ADVERTISEMENT

ಲೇಖನ: ಡಿಜಿಟಲ್ ಶಿಕ್ಷಣ ಮತ್ತು ಕಲಿಕೆಯ ವಿಧಾನ

ಎಳೆಯ ಮಕ್ಕಳ ಕೈಗೆ ಕಂಪ್ಯೂಟರ್ ಅಥವಾ ಮೊಬೈಲಿನ ಕೀಲಿಮಣೆ ಕೊಟ್ಟು ಕೂಡಿಸುವುದು ಎಷ್ಟು ಸರಿ?

​ಪ್ರಜಾವಾಣಿ ವಾರ್ತೆ
Published 12 ಮೇ 2024, 20:11 IST
Last Updated 12 ಮೇ 2024, 20:11 IST
<div class="paragraphs"><p>ಡಿಜಿಟಲ್ ಶಿಕ್ಷಣ </p></div>

ಡಿಜಿಟಲ್ ಶಿಕ್ಷಣ

   

ನಮ್ಮ ಪಕ್ಕದ ಫ್ಲ್ಯಾಟ್‌ಗೆ ಹೊಸದಾಗಿ ಬಂದಿರುವ ದಂಪತಿ ಲಿಫ್ಟ್‌ನಲ್ಲಿ ಸಿಕ್ಕಾಗ, ‘ನಮಗೆ ಇಬ್ಬರು ಮಕ್ಕಳು. ಹೈದರಾಬಾದ್‌ನಿಂದ ಇಲ್ಲಿಗೆ ಬಂದಿದ್ದೇವೆ. ಮಗಳನ್ನು ಪ್ರಿ ನರ್ಸರಿಗೆ, ಮಗನನ್ನು ಒಂದನೇ ತರಗತಿಗೆ ಸೇರಿಸಬೇಕು, ಸಹಾಯ ಮಾಡುತ್ತೀರಾ?’ ಎಂದರು. ನನಗೆ ಗೊತ್ತಿರುವ ಕೆಲವು ಉತ್ತಮ ಶಾಲೆಗಳ ಹೆಸರು ಹೇಳಿದೆ. ‘ಅಲ್ಲಿ ಹೊಸ ರೀತಿಯಲ್ಲಿ ಪಾಠ ಹೇಳಿಕೊಡುತ್ತಾರಾ?’ ಎಂದು ಪ್ರಶ್ನಿಸಿದರು. ‘ಏನು ಹಾಗಂದರೆ?’ ಎಂದು ಕೇಳಿದಾಗ, ‘ನಾವೆಲ್ಲ ಕಲಿತ ಹಾಗೆ ಪೆನ್ನು, ಪೇಪರ್‌ನಲ್ಲಿ ಪಾಠ ಹೇಳಿಕೊಡುವ ಶಾಲೆಗಳು ನಮಗೆ ಬೇಡ. ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್, ಇಂಟರ್ನೆಟ್, ರೋಬಾಟ್‌ ಬಳಸಿ ಕಲಿಸುವ ಶಾಲೆಗಳಿದ್ದರೆ ಹೇಳಿ’ ಎಂದರು. ‘ಅಂಥ ಶಾಲೆಗಳ
ಲ್ಲೆಲ್ಲ ಲಕ್ಷಗಟ್ಟಲೆ ಫೀಸ್ ಇರುತ್ತದೆ, ಕಟ್ಟಲು ಸಾಧ್ಯವೇ?’ ಎಂದದ್ದಕ್ಕೆ ‘ಕ್ವಾಲಿಟಿ ಎಜುಕೇಶನ್ ಬೇಕು ಅಂದ್ರೆ ಕಟ್ಟಲೇ ಬೇಕಲ್ವಾ ಸರ್, ಕಂಪನಿಯಲ್ಲಿ ಲೋನ್ ತೆಗಿತೀವಿ’ ಎಂದರು.

‘ಮಕ್ಕಳು ಸೇರುತ್ತಿರುವುದು ಪ್ರೈಮರಿ ಮತ್ತು ಪ್ರಿ ಪ್ರೈಮರಿ ವಿಭಾಗಗಳಿಗಲ್ಲವೇ? ಅವರು ಬರೆಯುವುದು, ಓದುವುದನ್ನು ಕಲಿಯಲು ಪುಸ್ತಕ, ಪೆನ್ನು, ಪೇಪರ್ ಬೇಕಲ್ಲವೇ?’ ಎಂದದ್ದಕ್ಕೆ ‘ಅದೆಲ್ಲ ಹಳೆಕಾಲ ಆಯಿತಲ್ಲ ಸರ್, ಅದನ್ನು ಮಾಡಿ ನಾವೆಲ್ಲ ಏನು ಸಾಧಿಸಿದ್ದೇವೆ? ಬದಲಾದ ಕಾಲಕ್ಕೆ ತಕ್ಕಂತೆ ಮಕ್ಕಳು ಕಲಿಯಬೇಕಲ್ಲವೇ?’ ಎಂದು ನನ್ನನ್ನು ತಿದ್ದುವ ರೀತಿಯಲ್ಲಿ ಮಾತನಾಡಿದರು. ಇದು ಯಾಕೋ ಅತಿಯಾಯಿತು ಎಂದೆನಿಸಿದರೂ ಅವರನ್ನು ನಿರಾಸೆಗೊಳಿಸುವುದು ಬೇಡ ಎಂದುಕೊಂಡು, ‘ಅಂಥ ಶಾಲೆಗಳ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ, ಗೊತ್ತಾದ ನಂತರ ತಿಳಿಸುತ್ತೇನೆ’ ಎಂದು ಮಾತು ಮುಗಿಸಿದೆ.

ADVERTISEMENT

ಅಬ್ಬಬ್ಬಾ! ಕೆಲವು ಪೋಷಕರ ಮಾತು ಮತ್ತು ಚಿಂತನೆ ಅಚ್ಚರಿ ಉಂಟುಮಾಡುವಂತೆ ಇರುತ್ತವಾದರೂ, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ, ಯಂತ್ರಗಳ ಮೂಲಕ ಪಾಠ ಮಾಡಿಸುವ, ವಿದೇಶ ಪ್ರವಾಸ ಏರ್ಪಡಿಸುವ ಕೆಲವು ಪ್ರತಿಷ್ಠಿತ ಶಾಲೆಗಳು ಹೊಸ ತಲೆಮಾರಿನ ಪೋಷಕರ ಮುಂದೆ ಡಿಜಿಟಲ್ ಶಿಕ್ಷಣದ ದೊಡ್ಡ ಮತ್ತು ವೈವಿಧ್ಯಮಯ ಆಕರ್ಷಣೆಗಳನ್ನೇ ಇಟ್ಟಿರುವುದು ತಿಳಿಯುತ್ತದೆ. ದಾಖಲಾತಿಗಾಗಿ ಯಾವುದೇ ಶಾಲೆ ಕಾಲೇಜಿಗೆ ಹೋದರೂ ಅಲ್ಲಿನವರು, ‘ನಾವು ಇಂಥ ಸಿಲಬಸ್ ಪಾಠ ಮಾಡುತ್ತೇವೆ, ಇಂಥವರಿಂದ ಪಾಠ ಮಾಡಿಸುತ್ತೇವೆ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಟ್ರೈನಿಂಗ್ ಕೊಡುತ್ತೇವೆ, ವಿಶೇಷ ಕೋರ್ಸ್‌ಗಳು ನಮ್ಮಲ್ಲಿವೆ, ಆನ್‌ಲೈನ್- ಆಫ್‌ಲೈನ್ ಎರಡರಲ್ಲೂ ಪಾಠ ಮಾಡುತ್ತೇವೆ, ಅಡ್ಮಿಶನ್ ಟೈಮಿನಲ್ಲೇ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಡುತ್ತೇವೆ, ಅದರಲ್ಲಿ ಸಿಲಬಸ್, ಕೊಶ್ಚನ್ ಪೇಪರ್, ನೋಟ್ಸ್, ವಿಡಿಯೊಗಳು, ಪ್ರಯೋಗ ಮಾಡುವ ವಿಧಾನ ಎಲ್ಲವನ್ನೂ ಅಪ್‌ಲೋಡ್ ಮಾಡಿಬಿಟ್ಟಿರುತ್ತೇವೆ. ಮಾಕ್ ಟೆಸ್ಟ್ (ಅಣಕು ಪರೀಕ್ಷೆ), ಪ್ರೊಫೆಷನಲ್ ಕೋರ್ಸ್‌ಗಳ ತರಬೇತಿ ಎಲ್ಲವೂ ಲ್ಯಾಪ್‌ಟಾಪ್‌ನಲ್ಲಿಯೇ ನಡೆಯುತ್ತವೆ. ಶಿಕ್ಷಣ ಇಲಾಖೆಯು ನಿಗದಿ ಮಾಡಿರುವ ಸಿಲಬಸ್‌ನ ಹೊರತಾಗಿ ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳೂ ನಮ್ಮಲ್ಲಿವೆ’ ಎಂದೆಲ್ಲ ಆಕರ್ಷಣೀಯವಾಗಿ ಮಾತನಾಡುತ್ತಾರೆ.

‘ಡೀಟೇಲ್ ಆಗಿ ತಿಳ್ಕೊಬೇಕಲ್ಲ, ಪುಸ್ತಕವಿದ್ದರ ಕೊಡಿ’ ಎಂದರೆ, ‘ನಿಮ್ಮ ಫೋನ್ ನಂಬರಿಗೆ, ನೀವು ನೀಡಿದ ಇ– ಮೇಲ್ ಅಡ್ರೆಸ್‌ಗೆ ಆಗಲೇ ಲಿಂಕ್ ಕಳಿಸಿದ್ದೇವೆ, ಅಲ್ಲಿಯೇ ನೋಡಿಕೊಳ್ಳಿ’ ಎಂದು ಡಿಜಿಟಲ್ ಮಾದರಿಯಲ್ಲಿ ವ್ಯವಹರಿಸುವ ಅನಿವಾರ್ಯಕ್ಕೆ ನಮ್ಮನ್ನು ದೂಡಿಬಿಡುತ್ತಾರೆ. ಹೇಳಿದ್ದೆಲ್ಲವನ್ನೂ ದೊಡ್ಡ ದೊಡ್ಡ ಡಿಜಿಟಲ್ ಪರದೆಗಳ ಮೇಲೆ ತೋರಿಸಿ ಮರುಳು ಮಾಡಿಬಿಡುತ್ತಾರೆ.

ಕೆಲವು ಶಾಲೆಗಳು ಪ್ರವೇಶ ಪರೀಕ್ಷೆ ನಡೆಸಲು ಮುಂದಾಗುತ್ತವೆ. ಇನ್ನು ಕೆಲವು ಶಾಲೆಗಳು ಕೌನ್ಸೆಲಿಂಗ್ ಹೆಸರಿನಲ್ಲಿ ಮಕ್ಕಳ ಮಾನಸಿಕ ಮತ್ತು ಕಲಿಕಾ ಕ್ಷಮತೆಯ ಬಗ್ಗೆ ವಿಶ್ಲೇಷಣೆ ನಡೆಸಿ, ಮಗು ಏನನ್ನು ಸಮರ್ಥವಾಗಿ ಕಲಿಯಬಹುದು ಎಂದು ಸರ್ಟಿಫಿಕೇಟ್ ನೀಡುವವರೆಗೂ ಮುಂದುವರಿಯುತ್ತವೆ. ಶಾಲೆಗೆ ಸೇರಿಸಿಕೊಳ್ಳುವುದಕ್ಕೂ ಮುಂಚೆ ಇಷ್ಟೆಲ್ಲ ಪರೀಕ್ಷೆ ಮಾಡುತ್ತಾರೆ ಎಂದರೆ ಇದು ಸ್ಟ್ಯಾಂಡರ್ಡ್ ಶಾಲೆಯೇ ಇರಬೇಕು ಎಂಬ ಭಾವನೆ ಪೋಷಕರ ಮನಸ್ಸಿನಲ್ಲಿ ಮೂಡುತ್ತದೆ.

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಪರಂಪರೆಯಲ್ಲಿ ಕಲಿತ ಕೋಟ್ಯಂತರ ಜನ, ಸರ್ಕಾರಿ ಶಾಲೆಗಳಲ್ಲಿ, ಮಾತೃಭಾಷೆಯ ಮಾಧ್ಯಮದಲ್ಲಿ ಕಲಿತು ಜಗತ್ತೇ ನಿಬ್ಬೆರಗಾಗುವ ರೀತಿಯಲ್ಲಿ ಸಾಧನೆ ಮಾಡಿದ್ದಾರೆ. ವಿಶ್ವದ ಪ್ರಖ್ಯಾತ ಸಾಫ್ಟ್‌ವೇರ್ ಕಂಪನಿಗಳ ನೇತೃತ್ವ ವಹಿಸಿರುವ ಭಾರತೀಯರಿಗೆ ಸಾಧಕರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಸಿಗುತ್ತಿದೆ. ದೇಶವಿದೇಶಗಳ ಉನ್ನತ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವವರೆಲ್ಲ ಪ್ರಾಥಮಿಕ ಶಿಕ್ಷಣದ ಸಹಜ ಕಲಿಕಾ ಕ್ರಮಗಳಿಂದ ದೂರವಿದ್ದವರಲ್ಲ. ಆದರೆ ಇವರು ನೇತೃತ್ವ ವಹಿಸಿರುವ ಕಂಪನಿಗಳ ಉತ್ಪನ್ನ
ಗಳನ್ನು ಬಳಸಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಬಹುದು ಎಂಬ ಹಪಹಪಿಗೆ ಬಿದ್ದಿದ್ದಾರೆ ಕೆಲವು ಶಿಕ್ಷಣ ತಜ್ಞರು. ಹೀಗಾಗಿ, ವಿಶ್ವವಿದ್ಯಾಲಯಗಳು,
ಉನ್ನತ ಶಿಕ್ಷಣ ಸಂಸ್ಥೆಗಳು ಇಂದಿನ ದಿನಮಾನದ ಕಲಿಕೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯನ್ನು ಕಡ್ಡಾಯಗೊಳಿಸಿಬಿಟ್ಟಿವೆ.

ಈ ಮಾದರಿಯನ್ನು ಅನುಸರಿಸುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ರೇಟಿಂಗ್ ಹಾಗೂ ರ್‍ಯಾಂಕಿಂಗ್ ದೊರಕುತ್ತಿದೆ.ಇದನ್ನೇ ಅನುಕರಿಸಲು ಹೊರಟಿರುವ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳು ಮಕ್ಕಳ ಕೈಯಲ್ಲಿ ಸಹಜವಾಗಿ ಇರಬೇಕಾದ ಆಟಿಕೆ, ಬಳಪ, ಹಾಳೆ, ಸ್ಲೇಟಿನ ಬದಲಾಗಿ ಕಣ್ಣಿನ ದೃಷ್ಟಿ ಮಂದ ಮಾಡುವ, ಬೆರಳ ತುದಿಗಳನ್ನು ನೋಯಿಸುವ ಪ್ರಖರ ಬೆಳಕಿನ ಕಂಪ್ಯೂಟರ್ ತೆರೆ ಮತ್ತು ಕೀಲಿಮಣೆಗಳನ್ನು ನೀಡುತ್ತಿವೆ. ಇದನ್ನು ಕಂಡು, ಜಗತ್ತೇ ತಮ್ಮ ಮಕ್ಕಳ ಕೈಯಲ್ಲಿದೆ ಎಂದು ಬೀಗುವ ಲಕ್ಷಾಂತರ ಪೋಷಕರು ನಮ್ಮ ನಡುವೆ ಇದ್ದಾರೆ.

ಬೆಂಗಳೂರಿನ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ, ಕೇರಳದ ಕಾಲೇಜುಗಳಲ್ಲಿ ಮಹಿಳಾ ವೇಷದ ರೋಬಾಟ್‌ಗಳನ್ನು ಬಳಸಿ ಪಾಠ ಮಾಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿರುವ ರೋಬೊ ಶಿಕ್ಷಕಿಯರು ಅಪಾರ ಜನಪ್ರಿಯತೆಯನ್ನೂ ಗಳಿಸಿದ್ದಾರೆ. ವಿದ್ಯಾರ್ಥಿಗಳ ಕಣ್ಣಲ್ಲಿ ಕಣ್ಣಿಟ್ಟು, ಅವರು ಕಲಿಯುತ್ತಿದ್ದಾರೋ ಇಲ್ಲವೋ ಎಂಬುದನ್ನು ಅರಿತುಕೊಂಡು, ಅರ್ಥವಾಗದಿದ್ದರೆ ಇನ್ನೊಮ್ಮೆ ಮತ್ತೊಮ್ಮೆ ಹೇಳಿಕೊಟ್ಟು, ಹುರಿದುಂಬಿಸಿ ಆತ್ಮವಿಶ್ವಾಸ ತುಂಬುವ ಶಿಕ್ಷಕ- ಶಿಕ್ಷಕಿಯರ ಜಾಗದಲ್ಲಿ ಯಂತ್ರಗಳನ್ನು ಕೂರಿಸುವ ಕಾರ್ಯ ಎಲ್ಲೆಡೆ ಹೆಚ್ಚುತ್ತಿದೆ.

ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಚಾಲ್ತಿಗೆ ಬಂದ ಮೇಲಂತೂ ಎಲ್ಲೆಡೆ ಅದರದೇ ಸದ್ದು. ಚಾಟ್‌ಬಾಟ್‌ಗಳನ್ನು(ವಾಚಸ್ಪತಿ) ಬಳಸಿ ಪದ್ಯ, ಪ್ರಬಂಧ ರಚನೆ, ಪಠ್ಯಪುಸ್ತಕದ ಕೆಲವು ಸಮಸ್ಯೆಗಳಿಗೆ ಉತ್ತರ ಕಂಡುಕೊಂಡ ಕೆಲವರು ‘ಇದು ಎಲ್ಲವನ್ನೂ ಮಾಡಿ ಮುಗಿಸುತ್ತದೆ, ಮನುಷ್ಯರೇ ಇನ್ನು ಮುಂದೆ ಬೇಕಾಗುವುದಿಲ್ಲ’ ಎನ್ನುವ ಅತಿರೇಕದ ಮಾತನಾಡಿದ್ದಾರೆ. ಶಿಕ್ಷಣದಲ್ಲಿ ತಂತ್ರಜ್ಞಾನ ಎಷ್ಟೇ ಅನ್ವಯ ಗೊಳ್ಳಲಿ, ಅದು ಶಿಕ್ಷಕರ ಜಾಗವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಲಾರದು. ಕಲಿಕೆಯ ವಿಧಾನಗಳು ಎಷ್ಟೇ ಬದಲಾದರೂ ಬಹುತೇಕ ನಿರ್ಣಾಯಕ ಪರೀಕ್ಷೆಗಳು ಪೆನ್ನು, ಪೇಪರ್ ಬಳಸಿಯೇ ನಡೆಯುತ್ತಿವೆ.

ಸರಿಯಾದ ಅಕ್ಷರ ಜ್ಞಾನವಿಲ್ಲದ, ಪದಬಂಧ, ವಾಕ್ಯಬಂಧ ಅರಿಯದ ಕೋಟ್ಯಂತರ ಮಕ್ಕಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿದ್ದಾರೆ. ಹೀಗಿರುವಾಗ, ಕೈಯಿಂದ ಬರೆಯುವುದನ್ನೇ ನಿಲ್ಲಿಸಿ ಎಳೆಯ ಮಕ್ಕಳ ಕೈಗೆ ಕಂಪ್ಯೂಟರ್ ಅಥವಾ ಮೊಬೈಲಿನ ಕೀಲಿಮಣೆ ಕೊಟ್ಟು ಕೂಡಿಸುವುದು ಎಷ್ಟು ಸರಿ? ಮುಂಬರುವ ದಿನಗಳಲ್ಲಿ ನಿರ್ಣಾಯಕವಾದ ಎಲ್ಲ ಪರೀಕ್ಷೆಗಳನ್ನೂ ಆನ್‌ಲೈನ್ ಅಥವಾ ಕಂಪ್ಯೂಟರ್ ನೆಟ್‌ವರ್ಕ್‌ ಬಳಸಿಯೇ ನಡೆಸಲು ನಿರ್ಧರಿಸಿದರೆ, ಕಂಪ್ಯೂಟರನ್ನೇ ಕಾಣದ, ಸರಿಯಾದ ಕಟ್ಟಡ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಶಾಲೆಗೆ ಬರಲು ರಸ್ತೆ, ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರಿಲ್ಲದ ಸಾವಿರಾರು ಹಳ್ಳಿಗಳ ವಿದ್ಯಾರ್ಥಿಗಳ ಗತಿ ಏನು? 

ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ‘ನೀಟ್‌’ಗೆ ಅಗತ್ಯವಾದ ತರಬೇತಿಯು ನಗರದ ವಿದ್ಯಾರ್ಥಿ ಗಳಿಗೆ ಸಿಗುವಷ್ಟು ಸುಲಭವಾಗಿ ಗ್ರಾಮೀಣ ವಿದ್ಯಾರ್ಥಿ
ಗಳಿಗೆ ದೊರಕುತ್ತಿದೆಯೇ? ಸಮಗ್ರ ಮತ್ತು ಪಾರಂಪರಿಕ ಶಿಕ್ಷಣ ನೀಡುವ ಸಲುವಾಗಿ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದ್ದೇವೆ ಎಂದು ಹೇಳುತ್ತಿರುವವರು
ಈ ಅಪಸವ್ಯದ ಬಗ್ಗೆ ಏಕೆ ಜಾಣ ಕಿವುಡು ಮತ್ತು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ? ವಿದೇಶಗಳ ಲಕ್ಷಾಂತರ ಶಾಲೆಗಳು ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಪಠ್ಯಕ್ರಮ ರೂಪಿಸಿ, ಕಡಿಮೆ ಯಂತ್ರ ಮತ್ತು ಹೆಚ್ಚು ನೈಜ ಶಿಕ್ಷಕರನ್ನೇ ಬಳಸಿಕೊಂಡು ಶೈಕ್ಷಣಿಕ ಅಭಿವೃದ್ಧಿ ಸಾಧಿಸುತ್ತಿವೆ. ಇದು ನಮಗೆ ಮಾದರಿಯಾಗಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.