ರಾಜ್ಯದಲ್ಲಿ ಇತ್ತೀಚೆಗೆ ನಡೆದ ಆತ್ಮಹತ್ಯೆಯೊಂದು ಅನೇಕರ ಗಮನ ಸೆಳೆದಿದೆ. ಪ್ರತಿಯೊಂದು ಆತ್ಮಹತ್ಯೆಯೂ ಗಮನಾರ್ಹವೇ ಆದರೂ, ಅವರವರ ಹಿನ್ನೆಲೆಗೆ ತಕ್ಕಂತೆ ಕೆಲವು ಪ್ರಕರಣಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಬಾರಿ ಆತ್ಮಹತ್ಯೆಯು 9 ತಿಂಗಳ ಮಗುವಿರುವ ತಾಯಿಯೊಬ್ಬಳದ್ದು ಎಂಬ ಕಾರಣಕ್ಕೆ ಅದು ಮತ್ತಷ್ಟು ಹೆಚ್ಚಾಗಿ ಜನರ ಗಮನ ಸೆಳೆದಿದೆ. ಆತ್ಮಹತ್ಯೆ ಸಮಸ್ಯೆಯ ಬಗೆಗೆ ನಿರಂತರವಾಗಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಲೇ ಇರುವ ಮನೋವೈದ್ಯಕೀಯ ಜಗತ್ತಿಗೆ ಸವಾಲೆಸೆಯುವ ರೀತಿಯಲ್ಲಿ ಈ ಆತ್ಮಹತ್ಯೆಯಲ್ಲಿ ಹಲವು ಸಂಕೀರ್ಣ ವಿಷಯಗಳಿವೆ.
ಮಾಧ್ಯಮಗಳು- ಅದರಲ್ಲಿಯೂ ಟಿ.ವಿ. ವಾಹಿನಿಗಳು ಚರ್ಚೆ ನಡೆಸುವ, ಖಾಸಗಿತನವನ್ನು ಗೌರವಿಸದೆ, ಕಳೆದುಕೊಂಡವರ ನೋವನ್ನು ಲೆಕ್ಕಿಸದೆ ಪ್ರಶ್ನೆ ಕೇಳುವ ರೀತಿ ನೋಡಿದರೆ, ಮಾಧ್ಯಮಮಿತ್ರರಿಗೇ ಮಾನಸಿಕ ಕಾಯಿಲೆಗಳ ಬಗೆಗಿನ ಪ್ರಾಥಮಿಕ ಪಾಠವನ್ನು ಕಲಿಸ ಬೇಕಾದ ಅವಶ್ಯಕತೆ ಇದೆ ಎಂಬುದು ಸ್ಪಷ್ಟವಾಗುತ್ತದೆ.
‘9 ತಿಂಗಳ ಮಗುವನ್ನು ಬಿಟ್ಟು ಪ್ರಾಣ ಕಳೆದುಕೊಳ್ಳಲು ಮನಸ್ಸಾದರೂ ಹೇಗೆ ಬಂತು?’, ‘ಗಂಡು ಮಗುವಾದರೂ ಪ್ರಾಣ ತೆಗೆದುಕೊಳ್ಳುವ ಅವಶ್ಯಕತೆಯೇನಿತ್ತು?’ ಎಂಬಂಥ ಪ್ರಶ್ನೆಗಳು ಮನೋವೈದ್ಯೆಯಾದ ನನಗೆ, ಮೃತ ಮಹಿಳೆಯ ಮೇಲೂ ತೋರಬಹುದಾದ ಕ್ರೌರ್ಯ ಎಂದೇ ಅನಿಸುತ್ತವೆ.
ಶೇಕಡ 22ರಷ್ಟು ಭಾರತೀಯ ತಾಯಂದಿರು ಮಗುವಿನ ಜನನಾನಂತರದ ಖಿನ್ನತೆಗೆ ಗುರಿಯಾಗುತ್ತಾರೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶ. ಯಾವುದೇ ಆರೋಗ್ಯದ ಸಮಸ್ಯೆಯಂತೆ ಗರ್ಭಿಣಿಯರಲ್ಲಿ, ಮಗುವಿನ ಹುಟ್ಟಿನ ಆನಂತರದ ಹಂತದಲ್ಲಿ ಉಂಟಾಗುವ ಖಿನ್ನತೆ, ಇನ್ನಿತರ ಮಾನಸಿಕ ಸಮಸ್ಯೆಗಳಿಗೆ ಜೈವಿಕ ಅಂಶ ಗಳೊಂದಿಗೆ ಪರಿಸರದ ಅಂಶಗಳೂ ಕಾರಣಗಳಾಗಿ ಒಟ್ಟುಗೂಡುತ್ತವೆ. ಅಂದರೆ ಹೊಸ ತಾಯಿಯಲ್ಲಿ ಉಂಟಾ ಗುವ ಖಿನ್ನತೆಗೆ ಹಲವು ಸಾಮಾಜಿಕ- ಕೌಟುಂಬಿಕ ಕಾರಣಗಳು (ಆರ್ಥಿಕ ಸಂಕಷ್ಟ, ಕೌಟುಂಬಿಕ ಹಿಂಸೆ, ಮೊದಲೇ ಇರುವ ಮಾನಸಿಕ ಕಾಯಿಲೆ, ಇತ್ತೀಚಿನ ಒತ್ತಡ, ದಾಂಪತ್ಯ ಕಲಹ, ಮಗುವಿನಲ್ಲಿ ಅನಾರೋಗ್ಯ...) ಇರಬಹುದಾದರೂ ಅವುಗಳ ಜೊತೆಗೆ ಮತ್ತು ಅಂತಿಮವಾಗಿ ಜೈವಿಕವಾಗಿ ಮಿದುಳಿನಲ್ಲಿ ನಡೆಯುವ ರಾಸಾಯನಿಕಗಳ ಏರುಪೇರು ಖಿನ್ನತೆಯನ್ನೂ ಅದರ ಪರಿಣಾಮವಾದ ಆತ್ಮಹತ್ಯೆಯ ಅಪಾಯವನ್ನೂ ತರುತ್ತದೆ. ಭಾರತವು ಮಾತೃಮರಣದ ಪ್ರಮಾಣದಲ್ಲಿ ಗಣನೀಯ ಸುಧಾರಣೆ ತೋರಿಸಿದ್ದರೂ ಈ ಸುಧಾರಣೆಯು ಮಾತೆಯರಲ್ಲಿನ ಖಿನ್ನತೆವರೆಗೆ ವಿಸ್ತರಿಸಿಲ್ಲ ಎನ್ನುವುದು ವಿಷಾದನೀಯ.
ಇದಕ್ಕೆ ಕಾರಣಗಳೂ ಉಂಟು. ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲಿ ‘ತಾಯ್ತನ’ವನ್ನು ಸಂತಸದ ಸಮಯ ವಾಗಿಯೇ ಗ್ರಹಿಸಲಾಗುತ್ತದೆ. ಅಷ್ಟೇ ಅಲ್ಲ ಒಂದೊಮ್ಮೆ ತಾಯಿ ಯಾವುದೇ ಔಷಧಿ ತೆಗೆದುಕೊಳ್ಳಬೇಕೆಂದರೆ, ನಾವು ಮೊದಲು ವೈದ್ಯರನ್ನು ಕೇಳುವ ಪ್ರಶ್ನೆ ‘ಇದರಿಂದ ಮಗೂಗೆ ಏನೂ ತೊಂದರೆಯಿಲ್ವಾ ಡಾಕ್ಟ್ರೇ?’ ಅಥವಾ ಇನ್ನೂ ತಾಯಿಯಾಗಲು ದೂರವಿರುವ ಹದಿಹರೆಯದ ಬಾಲಕಿಗೆ ‘ಫಿಟ್ಸ್’ ಸಮಸ್ಯೆಗೆ ಮಾತ್ರೆ ಕೊಡಬೇಕೆಂದರೂ ಅಪ್ಪ-ಅಮ್ಮ ಕೇಳುವ ಮೊತ್ತಮೊದಲ ಪ್ರಶ್ನೆಯೆಂದರೆ, ‘ಡಾಕ್ಟ್ರೇ, ಮುಂದೆ ಮಕ್ಕಳಾಗಲು ಇದರಿಂದ ತೊಂದರೆ ಯಾದರೆ?’ ಎಂಬುದು.
ಅಂದರೆ, ‘ತಾಯಿಯಾಗುವುದು ಸಂಭ್ರಮ’, ‘ಮಗು ಮಹತ್ವದ್ದು’ ಎಂಬುವು ನಮ್ಮಲ್ಲಿ ಬೇರೂರಿರುವ ಭಾವನೆಗಳು. ಇದು ಸರಿಯೇ. ಅದರಲ್ಲಿ ಸಮಸ್ಯೆಯೂ ಇಲ್ಲ. ಆದರೆ ಆರೋಗ್ಯವಂತ ತಾಯಿ ಮಾತ್ರ
ಆರೋಗ್ಯವಂತ ಮಗುವಿನ ಬೆಳವಣಿಗೆಗೆ ಕಾರಣಳಾಗ ಬಲ್ಲಳು! ಹಾಗಾಗಿ, ಮುಂದೆ ಹುಟ್ಟಬಹುದಾದ ಅಥವಾ ಈಗಾಗಲೇ ಹುಟ್ಟಿರಬಹುದಾದ ಮಗುವಿನಷ್ಟೇ ಅಥವಾ ಆ ಮಗುವಿಗಿಂತ ಮೊದಲು ತಾಯಿಯ ದೈಹಿಕ- ಮಾನಸಿಕ ಆರೋಗ್ಯ ನಮ್ಮ ಆದ್ಯತೆಯಾಗಬೇಕು ಎಂಬುದು ನಿರ್ವಿವಾದ. ಹಾಗೆಯೇ ಪ್ರತೀ ವ್ಯಕ್ತಿಗೆ ನೆಮ್ಮದಿಯ ಜೀವನ ನಡೆಸುವ ಹಕ್ಕು ಹೇಗೆ ಸಿಗಬೇಕೋ ಅದು ತಾಯಿಯಾಗಿರುವ ಮಹಿಳೆಯ ವಿಷಯದಲ್ಲಿಯೂ ಸಿಗಲೇಬೇಕು.
ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ದೈಹಿಕ ಆರೋಗ್ಯದ ಒಂದು ಭಾಗವಾಗಿಯೇ ಪರಿಗಣಿಸ ಬೇಕಾದದ್ದೂ ಅತ್ಯವಶ್ಯ. ಗರ್ಭಿಣಿಯರಿಗೆ ಪ್ರಸವಪೂರ್ವ ಆರೈಕೆಯ (antenatal care) ಲಭ್ಯತೆಯನ್ನು ಸರ್ಕಾರ ಮತ್ತೆ ಮತ್ತೆ ಒತ್ತಿ ಹೇಳುತ್ತದೆ. ಅಲ್ಲದೆ ಅದರ ಬಗೆಗೆ ಜಾಹೀರಾತುಗಳಿವೆ, ಗರ್ಭಿಣಿ ಕಾರ್ಡುಗಳನ್ನು ನೀಡಲಾಗುತ್ತದೆ. ಆದರೆ ಅವರ ಮಾನಸಿಕ ಸ್ಥಿತಿಯ ಬಗೆಗೆ ಆಡಳಿತ ವ್ಯವಸ್ಥೆ ಏನು ಕ್ರಮ ಕೈಗೊಂಡಿದೆ? ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಇರಬಹುದಾದ ಮನೋವೈದ್ಯರ ಬಳಿ ಈ ಮಹಿಳೆಯರು ಹೋಗುವುದಾದರೂ ಹೇಗೆ? ತಮಗೆ ಹಾಗೆ ಮನೋವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆ ಬೇಕೆ, ಬೇಡವೆ ಎಂಬ ಬಗ್ಗೆ ಸ್ವತಃ ತೀರ್ಮಾನಿಸುವಷ್ಟು ಜ್ಞಾನವಾಗಲಿ, ಸ್ವಾತಂತ್ರ್ಯ- ಸೌಲಭ್ಯ ಗಳಾಗಲಿ ನಮ್ಮಲ್ಲಿ ಎಷ್ಟು ಜನ ಮಹಿಳೆಯರಿಗೆ ಸಾಧ್ಯವಿದೆ? ಪರಿಹಾರಗಳಿಗಾಗಿ ನಾವು ಕಣ್ತೆರೆದು ವಿಜ್ಞಾನದ ಜಗತ್ತನ್ನೇ ನೋಡಬೇಕಾದ ಸಂದರ್ಭ ಇದು.
ನೋವಿಗೆ ವಿವಿಧ ರೂಪಗಳುಂಟು. ಯಾವ ನೋವಾದರೂ ಅದು ಮಾನಸಿಕವಾದದ್ದಾಗಿರಲಿ ಅಥವಾ ದೈಹಿಕವಾದದ್ದು ಆಗಿರಲಿ ಅದನ್ನು ಇನ್ನೊಬ್ಬರಿಂದಾಗಲಿ ಅಥವಾ ಯಂತ್ರದಿಂದಾಗಲಿ ಅಳೆಯುವುದು ಸಾಧ್ಯವಿಲ್ಲ. ಹಾಗಾಗಿಯೇ ಮನೋವೈದ್ಯಕೀಯ ತರಬೇತಿಯಲ್ಲಿ, ರೋಗಿ ಬಂದು ‘ನನಗೆ ಸಾಯಬೇಕೆನಿಸುತ್ತಿದೆ’ ಎಂದಾ ಕ್ಷಣ ಸಹಜವಾಗಿ ಯಾರೂ ಕೇಳಬಹುದಾದ ‘ಏಕೆ?’ ಎಂಬ ಪ್ರಶ್ನೆಯನ್ನು ಕಡ್ಡಾಯವಾಗಿ ಕೇಳಬಾರದೆಂದು ಕಲಿಸಿಕೊಡುತ್ತಾರೆ. ಅದೇ ರೀತಿಯಲ್ಲಿ ತಾಯಿಯೊಬ್ಬಳು ಬಂದು ‘ಬೇಸರವೆನಿಸುತ್ತದೆ, ಸಾಯುವ ಬಗ್ಗೆ ಆಲೋಚನೆಗಳು ಬರುತ್ತಿವೆ’ ಎಂದರೆ, ಮಗುವಿನ ಲಿಂಗ- ಕೌಟುಂಬಿಕ ಪರಿಸ್ಥಿತಿ- ಒತ್ತಡಗಳು- ವಿದ್ಯೆ- ವೃತ್ತಿ ಎಲ್ಲವನ್ನೂ ಬದಿಗಿರಿಸಿ, ಮೊದಲು ಖಿನ್ನತೆ- ಆತ್ಮಹತ್ಯೆಯ ಆಲೋಚನೆಗಳಿಗೆ ಮನೋವೈದ್ಯಕೀಯ ಚಿಕಿತ್ಸೆ ಅಗತ್ಯ. ಒಮ್ಮೆ ಬಿಕ್ಕಟ್ಟು ಪರಿಹಾರ ಸಫಲವಾದ ಮೇಲೆ ಉಳಿದ ಪ್ರಶ್ನೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಹುಡುಕಲು ಸಾಧ್ಯವಿದೆ.
ಇಡೀ ಸಮುದಾಯದಲ್ಲಿ ಗರ್ಭಿಣಿಯರನ್ನು ನಿಯಮಿತ ತಪಾಸಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಳು, ಆಸ್ಪತ್ರೆಗಳಲ್ಲಿ ಹೇಗಿದ್ದರೂ ನೋಡಲಾಗುತ್ತದೆ. ಅಲ್ಲಿ ತಪಾಸಣೆ ನಡೆಸುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ತಾಯಂದಿರಲ್ಲಿ ಇರಬಹುದಾದ ಖಿನ್ನತೆಯನ್ನು ಗುರುತಿಸಲು ತರಬೇತಿ ನೀಡುವುದು ಇಂದಿನ
ಅಂತರ್ಜಾಲ ಯುಗದಲ್ಲಿ ಸಾಧ್ಯವಿರುವ, ಸುಲಭದ ಕೆಲಸ. ಕೇವಲ ಎರಡು ಪ್ರಶ್ನೆಗಳನ್ನು ‘ನಿಮ್ಮನ್ನು ಖಿನ್ನತೆ ಕಾಡುತ್ತಿ ದೆಯೇ?’ (ಖಿನ್ನತೆಯನ್ನು ಗುರುತಿಸಲು) ‘ನಿಮಗೆ ಮತ್ತೆ ಮತ್ತೆ ಗಾಬರಿಯಾಗುತ್ತದೆಯೇ?’ (ಆತಂಕವನ್ನು ಗುರು ತಿಸಲು)- ಗರ್ಭಿಣಿಯರು ಮತ್ತು ಹೊಸ ತಾಯಂದಿರು ತಪಾಸಣೆಗೆ ಬಂದಾಗ ಕೇಳುವುದು, ಬಹಳಷ್ಟು ತಾಯಂದಿರ ಖಿನ್ನತೆಯನ್ನು ಗುರುತಿಸಲು ಸಹಾಯ ಮಾಡಬಹುದು.
ಸ್ನಾತಕೋತ್ತರ ವೈದ್ಯಕೀಯ ಪ್ರಸೂತಿ ತಜ್ಞರ ತರಬೇತಿಯಲ್ಲಿ, ವೈದ್ಯಕೀಯ ಪದವಿಯಲ್ಲಿ ಬಾಣಂತಿ ಯರಲ್ಲಿ ಖಿನ್ನತೆಯ ಬಗ್ಗೆ ಕಡ್ಡಾಯವಾಗಿ ವಿಶೇಷ ತರಬೇತಿ ನೀಡಬೇಕಾದದ್ದು ಅಪೇಕ್ಷಣೀಯ. ಎಂದಿನ ವೃತ್ತಿಯ ಭಾಗವಾಗಿ ಇಂತಹ ಪ್ರಕರಣಗಳನ್ನು ಅವರು ನೋಡುತ್ತಾರೆ. ಆಗ ಅವರಿಗೆ ಅದು ಗುರುತಿಸಲು ಸಾಧ್ಯವಾಗಬೇಕು ಎಂಬ ಕಾರಣದಿಂದ ಇದನ್ನು ಮಾಡಬೇಕು. ಆತ್ಮಹತ್ಯೆಗೀಡಾದ ವ್ಯಕ್ತಿಯ ಖಾಸಗಿತನ ವನ್ನು ಗೌರವಿಸಬೇಕಾದದ್ದೂ ಅವರ ಕುಟುಂಬದವರ ನೋವನ್ನು ಮತ್ತಷ್ಟು ಹೆಚ್ಚು ಮಾಡದೆ ಮುಂದಿನ ಭವಿಷ್ಯದ ಬಗ್ಗೆ ಗಮನಿಸಲು ಬಿಡಬೇಕಾದದ್ದೂ ಈ ಹೊತ್ತಿನ ಅವಶ್ಯಕತೆ.
ನಮ್ಮ ಕೆಟ್ಟ ಕುತೂಹಲವನ್ನು ಬಿಟ್ಟುಬಿಡೋಣ. ತಾಯಂದಿರನ್ನು ಉಳಿಸುವತ್ತ ಆರ್ದ್ರ ಮನಸ್ಸಿನಿಂದ ಕೆಲಸ ಮಾಡೋಣ.
ಲೇಖಕಿ: ಮನೋವೈದ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.