ADVERTISEMENT

ಅನ್ನದ ಭಾಷೆಯಲ್ಲ ಕನ್ನಡ

ಮೇಟಿ ಮಲ್ಲಿಕಾರ್ಜುನ
Published 21 ನವೆಂಬರ್ 2020, 19:30 IST
Last Updated 21 ನವೆಂಬರ್ 2020, 19:30 IST
ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ
ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ   

ಲೋಕದ ಎಲ್ಲ ನುಡಿಗಳೂ ಎಲ್ಲ ಬಗೆಯ ತಿಳುವಳಿಕೆಯನ್ನು ಕೊಡಬಲ್ಲವು ಎಂಬೀ ಸಾರ್ವತ್ರಿಕ ಸತ್ಯವನ್ನೆ ತಿರುಚಿ, ಕೆಲವೇ ಕೆಲವು ನುಡಿಗಳಿಗೆ ಮಾತ್ರ ಎಲ್ಲ ರೀತಿಯ ಜ್ಞಾನವನ್ನು ಹಂಚುವ ಕಸುವು ಇರುತ್ತದೆ ಎಂಬ ಹುಸಿ ನಂಬಿಕೆಯೊಂದನ್ನು ಹುಟ್ಟುಹಾಕಲಾಗಿದೆ. ಸಮುದಾಯಗಳ ಸಾಂಸ್ಕೃತಿಕ-ಭಾಷಿಕ ಸಂಪನ್ಮೂಲವನ್ನು ತಮ್ಮ ಹದ್ದುಬಸ್ತಿನಲ್ಲಿ ಇರಿಸಿಕೊಳ್ಳುವುದಕ್ಕಾಗಿ ಈ ಹುನ್ನಾರ...

ಜಾಗತೀಕರಣ ಪ್ರಕ್ರಿಯೆಯು ಶುರುವಾದ ಮೇಲೆ ಭಾಷೆ, ಸಂಸ್ಕೃತಿ, ಸಮಾಜ ಕುರಿತ ಚರ್ಚೆಗಳು ವಿಭಿನ್ನ ನೆಲೆಯ ವಿಶ್ಲೇಷಣೆಗೆ ಒಳಗಾಗಿವೆ. ನಾಡು ನುಡಿಯ ರೂಪಕವಾಗಿ, ಅಸ್ಮಿತೆಯ ರಾಜಕಾರಣದ ಅಸ್ತ್ರವಾಗಿ ಮತ್ತು ರಾಷ್ಟ್ರೀಯತೆಯ ಪ್ರಬಲ ವಿದ್ಯಮಾನವಾಗಿ ಭಾಷೆಯ ಬಗೆಗಿನ ಚಿಂತನೆಗಳು ನೆಲೆಗೊಂಡಿದ್ದವು. ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ಜಗತ್ತಿನಾದ್ಯಂತ ತಲೆಯೆತ್ತಿದ ಹೊಸ ಆರ್ಥಿಕ ನೀತಿಗಳ ಪರಿಣಾಮದಿಂದ ನಮ್ಮ ಬದುಕಿನ ಪ್ರತಿಯೊಂದು ವ್ಯವಹಾರ ಹಾಗೂ ವಿದ್ಯಮಾನವು ಆರ್ಥಿಕ ವಿನ್ಯಾಸ ಮತ್ತು ನೀತಿಗಳಿಗೆ ಎದುರಾಗಿ ಇಲ್ಲವೇ ಪೂರಕವಾಗಿ ಚರ್ಚಿಸಲ್ಪಟ್ಟವು. ಇದು ನಮ್ಮ ಆಲೋಚನಾ ಕ್ರಮದ ಮೇಲೆ ಜಾಗತೀಕರಣವು ಬೀರಿದ ಪರಿಣಾಮವೆಂದೇ ಹೇಳಬೇಕಾಗುತ್ತದೆ.ಈ ಮಾದರಿಯ ಪಲ್ಲಟದಿಂದ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಗುಡಿ ಕೈಗಾರಿಕೆ, ವ್ಯವಸಾಯ ಮೊದಲಾದವುಗಳನ್ನು ಕುರಿತು ನಾವು ಯೋಚಿಸುವ ಸ್ವರೂಪಗಳೇ ಬದಲಾದವು.

ಪ್ರತಿಯೊಂದನ್ನೂ ಆರ್ಥಿಕ ಮೌಲ್ಯ ಹಾಗೂ ಮಾರುಕಟ್ಟೆಯ ಬೇಡಿಕೆಯ ಆಧಾರದ ಮೇಲೆಯೇ ಮಾನ್ಯ ಮಾಡುವ ಧೋರಣೆಯು ನಮ್ಮಲ್ಲಿ ಸಹಜವಾಗಿಯೇ ನೆಲೆಗೊಂಡಿತು.ಬದುಕಿನ ಲೋಕದೃಷ್ಟಿಗಳನ್ನು ಆಮೂಲಾಗ್ರವಾಗಿ ಬದಲಾಯಿಸುವ ಹುನ್ನಾರವೇ ಇದಾಗಿತ್ತೆಂದು ಈಗ ನಮಗೆ ಮನವರಿಕೆಯಾಗಿದೆ. ಈ ಪ್ರಕ್ರಿಯೆಯಲ್ಲಿಯೇ ನಮ್ಮ ನುಡಿಗಳನ್ನು ನಾವು ನಮ್ಮನ್ನು ಸಲಹುವ ಒಂದು ವ್ಯವಸ್ಥೆಯನ್ನಾಗಿ ಪರಿಗಣಿಸಲು ಆರಂಭಿಸಿದೆವು. ಅದನ್ನು ಸಾಮಾಜಿಕ ಸಂಪನ್ಮೂಲವನ್ನಾಗಿ ಅಷ್ಟೆಯಲ್ಲದೆ ಆರ್ಥಿಕ ಸಂಪನ್ಮೂಲವನ್ನು ಉತ್ಪಾದಿಸುವ ಸಾಧನವನ್ನಾಗಿ ನಂಬಲಾಯಿತು. ಆದ್ದರಿಂದ ನುಡಿಯೆನ್ನುವುದು ಅನ್ನದ ಮೂಲವೂ ಉದ್ಯೋಗವನ್ನು ಸೃಷ್ಟಿಸುವ ಕಲ್ಪವೃಕ್ಷವೂ ಆಗಬೇಕು ಎನ್ನುವ ತೀವ್ರವಾದ ಹಂಬಲ ಶುರುವಾಯಿತು. ದಿಟ, ನುಡಿಯೊಂದು ನಿಶ್ಚಿತವಾಗಿಯೂ ಒಂದು ಸಾಂಸ್ಥಿಕ ಚಹರೆಯನ್ನು ಹೊಂದಿರುತ್ತದೆ. ಆದರೆ ಈ ಸಾಂಸ್ಥಿಕ ಸ್ವರೂಪವನ್ನು ನಿರ್ಮಿಸುವ ಜರೂರಿದೆ. ಇದು ತನ್ನಷ್ಟಕ್ಕೆ ನುಡಿಯೊಳಗೆ ಅಂತಸ್ಥವಾಗಿರುವುದಿಲ್ಲ. ಈ ವಿನ್ಯಾಸವನ್ನು ಭಾಷಾ ನೀತಿ ಮತ್ತು ಯೋಜನೆಗಳನ್ನು ರೂಪಿಸಿ, ಆಯಾ ಸಮುದಾಯದ ನುಡಿಗಳನ್ನು ಸಜ್ಜುಗೊಳಿಸುವ ಜರೂರಿರುತ್ತದೆ.

ADVERTISEMENT

ಈ ಹೊತ್ತಿನ ಬಹುದೊಡ್ಡ ಹುನ್ನಾರವೇನೆಂದರೆ, ಲೋಕದಲ್ಲಿ ಎಲ್ಲವೂ ಜಾಗತೀಕರಣದಿಂದಲೇ ನಡೆಯುತ್ತದೆ ಎಂಬ ಹುಸಿ ನಂಬಿಕೆಯೊಂದನ್ನು ಹುಟ್ಟುಹಾಕಲಾಗಿರುವುದು. ಅದಕ್ಕಿಂತ ಮೊದಲು ಜಗತ್ತಿನಲ್ಲಿ ಏನೂ ನಡೆದಿರಲಿಲ್ಲವೇ? ಬೇಕಾದಷ್ಟು ಯುದ್ಧಗಳು, ಧಾರ್ಮಿಕ ದೊಂಬಿಗಳು, ಸಾಮಾಜಿಕ-ಭಾಷಿಕ ಸಂಘರ್ಷಗಳು ನಡೆದಿದ್ದವು. ಇಂತಹ ನಿಲುವುಗಳು ಸಾರ್ವಕಾಲಿಕ. ಆದರೆ ಜಾಗತೀಕರಣದ ಪರಿಣಾಮದಿಂದ ಆ ಎಲ್ಲ ವಿದ್ಯಮಾನಗಳು ಇನ್ನಷ್ಟು ಬಿಗಡಾಯಿಸಿವೆ ಎನ್ನುವುದನ್ನು ಮರೆಯುವಂತಿಲ್ಲ. ಇದೇ ಸಂದರ್ಭದಲ್ಲಿ ಭಾಷೆಗಳ ನಿರ್ದಿಷ್ಟತೆ ಹಾಗೂ ಅಸ್ಮಿತೆಯನ್ನು ಕುರಿತು ನಡೆಯುತ್ತಿರುವ ಚರ್ಚೆಗಳು ಹುಟ್ಟುಹಾಕುತ್ತಿರುವ ನಂಬಿಕೆಗಳು ಮಾತ್ರ ಅಪಾಯಕಾರಿಯಾಗಿವೆ. ಅಂದರೆ, ಕನ್ನಡದಂತಹ ನುಡಿಯು ಸಂಸ್ಕೃತದಂತಹ ಮತ್ತೊಂದು ನುಡಿಯ ಒಡನಾಟದಿಂದ ಮಾತ್ರ ಬೆಳೆಯಬಲ್ಲದು ಎಂಬಂತಹ ನಂಬಿಕೆಯೇ ಅಪಾಯಕಾರಿ. ನುಡಿಯೊಂದಕ್ಕೆ ಇರಬಹುದಾದ ಸೃಜನಶೀಲ, ಬೌದ್ಧಿಕ, ಸಾಂಸ್ಕೃತಿಕ ಕಸುವಿನ ಬಗೆಗೆ ಅಪನಂಬಿಕೆಯನ್ನು ಹುಟ್ಟುಹಾಕುವ ಈ ಕುತಂತ್ರವೂ ಇಂತಹ ನಂಬಿಕೆಗಳಲ್ಲಿ ಹುದುಗಿರುತ್ತದೆ. ಇದು ಚರಿತ್ರೆಯುದ್ದಕ್ಕೂ ನಡೆಯುತ್ತಲೇ ಬಂದಿದೆ.

ಭಾಷಿಕ ಇಲ್ಲವೇ ಸಾಂಸ್ಕೃತಿಕ ಅಸ್ಮಿತೆಯು ಕೂಡ ಆರೋಪಿತ ಅಸ್ಮಿತೆಯೇ ಹೊರತು ಅದು ದಿಟವಾದದ್ದಲ್ಲ. ಯಾವುದೇ ಒಂದು ನುಡಿಯನ್ನು ದೈವಕ್ಕೆ ಸಮೀಕರಿಸುವ, ಮತ್ತೊಂದನ್ನು ಬೌದ್ಧಿಕ ಮತ್ತು ವೈಚಾರಿಕತೆಯನ್ನು ರೂಪಿಸುವ, ಮಗದೊಂದನ್ನು ರಾಷ್ಟ್ರೀಯ ನುಡಿಯನ್ನಾಗಿ ಬಿಂಬಿಸುವ ಹಾಗೂ ಮತ್ತೆ ಕೆಲವನ್ನು ಶಾಸ್ತ್ರೀಯ ನುಡಿಗಳೆಂದು ಗುರುತಿಸುವ ನೆಲೆಗಳು ಸಾಂಸ್ಕೃತಿಕ-ರಾಜಕೀಯ ಹುನ್ನಾರವೇ ಹೊರತು ಬೇರೇನೂ ಅಲ್ಲ. ಕೆಲವೇ ಭಾಷೆಗಳು ಹೀಗೆ ಆಯಾ ಭಾಷೆಗಳನ್ನು ಬಳಸುವ ಕೆಲವರಿಗೆ ಮಾತ್ರ ಅಧಿಕಾರದ ನೆಲೆಯನ್ನು ತಂದುಕೊಟ್ಟಿವೆ. ಸಹಜವಾಗಿಯೇ ಭಾಷೆಗಳ ನಡುವೆಯೂ ಒಂದು ಶ್ರೇಣೀಕರಣ ನಿರ್ಮಾಣವಾಗಿದೆ.

ತಮ್ಮ ಅಧಿಕಾರದ ಜಾಗಗಳನ್ನು ಬಲಪಡಿಸಿಕೊಳ್ಳುವ ಕುತಂತ್ರ ಇಲ್ಲಿ ಅಡಗಿದೆ. ಹಾಗಾಗಿ ಈ ಭಾಷಿಕ ರಾಜಕಾರಣಕ್ಕೆ ನಮ್ಮ ಸಮೂಹಗಳು ಒಗ್ಗಿಕೊಳ್ಳಲೇಬೇಕಾದ ಅನಿವಾರ್ಯ ಉಂಟಾಗಿದೆ. ಶೈಕ್ಷಣಿಕ ಸನ್ನಿವೇಶದಲ್ಲಿ ಭಾಷೆಗೆ ನಾವು ಹೇಗೆ ಒಗ್ಗಿಕೊಳ್ಳಬೇಕು ಎನ್ನುವ ಕುರಿತೇ ತರಬೇತಿ ನೀಡಲಾಗುತ್ತದೆ. ಇದರಿಂದ ಬಿಡುಗಡೆ ಪಡೆಯುವ ಹಾದಿಗಳು ನಮ್ಮ ಜನಪದ ಚರಿತ್ರೆ ಹಾಗೂ ಸಾಹಿತ್ಯವನ್ನು ನಿಗಾ ಇಟ್ಟು ನೋಡಿದರೆ ಸಿಗುತ್ತವೆ. ಅಂದರೆ, ಭಾಷೆ ಕೇವಲ ಒಂದು ಸಾಧನವಲ್ಲ. ಅದು ಲೋಕವನ್ನು ಹಾಗೂ ಲೋಕಾನುಭವವನ್ನು ಅರಿಯುವ ಬಗೆಯೂ ಆಗಿರುತ್ತದೆ. ಅದೊಂದು ಸಾಂಸ್ಕೃತಿಕ-ರಾಜಕೀಯ ಅಸ್ತ್ರವಾಗಿಯೂ ಬಳಕೆಯಾಗುತ್ತದೆ. ಆ ಮೂಲಕ ಸಮಾಜದ ಕೆಲವು ಜಾತಿ, ಧರ್ಮದ ಜನರಿಗೆ ತಮ್ಮ ಅಧಿಕಾರ ಸಂಬಂಧಗಳನ್ನು, ಸಾಮಾಜಿಕ ನಿಯಂತ್ರಣವನ್ನು, ಜ್ಞಾನ ಹಂಚಿಕೆಯ ಏಕಸ್ವಾಮ್ಯವನ್ನು ಕಾಯ್ದುಕೊಳ್ಳುವ ಒಳ ಉದ್ದೇಶಗಳು ಈಡೇರುತ್ತವೆ. ಇಂತಹ ಹಿತಾಸಕ್ತಿಗಳು ಭಾಷಿಕ ಜಗಳ, ಭಾಷೆಯ ಬಗೆಗೆ ಅತಿಯಾದ ಮೋಹವನ್ನು ಇಟ್ಟುಕೊಂಡಿರುವುದಲ್ಲದೆ, ಭಾಷಿಕ ದುರಭಿಮಾನಕ್ಕೂ ಕುಮ್ಮಕ್ಕು ನೀಡುತ್ತವೆ. ಈ ಕಾರಣದಿಂದಲೇ ಇವತ್ತಿಗೂ ನಮ್ಮ ಸಮುದಾಯಗಳ ಭಾಷಿಕ ನಿಲುವು ಬದಲಾಗಿಲ್ಲ.‌‌

ಬಹುಭಾಷಿಕ ಸನ್ನಿವೇಶದಲ್ಲಿ ಯಾವುದೇ ಕೆಲವು ನುಡಿಗಳಿಗೆ ವಿಶೇಷ ಮಾನ್ಯತೆ ಕೊಡುವುದು ಸಾಂಸ್ಕೃತಿಕವಾಗಿ ಸರಿಯಾದ ಕ್ರಮವಲ್ಲ. ಆದರೆ ಇಂತಹ ನಿಲುವುಗಳನ್ನು ರಾಜಕೀಯ ಹಿತಾಸಕ್ತಿಯನ್ನು ಕಾಪಾಡುವ ಇರಾದೆಯಿಂದ ಕೈಗೊಳ್ಳಲಾಗುತ್ತದೆ. ಸಮುದಾಯಗಳ ಆಶೋತ್ತರಗಳನ್ನು ಜೋಪಾನ ಮಾಡಬೇಕಾದ ಪ್ರಭುತ್ವವೇ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಭಾಷಿಕ ಅಸಮಾನತೆಯನ್ನು ಹುಟ್ಟುಹಾಕುತ್ತದೆ. ಭಾಷಾ ನೀತಿಗೂ ಬದುಕಿನ ಕ್ರಮಗಳ ನಡುವೆಯೂ ಒಂದು ಬಗೆಯ ನೆಂಟಸ್ತಿಕೆ ಇರುತ್ತದೆ ಎಂಬ ವಿವೇಕ ಸಹ ಇಲ್ಲಿ ಗೈರು ಆಗಿರುತ್ತದೆ. ಅಂತಹ ಕಡೆ ಅಸಮಾನತೆಗೆ ಹೊರತಾಗಿ ಬೇರೆ ಇನ್ನೇನು ಹುಟ್ಟಿಕೊಳ್ಳಲು ಸಾಧ್ಯ?

ಮೇಟಿ ಮಲ್ಲಿಕಾರ್ಜುನ

ಇಂತಹ ಜನವಿರೋಧಿ ತೀರ್ಮಾನಗಳನ್ನು ಮೀರಿ ತಮ್ಮ ತಮ್ಮ ನುಡಿಗಳನ್ನು ಬೆಳೆಸುವ ಬಲವಾದ ನಂಬಿಕೆಗಳನ್ನು ಸಮುದಾಯಗಳು ರೂಢಿಸಿಕೊಳ್ಳುವ ಜರೂರಿದೆ. ಎಲ್ಲ ನುಡಿಗಳಿಗೂ ಆಯಾ ಸಮುದಾಯದ ಲೋಕಗ್ರಹಿಕೆಗೆ ಅನುಗುಣವಾಗಿ ಎಲ್ಲ ಬಗೆಯ ಅಭಿವ್ಯಕ್ತಿಯನ್ನು ನೆರವೇರಿಸಲು ಸಾಧ್ಯ. ಸದ್ಯದ ಸನ್ನಿವೇಶದಲ್ಲಿ ಇಂತಹ ಸಾಂಸ್ಕೃತಿಕ ನಂಬಿಕೆಯ ಜರೂರಿದೆ ಎಂಬುದು ಗಮನಾರ್ಹ.

ಕೆಲವೇ ನುಡಿಗಳಿಗೆ ಎಲ್ಲ ರೀತಿಯ ಜ್ಞಾನವನ್ನು ಹಂಚುವ ಕಸುವು ಇರುತ್ತದೆ ಎಂಬ ಹುಸಿ ನಂಬಿಕೆಯೊಂದನ್ನು ಹುಟ್ಟುಹಾಕಲಾಗಿದೆ. ಎಲ್ಲ ಕಾಲಕ್ಕೂ ಸಮುದಾಯದ ಭಾಷೆಗಳಿಗೆ ವೈಚಾರಿಕ, ಬೌದ್ಧಿಕ ಕಸುವು ಇಲ್ಲವೆಂದು ನಂಬಿಸಿಕೊಂಡು ಬಂದಿರುವುದಕ್ಕೆ ಕಾರಣವೇ ಸಮುದಾಯಗಳ ಸಾಂಸ್ಕೃತಿಕ-ಭಾಷಿಕ ಸಂಪನ್ಮೂಲವನ್ನು ತಮ್ಮ ಹದ್ದುಬಸ್ತಿನಲ್ಲಿ ಇರಿಸಿಕೊಳ್ಳುವುದಕ್ಕಾಗಿ. ಈ ಸಾಂಸ್ಕೃತಿಕ ಮತ್ತು ಭಾಷಿಕ ರಾಜಕಾರಣವನ್ನು ಭಗ್ನಗೊಳಿಸದೇ ನಮ್ಮ ನುಡಿಗಳು ನಮ್ಮ ಅನ್ನದ ಇಲ್ಲವೇ ಉದ್ಯೋಗದ ನುಡಿಗಳಾಗಿ ಮೈದಾಳುವುದು ದುಸ್ತರವೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.