ADVERTISEMENT

ಪ್ರಜಾವಾಣಿ ಚರ್ಚೆ: ಸಿಬಿಐ ವಿಶ್ವಾಸಾರ್ಹತೆ ಕುಗ್ಗಿಸುತ್ತಿರುವ ರಾಜಕೀಯ ಹಸ್ತಕ್ಷೇಪ

ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ಮುಕ್ತ ಅವಕಾಶ ಇರಬೇಕೇ?

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 21:30 IST
Last Updated 12 ನವೆಂಬರ್ 2021, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ದೆಹಲಿ ವಿಶೇಷ ಪೊಲೀಸ್‌ (ಡಿಎಸ್‌ಪಿಇ) ಕಾಯ್ದೆ–1946’ರ ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತಿದೆ. ಸಂವಿಧಾನದ ಪ್ರಕಾರ ಪೊಲೀಸಿಂಗ್‌ ರಾಜ್ಯ ಪಟ್ಟಿಯಲ್ಲಿದೆ. ಭೌಗೋಳಿಕ ವ್ಯಾಪ್ತಿಯ ಆಧಾರದಲ್ಲೇ ಪೊಲೀಸಿಂಗ್‌ ಕೆಲಸದ ಅಧಿಕಾರ ನಿರ್ಣಯವಾಗುತ್ತದೆ. ಪಟ್ಟಿ ಎರಡರಲ್ಲಿರುವ ಈ ವಿಷಯದ ಮೇಲೆ ರಾಜ್ಯಗಳು ಸಂಪೂರ್ಣ ಅಧಿಕಾರ ಹೊಂದಿವೆ. ಈ ಕಾರಣಕ್ಕಾಗಿ ಯಾವುದೇ ರಾಜ್ಯದೊಳಗೆ ಕೇಂದ್ರದ ಪೊಲೀಸ್‌ ಏಜೆನ್ಸಿಗಳು ನೇರವಾಗಿ ತನಿಖೆ ನಡೆಸಲು ಸಂವಿಧಾನದಲ್ಲೇ ಅವಕಾಶವಿಲ್ಲ. ರಾಜ್ಯಗಳು ಸಮ್ಮತಿಸಿದರೆ ಮಾತ್ರವೇ ಕೇಂದ್ರದ ಏಜೆನ್ಸಿಗಳು ಅಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಈ ಕಾರಣಕ್ಕಾಗಿ ಡಿಎಸ್‌ಪಿಇ ಕಾಯ್ದೆಯ ಸೆಕ್ಷನ್‌ 6ರ ಪ್ರಕಾರ, ತನಿಖೆ ನಡೆಯಲಿರುವ ರಾಜ್ಯಕ್ಕೆ ಸಿಬಿಐ ಅಧಿಕಾರಿಗಳು ಪತ್ರ ಬರೆದು ಅನುಮತಿ ಕೋರಬೇಕಾಗುತ್ತದೆ. ರಾಜ್ಯವು ಅನುಮತಿಸಿದರೆ ಸಿಬಿಐಗೆ ತನಿಖೆ ನಡೆಸುವ ಅಧಿಕಾರ ಬರುತ್ತದೆ. ರಾಜ್ಯವು ಅನುಮತಿಸಿದ ಬಳಿಕ ಕೇಂದ್ರ ಸರ್ಕಾರವು ಡಿಎಸ್‌ಪಿಇ ಕಾಯ್ದೆಯ ಸೆಕ್ಷನ್‌ 5ರ ಅಡಿಯಲ್ಲಿ ಸಂಬಂಧಿಸಿದ ರಾಜ್ಯದೊಳಗೆ ಹೋಗಿ ತನಿಖೆ ನಡೆಸಲು ಸಿಬಿಐಗೆ ಅಧಿಕಾರ ನೀಡಿ ಅಧಿಸೂಚನೆಯೊಂದನ್ನು ಹೊರಡಿಸಬೇಕು. ಆ ಬಳಿಕವೇ ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ಅವಕಾಶ ಲಭಿಸುತ್ತದೆ.

ಸಿಬಿಐ ಹೆಚ್ಚಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುತ್ತದೆ. ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನೂ ನಡೆಸುತ್ತದೆ. ಉಳಿದಂತೆ ವಿಶೇಷ ಸಂದರ್ಭಗಳಲ್ಲಿ ಭಾರತೀಯ ದಂಡ ಸಂಹಿತೆ ಅಡಿ ದಾಖಲಾದ ಪ್ರಕರಣಗಳ ತನಿಖೆಯನ್ನೂ ನಡೆಸುತ್ತದೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುವುದೇ ಸಿಬಿಐನ ಮುಖ್ಯ ಕೆಲಸ. ಇಂತಹ ಪ್ರಕರಣಗಳ ತನಿಖೆಯಲ್ಲಿ ರಾಜ್ಯದ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ನಡುವಿನ ಸಮನ್ವಯಕ್ಕಾಗಿ ಸಿಬಿಐ ಕಾರ್ಯನಿರ್ವಹಣಾ ಕೈಪಿಡಿಯಲ್ಲೇ ಒಂದು ಸೆಕ್ಷನ್‌ ಇದೆ. ಅದರ ಪ್ರಕಾರ, ಯಾವುದೇ ರಾಜ್ಯದೊಳಗಿನ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಅಧಿಕಾರಿಗಳ ವಿರುದ್ಧದ ಪ್ರಕರಣಗಳನ್ನು ಮಾತ್ರ ಸಿಬಿಐ ತನಿಖೆ ನಡೆಸುತ್ತದೆ. ರಾಜ್ಯಗಳ ಅಧಿಕಾರಿಗಳು ಅಥವಾ ರಾಜ್ಯ ಪೊಲೀಸರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ನೇರವಾಗಿ ಕೈಗೆತ್ತಿಕೊಳ್ಳುವುದಿಲ್ಲ. ಶೇಕಡ 99ರಷ್ಟು ಪ್ರಕರಣಗಳಲ್ಲಿ ಈ ರೀತಿಯೇ ನಡೆಯುತ್ತದೆ. ಕೇಂದ್ರದ ಅಧಿಕಾರಿಗಳು ಮತ್ತು ಆ ರಾಜ್ಯದ ಅಧಿಕಾರಿಗಳು ಅಥವಾ ಜನರು ಶಾಮೀಲಾಗಿ ನಡೆಸಿದಂತಹ ಕೃತ್ಯಗಳ ಬಗ್ಗೆ ಮಾತ್ರ ಸಿಬಿಐ ತನಿಖೆಗೆ ಮುಂದಾಗುತ್ತದೆ. ಇದೇ ರೀತಿ ಯಾವಾಗಲೂ ನಡೆದುಕೊಂಡು ಬಂದಿತ್ತು.

ಹಿಂದೆ ಹೆಚ್ಚಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆಯಷ್ಟೇ ಸಿಬಿಐಗೆ ಬರುತ್ತಿತ್ತು. ಇತ್ತೀಚಿನ ದಶಕಗಳಲ್ಲಿ ರಾಜಕೀಯ ನಂಟು ಹೊಂದಿರುವ ಅಥವಾ ಸಮಾಜದಲ್ಲಿ ಅತಿಯಾದ ಪ್ರಚಾರ ಪಡೆದ ಪ್ರಕರಣಗಳ (ಉದಾಹರಣೆಗೆ ಚಿತ್ರನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ) ತನಿಖೆಯನ್ನೂ ಸಿಬಿಐಗೆ ವಹಿಸಲಾಗುತ್ತಿದೆ. ಇತ್ತೀಚಿನ ದಶಕಗಳಲ್ಲಿ ಚುನಾವಣೆಗಳು ಸಮೀಪಿಸಿದ ತಕ್ಷಣವೇ ಕೆಲವು ಪ್ರಕರಣಗಳ ತನಿಖೆಯಲ್ಲಿ ದಿಢೀರ್‌ ಕ್ರಮಗಳನ್ನು ಕೈಗೊಳ್ಳುವುದು ಹೆಚ್ಚುತ್ತಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಶಾರದಾ ಚಿಟ್‌ಫಂಡ್‌ ಹಗರಣ ಮತ್ತು ನಾರದಾ ಹಗರಣಗಳ ವಿಚಾರದಲ್ಲಿ ಕೈಗೊಂಡ ಕ್ರಮಗಳು ಇದಕ್ಕೆ ಉದಾಹರಣೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ವಿರೋಧ ಪಕ್ಷದ ಮುಖಂಡರ ವಿರುದ್ಧದ ಪ್ರಕರಣಗಳ ತನಿಖೆ ದಿಢೀರ್‌ ಚುರುಕಾಯಿತು. ರಾಜಕಾರಣದಲ್ಲಿ ಸಕ್ರಿಯವಾಗಿದ್ದವರನ್ನು ಕರೆಸಿ ದಿನಕ್ಕೆ ಎಂಟು ಗಂಟೆಗಳವರೆಗೆ ವಿಚಾರಣೆ ನಡೆಸಲಾಯಿತು. ಈ ಬಗ್ಗೆ ಮಾಹಿತಿಯನ್ನು ಮಾಧ್ಯಮಗಳಿಗೂ ಸೋರಿಕೆ ಮಾಡಲಾಯಿತು. ಇಂತಹ ಬೆಳವಣಿಗೆಗಳೇ ಸಿಬಿಐ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದವು ಎಂಬುದನ್ನು ಒಪ್ಪಲೇಬೇಕು. ಇದು ಒಂದು ಪಕ್ಷದ ನೇತೃತ್ವದ ಸರ್ಕಾರಕ್ಕೆ ಸೀಮಿತವಾಗಿಲ್ಲ. ಕೆಲವು ದಶಕಗಳಿಂದ ಈಚೆಗೆ ಕೇಂದ್ರ ಸರ್ಕಾರವನ್ನು ಮುನ್ನಡೆಸಿದ ಎಲ್ಲ ಪಕ್ಷಗಳೂ ಸಿಬಿಐ ಅನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿವೆ. ಹೀಗಾಗಿ ಜನರಲ್ಲಿ ಸಿಬಿಐ ಕುರಿತ ವಿಶ್ವಾಸ ಕಳೆದುಹೋಗಿದೆ.‌ ಮೊದಲು ಬಹುತೇಕ ರಾಜ್ಯಗಳು ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ಕೇಂದ್ರದ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಮುಕ್ತ ಅನುಮತಿ ನೀಡಿದ್ದವು. ಆದರೆ, ತನಿಖಾ ಸಂಸ್ಥೆಯನ್ನು ರಾಜಕೀಯ ದಾಳವಾಗಿ ಬಳಕೆ ಮಾಡಲಾಗುತ್ತಿದೆ ಎಂಬ ಭಾವನೆ ಗಟ್ಟಿಯಾದ ಬಳಿಕ ಹೆಚ್ಚಿನ ರಾಜ್ಯಗಳು ಮುಕ್ತ ಅನುಮತಿಯನ್ನು ಹಿಂಪಡೆದು ಆದೇಶ ಹೊರಡಿಸಿವೆ.

ADVERTISEMENT

ಸಿಬಿಐ ಮಾತ್ರವಲ್ಲ ಯಾವುದೇ ಸಂಸ್ಥೆ ಅಥವಾ ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಬೇಕು. ಯಾವುದೇ ತನಿಖಾ ಸಂಸ್ಥೆಯೂ ಒಂದು ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಸಂವಿಧಾನ ಮತ್ತು ಕಾನೂನಿನ ಪ್ರಕಾರವೇ ಕೆಲಸ ಮಾಡಬೇಕು. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಕಷ್ಟ. ಸಿಬಿಐ ಮಾತ್ರವಲ್ಲ ಯಾವುದೇ ತನಿಖಾ ಸಂಸ್ಥೆಯ ಮುಖ್ಯಸ್ಥರು ಗಟ್ಟಿ ನಿಲುವು ತಾಳಿದರೆ ವಿಶ್ವಾಸ ಉಳಿಸಿಕೊಳ್ಳುವುದು ಕಷ್ಟವಲ್ಲ. ಯಾವುದೇ ರಾಜಕಾರಣಿ ಅಥವಾ ಪ್ರಭಾವಿ ವ್ಯಕ್ತಿಗಳು ಹೇಳಿದರೂ ಮಣಿಯದೆ ಕಾನೂನು ಮತ್ತು ಸಂವಿಧಾನದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಬದ್ಧತೆಯನ್ನು ತನಿಖಾ ಸಂಸ್ಥೆಗಳ ಮುಖ್ಯಸ್ಥರು ತೋರಿಸಬೇಕು. ಆಗ, ಸಿಬಿಐನಂತಹ ಸಂಸ್ಥೆಗಳ ಕುರಿತು ಜನರಲ್ಲಿ ಇಂತಹ ಭಾವನೆ ಬರುವುದಿಲ್ಲ. ಕೆಲವು ರಾಜ್ಯಗಳು ಸಿಬಿಐ ತನಿಖೆಗೆ ನೀಡಿದ್ದ ಮುಕ್ತ ಅನುಮತಿಯನ್ನು ಹಿಂಪಡೆದಿರುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ‘ಈ ಬೆಳವಣಿಗೆ ಸರಿಯಾದುದಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನಿಜ, ಇಂತಹ ಬೆಳವಣಿಗೆ ನಡೆಯುತ್ತಿರುವುದು ದುರದೃಷ್ಟಕರ. ಇದು ಸಾಮಾನ್ಯ ಜನರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಸಿಬಿಐ ಸೇರಿದಂತೆ ಎಲ್ಲ ಕಡೆಗಳಲ್ಲೂ ‘ಮಾತು ಕೇಳುವವರು’ ಬೇಕೆಂಬ ಧೋರಣೆ ಹೆಚ್ಚುತ್ತಿದೆ. ನಿವೃತ್ತಿ ನಂತರದ ಹುದ್ದೆಗಳ ಆಮಿಷವೊಡ್ಡಿ ಕೆಲಸ ಮಾಡಿಸುತ್ತಿರುವುದೂ ಸಂಸ್ಥೆಯ ವಿಶ್ವಾಸಾರ್ಹತೆ ಕುಗ್ಗಿಸುತ್ತಿದೆ. ಅನೇಕ ಸಂದರ್ಭಗಳಲ್ಲಿ, ಅಧಿಕಾರದಲ್ಲಿರುವವರ ಹಸ್ತಕ್ಷೇಪ ಅಥವಾ ಧೋರಣೆಗಳನ್ನು ಪ್ರಶ್ನಿಸಲು, ವಿರೋಧಿಸಲು ಹೆಚ್ಚಿನ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಮೌನಕ್ಕೆ ಶರಣಾಗುವವರೂ ಇದ್ದಾರೆ. ಈ ಎಲ್ಲವೂ ಈಗ ಸೃಷ್ಟಿಯಾಗಿರುವ ಪರಿಸ್ಥಿತಿಗೆ ಕಾರಣ. ಸಿಬಿಐ ನಿರ್ದೇಶಕರ ಆಯ್ಕೆ ಹೇಗೆ ನಡೆಯಬೇಕು ಎಂಬುದನ್ನು ವಿನೀತ್‌ ನಾರಾಯಣ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಜಾಗೃತ ಆಯೋಗ ಕೂಡ ಸಿಬಿಐ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸಬೇಕಿದೆ. ಎರಡೂ ಸರಿಯಾಗಿ ಆಗುತ್ತಿಲ್ಲ. ಸಿಬಿಐ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಕುರಿತು ಪ್ರಶ್ನೆಗಳು ಇವೆ. ಸಿಬಿಐನ ವಿವಿಧ ಹುದ್ದೆಗಳಲ್ಲಿ ಯಾರು ಇರಬೇಕು ಎಂಬುದನ್ನು ನಿರ್ದೇಶಕರು ಆಯ್ಕೆಮಾಡುವ ಪದ್ಧತಿ ಇತ್ತು. ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿಗೆ ತಿಲಾಂಜಲಿ ಇಟ್ಟು, ಹೊರಗಿನಿಂದ ಅಧಿಕಾರಿಗಳನ್ನು ನಿಯೋಜಿಸುವುದು ಹೆಚ್ಚಾಗಿದೆ.

ರೂಪಕ್‌ ಕುಮಾರ್‌ ದತ್ತ

‘ಮಾತು ಕೇಳುವವರ’ ಸಂಖ್ಯೆ ಹೆಚ್ಚಿರುವುದೇ ಈಗಿನ ದುಸ್ಥಿತಿಗೆ ಕಾರಣ. ಸಿಬಿಐ ದೇಶದ ಅತ್ಯುನ್ನತ ತನಿಖಾ ಸಂಸ್ಥೆ. ಅದನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಿಸಿದರೆ ಮಾತ್ರ ಸಂಸ್ಥೆಯ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಅಧಿಕಾರದಲ್ಲಿದ್ದವರ ಮಾತು ಕೇಳುವುದಕ್ಕಿಂತಲೂ ಜನರ ಮಾತುಗಳಿಗೆ ಕಿವಿಯಾಗಿ ಕೆಲಸ ಮಾಡಬೇಕು. ಆಗ, ದೇಶದ ಜನರು ಒಕ್ಕೊರಲಿನಿಂದ ಸಿಬಿಐ ಅನ್ನು ನಂಬುವ ವಾತಾವರಣ ನಿರ್ಮಾಣವಾಗುತ್ತದೆ. ಹಾಗೆ ಆದಲ್ಲಿ, ಯಾವ ರಾಜ್ಯವೂ ತಮ್ಮ ವ್ಯಾಪ್ತಿಯಲ್ಲಿ ಸಿಬಿಐ ಕೆಲಸ ಮಾಡುವುದಕ್ಕೆ ವಿರೋಧ ಅಥವಾ ಅಡ್ಡಿಪಡಿಸುವ ಪ್ರಮೇಯವೇ ಉದ್ಭವಿಸಲಾರದು ಎಂಬುದು ನನ್ನ ಭಾವನೆ.

– ಲೇಖಕ: ಸಿಬಿಐನ ನಿವೃತ್ತ ವಿಶೇಷ ನಿರ್ದೇಶಕ, ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ

ನಿರೂಪಣೆ– ವಿ.ಎಸ್‌. ಸುಬ್ರಹ್ಮಣ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.