‘ಮಾತು ಮಾತು ಮಥಿಸಿ ಬಂತು ನಾದದ ನವನೀತ’–ಬೇಂದ್ರೆಯವರ ಈ ಸಾಲಿನಂತೆ ಮಾತು ನವನೀತವಾಗುವುದು ಒಂದು ಮುಕ್ತ ಸಂವಾದ ಸಾಧ್ಯವಾದ ಸ್ಥಿತಿಯಲ್ಲಿ ಮಾತ್ರ. ಮುಕ್ತ ಸಂವಾದವೆಂದರೆ, ಅಲ್ಲಿ ಆಡುವ ಮಾತಿಗೊಂದು ಮಾನವೀಯ ಸ್ಪರ್ಶದ ಗಹನ ಉದ್ದೇಶ ಇರಬೇಕು ಮತ್ತು ಶರಣರ ಅನುಭವ ಮಂಟಪದಂತೆ, ಅಲ್ಲಿರುವವರು ಯಾವುದೇ ವಲಯದವರಾದರೂ ಸರ್ವರಿಗೂ ಸಮಾನ ಅವಕಾಶವಿರಬೇಕು. ಕೇಳುವ ಪ್ರಶ್ನೆಗಳಿಗೆ ಎದೆಯೊಡ್ಡುವ ದಿಟ್ಟತನವಿರಬೇಕು. ಆದರೆ ಅದೇ ಸಮಯದಲ್ಲಿ ಕೇಳುವವರ ಪ್ರಶ್ನೆಯ ಬಾಣಗಳಿಗೆ ಕೊಲೆಯ ಕುಹಕವಿಲ್ಲದೆ, ಕಟ್ಟುವ, ಮಾಗುವ ಮೊನಚಿರ ಬೇಕು. ಹೀಗಾದಾಗ, ಆಳದ ಬಗ್ಗಡವೂ ತಿಳಿಯಾಗಿ ಜೀವಜಲ ಉಕ್ಕುತ್ತದೆ. ನವಸಮಾಜದ, ಸಮಸಮಾಜದ ಬೆಳಗು ಕಾಣಿಸಿಕೊಳ್ಳುತ್ತದೆ.
ಹೀಗೊಂದು ಸಂಚಲನ ನಮ್ಮ ಇದೇ ನೆಲದಲ್ಲಿ ಆಗಿ ಹೋಗಿದೆ. ನಾವು ಪ್ರತಿ ಬಾರಿ ಆ ಸಂಚಲನಕ್ಕೆ ಮರು ಭೇಟಿ ಕೊಟ್ಟಾಗಲೂ ಅದು ಇನ್ನೊಂದೇ ಹೊಸ ಹೊಳಹನ್ನು ನಮ್ಮೊಳಗೆ ಬೆಳಗುವಷ್ಟು ಇಂದಿಗೂ ಜೀವಂತವಾಗಿದೆ. ಸಂವಾದವೇ ಸಾಧ್ಯವಿಲ್ಲದ ಇಂದಿನ ಪರಿಸ್ಥಿತಿಯಲ್ಲಿ ವಚನಕಾರರ ನಡೆ ‘ನಿಚ್ಚಂ ಪೊಸತು’ ಎಂಬಂತೆ ದಾರಿ ತೋರುತ್ತಲೇ ಇರುತ್ತದೆ. ಸಂವಾದವು ಎಂತೆಂತಹ ಜೀವದಾಯಿ ಚಿಂತನೆಗಳನ್ನು ಹೊಮ್ಮಿಸಬಹುದು ಎಂಬು ದಕ್ಕೆ ಅಲ್ಲಿ ಹಲವು ಕುರುಹುಗಳಿವೆ.
ಸಂವಾದ ಸಾಧ್ಯವಾಗುವುದೆಂದರೆ ಅದಕ್ಕೆ ಪೂರ್ವಭಾವಿಯಾಗಿ ನಮಗೆ ಕಲಿಯುವ, ತಿಳಿಯುವ ಮನಸ್ಸು, ಶ್ರದ್ಧೆ ಮತ್ತು ಇತರರು ತಿಳಿದುಕೊಂಡಿರುವುದರ ಬಗೆಗೆ ಪ್ರಾಮಾಣಿಕ ನಂಬಿಕೆ ಇರಬೇಕಾಗುತ್ತದೆ. ಕೇಳಿಸಿಕೊಳ್ಳದೇ ಹೇಳುವುದರೆಡೆಗೆ ಮಾತ್ರ ಗಮನವಿದ್ದರೆ ಮಾತು ಬರೀ ಸದ್ದಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ತಾವು ಕುಳಿತ ಜಾಗವು ಹೇಳುವುದಕ್ಕಾಗಿ ಮಾತ್ರ ಇರುವುದು, ಕೇಳುವುದಕ್ಕಲ್ಲ ಎಂಬಂತೆ ಅಧಿಕಾರವನ್ನು ತಮಗೆ ತಾವೇ ಕೊಟ್ಟುಕೊಳ್ಳುವ ನಡೆಯನ್ನು ಇಂದು ಸಾಮಾನ್ಯಗೊಳಿಸಲಾಗುತ್ತಿದೆ. ಹೇಳುವವನು/ ಕೇಳುವವನು ಎಂಬ ದ್ವಿದಾಭಾವವನ್ನು ಆಳುವವನು/ ಆಳಿಸಿಕೊಳ್ಳುವವನು ಎಂಬಂತೆ ಅರ್ಥೈಸಿಕೊಳ್ಳಲಾಗುತ್ತಿದೆ.
ಗುಲಾಮಗಿರಿಯ ಭಾವವು ನಮ್ಮ ಅಂತರಾಳವನ್ನೇ ಅಡಗುತಾಣವನ್ನಾಗಿಸಿಕೊಂಡಿದೆ. ಈ ಕಾರಣದಿಂದಲೇ ವಾದ ಮತ್ತು ಆಕ್ರಮಣಗಳು ಸಂವಾದದ ಜಾಗವನ್ನು ನಾಶ ಮಾಡುತ್ತಿವೆ. ಮೇಲ್ನೋಟಕ್ಕೆ ಚರ್ಚೆ ಎಂಬ ಹೆಸರು ಇದೆಯೇ ವಿನಾ ಆಗುತ್ತಿರುವುದು ಚರ್ಚೆಯ ಹೆಸರಿನಲ್ಲಿ ಆಕ್ರಮಣವಷ್ಟೇ. ಕೆಲವು ಟಿ.ವಿ. ಚಾನೆಲ್‌ಗಳು ಟಿಆರ್‌ಪಿಗಾಗಿ ಆರಂಭಿಸಿದ ಈ ಮಾದರಿ ಇಂದು ಸಾಮಾಜಿಕ ಮಾಧ್ಯಮಗಳಿಗೂ ಹಬ್ಬಿ, ವ್ಯಕ್ತಿಗತ ನೆಲೆಯಲ್ಲಿಯೂ ದಾಳಿ ಮಾಡುವುದೇ ವಾದದ ಲಕ್ಷಣವಾಗಿ ಹೋಗಿದೆ. ಅಷ್ಟೇ ಅಲ್ಲ, ಇದು ಇಬ್ಬರು ವ್ಯಕ್ತಿಗಳಿಂದ ಹಿಡಿದು ಸಂಸತ್ತಿನ ತನಕವೂ ಸುಳ್ಳೋ ಪಳ್ಳೋ, ಏನಾದರೂ ಸರಿ ತಮ್ಮ ಸಮರ್ಥನೆ, ಎದುರಿರುವವರ ಮೇಲಿನ ಆಕ್ರಮಣ ಎಂಬ ವಿಕ್ಷಿಪ್ತ ಮಾದರಿಯನ್ನು ಹುಟ್ಟುಹಾಕಿದೆ. ಇದರ ಫಲಿತ ಏನು? ಈ ಬಗ್ಗೆ ಚಿಂತಿಸುತ್ತಿದ್ದೇವೆಯೇ?
ಇದೆಲ್ಲ ಎಷ್ಟು ನಿಸ್ಸಾರ ಎಂಬುದು ಅರಿವಾಗುವಂತೆ ವಚನಕಾರರ ಚರ್ಚೆಗಳು ನಡೆಯುತ್ತಿದ್ದವು. ಅಲ್ಲಿ ಯಾರೂ ಸ್ವಸಮರ್ಥನೆ ಮಾಡಿಕೊಳ್ಳುತ್ತಿರಲಿಲ್ಲ. ವರ್ಗ, ಜಾತಿ, ಲಿಂಗವನ್ನು ಗಣನೆಗೆ ತೆಗೆದುಕೊಳ್ಳದೆ ಪ್ರತಿಯೊಬ್ಬರ ಮಂಡನೆಗೂ ಅವಕಾಶ ಮಾತ್ರವಲ್ಲ, ತಮಗಿಂತ ಭಿನ್ನ ನೆಲೆಯ ಆರೋಗ್ಯಕರ ಚಿಂತನೆಗೆ ಮನ್ನಣೆಯೂ ಇದ್ದುದರಿಂದ ಅದು ಹಲವು ಹೊಸ ಹೊಳಹುಗಳನ್ನು ಹುಟ್ಟಿಸಲು ಸಾಧ್ಯವಾಯಿತು. ಒಂದು ಉದಾಹರಣೆ ನೋಡೋಣ. ಸಾಮಾಜಿಕ ವಲಯದಲ್ಲಿ ಮನ್ನಣೆ ಪಡೆದ ವರ್ಗದಿಂದ ಬಂದ ಬಸವಣ್ಣ ‘ಕಾಯವೇ ಕೈಲಾಸ’ ಎನ್ನುತ್ತಾ ದೇವಾಲಯವು ದೇಹದ ಹೊರಗಿಲ್ಲ ಒಳಗಿದೆ ಎಂಬ ಮಂಡನೆ ಮಾಡುತ್ತಾನೆ. ಆದರೆ ಸಾಮಾಜಿಕ ವಲಯದಲ್ಲಿ ತಮ್ಮ ಇರುವಿಗಷ್ಟೇ ಮನ್ನಣೆ ಪಡೆಯದ ಶ್ರಮಜೀವಿ ಆಯ್ದಕ್ಕಿ ಮಾರಯ್ಯ ‘ಕಾಯಕವೇ ಕೈಲಾಸ’ ಎನ್ನುತ್ತಾ ಸರ್ವರನ್ನೂ ಒಳಗೊಳ್ಳುವ, ದುಡಿದುಣ್ಣುವುದನ್ನು ಉನ್ನತೀಕರಿಸುವ ಮಹಾನ್ ಚಿಂತನೆಯೊಂದಕ್ಕೆ ನಾಂದಿಯಾಗುತ್ತಾನೆ (ಆದರೆ ಇಂದಿಗೂ ಹಲವರು ಮಾರಯ್ಯನ ಸಾಲನ್ನು ಬಸವಣ್ಣನ ಸಾಲೆಂದು ತಪ್ಪಾಗಿ ಓದಿಕೊಂಡಿರುವುದು ಬೇರೆ ವಿಷಯ).
ಇದು ಲಿಂಗತಾರತಮ್ಯದ ವಿಷಯದಲ್ಲೂ ಯೋಚಿಸಬೇಕಾದ ನಡೆಯಾಗಿದೆ. ಮಣಿಪುರದ ದುಃಸ್ಥಿತಿಯ ಬಗೆಗೆ ಅಲ್ಲಿನ ಸಂಸದರೊಬ್ಬರು ಸಂಸತ್ತಿನಲ್ಲಿ ಭಾವುಕವಾಗಿ ಪ್ರಶ್ನೆ ಎತ್ತಿದರು. ಈ ಸಂದರ್ಭದಲ್ಲಿ ಮಾಡುವ ಚರ್ಚೆಯು ಅಂತಹ ಸಂಗತಿಗಳು ಇನ್ನೆಲ್ಲೂ ಮರುಕಳಿಸದಂತೆ ನಿಗಾ ವಹಿಸುವುದರತ್ತ ಕೇಂದ್ರೀಕರಿಸಿ
ಕೊಂಡಿರಬೇಕಿತ್ತು. ಎರಡು ಕೋಮುಗಳ ನಡುವಿನ ಸಂಘರ್ಷವು ಅಲ್ಲಿನ ಮಹಿಳೆಯರನ್ನು ಆಕ್ರಮಿಸುವಂತೆ ಯಾಕೆ ಪ್ರಚೋದಿಸುತ್ತಿದೆ ಎಂಬ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ಎಲ್ಲ ಪಕ್ಷಗಳ ಸಂಸದರೂ
ಚಿಂತಿಸಬೇಕಾಗಿತ್ತು. ಆದರೆ ಚರ್ಚಿಸಲು ಸಾಧ್ಯವಾಯಿತೇ? ಶಾಸನ ಮಾಡುವವರಿಗೆ ಇಲ್ಲದ ಗಾಂಭೀರ‍್ಯ ಅವರನ್ನು ಅನುಸರಿಸುವವರಿಗೆ ಬರುವುದು ಹೇಗೆ ಸಾಧ್ಯ? ಬದಲಿಗೆ ನಾವು ‘ಅಲ್ಲಿ ಮಾತ್ರ ಆಗಿದ್ದೇ? ಬೇರೆ ಪಕ್ಷಗಳು ಆಳುವಲ್ಲಿ ಆಗುತ್ತಿಲ್ಲವೇ?’ ಎಂಬ ಮರುದಾಳಿಗೆ ಹೊರಡುತ್ತೇವೆ.
ಅಮಾನುಷ ಘಟನೆಗಳನ್ನು ತಡೆಯುವ ದಾರಿಗಳನ್ನು ಚರ್ಚಿಸುವುದರೆಡೆಗೆ ಮಹಿಳಾ ಸಂಸದರನ್ನೂ ಸೇರಿಸಿ ಕೊಂಡು ಆಳುವವರೆಲ್ಲರಲ್ಲೂ ತೀವ್ರ ನಿರಾಸಕ್ತಿ ಕಾಣಿಸು ತ್ತದೆ. ಮಾನಸಿಕ ಪಿತೃಪ್ರಧಾನ ನಡೆಯ ಫಲವಾದ ಇಂತಹ ಚಿಂತನೆಗಳು ವ್ಯಾಪಿಸುತ್ತಿರುವ ದುರಂತವನ್ನು ಈಗಲೇ ತಡೆಯಬೇಕಿದೆ. ಹೆಂಗಸರೂ ಧ್ರುವೀಕರಣ ರಾಜಕಾರಣದ ಪಿತೂರಿಗೆ ಬಲಿಯಾಗಿ ತಮ್ಮೊಳಗೆ ಒಡಕುಗಳನ್ನು ಪೋಷಿಸಿ, ಬೆಳೆಸಿಕೊಳ್ಳುತ್ತಾ ಹಾಗೆ ಮಾಡುವವರಿಗೆ ಬುದ್ಧಿ ಹೇಳುವುದಕ್ಕೂ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ ಎಂದಾದರೆ, ಅಂತಹ ಪ್ರಕರಣಗಳು ಆದಾಗ ಬರೀ ಆಘಾತ ವ್ಯಕ್ತಪಡಿಸುವುದಕ್ಕೆ ಅವರಿಗೆ ಯಾವ ಹಕ್ಕೂ ಇರುವುದಿಲ್ಲ. ಅಂತಹ ಬಳಸು ದಾರಿಗಳನ್ನು ಬಿಟ್ಟು ಗಂಡುಮಕ್ಕಳ ಜೊತೆಗೆ ಹೆಚ್ಚೆಚ್ಚು ಸಂವಾದವನ್ನು ಮಾಡಬೇಕಾಗಿದೆ.
ಗಂಡಸರೂ ಹೆಂಗಸರೂ ಮುಕ್ತವಾಗಿ ಚರ್ಚಿಸುವ ಅವಕಾಶವಿದ್ದ ವಚನ ಪರಂಪರೆಯಲ್ಲಿ ಎಲ್ಲ ವಲಯದ ಮಹಿಳೆಯರೂ ನೇರವಾಗಿ, ನಿಷ್ಠುರವಾಗಿ ಆಡುತ್ತಿದ್ದ ಮಾತುಗಳು ಅಲ್ಲಿನ ಪುರುಷರ ಚಿಂತನೆಯನ್ನು ಬದಲಿಸಿ ದ್ದಕ್ಕೆ ದಾಖಲೆಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ‘ಗಂಡುತನ ಮತ್ತು ಹೆಣ್ಣುತನವು ಮಾನವ ಗುರುತುಗಳೇ ಅಲ್ಲ. ಅವು ಬರೀ ಸಾಂಸ್ಕೃತಿಕ ರಚನೆಗಳು’ ಎಂಬ ಕೇಟ್‌ಮಿಲೆಟ್‌ರ ಮಾತುಗಳನ್ನು ನೆನಪಿಸುವಂತಿರುವ
ಅಕ್ಕಮಹಾದೇವಿಯ ವಚನವೊಂದನ್ನು ನಾವಿನ್ನೂ ಸರಿಯಾಗಿ ಕೇಳಿಸಿಕೊಂಡೇ ಇಲ್ಲ. ‘ಗಂಡ ಮನೆಯೊಡೆಯನೆಂದು ಹೇಳಿದರೆ ಆಗ ಹೆಂಡತಿ ಸೇವಕಿ ಎನಿಸುತ್ತಾಳೆ. ಹೆಂಡತಿ ಮನೆಯೊಡತಿಯೆಂದು ಹೇಳಿದರೆ ಆಗ ಗಂಡ ಸೇವಕನಾಗುತ್ತಾನೆ. ಆಗ ಅವರ ನಡುವೆ ಗಂಡ ಹೆಂಡತಿಯ ಸಂಬಂಧ ಇರುವುದೇ ಇಲ್ಲ. ಹೀಗಾಗಿ, ಒಡೆಯರೆಂಬ ಭಾವವನ್ನು ಇಬ್ಬರೂ ತೊರೆದರೆ ಅಲ್ಲಿ ಗಂಡ ಹೆಂಡಿರ ಸ್ನೇಹ, ಪ್ರೀತಿಯ ಭಾವ ಹುಟ್ಟುತ್ತದೆ’ ಎನ್ನುವ ಆಕೆ ಇಬ್ಬರ ಇರುವಿಕೆಯ ಮೌಲ್ಯವು ಸಮಾನವಾಗಿರುವು ದರ ಜೊತೆಗೇ ಪ್ರೀತಿಯ ಉತ್ಕಟತೆಯನ್ನು ನಾಶ ಮಾಡುವುದು ಪರಸ್ಪರ ಆಳುವ ಗರ್ವ, ಆಕ್ರಮಣ ಎಂದು ಪ್ರತಿಪಾದಿಸುತ್ತಾಳೆ.
ಇಂತಹ ನಿಲುವುಗಳನ್ನು ಅಂದಿನ ಚರ್ಚೆಯು ಹುಟ್ಟು ಹಾಕಿದೆ ಎಂದಾದರೆ, ಇಂದೇಕೆ ನಾವು ಅಂತಹ ಪ್ರಯತ್ನಗಳನ್ನು ಮಾಡಬಾರದು? ಜಗತ್ತು ಆಧುನಿಕವಾದಂತೆಯೇ ಒಂದೆಡೆ ಶೋಷಣೆ ಇನ್ನೊಂದೆಡೆ ಪರಸ್ಪರ ಅಪನಂಬಿಕೆಯ ಲೋಕವೊಂದು ನಿರ್ಮಾಣ ಆಗುತ್ತಿರುವುದು ನಮ್ಮೆಲ್ಲರ ಅನುಭವಕ್ಕೆ ಬರುತ್ತಿದೆಯಲ್ಲವೇ?
ಜಗತ್ತಿನಾದ್ಯಂತ ನಡೆದ ಹಲವು ಹೋರಾಟಗಳು, ಕ್ರಾಂತಿಗಳು, ಸಾಮಾಜಿಕ ಪಲ್ಲಟಗಳು ಮಹಿಳೆಯರನ್ನೂ ಸೇರಿಸಿಕೊಂಡು ಹತ್ತು ಹಲವು ದಮನಿತ ವರ್ಗಗಳಿಗೆ ನವ ಪಲ್ಲವಗಳಾಗಿ ಒದಗಿಬಂದವು. ಅಲ್ಲೆಲ್ಲಾ ಮಾತು ಆಡುವ, ಕೇಳಿಸಿಕೊಳ್ಳುವ ಪ್ರಕ್ರಿಯೆಯೊಂದು ಚಲಾವಣೆಯಲ್ಲಿ ಇದ್ದಿದ್ದರಿಂದ ಇವೆಲ್ಲವೂ ಹಲವು ಅಡೆತಡೆಗಳ ನಡುವೆಯೂ ಮುನ್ನೆಲೆಗೆ ಬಂದವು. ಹಾಗಾದರೆ, ಇಂದು ಮಾತಿನ ಮಥನ ಮುಗಿದು ಹೋಗಿದೆಯೇ? ಇಲ್ಲ. ಮಾತು ವ್ಯಾಪಾರಕ್ಕೆ ಕುಳಿತಿದೆ.
ನವ ಶ್ರೀಮಂತಿಕೆ, ನವ ಪಾಳೆಗಾರಿಕೆ, ನವ ಮಾನಸಿಕ ಪಿತೃಪ್ರಧಾನ ನಡೆ, ನವ ಗುಲಾಮಿತನ ತಕ್ಕಡಿ ಹಿಡಿದಿವೆ. ಇಂತಹ ತಕ್ಕಡಿ ಹಿಡಿದ ಕೈಗಳ ಒಡೆಯರೇ ಅಂದು ತಳವರ್ಗದ ಮತ್ತು ಮಹಿಳಾ ವಚನಕಾರರ ಮಾತನ್ನು ಸಹಿಸದವರು. ಇಂದಿಗೂ ಹೊಂಚು ಹಾಕುತ್ತಲೇ ಇರುವ ಅದೇ ಮಾಯಾ ಪ್ರಪಂಚಿಗಳು ಪುನಃ ತಲೆ ಎತ್ತುವ ಮೊದಲು ನವ ಅನುಭವ ಮಂಟಪಗಳು ಹುಟ್ಟಿಬರಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.