ADVERTISEMENT

ವಿಶ್ಲೇಷಣೆ: ಮೋದಿ ಮತ್ತು ಸ್ವನಾಮ ಪ್ರೇಮ..

ಪ್ರಧಾನಿಯವರ ಆತ್ಮಸ್ತುತಿ ಕೇಂದ್ರಿತ ನಡೆ ಬಿಜೆಪಿಗೂ ಪ್ರಜಾಪ್ರಭುತ್ವಕ್ಕೂ ಹಿತಕರವಲ್ಲ

ಸುಧೀಂದ್ರ ಕುಲಕರ್ಣಿ
Published 15 ಏಪ್ರಿಲ್ 2024, 19:04 IST
Last Updated 15 ಏಪ್ರಿಲ್ 2024, 19:04 IST
<div class="paragraphs"><p>ವಿಶ್ಲೇಷಣೆ: ಮೋದಿ ಮತ್ತು ಸ್ವನಾಮ ಪ್ರೇಮ</p></div>

ವಿಶ್ಲೇಷಣೆ: ಮೋದಿ ಮತ್ತು ಸ್ವನಾಮ ಪ್ರೇಮ

   

ನರೇಂದ್ರ ಮೋದಿ ಅವರಲ್ಲಿ ಮೆಚ್ಚಬಹುದಾದ ಹಲವಾರು ಗುಣಗಳಿವೆ. ಅವರು ದಣಿವಿಲ್ಲದೆ ಕೆಲಸ ಮಾಡುತ್ತಾರೆ. ಹಿಂದಿ ಹಾಗೂ ಮಾತೃಭಾಷೆ ಗುಜರಾತಿಯಲ್ಲಿ ಅದ್ಭುತ ವಾಕ್ಪಟು. ನಮ್ಮ ವಿಶಾಲ ಮತ್ತು ವೈವಿಧ್ಯಮಯ ದೇಶದ ಜನಮಾನಸದ ಪ್ರಾಬಲ್ಯ ಮತ್ತು ದೌರ್ಬಲ್ಯ ಎರಡನ್ನೂ ಅವರು ಚೆನ್ನಾಗಿ ಅರಿತಿದ್ದಾರೆ. ಆರ್‌ಎಸ್‌ಎಸ್‌ ಪ್ರಚಾರಕರಾಗಿ, ಬಿಜೆಪಿಯ ಸಂಘಟಕರಾಗಿ ಕಾರ್ಯ ಆರಂಭಿಸಿದ ಮೋದಿ, ಸ್ಪರ್ಧಾತ್ಮಕವೂ ದೋಷಪೂರ್ಣವೂ ಆಗಿರುವ ಇಂದಿನ ರಾಜಕಾರಣ ಬೇಡುವ ಕೆಲವು ಸಾಮರ್ಥ್ಯಗಳನ್ನು ಚಾಣಾಕ್ಷತನದಿಂದ ರೂಢಿಸಿಕೊಂಡಿದ್ದಾರೆ. ಅವರು ಹಾಗೆ ಮಾಡದೇ ಹೋಗಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ.

ಈ ಮಾತು ಎಷ್ಟು ಸತ್ಯವೋ ಅಷ್ಟೇ ಅಪ್ರಿಯವಾದ ಇನ್ನೊಂದು ಸತ್ಯವೆಂದರೆ, ಭಾರತಕ್ಕೆ ಇದುವರೆಗೆ ಲಭಿಸಿದ 14 ಮಂದಿ ಪ್ರಧಾನಮಂತ್ರಿಗಳಲ್ಲಿ ಆತ್ಮಸ್ತುತಿಗೆ ಮೋದಿಯವರಷ್ಟು ಪ್ರಾಮುಖ್ಯ ನೀಡಿದ ಮತ್ತೊಬ್ಬ ಪ್ರಧಾನಿಯನ್ನು ದೇಶ ಕಂಡಿಲ್ಲ. ಮೋದಿಯವರ ಯಾವುದೇ ಭಾಷಣವನ್ನು, ವಿಶೇಷವಾಗಿ ಸದ್ಯದ ಚುನಾವಣಾ ಸಂದರ್ಭದ ಭಾಷಣವನ್ನು ಕೇಳಿನೋಡಿ. ಅದರಲ್ಲಿ ಅವರು ಕನಿಷ್ಠ ಹತ್ತಿಪ್ಪತ್ತು ಬಾರಿಯಾದರೂ ತಮ್ಮ ಹೆಸರನ್ನು ತಾವೇ ಹೇಳಿಕೊಳ್ಳುತ್ತಾರೆ. ‘ಯೇ ಮೋದಿ ಕೀ ಗ್ಯಾರಂಟಿ ಹೈ’ (ಇದು ಮೋದಿಯ ಗ್ಯಾರಂಟಿ), ‘ಮೋದಿ ಜೋ ಕಹತಾ ಹೈ, ವೋ ಕರ್‌ಕೆ ದಿಖಾತಾ ಹೈ’ (ಮೋದಿ ಏನು ಹೇಳುತ್ತಾನೋ ಅದನ್ನು ಮಾಡಿ ತೋರಿಸುತ್ತಾನೆ), ‘ಮೋದಿ ಮೌಜ್ ಕರ್‌ನೆ ಕೆ ಲಿಯೇ ಪೈದಾ ನಹೀ ಹುವಾ ಹೈ’ (ಮೋದಿ ಮಜಾ ಮಾಡಲು ಹುಟ್ಟಿಬಂದಿಲ್ಲ)... ಇದು ಅವರ ಶೈಲಿ. ಬಿಜೆಪಿಯ 2024ರ ಚುನಾವಣಾ ಪ್ರಣಾಳಿಕೆಯ ಶೀರ್ಷಿಕೆಯು ಕೂಡ ‘ಮೋದಿ ಕಿ ಗ್ಯಾರಂಟಿ’.

ADVERTISEMENT

ಮೋದಿಯವರಿಗೆ ತಮ್ಮ ಸಚಿವ ಸಂಪುಟ ಅಥವಾ ತಮ್ಮ ಪಕ್ಷ ಎಲ್ಲವೂ ಗೌಣ. ಎಲ್ಲ ಸಾಧನೆಗಳೂ ತಮ್ಮವು, ಎಲ್ಲ ಆಶ್ವಾಸನೆಗಳೂ ತಾವೊಬ್ಬರೇ ನೀಡುವಂಥವು. ಒಬ್ಬ ಪ್ರಧಾನಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿಷಯದಲ್ಲಿ ಪಾಲಿಸಬೇಕಾದ ಸಾಂವಿಧಾನಿಕ ಶಿಷ್ಟಾಚಾರವನ್ನೂ ಮೋದಿ ಹಲವು ಬಾರಿ ಪಾಲಿಸಿಲ್ಲ. ವಿನಮ್ರತೆ ಮತ್ತು ಅಹಂಕಾರಶೂನ್ಯತೆಯು ಒಬ್ಬ ಆದರ್ಶ ನಾಯಕನ ಸದ್ಗುಣಗಳು ಎಂದು ಹಿಂದೂ ಧರ್ಮಶಾಸ್ತ್ರಗಳು ಹೇಳುತ್ತವೆ. ಮೋದಿಯವರ ಹಿಂದುತ್ವ ಇದನ್ನು ಒಪ್ಪುವುದಿಲ್ಲ.

ಇಷ್ಟೊಂದು ಅತಿಯಾದ ಸ್ವನಾಮಪ್ರೇಮದ ಹಿಂದೆ ಒಂದು ನಿರ್ವಿವಾದವಾದ ಸರ್ವಾಧಿಕಾರಿ ಪ್ರವೃತ್ತಿಯಿದೆ. ನಮ್ಮಲ್ಲಿ ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದರೂ ಇಂದು ಭಾರತ ‘ಒಂದು ದೇಶ, ಒಬ್ಬನೇ ನಾಯಕ’ ಎಂಬ ದಿಕ್ಕಿನಲ್ಲಿ ಸಾಗಿದೆ. ಮೋದಿಯವರು ಒಮ್ಮೆ ಸಂಸತ್ತಿನಲ್ಲಿಯೇ ವಿರೋಧ ಪಕ್ಷಗಳನ್ನು ಉದ್ದೇಶಿಸಿ ‘ಏಕ್ ಅಕೇಲಾ ಮೋದಿ ಸಬ್‌ ಪರ್ ಭಾರಿ’ (ನಿಮ್ಮೆಲ್ಲರನ್ನೂ ಮೂಲೆಗುಂಪು ಮಾಡಲು ಮೋದಿಯೊಬ್ಬನೇ ಸಾಕು) ಎಂದು ಎದೆ ತಟ್ಟಿಕೊಳ್ಳುತ್ತಾ ಗರ್ಜಿಸಿದ್ದರು. ಹಿಂದಿನ ಹತ್ತು ವರ್ಷಗಳಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೆ ದನಿಯೇ ಇಲ್ಲ. ಅವುಗಳೇನಾದರೂ ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿ ಮಾಡಿದರೆ, ಬಿಜೆಪಿ ಸದಸ್ಯರು ಪ್ರಧಾನಿಯವರ ಸಮ್ಮುಖದಲ್ಲಿಯೇ ‘ಮೋದಿ, ಮೋದಿ’ ಎಂದು ಕೂಗಾಡತೊಡಗುತ್ತಾರೆ.

ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್‌ ನೆಹರೂ ಅವರು ಪ್ರಸಿದ್ಧ ಫ್ರೆಂಚ್ ಚಿಂತಕ ವೋಲ್ಟೇರ್‌ ಅವರ ಒಂದು ವಾಕ್ಯವನ್ನು ಪದೇ ಪದೇ ಹೇಳುತ್ತಿದ್ದರು- ‘ಐ ಡಿಸ್‌ಅಪ್ರೂವ್‌ ಆಫ್‌ ವಾಟ್‌ ಯೂ ಸೇ, ಬಟ್‌ ವಿಲ್‌ ಡಿಫೆಂಡ್‌ ಟು ದಿ ಡೆತ್‌ ಯುವರ್‌ ರೈಟ್‌ ಟು ಸೇ ಇಟ್‌’ (ನೀನು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ಅದನ್ನು ಹೇಳುವ ನಿನ್ನ ಹಕ್ಕನ್ನು ನನ್ನ ಪ್ರಾಣವನ್ನೇ ಪಣಕ್ಕಿಟ್ಟಾದರೂ ರಕ್ಷಿಸುವೆ). ನೆಹರೂ ಅವರ ಕಾಲದಿಂದ ಮೋದಿ ಅವರ ಕಾಲದವರೆಗೆ ನಮ್ಮ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಎಷ್ಟೊಂದು ತಳಮಟ್ಟಕ್ಕೆ ತಲುಪಿವೆ ಎಂದು ಯೋಚಿಸಿದರೆ ಅತೀವ ಚಿಂತೆಯಾಗುತ್ತದೆ.

ನಮ್ಮ ಸಂವಿಧಾನವು ಭಾರತವನ್ನು ‘ರಾಜ್ಯಗಳ ಒಕ್ಕೂಟ’ ಎಂದು ಪರಿಗಣಿಸಿದೆ. ಆದರೆ ಮೋದಿ ನೇತೃತ್ವದಲ್ಲಿ ರಾಜ್ಯಗಳ ಅಧಿಕಾರ ದಿನೇದಿನೇ ಕುಗ್ಗುತ್ತಿದೆ. 2014ಕ್ಕಿಂತ ಮೊದಲು ಮೋದಿಯವರೇ ‘ನಾನು ರಾಜ್ಯಗಳಿಗೆ ಪ್ರೋತ್ಸಾಹ, ಸಹಕಾರ ನೀಡುತ್ತೇನೆ’ ಎಂದು ಗ್ಯಾರಂಟಿ ನೀಡಿದ್ದಲ್ಲದೆ ‘ಟೀಮ್ ಇಂಡಿಯಾ= ಪ್ರಧಾನಮಂತ್ರಿ + ಮುಖ್ಯಮಂತ್ರಿಗಳು’ ಎಂಬ ಆಶ್ವಾಸನೆಯನ್ನು ಕೂಡ ಕೊಟ್ಟಿದ್ದರು. ಆದರೆ ಇಂದು ಬಿಜೆಪಿಯನ್ನು ವಿರೋಧಿಸುವ ಪಕ್ಷಗಳಿಗೆ ಸೇರಿದ ಮುಖ್ಯಮಂತ್ರಿಗಳನ್ನು ಹೀಯಾಳಿಸುವುದಷ್ಟೇ ಅಲ್ಲ, ಬಿಜೆಪಿ ಅಥವಾ ಬಿಜೆಪಿ ಬೆಂಬಲಿತ ಮುಖ್ಯಮಂತ್ರಿಗಳಿಗೂ ಏನೂ ಕಿಮ್ಮತ್ತಿಲ್ಲದಂತೆ ಮಾಡಿದ್ದಾರೆ. ಮತ್ತೊಂದು ವಿಷಯ ಗಮನಾರ್ಹ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು ‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನಾ’, ‘ಪ್ರಧಾನಮಂತ್ರಿ ಜನಧನ ಯೋಜನಾ’ ಎಂಬಂತಹ ಪ್ರಧಾನಿ ಕೇಂದ್ರಿತ ನಾಮಾಂಕಿತವನ್ನೇ ಹೊಂದಿವೆ. ಇವೆಲ್ಲವುಗಳಲ್ಲಿ ಮೋದಿಯವರದೇ ಚಿತ್ರ, ಅವರದೇ ಸತತ ಪ್ರಚಾರ.

ಇಂದು ನಡೆದಿರುವ ಮೋದಿಯವರ ವೈಭವೀಕರಣದ ಮಾದರಿಯು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಸ್ಕೃತಿಯಲ್ಲಿ ಈ ಮೊದಲು ಇರಲಿಲ್ಲ. ಆರ್‌ಎಸ್‌ಎಸ್‌ ಕಲಿಸುವ ಒಂದು ಒಳ್ಳೆಯ ಸಂಸ್ಕಾರವೆಂದರೆ ವಿನಯ, ‘ನಾನಲ್ಲ, ನಾವು’ ಎಂಬ ಸಾಮೂಹಿಕತೆಯ ಮಂತ್ರ. ಅಲ್ಲಿ ಸ್ವಪ್ರಶಂಸೆಗೆ ಸ್ಥಾನವಿಲ್ಲ, ವ್ಯಕ್ತಿಪೂಜೆಗಂತೂ ಇಲ್ಲವೇ ಇಲ್ಲ. ‘ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಸೆಲ್ಫ್ ಲಾಸ್ಟ್‌’ (ರಾಷ್ಟ್ರ ಮೊದಲು, ಪಕ್ಷ ನಂತರ, ನಾನೆಂಬುದು ಕೊನೆಗೆ). ಇದು, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಅವರ ಕಾಲದಲ್ಲಿ ಬಿಜೆಪಿಯ ಮೂಲಮಂತ್ರವಾಗಿತ್ತು. ಮೋದಿಯವರು ‘ರಾಷ್ಟ್ರಕ್ಕಿಂತ ನಾನು ಮೊದಲು’ ಎಂದು ಹೇಳಿಲ್ಲದಿದ್ದರೂ ‘ಪಕ್ಷಕ್ಕಿಂತ ನಾನೇ ಮೊದಲು’ ಎಂಬುದನ್ನು ತಮ್ಮ ಮಾತಿನಿಂದ, ಆಚರಣೆಯಿಂದ ಸಾರಿ ಸಾರಿ ಹೇಳುತ್ತಿದ್ದಾರೆ. ಅವರ ಭಕ್ತರಂತೂ ‘ಮೋದಿಯವರೇ ರಾಷ್ಟ್ರ, ರಾಷ್ಟ್ರವೇ ಮೋದಿ’ ಎಂದು ನಂಬಿದ್ದಾರೆ. ಏಕೆಂದರೆ, ಮೋದಿಯವರನ್ನು ಟೀಕಿಸುವವರನ್ನೆಲ್ಲ ಅವರು ರಾಷ್ಟ್ರದ್ರೋಹಿಗಳೆಂದು ತೆಗಳುತ್ತಾರೆ. ಕಂಗನಾ ರನೌತ್ ಅಂತಹವರಂತೂ ಮೋದಿಯವರನ್ನು ವಿಷ್ಣುವಿನ ಅವತಾರ ಎಂದೇ ಘೋಷಿಸಿದ್ದಾರೆ.

ಬಿಜೆಪಿ ಹಿಂದಿಗಿಂತಲೂ ಈಗ ಎಷ್ಟು ಬದಲಾಗಿದೆ ಎಂಬುದಕ್ಕೆ ನನ್ನದೇ ಒಂದು ಅನುಭವವನ್ನು ಹೇಳಬಯಸುತ್ತೇನೆ. ನಾನು ಹದಿನಾರು ವರ್ಷ ಬಿಜೆಪಿ ಕಾರ್ಯಕರ್ತನಾಗಿದ್ದವನು. ಆ ಅವಧಿಯಲ್ಲಿ ಆರು ವರ್ಷಗಳ ಕಾಲ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದೇನೆ. 2004ರ ಲೋಕಸಭಾ ಚುನಾವಣೆ ವೇಳೆ ಆಗಿನ ಹಿರಿಯ ಸಚಿವ ಪ್ರಮೋದ್ ಮಹಾಜನ್‌ ಅವರ ಮನೆಯಲ್ಲಿ ‘ವಾರ್ ರೂಮ್’ ನಿರ್ವಹಣೆಯ ಜವಾಬ್ದಾರಿ ನನ್ನದಾಗಿತ್ತು. ನಾವು ವಾಜಪೇಯಿ ನೇತೃತ್ವದ ಸರ್ಕಾರದ ವಿವಿಧ ಸಾಧನೆಗಳನ್ನು ವಿವರಿಸುವ ಒಂದು ಆಕರ್ಷಕ ಪುಸ್ತಕವನ್ನು ಸಿದ್ಧಪಡಿಸಿದೆವು. ಅದರ ಪ್ರತಿಯೊಂದು ಪುಟದಲ್ಲಿಯೂ ಅಟಲ್‌ಜಿ ಅವರ ಸುದೀರ್ಘ ರಾಜಕೀಯ ಜೀವನ ಪಯಣದ ಚಿತ್ರಗಳನ್ನು ಬಳಸಿದ್ದೆವು. ಆ ಪುಸ್ತಕವನ್ನು ಅತ್ಯಂತ ಹೆಮ್ಮೆಯಿಂದ ನಾನು ಪ್ರಧಾನಿಯವರಿಗೆ ತೋರಿಸಲು ಹೋದೆ. ಅವರು ಅದನ್ನು ನೋಡಿ, ತೀವ್ರ ಅಸಮಾಧಾನದಿಂದ ನನ್ನತ್ತ ಹೊರಳಿ ‘ಇದೇನು ಮಾಡಿರುವಿರಿ? ಪುಸ್ತಕದುದ್ದಕ್ಕೂ ನನ್ನ ಚಿತ್ರಗಳೇ ಕಾಣುತ್ತಿವೆ. ನಾನೊಬ್ಬನೇ ಸರ್ಕಾರವೇ? ಬೇರೆ ಮಂತ್ರಿಗಳು ಏನೂ ಮಾಡಿಲ್ಲವೇ? ಇದನ್ನು ಕೂಡಲೇ ಬದಲಿಸಿ’ ಎಂದು ತಾಕೀತು ಮಾಡಿದರು. ಇಂದು ನೋಡಿದರೆ ಮೋದಿಯವರೇ ಸರ್ವತ್ರ, ಮೋದಿಯವರೇ ಸರ್ವಸ್ವ.

ಸ್ಟಾಲಿನ್- ಮಾವೊ ಕಾಲದಲ್ಲಿ ಇದ್ದಂತಹ ವ್ಯಕ್ತಿಪೂಜೆಯು ಭಾರತದಲ್ಲಿ ಇಂದಿಗೂ ಮೋದಿಯವರ ಈ ಕಾಲದಲ್ಲೂ ಆಗಿಲ್ಲ. ಆದರೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯದೇ ಹೋದರೆ ಹಾಗೂ ಅದರಿಂದಾಗಿ ಬಿಜೆಪಿಯವರ ‘ಚಾರಸೋ ಪಾರ್’ (ಈ ಬಾರಿ 400ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವೆವು) ಎಂಬ ದರ್ಪೋಕ್ತಿಯು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಿದರೆ, ಭಾರತದಲ್ಲಿ ಏಕಾಧಿಕಾರಶಾಹಿ ಇನ್ನೂ ಹೆಚ್ಚು ಪ್ರಬಲಗೊಳ್ಳಲಿದೆ ಎಂಬುದನ್ನು ನಾವು ಮರೆಯಬಾರದು.

ಮೋದಿಯವರು ಮೂರನೇ ಬಾರಿ ದೇಶದ ನಾಯಕತ್ವ ವಹಿಸಿಕೊಳ್ಳುವರೋ ಇಲ್ಲವೋ ಎಂಬುದನ್ನು ನಿರ್ಣಯಿಸುವವರು ಪ್ರಜೆಗಳು. ಆದರೆ ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಉಳಿಯಬೇಕಾದರೆ, ಬೆಳೆಯಬೇಕಾದರೆ ಪ್ರಧಾನಮಂತ್ರಿ ನಿರಂಕುಶನಾಗಿ ಇರಬಾರದು. ಇದನ್ನು ಖಾತರಿಪಡಿಸುವ ಶಕ್ತಿಯೂ ಪ್ರಜೆಗಳಿಗಿದೆ. ಈ ಶಕ್ತಿಯನ್ನು ಅವರು 2024ರ ಚುನಾವಣೆಯಲ್ಲಿ ಸಾಬೀತು ಮಾಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.