ADVERTISEMENT

ರಥಸಪ್ತಮಿ: ಇದು ಸೂರ್ಯನ ಹಬ್ಬ– ತನ್ಮಯಿ ಪ್ರೇಮ್‍ಕುಮಾರ್ ಲೇಖನ

ತನ್ಮಯಿ ಪ್ರೇಮ್‍ಕುಮಾರ್
Published 7 ಫೆಬ್ರುವರಿ 2022, 21:10 IST
Last Updated 7 ಫೆಬ್ರುವರಿ 2022, 21:10 IST
sun
sun   

ಬೆಳಕಿನ ನಿಜಸ್ವರೂಪ, ಶಕ್ತಿಯ ನಿಜಸ್ವರೂಪ ಸೂರ್ಯ. ಸೂರ್ಯನಿಗೆ ಭಾರತೀಯ ಪರಂಪರೆಯಲ್ಲಿ ಅತ್ಯುತ್ಕೃಷ್ಟವಾದ ಸ್ಥಾನ ನೀಡಿ ಆರಾಧಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡುವುದು, ಸೂರ್ಯನಿಗೆ ನಮಸ್ಕಾರ ಮಾಡುವುದು ನಮ್ಮ ಪರಂಪರೆಯಲ್ಲಿ ನಡೆದುಕೊಂಡು ಬಂದಿದೆ. ಸೂರ್ಯನನ್ನು ಜ್ಞಾನಕ್ಕೆ, ಬೆಳಕಿಗೆ, ನಡೆಸುವ ದೇವರು ಎಂದು ಭಾವಿಸಲಾಗುತ್ತದೆ.

ಸೂರ್ಯ ಕಣ್ಣಿಗೆ ಕಾಣುವ ಆರಾಧ್ಯದೈವ. ಸೂರ್ಯನನ್ನು ಆರಾಧಿಸುವ ದಿನವೇ ರಥಸಪ್ತಮಿ. ಈ ದಿನವನ್ನು ಕಶ್ಯಪಮುನಿ ಹಾಗೂ ಅವರ ಪತ್ನಿ ಅದಿತಿಯ ಮಗನಾಗಿ ಸೂರ್ಯನು ಜನ್ಮ ತಾಳಿದ ದಿನವೆಂದು ಭಾವಿಸಲಾಗುತ್ತದೆ. ಶುಕ್ಲಪಕ್ಷದ ಮಾಘಮಾಸದ ಸಪ್ತಮಿಯಂದು ಆಚರಿಸುವ ಈ ಉತ್ಸವವನ್ನು ಸೂರ್ಯ ಜಯಂತಿಯೆಂದೂ ಕರೆಯುತ್ತಾರೆ. ಇದಕ್ಕೆ ಆರೋಗ್ಯಸಪ್ತಮಿ, ಅಚಲ ಸಪ್ತಮಿಯೆಂದೂ ಕರೆಯುತ್ತಾರೆ.

ಈ ದಿನ ಸೂರ್ಯದೇವನ ಏಳು ರಥಗಳನ್ನು ಏರಿ ಬಂದು ಭೂಮಿಗೆ ಬೆಳಕು ನೀಡಿದನಂತೆ. ಸೂರ್ಯನ ಏಳು ರಥಗಳು ಭೂಮಿಯ ಉತ್ತರಪಥದ ಉತ್ತರದಿಕ್ಕಿಗೆ ಚಲಿಸುತ್ತವೆ. ಇವು ಏಳು ಬಣ್ಣಗಳ ಕಾಮನ ಬಿಲ್ಲಿನ ಬಣ್ಣಗಳನ್ನು, ವಾರದ ಏಳು ದಿನಗಳನ್ನು ಸೂಚಿಸುತ್ತವೆ. ಸೂರ್ಯನ ರಥದಲ್ಲಿ 12 ಚಕ್ರಗಳಿದ್ದು ಅದು ಹನ್ನೆರಡು ರಾಶಿಗಳನ್ನು ಸೂಚಿಸುತ್ತದೆ. ಮನುಷ್ಯ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಮಾಡಿರುವ ಎಲ್ಲ ಪಾಪಕರ್ಮಗಳನ್ನು ರಥಸಪ್ತಮಿಯಂದು ಸೂರ್ಯನನ್ನು ಆರಾಧನೆ ಮಾಡುವುದರಿಂದ ಕಳೆದುಕೊಳ್ಳಬಹುದೆಂಬ ನಂಬಿಕೆಯಿದೆ.

ADVERTISEMENT

ರಥಸಪ್ತಮಿಯಂದು ಸೂರ್ಯಸ್ನಾನ ಮಾಡಲಾಗುತ್ತದೆ. ಆ ದಿನ ಅರುಣೋದಯದ ಸಮಯಕ್ಕೆ ಸೂರ್ಯನಿಗೆ ಅರ್ಘ್ಯ ನೀಡಿ, ಭಕ್ತಿಯಿಂದನಮಿಸಿ ನದಿಯಲ್ಲಿ ಸ್ನಾನಾದಿಗಳನ್ನು ಮಾಡಿದರೆ ಸರ್ವರೋಗವೂ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯೂ ಇದೆ. ‘ಓಂ ಭಾಸ್ಕರಾಯ ವಿದ್ಮಹೇ ದಿವಾಕರಾಯ ಧೀಮಹೇ ತನ್ನೋ ಸೂರ್ಯ ಪ್ರಚೋದಯಾತ್’ ಎನ್ನುವ ಸೂರ್ಯಗಾಯತ್ರೀ ಮಂತ್ರವನ್ನು ನಮ್ಮ ಧೀಃಶಕ್ತಿಯನ್ನು ಪ್ರಚೋದಿಸಲು ಕೇಳಿಕೊಳ್ಳಲಾಗುತ್ತದೆ.

ಭಾರತದ ಅನೇಕ ಕಡೆಗಳಲ್ಲಿ ಸೂರ್ಯನಿಗಾಗಿ ದೇವಸ್ಥಾನಗಳೂ ಇದೆ. ಅದರಲ್ಲೂ ವಿಶ್ವಪ್ರಸಿದ್ಧವಾದ ಒಡಿಶಾದ ಕೋನಾರ್ಕ್ ದೇವಾಲಯ, ಬಿರಂಚಿನಾರಾಯಣ ದೇವಾಲಯ, ಇನ್ನು ಅನೇಕ ನವಗ್ರಹ ದೇವಸ್ಥಾನಗಳಲ್ಲಿವೆ.

ಆಧ್ಯಾತ್ಮಿಕ ಸಾಧಕರಿಗೆ ಸೂರ್ಯನ ಶಕ್ತಿ ಅತ್ಯಂತ ಸಹಜವಾಗಿಯೇ ಪುಷ್ಟಿ ನೀಡುವಂಥದ್ದು. ಆರೋಗ್ಯದ ದೃಷ್ಟಿಯಿಂದಲೂ ಸೂರ್ಯ ನಮಗೆ ಸಹಕಾರಿಯೇ. ಇನ್ನು ಸೂರ್ಯನಮಸ್ಕಾರವು ಯೋಗಸಾಧನೆಯ ಪ್ರಮುಖವಾದ ಭಾಗ. ‘ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿ ಹಿತಂ ಮುಖಂ ತತ್ವಂ ಪೂಷನ್ ಅಪಾವೃಣು ಸತ್ಯ ಧರ್ಮಾಯ ದೃಷ್ಟಯೇ’ ಎನ್ನುವುದು ಈಶಾವಾಸ್ಯೋಪನಿಷತ್ ವಾಕ್ಯ. ‘ಪಾತ್ರೆಯನ್ನು ಮುಚ್ಚಳ ಮುಚ್ಚಿದಂತೆ ಸತ್ಯದ ಮೇಲೆ ಮುಸುಕು ಮುಚ್ಚಿದೆ, ಓ ಸೂರ್ಯದೇವ ನಿನ್ನ ಬೆಳಕಿನಿಂದ ಸತ್ಯ ಧರ್ಮಗಳನ್ನು ನಮಗೆ ದರ್ಶನ ಮಾಡಿಸು’ ಎನ್ನುತ್ತದೆ ಈ ಮಂತ್ರ. ಹೀಗೆ ಸೂರ್ಯನನ್ನು ಸತ್ಯ ಧರ್ಮಗಳ ದರ್ಶನಕ್ಕಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಒಟ್ಟಾರೆ ಸೂರ್ಯ ನಮ್ಮ ಜೀವನದ ಅಭಿನ್ನ ಅಂಗ. ಅವನನ್ನು ಹೀಗೆ ದೈವತ್ವಕ್ಕೇರಿಸಿ, ಅವನ ಶಕ್ತಿ, ಬೆಳಕು, ಜ್ಞಾನಗಳಿಗೆ ಕೃತಜ್ಞರಾಗಿ ನೆನೆದು ಕೈಮುಗಿದು ಸೃಷ್ಟಿಯೊಂದಿಗೆ, ಪ್ರಕೃತಿಯೊಂದಿಗೆ ಒಂದಾಗುವ ಈ ರಥಸಪ್ತಮಿಯ ಆಚರಣೆಯನ್ನು ಮಾಡೋಣ; ಆ ಮೂಲಕ ನಮ್ಮೊಳಗೂ ಶಕ್ತಿಯ ಸೂರ್ಯೋದಯಕ್ಕೆ ಕಾರಣವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.