ಅದೊಂದು ಕಚೇರಿ. ರಾತ್ರಿ ಎರಡು ಗಂಟೆಯ ತನಕವೂ ಕೆಲಸದ ಒತ್ತಡದಲ್ಲಿರುವ ಮೂವರು ಗಂಡಸರು, ಇಬ್ಬರು ಹೆಂಗಸರಿದ್ದಾರೆ. ಈ ನಡುವೆ ಒಬ್ಬಾಕೆಗೆ ಪೀರಿಯಡ್ಸ್ ಕಾಣಿಸಿಕೊಂಡು, ಅವಳು ಅದನ್ನು ಜೋರಾಗಿ ಹೇಳಿದಾಗ ಇನ್ನೊಬ್ಬಳು ಮುಜುಗರಕ್ಕೆ ಒಳಗಾಗುತ್ತಾಳೆ. ಒಬ್ಬ ತಮಾಷೆಯಾಗಿ ನಗುತ್ತಾನೆ. ಅವಳು ಪ್ರತಿಭಟಿಸಿ ವಾಷ್‌ರೂಮಿಗೆ ಹೋಗುತ್ತಾಳೆ. ವಾಪಸ್ ಬಂದಾಗ, ತಮಾಷೆ ಮಾಡಿದವನೇ ಸಮಾಧಾನ ಮಾಡುತ್ತಾನೆ. ಇನ್ನೊಬ್ಬ ‘ಪೇನ್‍ಕಿಲ್ಲರ್ ತಂದುಕೊಡಲೇ’ ಎನ್ನುತ್ತಾನೆ. ಮತ್ತೊಬ್ಬ ‘ಚಿಕ್ಕವನಿದ್ದಾಗಿನಿಂದಲೂ ಅಮ್ಮನಿಗೆ ಸ್ಯಾನಿಟರಿ ಪ್ಯಾಡ್ ನಾನೇ ತಂದುಕೊಡುತ್ತಿದ್ದುದು’ ಎಂದಾಗ, ಎಲ್ಲರೂ ನಿರುಮ್ಮಳವಾಗಿ ನಗುತ್ತಾ ತಮ್ಮ ತಮ್ಮ ಕೆಲಸ ಮುಂದುವರಿಸುತ್ತಾರೆ. ಇದು ‘ವೆಲ್‍ಕಮ್ ರೆಡ್ ಮೈ ಪೀರಿಯಡ್ಸ್’ ಎಂಬ ಹಿಂದಿ ಕಿರುಚಿತ್ರದಲ್ಲಿನ ದೃಶ್ಯ. ಇಂತಹ ಸೇಫ್ ಆದ ವಾತಾವರಣ ನಮ್ಮೆಲ್ಲರ ಕನಸು.
ಆದರೆ ಈಚೆಗೆ ಕೇಳಿಸಿಕೊಂಡ ಎರಡು ಆಡಿಯೊಗಳು ನಮ್ಮ ಒಟ್ಟು ಸಾಂಸ್ಕೃತಿಕ ವಾತಾವರಣವನ್ನು ಮತ್ತು ಭಾರತೀಯರು ‘ಸ್ತ್ರೀಯರನ್ನು ಗೌರವಿಸುತ್ತಾರೆ’ ಎಂಬ ಮಾತನ್ನು ಹೇಗೆ ವ್ಯಾಖ್ಯಾನಿಸಿಕೊಳ್ಳಬೇಕು ಎಂಬ ಬಗ್ಗೆ ಯೋಚಿಸುವಂತೆ ಮಾಡಿವೆ. ಇಲ್ಲಿ ಎರಡು ಮುಖ್ಯ ಅಂಶಗಳನ್ನು ನಾವು ಗಮನಿಸಬೇಕಾಗಿದೆ. ಒಂದು, ಗಂಡು ಯಾವುದೇ ಹೆಣ್ಣನ್ನು ತನ್ನ ಸಾಕುಪ್ರಾಣಿಗಿಂತಲೂ ಕಡೆ ಎಂದು ಭಾವಿಸುವುದು. ಎರಡನೆಯದು, ಗಂಡಿನ ಈ ವರ್ತನೆಯನ್ನು ಒಪ್ಪಿಕೊಂಡಿರುವ ಹೆಣ್ಣು, ಖಂಡತುಂಡವಾಗಿ ಪ್ರತಿಭಟಿಸದೆ ಅವನನ್ನು ಹೇಗಾದರೂ ಮೆಚ್ಚಿಸುವ ಕೆಳಹಂತಕ್ಕೆ ಜಾರಿರುವುದು. ಈ ಎರಡು ಕಾರಣಗಳಿಂದಲೇ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಹೋಗುತ್ತದೆ ಎಂಬುದು ಗಂಡಸರಿಗೂ ಹೆಂಗಸರಿಗೂ ತಿಳಿಯದೇ ಹೋಗುವುದು ಮಾತ್ರ ವಿಚಿತ್ರವಾಗಿದೆ.
ಈ ಆಡಿಯೊಗಳಲ್ಲಿ ಗಂಡು ಹೆಣ್ಣಿಗೆ ಬಳಸಿರುವ ಭಾಷೆ ಆಘಾತಕರವಾಗಿದೆ. ಇದು ಮನಃಸ್ಥಿತಿಗಳ ವ್ಯಕ್ತ ರೂಪ. ಇದಕ್ಕೂ, ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯ ಎಂಬಂತೆ ಬರುತ್ತಿರುವ ಅತ್ಯಾಚಾರದ ಸುದ್ದಿಗಳಿಗೂ ನನಗಂತೂ ನೇರ ಸಂಬಂಧ ಕಾಣಿಸುತ್ತಿದೆ. ‘ನಾಯಕರು’ ಎಂದು ಕರೆಸಿಕೊಳ್ಳುವವರು ಹೆಣ್ಣನ್ನು ಗುರಿಯಾಗಿಸಿರುವ ರೀತಿ ಭಯಾನಕವಾಗಿದೆ.
ಒಬ್ಬ ತನ್ನ ಹೆಂಡತಿಗೇ ಬೇರೆಯವರಿಂದ ರೇಪ್ (ಅದೇ ಅರ್ಥದ ಅಸಹ್ಯ ಪದ ಬಳಕೆಯಾಗಿದೆ) ಮಾಡಿಸ್ತೀನಿ ಅನ್ನುತ್ತಾನೆ. ಇನ್ನೊಬ್ಬ ‘ನಾನೇ ರೇಪ್ ಮಾಡ್ತಿದ್ದೆನಲ್ಲ,ನನ್ನ ಬಳಿ ನಿನ್ನ ಹೆಂಡತಿಯನ್ನು ಬಿಡಬೇಕಿತ್ತು’ ಅನ್ನುತ್ತಾನೆ. ಹೆಂಡತಿಯನ್ನ, ಅವಳ ತಾಯಿಯನ್ನ, ಅವಳ ಅಕ್ಕನನ್ನ ಒಬ್ಬರನ್ನೂ ಬಿಡದೆ, ಬಾಯಿ ಬಿಟ್ಟರೆ ಎಲ್ಲರಿಗೂ ಇದಲ್ಲದೆ ಬೇರೆ ಪದ ಇಲ್ಲ. ತಾನು ಮದುವೆ ಆದವಳಿಗೇ ‘ನಿನ್ನ ಮಗ ನನಗೆ ಹುಟ್ಟಿದ್ದಾ, ನಿನ್ನ ಕ್ಲಾಸ್‍ಮೇಟ್‍ಗಳಿಗೆ ಹುಟ್ಟಿದ್ದಾ?’ ಎಂದ ಮಾತು ಕೇಳಿ ನಾನು ತತ್ತರಿಸಿಹೋದೆ. ಇದರಷ್ಟೇ ಆಘಾತಕಾರಿಯಾದುದೆಂದರೆ, ಈ ಬಗ್ಗೆಪ್ರತಿಕ್ರಿಯಿಸುವವರು ಅವುಗಳಲ್ಲಿ ಬಳಕೆಯಾದ ಜಾತಿ ನಿಂದನೆಯನ್ನು ತೆಗೆದುಕೊಂಡಷ್ಟು ಗಂಭೀರವಾಗಿ ಹೆಣ್ಣಿನ ನಿಂದನೆಯನ್ನು ತೆಗೆದುಕೊಳ್ಳದೇ ಇರುವುದು. ಹೆಣ್ಣಿಗಿಂತಲೂ ಜಾತಿಯೇ ಜೀವಂತವಾಗಿರುವ ದುರಂತವಿದು.
ಇದನ್ನೆಲ್ಲಾ ಕೇಳಿಸಿಕೊಂಡೂ ಅವರ ಕುಟುಂಬಗಳ ಹೆಂಗಸರು ಪ್ರತಿಭಟಿಸುವುದಿಲ್ಲವೇ? ಶಿಕ್ಷಿಸುವುದಿಲ್ಲವೇ? ಅಥವಾ ಇದನ್ನು ಸಹಜವಾಗಿಸಿಕೊಂಡಿದ್ದಾರೆಯೇ? ಅವರ ಕುಟುಂಬದವರಿಗೆ ಇದು ನಾಚಿಕೆಯ ಸಂಗತಿಯಾಗದೆ ಹೆಮ್ಮೆ ಅಥವಾ ಪೌರುಷದ ಸಂಗತಿಯಾಗಿದೆಯೇ? ಹಾಗೇನಾದರೂ ಆಗಿದೆ ಎಂದರೆ, ರೋಗ ತೀರಾ ಉಲ್ಬಣಿಸಿದೆ ಎಂದೇ ಅರ್ಥ. ಸಾಮಾಜಿಕ ಮಾಧ್ಯಮಗಳ ದಾಸರಾಗಿ ಜನ ಪರಿವರ್ತನೆಯಾಗಿರುವ ಈ ಕಾಲದಲ್ಲಿ, ಚಿಕ್ಕ ಮಕ್ಕಳಿಂದ ಹಿಡಿದು ಬೆಳೆಯುವ ಹರೆಯದವರ ತನಕ ಇದು ದಾಟಿಸುವ ಸಂದೇಶ ಏನು?
ಇವುಗಳೊಂದಿಗೆ, ಒಂದು ಕೊಲೆ ಮತ್ತು ಅತ್ಯಾಚಾರ ಮಾಡಿ ವಿಡಿಯೊ ಮಾಡಿರುವ ಪ್ರಕರಣಗಳ ವರದಿಯನ್ನೂ ಗಮನಿಸಬಹುದು. ವಿಡಿಯೊ ಮಾಡುವವನು ಆಕೆ ನಗುತ್ತಿರಬೇಕು ಎಂದು ಆದೇಶಿಸುತ್ತಾನಂತೆ. ಅಕಸ್ಮಾತ್ ಅದನ್ನು ನೋಡಿದವರು ಅವಳನ್ನೇ ದೂಷಿಸುವಂತಿದೆ ಈ ಯೋಜನೆ! ಇನ್ನು ಕೊಲೆಯಾದ ವ್ಯಕ್ತಿ ತನ್ನ ಪ್ರೇಯಸಿಗೆ ಅಸಭ್ಯ ಸಂದೇಶಗಳನ್ನು ಕಳಿಸಿದ್ದಾನೆ ಎಂಬುದು ಆರೋಪ. ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡುವಾಗ ಪ್ರೇಯಸಿಯ ‘ನಾಯಕ’ನೂ ಬಳಸಿರುವುದು ಅಂತಹದೇ ಮಾತುಗಳನ್ನು. ಅಂದರೆ ಒಬ್ಬ ಕೋಟ್ಯಧೀಶ, ಜನಪ್ರಿಯ ನಟನೂ, ಇನ್ನೊಬ್ಬ ತೀರಾ ಸಾಮಾನ್ಯ ಆರ್ಥಿಕ ಸ್ಥಿತಿ, ಬಡಕಲು ಶರೀರ ಇರುವ ವ್ಯಕ್ತಿಯೂ ಹೆಂಗಸಿನ ಬಗೆಗೆ ಹೊಂದಿರುವ ಅಭಿಪ್ರಾಯ ಒಂದೇ ರೀತಿಯದು. ಅವಳು ‘ಭೋಗಿಸಲು’ ಇರುವ ಖಾಸಗಿ ಸೊತ್ತು. ಆ ಸೊತ್ತಿಗಾಗಿ ಬಡಿದಾಡಿದ ಈ ಗಂಡಸರು ಪರಸ್ಪರ ಬೈದಾಡುವಾಗ (ಗಂಡಸಿಗೆ ಗಂಡಸೇ ಶತ್ರು!?) ಬಳಸುವುದೆಲ್ಲಾ ಹೆಣ್ಣಿನ ಮರ್ಯಾದೆ ಕಳೆಯುವ ಉವಾಚಗಳನ್ನೇ.
ಮದುವೆಯಾದ ಇಬ್ಬರು ‘ಗೃಹಸ್ಥ’ರು ತಮ್ಮ ಹದ್ದು ಮೀರುವುದನ್ನು ಅತ್ಯಂತ ಸಾಮಾನ್ಯ ಸಂಗತಿ ಎಂದು ಸ್ವೀಕರಿಸುವ ಸಮಾಜದಲ್ಲಿ ನಾವಿದ್ದೇವೆ ಮತ್ತು ಅವರವರ ಹೆಂಡತಿಯರು ತಮ್ಮ ತಮ್ಮ ಗಂಡಂದಿರಿಗಾಗಿ ಒದ್ದಾಡುವುದನ್ನು ‘ಹೆಣ್ಣು ಇರಬೇಕಾದ್ದೇ ಹೀಗೆ’ ಎಂದು ಕಣ್ಣೊತ್ತಿಕೊಳ್ಳುವ ಮೂಢತನವೂ ನಮಗಿದೆ. ಹೌದು, ಈ ಮೂಢತನವೇ ಗಂಡಸಿನ ಮತ್ತು ಹೆಂಗಸಿನ ಬದುಕನ್ನು ಹಾಳುಗೆಡವಿರುವುದು. ಕಿವಿಗೆ ಕಠೋರವೆನಿಸಿದರೂ ಯೋಚಿಸಲೇಬೇಕಾದ ಸಂದರ್ಭ ಇದು. ಇಲ್ಲದಿದ್ದಲ್ಲಿ ಈ ಅತ್ಯಾಚಾರಗಳಿಂದ ಹೆಣ್ಣುಮಕ್ಕಳನ್ನೂ ಕ್ರಿಮಿನಲ್‌ಗಳಾಗುವುದರಿಂದ ಗಂಡುಮಕ್ಕಳನ್ನೂ ಬಚಾವು ಮಾಡುವುದು ಸಾಧ್ಯವೇ ಇಲ್ಲ.
‘ಕಳ್ಳನ ತಾಯಿ’ ಎನ್ನುವ ಪ್ರಸಿದ್ಧ ಕತೆ ಎಲ್ಲರಿಗೂ ಗೊತ್ತಿದೆ. ತಪ್ಪಿ ನಡೆದವರು ತಮ್ಮವರು, ತಮ್ಮ ಜಾತಿಯವರು, ಧರ್ಮದವರು, ದೇಶದವರು ಅಂತೆಲ್ಲ ರಿಯಾಯಿತಿ ಕೊಡಬೇಕೆ ಅಥವಾ ತಪ್ಪಿಗೆ ತಕ್ಕ ಶಿಕ್ಷೆ ಇದೆ ಎಂಬ ಕಠಿಣ ಸಂದೇಶ ಕೊಡಬೇಕೆ? ನಾಳೆ ಇಂತಹವರಿಂದ ಮಕ್ಕಳು ಯಾವುದನ್ನು ಮೌಲ್ಯ ಎಂದು ಸ್ವೀಕರಿಸಬೇಕು? ‘ಬಾಲ್ಯದಲ್ಲಿ ತನ್ನ ತಾಯಿಯ ಮೇಲೆ ಮತ್ತು ತನ್ನ ಮೇಲೆ ಅಪ್ಪನೆನಿಸಿಕೊಂಡವನು ಮಾಡುವ ದೌರ್ಜನ್ಯವನ್ನು ಸಹಿಸಿಕೊಳ್ಳುವ ಮತ್ತು ಆಕ್ಷೇಪಿಸದೆ ಅವನ ಪರವಾಗಿರುವ ತಾಯಿಯನ್ನು ಗಂಡುಮಕ್ಕಳು ಇಷ್ಟಪಡುವುದಿಲ್ಲ. ಬದಲಿಗೆ, ಹೆಂಗಸೆಂದರೆ ದುರ್ಬಲಳು ಎಂಬ ಸಂದೇಶ ರವಾನಿಸಿಕೊಳ್ಳುತ್ತಾರೆ. ಮಾತ್ರವಲ್ಲ, ಮುಂದೆ ತಮ್ಮ ಹೆಂಡತಿಯರ ಮೇಲೂ ಅದೇ ರೀತಿಯ ದೌರ್ಜನ್ಯ ಎಸಗುತ್ತಾರೆ’ ಎನ್ನುವ ಲೇಖಕ ಟೆರೆನ್ಸ್ ರಿಯಲ್ ಇದನ್ನು ‘ಪಿತೃಪ್ರಾಧಾನ್ಯದ ನೃತ್ಯ ಸಂಯೋಜನೆ’ ಎಂದು ಕರೆಯುತ್ತಾನೆ. ಇದರ ಪರಿಣಾಮವೆಂದರೆ, ‘ತಮ್ಮ ಭಾಗೀದಾರಳ ಮೇಲೆ ದೌರ್ಜನ್ಯಗಳನ್ನು ನಡೆಸಿದರೆ ತೊಂದರೆ ಏನೂ ಆಗದು. ಈ ಭಾಗೀದಾರಳು ಕೂಡ ಭಾವನಾತ್ಮಕವಾಗಿ ಹತ್ತಿರ ಬರಲು, ಈ ಸಂಬಂಧವನ್ನು ಉಳಿಸಿಕೊಳ್ಳಲು ಇನ್ನಷ್ಟು ಹೆಚ್ಚಿನ ಪ್ರಯತ್ನ ಮಾಡಿಯೇ ಮಾಡುತ್ತಾಳೆ, ಮತ್ತಷ್ಟು ಹೆಚ್ಚಿನ ಪ್ರೀತಿಯನ್ನೂ ತೋರಿಸುತ್ತಾಳೆ. ಆಗ ಕ್ರಮೇಣವಾಗಿ ತಮ್ಮ ಹಳೆಯ ಗಾಯಗಳು ಮಾಯುತ್ತವೆ ಎಂದೇ ನಂಬಿಕೊಳ್ಳುತ್ತಾರೆ’ ಎನ್ನುತ್ತಾಳೆ ಬೆಲ್ ಹುಕ್ಸ್ (ಬಾರಯ್ಯ ಮಮಬಂಧು. ಅನು: ಎಚ್.ಎಸ್.ಶ್ರೀಮತಿ, ಪುಟ: 122).
ಒಂದೆಡೆ, ಹೆಣ್ಣಿಗೆ ದುರ್ಬಲಳು ಎಂಬ ಸಂದೇಶ ರವಾನಿಸುವುದು, ಇನ್ನೊಂದೆಡೆ, ಅವಳಿಗೆ ಕರಾಟೆ ಕಲಿಸಿ ಪ್ರಬಲಳಾಗಿಸಬೇಕು ಎಂದು ಅಲವತ್ತುಕೊಳ್ಳುವುದು ನಮ್ಮಲ್ಲಿರುವ ವೈಚಾರಿಕತೆಯ ಕೊರತೆಯನ್ನು ಹೇಳುತ್ತದೆ. ಕೇ ಹೆಗಾನ್ ಎಂಬಾಕೆಯ ಆತ್ಮಚರಿತ್ರೆಯಲ್ಲಿ ಒಂದು ಸಂಗತಿ ಬರುತ್ತದೆ. ತಾನು ಪ್ರೀತಿಸುವವನು ಕ್ರಮೇಣ ಅವಳನ್ನು ನಿಂದಿಸತೊಡಗುತ್ತಾನೆ. ಆಗ ಆಕೆ ಅವನ ಗೆಳೆಯನ ಹತ್ತಿರ, ‘ನಾನು ಅವನನ್ನು ಪ್ರೀತಿಸುವುದು ನಿಜವೇ ಆದರೆ ಅಷ್ಟಿಷ್ಟು ನಿಂದನೆಗಳನ್ನು ಸಹಿಸಿಕೊಳ್ಳ ಬೇಕಲ್ಲವೇ?’ ಎಂದು ಕೇಳುತ್ತಾಳೆ. ಆಗ ಅವನು ‘ನಿನಗೆ ಪ್ರೀತಿಯು ಬೇಕಿದೆ ಎಂಬ ಕಾರಣಕ್ಕೆ ಅವನ ಬೈಗುಳ, ನಿಂದನೆಗಳನ್ನು ಸಹಿಸಿಕೊಳ್ಳಬೇಕು ಎಂದೇನೂ ಇಲ್ಲ. ಸಣ್ಣ ಪ್ರಮಾಣದ ನಿಂದನೆಯನ್ನು ಕೂಡ ನೀನು ಸಹಿಸಿಕೊಳ್ಳ
ಬಾರದು’ ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಇದು, ಪ್ರೀತಿಯೆಂದರೆ ಮೊದಲು ತನ್ನನ್ನು ಗೌರವಿಸಿಕೊಳ್ಳುವುದು ಎಂಬ ಪಾಠ ಕಲಿಸಿತು ಎನ್ನುತ್ತಾಳವಳು. ಇಂತಹ ನಿಲುವು ಪ್ರತಿ ಮನೆಯಲ್ಲೂ ಬಾಲ್ಯದಿಂದಲೇ ರವಾನೆಯಾದರೆ ಮಾತ್ರ ವಿಪರೀತಕ್ಕೆ ಹೋಗಿರುವ ಇಂದಿನ ಹೊಲಸು ಮಾತು, ವರ್ತನೆ, ಮನಃಸ್ಥಿತಿಗಳು ಬದಲಾಗುವುದು, ಅತ್ಯಾಚಾರಗಳು ನಿಲ್ಲುವುದು ಮತ್ತು ಆರಂಭದಲ್ಲಿ ನಾನು ಉಲ್ಲೇಖಿಸಿದ ಕಿರುಚಿತ್ರದಂತೆ ಗಂಡಸರೂ ಹೆಂಗಸರೂ ಸೇಫ್ ಅನ್ನುವ ಭಾವನೆಯಿಂದ ನಿರುಮ್ಮಳವಾಗಲು ಸಾಧ್ಯವಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.