ADVERTISEMENT

ವಿಶ್ಲೇಷಣೆ | ನೀರು ನಿರ್ವಹಣೆಯಲ್ಲಿ ನಾರಿಶಕ್ತಿ

ಡಾ.ಬಿಸಿ ಪ್ರಭಾಕರ್ ಹಾಗೂ ಡಾ.ಕೆಎನ್ ರಾಧಿಕಾ
Published 3 ಏಪ್ರಿಲ್ 2024, 0:05 IST
Last Updated 3 ಏಪ್ರಿಲ್ 2024, 0:05 IST
   

ಒಂದು ಕಾಲಕ್ಕೆ ಒಡಿಶಾ ಎಂದರೆ ಕ್ಷಾಮ ಮತ್ತು ಬಡತನದ ರಾಜ್ಯ ಎಂಬ ಅಪಖ್ಯಾತಿ ಇತ್ತು. ಅಲ್ಲಿಯೂ ಕುಡಿಯುವ ನೀರಿನ ಬವಣೆ, ನೀರು ನಿರ್ವಹಣೆಯಲ್ಲಿ ಅದಕ್ಷತೆ, ನೀರಿಗಾಗಿ ಪಡಿಪಾಟಲು ಪಡುವ ಸನ್ನಿವೇಶಗಳು ಇದ್ದವು. ಒಡಿಶಾ ತನ್ನ ನೀರಾವರಿ ಹಾಗೂ ಕುಡಿಯುವ ನೀರಿಗೆ ಸುಮಾರು ಶೇಕಡ 60ರಷ್ಟು ಅಂತರ್ಜಲವನ್ನೇ ಅವಲಂಬಿಸಿದ್ದು, ಅಲ್ಲಿ ಕೂಡ ಅಂತರ್ಜಲ ಕುಸಿತದ ಸಮಸ್ಯೆ ಇದೆ. ಆದರೆ ನೀರಿನ ಹೊಸ ಮೂಲಗಳಿಂದ, ಅಂದರೆ ಚಿಲ್ಕಾ ಸರೋವರ ಮತ್ತು ಹಲವಾರು ನದಿಗಳಿಂದ ನೀರಿನ ಸಂಪರ್ಕಜಾಲವನ್ನು ಸಾಧಿಸಿದ ಮೇಲೆ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ.

ರಾಜಕೀಯ ಇಚ್ಛಾಶಕ್ತಿ ಮತ್ತು ತಂತ್ರಜ್ಞಾನದ ಸಮರ್ಪಕ ಅಳವಡಿಕೆ ಏನೆಲ್ಲ ಮಾರ್ಪಾಡು ಹಾಗೂ ಸುಧಾರಣೆ ತರಬಲ್ಲದು ಎಂಬುದನ್ನು ಅರಿಯಲು ಇಂದು ಒಡಿಶಾ ರಾಜ್ಯವನ್ನು ನೋಡಬೇಕು. ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ, ಗುಣಮಟ್ಟದ ಕುಡಿಯುವ ನೀರನ್ನು ಇಂದು 130 ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ದಿನದ 24 ಗಂಟೆಯೂ ಒಡಿಶಾ ಸರ್ಕಾರ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದ ಪ್ರತಿ ಮನೆಗೂ ತಲುಪಿಸುವ ಕಾರ್ಯಕ್ರಮ ಹಾಕಿಕೊಂಡಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ‘ಡ್ರಿಂಕ್ ಫ್ರಮ್ ಟ್ಯಾಪ್’ ಎಂಬ ಪ್ರಗತಿಪರ ಚಿಂತನೆ ಮತ್ತು ಅಲ್ಲಿನ ಹಿರಿಯ ಐಎಎಸ್ ಅಧಿಕಾರಿ ಮತಿ ವದನನ್ ಅವರ ಅವಿರತ ಶ್ರಮವಿದೆ. ಸರ್ಕಾರ ಮತ್ತು ಅಧಿಕಾರಿಗಳು ಮನಸ್ಸಿಟ್ಟು ಕೆಲಸ ಮಾಡಿದರೆ ಸಮಾಜದ ದಿಕ್ಕನ್ನೇ ಬದಲಾಯಿಸುವ ಇಂತಹ ಕಾರ್ಯಗಳನ್ನು ಯಶಸ್ವಿಗೊಳಿಸಬಹುದು ಎಂಬುದಕ್ಕೆ ಒಡಿಶಾವೇ ಉದಾಹರಣೆ. ‘ಜನ ಮೊದಲು’ ಎಂಬ ಧೋರಣೆ ಮತ್ತು ಕಾಳಜಿ ಸರ್ಕಾರಕ್ಕೆ ಇದ್ದರೆ ಯಾವುದೇ ಯೋಜನೆಯನ್ನು ಖಾಸಗೀಕರಣಗೊಳಿಸದೆಯೂ ಸಾಧಿಸಬಹುದು ಎಂಬುದು ಇದರಿಂದ ವೇದ್ಯವಾಗುತ್ತದೆ.

2017ರಲ್ಲಿ ಒಡಿಶಾ ಸರ್ಕಾರವು ‘ಡ್ರಿಂಕ್ ಫ್ರಮ್ ಟ್ಯಾಪ್’ ಯೋಜನೆಯನ್ನು ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಾರಂಭಿಸಿತು. ಇಡೀ ದೇಶದಲ್ಲಿ ಕಾರ್ಯಗತಗೊಳಿಸಿದ ಮೊದಲ ಮತ್ತು ಏಕಮಾತ್ರ ರಾಜ್ಯವೆನಿಸಿ, ನಲ್ಲಿಯ ನೀರನ್ನು ನೇರವಾಗಿ ಕುಡಿಯುವ ರೀತಿಯಲ್ಲಿ ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಈ ಯೋಜನೆಯ ಮೂಲ ಉದ್ದೇಶ ನಗರದ ಬಡವರಿಗೆ ಶುದ್ಧ ನೀರಿನ ಬವಣೆಯನ್ನು ನೀಗಿಸುವುದು, ನೀರಿನಿಂದ ಉಂಟಾಗುವ ಕಾಯಿಲೆಗಳನ್ನು ತಗ್ಗಿಸುವುದು, ಮನೆಯ ಮೇಲೆ ಟ್ಯಾಂಕ್ ನಿರ್ಮಿಸುವುದು, ನೀರಿನ ಸಂಪ್ ನಿರ್ಮಾಣ ಮತ್ತು ನೀರಿನ ಶುದ್ಧೀಕರಣಕ್ಕಾಗಿ ವಾಟರ್ ಫಿಲ್ಟರ್‌ನಂತಹ ಉಪಕರಣಗಳ ಖರ್ಚುಗಳನ್ನು ಉಳಿಸುವುದು. ಈ ಯೋಜನೆಯಡಿ ಲಕ್ಷಾಂತರ ಜನರಿಗೆ ಪ್ರಯೋಜನ ದೊರೆತಿದ್ದು, ಇನ್ನೂ 17 ನಗರಗಳಲ್ಲಿ ಯೋಜನೆ ಪ್ರಗತಿಯಲ್ಲಿದೆ. ಈ ವರ್ಷಾಂತ್ಯದ ಹೊತ್ತಿಗೆ ಮತ್ತೂ ಹಲವು ಲಕ್ಷ ಜನರಿಗೆ ಯೋಜನೆಯ ಪ್ರಯೋಜನ ದೊರೆಯಲಿದೆ.

ADVERTISEMENT

ಈ ಯೋಜನೆಯಲ್ಲಿ ಅತ್ಯಂತ ದೊಡ್ಡ ಸವಾಲಾಗಿದ್ದು ನೀರು ಸೋರುವಿಕೆಯ ತಡೆ ಮತ್ತು ನೀರಿನ ಗುಣಮಟ್ಟದ ಖಾತರಿ. ಇದಕ್ಕಾಗಿ ನಿರಂತರ ಗುಣಮಟ್ಟದ ಪರೀಕ್ಷೆಗಾಗಿ ಪ್ರತಿ ಮನೆಯ ನೀರಿನ ಸಂಪರ್ಕಸೇತುವನ್ನು ಮುಖ್ಯ ಕೇಂದ್ರ ಸರ್ವರ್‌ಗೆ ಸೇರಿಸಿ ಗುಣಮಟ್ಟ ಪರೀಕ್ಷೆಯ ವಿವರಗಳನ್ನು ದಾಖಲಿಸುವ ವ್ಯವಸ್ಥೆ ಇದೆ. ಸಂಚಾರಿ ಲ್ಯಾಬ್‌ಗಳಲ್ಲಿ ಸ್ಥಳದಲ್ಲೇ ಗುಣಮಟ್ಟ ಪರೀಕ್ಷೆಯ ವ್ಯವಸ್ಥೆ ಮಾಡಿದ್ದು, ನೀರಿನ ಒಟ್ಟಾರೆ ಗುಣಮಟ್ಟದ ಖಾತರಿಗಾಗಿ ವ್ಯಾಪಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಹೊಂದಾಣಿಕೆ ಮತ್ತು ಸಮುದಾಯ ಒಳಗೊಳ್ಳುವಿಕೆಯ ಮಹತ್ವ ಅರಿತ ಸರ್ಕಾರ ಅದಕ್ಕೆ ಭಿನ್ನ ಮಾರ್ಗಗಳನ್ನು ಅಳವಡಿಸಿಕೊಂಡಿದೆ. ‘ಜಲಸಾಥಿ’ ಎಂಬ ವಿನೂತನ ಮಾರ್ಗದಡಿ ಸ್ವಸಹಾಯ ಮಹಿಳಾ ಗುಂಪುಗಳನ್ನು ನೇಮಿಸಿಕೊಂಡು ನಗರ ನೀರು ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ.

ಸಮುದಾಯಗಳ ಪ್ರತಿನಿಧಿಗಳಾದ ಇವರು ಈ ಯೋಜನೆಯನ್ನು ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನೀರು ಸರಬರಾಜಿನ ಮುಖ್ಯಸ್ಥ ಭವಾನಿ ಶಂಕರ್ ಮಹಂತಿ ಹೇಳುತ್ತಾರೆ. ಏಕೆಂದರೆ, ನೀರಿನ ಬವಣೆಯ ಕಷ್ಟ ಮಹಿಳೆಯರಿಗೇ ಹೆಚ್ಚು ತಾಕುವುದು ಮತ್ತು ಅದರ ಮಹತ್ವದ ಅರಿವು ಅವರಿಗೆ ಜಾಸ್ತಿ ಎನ್ನುವುದು ಅವರ ಅಭಿಪ್ರಾಯ. ಅದಕ್ಕಾಗಿಯೇ  ಅವರಿಗೆ ತರಬೇತಿ ಕೊಟ್ಟು ತಳಮಟ್ಟದಿಂದಲೇ ಕಾರ್ಯನಿರ್ವಹಿಸುವ ಗುಂಪುಗಳನ್ನು ಕಟ್ಟಲಾಗಿದೆ. ಈಗ ಒಡಿಶಾದ ಜಲ ನಿರ್ವಹಣೆಯಲ್ಲಿ ಗ್ರಾಹಕರು ಮತ್ತು ಸರ್ಕಾರದ ನಡುವೆ ‘ಜಲಸಾಥಿ’ಗಳು ಸಮುದಾಯಗಳ ಒಂದು ಭಾಗವೇ ಆಗಿರುವುದರಿಂದ ಗ್ರಾಹಕಸ್ನೇಹಿ ಸೇವೆ ಒದಗಿಸಲು ಸಹಾಯವಾಗಿದೆ.

ನೀರಿನ ನಿರ್ವಹಣೆಗೆ ಅಲ್ಲಿನ ಸರ್ಕಾರವು ಸಾರ್ವಜನಿಕ ಆರೋಗ್ಯ ಮತ್ತು ಎಂಜಿನಿಯರಿಂಗ್ ವಿಭಾಗದ ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿದ ಅಂಗವಾಗಿ ‘ಜಲಸಾಥಿ’ ಯೋಜನೆಯನ್ನು ಆರಂಭಿಸಿತು. ಅದಕ್ಕಾಗಿ ‘ಜಲಸಾಥಿ’ಗಳ ಜವಾಬ್ದಾರಿ ಮತ್ತು ಹಕ್ಕು ಬಾಧ್ಯತೆಗಳಿಗೆ ವಿಶೇಷ ಕಾರ್ಯವಿಧಾನಗಳ ಮೂಲಕ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಿದೆ. ಈ ರೂಪುರೇಷೆಗಳಲ್ಲಿ ‘ಜಲಸಾಥಿ’ಗಳ ಆಯ್ಕೆ, ಅವರ ಸಾಮರ್ಥ್ಯ ಹೆಚ್ಚಿಸುವುದು, ಅವರಿಗೆ ಇರುವ ಪ್ರೋತ್ಸಾಹಕ ಸೌಲಭ್ಯಗಳು, ಸ್ವಇಚ್ಛೆಯಿಂದ ಭಾಗವಹಿಸುವ ಪಾಲುದಾರಿಕಾ ಸಂಸ್ಥೆಗಳನ್ನು ವಿಷದಪಡಿಸಲಾಗಿದೆ.

130 ಪಟ್ಟಣ ಮತ್ತು ನಗರ ಪ್ರದೇಶಗಳ ಪ್ರತಿ ವಾರ್ಡ್‌ನ ನೀರಿನ ಸರಬರಾಜು ಮತ್ತು ಸಂಬಂಧಿತ ಸಮಸ್ಯೆಗಳ ಉಸ್ತುವಾರಿ, ಮೀಟರ್ ಓದಿ ನೀರಿನ ಬಿಲ್ ತಯಾರು ಮಾಡುವುದು, ನೀರಿನ ಹಣ ಪಾವತಿಸಿಕೊಳ್ಳುವುದು, ಜನರ ನೀರಿನ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಮತ್ತು ಗ್ರಾಹಕ ಸಂಬಂಧಗಳನ್ನು ಸುಧಾರಿಸುವುದು ಇದರಲ್ಲಿ ಸೇರಿವೆ. ಆರಂಭದಲ್ಲಿ ಜಲ ನಿರ್ವಹಣೆಯ ಅನುವುಗಾರರ ರೀತಿಯಲ್ಲಿ ಇದ್ದ ‘ಜಲಸಾಥಿ’ಯರು ಇಂದು ನಗರ ಪ್ರದೇಶಗಳ ಜಲ ನಿರ್ವಹಣೆಯ ಆಧಾರಸ್ತಂಭಗಳೇ ಆಗಿದ್ದಾರೆ.

ಭುವನೇಶ್ವರ ನಗರದಲ್ಲಿ ಪ್ರಾರಂಭವಾದ ‘ಜಲಸಾಥಿ’ ಯೋಜನೆ ಇಂದು ಒಡಿಶಾದ ಎಲ್ಲ ಪಟ್ಟಣ ಪ್ರದೇಶಗಳಿಗೂ ವ್ಯಾಪಿಸಿ ಸುಮಾರು ಒಂದು ಸಾವಿರ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಸಹಾಯ ಗುಂಪುಗಳ ಮೂಲಕ ಆಯ್ಕೆಯಾದ ‘ಜಲಸಾಥಿ’ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಎಂಜಿನಿಯರಿಂಗ್ ಇಲಾಖೆಯ ನಡುವೆ ಲಿಖಿತ  ಒಡಂಬಡಿಕೆಯ ಮೂಲಕ ಇವರು ಕಾರ್ಯನಿರ್ವಹಿಸುತ್ತಿದ್ದು, ಆ ಇಲಾಖೆಯೇ ಇವರಿಗೆ ವೇತನವನ್ನು ಪಾವತಿಸುತ್ತದೆ.

ಪ್ರತಿ ಜಲಸಾಥಿಗೂ ಇಂತಿಷ್ಟು ವಸತಿ ಅಥವಾ ಕೈಗಾರಿಕಾ ಪ್ರದೇಶವೆಂದು ನಿಗದಿಪಡಿಸಿ ಅದರ ಪ್ರಕಾರವೇ ಅವರು ಕೆಲಸ ನಿರ್ವಹಿಸುತ್ತಾರೆ. ಸಮವಸ್ತ್ರ, ಗುರುತಿನ ಚೀಟಿ, ನೀರು ಪರೀಕ್ಷೆಯ ಕಿಟ್, ರಿಜಿಸ್ಟರ್‌ಗಳು ಮತ್ತು ಇವುಗಳನ್ನೆಲ್ಲ ಇಟ್ಟುಕೊಳ್ಳಲು ಒಂದು ಬ್ಯಾಗ್ ಇವಿಷ್ಟನ್ನು ‘ಜಲಸಾಥಿ’ಯ ಮಹಿಳೆಗೆ ಕೊಟ್ಟು ಅವರ ಕಾರ್ಯಕ್ಷಮತೆಗೆ ಹೆಚ್ಚು ಇಂಬು ಕೊಡಲಾಗಿದೆ. ತಮ್ಮೆಲ್ಲ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಲು ಅವರಿಗೆ ಸೂಕ್ತ ತರಬೇತಿಯನ್ನು ಕೊಟ್ಟಿರುತ್ತಾರೆ.

ಒಡಿಶಾದ ಜನಸ್ನೇಹಿಯಾದ ಈ ‘ಜಲಸಾಥಿ’ ಯೋಜನೆ ಬೇರೆ ರಾಜ್ಯಗಳಿಗೊಂದು ಮಾದರಿಯಾಗಿದೆ. ಅಲ್ಲಿನ ಸಮುದಾಯದ ಜನರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಮತ್ತು ನೀರು ತೆರಿಗೆಯ ಸಂಗ್ರಹಣೆಯಲ್ಲಿ ಪ್ರಗತಿ ಸಾಧ್ಯವಾಗಿದೆ. ಮಹಿಳೆಯ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಮತ್ತು ಅವರ ಸ್ವಶಕ್ತೀಕರಣದಲ್ಲಿ ಆಮೂಲಾಗ್ರ ಬದಲಾವಣೆಗಳಾಗಿ, ಇದು, ನೀರು ನಿರ್ವಹಣೆಯಲ್ಲಿ ಮಹತ್ತರ ಹೆಜ್ಜೆಯಾಗಿದೆ. ಸಮುದಾಯಗಳನ್ನು ಒಳಗೊಂಡ ಕಾರ್ಯಕ್ರಮಗಳಿಂದ ಜನರಲ್ಲಿ ‘ಇದು ನಮ್ಮದೇ ಕಾರ್ಯಕ್ರಮ’ ಎಂಬ ಭಾವನೆ ಉಂಟಾಗಿ ಸುಸ್ಥಿರ ಯಶಸ್ಸು ಕಾಣುವತ್ತ ಒಡಿಶಾ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಸರ್ಕಾರ ಮತ್ತು ಜನರ ನಡುವೆ ಸದೃಢ ಸಂಪರ್ಕ ಸೇತುವೆಯಂತಾಗಿ ಬೇರೆ ಯೋಜನೆಗಳಿಗೂ ಇದು ಮಾದರಿಯಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.