ADVERTISEMENT

ಲೇಖನ | ಸುರಕ್ಷಿತ ತಾಯ್ತನ ಮತ್ತು ಆರೋಗ್ಯ ವ್ಯವಸ್ಥೆ

ಆರೋಗ್ಯವಂತ ಶಿಶುವನ್ನು ಪಡೆಯುವಲ್ಲಿ ಇಡೀ ಕುಟುಂಬದವರ ಹೊಣೆಗಾರಿಕೆ ಇದೆ

ಡಾ.ವಿನಯ ಶ್ರೀನಿವಾಸ್
Published 10 ಏಪ್ರಿಲ್ 2023, 23:45 IST
Last Updated 10 ಏಪ್ರಿಲ್ 2023, 23:45 IST
.
.   

ವಿಶ್ವದಾದ್ಯಂತ ಎಲ್ಲ ದೇಶಗಳೂ ಮಾತೃಮರಣವನ್ನು ಗಂಭೀರವಾಗಿ ಪರಿಗಣಿಸುತ್ತವೆ. ಕಾರಣ, ಇದು ಆ ದೇಶದ ಆರೋಗ್ಯ ವ್ಯವಸ್ಥೆಯ ಮತ್ತು ಅಭಿವೃದ್ಧಿಯ ಸೂಚ್ಯಂಕ. ಹಾಗೆಂದೇ ಮೊದಲಿನಿಂದಲೂ ಬಹುಪಾಲು ದೇಶಗಳು ಮಾತೃಮರಣವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಬಂದಿವೆ. ಭಾರತವೂ ಇದಕ್ಕೆ ಹೊರತಲ್ಲ. 2003ರ ಮೊದಲು ಭಾರತದಲ್ಲಿ ಮಾತೃಮರಣ ಅನುಪಾತ (ಅಂದರೆ ಪ್ರತೀ ಒಂದು ಲಕ್ಷ ಜೀವಂತ ಶಿಶುಗಳ ಜನನವಾದಾಗ ಸಾವಿಗೀಡಾಗುವ ತಾಯಂದಿರ ಸಂಖ್ಯೆ) ಮುನ್ನೂರಕ್ಕೂ ಹೆಚ್ಚೇ ಇತ್ತು. ಬಡತನ, ಅನಕ್ಷರತೆ, ಬಾಲ್ಯವಿವಾಹ, ಗ್ರಾಮೀಣ ಭಾಗಗಳಲ್ಲಿ ಸೂಕ್ತ ಸೌಲಭ್ಯಗಳ ಕೊರತೆಯಂತಹವು ಮುಖ್ಯ ಕಾರಣಗಳಾದರೆ, ಗರ್ಭಾವಸ್ಥೆ, ಪ್ರಸವ ಮತ್ತು ಬಾಣಂತನದ ಆರೈಕೆಯ ಕುರಿತಾಗಿ ಸಮರ್ಪಕ ಮಾಹಿತಿಯ ಕೊರತೆಯೂ ಸ್ವಲ್ಪಮಟ್ಟಿಗೆ ಕಾರಣ ಎಂದರೆ ಪ್ರಾಯಶಃ ತಪ್ಪಾಗಲಿಕ್ಕಿಲ್ಲ.

ಈ ಎಲ್ಲ ಅಂಶಗಳನ್ನೂ ಗಮನದಲ್ಲಿರಿಸಿ 2003ರಲ್ಲಿ ‘ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನ’ದ ಆಚರಣೆಯ ಪರಿಕಲ್ಪನೆ ಹುಟ್ಟಿಕೊಂಡಿತು. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಪ್ರತಿವರ್ಷ ಏಪ್ರಿಲ್ 11ರಂದು ನಡೆಯುವ ಈ ದಿನಾಚರಣೆಯ ಉದ್ದೇಶ. ಅಂದು ಕಸ್ತೂರಬಾ ಗಾಂಧಿಯವರ ಜನ್ಮದಿನವೂ ಹೌದು.

ನಂತರದ ವರ್ಷಗಳಲ್ಲಿ ಜಾರಿಗೆ ಬಂದ ಸರ್ಕಾರದ ಯೋಜನೆಗಳು ಹಲವು. ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಪ್ರಧಾನಮಂತ್ರಿ ಮಾತೃ ಸುರಕ್ಷಾ ಅಭಿಯಾನ ಮತ್ತು ಅನೀಮಿಯಾಮುಕ್ತ ಭಾರತ ಕಾರ್ಯಕ್ರಮದಂತಹ ಯೋಜನೆಗಳ ಮುಖ್ಯ ಉದ್ದೇಶ ಸುರಕ್ಷಿತ ತಾಯ್ತನವೇ. ಸರ್ಕಾರದ ಈ ಎಲ್ಲ ಯೋಜನೆಗಳು ಕಾರ್ಯರೂಪಕ್ಕೆ ಬಂದ ಪರಿಣಾಮವಾಗಿ ಅನುಪಾತವು ಗಣನೀಯವಾಗಿ ಇಳಿಮುಖ ಕಂಡಿದೆ. ಅನುಪಾತವು 2014- 16ರಲ್ಲಿ 130, 2017- 19ರಲ್ಲಿ 103 ಮತ್ತು 2018- 20ರಲ್ಲಿ 97ಕ್ಕೆ ಇಳಿದಿರುವುದು ನಿಜವಾದ ಸಾಧನೆಯೇ ಸರಿ. ಇದೀಗ 2030ರ ಹೊತ್ತಿಗೆ ಅನುಪಾತವನ್ನು ಎಪ್ಪತ್ತಕ್ಕಿಂತಲೂ ಕಡಿಮೆಗೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ADVERTISEMENT

ಸರ್ಕಾರದ ಯೋಜನೆಗಳ ಜೊತೆ ನಾವೂ ಕೈಗೂಡಿಸಬೇಕು. ಒಮ್ಮೆ ನಮ್ಮ ಗ್ರಾಮೀಣ ಭಾರತದ ನಿಜ ಚಿತ್ರಣವನ್ನು ಗಮನಿಸುವುದಾದರೆ, ಇಂದಿಗೂ ಹಳ್ಳಿಗಳಲ್ಲಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ಇಡುವಲ್ಲಿ ಕೆಲವು ಕುಟುಂಬಗಳು ವಿಫಲವಾಗುತ್ತವೆ. ಪ್ರತೀ ತಿಂಗಳು ಸ್ತ್ರೀರೋಗ ತಜ್ಞರಲ್ಲಿ ತಪಾಸಣೆ ಮಾಡಿಸುವುದನ್ನು ಕೆಲವರು ಕಡೆಗಣಿಸಿದರೆ, ಇನ್ನು ಕೆಲವರು ತಜ್ಞರು ಸೂಚಿಸಿದ ಔಷಧ, ಮಾತ್ರೆಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ. ಒಂದುವೇಳೆ ಮಾತ್ರೆ, ಔಷಧಗಳನ್ನು ತಂದುಕೊಟ್ಟರೂ ಎಷ್ಟು ಮಹಿಳೆಯರು ಅದನ್ನು ಸರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದೂ ಮುಖ್ಯವಾಗುತ್ತದೆ. ಕಾರಣ, ಗ್ರಾಮೀಣ ಭಾಗದ ಮಹಿಳೆಯರಿಗೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಕೈತುಂಬಾ ಕೆಲಸ. ದಿನವಿಡೀ ಒಂದು ಕ್ಷಣವೂ ಬಿಡುವಿಲ್ಲದಂತೆ ಮನೆ, ಕೊಟ್ಟಿಗೆ, ಹೊಲದ ಕೆಲಸದಲ್ಲಿ ಮಗ್ನರಾಗಿರುವ ಗರ್ಭಿಣಿಯರು ಮಾತ್ರೆ, ಔಷಧವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದಾಗಲೀ ಅಥವಾ ತಜ್ಞರು ಸೂಚಿಸುವಂತೆ ಮಧ್ಯಾಹ್ನದ ವಿಶ್ರಾಂತಿಯನ್ನು ಪಡೆಯುವುದಾಗಲೀ ಅಷ್ಟು ಸುಲಭವಲ್ಲ.

ಇನ್ನು ಆಹಾರದ ವಿಷಯಕ್ಕೆ ಬರುವುದಾದರೆ, ಗರ್ಭಿಣಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ಅತ್ಯಗತ್ಯ. ಆ ಸ್ಥಿತಿಯಲ್ಲಿ ಅವರಿಗೆ ಹೆಚ್ಚುವರಿ ಕ್ಯಾಲೊರಿ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂಯುಕ್ತ ಆಹಾರವನ್ನು ಕಡ್ಡಾಯವಾಗಿ ಕೊಡಬೇಕು. ಕಬ್ಬಿಣಾಂಶ ಹೆಚ್ಚಿರುವ ಸೊಪ್ಪು, ತರಕಾರಿ, ಹಣ್ಣುಗಳು, ಹಾಲು, ಮೊಟ್ಟೆ ಮೊದಲಾದವು ಆಕೆಯ ಆಹಾರದಲ್ಲಿರುವಂತೆ ಗಮನವಹಿಸಬೇಕು. ನಾರಿನಂಶವಿರುವ ದವಸಧಾನ್ಯಗಳು ಮತ್ತು ಕನಿಷ್ಠ ಮೂರು ಲೀಟರ್ ನೀರು ದಿನನಿತ್ಯದ ಆಹಾರದ ಭಾಗವಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಇವೆಲ್ಲವೂ ಕಾರ್ಯರೂಪಕ್ಕೆ ಬರಲು ಈ ಅಂಶಗಳನ್ನು ಸ್ವತಃ ಗರ್ಭಿಣಿಯೊಬ್ಬಳೇ ಅರಿತಿದ್ದರೆ ಸಾಲದು, ಆಕೆಯ ಕುಟುಂಬದವರೂ ಈ ಬಗ್ಗೆ ತಿಳಿದಿರಬೇಕು.

ಆರೋಗ್ಯವಂತ ಶಿಶುವನ್ನು ಪಡೆಯಲು ಗರ್ಭಧಾರಣೆಗೂ ಮೊದಲಿನ ದೇಹಸ್ಥಿತಿ ಕೂಡ ಮುಖ್ಯವೇ. ಹಾಗಾಗಿ, ತಾಯ್ತನದ ಕನಸನ್ನು ಹೊತ್ತ ಮಹಿಳೆ ಗರ್ಭಧಾರಣೆಗೂ ಮೊದಲು ಸ್ತ್ರೀರೋಗ ತಜ್ಞರೊಂದಿಗೆ ಸಮಾಲೋಚಿಸುವುದು ಉತ್ತಮ. ಏಕೆಂದರೆ, ಭಾರತದಲ್ಲಿ 15- 49 ವಯೋಮಾನದ ಶೇಕಡ 57ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಾರೆ. ಇದು ಕೂಡ ಗಂಭೀರ ಸಮಸ್ಯೆ. ಗರ್ಭಪೂರ್ವ ರಕ್ತಹೀನತೆಯನ್ನು ಸರಿಪಡಿಸದಿದ್ದರೆ ಅದು ಮುಂದೆ ತಾಯಿ ಮತ್ತು ಮಗುವಿನ ಜೀವಕ್ಕೇ ಅಪಾಯವನ್ನು ತಂದೊಡ್ಡಬಹುದು. ಅಷ್ಟೇಅಲ್ಲ, ಗರ್ಭಿಣಿಯರಲ್ಲಿ ಕಂಡುಬರುವ ಫೋಲಿಕ್ ಆ್ಯಸಿಡ್ ಕೊರತೆ, ಹುಟ್ಟುವ ಮಗುವಿನಲ್ಲಿ ಮೆದುಳು ಮತ್ತು ಬೆನ್ನುಹುರಿಯ ನ್ಯೂನತೆಗೆ ಕಾರಣವಾಗಬಹುದು. ಆದ್ದರಿಂದ ಗರ್ಭಧಾರಣೆಗೂ ಮೂರು ತಿಂಗಳು ಮೊದಲೇ ಮಹಿಳೆ ಸೇವಿಸಬೇಕಾದ ಫೋಲಿಕ್ ಆ್ಯಸಿಡ್ ಮಾತ್ರೆಗಳ ಬಗ್ಗೆಯೂ ಪ್ರತಿಯೊಬ್ಬರೂ ತಿಳಿದಿರಬೇಕು.

ಪ್ರಸವ ಬಹಳ ಮುಖ್ಯವಾದ ಹಂತ. ತಜ್ಞರು ಸೂಚಿಸಿದ ದಿನಾಂಕದಂದು ಅಥವಾ ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದ ತಕ್ಷಣವೇ ಆಕೆಯನ್ನು ಸುಸಜ್ಜಿತ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವುದು ಮತ್ತು ಆಕೆಗೆ ಹಿತವೆನಿಸುವ ಆಸ್ಪತ್ರೆಯಲ್ಲಿಯೇ ಪ್ರಸವಕ್ಕೆ ವ್ಯವಸ್ಥೆ ಮಾಡುವುದೂ ಮುಖ್ಯವೆನಿಸುತ್ತವೆ. ಮಧುಮೇಹ ಅಥವಾ ಏರು ರಕ್ತದೊತ್ತಡದಿಂದ ಬಳಲುವ ಗರ್ಭಿಣಿಯರ ಬಗ್ಗೆ ಹೆಚ್ಚು ಕಾಳಜಿ ಅಗತ್ಯ. ಮಹಿಳೆಯರ ಆ ಹಂತದ ಸೂಕ್ಷ್ಮ ಮನಃಸ್ಥಿತಿಯನ್ನು ಕುಟುಂಬದ ಎಲ್ಲ ಸದಸ್ಯರೂ ಅರ್ಥೈಸಿಕೊಂಡಿದ್ದರೆ ಒಳಿತು.

ಪ್ರಸವದ ಬಳಿಕ ಮಹಿಳೆಯ ಆರೈಕೆಯಲ್ಲಿ ಇಂದಿಗೂ ಅವೈಜ್ಞಾನಿಕ ಪದ್ಧತಿಗಳನ್ನು ಕೆಲವೆಡೆ ಅನುಸರಿಸುತ್ತಿರುವುದು ದುಃಖಕರ. ಬಾಣಂತಿಯರಿಗೆ ಕುಡಿಯಲು ಕೊಡುವ ನೀರಿನ ಪ್ರಮಾಣದಲ್ಲಿ ಕಟ್ಟುನಿಟ್ಟು, ಆಹಾರದಲ್ಲಿ ಹಣ್ಣು, ತರಕಾರಿಗಳ ನಿಷೇಧ, ಅತಿಯಾದ ತುಪ್ಪದ ಬಳಕೆ ಮೊದಲಾದ ಅಭ್ಯಾಸಗಳು ಸಮಂಜಸವಲ್ಲ. ತಾಯಿ, ಮಗುವಿನ ಸ್ನಾನಕ್ಕೆ ಸುಡುವ ಅತಿ ಬಿಸಿಯಾದ ನೀರನ್ನೇ ಬಳಸಬೇಕೆಂಬ ಪರಿಕಲ್ಪನೆ ಕೂಡ ಅವೈಜ್ಞಾನಿಕವೇ. ಇವು ಪರೋಕ್ಷವಾಗಿ ತಾಯಿ ಮಗುವಿನ ಅನಾರೋಗ್ಯಕ್ಕೆ
ಕಾರಣವಾಗಬಹುದು.

ಪ್ರಸವದ ಬಳಿಕ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುತ್ತದೆ. ಈ ಅಂಶವನ್ನು ಅರಿತು ಮನೆಯವರು ಆಕೆಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಕೆಲವು ಬಾಣಂತಿಯರನ್ನು ಕಾಡುವ ಬಾಣಂತಿ ಸನ್ನಿ ಮತ್ತು ಬಾಣಂತನದ ಖಿನ್ನತೆಯ ಲಕ್ಷಣಗಳ ಬಗ್ಗೆಯೂ ಮನೆಯ ಸದಸ್ಯರು ತಿಳಿದಿರಬೇಕು. ತಾಯಿ ಸದಾ ಮಂಕಾಗಿ ಕುಳಿತಿದ್ದರೆ, ಮಗುವಿನ ಆರೈಕೆಯಲ್ಲಿ ಆಸಕ್ತಿ ತೋರದಿದ್ದರೆ, ನಿದ್ರಾಹೀನತೆ ಅಥವಾ ಮಾನಸಿಕ ಕಿರಿಕಿರಿಯಿಂದ ಬಳಲುತ್ತಿದ್ದರೆ, ಅತಿಯಾಗಿ ಸಿಟ್ಟು, ರಂಪಾಟ ಮಾಡುತ್ತಿದ್ದರೆ ನಿರ್ಲಕ್ಷಿಸಬಾರದು. ಇದು ಮಾನಸಿಕ ಸಮಸ್ಯೆ ಇರಬಹುದು ಎಂಬುದನ್ನು ಮನಗಂಡು ಮನೋವೈದ್ಯರ ಬಳಿ ಸಮಾಲೋಚನೆಗೆ ಕರೆದೊಯ್ಯಬೇಕು.

ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಅರಿವು ಹೊಂದಿರುವುದೂ ಸುರಕ್ಷಿತ ತಾಯ್ತನವನ್ನು ಸಾಧಿಸುವಲ್ಲಿ ಮುಖ್ಯ ಎನ್ನಿಸುತ್ತದೆ.

ಲೇಖಕಿ: ರೋಗಲಕ್ಷಣ ಶಾಸ್ತ್ರಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.