ಈ ವರ್ಷ ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಯ ವರ್ಷ. 79 ವರ್ಷಗಳ ಅವರ ಘಟನಾನಿಬಿಡ ಬದುಕು, ಅನೇಕ ಉದಾತ್ತ ಆಶೋತ್ತರಗಳಿಗೆ ಪರಿತಪಿಸಿದೆ. ಅಂತೆಯೇ ಅದು ಗಣನೀಯ ಸಾಧನೆಗಳಿಗೆ ಸಾಕ್ಷಿಯೂ ಆಗಿದೆ. ಜೊತೆಯಲ್ಲಿಯೇ ತೀವ್ರ ವೇದನೆಯ ಭ್ರಮನಿರಸನಗಳನ್ನೂ ಎದುರಿಸಿದೆ. ಮಾನವ ಬದುಕನ್ನು ಸಂಘಟಿಸುವ ಸ್ಥಿರ ನಿಯಮಗಳಾವುವು ಎನ್ನುವುದರ ಕುರಿತು ನಿರಂತರ ಶೋಧನೆಯನ್ನು ನಡೆಸಿದ ಗಾಂಧೀಜಿ ಬದುಕು ಹದಗೊಂಡ ಹಾಗೂ ಅವರ ಚಿಂತನೆ ಮೊನಚುಗೊಂಡ ರೀತಿಯ ಕುರಿತು ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇವೆ.
ಗಾಂಧೀಜಿ ಓರ್ವ ರಾಜಕೀಯ ತತ್ವಜ್ಞಾನಿ ಅಥವಾ ಇನ್ನೂ ಮುಂದುವರಿದು ಹೇಳುವುದಾದರೆ, ಅವರು ಓರ್ವ ನೈತಿಕ ರಾಜಕೀಯ ತತ್ವಪದಕಾರ. ಸಾರ್ವಜನಿಕ ಬದುಕಿನ ಸಂಘಟನೆಯ ನೈತಿಕ ಸೂತ್ರಗಳನ್ನು ಶೋಧಿಸುವ ಮತ್ತು ಅವುಗಳನ್ನು ಲೋಕಾರೂಢಿಗೊಳಿಸುವ ಪ್ರಯತ್ನಗಳನ್ನು ನಿರಂತರವಾಗಿ ನಡೆಸಿದ ಅವರನ್ನು ಇಂದಿನ ನಮ್ಮ ಪರಿಭಾಷೆಯಲ್ಲಿ ಪಬ್ಲಿಕ್ ಇಂಟಲೆಕ್ಚುವಲ್ ಎಂದು ಕರೆದರೂ ಅಡ್ಡಿ ಇಲ್ಲ. ಆದರೆ ಮಾರ್ಕ್ಸ್, ಕಾಂಟ್ ಅಥವಾ ಹೆಗೆಲ್‍ರಂತೆ ಗಾಂಧೀಜಿ, ರಾಜಕೀಯ ಚಿಂತನೆಯನ್ನು ವ್ಯವಸ್ಥಿತವಾಗಿ ಕಟ್ಟಿದವರಲ್ಲ. ಈ ಪಾಶ್ಚಿಮಾತ್ಯ ಚಿಂತಕರಲ್ಲಿ ಕಂಡುಬರುವ ತತ್ವಶಾಸ್ತ್ರೀಯ ಕ್ರಮಬದ್ಧತೆ ಗಾಂಧಿಯವರಲ್ಲಿ ಇದೆ ಎಂದೂ ಹೇಳಲಾಗದು. ಆದರೆ ಒಂದು ವಿಶಿಷ್ಟವಾದ ಮತ್ತು ಗಹನವಾದ ಅರ್ಥದಲ್ಲಿ ಅವರು ತತ್ವಜ್ಞಾನಿಯೇ.
ಗಾಂಧಿಯವರ ರಾಜಕೀಯ ತತ್ವಜ್ಞಾನ ಒಂದು ಸಮಗ್ರವಾದ ಜೀವನದೃಷ್ಟಿ. ಈ ಸಮಗ್ರ ಜೀವನದೃಷ್ಟಿಯಲ್ಲಿ ಧರ್ಮ, ನೈತಿಕತೆ, ರಾಜಕಾರಣ, ಸಾಮುದಾಯಿಕ ಬದುಕು ಹಾಗೂ ಆರ್ಥಿಕತೆಗಳು ಪ್ರತ್ಯೇಕ ಘಟಕಗಳಾಗಿರದೆ ಒಂದು ಸಾವಯವ ಸಂಬಂಧದಲ್ಲಿ ಕೂಡಿಕೊಂಡಿವೆ. ಹೀಗಾಗಿ ರಾಜಕಾರಣವನ್ನು ಅದರ ಸ್ವಾಯತ್ತತೆಯಲ್ಲಿ ಗುರುತಿಸಿ ಚಿಂತನೆ ನಡೆಸಿದ ತತ್ವಜ್ಞಾನಿಗಳ ಪರಂಪರೆಯಲ್ಲಿ ಗಾಂಧಿಯವರನ್ನು ಸೇರಿಸುವಂತಿಲ್ಲ. ಆದರೆ ರಾಜಕಾರಣ ವನ್ನು ಮೂಲಭೂತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿವರ್ತನೆಯ ಭೂಮಿಕೆಯೆಂದು ಪರಿಭಾವಿಸುವುದಾದರೆ ಹಾಗೂ ಈ ಭೂಮಿಕೆ ವಿಭಿನ್ನ ದೃಷ್ಟಿಕೋನಗಳ ಹಣಾಹಣಿಯಾಗಿರುತ್ತದೆ ಎಂದು ತಿಳಿಯುವುದಾದರೆ ಗಾಂಧೀಜಿ ಓರ್ವ ಮೂಲಜಿಜ್ಞಾಸಿಕ ರಾಜಕೀಯ ತತ್ವಜ್ಞಾನಿ. ಅವರಿಗೆ ರಾಜಕಾರಣವು ವಿಭಿನ್ನ ಚಿಂತನ ಕ್ರಮಗಳ ಜೊತೆ ಸಂವಾದ ನಡೆಸುವ ಒಂದು ಕುರುಕ್ಷೇತ್ರ. ಅಂತೆಯೇ, ಅದು ಅನ್ಯಾಯದ ವಿರುದ್ಧ ನ್ಯಾಯವನ್ನು, ಅನೈತಿಕತೆಯ ವಿರುದ್ಧ ನೈತಿಕತೆಯನ್ನು ಹಾಗೂ ಹಿಂಸೆಯ ವಿರುದ್ಧ ಅಹಿಂಸೆಯನ್ನು ಪ್ರತಿಪಾದಿಸುವ ಧರ್ಮಕ್ಷೇತ್ರ. ಹೀಗೆ ರಾಜಕಾರಣ ವನ್ನು ಸಂವಾದದ ಭೂಮಿಕೆಯಾಗಿ, ಕ್ರಿಯಾಶೀಲತೆಯ ನೆಲೆಯಾಗಿ ಹಾಗೂ ಅಧಿಕಾರಶಾಹಿಯ ವಿರುದ್ಧದ ಮಂತ್ರಾಸ್ತ್ರವಾಗಿ ಗಾಂಧೀಜಿ ಪರಿಭಾವಿಸುತ್ತಾರೆ.
ಗಾಂಧಿಯವರ ಈ ವಿಶಿಷ್ಟ ಬಗೆಯ ರಾಜಕೀಯ ತತ್ವಜ್ಞಾನ ಅವರಿಗೆ ಬದುಕಿನ ಯಾವುದೋ ಒಂದು ಘಟ್ಟದಲ್ಲಿ ಅನಾಮತ್ತಾಗಿ ಸಿಕ್ಕಿರುವಂತಹುದಲ್ಲ. ಅದು ತಮ್ಮ ಬದುಕಿನ ನಿರಂತರ ತಾಕಲಾಟಗಳಲ್ಲಿ ಅವರು ದಕ್ಕಿಸಿಕೊಂಡದ್ದು. ತಮ್ಮ ಬದುಕನ್ನು ಸತ್ಯಶೋಧನೆಯ, ಸತ್ಯಸಾಧನೆಯ ಹಾಗೂ ಸತ್ಯಾಗ್ರಹದ ವೇದಿಕೆಯಾಗಿ ಗ್ರಹಿಸಿದ ಗಾಂಧೀಜಿ, ತಾವು ಶೋಧಿಸಿದ ಸತ್ಯವನ್ನು ಸಾಧಿಸುವ ಹಾಗೂ ಅದನ್ನು ಆಗ್ರಹಿಸುವ ಒಂದು ನೈತಿಕ ರಾಜಕಾರಣವನ್ನು ತಮ್ಮ ಸಾರ್ವಜನಿಕ ಬದುಕಿನ ಹೆಜ್ಜೆ ಹೆಜ್ಜೆಗಳಲ್ಲಿ, ತಿರುವು-ಮುರುವುಗಳಲ್ಲಿ ರೂಪಿಸಿಕೊಂಡರು. ಅವರ ಈ ನೈತಿಕ ರಾಜಕಾರಣದ ರೂಪುಗೊಳ್ಳುವಿಕೆಯು ನಿರಾತಂಕವಾಗಿ ಸಂಭವಿಸಿದ್ದಲ್ಲ. ಅದು ಅನೇಕ ಬಗೆಯ ಧರ್ಮಸಂಕಟದಲ್ಲಿ ತೆವಳಿಕೊಂಡು ಬಂದದ್ದು ಮತ್ತು ರಾಜಕಾರಣದ ಕಷ್ಟಕಾರ್ಪಣ್ಯಗಳನ್ನು ದಾಟಿಕೊಂಡು ಬಂದ ಮಹಾಪ್ರಸ್ಥಾನ. ಆದ್ದರಿಂದಲೇ, ಗಾಂಧಿಯವರ ಸಮಗ್ರ ನೆಲೆಯ ರಾಜಕೀಯ ತತ್ವಜ್ಞಾನದ ಪ್ರಮೇಯ- ಪ್ರಮಾಣಗಳನ್ನು ಅವು ರೂಪುಗೊಂಡ ಸನ್ನಿವೇಶದಿಂದ ಪ್ರತ್ಯೇಕಿಸಿ ನೋಡಲಾಗದು.
ಬದುಕು ಮತ್ತು ಚಿಂತನೆ, ಆಚಾರ ಮತ್ತು ವಿಚಾರಗಳ ಸಾವಯವ ಅನುಭೂತಿಯ ನಿದರ್ಶನವಾಗಿರುವ ಗಾಂಧಿಯವರಿಗೆ ಸತ್ಯದ ಶೋಧನೆ ಮತ್ತು ಅದರ ಪ್ರತಿಪಾದನೆ ಪ್ರತ್ಯೇಕವಾದ ವಿದ್ಯಮಾನಗಳಲ್ಲ. ಅಂತೆಯೇ, ‘ಸ್ವ’ದ ಅರಿವು ಮತ್ತು ‘ಸ್ವರಾಜ್ಯ’ ಎರಡು ವಿಭಿನ್ನವಾದ ಸಂಗತಿಗಳೂ ಅಲ್ಲ. ಸಾಧನೆ ಮತ್ತು ಸಾಧನಗಳ ಅವಿನಾ ಸಂಬಂಧದಲ್ಲಿ ಹೊರಹೊಮ್ಮುವ ಅವರ ರಾಜಕೀಯ ತತ್ವಜ್ಞಾನವು ಜೀವನಾನುಭವದ ಬೆಳಕಿನಲ್ಲಿ ಹದಗೊಳ್ಳುವ, ಸ್ಫುಟಗೊಳ್ಳುವ, ಕೆಲವೊಮ್ಮೆ ಪರಿವರ್ತನೆ ಯನ್ನೂ ಹೊಂದುವ ಚಲನಶೀಲ ನೈತಿಕಮೀಮಾಂಸೆ.
ಗಾಂಧಿಯವರ ಬದುಕಿನ ವಿವಿಧ ಘಟ್ಟಗಳಲ್ಲಿ ಅವರು ಎದುರಿಸಿದ ಸವಾಲುಗಳು, ಅನುಭವಿಸಿದ ಬವಣೆಗಳು, ಇಟ್ಟ ತಪ್ಪು ಹೆಜ್ಜೆಗಳು ಅವರನ್ನು ನಿರಂತರವಾದ ಶೋಧನೆಗೆ ಉತ್ತೇಜಿಸಿದವು. ಅವರು ನಡೆಸಿದ ಈ ಶೋಧನೆ ಆತ್ಮಾವಲೋಕನವೂ ಹೌದು. ಅಂತೆಯೇ ಅದು ಸಮಾಜಮುಖಿ ನಡೆಯೂ ಹೌದು. ಸ್ವ-ವಿಮರ್ಶೆಯಿಂದ ಸ್ವ-ನಿಯಂತ್ರಣ, ಸ್ವ-ನಿಯಂತ್ರಣದಿಂದ ಸತ್ಯಾಗ್ರಹ ಹಾಗೂ ಸತ್ಯಾಗ್ರಹದಿಂದ ಸ್ವರಾಜ್ಯ ಎನ್ನುವುದು ಅವರ ಬದುಕಿನ ವೈಯಕ್ತಿಕ ಕಥೆಯೂ ಹೌದು. ಅಂತೆಯೇ, ಅದು ‘ಸ್ವ’ವನ್ನು ವಿಸ್ತರಿಸಿ ಸಮುದಾಯದಲ್ಲಿ ಲೀನವಾಗಿಸುವ ಸಾಮಾಜಿಕ ಕಥನವೂ ಹೌದು. ಇವೆಲ್ಲವೂ ನಡೆದದ್ದು ನಿರಂತರವಾದ ಮಾತುಕತೆಗಳ ಮೂಲಕ.
ಗಾಂಧಿಯವರು ಅದೆಷ್ಟು ಜನರ ಜೊತೆಗೆ ಚರ್ಚೆಯನ್ನು ನಡೆಸಿಲ್ಲ? ಅವೆಷ್ಟು ಚಿಂತನಕ್ರಮಗಳಿಗೆ ಮುಖಾಮುಖಿಯಾಗಿಲ್ಲ? ಅವೆಷ್ಟು ಬಗೆಯ ವಿದ್ಯಮಾನಗಳಿಂದ ತಮ್ಮ ದೃಷ್ಟಿಕೋನವನ್ನು ಮರುಪರಿಶೀಲಿಸಿಕೊಂಡಿಲ್ಲ? ಇಂಗ್ಲೆಂಡಿನ ತಮ್ಮ ಕಾನೂನು ವ್ಯಾಸಂಗದಿಂದ ತೊಡಗಿ ಭಾರತದ ಸ್ವಾತಂತ್ರ್ಯ ಹೋರಾಟದ ಕೊನೆಯ ಘಟ್ಟದವರೆಗೂ ಅವರು ಅನೇಕ ಬಗೆಯ ಜನರೊಂದಿಗೆ, ಅನೇಕ ರೀತಿಯ ಚಿಂತನಕ್ರಮಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ಸಂವಾದಗಳ ಈ ಸರಮಾಲೆ ಅನೇಕ ಸಂದರ್ಭಗಳಲ್ಲಿ ಅವರ ಚಿಂತನೆಯ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದೆ.
‘ಹಿಂದ್ ಸ್ವರಾಜ್’ನಲ್ಲಿ ರಾಷ್ಟ್ರವಾದಿಯೊಬ್ಬನೊಡನೆ ಗಾಂಧೀಜಿ ನಡೆಸಿದ ಸಂವಾದ, ವಿದೇಶಿ ವಸ್ತುಗಳ ಬಹಿಷ್ಕಾರದ ಸಂದರ್ಭದಲ್ಲಿ ಟ್ಯಾಗೋರ್ ಜೊತೆಗೆ ನಡೆಸಿದ ಮಾತುಕತೆ, ವೈಕಂ ಸತ್ಯಾಗ್ರಹದ ಸಂದರ್ಭದಲ್ಲಿ ಧರ್ಮಸೂಕ್ಷ್ಮಗಳಿಗೆ ಸಂಬಂಧಿಸಿದಂತೆ ತಿರುವಾಂಕೂರು ಪಂಡಿತರ ಜೊತೆಗೆ ನಡೆಸಿದ ವಾಗ್ವಾದ, ಹಿಂದೂ ಧರ್ಮದ ಸ್ವರೂಪ ಮತ್ತು ಜಾತಿ ಅಸಮಾನತೆಗೆ ಸಂಬಂಧಿಸಿದಂತೆ ಅಂಬೇಡ್ಕರ್ ಜೊತೆಗೆ ನಡೆಸಿದ ಜಿಜ್ಞಾಸೆ ನಮಗೆಲ್ಲರಿಗೂ ತಿಳಿದಿರುವಂತಹವೇ. ಅಂತೆಯೇ, ಅಭಿಮಾನಿ ಗಳಾಗಿದ್ದೂ ತಮ್ಮ ಎಲ್ಲಾ ನಿಲುವುಗಳನ್ನು ಒಪ್ಪಿಕೊಳ್ಳದ ಸಮಾಜವಾದಿಗಳ ಜೊತೆಗಿನ ಗಾಂಧಿಯವರ ಸಂವಾದ, ಸಮಾಜ ಸುಧಾರಣೆಗೆ ಸಂಬಂಧಿಸಿದಂತೆ ನಾರಾಯಣ ಗುರುಗಳ ಜೊತೆಗಿನ ವಾದ-ವಿವಾದ ಮತ್ತು ನಾಸ್ತಿಕ ಚಿಂತನೆಯ ಯುಕ್ತಾಯುಕ್ತತೆ ಬಗ್ಗೆ ಗೋ.ರಾಮಚಂದ್ರರ ಜೊತೆಗಿನ ಅವರ ಚರ್ಚೆಗಳು ಗಾಂಧಿಯವರ ಜೀವನದೃಷ್ಟಿಯನ್ನು ಹದಗೊಳಿಸಿವೆ ಮತ್ತು ವಿಸ್ತಾರಗೊಳಿಸಿವೆ. ಅಷ್ಟು ಮಾತ್ರವಲ್ಲದೆ ಇವು ಅವರ ತತ್ವಜ್ಞಾನೀಯ ರಾಜಕಾರಣಕ್ಕೆ ಹೊಸ ಆಯಾಮಗಳನ್ನು ಒದಗಿಸಿವೆ.
ಬಾಲ್ಯದ ಬದುಕಿನಲ್ಲಿ ನಾವು ‘ಹದ ಆಗಬೇಕು ಹಲ್ಲು ಮುರಿಯಬೇಕು’ ಎಂಬ ಮಕ್ಕಳ ಹಾಡೊಂದನ್ನು ಗುನುಗಿರುತ್ತೇವೆ. ಬಹುಶಃ ಮನುಷ್ಯ ಕಷ್ಟಕಾರ್ಪಣ್ಯಗಳಿಂದ ಹದಗೊಂಡು ತನ್ನ ಅಹಂಕಾರವನ್ನು ತೊರೆಯುವ ಪ್ರಕ್ರಿಯೆಯನ್ನು ಈ ಹಾಡು ಧ್ವನಿಸುತ್ತದೆ. ನಮ್ಮೆಲ್ಲರಂತೆಯೇ ಅಹಂಕಾರದ ಹಲ್ಲುಗಳಿದ್ದ ಗಾಂಧೀಜಿ ತನ್ನ ಸುದೀರ್ಘ ರಾಜಕಾರಣದಲ್ಲಿ ಪ್ರೌಢಗೊಳ್ಳುತ್ತ, ಹದಗೊಳ್ಳುತ್ತ ತಮ್ಮ ಅಹಂಕಾರವನ್ನು ಗುರುತಿಸುತ್ತ ಆ ಹಲ್ಲುಗಳನ್ನು ಕಳಚಿಕೊಂಡ ಅವರ ಜೀವನಯಾನವನ್ನು ಈ ಹಾಡಿನ ಮೂಲಕ ನಾವು ಗ್ರಹಿಸಬಹುದು. ಇಂದಿನ ನಮ್ಮ ಅಹಂಕಾರದ ರಾಜಕಾರಣದ, ಅಧಿಕಾರಶಾಹಿ ದರ್ಪಕ್ಕೆ ಇದಿರಾಗಿ ಗಾಂಧಿಯವರು ಪ್ರತಿನಿಧಿಸಿದ ಅಹಂಕಾರ ನಿರಸನದ, ಅಧಿಕಾರ ನಿಗ್ರಹದ ಹೊಸ ರಾಜಕಾರಣದ ಕಡೆಗೆ ನಾವು ಯೋಚಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.