ನಮ್ಮ ನಡುವಿನ ಮಾಧ್ಯಮಗಳಲ್ಲಿ ಅತಿ ಹೆಚ್ಚು ಜನರಿಗೆ ತಲುಪುತ್ತಿರುವುದು ಸಿನಿಮಾ. ಹೆಚ್ಚು ಜನರನ್ನು ತಲುಪುತ್ತಿರುವ ಮತ್ತು ಹೆಚ್ಚು ಜನರು ಇಷ್ಟಪಡುವ ಯಾವುದೇ ಮಾಧ್ಯಮದ ಹೊಣೆಗಾರಿಕೆಯೂ ಹೆಚ್ಚಾಗಿರಬೇಕು. ಆದರೆ ಈಗ ಹೊಣೆಗಾರಿಕೆ ಹೆಚ್ಚಾಗಿದೆಯೊ ಲಾಭಕೋರತನ ಹೆಚ್ಚಾಗಿದೆಯೊ ಎಂಬುದೇ ಮುಖ್ಯ ಪ್ರಶ್ನೆ.
ಸಿನಿಮಾದಿಂದ ಲಾಭ ಮಾಡಬಾರದೆಂದು ಹೇಳುವುದು ತಪ್ಪಾಗುತ್ತದೆಯಷ್ಟೇ ಅಲ್ಲ, ಅದೊಂದು ಅವಾಸ್ತವಿಕ ಅಪೇಕ್ಷೆ. ಲಾಭಕ್ಕಾಗಿಯೇ ಮಾಧ್ಯಮವೊಂದರ ಘನತೆ, ಗೌರವ ಗೌಣವಾಗಬಾರದೆಂಬುದು ನಿರೀಕ್ಷೆ. ಹಾಗೆ ನೋಡಿದರೆ ಇಂದು ಸಿನಿಮಾವು ಒಂದು ಮಾಧ್ಯಮ ಮಾತ್ರವಾಗಿ ಉಳಿದಿಲ್ಲ. ಎಲ್ಲೆಲ್ಲಿ ಬಂಡವಾಳ ತೊಡಗುವಿಕೆ ಇರುತ್ತದೆಯೊ ಅಲ್ಲೆಲ್ಲ ಉದ್ಯಮದ ಲಕ್ಷಣಗಳೇ ಮೇಲುಗೈ ಪಡೆಯುತ್ತವೆ. ಇದೊಂದು ಸ್ವಾಭಾವಿಕ ಹಾಗೂ ವಾಸ್ತವಿಕ ಸಂಗತಿ.
ನಾನು ಮೂರು ದಶಕಗಳ ಹಿಂದೆಯೇ ಸಿನಿಮಾವನ್ನು ‘ಕಲೋದ್ಯಮ’ ಎಂದು ನಿರ್ವಚಿಸಿದ್ದೆ. ಸಿನಿಮಾ ಕಲೆಯೂ ಹೌದು, ಉದ್ಯಮವೂ ಹೌದು. ಆದ್ದರಿಂದ ಅದೊಂದು ‘ಕಲೋದ್ಯಮ’ವಾಗಿರುವುದು ಕಟು ಸತ್ಯ. ಇನ್ನೊಂದು ಸತ್ಯವೆಂದರೆ, ಸಿನಿಮಾವನ್ನು ಆರಂಭಿಕ ದಿನಗಳಲ್ಲಿ ‘ಕಲೆ’ ಎಂದೇ ಒಪ್ಪಿರಲಿಲ್ಲ. ಅದೊಂದು ಉದ್ಯಮ ಮಾತ್ರವೆಂಬ ಭಾವನೆಯೇ ಬಲವಾಗಿತ್ತು. ಸಾಂಸ್ಕೃತಿಕ ವಲಯವು ಸಿನಿಮಾವನ್ನು ಒಂದು ಕಲಾಪ್ರಕಾರವೆಂದು ಒಳಗೊಳ್ತೊಡಗಿದಾಗ 1940ರಲ್ಲಿ ಆಂದ್ರೆ ಬ್ಯಾಜೆನ್ ತನ್ನ ‘The evolution of the language of cinema’ ಎಂಬ ಪುಸ್ತಕದಲ್ಲಿ ‘ಕಡೆಗೂ ಚಲನಚಿತ್ರ ನಿರ್ದೇಶಕರು ಕಾದಂಬರಿಕಾರರಿಗೆ ಸಮಾನರೆಂದು ಪರಿಗಣಿತರಾದರು’ ಎಂದು ನಿಟ್ಟುಸಿರುಬಿಟ್ಟದ್ದು ಇಲ್ಲಿ ಉಲ್ಲೇಖನೀಯ.
ನನ್ನ ದೃಷ್ಟಿಯಲ್ಲಿ ಸಿನಿಮಾ ಎನ್ನುವುದು ಮೂಲತಃ ಒಂದು ಒಕ್ಕೂಟ ಕಲೆ. ಇದು ಅನೇಕ ಕಲೆಗಳ ಒಂದು ಒಕ್ಕೂಟ. ಸಿನಿಮಾಕ್ಕೆ ಸಾಹಿತ್ಯ, ಛಾಯಾಗ್ರಹಣ, ಸಂಕಲನ, ಸಂಗೀತ, ನೃತ್ಯ, ಕಲೆ- ಹೀಗೆ ವಿವಿಧ ಪ್ರಕಾರಗಳ ಪರಿಣತರು ಬೇಕು. ಈ ಎಲ್ಲರಿಗೆ ನಿರ್ದೇಶಕರು ಕ್ಯಾಪ್ಟನ್ ಆಗಿ ತನ್ನ ಒಲವು ನಿಲುವುಗಳಿಗೆ ಅನುಗುಣವಾಗಿ ಸಿನಿಮಾ ಸೃಷ್ಟಿ ಮಾಡುತ್ತಾರೆ. ಸಿನಿಮಾಕ್ಕೆ ಲೈಟ್‌ಬಾಯ್ಸ್, ಸೆಟ್‌ಬಾಯ್ಸ್‌ನಂತಹ ಶ್ರಮಜೀವಿ ಪರಿಣತರೂ ಬೇಕು. ಶ್ರಮ ಮತ್ತು ಸೃಜನಶೀಲತೆಗಳೊಂದಾಗಿ ರೂಪುಗೊಳ್ಳುವ ಒಕ್ಕೂಟ ಕಲೆಯೆಂದರೆ ಸಿನಿಮಾ.
ಇಂಥ ಒಕ್ಕೂಟ ಕಲೆಯು ಇಂದಿನ ದಿನಮಾನದಲ್ಲಿ ಉದ್ಯಮವಾಗಿ ವಿಜೃಂಭಿಸುತ್ತಿರುವುದೇ ಹೆಚ್ಚು. ಇದರ ಫಲವಾಗಿ ಸಿನಿಮಾ ಉದ್ಯಮ ಮತ್ತು ಸಿನಿಮಾ ಸಂಸ್ಕೃತಿಯ ನಡುವಿನ ಸಮತೋಲನ ತಪ್ಪಿಹೋಗಿ ಆರ್ಥಿಕ ಹೂಡಿಕೆ ಹಾಗೂ ಆರ್ಥಿಕ ಗಳಿಕೆಗಳೇ ಮೌಲ್ಯಮಾಪನದ ಮಾನದಂಡಗಳಾಗಿವೆ. ಹೀಗಾಗಿ ಸಿನಿಮಾ ಸಂಸ್ಕೃತಿಗೆ ಹಿನ್ನಡೆಯಾಗಿದೆ.
ಈಗ ಕನ್ನಡ ಸಿನಿಮಾಗಳ ಮೂಲಕವೇ ನೋಡೋಣ. ಎಪ್ಪತ್ತು, ಎಂಬತ್ತರ ದಶಕದಲ್ಲಿ ಬಂದ ಕಲಾತ್ಮಕ ಅಥವಾ ಪ್ರಯೋಗಾತ್ಮಕ ಹೊಸ ಅಲೆ ಸಿನಿಮಾಗಳು ಅಂತರರಾಷ್ಟ್ರೀಯವಾಗಿ ಕನ್ನಡಕ್ಕೆ ಮನ್ನಣೆ ತಂದುಕೊಟ್ಟವು. ಆದರೆ ಈಗ ಬರುತ್ತಿರುವ ಬೃಹತ್ ಬಂಡವಾಳದ ಸಿನಿಮಾಗಳಿಂದಲೇ ವಿಶ್ವಖ್ಯಾತಿ ಬಂದಿರುವಂತೆ ಪ್ರಚಾರ ಕೊಡಲಾಗುತ್ತಿದೆ. ಅಂದು ಹೊಸ ಅಲೆ ಸಿನಿಮಾಗಳನ್ನು ಹೊರತುಪಡಿಸಿಯೂ ಮುಖ್ಯವಾಹಿನಿ ಸಿನಿಮಾಗಳಲ್ಲಿ ಸದಭಿರುಚಿ ಮತ್ತು ಸಾಮಾಜಿಕ ಜವಾಬ್ದಾರಿಯಿತ್ತು. ಹೊಸ ಅಲೆ ಸಿನಿಮಾಗಳು ವಸ್ತುವಿನ ಸೂಕ್ಷ್ಮ ಶೋಧಕ್ಕೆ ಆದ್ಯತೆ ನೀಡಿ ಹೊಸ ವಿನ್ಯಾಸ ಕಟ್ಟುವ ಹೊಸ ಹಾದಿ ಹುಡುಕುತ್ತಿದ್ದರೆ, ಮುಖ್ಯವಾಹಿನಿಯ ಅನೇಕ ಸಿನಿಮಾಗಳು ಸಾಮಾಜಿಕ ಸಮಸ್ಯೆ, ಸನ್ನಿವೇಶಗಳನ್ನು ಜನಪ್ರಿಯ ಮಾದರಿಯಲ್ಲಿ ಅನಾವರಣಗೊಳಿಸುತ್ತಿದ್ದವು.
ಈ ಜನಪ್ರಿಯ ಸಿನಿಮಾಗಳ ನಿರ್ಮಾಪಕ- ನಿರ್ದೇಶಕರಿಗೂ ಸದಭಿರುಚಿಯ ಸೀಮಾರೇಖೆಯೊಂದಿತ್ತು. ನೈತಿಕತೆಯ ನಿಯಂತ್ರಣವೂ ಇತ್ತು. ಇದರ ಫಲವಾಗಿ ಹಾಸ್ಯ, ಪ್ರೇಮ, ಫೈಟ್‍ಗಳೆಲ್ಲ ನಿಯಂತ್ರಿತ ನೈತಿಕ ಪರಿಧಿಯೊಳಗೆ ಪ್ರಕಟವಾಗುತ್ತಿದ್ದವು. ಈಗ ಇಂಥ ಸಿನಿಮಾಗಳೇ ಬರುತ್ತಿಲ್ಲವೆಂದರೆ ತಪ್ಪಾಗುತ್ತದೆ. ಆದರೆ ಪ್ರಚಾರ ವೈಭವ, ಪ್ರಸಿದ್ಧಿಯ ಸುದ್ದಿಗಳು ಬೃಹತ್ ಬಂಡವಾಳದ ಅನಿಯಂತ್ರಿತ ಮುಕ್ತ ಮಾದರಿಗಳಿಗೆ ಮಾತ್ರ ಎಂಬಂತಾಗಿದೆ. ಇದು ಬಹುಶಃ ಇತರೆ ಭಾರತೀಯ ಭಾಷಾ ಸಿನಿಮಾಗಳಿಗೂ ಅನ್ವಯಿಸುತ್ತದೆ.
ಮುಕ್ತ ಮಾದರಿ ಸಿನಿಮಾಗಳ ಪ್ರಸಿದ್ಧಿ ಪ್ರಚಾರಗಳಿಗೂ ಜಾಗತೀಕರಣದ ಫಲವಾದ ಮುಕ್ತ ಆರ್ಥಿಕ ನೀತಿಯ ಮುಕ್ತ ಮಾರುಕಟ್ಟೆ ಮಾದರಿಗಳಿಗೂ ಒಂದು ಆಂತರಿಕ ಸಂಬಂಧವಿದೆ. ಬೃಹತ್ ಬಂಡವಾಳಶಾಹಿ ಬಲಗೊಂಡಂತೆ ಎಲ್ಲವನ್ನೂ ಬೃಹತ್ತಾಗಿ ನೋಡುವ ಮನಃಸ್ಥಿತಿ ರೂಪುಗೊಳ್ಳುತ್ತ ಬಂದಿದೆ. ಮುಕ್ತ ಮಾರುಕಟ್ಟೆ ನೀತಿಗಳು ಮೌಲ್ಯಕಟ್ಟೆ ನೀತಿಗಳನ್ನು ಕುಸಿಯುವಂತೆ ಮಾಡುತ್ತಿವೆ. ಅಷ್ಟೇ ಅಲ್ಲ ಸಿನಿಮಾ ಸಂಸ್ಕೃತಿಗೆ ಘನತೆ ತರುವ ಪ್ರಯತ್ನಗಳಿಗೆ ನ್ಯಾಯಯುತ ಪ್ರಚಾರವೂ ಸಿಗುತ್ತಿಲ್ಲ. ಅಂತರರಾಷ್ಟ್ರೀಯ ಚಿತ್ರೋತ್ಸವ
ಗಳಲ್ಲಿ ಪ್ರಶಸ್ತಿ ಪಡೆದ ಸಿನಿಮಾಗಳಿಗೂ ಸುದ್ದಿಮೌಲ್ಯ ಇಲ್ಲ. ಸುದ್ದಿಮೌಲ್ಯ ಮತ್ತು ಹಣಮೌಲ್ಯಗಳ ಸಂಬಂಧ ಗಾಢವಾಗುವುದು ಬಂಡವಾಳಶಾಹಿ ಆರ್ಥಿಕ ನೀತಿಯ ಒಂದು ಗುಣಲಕ್ಷಣವೂ ಹೌದು. ಇದನ್ನೇ ಚಿಂತಕ ಕುಕಾರ್ಕಿನ್ ಅವರು ತಮ್ಮ ‘The passing Age’ ಪುಸ್ತಕದಲ್ಲಿ ಬಂಡವಾಳಶಾಹಿ ಆರ್ಥಿಕ ನೀತಿಯ ಪರಿಣಾಮಗಳನ್ನು ವಿಶ್ಲೇಷಿಸುತ್ತ, ‘ಸುದ್ದಿಮಾಧ್ಯಮಗಳನ್ನೂ ಒಳಗೊಂಡಂತೆ ಜನಪ್ರಿಯ ಮಾದರಿಯ ಎಲ್ಲ ಕಲಾಮಾಧ್ಯಮಗಳೂ ವ್ಯಾಪಾರಿ ಕಾರ್ಯನೀತಿಗಳಿಗಾಗಿ ದುಡಿಯುತ್ತವೆ. ಉದ್ದಿಮೆ ಮತ್ತು ಲಾಭಕೋರತನವೇ ಈ ಕಾರ್ಯನೀತಿ’ ಎಂದಿರುವುದು ನಮ್ಮ ವಸ್ತುಸ್ಥಿತಿಗೆ ಅನ್ವಯಿಸುತ್ತದೆ.
ಸಿನಿಮಾಕ್ಕೆ ಬಂಡವಾಳ ಬೇಕೇ ಬೇಕಾದ್ದರಿಂದ ಉದ್ಯಮದ ಆದ್ಯತೆಗಳನ್ನು ಪೂರ್ಣ ನಿರಾಕರಿಸಲಾಗದು. ಅದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ. ಆದರೆ ಉದ್ಯಮದ ಆದ್ಯತೆಗಳು ಅನಿಯಂತ್ರಿತ ಹಾಗೂ ವೈಭವೀಕೃತ (ಅ) ನೀತಿಯಾಗಬಾರದು. ಈ ದೃಷ್ಟಿಯಿಂದ ಕಲಾತ್ಮಕ ಸಿನಿಮಾಗಳಷ್ಟೇ ಅಲ್ಲ ಮುಖ್ಯವಾಹಿನಿ ಚಲನಚಿತ್ರಗಳು ಕೂಡ ‘ಸಿನಿಮಾ ಸಂಸ್ಕೃತಿ’ಯ ಸಂರಕ್ಷಣೆ ಮತ್ತು ವಿಸ್ತರಣೆಗೆ ಕಾರಣವಾಗಬೇಕು.
ಬೆಂಗಳೂರನ್ನು ಒಳಗೊಂಡಂತೆ ದೇಶದ ವಿವಿಧ ಕಡೆ ನಡೆಯುವ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ‘ಸಿನಿಮಾ ಸಂಸ್ಕೃತಿ’ಗೆ ಎಷ್ಟು ಪೂರಕವೆಂಬ ಪ್ರಶ್ನೆಯೂ ಮುಖ್ಯ. ಇಂಥ ಚಿತ್ರೋತ್ಸವಗಳು ಹೆಸರೇ ಹೇಳುವಂತೆ ವರ್ಷಕ್ಕೊಮ್ಮೆ ನಡೆಯುವ ‘ಉತ್ಸವ’ಗಳು. ಈ ಉತ್ಸವಗಳ ಸಿನಿಮಾ ವೀಕ್ಷಣೆಗೆ ಈಗಾಗಲೇ ಸಿನಿಮಾ ಸಂಸ್ಕೃತಿಯ ಬಗ್ಗೆ ಆಸಕ್ತವಾದ ವರ್ಗದವರು ಬರುವುದೇ ಹೆಚ್ಚು. ಇದರಿಂದ ಈ ವರ್ಗ ಸಮುದಾಯದಲ್ಲಿರುವ ಸಿನಿಮಾ ಸಂಸ್ಕೃತಿಯ ಆಸಕ್ತಿಗೊಂದು ಅವಕಾಶ ಒದಗುತ್ತದೆ. ಇದೊಂದು ಸೀಮಿತ ವಲಯದ ಸೀಮಿತ ಕ್ರಿಯೆ. ಅಷ್ಟರಮಟ್ಟಿಗೆ ಇದು ಸ್ವಾಗತಾರ್ಹ. ಆದರೆ ಅದರಾಚೆಗೆ ಏನು? ‘ಕ್ರಿಯೆ’ಯು ‘ಪ್ರಕ್ರಿಯೆ’ ಆಗಬೇಕು. ಬೆಂಗಳೂರಿನಿಂದ ಹೋಗಿರುವ ಆಸಕ್ತರಿಗೆ ಮತ್ತು ಆಸಕ್ತಿ ಬೆಳೆಸುವ ಒತ್ತಾಸೆಗೆ ಒಂದು ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ಸರ್ಕಾರ ಮತ್ತು ಚಲನಚಿತ್ರ ಅಕಾಡೆಮಿ ಸಿದ್ಧ ಮಾಡಿ ಕಾರ್ಯರೂಪಕ್ಕೆ ತರಬೇಕು.
ವಿದೇಶಿ ಸಿನಿಮಾಗಳನ್ನು ನೋಡುವುದು ಒಂದು ವರ್ಗದ ಪ್ರತಿಷ್ಠೆಯಾಗದೆ ಕನ್ನಡವನ್ನು ಒಳಗೊಂಡಂತೆ ಎಲ್ಲ ಭಾರತೀಯ ಸಿನಿಮಾಗಳ ಸದಭಿರುಚಿ ಹಾಗೂ ಪ್ರಯೋಗಗಳನ್ನು ಒಳಗೊಳ್ಳುವ ಪ್ರಕ್ರಿಯೆಯಾಗಬೇಕು. ಕಲೆ ಮತ್ತು ಪ್ರಯೋಗ ಪ್ರಧಾನವಾದ ಸಿನಿಮಾಗಳ
ಪ್ರದರ್ಶನಕ್ಕೆ ‘ಆದ್ಯತೆ’ ನೀಡುವ ಮಿನಿ ಚಿತ್ರಮಂದಿರಗಳನ್ನು ಕಡೇಪಕ್ಷ ಜಿಲ್ಲೆಗೊಂದರಂತೆ ಸರ್ಕಾರ ನಿರ್ಮಿಸಬೇಕು. ಸುಮಾರು 250 ಆಸನಗಳ ಮಿನಿ ಚಿತ್ರಮಂದಿರಗಳನ್ನು ಈಗ ಅಸ್ತಿತ್ವದಲ್ಲಿರುವ ಜಿಲ್ಲಾ ರಂಗಮಂದಿರಗಳ ಆವರಣದಲ್ಲಿ ನಿರ್ಮಿಸಲು ಸಾಧ್ಯವೆ ಎಂದು ಪರಿಶೀಲಿಸಬೇಕು. ಅಕಾಡೆಮಿಯಂಥ ಸಂಸ್ಥೆಗಳು ಮತ್ತು ಆಸಕ್ತರು ‘ಸಿನಿಮಾ ಸಮಾಜ’ಗಳನ್ನು (ಫಿಲ್ಮ್ ಸೊಸೈಟಿ) ಸ್ಥಾಪಿಸಬೇಕು. ಸಿನಿಮಾ ಸಂಸ್ಕೃತಿ ವಿಸ್ತರಣೆಯು ನಿಗದಿತ ಸಮಯದ ಕ್ರಿಯೆ ಮಾತ್ರವಾಗದೆ ಒಂದು ನಿರಂತರ ಪ್ರಕ್ರಿಯೆಯಾಗಬೇಕು. ಮೊತ್ತಮೊದಲಿಗೆ ಬೌದ್ಧಿಕ ಹುಸಿ ಪ್ರತಿಷ್ಠೆಗೆ ಹೊರತಾದ ಸ್ಥಳೀಯ ಸಿನಿಮಾ ಸಂಸ್ಕೃತಿ ಉಳಿಯಬೇಕು, ಬೆಳೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.