ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎನ್ನುವುದು ಪರೀಕ್ಷಾ ಪದ್ಧತಿ ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ವೇ ಸಾಧಾರಣವಾದ ಅನಿಸಿಕೆಯಾಗಿರುತ್ತದೆ. ಆದರೆ ಇಂತಹ ವ್ಯವಸ್ಥೆಯಲ್ಲಿ ಕಲಿಕೆಗೆ ಯಾವ ಮಹತ್ವವೂ ಇರುವುದಿಲ್ಲ. ವೆಬ್ ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಬೇಕಾದ ಸ್ಥಿತಿಯೇ ಅದಕ್ಕೆ ನಿದರ್ಶನ. ಪರೀಕ್ಷೆಯಲ್ಲಿ ನಕಲು ತಡೆಗಟ್ಟುವುದು ವೆಬ್ ಕ್ಯಾಮೆರಾ ಅಳವಡಿಕೆಯ ಉದ್ದೇಶ. ಪರೀಕ್ಷೆಯಲ್ಲಿ ನಕಲು ನಡೆಯುತ್ತದೆ ಎಂದಾದರೆ, ಕಲಿಕೆ ನಡೆದಿಲ್ಲ ಎಂದೇ ಅರ್ಥ. ಕಲಿಕೆಯು ನೈತಿಕ ಪ್ರಜ್ಞೆ, ಜೀವನಮೌಲ್ಯಗಳ ಅರಿವು, ಕಾನೂನು ಪಾಲನೆಯ ಎಚ್ಚರದೊಂದಿಗೆ ನಡೆದಾಗ ಮಾತ್ರ ಅದು ಕಲಿಕೆ ಎನಿಸಿಕೊಳ್ಳುತ್ತದೆ.
ನಕಲು ಮಾಡಬಾರದು ಎಂಬ ಅರಿವು ವಿದ್ಯಾರ್ಥಿಗೆ ಬಂದಿಲ್ಲ ಎಂದರೆ, ಹತ್ತು ವರ್ಷಗಳ ಕಾಲ ಅವನಿಗೆ ಪಾಠ ಮಾಡಿದ್ದು ನಿರರ್ಥಕ ಎಂದಾಯಿತು. ಎರಡನೆಯದಾಗಿ, ನಕಲು ನಡೆಯುತ್ತದೆ ಎಂದಾದರೆ, ಅದಕ್ಕೆ ಶಿಕ್ಷಕರು ಮೌನ ಸಮ್ಮತಿಯನ್ನಾದರೂ ಕೊಟ್ಟಿರಲೇಬೇಕಲ್ಲವೆ? ಶಿಕ್ಷಕರು ಎರಡೆರಡು ಪದವಿ ಪಡೆದವರು! ಅಂದರೆ ಪದವಿಯ ತನಕ ಕಲಿತರೂ ನೈತಿಕತೆಯ ಪ್ರಜ್ಞೆ, ಕಾನೂನಿನ ಎಚ್ಚರವನ್ನು ಬೆಳೆಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ ಎಂದಾಯಿತು. ಹಾಗಾದರೆ ನಿಜವಾದ ಸಮಸ್ಯೆ ಇರುವುದು ಎಲ್ಲಿ? ಸಮಸ್ಯೆ ಇರುವುದು ಕಲಿಕಾ ಪ್ರಕ್ರಿಯೆಯಲ್ಲಿಯೇ ವಿನಾ ಪರೀಕ್ಷೆಯಲ್ಲಿ ಅಲ್ಲ. ಅಂದರೆ ಸರಿಪಡಿಸಬೇಕಾದದ್ದು ಕೂಡ ಕಲಿಕಾ ಪ್ರಕ್ರಿಯೆಯನ್ನೇ ವಿನಾ ಪರೀಕ್ಷೆಯನ್ನಲ್ಲ.
ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನೇ ಕಲಿಕಾ ಸಾಧನೆ ಎಂದು ಯಾವಾಗ ಸಾರ್ವತ್ರಿಕವಾಗಿ ಭಾವಿಸ
ಲಾಗುತ್ತದೆಯೋ ಅಲ್ಲಿ ಪರೀಕ್ಷೆಯಲ್ಲಿ ಹೇಗಾದರೂ ಉತ್ತೀರ್ಣರಾದರೆ ಸಾಕು ಎಂಬ ಮನಃಸ್ಥಿತಿ ರೂಪುಗೊಳ್ಳು
ತ್ತದೆ. ಅದು ಕಲಿಕೆಯನ್ನು ಸೋಲಿಸುತ್ತದೆ. ಕಲಿಕೆಯ ಮೂಲಭೂತ ವ್ಯಾಖ್ಯಾನವೇ ವಿದ್ಯಾರ್ಥಿಗಳ ವರ್ತನೆಯಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತರುವುದು. ಆದರೆ ಪರೀಕ್ಷೆ ಸಂದರ್ಭದಲ್ಲಿ ವೆಬ್ ಕ್ಯಾಮೆರಾ ಹಾಕಬೇಕಾದ ಪರಿಸ್ಥಿತಿಯು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಪರಿವರ್ತನೆ ಆಗಿಲ್ಲದಿರು
ವುದನ್ನು ಸೂಚಿಸುತ್ತದೆ. ಆದ್ದರಿಂದ ಸಾರ್ವತ್ರಿಕ ನೆಲೆಯಲ್ಲಿ ಕಲಿಕಾ ಸಾಧನೆಯನ್ನು ಪರೀಕ್ಷೆಯ ಹೊರತಾಗಿ ಗುರುತಿಸುವ ಚಿಂತನೆಗಳು ಮೂಡಿಬರಬೇಕಾದ ಅಗತ್ಯವಿದೆ. ಸದ್ಯಕ್ಕೆ ಕಲಿಕಾ ಸಾಧನೆಯನ್ನು ಅಳೆಯಲು ‘ನಿರಂತರ ವ್ಯಾಪಕ ಮೌಲ್ಯಮಾಪನ’ ಎಂಬ ವ್ಯವಸ್ಥೆಯೊಂದಿದೆ. ಇದರ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ನಿರಂತರವಾಗಿ ಅಳೆಯಲಾಗುತ್ತದೆ. ಪಠ್ಯವಸ್ತು ಮತ್ತು ಅದರ ಆಚೆಗಿನ ವರ್ತನೆಗಳನ್ನು
ಒಳಗೊಂಡೇ ವಿದ್ಯಾರ್ಥಿಯ ಮೌಲ್ಯಮಾಪನ ಮಾಡಲಾಗುತ್ತದೆ. ಒಂಬತ್ತನೇ ತರಗತಿಯವರೆಗೂ ಇಂತಹ ಮೌಲ್ಯಮಾಪನಕ್ಕೇ ಮಹತ್ವವಿರುವುದು.
ಮೌಲ್ಯಮಾಪನದ ಜೊತೆಗೆ ಶಾಲಾ ಮಟ್ಟದಲ್ಲಿ ಪರೀಕ್ಷೆ ಇರುತ್ತದೆ. ಆದರೆ ಪರೀಕ್ಷೆಯೇ ಉತ್ತೀರ್ಣತೆಯ ಅಂತಿಮ ಮಾನದಂಡವಲ್ಲ. ಮೌಲ್ಯಮಾಪನದಲ್ಲಿ ವಿದ್ಯಾರ್ಥಿಯು ತೋರಿಸುವ ದಕ್ಷತೆಯ ಆಧಾರದಲ್ಲಿ ಉತ್ತೀರ್ಣಗೊಳಿಸಬಹುದು. ಹೀಗೆ ಒಂಬತ್ತು ವರ್ಷಗಳ ಕಾಲ ಕಲಿಕೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಿಯೂ ಹತ್ತನೇ ವರ್ಷದ ಪರೀಕ್ಷೆಯಲ್ಲಿ ಅಕ್ರಮ ನಡೆಯುವ ಸಂಭವ ಇದೆ ಎಂದಾದರೆ ಅದನ್ನು ಹೇಗೆ ಅರ್ಥೈಸುವುದು? ಅಷ್ಟು ವರ್ಷಗಳ ಕಾಲ ಇಂತಹ ವಿಧಾನದಲ್ಲಿ ಮೌಲ್ಯಮಾಪನ ನಡೆದಿಲ್ಲ ಅಥವಾ ಮೌಲ್ಯಮಾಪನ ಮಾಡಿದ ವಿಧಾನವೇ ದೋಷಪೂರ್ಣವಾಗಿತ್ತು ಎಂದು ಅರ್ಥವಾಗುತ್ತದೆ. ಪುನಃ, ಅದಕ್ಕೆ ಕಾರಣ ಇಡೀ ಸಾಮಾಜಿಕ ಮನೋಧರ್ಮದಲ್ಲಿ ಕಲಿಕೆ ಮತ್ತು ಮೌಲ್ಯಮಾಪನದ ಪರಿಗಣನೆಯೇ ಇಲ್ಲದಿರುವುದು.
‘ಉತ್ತೀರ್ಣರಾದರೇ?’ ಎನ್ನುವ ಪ್ರಶ್ನೆ ಮಾತ್ರ ಎಲ್ಲರಿಗೂ ಮುಖ್ಯವಾಗುತ್ತದೆ. ಅದುಬಿಟ್ಟರೆ, ಮೌಲ್ಯಮಾಪನಕ್ಕೆ ಒಳಪಡಿಸಿರುವರೇ, ಮೌಲ್ಯಮಾಪನದಲ್ಲಿ ಕಾಣಿಸಿದ ದೋಷಗಳೇನು, ಆ ದೋಷಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಸರಿಪಡಿಸಿ ಮುಂದಿನ ಮೌಲ್ಯಮಾಪನದ ಹೊತ್ತಿಗೆ ಹೇಗೆ ವಿದ್ಯಾರ್ಥಿಯಲ್ಲಿ ಪರಿವರ್ತನೆಯನ್ನು ತರಲಾಗಿದೆ ಎಂಬುದನ್ನು ಯಾರೂ ಗಮನಿಸುವುದಕ್ಕೇ ಹೋಗುವುದಿಲ್ಲ. ಆದ್ದರಿಂದಲೇ ಒಂಬತ್ತನೇ ತರಗತಿಯ ತನಕ ಉತ್ತೀರ್ಣಗೊಳಿಸುವ ಅಧಿಕಾರವು ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಆಡಳಿತ ಮಂಡಳಿಯ ಬಳಿ ಇರುತ್ತದೆ ಎಂದು ಎಲ್ಲರಿಗೂ ಅನ್ನಿಸುತ್ತಿರುತ್ತದೆ. ನಿಜವಾಗಿ ಒಂಬತ್ತನೇ ತರಗತಿಯ ತನಕವೂ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಅಧಿಕಾರವು ಇವರ ಬಳಿ ಇರುವುದಿಲ್ಲ. ಉತ್ತೀರ್ಣಗೊಳ್ಳುವ ಶಕ್ತಿಯು ವಿದ್ಯಾರ್ಥಿಯ ಬಳಿಯೇ ಇರುತ್ತದೆ. ಕಲಿಕೆ ನಡೆದಿದ್ದಾಗ, ಆ ಕಲಿಕೆಯನ್ನು ಮೌಲ್ಯಮಾಪನ ಮಾಡಿದಾಗ ಬರುವ ಫಲಿತಾಂಶದ ಆಧಾರದಲ್ಲೇ ಉತ್ತೀರ್ಣತೆ ನಡೆಯಬೇಕು.
ಈ ರೀತಿ ಕಲಿಕೆಯ ಮೌಲ್ಯಮಾಪನ ನಡೆಸಿದ್ದರೆ, ‘ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬರೆಯಲು ಬರುವುದಿಲ್ಲ’ ಎನ್ನುವ ದೂರು ಕೇಳಿಬರಲು ಸಾಧ್ಯವಿಲ್ಲ. ಏಕೆಂದರೆ, ಭಾಷಾ ಕೌಶಲಗಳಲ್ಲಿ ಬರೆಯುವ ಸಾಮರ್ಥ್ಯವೂ ಸೇರಿರುತ್ತದೆ. ಪರೀಕ್ಷೆಯಲ್ಲಿ ಅಕ್ರಮ ನಡೆಯಬಹುದು ಎಂಬ ಗುಮಾನಿ ಸಹ ಬರಲು ಸಾಧ್ಯವಿಲ್ಲ. ಏಕೆಂದರೆ ವಿದ್ಯಾರ್ಥಿಗಳ ಕಾರ್ಯನಿರ್ವಹಣಾ ಸಾಮರ್ಥ್ಯ, ವರ್ತನೆಯಲ್ಲಿ ಸಕಾರಾತ್ಮಕತೆ, ಚಟುವಟಿಕೆ ನಡೆಸುವ ಸಾಮರ್ಥ್ಯ ಇವೆಲ್ಲವುಗಳ ಮೌಲ್ಯಮಾಪನವನ್ನೂ ಒಳಗೊಂಡು ಉತ್ತೀರ್ಣರಾಗಬೇಕಿರುತ್ತದೆ. ಹೀಗೆ ಉತ್ತೀರ್ಣರಾದವರು ಹತ್ತನೇ ತರಗತಿಗೆ ಬರುವಾಗ ಸ್ವಯಂ ಶಿಸ್ತನ್ನು ರೂಢಿಸಿಕೊಂಡಿರುವುದಿಲ್ಲವೇ?
ಆದರೆ ವಾಸ್ತವದಲ್ಲಿ ಶಿಕ್ಷಣ ನೀತಿಗಳು ಮತ್ತು ಕಾಲಕಾಲಕ್ಕೆ ಮಾಡಿದ ಶೈಕ್ಷಣಿಕ ವರದಿಗಳ ಆಧಾರದಲ್ಲಿ ನಡೆಸಿದ ಕಲಿಕಾ ಮೌಲ್ಯಮಾಪನದ ಆದೇಶವು ನಿಜಾರ್ಥದಲ್ಲಿ ಅನುಷ್ಠಾನದಲ್ಲೇ ಇಲ್ಲ. ಆಡಳಿತ ಮಂಡಳಿಗಳ ಬಿಗಿ ಹಿಡಿತದಲ್ಲಿರುವ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗಿರುವ ಸ್ವಾತಂತ್ರ್ಯ ತೀರಾ ಸೀಮಿತವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಪ್ರಕ್ರಿಯೆ ನಡೆಸುವ ವಿಚಾರದಲ್ಲಿ ಶಿಕ್ಷಕರಿಗೆ ಬಹಳಷ್ಟು ಸ್ವಾತಂತ್ರ್ಯವಿದೆ. ಆದರೆ ಸಿಬ್ಬಂದಿ ಕೊರತೆ, ವರ್ಗಾವಣೆ ಸಮಸ್ಯೆ, ಇತರ ಕಾರ್ಯಗಳ ಒತ್ತಡಗಳೆಲ್ಲ ಸೇರಿ ಕಲಿಕಾ ಪ್ರಕ್ರಿಯೆ ಮತ್ತು ಮೌಲ್ಯಮಾಪನವನ್ನು ಪರಸ್ಪರ ಸಂಯೋಜಿಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
ಮುಖ್ಯವಾಗಿ ಕಲಿಕೆಯು ಸಮರ್ಪಕವಾಗಿ ನಡೆದು ಮೌಲ್ಯಮಾಪನಕ್ಕೆ ಒಳಪಡಿಸಬೇಕಾದರೆ, ಶಿಕ್ಷಕರಿಗೆ ತಮ್ಮ ಪ್ರತಿಯೊಬ್ಬ ವಿದ್ಯಾರ್ಥಿಯ ಕೌಟುಂಬಿಕ ಹಿನ್ನೆಲೆ, ವಿದ್ಯಾರ್ಥಿ ಬೆಳೆದುಬಂದ ಕ್ರಮ, ಶಾಲೆಯಲ್ಲಿ ಇಲ್ಲದ ಅವಧಿಯಲ್ಲಿ ವಿದ್ಯಾರ್ಥಿಯ ಚಟುವಟಿಕೆ ಎಲ್ಲದರ ಬಗ್ಗೆಯೂ ತಿಳಿವಳಿಕೆ ಇರಬೇಕಾಗುತ್ತದೆ. ಆ ರೀತಿಯಲ್ಲಿ ಒಬ್ಬ ಶಿಕ್ಷಕ, ಹತ್ತು ವಿದ್ಯಾರ್ಥಿಗಳನ್ನು ನಿರ್ವಹಿಸಬಹುದು. ಬಹಳ ಕಷ್ಟಪಟ್ಟರೆ ಇಪ್ಪತ್ತು ವಿದ್ಯಾರ್ಥಿಗಳನ್ನು ಮಾತ್ರ ನಿರ್ವಹಿಸಲು ಸಾಧ್ಯ. ಶಿಕ್ಷಕರ ಒದಗಣೆ ಮತ್ತು ನಿರ್ವಹಣೆಯಲ್ಲಿರುವ ಅವೈಚಾರಿಕ ಧೋರಣೆಗಳಿಂದಾಗಿ ಶಾಲಾ ಸನ್ನಿವೇಶದಲ್ಲೇ ಕಲಿಕೆ ಮತ್ತು ಮೌಲ್ಯಮಾಪನದ
ಪರಿಕಲ್ಪನೆಗಳ ಅರಿವಿನ ಕೊರತೆ ಇದೆ.
ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ತಮ್ಮನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಎಲ್ಲ ಶಿಕ್ಷಕರಿಗೂ ಅರ್ಥವಾಗಿದೆ. ಹಾಗಾಗದೇ ಇರಬೇಕಾದರೆ ಏನು ಮಾಡಬೇಕು? ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದರೆ ಆಯಿತು. ಹತ್ತನೇ ತರಗತಿಯ ಪರೀಕ್ಷೆ ಎದುರಾದಾಗ? ಆಗಲೂ ಶಿಕ್ಷಕರು ಸುರಕ್ಷಿತರಾಗಬೇಕಾದರೆ ವಿದ್ಯಾರ್ಥಿಗಳು ಹೇಗಾದರೂ ಉತ್ತೀರ್ಣರಾಗಬೇಕು. ಶಿಕ್ಷಕರಲ್ಲಿ ಇಷ್ಟೇ ತುಂಬಿಹೋದರೆ ಶಿಕ್ಷಣ ಯಶಸ್ವಿಯಾಗುವುದಿಲ್ಲ ಎಂದು ಸಮಾಜಕ್ಕೆ, ಮುಖ್ಯವಾಗಿ ಪಾಲಕರಿಗೆ ಅರ್ಥವಾಗಬೇಕು. ಆಗ ಅವರ ಬೇಡಿಕೆಯು ಕಲಿಕೆ ಮತ್ತು ಮೌಲ್ಯಮಾಪನದ ಪರವಾಗಿ ಇರುತ್ತದೆ. ಹೀಗಾದಾಗ, ಆಡಳಿತ ವ್ಯವಸ್ಥೆಯು ಯಾವುದೇ ಆಗಿರಲಿ ಪಾಲಕರ ಬೇಡಿಕೆಯನ್ನು ನಿರಾಕರಿಸಲು ಆಗುವುದಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಇನ್ಯಾರಲ್ಲೇ ಆಗಲಿ ದಂಡನೆಯ ಭಯವೊಂದೇ ಯಶಸ್ಸನ್ನು ತರುತ್ತದೆ ಎಂಬ ಪುರಾತನ ಆಲೋಚನೆಯನ್ನು ಕೈಬಿಡಬೇಕಾಗಿದೆ.
ಆದ್ದರಿಂದ ಕಲಿಕೆಯ ಪರಿಕಲ್ಪನೆ, ಮೌಲ್ಯಮಾಪನದ ಉದ್ದೇಶ, ಅದರ ವಿಧಾನಗಳು, ಅದರಿಂದ ಮಕ್ಕಳಲ್ಲಿ ಆಗುವ ಸಕಾರಾತ್ಮಕ ಪರಿವರ್ತನೆಗಳು ಮತ್ತು ಅದರಿಂದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಭವಿಷ್ಯಕ್ಕೆ ಆಗುವ ಉಪಯೋಗಗಳ ಬಗ್ಗೆ ಪಾಲಕರೂ ಸೇರಿದಂತೆ ಒಟ್ಟೂ ಸಮಾಜದಲ್ಲಿ ಅರಿವು ಹೆಚ್ಚಾಗುವ ಕಾರ್ಯ ಮೊದಲು ಆಗಬೇಕಾಗಿದೆ. ಈ ವಿಚಾರಗಳ ಕುರಿತು ಎಸ್‌ಡಿಎಂಸಿ ಸಭೆಗಳು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯವಸ್ಥಿತವಾದ ಶೈಕ್ಷಣಿಕ ಸಂವಾದಗಳು ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳು, ಇದೆಲ್ಲವನ್ನೂ ತಿಳಿದಿರುವ ಶಿಕ್ಷಕರು, ಶಿಕ್ಷಣ ಚಿಂತಕರು, ಮಾಧ್ಯಮಗಳು ಈ ದಿಸೆಯಲ್ಲಿ ತೊಡಗಿಕೊಳ್ಳಬೇಕಾದ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.