಯ ಕೊರತೆ 43 ಬಿಲಿಯನ್ ಡಾಲರ್ (ಅಂದಾಜು ₹ 3.57 ಲಕ್ಷ ಕೋಟಿ) ದಾಟಿದೆ. ಐಎಂಎಫ್‌ನಿಂದ ಪಡೆದಿರುವ ಸಾಲವೇ 44 ಬಿಲಿಯನ್ ಡಾಲರ್‌ನಷ್ಟಿದೆ (₹ 3.65 ಲಕ್ಷ ಕೋಟಿ). ಜೊತೆಗೆ ಬೇರೆ ಬೇರೆ ಮೂಲಗಳಿಂದಲೂ ವಿಪರೀತ ಸಾಲ ಮಾಡಿಕೊಂಡಿದೆ. ಸದ್ಯಕ್ಕಂತೂ ಸಾಲ ತೀರಿಸುವ ಸ್ಥಿತಿಯಲ್ಲಿ ಇಲ್ಲ.

ಅರ್ಜೆಂಟೀನಾದ ಈ ಸ್ಥಿತಿಗೆ ಹಿಂದಿನ ಸರ್ಕಾರಗಳು ಮಾಡಿಕೊಂಡ ಎಡವಟ್ಟುಗಳು ಕಾರಣ. ಉದಾಹರಣೆಗೆ, ಪಾವತಿ ಕೊರತೆ ಸರಿದೂಗಿಸುವ ಉದ್ದೇಶದಿಂದ ಹಿಂದಿನ ಅಧ್ಯಕ್ಷ ಮೆಕ್ರಿ ವಿಪರೀತ ಸಾಲ ಮಾಡಿಕೊಂಡಿದ್ದರು. ಅಸಲು ಹಾಗೂ ಬಡ್ಡಿ ಸೇರಿಕೊಂಡು ವಿತ್ತೀಯ ಕೊರತೆ ಇನ್ನಷ್ಟು ಹೆಚ್ಚಿತು. ಡಾಲರ್ ಎದುರು ಪೆಸೊ ಮೌಲ್ಯ ನೆಲಕಚ್ಚಿತು. ಆಮದು ಮಾಡಿಕೊಳ್ಳುತ್ತಿದ್ದ ಪದಾರ್ಥಗಳ ಬೆಲೆ ವಿಪರೀತವಾಯಿತು. ಅದರ ಪರಿಣಾಮವಾಗಿ ಉತ್ಪಾದನಾ ವೆಚ್ಚ ಹೆಚ್ಚಾಯಿತು. ಹಣದುಬ್ಬರದ ಪ್ರಮಾಣ ಇನ್ನಷ್ಟು ಹೆಚ್ಚಾಯಿತು. ಜನರ ಕೊಳ್ಳುವ ಶಕ್ತಿ ಕಡಿಮೆಯಾಯಿತು. ಮುಳುಗುವ ಆತಂಕದಲ್ಲಿದ್ದ ಜನರಿಗೆ ಮಿಲೆ ಅವರ ಭರವಸೆಗಳು ವಿಶ್ವಾಸ ಮೂಡಿಸಿರಬೇಕು. ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆಯಾದರು.

ADVERTISEMENT

ಅರ್ಥಶಾಸ್ತ್ರಜ್ಞರಾದ ಮಿಲೆ ತಮ್ಮನ್ನು ‘ಅರಾಜಕತಾವಾದಿ ಬಂಡವಾಳಶಾಹಿ’ ಎಂದು ಕರೆದು
ಕೊಳ್ಳುತ್ತಾರೆ. ಎಲ್ಲವೂ ಖಾಸಗೀಕರಣಗೊಳ್ಳಬೇಕು, ಆರ್ಥಿಕ ವಿಚಾರದಲ್ಲಿ ಅನವಶ್ಯಕವಾಗಿ ಸರ್ಕಾರ ಮೂಗುತೂರಿಸಬಾರದು ಎಂದು ಭಾವಿಸುವ ಗುಂಪಿಗೆ ಸೇರಿದವರು. ಅರ್ಜೆಂಟೀನಾದ ಆರ್ಥಿಕ ಬಿಕ್ಕಟ್ಟಿಗೆ ಅವರ ಪರಿಹಾರ ಸರಳ. ಡಾಲರನ್ನು ದೇಶದ ಕರೆನ್ಸಿಯನ್ನಾಗಿ ಮಾಡಿಕೊಳ್ಳುವುದು. ಕೇಂದ್ರೀಯ ಬ್ಯಾಂಕನ್ನು ಮುಚ್ಚಿಬಿಡುವುದು. ಇನ್ನುಮುಂದೆ ಪೆಸೊವನ್ನು ಮುದ್ರಿಸಬೇಕಾಗಿಲ್ಲ. ಹಣಕಾಸು ನೀತಿಯನ್ನು ರೂಪಿಸುವ ಜವಾಬ್ದಾರಿಯೂ ಇಲ್ಲ. ಹೆಚ್ಚು ಮಿತವಾಗಿ, ಜವಾಬ್ದಾರಿಯಿಂದ ಖರ್ಚು ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ. ಹಣದುಬ್ಬರದ ಜೊತೆಗೆ ಇತರ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ.
ಹೂಡಿಕೆದಾರರಿಗೆ ದೇಶದ ಆರ್ಥಿಕತೆಯ ಮೇಲೆ ವಿಶ್ವಾಸ ಮೂಡುತ್ತದೆ. ಹೂಡಿಕೆ ಹೆಚ್ಚುತ್ತದೆ. ಆರ್ಥಿಕತೆ ಸುಧಾರಿಸುತ್ತದೆ. ಇದು ಸ್ಥೂಲವಾಗಿ ಅವರ ತರ್ಕ.

ಡಾಲರೀಕರಣ ಹೊಸದೇನೂ ಅಲ್ಲ. ಕೆಲವು ದೇಶಗಳಲ್ಲಿ ಪ್ರಯೋಗ ಮಾಡಲಾಗಿದೆ. ಅರ್ಜೆಂಟೀನಾ
ದಲ್ಲೇ ಅದರ ಇನ್ನೊಂದು ರೂಪವಾಗಿದ್ದ ಕರೆನ್ಸಿ ಬೋರ್ಡ್ ವ್ಯವಸ್ಥೆ ಜಾರಿಯಲ್ಲಿತ್ತು. ಅದರಲ್ಲಿ ಎರಡು ಕರೆನ್ಸಿಗಳ ನಡುವಿನ ವಿನಿಮಯ ದರವನ್ನು ನಿರ್ಧರಿಸಲಾಗುತ್ತದೆ. 1991ರಲ್ಲಿ ಅರ್ಜೆಂಟೀನಾದಲ್ಲಿ ಒಂದು ಡಾಲರಿಗೆ ಒಂದು ಪೆಸೊ ಎಂದು ನಿರ್ಧರಿಸಲಾಗಿತ್ತು. ಈ ವಿನಿಮಯ ದರವನ್ನು ಕಾಪಾಡಿಕೊಳ್ಳುವುದು ಕರೆನ್ಸಿ ಬೋರ್ಡಿನ ಕೆಲಸ. ವಿನಿಮಯ ದರವನ್ನು ಬದಲಿಸುವುದಕ್ಕೆ ಅವಕಾಶವಿರಲಿಲ್ಲ. ಈ ಕ್ರಮದಿಂದ ಹಣದುಬ್ಬರ ಕಡಿಮೆಯಾಯಿತು. ಆದರೆ ದೇಶಕ್ಕೆ ಬೇರೆ ಸಮಸ್ಯೆ ಎದುರಾಯಿತು. 2001ರಲ್ಲಿ ಕಾಣಿಸಿಕೊಂಡ ಜಾಗತಿಕ ಬಿಕ್ಕಟ್ಟಿನಿಂದಾಗಿ ಬ್ರೆಜಿಲ್ ಮೊದಲಾದ ದೇಶಗಳ ಕರೆನ್ಸಿಗಳ ಮೌಲ್ಯ ಕುಸಿಯಿತು. ಅಲ್ಲಿಂದ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದು ಬೇರೆ ದೇಶಗಳಿಗೆ ಅಗ್ಗವಾಯಿತು. ಆದರೆ ಪೆಸೊ ಡಾಲರ್‌ನೊಂದಿಗೆ ತೆಕ್ಕೆಹಾಕಿಕೊಂಡಿದ್ದರಿಂದ ಅಲ್ಲಿ ಬೆಲೆ ಹೆಚ್ಚೇ ಇತ್ತು. ಬ್ರೆಜಿಲ್‌ನೊಂದಿಗೆ ಸ್ಪರ್ಧಿಸುವುದು ಅರ್ಜೆಂಟೀನಾಗೆ ಕಷ್ಟವಾಯಿತು. ಅದರ ರಫ್ತಿಗೆ ಹೊಡೆತ ಬಿತ್ತು. ಹೀಗೆ, ಹೊರಗಿನ ಹೊಡೆತ ತಡೆದುಕೊಳ್ಳಲಾಗದೆ ಕರೆನ್ಸಿ ಬೋರ್ಡಿನ ವ್ಯವಸ್ಥೆಯನ್ನು ಕೈಬಿಡಬೇಕಾಯಿತು.

ಡಾಲರೀಕರಣ ಇದಕ್ಕಿಂತ ಒಂದು ಹೆಜ್ಜೆ ಮುಂದೆ. ಈ ವ್ಯವಸ್ಥೆಯಲ್ಲಿ ಪೆಸೊ ಇರುವುದೇ ಇಲ್ಲ. ಡಾಲರ್‌ದೇ ಸಾಮ್ರಾಜ್ಯ. ಡಾಲರ್ ಕೊರತೆಯುಂಟಾದರೆ ಅದನ್ನು ಮುದ್ರಿಸುವುದಕ್ಕಂತೂ ಸಾಧ್ಯವಿಲ್ಲ. ಇರುವ ದಾರಿ ಅಂದರೆ ಸಾಲ ಮಾಡಬೇಕು ಅಥವಾ ಇರುವ ಸ್ವತ್ತನ್ನು ಮಾರಿಕೊಳ್ಳಬೇಕು. ಇಲ್ಲದಿದ್ದರೆ ವಿವಿಧ ಬಾಬ್ತಿಗೆ ಖರ್ಚು ಮಾಡುವುದಕ್ಕೆ, ಬಂಡವಾಳ ಹೂಡುವುದಕ್ಕೆ ಸರ್ಕಾರದ ಬೊಕ್ಕಸದಲ್ಲಿ ಹಣ ಇರುವುದಿಲ್ಲ. ಹೂಡಿಕೆ ಕಮ್ಮಿಯಾದರೆ ಜಿಡಿಪಿ ತಗ್ಗುತ್ತದೆ. ಬೆಳವಣಿಗೆ ಕುಂಠಿತವಾಗುತ್ತದೆ. ಅಂದರೆ ಡಾಲರೀಕರಣದಿಂದ ಹಣದುಬ್ಬರ ಕಡಿಮೆಯಾಗಬಹುದು. ಆದರೆ ಆರ್ಥಿಕತೆ ಕುಸಿಯುವ ಸಾಧ್ಯತೆಯೂ ಇದೆ. ಈಕ್ವೆಡಾರ್‌ನಂತಹ ದೇಶಗಳಲ್ಲಿ ಹೀಗೆ ಆಗಿದೆ. ಯೂರೊವನ್ನು ತಮ್ಮ ರಾಷ್ಟ್ರೀಯ ಕರೆನ್ಸಿಯನ್ನಾಗಿ
ಮಾಡಿಕೊಂಡ ಇಟಲಿ, ಸ್ಪೇನ್, ಗ್ರೀಸ್‌ನಲ್ಲೂ ಆರ್ಥಿಕ ಬೆಳವಣಿಗೆ ಕುಸಿದಿತ್ತು. ಅಂದರೆ ಆರ್ಥಿಕತೆಯ
ಡಾಲರೀಕರಣದಿಂದ ಅರ್ಜೆಂಟೀನಾದ ಮೂಲಭೂತ ಸಮಸ್ಯೆಗಳು ಪರಿಹಾರವಾಗಿಬಿಡುವ ಖಾತರಿಯೇನಿಲ್ಲ.

ಡಾಲರೀಕರಣವನ್ನು ವಿರೋಧಿಸುವವರ ಪ್ರಕಾರ, ಅರ್ಜೆಂಟೀನಾದ ಆರ್ಥಿಕತೆಯಲ್ಲಿ ಪೆಸೊಗೆ ಒಂದು ಮಹತ್ವವಿದೆ. ಜನ ಬಹುತೇಕ ಡಾಲರನ್ನೇ ಬಳಸುತ್ತಿದ್ದರೂ
ಪೆಸೊವನ್ನು ದಿಢೀರನೆ ಹಿಂತೆಗೆದುಕೊಳ್ಳುವುದು ಸುಲಭವಲ್ಲ. ಅದು ಬರೀ ಹಣವಲ್ಲ. ದೇಶದ ಸಾಂಸ್ಕೃತಿಕ ಅಸ್ಮಿತೆ  ರೂಪಿಸುವುದರಲ್ಲೂ ಅದಕ್ಕೊಂದು ಪಾತ್ರವಿದೆ. ದೇಶದೊಳಗಿನ ವ್ಯವಹಾರಕ್ಕೆ ಮಾತ್ರವಲ್ಲ, ಹಣದ ಪೂರೈಕೆ ನಿರ್ವಹಿಸುವುದಕ್ಕೆ, ಬಡ್ಡಿದರ, ವಿನಿಮಯ ದರ ನಿರ್ಧರಿಸುವುದಕ್ಕೂ ಅಧಿಕಾರ ನೀಡುತ್ತದೆ. ನಮ್ಮ ಆರ್ಥಿಕತೆಯನ್ನು ನಿರ್ವಹಿಸಲು ನಮ್ಮದಲ್ಲದ ಕರೆನ್ಸಿ ಬಳಸಿಕೊಂಡಾಗ ಈ ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳುತ್ತೇವೆ. ಅದರಿಂದ ಒಂದು ದೇಶದ ಆರ್ಥಿಕತೆಗಷ್ಟೇ ಅಲ್ಲ ಪ್ರಜಾಸತ್ತೆಗೂ ತೊಂದರೆಯಾಗುತ್ತದೆ. ಉದಾಹರಣೆಗೆ, ಡಾಲರೀಕರಣದ ಪ್ರಕ್ರಿಯೆಯಿಂದಾಗಿ ಅರ್ಜೆಂಟೀನಾಕ್ಕೆ ತನ್ನದೇ ಆದ ಕರೆನ್ಸಿ ಇರುವುದಿಲ್ಲ. ಕೇಂದ್ರೀಯ ಬ್ಯಾಂಕು ಇರುವುದಿಲ್ಲ. ಹಾಗಾಗಿ, ಅದಕ್ಕೆ ತನ್ನದೇ ಹಣಕಾಸು ನೀತಿ ರೂಪಿಸುವುದಕ್ಕೆ ಕಷ್ಟವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಅಮೆರಿಕ ತನ್ನ ದೇಶದಲ್ಲಿನ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಬಡ್ಡಿದರವನ್ನು ಏರಿಸುತ್ತದೆ ಎಂದು ಭಾವಿಸಿಕೊಳ್ಳಿ. ಅಲ್ಲಿ ಹೆಚ್ಚಿನ ಬಡ್ಡಿ ಸಿಗುವುದರಿಂದ ಡಾಲರ್ ಅರ್ಜೆಂಟೀನಾದಿಂದ ಅಮೆರಿಕಕ್ಕೆ ಹರಿದುಹೋಗಲು
ಪ್ರಾರಂಭಿಸುತ್ತದೆ. ಅದನ್ನು ತಪ್ಪಿಸಲು ಅರ್ಜೆಂಟೀನಾ ಕೂಡ ಬಡ್ಡಿದರ ಹೆಚ್ಚಿಸಬೇಕು. ಆದರೆ ಅಂತಹ ಆರ್ಥಿಕ ನೀತಿ ರೂಪಿಸುವುದು ಸುಲಭವಲ್ಲ. ಹಾಗಾಗಿ, ಅರ್ಜೆಂಟೀನಾದ ಆರ್ಥಿಕತೆ ಗಂಭೀರವಾದ ಬಿಕ್ಕಟ್ಟಿನಲ್ಲಿ ಸಿಕ್ಕಿಬೀಳುವ ಅಪಾಯ ಸೃಷ್ಟಿಯಾಗುತ್ತದೆ.

ಜೊತೆಗೆ, ಡಾಲರೀಕರಣದ ಪ್ರಕ್ರಿಯೆ ಸಫಲವಾಗಬೇಕಾದರೆ ಅರ್ಜೆಂಟೀನಾ ಹಲವು ಕ್ರಮಗಳನ್ನು ತೆಗೆದು
ಕೊಳ್ಳಬೇಕು. ವಿತ್ತೀಯ ಶಿಸ್ತು ಸಾಧ್ಯವಾಗಬೇಕು. ಸಾಲದ ಮರುಪಾವತಿಗೆ ವ್ಯವಸ್ಥೆಯಾಗಬೇಕು. ಡಾಲರಿನ ಹೊರಹರಿವು ನಿಲ್ಲಬೇಕು. ಆರೋಗ್ಯ, ಶಿಕ್ಷಣ, ಪಿಂಚಣಿಯಂತಹ ವ್ಯವಸ್ಥೆಗಳಲ್ಲಿ ಸುಧಾರಣೆಯಾಗಬೇಕು. ಇವೆಲ್ಲವನ್ನೂ ಹಾಗೇ ಸಾಧಿಸುವುದಕ್ಕೆ ಸಾಧ್ಯವಾಗುವುದಾ
ದರೆ ಡಾಲರೀಕರಣವೇ ಬೇಕಾಗದಿರಬಹುದು.

ಡಾಲರೀಕರಣ ಪ್ರಕ್ರಿಯೆ ಪ್ರಾರಂಭಿಸುವುದಕ್ಕೂ ಮಿಲೆ ಅವರಿಗೆ ಹಲವು ಸಮಸ್ಯೆಗಳಿವೆ. ಮೊದಲನೆಯದಾಗಿ, ಪ್ರಕ್ರಿಯೆಗೆ ಬೇಕಾದಷ್ಟು ಡಾಲರ್ ಸರ್ಕಾರದಲ್ಲಿ ಇಲ್ಲ. ಹೆಚ್ಚೆಂದರೆ 40 ಬಿಲಿಯನ್ ಡಾಲರ್ (₹ 3.32 ಲಕ್ಷ ಕೋಟಿ) ಇರಬಹುದು. ಸಾಲ ಸೇರಿದಂತೆ ಕೊಡಬೇಕಾದ್ದನ್ನೆಲ್ಲಾ ಕೊಟ್ಟುಬಿಟ್ಟರೆ ಏನೂ ಉಳಿಯುವುದಿಲ್ಲ. ಜನರಲ್ಲಿರುವ ಪೆಸೊವನ್ನು ಡಾಲರಿಗೆ ಬದಲಿಸಿಕೊಡಲೂ ಅದು ಪರದಾಡಬೇಕಾದ ಸ್ಥಿತಿಯಲ್ಲಿದೆ.

ಮತ್ತೊಂದು ಅಡಚಣೆಯೆಂದರೆ, ಇದನ್ನು ಜಾರಿಗೊಳಿಸುವುದಕ್ಕೆ ಸಂಸತ್ತಿನ ಒಪ್ಪಿಗೆ ಬೇಕು. ಅಲ್ಲಿ ಅವರಿಗೆ ಬಹುಮತ ಇಲ್ಲ. ಸದ್ಯಕ್ಕೆ ಎರಡು ವರ್ಷಗಳ ಕಾಲ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿ ಹಲವು ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇದು ಬಹುಕಾಲ ಸಾಧ್ಯವಾಗುವುದಿಲ್ಲ. ಒಳಗಿನ ಬಿಕ್ಕಟ್ಟಿನ ಪರಿಹಾರಕ್ಕೆ ಹೊರಗಿನ ಶಕ್ತಿಯನ್ನು ನೆಚ್ಚಿಕೊಳ್ಳುವುದು ತಾಳಿಕೆಯ ಹಾದಿಯಾಗಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.