ADVERTISEMENT

ಲೇಖನ: ಬಡತನ ಅರಿಯುವ ದಾರಿ ಯಾವುದು?

ಬಹು ಆಯಾಮದ ಬಡತನ ಸೂಚ್ಯಂಕವು ಬಡತನದ ಒಂದು ಮುಖವನ್ನಷ್ಟೇ ತೋರಿಸುತ್ತದೆ

ವೇಣುಗೋಪಾಲ್‌ ಟಿ.ಎಸ್‌.
Published 28 ಆಗಸ್ಟ್ 2023, 1:00 IST
Last Updated 28 ಆಗಸ್ಟ್ 2023, 1:00 IST
   

‘ನನ್ನ 13.5 ಕೋಟಿ ಬಡ ಸೋದರ– ಸೋದರಿಯರು ಬಡತನದ ಬಂಧನದಿಂದ ಮುಕ್ತರಾಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹೆಮ್ಮೆಯಿಂದ ಹೇಳಿದರು. ಇದು ಹೆಮ್ಮೆಪಡಬೇಕಾದ ವಿಷಯವೆ.

ನೀತಿ ಆಯೋಗವು ಬಹು ಆಯಾಮದ ಬಡತನ (ಎಂಪಿಐ) ಸೂಚ್ಯಂಕದ ವರದಿಯನ್ನು ಹಿಂದಿನ ತಿಂಗಳಷ್ಟೇ ಪ್ರಕಟಿಸಿದೆ. ಭಾರತವು ಬಡತನವನ್ನು ಅಳೆಯುವುದಕ್ಕೆ ಇತ್ತೀಚೆಗಷ್ಟೇ ಎಂಪಿಐ ಅನ್ನು ಬಳಸಲು ಪ್ರಾರಂಭಿಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) 2010ರಿಂದಲೇ ಎಂಪಿಐಯನ್ನು ಪ್ರಕಟಿಸುತ್ತಿದೆ.

ಭಾರತದಲ್ಲಿ ಈವರೆಗೂ ಆದಾಯವನ್ನು ಆಧರಿಸಿ ಬಡತನವನ್ನು ಅಳೆಯುವ ಪದ್ಧತಿ ಇತ್ತು. ಆದಾಯ ಕುರಿತಂತೆ ಮಾಹಿತಿ ಸಿಗುವುದು ಕಷ್ಟವಾಗಿದ್ದರಿಂದ, ಸರಕು–ಸೇವೆಗಳನ್ನು ಕೊಳ್ಳಲು ಜನ ಖರ್ಚು ಮಾಡುತ್ತಿದ್ದ ಹಣವನ್ನು (ಕನ್ಸಮ್‌ಷನ್ ಎಕ್ಸ್‌ಪೆಂಡಿಚರ್) ಆಧರಿಸಿ ಬಡತನವನ್ನು ಅಂದಾಜು ಮಾಡಲಾಗುತ್ತಿತ್ತು. ಬಡತನದ ರೇಖೆಯನ್ನು ನಿರ್ಧರಿಸಲು ಕಾಲಕಾಲಕ್ಕೆ ಸಮಿತಿಗಳು ರಚನೆಯಾಗುತ್ತಿದ್ದವು. ಬಡತನದ ರೇಖೆಯಿಂದ ಕೆಳಗಿರುವವರನ್ನು ಬಡವರೆಂದು ಪರಿಗಣಿಸಲಾಗುತ್ತಿತ್ತು. ಇವರ ಸಂಖ್ಯೆಯನ್ನು ಅಂದಾಜು ಮಾಡುವುದಕ್ಕೆ ಬೇಕಾದ ಅಂಕಿಅಂಶಗಳನ್ನು ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆಯಿಂದ (ಎನ್‌ಎಸ್‌ಎಸ್‌) ತೆಗೆದುಕೊಳ್ಳಲಾಗುತ್ತಿತ್ತು.

ADVERTISEMENT

ಎನ್‌ಎಸ್‌ಎಸ್, ಐದು ವರ್ಷಕ್ಕೊಮ್ಮೆ ಬಳಕೆದಾರರು ವಿವಿಧ ಸರಕುಗಳನ್ನು ಕೊಳ್ಳಲು ಮಾಡುವ ಖರ್ಚಿನ ಕುರಿತಂತೆ ಸಮೀಕ್ಷೆ ನಡೆಸಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ಆದರೆ ಸರ್ಕಾರ 2017– 18ರ ಬಳಕೆದಾರರ ವೆಚ್ಚದ ಸಮೀಕ್ಷೆಯ ವರದಿಯನ್ನು ತಡೆಹಿಡಿದಿದೆ. ಹಾಗಾಗಿ 2011ರಲ್ಲಿ ಪ್ರಕಟವಾದ ಮಾಹಿತಿಯೇ ಭಾರತದ ಬಡತನವನ್ನು ಕುರಿತ ಅಂತಿಮ, ಅಧಿಕೃತ ಮಾಹಿತಿಯಾಗಿದೆ. ದತ್ತಾಂಶದ ಕೊರತೆಯಿಂದಾಗಿ ಅರ್ಥಶಾಸ್ತ್ರಜ್ಞರು ಅನಿವಾರ್ಯವಾಗಿ ವಿವಿಧ ಮೂಲಗಳಿಂದ ಅಂಕಿಅಂಶಗಳನ್ನು ಹೆಕ್ಕಿಕೊಂಡು ಬಡತನದ ಅಂದಾಜು ಮಾಡುತ್ತಿದ್ದಾರೆ. ಸ್ವಾಭಾವಿಕವಾಗಿಯೇ ಆ ಬಗ್ಗೆ ಗೊಂದಲಗಳೂ ವಿವಾದಗಳೂ ಇವೆ.

ಈಗ ಯುಎನ್‌ಡಿಪಿ ರೂಪಿಸಿರುವ ಬಹು ಆಯಾಮದ ಬಡತನ ಸೂಚ್ಯಂಕ ನಮ್ಮ ಮುಂದಿದೆ. ಇದು ಸಂಪೂರ್ಣವಾಗಿ ಬೇರೆಯೇ ಆದ ವಿಧಾನವನ್ನು ಆಧರಿಸಿದೆ. ಜನರ ಹಣಕಾಸಿನ ಸ್ಥಿತಿಯನ್ನು ಆಧಾರವಾಗಿ ಇಟ್ಟುಕೊಳ್ಳದೆ, ಮಾನವಾಭಿವೃದ್ಧಿಯನ್ನು ಆಧರಿಸಿ ಬಡತನವನ್ನು ಲೆಕ್ಕಹಾಕಲು ಪ್ರಯತ್ನಿಸಿದೆ. ಮಾನವ ಸಂಪನ್ಮೂಲದ ಮೂರು ಆಯಾಮಗಳಾದ ಆರೋಗ್ಯ, ಶಿಕ್ಷಣ ಹಾಗೂ ಜೀವನ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಅವುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಪೌಷ್ಟಿಕತೆ, ಮಕ್ಕಳ ಮರಣ ಪ್ರಮಾಣ, ಶಿಕ್ಷಣದ ಅವಧಿ ಮತ್ತು ಹಾಜರಾತಿ, ಶುದ್ಧನೀರು, ನೈರ್ಮಲ್ಯ, ವಿದ್ಯುತ್, ಅಡುಗೆ ಇಂಧನದಂತಹ ಹತ್ತು ಸೂಚಕಗಳನ್ನು (ಇಂಡಿಕೇಟರ್ಸ್‌) ಆರಿಸಿಕೊಳ್ಳಲಾಗಿದೆ.

ಈ ಸೌಲಭ್ಯಗಳ ಲಭ್ಯತೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಸೌಲಭ್ಯವಿದ್ದರೆ ಸೊನ್ನೆ ಅಂಕವನ್ನು, ಸೌಲಭ್ಯ ವಂಚಿತರಾಗಿದ್ದರೆ ಒಂದು ಅಂಕವನ್ನು ನೀಡಲಾಗುತ್ತದೆ. ಪ್ರತಿಯೊಂದು ಸೂಚಕಕ್ಕೂ ಅದರ ಪ್ರಾಮುಖ್ಯವನ್ನು ಆಧರಿಸಿ ಪ್ರಾಧಾನ್ಯ ನೀಡಲಾಗಿದೆ. ಸೂಚಕಗಳ ಅಂಕದೊಂದಿಗೆ ಅವುಗಳ ಪ್ರಾಧಾನ್ಯವನ್ನು ಗುಣಿಸಿ ಸೂಚ್ಯಂಕವನ್ನು ಲೆಕ್ಕ ಹಾಕಲಾಗುತ್ತದೆ. ಸೂಚ್ಯಂಕದ ಒಟ್ಟು ಮೌಲ್ಯ 0.33ಕ್ಕಿಂತ ಕಡಿಮೆಯಿದ್ದರೆ ಅದನ್ನು ಬಡ ಕುಟುಂಬವೆಂದು ಪರಿಗಣಿಸಲಾಗುತ್ತದೆ. ಈ ಅಂಕಗಳನ್ನು ಕ್ರೋಡೀಕರಿಸಿ ದೇಶದ ಎಂಪಿಐ ಲೆಕ್ಕ ಹಾಕಲಾಗುತ್ತದೆ.

ಆದರೆ ಎಲ್ಲಾ ದೇಶಗಳು ಸಂಪೂರ್ಣವಾಗಿ ಇದೇ ಕ್ರಮವನ್ನು ಅನುಸರಿಸುತ್ತಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡಿವೆ. ಉದಾಹರಣೆಗೆ, ಭಾರತ ಹತ್ತು ಸೂಚಕಗಳ ಜೊತೆಗೆ ಬ್ಯಾಂಕ್‌ ಖಾತೆ ಹಾಗೂ ತಾಯಿಯ ಆರೋಗ್ಯವನ್ನು ಹೆಚ್ಚುವರಿ ಸೂಚಕಗಳಾಗಿ ಸೇರಿಸಿಕೊಂಡಿದೆ. ಹಾಗಾಗಿ ಅಂದಾಜಿನಲ್ಲೂ ವ್ಯತ್ಯಾಸವಾಗುತ್ತದೆ.

ನೀತಿ ಆಯೋಗವು ಎಂಪಿಐ ತಯಾರಿಸಲು ಬೇಕಾದ ಮಾಹಿತಿಯನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ (ಎನ್‌ಎಫ್‌ಎಚ್‌ಎಸ್) ತೆಗೆದುಕೊಂಡಿದೆ. ಕೇಂದ್ರ ಸರ್ಕಾರವು ಎನ್‌ಎಫ್‌ಎಚ್‌ಎಸ್ ವರದಿಯ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು. ಹಾಗಿದ್ದಾಗ್ಯೂ ನೀತಿ ಆಯೋಗ ಅಲ್ಲಿಂದ ಮಾಹಿತಿ ತೆಗೆದುಕೊಳ್ಳುತ್ತಿರುವುದು ನೆಮ್ಮದಿಯ ವಿಷಯ.

ನೀತಿ ಆಯೋಗವು ಪ್ರಕಟಿಸಿರುವ ವರದಿಯ ಪ್ರಕಾರ, ಭಾರತದಲ್ಲಿ ಬಹು ಆಯಾಮದ ಬಡತನದಿಂದ 2005- 06ರಿಂದ 2020- 21ರ ಅವಧಿಯಲ್ಲಿ 41.5 ಕೋಟಿ ಜನ ಹೊರಬಂದಿದ್ದಾರೆ. ಅವರಲ್ಲಿ 13.5 ಕೋಟಿ (ಯುಎನ್‌ಡಿಪಿ ಅಂದಾಜಿನ ಪ್ರಕಾರ 13.9 ಕೋಟಿ) ಜನ 2015- 16 ಹಾಗೂ 2020- 21ರ ನಡುವೆ ಹೊರಗೆ ಬಂದವರು. ಉಳಿದವರು 2005 ಹಾಗೂ 2015ರ ನಡುವೆ ಹೊರಗೆ ಬಂದವರು. ಶೇಕಡಾವಾರು ನೋಡಿದರೆ, 2005- 06ರಲ್ಲಿ ಬಡವರ ಸಂಖ್ಯೆ ಶೇಕಡ 55.1ರಷ್ಟು ಇದ್ದುದು 2015- 16ರಲ್ಲಿ ಶೇಕಡ 27.7 ಆಯಿತು. 2020- 21ರಲ್ಲಿ ಶೇಕಡ 16.4ಕ್ಕೆ ಇಳಿದಿದೆ. ಇದು ಸಂತಸದ ವಿಷಯ. ಆದರೆ ಎಂಪಿಐ ಬಡತನದ ಪರಿಪೂರ್ಣ ಮಾಪನವಲ್ಲ.

ನಿಜ, ಯಾವುದೇ ಮಾಪನವೂ ಪರಿಪೂರ್ಣವಾಗಿರುವುದಕ್ಕೆ ಸಾಧ್ಯವಿಲ್ಲ. ಆದಾಯವನ್ನು ಆಧರಿಸಿದ ಬಡತನದ ಸೂಚ್ಯಂಕದ ಬಗ್ಗೆಯೂ ಟೀಕೆಗಳಿವೆ. ಅವು ಆರೋಗ್ಯ, ಶಿಕ್ಷಣದಂತಹ ಮಾನವಾಭಿವೃದ್ಧಿಯ ಅಂಶಗಳನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ಬಹು ಆಯಾಮದ ಬಡತನದ ಸೂಚ್ಯಂಕದಲ್ಲೂ ಸಮಸ್ಯೆಗಳಿವೆ. ಅದು ಅನುಸರಿಸುತ್ತಿರುವ ಕ್ರಮ, ಬಳಸುತ್ತಿರುವ ಸೂಚಕಗಳಂತಹವುಗಳ ಬಗ್ಗೆ ಸಮಸ್ಯೆಗಳಿವೆ.

ಕೆಲವು ಸೂಚಿಗಳು ಹಲವು ಕುಟುಂಬಗಳಿಗೆ ಅನ್ವಯವಾಗುವುದಿಲ್ಲ. ಉದಾಹರಣೆಗೆ, ಕುಟುಂಬದಲ್ಲಿ ಮಕ್ಕಳಿಲ್ಲದೇ ಹೋದರೆ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಸಿಗುವುದಿಲ್ಲ. ಅಡುಗೆ ಮಾಡಿಕೊಳ್ಳದ ವಲಸೆ ಕಾರ್ಮಿಕರಿಗೆ ಇಂಧನ ಮೂಲದ ಸೂಚಿಗಳು ಅನ್ವಯಿಸುವುದಿಲ್ಲ. ಮಾಹಿತಿ ಇಲ್ಲದಿದ್ದಾಗ ಸೌಲಭ್ಯಗಳು ಇದ್ದವು ಎಂದು ಭಾವಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ?

ಜೀವನಮಟ್ಟವನ್ನು ನಿರ್ಧರಿಸುವ ಸೂಚಿಗಳಲ್ಲಿ ಬ್ಯಾಂಕ್ ಖಾತೆಯನ್ನು ಸೇರಿಸಲಾಗಿದೆ. ಆದರೆ ಅದನ್ನು ಶುಚಿಯಾದ ನೀರು ಅಥವಾ ಪೌಷ್ಟಿಕತೆಯ ಸಮಕ್ಕಿಟ್ಟು ನೋಡುವುದು ಸರಿಯಲ್ಲ. ಜೊತೆಗೆ ಈಗಾಗಲೇ ಇರುವ ಬಹುತೇಕ ಸೌಲಭ್ಯಗಳು ಮುಂದಿನ ದಿನಗಳಲ್ಲಿ ತಪ್ಪಿಹೋಗುವ ಸಾಧ್ಯತೆ ಕಡಿಮೆ. ಕುಡಿಯುವ ನೀರು, ಅಡುಗೆ ಅನಿಲ, ಬ್ಯಾಂಕ್ ಖಾತೆ, ಮನೆ, ವಿದ್ಯುತ್ ಈ ಎಲ್ಲಾ ಸೌಲಭ್ಯಗಳು ಮುಂದುವರಿಯುತ್ತಲೇ ಇರುತ್ತವೆ. ಬರೀ ಪೌಷ್ಟಿಕತೆ ಹಾಗೂ ಶಿಶುಮರಣ ಪ್ರಮಾಣದಲ್ಲಿ ಹೆಚ್ಚುಕಮ್ಮಿಯಾಗಬಹುದು. ಹಾಗಾಗಿ ಈ ಕ್ರಮದಲ್ಲಿ ಜನ ಬಡತನದಿಂದ ಹೊರಬರಬಹುದೇ ವಿನಾ ಹೊಸದಾಗಿ ಬಡವರಾಗುವ ಸಾಧ್ಯತೆ ಕಡಿಮೆ.

ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅವರು ಹೇಳುವಂತೆ, ಸಮಾಜ ಆಧುನೀಕರಣಗೊಂಡಂತೆ ಇದರಲ್ಲಿ ಸೂಚಿಸಿರುವ ಬಹುತೇಕ ಸೌಲಭ್ಯಗಳು ಹೆಚ್ಚುತ್ತವೆ. ಮಕ್ಕಳು ಮರಣ ಪ್ರಮಾಣ ಕಡಿಮೆಯಾಗುತ್ತದೆ, ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚುತ್ತದೆ... ಹಾಗಾಗಿ ಎಂಪಿಐ ಇಳಿತ ಸಮಾಜದ ಆಧುನೀಕರಣವನ್ನು ಮತ್ತು ಸೌಲಭ್ಯಗಳಲ್ಲಿ ಸುಧಾರಣೆ ಆಗುತ್ತಿರುವುದನ್ನು ಸೂಚಿಸುತ್ತದೆಯೇ ವಿನಾ ಆದಾಯ ಅಥವಾ ಕೊಳ್ಳುವ ಶಕ್ತಿಯ ಹೆಚ್ಚಳವನ್ನಲ್ಲ.

ಅದರಿಂದಾಗಿಯೇ 41.5 ಕೋಟಿ ಜನ ಬಹು ಆಯಾಮದ ಬಡತನದಿಂದ ಹೊರಬಂದಿದ್ದರೂ ಉಳಿದ ಎಷ್ಟೋ ವಿಷಯಗಳಲ್ಲಿ ಅವರ ಸ್ಥಿತಿ ಸುಧಾರಣೆಯಾಗಿಲ್ಲ. ಉದಾಹರಣೆಗೆ, ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಪರಿಣಾಮವಾಗಿ, 2011- 12 ಹಾಗೂ 2017- 18ರ ನಡುವೆ ಅವರು ಮಾಡುತ್ತಿದ್ದ ಖರ್ಚಿನಲ್ಲಿ ಶೇಕಡ 9ರಷ್ಟು ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಕ್ಯಾಲೊರಿಯನ್ನೂ ಬಳಸಲಾಗದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಹಾಗಾಗಿ, ಬಹು ಆಯಾಮದ ಬಡತನ ಸೂಚ್ಯಂಕವು ಬಡತನದ ಒಂದು ಮುಖವನ್ನಷ್ಟೇ ತೋರಿಸುತ್ತದೆ ಎನ್ನಬಹುದು. ಅದೊಂದನ್ನೇ ಬಳಸಿ ಒಂದು ದೇಶದ ನಿಜವಾದ ಬಡತನದ ಸ್ಥಿತಿಯನ್ನು ತಿಳಿಯಲಾಗದು. ವಿಭಿನ್ನ ಸೂಚ್ಯಂಕಗಳು ವಿಭಿನ್ನ ಆಯಾಮಗಳನ್ನು ಹೇಳುತ್ತಿರುತ್ತವೆ. ಅವುಗಳನ್ನು ಹೋಲಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಅವುಗಳ ಪರಿಕಲ್ಪನೆ, ಅಂದಾಜು ಮಾಡುವ ವಿಧಾನ, ಬಳಸುವ ಮಾಹಿತಿ ಎಲ್ಲವೂ ಬೇರೆಯಾಗಿರುತ್ತವೆ. ಒಂದು ಸೂಚ್ಯಂಕ ನೋಡಿ ಬಡತನ ಕಮ್ಮಿಯಾಗಿದೆ ಅಂದುಕೊಂಡರೆ, ಇನ್ನೊಂದು ಸೂಚ್ಯಂಕವು ಬಡತನ ಹೆಚ್ಚುತ್ತಿದೆ ಅನ್ನುತ್ತಿರುತ್ತದೆ. ಅವುಗಳನ್ನು ಪರಸ್ಪರ ಪೂರಕವಾಗಿ ಬಳಸುವುದು ಒಳ್ಳೆಯದು. ಹಾಗಾಗಿಯೇ ಖರ್ಚು, ವರಮಾನ ಆಧಾರಿತ ಬಡತನದ ಅಂದಾಜು ಹಾಗೂ ಎಂಪಿಐ ಎರಡನ್ನೂ ಬಳಸುವುದು ಸೂಕ್ತ.

ಎಂಪಿಐನ ಮಿತಿಗಳನ್ನು ಮೀರಲು ಪ್ರಯತ್ನಿಸುತ್ತಲೇ ವರಮಾನ ಆಧರಿಸಿದ ಬಡತನದ ಸೂಚ್ಯಂಕಕ್ಕೆ ಬೇಕಾದ ಮಾಹಿತಿಯನ್ನು ವಸ್ತುನಿಷ್ಠವಾಗಿ ಸಂಗ್ರಹಿಸುವ ಕೆಲಸವೂ ಮುಂದುವರಿಯಬೇಕು. ಆಗಷ್ಟೇ ಬಡತನದ ಬಾಹುಳ್ಯ, ಕಾರಣ, ಪರಿಹಾರ ಕುರಿತಂತೆ ಸಮಚಿತ್ತದ ನಿರ್ಧಾರ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.