ಮಂಗಳೂರು: ‘ಕೇಂದ್ರದ 2019 ರ ಬಜೆಟ್ ಈ ಹಿಂದೆ ಮಂಡಿಸಿದ ಮಧ್ಯಂತರ ಬಜೆಟ್‌ಗೆ ಪೂರಕವಾಗಿದೆ. ಒಟ್ಟಾರೆ ಶುಕ್ರವಾರ ಮಂಡಿಸಿದ ಕೇಂದ್ರ ಬಜೆಟ್ ಬಡವರಿಗೆ ಮತ್ತು ಮಧ್ಯಮ ವರ್ಗಕ್ಕೆ ಒಳ್ಳೆಯ ಬಜೆಟ್. ‘ಬಡವರಿಗೆ ಬಂಪರ್, ಮಧ್ಯಮ ವರ್ಗದವರಿಗೆ ಮಂಪರ್, ಶ್ರೀಮಂತರಿಗೆ ಪಂಚರ್’ ಆಗಿ ಪರಿಣಮಿಸಿಲಿದೆ ಈ ಬಾರಿಯ ಕೇಂದ್ರದ ಬಜೆಟ್ ಎಂದು ಮಂಗಳೂರಿನ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯ ಉಪಾಧ್ಯಕ್ಷ ಎಸ್.ಎಸ್. ನಾಯಕ್ ವಿಶ್ಲೇಷಿಸಿದರು.
ಬಜೆಟ್ ಮಂಡನೆ ಬಳಿಕ ‘ಪ್ರಜಾವಾಣಿ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿಪ್ರಜಾವಾಣಿ ಪ್ರತಿನಿಧಿ ಮಹೇಶ್ ಕನ್ನೇಶ್ವರ ಅವರ ಜತೆ ಮಾತನಾಡಿ ವಿಶ್ಲೇಷಣೆ ಮಾಡಿದರು.
₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಸಂಪೂರ್ಣವಾದ ತೆರಿಗೆ ವಿನಾಯಿತಿ ನೀಡಲಾಗಿದೆ. ₹ 5.10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ತೆರಿಗೆ ಹೊರೆ ಆಗಲಿದೆ. ಮಹಿಳೆ ಮತ್ತು ಶಿಕ್ಷಣ ಅಭಿವೃದ್ಧಿಗೂ ಬಜೆಟ್‌ನಲ್ಲಿ ಕೊಡುಗೆ ನೀಡಲಾಗಿದೆ ಎಂದು ಅವರು ಹೇಳಿದರು.
‘ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ದೊರಕುವ ಬ್ಯಾಂಕ್ ಸಾಲಗಳಿಗೆ ₹ 1.5 ಲಕ್ಷದವರಿಗೆ ತೆರಿಗೆ ರಿಯಾಯಿತಿ ನೀಡಲಾಗುತ್ತಿರುವುದರಿಂದ ಇದೊಂದು ಹಸಿರು ಬಜೆಟ್. ಕೈಗೆಟುಕುವ ವಸತಿ ಸಾಲ ಮಧ್ಯಮ ವರ್ಗದವರಿಗೆ ಉತ್ತಮ ಯೋಜನೆಯಾಗಿದ್ದು, ₹ 45 ಲಕ್ಷದವರೆಗಿನ ಗೃಹ ಸಾಲಗಳ ಮೇಲೆ ₹ 1.5 ಲಕ್ಷ ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲಾಗಿದೆ. ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಬ್ಯಾಂಕ್‌ಗಳ ಮೂಲಕ ಮರು ಬಂಡವಾಳದ ವಿಷಯದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದು ಎಸ್.ಎಸ್. ನಾಯಕ್ ವಿವರಿಸಿದರು.
ಎಂಎಸ್‌ಇಗೆ ಬ್ಯಾಂಕ್‌ಗಳು ನೀಡುವ ಸಾಲ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ನಗದು ಆರ್ಥಿಕತೆಯ ಮೇಲೆ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲು, ₹1 ಕೋಟಿಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ಹಿಂತೆಗೆದುಕೊಳ್ಳುವುದನ್ನು ಶೇ 2 ಟಿಡಿಎಸ್‌ಗೆ ಒಳಪಡಿಸಲಾಗುತ್ತದೆ. ಶೇ 25 ತೆರಿಗೆ ಸ್ಲ್ಯಾಬ್‌ಅನ್ನು ₹ 250 ಕೋಟಿಯಿಂದ ₹ 400 ಕೋಟಿಗೆ ಹೆಚ್ಚಿಸಿರುವುದರಿಂದ ಕಾರ್ಪೊರೇಟ್ ಕಂಪನಿಗಳಿಗೆ ಪ್ರತಿಕೂಲವಾಗಿದೆ. ಪ್ರಧಾನ ಮಂತ್ರಿ ಕರ್ಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯನ್ನು ₹ 1.4 ಕೋಟಿಗಳವರೆಗೆ ವಾರ್ಷಿಕ ವಹಿವಾಟು ಹೊಂದಿರುವ ವ್ಯಾಪಾರಿಗಳಿಗೆ ವಿಸ್ತರಿಸಲಾಗಿದ್ದು, ಇದು ಶ್ಲಾಘನೀಯ ಎಂದು ಅವರು ವಿಶ್ಲೇಷಣೆ ಮಾಡಿದರು.
ಈ ಮಧ್ಯೆ ಕೆಲವು ವರ್ಗಗಳಿಗೂ ಕೆಲವು ತೆರಿಗೆ ಹೊರೆ. ₹1 ಕೋಟಿಗಿಂತ ಹೆಚ್ಚಿನ ಆದಾಯದ ಮೇಲೆ ತೆರಿಗೆಯನ್ನು ಹೆಚ್ಚಿಸಲಾಗುತ್ತದೆ. ಗೋಡಂಬಿ ಮೇಲಿನ ಆಮದು ಸುಂಕ ಹೆಚ್ಚಳವು ಗೋಡಂಬಿ ಕೈಗಾರಿಕೆಗಳಿಗೆ ಹೊರೆ ಆಗುತ್ತದೆ. ಅಲ್ಲದೆ, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾದ ಹೆಚ್ಚುವರಿ ಸೆಸ್ ಹೆಚ್ಚಿನ ಹೊರೆ ಆಗಲಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.