‘ಮನಕ್ಕೆ ಪ್ರಾಣವಾದ ಪುರುಷನು ಪುರುಷ ರತ್ನವಾಗಿ ಬರುವ ದಾರಿ ನೋಡಿ ಬಾಯಾರಿದ್ದೇನೆ’ ಎನ್ನುವ ಅಕ್ಕಮಹಾದೇವಿ, ತನ್ನ ಪ್ರೀತಿಯ ಚೆನ್ನಮಲ್ಲಿಕಾರ್ಜುನನನ್ನು ‘ಅರಿವು’ ಎಂದು ಭಾವಿಸುತ್ತಾಳೆ. ಈ ಅರಿವು ಹೆಣ್ಣೂ ಅಲ್ಲ, ಗಂಡೂ ಅಲ್ಲ. ಇಬ್ಬರಲ್ಲೂ ಇರಬೇಕಾದ ಮಾಗಿದ ತಿಳಿವಳಿಕೆ.
ಪ್ರೀತಿಯ ಹೆಸರಲ್ಲಿ ಲಕ್ಷಾಂತರ ಪುಟಗಳು ಪ್ರಕಟವಾಗಿರಬಹುದು. ಆದರೆ ಇಂದಿಗೂ ಇದು ಅರ್ಥವಾಗಿದೆ ಎಂದು ಹೇಳುವುದಕ್ಕೆ ಹೆಚ್ಚು ಸಾಕ್ಷಿಗಳಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಪ್ರೀತಿಗಾಗಿ ಯಾರೋ ಒಬ್ಬರು ತ್ಯಾಗ ಮಾಡುವುದನ್ನು ವೈಭವೀಕರಿಸಲಾಗುತ್ತದೆ. ಗಂಡು ಹೆಣ್ಣಿನ ನಡುವಿನ ಪ್ರೇಮ ಸಂಬಂಧದಲ್ಲಂತೂ ಪ್ರೀತಿ ಎಂಬುದು ಹೇಗೆ ಹೇಗೋ ನಿರೂಪಣೆಗೊಂಡಿದೆ. ಆದರೆ ಹೆಚ್ಚಿನವರ ಅನುಭವವೆಂದರೆ, ಜೊತೆಗಾರರನ್ನು ‘ಸಹಿಸಿ’ಕೊಳ್ಳುವುದೇ ಪ್ರೀತಿ ಎಂಬಂತೆ ಭಾವಿಸಿಕೊಳ್ಳಲಾಗಿದೆ. ಇಲ್ಲದೇ ಹೋದರೆ ಯಾಕೆ ಈ ಸಂಬಂಧಗಳಲ್ಲಿ ಮಿತಿಮೀರಿದ ದೌರ್ಜನ್ಯಗಳಿವೆ? ಯಾಕೆ ಬ್ರೇಕಪ್‍ಗಳು, ವಿಚ್ಛೇದನಗಳು ಅನಿವಾರ್ಯ ಎನಿಸತೊಡಗಿವೆ? ಯಾಕೆ ಎಷ್ಟೋ ಜನರಿಗೆ ಇವು ತಮ್ಮ ತಮ್ಮ ಪ್ರತಿಭೆಯನ್ನೂ ಸುಟ್ಟು ಹಾಕಿಕೊಳ್ಳುವ ಕೊಂಡಗಳಾಗಿವೆ? ನಿರ್ಭೀತ ಅಭಿವ್ಯಕ್ತಿ ಬಿಡಿ, ಸಣ್ಣ ಧ್ವನಿಯಲ್ಲೂ ತಮ್ಮ ಕನಸುಗಳನ್ನು
ಹೇಳಿಕೊಳ್ಳಲಾರದ ಇಕ್ಕಟ್ಟುಗಳು ಹುಟ್ಟಿಕೊಳ್ಳುತ್ತವೆ?
ಎಷ್ಟೋ ಹೆಣ್ಣುಮಕ್ಕಳು ತಮ್ಮ ದುಡಿಮೆಯನ್ನು ಮನೆಗೆ ಕೊಟ್ಟು, ಮನೆಯಲ್ಲೂ ದುಡಿದು, ಇಲ್ಲದ ಸಮಯವನ್ನು ಹೇಗೋ ಹೊಂದಿಸಿಕೊಂಡು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆಗೆ ತೊಡಗಿಸಿಕೊಂಡರೆ, ಹೆಮ್ಮೆಗಿಂತ ಗಿಲ್ಟ್‌ಗೆ ಒಳಗಾಗುವಂತೆ ಮಾಡಲಾಗುತ್ತಿದೆಯಲ್ಲ? ಅವಳಲ್ಲಿ ಅಭದ್ರತೆಯ ಭಯ ಹುಟ್ಟಿಸಲಾಗುತ್ತಿದೆಯಲ್ಲ ಯಾಕೆ? ಅವಳಿಗೊಂದು ಪ್ರೀತಿಯ ಬೆಂಬಲ ಸಿಗುತ್ತಿಲ್ಲ ಎಂದೇ ಅರ್ಥವಲ್ಲವೇ? ಪ್ರೀತಿ ಇರಲಿ, ಅವಳು ತನ್ನಿಚ್ಛೆಯ ಒಂದೊಂದು ಹೆಜ್ಜೆ ಇಡುವಾಗಲೂ, ಪ್ರತಿ ಹೆಜ್ಜೆಗೂ ‘ವಿವರಣೆ’ ನೀಡುವ ಶಿಕ್ಷೆ ಇದೆ. ಯಾಕೆ ಹೀಗೆ?
ಸ್ತ್ರೀವಾದವಂತೂ ಹೆಣ್ಣಿನ ಸ್ಥಿತಿಯ ಬಗೆಗೆ ನಿರಂತರ ಚಿಂತನೆಗಳನ್ನು ಮಾಡಿದೆ, ಕಾರಣಗಳನ್ನು ಶೋಧಿಸಿದೆ, ಪರಿಹಾರಗಳನ್ನು ಸೂಚಿಸಿದೆ. ಅದರಲ್ಲೂ ಕಪ್ಪು ಸ್ತ್ರೀವಾದಿಗಳು ‘ಪ್ರೀತಿಯ ರಾಜಕಾರಣ’ವನ್ನು ಮುನ್ನೆಲೆಗೆ ತರುವ ಮೂಲಕ ಸಮಸ್ಯೆಯ ಬೇರುಗಳನ್ನು ಅರಿತು ಸರಿಪಡಿಸಲು ಮುಂದಡಿ ಇಡುತ್ತಾರೆ. ಬಿಳಿಯ ಗಂಡಸು ಮತ್ತು ಹೆಂಗಸರಿಂದಲೂ, ಕರಿಯ ಗಂಡು ಯಜಮಾನಿಕೆಯಿಂದಲೂ ದೌರ್ಜನ್ಯವನ್ನು ಅನುಭವಿಸಿದ ಕಪ್ಪು ಸ್ತ್ರೀಯರು ಪ್ರೀತಿಯ ದಾರಿ ಹಿಡಿಯುವುದು ಕುತೂಹಲದಾಯಕವಾದುದು. ಅದರಲ್ಲೂ, ಕಪ್ಪು ಸ್ತ್ರೀವಾದಿ ಬೆಲ್ ಹುಕ್ಸ್ ಈ ಕುರಿತು ಸರಣಿ ಪುಸ್ತಕಗಳನ್ನು ಪ್ರಕಟಿಸಿದ್ದಾಳೆ. ಕನ್ನಡದ ಮುಖ್ಯ ಸ್ತ್ರೀವಾದಿ ಚಿಂತಕರಾದ ಎಚ್.ಎಸ್.ಶ್ರೀಮತಿ ಅವರು ಈಗಾಗಲೇ ನಾಲ್ಕು ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ಬಾರಯ್ಯ ಮಮಬಂಧು’ (ಜೀರುಂಡೆ ಪ್ರಕಾಶನ) ಎಂಬುದು ಇತ್ತೀಚಿನ ಸೇರ್ಪಡೆ ಆಗಿದ್ದು, ಪುರುಷರಿಗೆ ಪ್ರೀತಿಯ ದಾರಿಯನ್ನು ತೋರಿಸುವ ಕೃತಿಯಾಗಿದೆ.
ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಪ್ರೀತಿಯನ್ನು ಕಂಡುಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ಬೆಲ್ ಹುಕ್ಸ್ ತನ್ನ ಕೃತಿಗಳಲ್ಲಿ ಕೊಡುತ್ತಾಳೆ. ಇದನ್ನು ಸ್ತ್ರೀವಾದಿ ಕಣ್ನೋಟದಿಂದ ವಿವರಿಸುವ ಅವಳು,
ಪಿತೃಪ್ರಧಾನ ವ್ಯವಸ್ಥೆಯು ಹೇಗೆ ನಮ್ಮನ್ನು ಪುರುಷತ್ವ ಮತ್ತು ಸ್ತ್ರೀತ್ವ ಎಂಬ ಕಣ್ಕಟ್ಟುಗಳಲ್ಲಿ ಬಂಧಿಸಿಟ್ಟಿದೆ ಮತ್ತು ಗಂಡು, ಹೆಣ್ಣು ಇಬ್ಬರೂ ಹೇಗೆ ಮಾನಸಿಕ ಪಿತೃಪ್ರಧಾನ ಸ್ಥಿತಿಗೆ ಒಳಗಾಗಿ ಒಬ್ಬರನ್ನೊಬ್ಬರು ಒಂದೋ ಅಧಿಕಾರದಡಿ ಬಗ್ಗುಬಡಿಯುವ ಅಥವಾ ಅಧೀನತೆಯಲ್ಲಿ ಬಲಿಯಾಗುವ ದುಃಸ್ಥಿತಿ ಒದಗಿದೆ ಎಂಬುದನ್ನು ಹೇಳುತ್ತಾಳೆ. ಪಿತೃಪ್ರಧಾನ ವ್ಯವಸ್ಥೆಯಿಂದ ಗಂಡು ನಲುಗಿ ಹೋಗಿದ್ದರೂ ಅದನ್ನೇ ಅಪ್ಪಿಕೊಂಡಿದ್ದಾನೆ.
ಗಂಡಾಗಲೀ ಹೆಣ್ಣಾಗಲೀ ತಮ್ಮತನವನ್ನು ಕಳೆದುಕೊಳ್ಳಬೇಕಿಲ್ಲ. ಆದರೆ ತಮ್ಮತನವನ್ನು ವಿವರಿಸಿಕೊಳ್ಳುವಾಗ ಆಗಿರುವ ತಪ್ಪು ವ್ಯಾಖ್ಯಾನವನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಪ್ರೀತಿ ಎಂಬುದು ಪದವಾಗಿ ಉಳಿಯುತ್ತದೆಯೇ ವಿನಾ ಅನುಭವ ಆಗುವುದಿಲ್ಲ. ಚಿಕ್ಕಂದಿನಿಂದಲೂ ಹೆಣ್ಣುಮಕ್ಕಳಿಗೆ ಹೇಗೋ ಗಂಡು ಮಕ್ಕಳಿಗೂ ಕೆಲವು ಭಾವನೆಗಳನ್ನು ಎಲ್ಲರೆದುರಿಗೂ ತೋರಿಸಿಕೊಳ್ಳಬಾರದು ಎಂದು ತರಬೇತಿ ಆಗುತ್ತಿರುತ್ತದೆ. ಗಂಡು ತನ್ನ ನೋವುಗಳನ್ನು, ಭಯಗಳನ್ನು, ಆತಂಕಗಳನ್ನು ಹೇಳಿಕೊಳ್ಳದೆ, ಯಾವಾಗಲೂ ಇನ್ನೊಬ್ಬರಿಗೆ ರಕ್ಷಣೆ ಕೊಡುವವನು ಎಂಬ ಭಾವಕ್ಕೆ ತೊಂದರೆಯಾಗದಂತೆ ತನ್ನನ್ನು ಬಿಂಬಿಸಿಕೊಳ್ಳಬೇಕು ಎಂಬ ಒತ್ತಡಕ್ಕೆ ಒಳಗಾಗಿರುತ್ತಾನೆ. ಆದರೆ ಆತ ತನ್ನ ಕೋಪವನ್ನು ಮಾತ್ರ
ಎಷ್ಟಾದರೂ ವ್ಯಕ್ತಪಡಿಸಬಹುದು ಎಂಬ ಒಪ್ಪಿಗೆಯೊಂದು ಚಲಾವಣೆಯಲ್ಲಿದೆ. ಗಂಡು ಇದನ್ನೇ ತನ್ನ
ಲಕ್ಷಣವಾಗಿಸಿಕೊಂಡು ಬಿಡುತ್ತಾನೆ.
ಎಷ್ಟೋ ಬಾರಿ ಕೋಪ ಎಂಬುದು ಯಾವುದೋ ಭಯದ ಪರಿಣಾಮವಾಗಿ ಹುಟ್ಟಿರುತ್ತದೆ. ಆದರೆ ಇದು
ತನ್ನ ಜೊತೆಯವರಿಗೆ ಭಯ ಹುಟ್ಟಿಸುವ, ಆ ಮೂಲಕ ಅವರೆಲ್ಲರನ್ನೂ ನಿಯಂತ್ರಿಸುವ ಕೆಲಸ ಮಾಡುತ್ತಿರುತ್ತದೆ. ಇವರ ಈ ಕೋಪ ತಾಪಗಳನ್ನು ಸದ್ದಿಲ್ಲದೆ ಅನುಭವಿಸಬೇಕು ಎಂಬ ಪಿತೃಪ್ರಧಾನ ವ್ಯವಸ್ಥೆಯ ಪಾಠವನ್ನು ಹೆಂಗಸರಿಗೆ ರೂಢಿಸಲಾಗಿದೆ. ಇದನ್ನೇ, ಹೆಂಗಸರು ಮಕ್ಕಳಿಗೆ ದಾಟಿಸುತ್ತಾರೆ.
ಸ್ವತಃ ಗಂಡನ ದೌರ್ಜನ್ಯಕ್ಕೆ ತುತ್ತಾದ ಹೆಂಗಸರನ್ನೂ ಸೇರಿಸಿಕೊಂಡು ಹಲವರು, ಶಿಸ್ತಿನ ಹೆಸರಲ್ಲಿ ಗಂಡಸು ತನ್ನ ಮಕ್ಕಳಿಗೆ ವಿಪರೀತ ಹೊಡೆತದಂತಹ ಹಿಂಸೆಗಳನ್ನು ಮಾಡಿದಾಗ ಅದನ್ನು ಮೌನವಾಗಿ ಬೆಂಬಲಿಸುತ್ತಾರೆ ಅಥವಾ ತಾವೂ ಮಕ್ಕಳೊಂದಿಗೆ ಹೀಗೇ ವರ್ತಿಸುತ್ತಾರೆ. ಇದರಿಂದಾಗಿ ಆ ಮಕ್ಕಳಿಗೆ ತಾಯಿಯ ಬಗೆಗೆ ಅಂತರಂಗದಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಮನಶ್ಶಾಸ್ತ್ರೀಯ ಅಧ್ಯಯನಗಳು ಹೇಳುವುದನ್ನು ಬೆಲ್ ಹುಕ್ಸ್ ಪ್ರಸ್ತಾಪಿಸುತ್ತಾಳೆ. ಮಾತ್ರವಲ್ಲ, ಈ ಕಾರಣದಿಂದ ಆ ಮಕ್ಕಳೂ ಮುಂದೆ ಇಂತಹದೇ ದೌರ್ಜನ್ಯವನ್ನು ಮುಂದುವರಿಸುವವರಾಗುತ್ತಾರೆ. ಇವೆಲ್ಲದರಿಂದ ಪಾರಾಗಲು, ಪಿತೃಪ್ರಧಾನ ವ್ಯವಸ್ಥೆಯ ಕಣ್ಕಟ್ಟುಗಳನ್ನು ಕುರುಡಾಗಿ ಅನುಸರಿಸುವುದನ್ನು ಇಬ್ಬರೂ ಬಿಡಲೇಬೇಕಾಗುತ್ತದೆ.
ಇದರ ಇನ್ನೊಂದು ಪರಿಣಾಮವನ್ನು ನಾವು ದಿನನಿತ್ಯ ನೋಡುತ್ತಿದ್ದರೂ ಅದು ಯಾಕೆ ಎಂಬುದು ನಮಗಿನ್ನೂ ಸರಿಯಾಗಿ ಗೊತ್ತೇ ಆಗಿರುವುದಿಲ್ಲ. ಇಂದಿಗೂ ನಮ್ಮ ಟಿ.ವಿ. ಧಾರಾವಾಹಿಗಳಲ್ಲಿ ಇಬ್ಬರು ಹೆಂಗಸರನ್ನು ಪರಸ್ಪರ ಶತ್ರುಗಳನ್ನಾಗಿಸುವುದು, ಅವರು ಒಬ್ಬ ಗಂಡಸಿಗಾಗಿ ಸ್ಪರ್ಧೆ ಮಾಡುವುದು, ಅವನಿಗಾಗಿ ಎಂತೆಂತಹ ಅವಮಾನಗಳನ್ನೆಲ್ಲಾ ಸಹಿಸಿಕೊಳ್ಳುವ ಸಾಧ್ವೀಮಣಿಯನ್ನು ವೈಭವೀಕರಿಸುವಂತಹ ಚಿತ್ರಣಗಳನ್ನೇ ತಿರುಗಾಮುರುಗಾ ತೋರಿಸುತ್ತಾರೆ. ಇದು ಕೂಡಾ ಪಿತೃಪ್ರಧಾನ ವ್ಯವಸ್ಥೆಯ ಪಾಠವೇ.
ಪುರುಷ ಸದಾ ಹೆಣ್ಣಿಗಿಂತ ಶ್ರೇಷ್ಠನಾದವನು, ‘ನೀನು ಏನಿದ್ದರೂ ನಿನ್ನಂತೆ ಕನಿಷ್ಠಳಾದ ಹೆಣ್ಣಿನ ಜೊತೆಯಲ್ಲೇ ಕಲಹ ಮಾಡುತ್ತಿರಬೇಕು’ ಎಂಬುದನ್ನು ಗೊತ್ತಿಲ್ಲದೇ ಒಪ್ಪಿಕೊಂಡ ಹೆಂಗಸರು ಅವರವರೇ ಹೊಡೆದಾಡು
ತ್ತಿದ್ದರೆ, ಅವರನ್ನು ಆಳುವುದು ಗಂಡಸಿಗೆ ಬಹು ಸುಲಭ. ಜೊತೆಗೆ ಅವನಿಗೆ ಬಿಟ್ಟಿಯಾಗಿ ಕರುಣೆ ಬೇರೆ ಸಿಗುತ್ತಿರುತ್ತದೆ. ಅವನ ಅಹಂಕಾರದ ಪೋಷಣೆ ಆಗುತ್ತಿರುತ್ತದೆ. ಇನ್ನೊಂದೆಡೆಯಲ್ಲಿ, ಮಹಿಳೆಯರೂ ಪುರುಷರ ದಾರಿಯ ಕಡೆಗೇ ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ‘ನಮ್ಮ ಈ ಸಂಸ್ಕೃತಿಯಲ್ಲಿ ದಬ್ಬಾಳಿಕೆ ನಡೆಸುವವರಿಗೇ ಅಧಿಕಾರ ದಕ್ಕುತ್ತದೆ ಎಂಬ ಅಭಿಪ್ರಾಯವು ಗಾಢವಾಗಿ ನೆಲಸಿದೆ. ಹಾಗಾಗಿ, ಅಧಿಕಾರದ ನಿರೀಕ್ಷೆ ಇರುವ ಯಾರಾದರೂ ಸರಿಯೇ ದೌರ್ಜನ್ಯಕ್ಕೆ ಇಳಿಯುವುದು ಅನಿವಾರ್ಯ ಎಂದೇ ನಂಬುತ್ತಾರೆ’ ಎನ್ನುತ್ತಾಳೆ ಬೆಲ್ ಹುಕ್ಸ್.
ಯಜಮಾನಿಕೆಯೋ ಪ್ರೀತಿಯೋ ಎಂಬ ಆಯ್ಕೆ ಬಂದಾಗ, ಯಜಮಾನಿಕೆಯಿಂದ ಸಿಗುವ ಹುಸಿ ಪ್ರತಿಷ್ಠೆ, ಸಮಾಧಾನದ ಕಾರಣಕ್ಕೆ ಪ್ರೀತಿಯನ್ನು ಬಿಟ್ಟುಕೊಡುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಆದರೆ ಅಂತರಂಗದಲ್ಲಿ ತಾವು ಒಂಟಿ ಎಂಬ ಭಾವದಿಂದ ನಲುಗುವುದೂ ಹೆಚ್ಚಾಗುತ್ತದೆ. ಹೀಗಾಗಿ, ಪ್ರೀತಿ ಮತ್ತು ದಬ್ಬಾಳಿಕೆ ಜೊತೆಯಲ್ಲಿರಲು ಎಂದಿಗೂ ಸಾಧ್ಯವಿಲ್ಲ. ಪ್ರೀತಿಯನ್ನು ಕಂಡುಕೊಳ್ಳಲು ಬಯಸುವ ಒಳ್ಳೆಯ ಪುರುಷರಿಗೆ ಸ್ತ್ರೀಯರು ಸಹಾಯ ಮಾಡಬೇಕಾಗಿದೆ ಎಂದು ಬೆಲ್ ಒತ್ತಿ ಹೇಳುತ್ತಾಳೆ.
ಹಾಗಾದರೆ ಪ್ರೀತಿ ಎಂದರೇನು? ‘ಪ್ರೀತಿ ಎಂದರೆ, ಸ್ವತಃ ತನ್ನ ಮತ್ತು ಜೊತೆಯವರ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಅಭಿವೃದ್ಧಿಯನ್ನು ಪೋಷಿಸಿ ಕಾಪಾಡುವ ಇಚ್ಛೆ’ (ಎಮ್.ಸ್ಕಾಟ್ ಪೆಕ್) ಮತ್ತು ‘ಪ್ರೀತಿಯೆಂಬುದು ಭಾವನೆಯೊಂದೇ ಅಲ್ಲ; ಅದು ಒಂದು ಕ್ರಿಯೆಯೂ ಹೌದು. ಅದನ್ನು ಆಗುಮಾಡಿಕೊಳ್ಳಬೇಕು’ (ಎರಿಕ್ ಫ್ರಾಮ್) ಎಂಬುದನ್ನು ಸೇರಿಸಿ ಬೆಲ್ ಹೇಳುತ್ತಾಳೆ: ‘ಪ್ರೀತಿ ಎಂದರೆ ಕಾಳಜಿ, ಬದ್ಧತೆ, ಅರಿವು, ಜವಾಬ್ದಾರಿ, ಗೌರವ ಹಾಗೂ ನಂಬಿಕೆಗಳ ಒಂದು ಸುಂದರ ಸಮ್ಮಿಶ್ರಣ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.