ಭಾರತೀಯ ಸಾಮಾಜಿಕ ಮನಸ್ಥಿತಿ ಕೆಲವು ಸನ್ನಿವೇಶಗಳಲ್ಲಿ ಜಾತಿಯಾಧಾರಿತವಾಗಿಯೂ ಮತ್ತೆ ಕೆಲವು ಸನ್ನಿವೇಶಗಳಲ್ಲಿ ಉಪಜಾತಿ ಆಧಾರಿತವಾಗಿಯೂ ಆಲೋಚಿಸುತ್ತದೆ. ಮೀಸಲಾತಿ ಹಂಚಿಕೆ ಎನ್ನುವುದು ಹಲವು ಜಾತಿಗಳನ್ನು ಒಂದು ಗುಂಪೆಂದು ವಿಭಾಗಿಸಿ ಒದಗಿಸಿಕೊಟ್ಟಿರುವ ಅವಕಾಶಗಳ ಹಂಚಿಕೆಯಾಗಿದೆ. ಆರಂಭದಲ್ಲಿ ಇದು ಪ್ರಾತಿನಿಧ್ಯ ಪಡೆದಿಲ್ಲದ ಜಾತಿ ಸಮುದಾಯಗಳಿಗೆ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಒಂದು ಆಶಯದಿಂದ ರೂಪುಗೊಂಡಿತ್ತು. ಬರುಬರುತ್ತಾ ಅದು ಬೇರೆ ಬೇರೆ ಜಾತಿಗುಂಪುಗಳ ನಡುವೆ ಅವಕಾಶಗಳ ಹಂಚಿಕೆ ಎನ್ನುವ ನೆಲೆಗೆ ಬಂದು ಮುಟ್ಟಿದೆ. ಈ ಅವಕಾಶಗಳ ಹಂಚಿಕೆ ಎನ್ನುವುದುತನ್ನಷ್ಟಕ್ಕೆ ದೋಷಯುಕ್ತ ಪರಿಕಲ್ಪನೆ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರಾತಿನಿಧ್ಯ ಒದಗಿಸುವ ಅಗತ್ಯವಿದ್ದೇ ಇರುತ್ತದೆ.
ಈ ಹಾದಿಯಲ್ಲಿ ಸರ್ಕಾರಗಳು ಬಹಳ ಮುಂದೆ ಹೋಗಿಯಾಗಿದೆ. ಮೀಸಲು ಪಟ್ಟಿಯಲ್ಲಿ ಸೇರಿಲ್ಲದ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇ 10ರಷ್ಟು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಬ್ರಾಹ್ಮಣ, ಮರಾಠ, ಲಿಂಗಾಯತವೂ ಸೇರಿದಂತೆ ಹಲವು ಜಾತಿ ಅಭಿವೃದ್ಧಿ ನಿಗಮಗಳನ್ನು ರಚಿಸಿ ಅವುಗಳಿಗೆ ಅನುದಾನ ಘೋಷಿಸಲಾಗಿದೆ. ಪ್ರತಿಯೊಂದು ಜಾತಿಯೂ ತನ್ನ ಅಭಿವೃದ್ಧಿಗಾಗಿ ನಿಗಮ ರಚನೆ ಮಾಡುವಂತೆ ಬೇಡಿಕೆ ಇಡುತ್ತಿದೆ. ಹೀಗೆ ಜಾತಿವಾರು ನಿಗಮಗಳಿಗೆ ರಾಜ್ಯದ ಆಯವ್ಯಯದಲ್ಲಿ ಹಣಕಾಸು ಮೀಸಲಿಡುವುದು ಮುಂದುವರಿದಂತೆ ಆಯಾ ಜಾತಿ ಗುಂಪಿನಲ್ಲಿರುವ ಉಪಜಾತಿಗಳು ತಮ್ಮ ಪಾಲು ಹಾಗೂ ಪ್ರಾತಿನಿಧ್ಯದ ಪ್ರಶ್ನೆಯನ್ನು ಎತ್ತಿಕೊಂಡು ಹೋರಾಡಲು ಮುಂದಾಗುತ್ತಿವೆ. ಗೋಜಲು ನಿರ್ಮಾಣವಾಗುತ್ತಿರುವುದೇ ಇಲ್ಲಿ.
ನಮ್ಮ ಸಮಾಜದಲ್ಲಿರುವ ಜಾತಿಗಳು ಒಂದೇ ರೀತಿಯ ಪರಿಸ್ಥಿತಿಗಳನ್ನು ಹೊಂದಿಲ್ಲ. ಅದೇ ರೀತಿ ಒಂದು ಜಾತಿ ಎಂದು ಕರೆಸಿಕೊಳ್ಳುವ ಜಾತಿ ಗುಂಪುಗಳಲ್ಲಿರುವ ವಿವಿಧ ಉಪಜಾತಿಗಳ ನಡುವೆಯೂ ಸಮಾನ ಪರಿಸ್ಥಿತಿಗಳಿಲ್ಲ. ಹೀಗಾಗಿ ಜಾತಿ ಗುಂಪುಗಳೊಳಗೇ ಹೆಚ್ಚು ಅವಕಾಶ ಪಡೆದ, ಅಷ್ಟು ಅವಕಾಶ ಪಡೆಯಲು ಸಾಧ್ಯವಾಗದ ಘಟಕಗಳು ಇವೆ. ಇದರಿಂದಾಗಿ ಒಳ ಮೀಸಲಾತಿ ಹಾಗೂ ಉಪಜಾತಿವಾರು ಸಂಪನ್ಮೂಲ ನಿಗದೀಕರಣದಂತಹ ಸಮಸ್ಯೆಗಳು ತೀವ್ರವಾಗಿ ಮುನ್ನೆಲೆಗೆ ಬರುತ್ತಿವೆ. ಇದು ಒಂದು ಬಗೆಯ ತಿಕ್ಕಾಟ, ಒಂದು ಬಗೆಯ ಕಚ್ಚಾಟ. ಬಹುಪಾಲು ಎಲ್ಲಾ ಜಾತಿ ಗುಂಪುಗಳೊಳಗೂ ಇದು ಒಳಗುದಿಯನ್ನು ನಿರ್ಮಿಸಿದೆ. ಪ್ರಭುತ್ವ ಈ ಒಳಗುದಿಯನ್ನು ಸಮಂಜಸವಾಗಿ ಬಗೆಹರಿಸಲು ಪ್ರಯತ್ನಿಸುತ್ತಿಲ್ಲ.
ಈ ಒಳಗುದಿಯಿಂದ ತನಗೆ ಬೇಕಾದಂತೆ ಲಾಭ ಮಾಡಿಕೊಳ್ಳಲು ಬಿಜೆಪಿ ಮತ್ತು ಸಂಘ ಪರಿವಾರ ಸನ್ನದ್ಧವಾಗಿದೆ. ಹಲವು ಜಾತಿ ಗುಂಪುಗಳ ನಡುವೆ ಉಪಜಾತಿ ವಿಂಗಡೀಕರಣ ತೀವ್ರಗೊಂಡಂತೆ ಹಿಂದುತ್ವದ ರಾಜಕಾರಣಕ್ಕೆ ಕೆಲವು ತಾಂತ್ರಿಕ ಪ್ರಯೋಜನಗಳಿವೆ. ಈ ಪ್ರಯೋಜನಗಳಲ್ಲಿ ಮೊದಲನೆಯದು, ಯಾವುದೇ ಜಾತಿ ಗುಂಪು ವಿಸ್ತಾರ ನೆಲೆಯಲ್ಲಿ ಸಂಘಟಿತವಾಗಿ ತನಗೊಬ್ಬ ಪ್ರಬಲ ನಾಯಕನನ್ನು ರೂಪಿಸಿಕೊಳ್ಳಲು ಸಾಧ್ಯವಾಗದಂತೆ ನೋಡಿಕೊಳ್ಳುವುದು. ಪ್ರತಿ ರಾಜ್ಯದಲ್ಲಿಯೂ ಕೆಲವು ಜಾತಿಗಳಿಗೆ ಹೆಚ್ಚಿನ ಸಂಖ್ಯಾಬಲವಿದೆ. ಅಂತಹ ಜಾತಿಗಳಿಂದ ಪ್ರಬಲ ನಾಯಕರು ಮೂಡಿಬಂದರೆ ಹಿಂದುತ್ವ ಪ್ರತಿಪಾದನೆ ಮಾಡುವ ಸಂಘಪರಿವಾರದ ಗರ್ಭಗುಡಿ ಸೂತ್ರಧಾರಿತ್ವಕ್ಕೆ ತೊಡಕುಗಳೇರ್ಪಡುತ್ತವೆ. ಆ ಬಗೆಯ ತೊಡಕನ್ನು ಬಿ. ಎಸ್, ಯಡಿಯೂರಪ್ಪ ಸಂಘಪರಿವಾರಕ್ಕೆ ಉಂಟು ಮಾಡಿದ್ದಾರೆನ್ನುವುದು ಈಗ ಒಳಮಾತಾಗಿ ಉಳಿದಿಲ್ಲ. ಯಡಿಯೂರಪ್ಪನವರಿಗೆ ಲಿಂಗಾಯತ ಸಮುದಾಯ ಒಗ್ಗಟ್ಟಿನ ನೆಲೆಯಲ್ಲಿ ಬೆಂಬಲ ನೀಡುವ ಪರಿಸ್ಥಿತಿ ಇರುವವರೆಗೂ ಬಿಜೆಪಿ ಒಂದು ತೂಕವಾದರೆ, ಯಡಿಯೂರಪ್ಪನವರು ಇನ್ನೊಂದು ತೂಕ ಎಂಬ ಪರಿಸ್ಥಿತಿ ತಪ್ಪುವುದಿಲ್ಲ. ಸಂಘಪರಿವಾರದ ಇಷ್ಟಾನಿಷ್ಟಗಳನ್ನು ಪರಿಗಣಿಸದೆಯೇ ಯಡಿಯೂರಪ್ಪ ಕಾರ್ಯಕ್ರಮ ಹಾಕಿಕೊಳ್ಳಬಹುದು. ಇದು ಸಂಘಪರಿವಾರಕ್ಕೆ ತಾತ್ವಿಕ ತೊಡಕು. ಬೇಕೆನಿಸಿದಾಗ ಬದಲಿಸಿ ಬೇಕಾದವರನ್ನು ಅಧಿಕಾರ ಕೇಂದ್ರಕ್ಕೆ ತಂದು ಕೂರಿಸಲಾಗದ ಅನನುಕೂಲ. ಇದು ಸಂಘ ಪರಿವಾರದ ಸೂತ್ರಧಾರಿ ಪಾತ್ರಕ್ಕೆ ರಾಜಕೀಯ ತೊಡಕು. ಇದಕ್ಕೆ ಅವರಿಗೆ ಪರಿಹಾರವಾಗಿ ಕಂಡಿರುವುದೇ ಪಂಚಮಸಾಲಿ ಪಂಗಡ ಶುರು ಮಾಡಿರುವ ಹೋರಾಟ. ಬಸನಗೌಡ ಪಾಟೀಲ ಯತ್ನಾಳರ ಅಸೀಮ ಧೈರ್ಯವಂತಿಕೆಯ ಹಿಂದೆ ತನಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಎಂಬ ಆಕ್ರೋಶ ಎಷ್ಟಿದೆಯೋ ಅದರಷ್ಟೇ ಸಂಘಪರಿವಾರದ ಕುಮ್ಮಕ್ಕಿನ ಪ್ರೋತ್ಸಾಹವೂ ಇದೆ ಎಂದು ಭಾಸವಾಗುತ್ತದೆ.
ಪಕ್ಷದೊಳಗೆ ಯಡಿಯೂರಪ್ಪನವರಿಗೆ ಮೂಗುದಾರ ಹಾಕಲು ಪಂಚಮಸಾಲಿ 2ಎ ಮೀಸಲಾತಿ ಬೇಡಿಕೆಯನ್ನು ಹಿಂಬಾಗಿಲಿನಿಂದ ಪೋಷಿಸುತ್ತಿರುವ ಸಂಘಪರಿವಾರ, ಪಕ್ಷದ ಹೊರಗೆ ಅಹಿಂದ ಸಮುದಾಯಗಳ ಪ್ರಭಾವಶಾಲಿ ನಾಯಕರಾಗಿರುವ, ಸೈದ್ಧಾಂತಿಕವಾಗಿ- ರಾಜಕೀಯವಾಗಿ ಸಂಘಪರಿವಾರದ ಜೊತೆ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲದ ಸಿದ್ದರಾಮಯ್ಯನವರನ್ನು ನಿರ್ಬಲಗೊಳಿಸಲು ಕುರುಬರ ಹೋರಾಟವನ್ನು ಬೆಂಬಲಿಸಿದಂತೆ ಕಾಣಿಸುತ್ತಿದೆ. ಪಂಚಮಸಾಲಿಗಳಿಗೆ 2ಎ ಸೇರಬೇಕೆಂಬ ಆಸೆ, ಕುರುಬರಿಗೆ ಎಸ್.ಟಿ.ಗೆ ಸೇರಬೇಕೆಂಬ ಆಸೆ ಇದೆಯೆಂಬುದೂ ವಾಸ್ತವವೇ. ಆಲೋಚನೆ ಮಾತ್ರವಾಗಿದ್ದ ಒಂದು ಅಂಶವನ್ನು ಆಚರಣೆಗಿಳಿಸಲು ಬಂದಿರುವ ಪ್ರೇರಣೆಗಳು ಮಾತ್ರ ರಾಜಕೀಯ ತಂತ್ರಗಾರಿಕೆಯ ಭಾಗವೇ ಆಗಿವೆ.
ತಮ್ಮನ್ನು 2ಎಗೆ ಸೇರಿಸಲು ಯಡಿಯೂರಪ್ಪ ಸಿದ್ಧನಾಗಲಿಲ್ಲ ಎಂದು ಪಂಚಮಸಾಲಿಗಳು ಅವರ ನಾಯಕತ್ವವನ್ನು ತಿರಸ್ಕರಿಸಬೇಕು; ಹಾಗೆಯೇ ತಮ್ಮನ್ನು ಎಸ್.ಟಿ. ಮಾಡಿಸಲು ಸಿದ್ಧರಾಮಯ್ಯ ಬರಲಿಲ್ಲ ಎಂದು ಅವರ ಬೆಂಬಲದ ಭದ್ರ ಕೋಟೆ ಒಡೆಯಬೇಕು. ಹೀಗಾಗುವುದು ಸಂಘಪರಿವಾರಕ್ಕೆ ಅತ್ಯಂತ ಪ್ರಿಯವಾದ ಸಂಗತಿಯೆನ್ನುವುದನ್ನು ಊಹಿಸಲು ಹೆಚ್ಚಿನ ಜಾಣ್ಮೆಯೇನೂ ಬೇಕಾಗುವುದಿಲ್ಲ.
ಇಂತಹ ಗೊಂದಲದಿಂದ ಮತ್ತೊಂದು ದೂರೋದ್ದೇಶವೂ ಈಡೇರಲು ಸಾಧ್ಯವಿದೆ. ನಿರ್ಣಾಯಕ ಬಲವಾಗಿ ರೂಪುಗೊಳ್ಳದ ವಿಘಟಿತ ಜಾತಿಗುಂಪುಗಳ ನಡುವೆ ಕಾಲಾನುಕಾಲಕ್ಕೆ ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಸಮೀಕರಣ ಏರ್ಪಡಿಸುತ್ತಾ, ಈ ಚೌಕಾಸಿ ನಡೆಸುವುದಕ್ಕೆ ಶಕ್ತಿ ಇರುವ ಏಕೈಕ ಶಕ್ತಿಕೇಂದ್ರವಾಗಿ ತನ್ನ ಸೂತ್ರಧಾರಿ ರಾಜಕೀಯ ನಡೆಸಲು ಸಂಘಪರಿವಾರಕ್ಕೆ ಸಾಧ್ಯವಾಗುತ್ತದೆ. ಭಾರತೀಯ ಸಮಾಜ ಹಿಂದುಳಿದ, ದಲಿತ, ರೈತ, ಮಹಿಳೆ ಹೀಗೆ ಸಮುದಾಯಾಧಾರಿತವಾಗಿ ಸಂಘಟಿತವಾಗುವ ಬದಲು ಛೀದ್ರೀಕರಣಗೊಂಡಿದ್ದರೆ ಅದನ್ನು ಏಕಸೂತ್ರಕ್ಕೆ ಒಳಪಡಿಸುವ ಮಂತ್ರದಂಡವಾಗಿ `ಹಿಂದುತ್ವ’ ಬಳಕೆಯಾಗುತ್ತದೆ. ಈ ಕಾರಣಕ್ಕಾಗಿಯೇ ವಿಂಗಡಣೆಯ ತಿದಿಯನ್ನು ಒತ್ತಿ ಅಸಮಾಧಾನದ ಬೆಂಕಿಯನ್ನು ಬೆಳೆಸಲಾಗುತ್ತಿದೆ. ಪಂಚಮಸಾಲಿ ಬೇಡಿಕೆಯಿಂದ ಒಂದು ಕಡೆ ಇತರೆ ಲಿಂಗಾಯತರೂ, ಮತ್ತೊಂದು ಕಡೆ ಕುರುಬರೂ, ಕುರುಬರ ಬೇಡಿಕೆಯಿಂದ ಬೇಡರೂ ಆತಂಕಿತರಾಗುವುದು ಸಹಜವಾಗಿದೆ. ತಮ್ಮ ಆಸೆ ಈಡೇರಿಕೆಗಾಗಿ ಅಥವಾ ಆತಂಕ ಪರಿಹಾರಕ್ಕಾಗಿ ‘ಅನ್ಯಥಾ ಶರಣಂ ನಾಸ್ತಿ. ತ್ವಮೇವ ಶರಣಂ ಮಮ’ ಎಂದು ತಮ್ಮ ಬಳಿಗೇ ಬರುವಂತಾಗಬೇಕು, ಆ ಸಮುದಾಯಗಳು ತಮ್ಮ ಬೆಂಬಲಿಗರಾಗಿಯೇ ಉಳಿಯುವಂತಾಗಬೇಕು ಎಂಬುದು ಸಂಘಪರಿವಾರದವರ ಸೂತ್ರವಿದ್ದಂತಿದೆ.
ಇದು ಹೀಗೆಯೇ ಬೆಳೆದು `ಮೀಸಲಾತಿ’ ಎಂಬುದೇ ಬಗೆಹರಿಯದ ಗೋಜಲಾಗಿ, ಅದರ ಹಿನ್ನೆಲೆಯಲ್ಲಿ ಸಮಾಜದೊಳಗೆ ತಿಕ್ಕಾಟಗಳು ಆರಂಭವಾದರೆ ಮೀಸಲಾತಿ ನೀತಿಗೊಂದು ಗತಿ ಕಾಣಿಸಲು ಸನ್ನಿವೇಶ ಪಕ್ವವಾಗುತ್ತದೆ ಎಂಬುದು ಅತ್ಯಂತ ಪ್ರಿಯವಾದ, ದೀರ್ಘಕಾಲೀನವಾದ ಹರಕೆ ಸಂಘಪರಿವಾರದವರದ್ದು. ಅದು ಇನ್ನೂ ಮುಂದಿನ ಕತೆ. ಈಗಲ್ಲ.
(ಲೇಖಕ: ಸಾಮಾಜಿಕ ಚಿಂತಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.