ADVERTISEMENT

ವಿಶ್ಲೇಷಣೆ: ಪ್ರತಿಭೆ ಇದೆ, ಗುರುತಿಸುವವರು...?

ಸಮಾಜದಲ್ಲಿ ಬುದ್ಧಿವಂತರನ್ನೇ ಪ್ರತಿಭಾವಂತರೆಂದು ಭಾವಿಸುವ ಸಾಧ್ಯತೆಯೇ ಹೆಚ್ಚು

ಅರವಿಂದ ಚೊಕ್ಕಾಡಿ
Published 20 ಜೂನ್ 2023, 21:59 IST
Last Updated 20 ಜೂನ್ 2023, 21:59 IST
   

ಪರೀಕ್ಷಾ ಫಲಿತಾಂಶಗಳು ಪ್ರಕಟವಾಗುತ್ತಿದ್ದ ಹಾಗೆ, ಬಂದ ಅಂಕಗಳ ಕುರಿತಾಗಿ ವಿದ್ಯಾರ್ಥಿಗಳ ಕಡೆಯಿಂದ ಹಲವು ಬಗೆಯ ಅಸಮಾಧಾನಗಳು ವ್ಯಕ್ತವಾಗುತ್ತವೆ.‌ ಸಾಮಾನ್ಯವಾಗಿ ಇಂತಹ ಅಸಮಾಧಾನಗಳು ಅಲ್ಲಿಂದಲ್ಲಿಗೆ ಉತ್ತೀರ್ಣರಾಗುವವರದ್ದಾಗಿರುವುದಿಲ್ಲ. ಬಹಳಷ್ಟು ಒಳ್ಳೆಯ ಅಂಕಗಳನ್ನು‌ ಪಡೆದವರದ್ದೇ ಆಗಿರುತ್ತವೆ. ಯಾವುದೇ ವ್ಯವಸ್ಥೆ ಸೋತವನ ಪರವಾಗಿ ಇರಬೇಕಾದ್ದು ನ್ಯಾಯ ಮತ್ತು ಹಾಗೆ ಇರುವುದು ಸಹಜ. ಆದ್ದರಿಂದ ಒಳ್ಳೆಯ ಅಂಕಗಳನ್ನು ಪಡೆಯುವವರಿಗೆ ಕಡಿಮೆ ಅಂಕಗಳು ಬಂದ ಕುರಿತ ಅಹವಾಲುಗಳು ಹೆಚ್ಚು ವೈಯಕ್ತಿಕವಾಗಿ ಉಳಿಯುತ್ತವೆ.‌ ವ್ಯವಸ್ಥೆಯ ಗಮನ ಸೆಳೆಯದೇ ಹೋಗುತ್ತವೆ.

ಆದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಳ್ಳೆಯ ಅಂಕಗಳಿಗಾಗಿನ ಬೇಡಿಕೆಯು ಸರಳ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲ. 1961ರಲ್ಲಿ ಜವಾಹರಲಾಲ್ ನೆಹರೂ ಅವರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಒಂದು ಪತ್ರದಲ್ಲಿ, ಯಾವುದೇ ಆಡಳಿತಾತ್ಮಕ ನಿಲುವುಗಳು ಪ್ರತಿಭಾವಂತರನ್ನು ಎರಡು ಅಥವಾ ಮೂರನೆಯ ದರ್ಜೆಗೆ ಇಳಿಸಬಾರದು ಎಂದು ಹೇಳಿದ್ದರು. ಬಹುತೇಕ ಮಾರುಕಟ್ಟೆಯೇ ಪ್ರಧಾನವಾದ ಜಾಗತೀಕರಣದ ಆರ್ಥಿಕತೆ ಬರುವತನಕ ಪ್ರತಿಭಾವಂತರನ್ನು ಗುರುತಿಸುವ ದಿಸೆಯಲ್ಲಿ ಚಿಂತನೆಗಳಿದ್ದವು.‌ ಆದರೆ ಆನಂತರ ಶೇಕಡ ನೂರು ಫಲಿತಾಂಶವೇ ಶಾಲೆಯ ಶ್ರೇಷ್ಠತೆಯ ಮಾನದಂಡ ಎಂಬ ಸಾರ್ವತ್ರಿಕ‌ ಚಿಂತನೆ ಪ್ರಬಲವಾಗಿ, ಶಿಕ್ಷಣ ಚಿಂತಕರ ಸ್ಥಾನವನ್ನು ಶಿಕ್ಷಣೋದ್ಯಮಿಗಳೇ ಆವರಿಸಿಕೊಂಡು, ಶಿಕ್ಷಣೋದ್ಯಮಿಗಳನ್ನು ಶಿಕ್ಷಣ ಚಿಂತಕರು, ಶಿಕ್ಷಣ ತಜ್ಞರು ಎಂದು ಕರೆಯಲು ಶುರು ಮಾಡಿದ ನಂತರ, ಒಳ್ಳೆಯ ಅಂಕಗಳನ್ನು ಪಡೆಯುವವರು ಮಾತ್ರ ಪ್ರತಿಭಾವಂತರು ಎಂಬ ಕಲ್ಪನೆ ಸಾರ್ವತ್ರಿಕವಾಯಿತು.

ಶೈಕ್ಷಣಿಕ ಮನೋವಿಜ್ಞಾನದ ಪ್ರಕಾರ, ಬುದ್ಧಿವಂತರು ಮತ್ತು ಪ್ರತಿಭಾವಂತರು ಬೇರೆ ಬೇರೆ ವಿಂಗಡಣೆಗಳಾಗಿರುತ್ತಾರೆ. ಬುದ್ಧಿವಂತರೆಲ್ಲರೂ ಪ್ರತಿಭಾವಂತರಾಗಿ ಇರಲೇಬೇಕಾಗಿಲ್ಲ.‌ ಆದರೆ ಪ್ರತಿಭಾವಂತರೆಲ್ಲರೂ ತಕ್ಕ ಮಟ್ಟಿಗೆ ಬುದ್ಧಿವಂತರೇ ಆಗಿರುತ್ತಾರೆ. ಈ ವ್ಯತ್ಯಾಸ ಎಷ್ಟು ತೀವ್ರ ತರಹದ್ದಾಗಿರುತ್ತದೆ ಎಂದರೆ, ಕೆಲವೊಮ್ಮೆ ಪ್ರತಿಭಾವಂತರು ಕಲಿಕಾ ಹಿಂದುಳಿದವರ ಹಾಗೆ ಕಾಣಿಸುವುದೂ ಇರುತ್ತದೆ. ಉದಾಹರಣೆಗೆ, ಒಂದು ಮಗು ಎಡಗಡೆಯಿಂದ ಬಲಗಡೆಗೆ ಬರೆಯುವ ಬದಲಿಗೆ ಬಲಗಡೆಯಿಂದ ಎಡಗಡೆಗೆ ಬರೆದುಕೊಂಡು ಬಂದರೆ, ಮೇಲ್ನೋಟಕ್ಕೆ ಅದು ಕಲಿಕಾ ಹಿಂದುಳಿದ ಮಗು ಎಂದು ಅರ್ಥೈಸಲ್ಪಡುತ್ತದೆ. ನಿಜವಾಗಿ ಅದು ಕಲಿಕಾ ಹಿಂದುಳಿದ ಮಗುವಾಗಿದೆಯೇ ಅಥವಾ ಪ್ರತಿಭಾವಂತ ಮಗುವಾಗಿದೆಯೇ ಎಂಬುದನ್ನು ಗುರುತಿಸಬೇಕಾದರೆ, ಯಾವ ರೀತಿಯ ಚಿಂತನೆಯಲ್ಲಿ ಮಗು ಆ ರೀತಿ ಬರೆದಿದೆ ಎಂಬುದನ್ನು ಪರಿಶೀಲಿಸಬೇಕು.

ADVERTISEMENT

ಮಗುವಿಗೆ ಅಧ್ಯಾಪಕರು ಕಲಿಸಿದ ರೀತಿಯಲ್ಲಿ ಬರೆಯಲು ಗೊತ್ತಾಗದೆ ಬಲದಿಂದ ಎಡಕ್ಕೆ ಬರೆದುಕೊಂಡು ಬಂದಿದ್ದರೆ, ಅದು ಕಲಿಕಾ ಹಿಂದುಳಿದ ಮಗುವಾಗಿರುತ್ತದೆ. ಅರೇಬಿಕ್ ಭಾಷೆಯನ್ನು ಕಲಿಯುತ್ತಿರುವ ಮಗು, ಕನ್ನಡ ಭಾಷೆಯಲ್ಲಿ ಬರೆಯುವಾಗ ಸಹಜವಾಗಿ ಬಲದಿಂದ ಎಡಕ್ಕೆ ಬರೆಯುತ್ತಾ ಬಂದರೆ, ಒಂದು ಭಾಷೆಯ ಕಲಿಕಾ ಕೌಶಲವು ಮತ್ತೊಂದು ಭಾಷೆಯ ಕಲಿಕೆಗೆ ನಕಾರಾತ್ಮಕವಾಗಿ ವರ್ಗಾವಣೆಯಾಗಿದ್ದು, ತಪ್ಪು ಕಲಿಕಾ ವರ್ಗಾವಣೆ ಆಗಿದೆ ಎಂದು ಅರ್ಥ.‌ ಒಂದು ಮಗು, ಎಡದಿಂದ ಬಲಕ್ಕೆ ಬರೆಯುವುದನ್ನು ಅಧ್ಯಾಪಕರೇ ಕಲಿಸಿದ್ದಾರೆ, ತಾನು ಬಲದಿಂದ ಎಡಕ್ಕೆ ಬರೆದು ಹೀಗೂ ಬರೆಯಲು ಸಾಧ್ಯವಿದೆ ಎಂದು ತೋರಿಸುತ್ತೇನೆ ಎಂದು ಯೋಚಿಸಿ ಬಲದಿಂದ ಎಡಕ್ಕೆ ಬರೆದುಕೊಂಡು ಬಂದಿದ್ದರೆ ಅದು ಪ್ರತಿಭಾವಂತ ಮಗುವಾಗಿದೆ ಎಂದು ಅರ್ಥ. ಏಕೆಂದರೆ ಆ ಮಗು ತನ್ನ ಮಟ್ಟಿಗೆ ಹೊಸ ಆವಿಷ್ಕಾರ ಮಾಡಿದ್ದರ ಕಾರಣದಿಂದ ಬಲದಿಂದ ಎಡಕ್ಕೆ ಬರೆದುಕೊಂಡು ಬಂದಿರುತ್ತದೆ.

ಇದನ್ನು ಗುರುತಿಸಬಲ್ಲ ಅಧ್ಯಾಪಕರಿದ್ದು, ಅವರಿಗೆ ಗುರುತಿಸಲು ಸಾಧ್ಯವಾಗುವಷ್ಟು ಸಮಯಾವಕಾಶವೂ ಇದ್ದು, ಆ ಕೆಲಸವನ್ನು ಮಾಡಿದಾಗ ಮಾತ್ರ ಪ್ರತಿಭಾವಂತರು ಬೆಳಕಿಗೆ ಬರುತ್ತಾರೆ. ಇಲ್ಲದಿದ್ದರೆ ಬುದ್ಧಿವಂತರನ್ನೇ ಪ್ರತಿಭಾವಂತರೆಂದು ಭಾವಿಸಲಾಗುತ್ತದೆ. ಬುದ್ಧಿವಂತರು ಆವಿಷ್ಕಾರಕ್ಕೆ ಮನಸ್ಸು ಮಾಡುವುದಿಲ್ಲ. ಬದಲಾಗಿ, ಹೇಳಿದ್ದನ್ನು ಅಥವಾ ಓದಿದ್ದನ್ನು ಬಹಳ ಬೇಗ ಗ್ರಹಿಸಿ, ಧಾರಣೆ ಮಾಡಿ ಉಳಿಸಿಕೊಂಡು, ಪ್ರಶ್ನೆ ಕೇಳಿದಾಗ ಉತ್ತರದ ರೂಪದಲ್ಲಿ ಪುನರುತ್ಪಾದನೆ ಮಾಡಿ ಕೊಟ್ಟುಬಿಡುತ್ತಾರೆ. ಅಲ್ಲಿಗೆ ಅವರ ಕಲಿಕಾ ಪ್ರಕ್ರಿಯೆ ಮುಗಿಯಿತು.‌ ಆದ್ದರಿಂದಲೇ ಬುದ್ಧಿವಂತರು ತರಗತಿಯಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ಕೊಡಲು ನಾಮುಂದು ತಾಮುಂದು ಎಂದು ಉತ್ಸಾಹವನ್ನು ತೋರುತ್ತಾರೆ.‌ ಪ್ರತಿಭಾವಂತರು ಉತ್ಸಾಹ ತೋರಲೂಬಹುದು, ಉತ್ಸಾಹ ತೋರದೆ, ಕೇಳಿದಾಗ ಮಾತ್ರ ಹೇಳುವವರಾಗಿರಬಹುದು ಅಥವಾ ತಮ್ಮ‌ ಪಾಡಿಗೆ ಇರುವವರೂ ಆಗಿರಬಹುದು.

ಬುದ್ಧಿವಂತರು ಮತ್ತು ಪ್ರತಿಭಾವಂತರ ಮನೋಧರ್ಮದಲ್ಲಿ ಮೂಲಭೂತವಾದ ಒಂದು ವ್ಯತ್ಯಾಸ ಇರುತ್ತದೆ. ಬರೀ ಬುದ್ಧಿವಂತರು ಸೋಲಿಗೆ ಭಯಪಡುವ ಪ್ರವೃತ್ತಿ ಹೊಂದಿರುತ್ತಾರೆ. ಆದ್ದರಿಂದ ಸಾಧನೆಯಲ್ಲಿ ಹಿನ್ನಡೆ ಆದಾಗ ಅವರು ಕುಗ್ಗುತ್ತಾರೆ.‌ ಆಗ ಪೋಷಕರು, ಅಧ್ಯಾಪಕರು ಮತ್ತು ಸಮುದಾಯ ಅವರನ್ನು ಸಮಾಧಾನಪಡಿಸುವ ಅಗತ್ಯವಿರುತ್ತದೆ.‌ ಅವರಿಗೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ.‌ ಇದನ್ನು ಮಾಡದಿದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೊರಟುಹೋಗುತ್ತದೆ.‌ ‘ಅಧ್ಯಾಪಕರು ಕೊಟ್ಟ ಉತ್ತರದಲ್ಲಿ ಒಂದಕ್ಷರವೂ ತಪ್ಪದ ಹಾಗೆ ನಾನು ಬರೆದಿದ್ದೇನೆ. ಆದರೂ ಒಂದು ಅಂಕ ಕಡಿಮೆ ಮಾಡಿದ್ದಾರೆ’ ಎಂದು ಪರಿತಪಿಸುವವರಲ್ಲಿ ಈ ಲಕ್ಷಣವನ್ನು ಗುರುತಿಸಬಹುದು.

ಪ್ರತಿಭಾವಂತರು ಸೋಲಿಗೆ ಭಯಪಡುವುದಿಲ್ಲ. ಅವರಲ್ಲಿ ಅಗಾಧವಾದ ಸೃಜನಶೀಲ ಶಕ್ತಿ ಇರುತ್ತದೆ. ಆವಿಷ್ಕಾರಕ್ಕೆ ಇಳಿಯುವವರಿಗೆ ಸೋಲುಗಳು ಸಹಜ.‌ ಥಾಮಸ್ ಆಲ್ವಾ ಎಡಿಸನ್ ಅವರ ಹಲವಾರು ಪ್ರಯೋಗಗಳು ವಿಫಲವಾದವು. ಆದರೆ ಕುಗ್ಗಲಿಲ್ಲ. ಕೊನೆಯ ಪ್ರಯೋಗ ಎಷ್ಟು ಯಶಸ್ವಿಯಾಯಿತು ಎಂದರೆ, ಎಡಿಸನ್ ಅವರ ನಿಧನಾನಂತರವೂ ಇಡೀ ಜಗತ್ತು ಅವರಿಗೆ ಚಿರಋಣಿ ಆಗಬೇಕಾಗುತ್ತದೆ. ಪ್ರತಿಭಾವಂತರಲ್ಲಿ ಪ್ರಯೋಗಶೀಲತೆ ಮತ್ತು ಆವಿಷ್ಕಾರ ಪ್ರವೃತ್ತಿ ಇರುವುದರಿಂದ, ಒಂದು ವೈಫಲ್ಯಕ್ಕೆ ಕಂಗೆಡದೆ ಮತ್ತೊಂದು ಪ್ರಯೋಗಕ್ಕೆ ತೊಡಗಿಕೊಳ್ಳುವ ಮನೋಧರ್ಮ‌ ಇರುತ್ತದೆ. ಯಶಸ್ಸು ಸಿಗುವತನಕವೂ ಸೋಲನ್ನು ಸ್ವೀಕರಿಸುವ ಹಟವಾದಿ ಪ್ರವೃತ್ತಿ ಇರುತ್ತದೆ.‌

ಇಂದಿನ ಮಾರುಕಟ್ಟೆ ಆರ್ಥಿಕತೆಯು ರೂಪಿಸಿರುವ ಶಿಕ್ಷಣ ವ್ಯವಸ್ಥೆಯು ಸೋಲು ಸಂಭವಿಸಲೇ ಬಾರದು, ಸೋತರೆ ಸರ್ವನಾಶವಾಗಿಹೋಗುತ್ತದೆ, ಸೋತವನಿಗೆ ಭವಿಷ್ಯವೇ ಇಲ್ಲ ಎಂಬ ಭಾವನೆಯನ್ನು ಮಕ್ಕಳಲ್ಲಿ ಹುಟ್ಟುಹಾಕುತ್ತದೆ.‌ ಪ್ರತಿಭಾವಂತರು ಬೆಳೆಯುವುದಕ್ಕೆ ಶಿಕ್ಷಣ ವ್ಯವಸ್ಥೆ ಬೆಂಬಲಿಸುತ್ತಿಲ್ಲ. ಪ್ರತಿಭಾವಂತ ಮಕ್ಕಳು ಆವಿಷ್ಕಾರದಲ್ಲಿ ಸೋತಾಗ ಸಮಾಧಾನ ಪಡಿಸಬೇಕಾದ್ದಲ್ಲ, ಸೋಲನ್ನು ಸವಾಲಾಗಿ ತೆಗೆದುಕೊಳ್ಳಲು ಉತ್ತೇಜಿಸಬೇಕು. ಆಗ ಅವರು ಮತ್ತೊಂದು ಪ್ರಯೋಗಕ್ಕೆ ಇಳಿಯುತ್ತಾರೆ. ಆದರೆ ಪ್ರತಿಭಾವಂತರನ್ನು ಹತ್ತಿರಕ್ಕೆ ತೆಗೆದುಕೊಂಡ ಹಾಗೆ ಅವರನ್ನು ನಿರ್ವಹಿಸುವುದು ಬುದ್ಧಿವಂತರನ್ನು ನಿರ್ವಹಿಸಿದ್ದಕ್ಕಿಂತ ಸವಾಲಿನ ವಿಷಯವಾಗುತ್ತದೆ.‌ ಬುದ್ದಿವಂತರು ಮೆಚ್ಚುಗೆ ಮತ್ತು ಬಹುಮಾನಗಳಿಂದ ಸಂತುಷ್ಟರಾಗುತ್ತಾರೆ. ಆದರೆ ಪ್ರತಿಭಾವಂತರು ಅಪಾರವಾಗಿ ಪ್ರಶ್ನಿಸುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರ ಕೊಟ್ಟಾಗ ಮಾತ್ರ ಅವರು ತೃಪ್ತರಾಗುವುದು.

ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವವರಿಗೆ ವಿದ್ಯಾರ್ಥಿಗಳಲ್ಲಿ ಇರುವ ಈ ವ್ಯತ್ಯಾಸದ ತಿಳಿವಳಿಕೆ ಇರಬೇಕಾಗುತ್ತದೆ. ಪ್ರಶ್ನೆಪತ್ರಿಕೆಗಳು ನೆನಪಿನಿಂದ ತೆಗೆದು ಉತ್ತರ ಕೊಡಬೇಕಾದ ಪ್ರಶ್ನೆಗಳನ್ನು, ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡು ಉತ್ತರಿಸುವ ಪ್ರಶ್ನೆಗಳನ್ನು, ಅರ್ಥ ಮಾಡಿಕೊಂಡದ್ದನ್ನು ಮತ್ತೊಂದು ಸ್ಥಿತಿಗೆ ಅನ್ವಯಿಸಿಕೊಂಡು ಉತ್ತರ ಕೊಡುವ ಪ್ರಶ್ನೆಗಳನ್ನು ಮತ್ತು ವಿದ್ಯಾರ್ಥಿಗಳ ಕೌಶಲದಿಂದ ಉತ್ತರಿಸುವ ಪ್ರಶ್ನೆಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಅನ್ವಯ ಮಾದರಿಯ ಪ್ರಶ್ನೆಗಳು ಪ್ರತಿಭಾವಂತರಿಗೆ ಸಹಾಯಕವಾಗಿರುತ್ತವೆ. ಕಲಿತದ್ದನ್ನು ತನ್ನ ಚಿಂತನೆಯ ಮೂಲಕ ಅರ್ಥೈಸಿ ವಿದ್ಯಾರ್ಥಿಗಳು ಉತ್ತರ ಕೊಡಬೇಕಾದ ಪ್ರಶ್ನೆಗಳಿವು.‌ ಸ್ವತಂತ್ರ ಚಿಂತನೆ ಪ್ರತಿಭಾವಂತರ ಮೂಲಭೂತ ಲಕ್ಷಣವಾಗಿರುತ್ತದೆ.

ಆದರೆ ಇಂದಿನ ಪರಿಸ್ಥಿತಿಯಲ್ಲಿ ಸ್ವತಂತ್ರ ಚಿಂತನೆ ಉತ್ತರ ಪತ್ರಿಕೆಯಲ್ಲಿ ಕಾಣಿಸದೇ ಇರಲು ಹಲವು ಕಾರಣಗಳಿವೆ. ಪ್ರಶ್ನೆ ಕೋಠಿಗಳು, ಗೈಡ್‌ಗಳು ಯಥೇಚ್ಛವಾಗಿ ವಿದ್ಯಾರ್ಥಿಗಳಿಗೆ ಪೂರೈಕೆಯಾಗುವುದರಿಂದ, ಅನ್ವಯ ಮಾದರಿಯ ಪ್ರಶ್ನೆಗಳ ಉತ್ತರಗಳೂ ಬಾಯಿಪಾಠ ಮಾಡಲ್ಪಟ್ಟು ಪರೀಕ್ಷೆಯಲ್ಲಿ ಬರೆಯಲ್ಪಡುತ್ತವೆ. ಆಗ ಅಂಕಗಳು ಬರುತ್ತವೆ. ಆದರೆ ವಿದ್ಯಾರ್ಥಿಯಲ್ಲಿ ಸ್ವತಂತ್ರ ಚಿಂತನೆ ಇರುವುದಿಲ್ಲ.‌ ಎರಡನೆಯದಾಗಿ, ಸ್ವತಂತ್ರ ಚಿಂತನೆಯನ್ನು ತನ್ನದೇ ಭಾಷೆಯಲ್ಲಿ ಹೇಳುವ ಕೌಶಲ ವಿದ್ಯಾರ್ಥಿಗಿಲ್ಲದಿದ್ದರೆ ಬಾಯಿಪಾಠ ಅನಿವಾರ್ಯವಾಗುತ್ತದೆ.‌ ಇತ್ತೀಚಿನ ದಿನಗಳಲ್ಲಿ ಭಾಷಾ ಕೌಶಲಗಳ ಕಲಿಸುವಿಕೆ ದುರ್ಬಲಗೊಂಡಿರುವುದರಿಂದ ತನ್ನದೇ ಯೋಚನೆಯನ್ನು ವಾಕ್ಯ ಮಾಡಿ ಬರೆಯುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ.‌ ಆಗಲೂ ಅವರು ತನ್ನದಲ್ಲದ ಕಲಿಕಾ ಪಠ್ಯಗಳ ವಾಕ್ಯಗಳನ್ನೇ ಬಾಯಿಪಾಠ ಮಾಡುವುದು ಅನಿವಾರ್ಯವಾಗುತ್ತದೆ.

ಮೂರನೆಯದು, ಮೌಲ್ಯಮಾಪಕರ ಗುಣಮಟ್ಟದ ಸಮಸ್ಯೆ.‌ ಮೌಲ್ಯಮಾಪಕರಿಗೆ ‘ಕೀ’ ಉತ್ತರಗಳನ್ನು ಕೊಡಲಾಗಿರುತ್ತದೆ. ಕೀ ಉತ್ತರಗಳು ಎಂದರೆ, ಈ ಪ್ರಶ್ನೆಗೆ ಇಂಥಿಂಥ ಅಂಶಗಳು ಉತ್ತರವಾಗಿರುತ್ತವೆ ಎಂದು ಮೌಲ್ಯಮಾಪಕರಿಗೆ ನೀಡುವ ಮಾರ್ಗದರ್ಶನ. ಅದರರ್ಥ ಅದೇ ವಾಕ್ಯಗಳನ್ನೇ ವಿದ್ಯಾರ್ಥಿ ಬರೆದಿರಬೇಕೆಂದಲ್ಲ. ಒಟ್ಟೂ ವ್ಯಾಪ್ತಿಯಲ್ಲಿ ಆ ಎಲ್ಲ ಅಂಶಗಳು ಒಳಗೊಂಡಿರುತ್ತವೆ ಎಂದರ್ಥ.‌ ವಿದ್ಯಾರ್ಥಿಯ ಉತ್ತರ ಅವರದೇ ವಾಕ್ಯದಲ್ಲಿ ಇರಬಹುದು, ಕೀ ಉತ್ತರದಲ್ಲಿರುವ ವಾಕ್ಯವೇ ಆಗಬೇಕಾಗಿಲ್ಲ.‌ ಮೌಲ್ಯಮಾಪಕರು ಇದನ್ನು ಅರಿತುಕೊಳ್ಳದೆ ಕೀ ಉತ್ತರದ ವಾಕ್ಯವೇ ಆಗಬೇಕೆಂದು ಭಾವಿಸಿದರೆ ಅಥವಾ ತಾನು ತನ್ನ ವಿದ್ಯಾರ್ಥಿಗಳಿಗೆ ಕೊಟ್ಟ ನೋಟ್ಸ್‌ನ ಪ್ರಕಾರವೇ ಇರಬೇಕೆಂದು ಭಾವಿಸಿದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದು ಅನ್ಯಾಯವಾಗುತ್ತದೆ. ಇದು ಬರೀ ಅಂಕಗಳಲ್ಲಿ ಅನ್ಯಾಯ ಮಾತ್ರವಲ್ಲದೆ ಪ್ರತಿಭೆಯ ವಿಕಾಸಕ್ಕೂ ವಿರೋಧಿಯಾಗಿರುತ್ತದೆ.

ಪ್ರತಿಭಾವಂತರು ಕೀ ಉತ್ತರಗಳಲ್ಲಿ ಕೊಟ್ಟಿರುವುದಕ್ಕಿಂತಲೂ ಉನ್ನತ ಗುಣಮಟ್ಟದ ಉತ್ತರಗಳನ್ನು ಬರೆದಿರಬಹುದು.‌ ಆಗ ಆ ಉತ್ತರಕ್ಕೆ ಜಾಸ್ತಿ ಅಂಕಗಳು ಸಿಗಬೇಕು.‌ ಅದು ಪ್ರತಿಭೆಗೆ ಉತ್ತೇಜನಕಾರಿಯಾಗಿರುತ್ತದೆ. ಈ ವಿಚಾರದಲ್ಲಿ ಮೌಲ್ಯಮಾಪಕರು ಹೆಚ್ಚು ಪರಿಣತರಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.