ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) ನಮ್ಮ ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ಗಳಲ್ಲಿ ನಿರತವಾಗಿರುವ 52 ವಿವಿಧ ಪ್ರಯೋಗಾಲಯ
ಗಳ ಸಮೂಹ. ವಾಯು, ನೌಕಾ ಮತ್ತು ಭೂ ಸೇನೆಗಳನ್ನು ಬಲಿಷ್ಠವಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸಲು ಅಗತ್ಯವಾದ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿ ಬಳಕೆಗೆ ತರುವ ದಿಕ್ಕಿನಲ್ಲಿ ಇದು ಶ್ರಮಿಸುತ್ತಿದೆ.
ಡಿಆರ್‌ಡಿಒ ವಿನ್ಯಾಸ ಮಾಡಿ, ಉತ್ಪಾದಿಸಿ, ಪರೀಕ್ಷಿಸಿ, ಬಳಕೆಗೆ ತಂದಿರುವ ಬ್ರಹ್ಮೋಸ್, ಅಗ್ನಿ, ಪೃಥ್ವಿ ಮಾಲಿಕೆಯ ಕ್ಷಿಪಣಿಗಳು. ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಪಿನಾಕ, ವಾಯು ರಕ್ಷಣೆ ವ್ಯವಸ್ಥೆಯ ಆಕಾಶ್, ವಿವಿಧ ಮಾದರಿಯ ರಾಡಾರ್ ಮತ್ತು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು ಭಾರತದ ಮಿಲಿಟರಿ ಸಾಮರ್ಥ್ಯವನ್ನು ಎದ್ದು ಕಾಣುವಂತೆ ಶಕ್ತಿಯುತಗೊಳಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಹೊರತುಪಡಿಸಿದರೆ ಟ್ಯಾಂಕ್‍ಗಳಿಂದ ಹಿಡಿದು ಯುದ್ಧವಿಮಾನಗಳವರೆಗೆ, ಬೇಸಿಕ್ ಅಸಾಲ್ಟ್ ರೈಫಲ್‍ನಿಂದ ಹಿಡಿದು ಯುದ್ಧನೌಕೆಗಳ ಬ್ಯಾಟರಿಗಳವರೆಗೆ, ಸಂಪರ್ಕ ವ್ಯವಸ್ಥೆಯಿಂದ ಹಿಡಿದು ಮಾನವರಹಿತ ವೈಮಾನಿಕ ವಾಹನಗಳವರೆಗೆ ಅನೇಕ ಯೋಜನೆಗಳು ನಿಗದಿತ ಕಾಲಾವಧಿಯಲ್ಲಿ ಮುಗಿಯದೆ, ಯೋಜನೆಯ ವೆಚ್ಚ ಒಂದೇ ಸಮನೆ ಏರುತ್ತಿದೆ ಎಂಬುದು ರಕ್ಷಣಾ ಪರಿಣತರ ಕಟು ಟೀಕೆ.
2023ರ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಮಂಡನೆಯಾದ, ರಕ್ಷಣಾ ಸ್ಥಾಯಿ ಸಮಿತಿಯ 38ನೇ ವರದಿಯಲ್ಲಿ, ಡಿಆರ್‌ಡಿಒ ಸಂಸ್ಥೆಯ ಮಿಷನ್ ಸ್ವರೂಪದ 178 ಯೋಜನೆಗಳಲ್ಲಿ 119 ತೀರಾ ವಿಳಂಬವಾಗಿ, ಯೋಜನಾ ವೆಚ್ಚ ಏರಿರುವುದರ ಜೊತೆಗೆ ಅಪೇಕ್ಷಿತ ಫಲಿತಾಂಶ ದೊರೆಯದಿರುವ ಯೋಜನೆಗಳನ್ನೂ ಯಶಸ್ವಿಯೆಂದು ಪರಿಗಣಿಸಿರುವ ನಿದರ್ಶನಗಳ ಪ್ರಸ್ತಾಪವಿದೆ. 2020ರ ಮಹಾಲೇಖಪಾಲರ ವರದಿ ಕೂಡ ಇದನ್ನು ಎತ್ತಿತೋರಿದೆ.
2023ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವು ಡಿಆರ್‌ಡಿಒ ಪುನರ್‌ರಚನೆಯ ಉದ್ದೇಶದಿಂದ, ಈ ಹಿಂದೆ ಭಾರತ ಸರ್ಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದ ಪ್ರೊ. ವಿಜಯ ರಾಘವನ್ ಅವರ ಅಧ್ಯಕ್ಷತೆಯಲ್ಲಿ
9 ಪರಿಣತರ ಉನ್ನತ ಸಮಿತಿಯೊಂದನ್ನು ನೇಮಿಸಿತು. ವಾಯು, ನೌಕಾ ಮತ್ತು ಭೂಸೇನೆಯ ನಿವೃತ್ತ ಉಪ
ಮುಖ್ಯಸ್ಥರು, ಮನೋಹರ್ ಪರಿಕ್ಕರ್ ರಕ್ಷಣಾ ಅಧ್ಯಯನ ಸಂಸ್ಥೆ, ಐಐಟಿ ಕಾನ್ಪುರ, ಇಸ್ರೊ, ಎಲ್ ಆ್ಯಂಡ್ ಟಿಯ ಪರಿಣತರು ಈ ಸಮಿತಿಯಲ್ಲಿದ್ದಾರೆ. ರಕ್ಷಣಾ ಇಲಾಖೆ, ಡಿಆರ್‌ಡಿಒ, ರಕ್ಷಣಾ ಉದ್ಯಮ ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳ ನಡುವೆ ಇರಬೇಕಾದ ಸಂಬಂಧ, ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಖಾಸಗಿ ಉದ್ಯಮಗಳ ಪಾತ್ರ, ಪ್ರತಿಭಾ ಪಲಾಯನ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು, ವಿದೇಶಿ ಸಂಸ್ಥೆಗಳು ಮತ್ತು ಪರಿಣತರೊಂದಿಗೆ ಸಾಧಿಸಬೇಕಾದ ಸಹಯೋಗದ ಸ್ವರೂಪ, ಯೋಜನೆಯ ತ್ವರಿತಗತಿಯ ಅನುಷ್ಠಾನಕ್ಕೆ ಅಗತ್ಯವಾದ ಆರ್ಥಿಕ ಮತ್ತು ಆಡಳಿತಾತ್ಮಕ ಸುಧಾರಣೆ
ಗಳಂತಹ ವಿಷಯಗಳ ಬಗ್ಗೆ ಈ ಸಮಿತಿ ಶಿಫಾರಸು ಮಾಡಲಿದೆ.
ಆದರೆ ವಿಪರ್ಯಾಸವೆಂದರೆ, ಹಲವು ವರ್ಷಗಳ ಹಿಂದೆಯೇ ಈ ಎಲ್ಲ ಅಂಶಗಳನ್ನೂ ಪರಿಗಣಿಸಿದ್ದ, ಕ್ಷಿಪಣಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಪಿ.ರಾಮರಾವ್ ಅಧ್ಯಕ್ಷತೆಯ ಸಮಿತಿಯು 2008ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ಅದನ್ನು ಪರಿಶೀಲಿಸಿದ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ, ವರದಿಯಲ್ಲಿನ ಅಂಶಗಳನ್ನು ಅನುಷ್ಠಾನಗೊಳಿಸಲು ಕಾರ್ಯಾಚರಣೆಯ ಕ್ರಮಗಳನ್ನು ಸಿದ್ಧಪಡಿಸಿತ್ತು.
2015ರಲ್ಲಿ, ಡಿಆರ್‌ಡಿಒಗೆ ಸಂಬಂಧಿಸಿದಂತೆ ಅದರ ಆಡಳಿತಾತ್ಮಕ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಿಫಾರಸುಗಳನ್ನೂ ಅನುಷ್ಠಾನಗೊಳಿಸಲಾಗಿದೆ ಎಂದು ಅಂದಿನ ರಕ್ಷಣಾ ರಾಜ್ಯ ಸಚಿವರು ಲೋಕಸಭೆಗೆ ತಿಳಿಸಿದರು. ಆದರೆ ಇದೀಗ ಬಹುತೇಕ ಅದೇ ವಿಷಯಗಳನ್ನು ಮತ್ತೊಂದು ಸಮಿತಿ ಅಧ್ಯಯನ ಮಾಡುತ್ತಿರುವುದರ ಔಚಿತ್ಯ ವ್ಯಾಪಕ ಚರ್ಚೆಗೆ ದಾರಿಮಾಡಿ ಕೊಟ್ಟಿದೆ. ಡಿಆರ್‌ಡಿಒ ರಚನೆ, ಸಾಂಸ್ಥಿಕ ಮೌಲ್ಯಗಳು ಮತ್ತು ಕೆಲಸದ ಬಗ್ಗೆ ಭಾರತೀಯ ಸೇನೆ, ರಕ್ಷಣಾ ಉದ್ಯಮ ಹಾಗೂ ರಕ್ಷಣಾ ಅಧ್ಯಯನ ಸಂಸ್ಥೆಗಳಿಗೆ ಬಹಳಷ್ಟು ಅಸಮಾಧಾನವಿದೆ. ಈ ಪರಿಸ್ಥಿತಿಗೆ ಡಿಆರ್‌ಡಿಒ ಸಂಪೂರ್ಣವಾಗಿ ಕಾರಣವಲ್ಲ ಎಂಬುದೂ ನಿಜ. ಭಾರತೀಯ ಸೇನೆಯ ‘ಟೆಕ್ನಿಕಲ್ ಡೆವಲಪ್‍ಮೆಂಟ್ ಎಸ್ಟ್ಯಾಬ್ಲಿಷ್‌ಮೆಂಟ್’ ಮತ್ತು ‘ಡೈರೆಕ್ಟರೇಟ್ ಆಫ್ ಟೆಕ್ನಿಕಲ್ ಡೆವಲಪ್‍ಮೆಂಟ್ ಆ್ಯಂಡ್ ಪ್ರೊಡಕ್ಷನ್’ ಸಂಸ್ಥೆಗಳನ್ನು ವಿಲೀನಗೊಳಿಸಿ 1958ರಲ್ಲಿ ಡಿಆರ್‌ಡಿಒ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಹೀಗಾಗಿ, ಈ ಎರಡು ಸರ್ಕಾರಿ ಸಂಸ್ಥೆಗಳ ಕಾರ್ಯವೈಖರಿ ಮತ್ತು ವೃತ್ತಿಮೌಲ್ಯಗಳೇ ಇಲ್ಲಿಯೂ ಮುಂದುವರಿದಿವೆ ಎಂಬ ಟೀಕೆಯಿದೆ. ಡಿಆರ್‌ಡಿಒ ಹಾಗೂ ವಾಯು, ನೌಕಾ ಮತ್ತು ಭೂಸೇನೆ ನಡುವೆ ಪರಸ್ಪರ ಅಸಮಾಧಾನವಿರುವುದು, ವಿಶ್ವಾಸ, ಸದ್ಭಾವನೆಯ ಕೊರತೆ ಮತ್ತೊಂದು ಮುಖ್ಯ ಸಮಸ್ಯೆ.
ವಿವಿಧ ಶಸ್ತ್ರಾಸ್ತ್ರಗಳ ಪ್ರಾಯೋಗಿಕ ಮಾದರಿಗಳಿಗೆ (ಪ್ರೋಟೋಟೈಪ್) ಸಂಬಂಧಿಸಿದಂತೆ ‘ಪರಿಕಲ್ಪನೆಯ ಪ್ರಮಾಣ’ವನ್ನು (ಪ್ರೂಫ್ ಆಫ್ ಕಾನ್ಸೆಪ್ಟ್) ಡಿಆರ್‌ಡಿಒ ನಿರೂಪಿಸುತ್ತದೆ. ಆದರೆ ಅವುಗಳ ಉತ್ಪಾದನೆ ಮತ್ತು ಅಳವಡಿಕೆ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲವೆಂಬುದು ರಕ್ಷಣಾ ದಳಗಳ ದೂರು. ತಂತ್ರಜ್ಞಾನದ ಅಭಿವೃದ್ಧಿ ಮತ್ತು ಶಸ್ತ್ರಾಸ್ತ್ರಗಳ ಉತ್ಪಾದನೆಯ ಹಂತಗಳಲ್ಲಿ, ರಕ್ಷಣಾದಳಗಳು ಮತ್ತೆ ಮತ್ತೆ ತಮ್ಮ ಅಪೇಕ್ಷಿತ ಅಗತ್ಯಗಳನ್ನು ಬದಲಿಸುವುದರಿಂದಲೇ ಯೋಜನೆಗಳು ವಿಳಂಬವಾಗುತ್ತಿವೆ ಎಂಬುದು ಡಿಆರ್‌ಡಿಒ ಅಭಿಪ್ರಾಯ.
ದೇಶದ ರಕ್ಷಣಾ ಉದ್ಯಮವನ್ನು 2001ರಲ್ಲಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಗೆ ಸಂಪೂರ್ಣವಾಗಿ ತೆರೆಯಲಾಯಿತು. ಇಂದು ಸುಮಾರು 350 ಖಾಸಗಿ ಸಂಸ್ಥೆಗಳು ಈ ವಲಯದಲ್ಲಿದ್ದರೂ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರುತ್ತಿಲ್ಲ. ಈ ಕಂಪನಿಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಸರ್ಕಾರ ಕೊಂಡು ಬಳಸುತ್ತದೆ ಎಂಬ ಯಾವುದೇ ಭರವಸೆ ಇಲ್ಲದಿರುವಾಗ ಆ ಬಗೆಯ ಹಿಂಜರಿಕೆ ಸಹಜ. ಅಂತಹ ಭರವಸೆಯನ್ನು ಕೊಡುವ ಸಾಧ್ಯತೆಯನ್ನು ವಿಜಯ ರಾಘವನ್ ಸಮಿತಿ ಪರಿಶೀಲಿಸಬೇಕಾಗಿದೆ.
2022- 23ನೇ ಸಾಲಿನ ಬಜೆಟ್‍ನಲ್ಲಿ, ರಕ್ಷಣಾ ಸಚಿವಾಲಯದ ಆಯವ್ಯಯದ ಶೇ 25ರಷ್ಟು ಭಾಗವನ್ನು ಖಾಸಗಿ ಮತ್ತು ಸ್ಟಾರ್ಟ್‌ಅಪ್ ಕಂಪನಿಗಳಿಗೆ ಮೀಸಲಿಡುವುದಾಗಿ ಹಣಕಾಸು ಸಚಿವರು ಮಾಡಿದ ಘೋಷಣೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದರೂ ಅದು ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಹಾಗೆಯೇ ಭವಿಷ್ಯದ ತಂತ್ರಜ್ಞಾನವನ್ನು ರೂಪಿಸುವ ಮಹತ್ತರವಾದ ಸವಾಲನ್ನು, ಅಂತಹ ಸಾಮರ್ಥ್ಯವಿರುವ ಪ್ರತಿಷ್ಠಿತ ಕಂಪನಿಗಳಿಗೆ ನೀಡಿ ಅವುಗಳನ್ನು ಪ್ರೋತ್ಸಾಹಿಸಬೇಕೆಂಬ ಅಭಿಪ್ರಾಯವೂ ಚರ್ಚೆಗಳಲ್ಲಿ ಮಂಡಿತವಾಗಿದೆ.
ರಕ್ಷಣಾ ಇಲಾಖೆಯ ಬಿಗಿಯಾದ ಆಡಳಿತಾತ್ಮಕ ಹಾಗೂ ಆರ್ಥಿಕ ನಿಯಂತ್ರಣದಿಂದ ಡಿಆರ್‌ಡಿಒ ಸ್ವಾತಂತ್ರ್ಯ ಮೊಟಕುಗೊಂಡಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅದಕ್ಕೆ ಅನುವಾಗಿಸುವುದು, ಡಿಆರ್‌ಡಿಒ ಮತ್ತು ರಕ್ಷಣಾದಳಗಳ ನಡುವೆ ಸದ್ಭಾವನೆ ಹಾಗೂ ಸಮನ್ವಯ ಸಾಧಿಸುವುದು, ಯೋಜನೆಯೊಂದು ಕಾರ್ಯಸಾಧ್ಯವಲ್ಲವೆಂದು ಖಚಿತವಾದ ನಂತರ ಅದನ್ನು ತ್ವರಿತವಾಗಿ ಕೈಬಿಡುವ ನೀತಿಯಂತಹವುಗಳನ್ನು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು ಪರಿಣತರು ಒತ್ತಾಯಿಸಿದ್ದಾರೆ.
ಅಮೆರಿಕದ ‘ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ ಏಜೆನ್ಸಿ’ಯ ಸ್ವರೂಪದಂತೆಯೇ ಡಿಆರ್‌ಡಿಒ ಸಂಸ್ಥೆಯನ್ನು ರೂಪಿಸಬೇಕೆಂಬ ಪಿ.ರಾಮರಾವ್ ಸಮಿತಿಯ ಶಿಫಾರಸನ್ನು ಈಗ ಮತ್ತೊಮ್ಮೆ ಪರಿಶೀಲಿಸಿ ಅನುಷ್ಠಾನಗೊಳಿಸಬೇಕೆಂಬ ಒತ್ತಾಯವಿದೆ. ಇವುಗಳೊಂದಿಗೆ ಡಿಆರ್‌ಡಿಒಗೆ ಲಭ್ಯವಿರುವ ಆರ್ಥಿಕ ಸಂಪನ್ಮೂಲದ ಬಗೆಗೂ ಈ ಸಮಿತಿ ಗಮನಹರಿಸಬೇಕಿದೆ.
ರಕ್ಷಣಾ ಸಚಿವಾಲಯದ 2018-19ರ ಬಜೆಟ್‍ನಲ್ಲಿ ಡಿಆರ್‌ಡಿಒಗೆ ದೊರೆತದ್ದು ಶೇ 6.39ರಷ್ಟು. ಇದರ ಹೆಚ್ಚುಭಾಗ ವೆಚ್ಚವಾದದ್ದು ಸಿಬ್ಬಂದಿಯ ಸಂಬಳ ಮತ್ತಿತರ ಆಡಳಿತಾತ್ಮಕ ಅಗತ್ಯಗಳಿಗೆ. 2023-24ರಲ್ಲಿ ಇದರ ಪ್ರಮಾಣ ಶೇ 5.1. ಇದಕ್ಕಿಂತ ಮುಖ್ಯವಾಗಿ 2017-18ರಲ್ಲಿ ಡಿಆರ್‌ಡಿಒ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ದೊರೆತ ಹಣ ಜಿಡಿಪಿಯ ಶೇ 0.088ರಷ್ಟು. 2023-24ರಲ್ಲಿ ಇದು ಶೇ 0.077ಕ್ಕೆ ಇಳಿದಿದೆ. ಡಿಆರ್‌ಡಿಒ ಸಂಸ್ಥೆಯ ಪುನರ್‌ರಚನೆಯಲ್ಲಿ ಅತಿದೊಡ್ಡ ಸವಾಲಾಗಿರುವ ಆರ್ಥಿಕ ಸಂಪನ್ಮೂಲದ ಕೊರತೆಯನ್ನು ಪ್ರೊ. ವಿಜಯ ರಾಘವನ್ ಸಮಿತಿ ಹೇಗೆ ನಿರ್ವಹಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.