ರೋಜರ್ ಮೈಕೆಲ್ ಹಂಫ್ರಿ ಬಿನ್ನಿ 43 ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಪಾಕಿಸ್ತಾನ ತಂಡದ ವಿರುದ್ಧ. ಅವರು ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದೂ ಅದೇ ದೇಶದ ಎದುರು. ಇದೀಗ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಮೊದಲ ಪಂದ್ಯವನ್ನು ಪಾಕ್ ಎದುರೇ ಆಡುತ್ತಿದೆ!
ಅಷ್ಟೇ ಅಲ್ಲ, ಬಿನ್ನಿ ಅಧ್ಯಕ್ಷ ಗಾದಿಗೇರಿದ ದಿನವೇ ‘ಭಾರತ ತಂಡವು ಮುಂದಿನ ವರ್ಷ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ. ತಟಸ್ಥ ತಾಣದಲ್ಲಿ ಆಡಲಾಗುವುದು’ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಹೇಳಿದ ಮಾತು ಈಗ ಬಿಸಿ ಚರ್ಚೆಗೆ ಕಾರಣವಾಗಿದೆ. ಮುಂದಿನ ವರ್ಷ ಭಾರತದಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್
ನಲ್ಲಿ ಆಡುವುದರಿಂದ ಹಿಂದೆ ಸರಿಯುವ ಕುರಿತು ಪಾಕ್ ಕ್ರಿಕೆಟ್ ಮಂಡಳಿಯೂ ಚಿಂತನೆ ನಡೆಸಿದೆ ಎಂಬ ಮಾತುಗಳೂ ಕೇಳಿಬಂದಿವೆ.
ಈ ಎಲ್ಲ ಚರ್ಚೆಗಳ ನಡುವೆ ಇದೇ ಭಾನುವಾರ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಭಾರತ ಮತ್ತು ಪಾಕ್ ನಡುವಣ ಪಂದ್ಯವು ಕುತೂಹಲಕ್ಕೆ ಕಾರಣವಾಗಿದೆ. ಹೋದ ಸಲ ಯುಎಇಯಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಸೋತಿತ್ತು. ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ಎದುರು ಭಾರತ ಸೋತಿದ್ದ ಮೊದಲ ಪಂದ್ಯ ಅದಾಗಿತ್ತು. ಈ ಬಾರಿ ಅದರ ಸೇಡು ತೀರಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗುವುದೇ ಎಂಬ ಕುತೂಹಲವೂ ಗರಿಗೆದರಿದೆ. ಆದರೆ ಇಡೀ ಟೂರ್ನಿಯಲ್ಲಿ ಭಾರತದ ಆಟ ಹೇಗಿರಬಹುದು ಎಂಬ ಚರ್ಚೆಯೂ ಈಗ ಮುನ್ನೆಲೆಗೆ ಬಂದಿದೆ. ದಿಗ್ಗಜ ಕಪಿಲ್ ದೇವ್ ಅವರೇ ಹೇಳಿರುವ ಪ್ರಕಾರ, ರೋಹಿತ್ ಶರ್ಮಾ ಬಳಗವು ಸೆಮಿಫೈನಲ್ ತಲುಪುವುದೂ ಕಷ್ಟ.
ತಂಡದ ಆಟಗಾರರ ಅಸ್ಥಿರ ಪ್ರದರ್ಶನ, ಸಂಯೋಜನೆಯಲ್ಲಿ ಮಾಡಿದ ಅತಿಯಾದ ಪ್ರಯೋಗಗಳು ವಿಶ್ವಕಪ್ ಕಣದಲ್ಲಿ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಡೆತ್ ಓವರ್ ಪರಿಣತ ಜಸ್‌ಪ್ರೀತ್ ಬೂಮ್ರಾ, ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಇಲ್ಲದ ಭಾರತ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಜಯಕ್ಕಾಗಿ ಬಹಳಷ್ಟು ಶ್ರಮಪಡಬೇಕಿದೆ. ಆಟಗಾರರ ಗಾಯದ
ಸಮಸ್ಯೆಯು ತಂಡವನ್ನು ಅಪಾರವಾಗಿ ಕಾಡಿದೆ. ಒಂದು ವರ್ಷದ ಅವಧಿಯಲ್ಲಿ ಒಟ್ಟು 40 ಆಟಗಾರರನ್ನು ಭಾರತ ತಂಡವು ಕಣಕ್ಕಿಳಿಸಿದೆ. ಏಳು ಆಟಗಾರರು ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದೆಂದೂ ಇಷ್ಟೊಂದು ಪ್ರಯೋಗಗಳು ನಡೆದಿಲ್ಲ. ‘ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್’ ಅನುಸರಿಸಿಯೂ ಪ್ರಮುಖ ಆಟಗಾರರು ಗಾಯಗೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ.
ವೈದ್ಯರು, ಕೋಚ್‌ಗಳು ಮತ್ತು ಅತ್ಯಾಧುನಿಕ ವ್ಯವಸ್ಥೆಗಳು ಇದ್ದರೂ ಈ ರೀತಿಯಾಗಲು ಆಟಗಾರರು ತಮ್ಮ ಫಿಟ್‌ನೆಸ್ ಕುರಿತು ಗಂಭೀರವಾಗಿಲ್ಲವೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ಸದ್ಯ ಭಾರತ ತಂಡದಲ್ಲಿರುವ ಕೆಲವು ಆಟಗಾರರು ಈ ಹತ್ತು ತಿಂಗಳುಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಎರಡು–ಮೂರು ಬಾರಿ ಬಂದು ಆರೈಕೆ ಪಡೆದುಕೊಂಡು ಹೋಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಒಮ್ಮೆಯೂ ಬಂದಿಲ್ಲ. ಅವರು ಸರಣಿಗಳ ನಡುವೆ ವಿಶ್ರಾಂತಿ ಪಡೆದಿದ್ದು ಬಿಟ್ಟರೆ ಗಾಯದ ಸಮಸ್ಯೆಯಿಂದ ಬಳಲಿದ್ದು ಕಡಿಮೆ. ಈ ಹಿಂದೆ ಧೋನಿ ಕೂಡ ನಿರಂತರವಾಗಿ ಎಲ್ಲ ಮಾದರಿಗಳಲ್ಲಿಯೂ ಆಡುತ್ತಿದ್ದರು. ವಿಕೆಟ್‌ಕೀಪಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿದ್ದರು.
ಗಾಯದ ಸಮಸ್ಯೆಯನ್ನು ಬಿನ್ನಿ ಗಂಭೀರವಾಗಿ ಪರಿಗಣಿಸಿದ್ದಾರೆ. ‘ಬೂಮ್ರಾ ಅವರಂತಹ ಪ್ರಮುಖ ಬೌಲರ್ ಇಲ್ಲದೇ ಅಂತರರಾಷ್ಟ್ರೀಯ ಟೂರ್ನಿಗೆ ಭಾರತ ಹೋಗಿದೆ. ಅವರಿಗೆ ಪರ್ಯಾಯವಾಗಿ ತಕ್ಕ ಬೌಲರ್ ಸಿದ್ಧವಾಗಿಲ್ಲ. ಈ ದಿಸೆಯಲ್ಲಿ ಗಾಯಾಳುಗಳ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಯೋಜನೆ ಸಿದ್ಧಗೊಳಿಸುತ್ತೇವೆ’ ಎಂದಿದ್ದಾರೆ. ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ವೇಳೆಗೆ ತಂಡವನ್ನು ಸದೃಢಗೊಳಿಸುವ ಕನಸು ಅವರದ್ದು.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳ ಬಗ್ಗೆಯೂ ಮಾತನಾಡಿರುವ ಅವರು, ‘ಈ ವಿಷಯದಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಬಿಸಿಸಿಐ ನಿರ್ಧಾರ ಕೈಗೊಳ್ಳುವುದಿಲ್ಲ’ ಎಂದಿದ್ದಾರೆ.
2008ರಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದ ಏಷ್ಯಾ ಕಪ್ ನಂತರ ಭಾರತ ತಂಡ ಅಲ್ಲಿಗೆ ಕಾಲಿಟ್ಟಿಲ್ಲ. ಗಡಿಯಾಚೆಯಿಂದ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವವರೆಗೂ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಬೆಳೆಸುವುದಿಲ್ಲ ಎಂಬ ನಿಲುವು ಭಾರತ ಸರ್ಕಾರದ್ದಾಗಿದೆ. 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ವಿಶ್ವದ ಬೇರೆ ಕ್ರಿಕೆಟ್ ತಂಡಗಳೂ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದವು. ಇದರಿಂದಾಗಿ ಪಾಕಿಸ್ತಾನವು 2011ರ ವಿಶ್ವಕಪ್ ಟೂರ್ನಿಗೆ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದೊಂದಿಗೆ ವಹಿಸಬೇಕಿದ್ದ ಜಂಟಿ ಆತಿಥ್ಯದ ಗೌರವವನ್ನೂ ಕಳೆದುಕೊಂಡಿತು.2015ರಿಂದ ಕೆಲವು ತಂಡಗಳು ಪಾಕ್‌ನಲ್ಲಿ ಕ್ರಿಕೆಟ್ ಸರಣಿ ಆಡಿವೆ. ಇತ್ತೀಚೆಗೆ ಇಂಗ್ಲೆಂಡ್ ಕೂಡ ಲಾಹೋರ್‌ನಲ್ಲಿ ಆಡಿತ್ತು.
1992ರಲ್ಲಿ ವಿಶ್ವಕಪ್ ಗೆದ್ದ ಪಾಕ್ ತಂಡದ ನಾಯಕ ಇಮ್ರಾನ್ ಖಾನ್ ಅವರೇ ಕೆಲವು ವರ್ಷ ದೇಶದ ಪ್ರಧಾನಿಯಾಗಿದ್ದರು. ಆದರೂ ಪರಿಸ್ಥಿತಿ ಸಂಪೂರ್ಣ ಸುಧಾರಿಸಲಿಲ್ಲ. ಇಮ್ರಾನ್ ಆಡುತ್ತಿದ್ದ ಕಾಲಘಟ್ಟದಲ್ಲಿದ್ದ ಪಾಕ್ ಆಟಗಾರರ ಮನೋಭಾವದಲ್ಲಿಯೂ ಭಾರತವನ್ನು ಸೋಲಿಸಬೇಕು ಎಂಬ ಛಲ ಇರುತ್ತಿತ್ತು. ಅವರ ಹಾವಭಾವಗಳಲ್ಲಿ ಆಕ್ರಮಣಶೀಲತೆ ಇತ್ತು. ಅದಕ್ಕಾಗಿಯೇ ಉಭಯ ತಂಡಗಳ ಪಂದ್ಯಗಳು ಯಾವಾಗಲೂ ಬಿಸಿಯೇರಿಸುತ್ತಿದ್ದವು.
ಆದರೆ ಪಾಕಿಸ್ತಾನದ ಈಗಿನ ತಂಡದ ಆಟಗಾರರ ನಡವಳಿಕೆ ಬದಲಾಗಿದೆ. ಅಂದು ಜಾವೇದ್ ಮಿಯಾಂದಾದ್ ಪಂದ್ಯವೊಂದರಲ್ಲಿ ಕುಪ್ಪಳಿಸಿ ಅಣಕ ಮಾಡಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೆಂಕಟೇಶ್ ಪ್ರಸಾದ್ ಎಸೆತವನ್ನು ಅಮಿರ್ ಸೊಹೈಲ್ಬೌಂಡರಿಗಟ್ಟಿ ಅಹಂಕಾರ ಪ್ರದರ್ಶಿಸಿದ್ದರು. ಈ ರೀತಿಯ ನಡವಳಿಕೆಗಳು ಈಗಿನ ಹುಡುಗರಲ್ಲಿ ಕಾಣುತ್ತಿಲ್ಲ ಎಂಬುದು ಗಮನಾರ್ಹ. ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ರೋಹಿತ್ ಶರ್ಮಾ ಅವರೊಂದಿಗೆ ಅತ್ಮೀಯವಾಗಿ ಸ್ನೇಹ ಇಟ್ಟುಕೊಂಡಿರುವವರಿದ್ದಾರೆ. ಪಾಕ್ ತಂಡದ ನಾಯಕ ಬಾಬರ್ ಆಜಂ ತಮ್ಮ ಆಟದಲ್ಲಿ ಕೊಹ್ಲಿಯವರನ್ನು, ನಡವಳಿಕೆಯಲ್ಲಿ ಧೋನಿಯವರನ್ನು ಅನುಸರಿಸುತ್ತ ಐಸಿಸಿ ರ‍್ಯಾಂಕಿಂಗ್‌ನ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಆಟಗಾರರೂ ಪಾಕ್ ಆಟಗಾರರೊಂದಿಗೆ ಸೌಹಾರ್ದವಾಗಿ ವ್ಯವಹರಿಸುವ ದೃಶ್ಯಾವಳಿಗಳು ಕಳೆದ ಎರಡು–ಮೂರು ವರ್ಷಗಳಲ್ಲಿ ನಡೆದ ಪಂದ್ಯಗಳ
ಸಂದರ್ಭಗಳಲ್ಲಿ ದಾಖಲಾಗಿವೆ. ಪಂದ್ಯದಲ್ಲಿ ಜಿದ್ದಾಜಿದ್ದಿ, ನಂತರ ಎಲ್ಲರೂ ಮಿತ್ರರು. ಯಾವುದೇ ಕ್ರೀಡೆಯ ಉದ್ದೇಶವೂ ಇದೇ ಅಲ್ಲವೇ?
ಆದರೆ ಉಭಯ ದೇಶಗಳ ಕೆಲವು ಅಭಿಮಾನಿಗಳಲ್ಲಿರುವ ಅತಿರೇಕದ ಭಾವನೆಗಳೇ ಬೇರೆ. ಈಚೆಗೆ ಇಂಗ್ಲೆಂಡ್‌ನಲ್ಲಿ ಎರಡೂ ದೇಶಗಳ ಅಭಿಮಾನಿಗಳ ನಡುವೆ ಆದ ಗಲಭೆ ಇದಕ್ಕೆ ಉದಾಹರಣೆ. ಅಭಿಮಾನಿಗಳಲ್ಲಿರುವ ಭಾವನೆಗಳನ್ನು ರಾಜಕೀಯ ಹಾಗೂ ಮಾರುಕಟ್ಟೆ ಶಕ್ತಿಗಳು ಎರಡೂ ತಂಡಗಳನ್ನು ‘ಬದ್ಧ ವೈರಿಗಳು’ ಎಂಬಂತೆ ಬಿಂಬಿಸುತ್ತವೆ. ಅದರಿಂದ ಲಾಭ ಪಡೆಯುತ್ತಿವೆ.
ಬದಲಾಗಿರುವ ಈಗಿನ ಪರಿಸ್ಥಿತಿಯಲ್ಲಿ ತಾವೂ ಕ್ರಿಕೆಟ್ ತಾರೆಗಳಾಗಬೇಕು, ಶ್ರೀಮಂತರಾಗಬೇಕು ಹಾಗೂ ಜಾಗತಿಕ ಗೌರವ ಗಳಿಸಬೇಕು ಎಂಬ ತುಡಿತ ಪಾಕ್ ಆಟಗಾರರಲ್ಲಿ ಕಂಡುಬರುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಅದಕ್ಕೆ ಅಲ್ಲಿಯ ವ್ಯವಸ್ಥೆ ಅವಕಾಶ ನೀಡಬೇಕು. ತನ್ನ ನೆಲದಲ್ಲಿ ಬೇರೆ ದೇಶಗಳ ತಂಡಗಳು ಬಂದು ಆಡುವಂತಹ ಸುರಕ್ಷಿತ ವಾತಾವರಣ ನೆಲೆಸುವಂತೆ ನೋಡಿಕೊಳ್ಳಬೇಕು. ಒಡೆದು ಆಳುವ ರಾಜಕಾರಣದಾಚೆ ಮನಗಳ ಬೆಸೆಯುವ ಕ್ರಿಕೆಟ್ ಕಂಪು ಬೀರಬೇಕಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.