ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಹಿಂದಿಯಲ್ಲಿ ಅಧ್ಯಯನ ಮಾಡಲು ರಚಿಸಿದ ವೈದ್ಯಕೀಯ ಪಠ್ಯಪುಸ್ತಕಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿನ ತಿಂಗಳಷ್ಟೇ ಭೋಪಾಲ್‌ನಲ್ಲಿ ಬಿಡುಗಡೆ ಮಾಡಿದರು. ದೇಶದಲ್ಲಿ, ಮಧ್ಯಪ್ರದೇಶವೇ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟ ರಾಜ್ಯ ಎಂದಾಗ, ಆ ಮಾತಿನ ಧ್ವನಿ ‘ಉಳಿದ ರಾಜ್ಯಗಳು ಏನು ಮಾಡುತ್ತಿವೆ’ ಎಂದು ಕೇಳುವಂತಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಈ ವರ್ಷದಿಂದಲೇ ಮಧ್ಯಪ್ರದೇಶದ ಆರು ಪಾಲಿಟೆಕ್ನಿಕ್ ಮತ್ತು ಆರು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಿಂದಿಯಲ್ಲೇ ಶಿಕ್ಷಣ ಕೊಡುವುದಾಗಿ ಘೋಷಿಸಿದರು.
ಇದರ ಬೆನ್ನಲ್ಲೇ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್, ಅಲ್ಲಿ ಎಂ.ಬಿ.ಬಿ.ಎಸ್. ಕೋರ್ಸನ್ನು ತಮಿಳು ಮಾಧ್ಯಮದಲ್ಲಿ ಬೋಧಿಸುವ ಸಂಬಂಧವಾಗಿ ಪಠ್ಯಪುಸ್ತಕ ಸಮಿತಿ ರಚಿಸಿರುವುದಾಗಿ ಹೇಳಿದ್ದಾರೆ. ಹಿಂದಿಯಲ್ಲಿ ಎಂ.ಬಿ.ಬಿಎಸ್. ಬೋಧಿಸುವಂತಹ ಪಠ್ಯಗಳು ಪ್ರಕಟವಾಗಿವೆ, ಮಾರುಕಟ್ಟೆಯಲ್ಲೂ ಲಭ್ಯವಿವೆ. ಆ ದಿಸೆಯಲ್ಲಿ ದೊಡ್ಡ ವೈದ್ಯ ತಂಡವೇ ಕೆಲಸ ಮಾಡುತ್ತಿದೆ. ವೈದ್ಯಕೀಯ ನಿಘಂಟುಗಳಿವೆ, ಪರಾಮರ್ಶನ ಗ್ರಂಥಗಳಿವೆ. ಇಡೀ ಹಿಂದಿ ಬೆಲ್ಟ್ ಎಂದರೆ ಬಿಹಾರ, ಛತ್ತೀಸಗಡ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಚಂಡೀಗಡ ಇಲ್ಲೆಲ್ಲ ಆಡಳಿತ ಭಾಷೆ ಹಿಂದಿ.
ಕೇಂದ್ರ ಸರ್ಕಾರವು 1961ರಲ್ಲೇ ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳ ಬಳಕೆಗೆಂದು ಸಮಿತಿಯೊಂದನ್ನು ರಚಿಸಿತ್ತು. ಅದಕ್ಕೆ ಕಾನೂನಿನ ಬೆಂಬಲವೂ ಇತ್ತು. ಇದು ಹಿಂದಿಗೆ ಮಾತ್ರ ಸೀಮಿತವಾಗದೆ, ಬೇರೆ ಬೇರೆ ರಾಜ್ಯ ಭಾಷೆಗಳಿಗೂ ಅನ್ವಯಿಸುವಂಥದ್ದು. ರಾಷ್ಟ್ರವ್ಯಾಪಿ ತಾಂತ್ರಿಕ ಪದಗಳಿಗೆ ಶಿಷ್ಟತೆ ಇರಬೇಕು ಎನ್ನುವುದು ಸಮಿತಿಯ ಗುರಿ. ಆದರೆ ಈ ದಿಸೆಯಲ್ಲಿ ಪ್ರಗತಿ
ಯಾದದ್ದು ಹಿಂದಿಯಲ್ಲಿ ಮಾತ್ರ. ಇದರಡಿಯಲ್ಲಿ ನಿಘಂಟು, ವಿವರಣಕೋಶ, ಪರಾಮರ್ಶನ ಗ್ರಂಥ, ಪಠ್ಯಪುಸ್ತಕಗಳು ಏನೆಲ್ಲ ಹಿಂದಿ ಭಾಷೆಯಲ್ಲಿ ಬಂದವು. ಶಿಕ್ಷಣದ ದೃಷ್ಟಿಯಿಂದ ಇಷ್ಟೆಲ್ಲ ತಯಾರಿ ಹಿಂದಿಯೇತರ ರಾಜ್ಯಗಳಲ್ಲಿ ಆಗಿದೆಯೇ, ಆಗಿದ್ದರೆ ಉಳಿದ ರಾಜ್ಯಗಳೂ ಏಕೆ ‘ನಾವೂ ನಮ್ಮ ಪ್ರಾದೇಶಿಕ ಭಾಷೆಯಲ್ಲಿಯೇ ವೈದ್ಯಶಿಕ್ಷಣ ಕೊಡುತ್ತೇವೆ’ ಎಂದು ಹೇಳುವ ಧೈರ್ಯ ತೋರಲಿಲ್ಲ?
ನಮ್ಮ ರಾಜ್ಯದ ಪರಿಸ್ಥಿತಿಯನ್ನೇ ಗಮನಿಸಿದರೆ, ಮೊದಲಿಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಪಿ.ಯು.ಗೆ ಬಂದಾಗ, ಅದರಲ್ಲೂ ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಾಗ ಬೋಧನೆ ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. ಶೇ 90ರಷ್ಟು ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗುತ್ತಾರೆ. ನಿಧಾನವಾಗಿ ಹೊಂದಿಕೊಳ್ಳು ತ್ತಾರೆ. ಏಕೆಂದರೆ ಕನ್ನಡ ಮಾಧ್ಯಮದಲ್ಲಿ ಪಿ.ಯು. ಹಂತದಲ್ಲಿ ವಿಜ್ಞಾನವನ್ನು ಬೋಧಿಸುವ ಶಿಕ್ಷಣ ಪದ್ಧತಿ ನಮ್ಮಲ್ಲಿ ಇಲ್ಲ. ವೈದ್ಯಕೀಯಕ್ಕೆ ಸೇರಿದ ಮೇಲೆ ಕನ್ನಡ ಸಂಪೂರ್ಣವಾಗಿ ಪಕ್ಕಕ್ಕೆ ಸರಿಯುತ್ತದೆ. ಇಂಥ ಪರಿಸ್ಥಿತಿ ಯಲ್ಲಿ ಏಕಾಏಕಿ ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲಿ ಹೇಳಬೇಕೆಂದರೆ ನಮ್ಮಲ್ಲಿ ಆ ಪ್ರಮಾಣದ ಗ್ರಂಥಗಳು ಕನ್ನಡದಲ್ಲಿ ಇವೆಯೇ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ.
1960- 70ರ ದಶಕಗಳಲ್ಲಿ ಕೇಂದ್ರ ಸರ್ಕಾರವು ಉದಾರ ನೀತಿ ತಳೆದು ಪ್ರಾದೇಶಿಕ ಭಾಷೆಗಳಿಗೆ ದೊಡ್ಡ ಮೊತ್ತದ ಅನುದಾನ ನೀಡಿದಾಗ, ಅದನ್ನು ಒಡನೆಯೇ ವಿಜ್ಞಾನ ಪಠ್ಯಗಳ ರಚನೆಗೆ ಬಳಸಿಕೊಂಡದ್ದು ಮೈಸೂರು ವಿಶ್ವವಿದ್ಯಾಲಯ. ಅಲ್ಲಿ ಪಿ.ಯು.ನಿಂದ ತೊಡಗಿ ಪದವಿ ಮತ್ತು ಸ್ನಾತಕೋತ್ತರ ಪದವಿಯವರೆಗಿನ ಶುದ್ಧ ವಿಜ್ಞಾನದ ಪಠ್ಯಪುಸ್ತಕಗಳು ರಚನೆಯಾದವು. ಕೆಲವು ಅನುವಾದವಾದವು. ಆದರೆ ವೈದ್ಯಕೀಯ ಶಿಕ್ಷಣಕ್ಕೆ ಬೇಕಾಗುವ ಕೃತಿಗಳ ಕಡೆಗೆ ಯಾವ ವಿಶ್ವವಿದ್ಯಾಲಯವೂ ಗಮನ ಕೊಡಲಿಲ್ಲ; ಸರ್ಕಾರಕ್ಕೂ ಆಸಕ್ತಿ ಇರಲಿಲ್ಲ. ಕನ್ನಡಪರ ಹೋರಾಟಗಾರರು ಎಲ್ಲೂ ಇದರ ಪ್ರಸ್ತಾಪ ಮಾಡಲಿಲ್ಲ.
ವಾಸ್ತವ ನೆಲೆಯಲ್ಲಿ ನೋಡಿದರೆ ಕನ್ನಡದಲ್ಲಿ ವೈದ್ಯಸಾಹಿತ್ಯವು ಲೇಖನ ಮತ್ತು ಕೃತಿಗಳ ರೂಪದಲ್ಲಿ ಈಗಲೂ ದೊಡ್ಡ ಪ್ರಮಾಣದಲ್ಲೇ ಹೊರಬರುತ್ತಿದೆ. ಬರೆಯುವವರ ಸಂಖ್ಯೆಯೂ ದೊಡ್ಡದು. ಇಲ್ಲಿ ಎದ್ದುಕಾಣುವುದು ಶಿಕ್ಷಣ ಕ್ಷೇತ್ರದಲ್ಲಿನ ಅವಜ್ಞೆ. ವೈದ್ಯಕೀಯ ಬೋಧನೆಯಲ್ಲಿ ಮತ್ತು ವೈದ್ಯಸಾಹಿತ್ಯ ರಚನೆಯಲ್ಲಿ ಪ್ರಸಿದ್ಧರಾದ ಪ್ರೊ. ಪಿ.ಎಸ್. ಶಂಕರ್ ಈ ಕುರಿತು ವಿಷಾದದಿಂದಲೇ ಹೇಳುತ್ತಾರೆ: ‘1846- 48ರವರೆಗೆ ಆಗಿನ ಹೈದರಾಬಾದ್ ರಾಜ್ಯದಲ್ಲಿ ಉರ್ದು ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಲಾಗುತ್ತಿತ್ತು. ಅಂದರೆ ಉನ್ನತ ವ್ಯಾಸಂಗಕ್ಕೂ ಅಲ್ಲಿ ಭಾಷೆ ಅಡ್ಡ ಬರಲಿಲ್ಲ. ನಮ್ಮಲ್ಲೇಕೆ ಇಂಥ ಪ್ರಯೋಗ
ಗಳಾಗಲಿಲ್ಲ? ಅದು, ನಮ್ಮಲ್ಲಿ ಪಠ್ಯಗಳಿಲ್ಲವೆಂದಲ್ಲ. ಇಚ್ಛಾಶಕ್ತಿಯ ಕೊರತೆ. ಕನ್ನಡವು ವೈದ್ಯಕೀಯವೂ ಸೇರಿದಂತೆ ತಾಂತ್ರಿಕ ಪದಗಳಲ್ಲಿ ಶ್ರೀಮಂತವಾಗಿದೆ’ ಎನ್ನುತ್ತಾರೆ. 80ರ ದಶಕದಲ್ಲೇ ಇವರು ಮಾನವ ಶರೀರ ಕ್ರಿಯಾಶಾಸ್ತ್ರ, ಶರೀರ ರಚನಾಶಾಸ್ತ್ರ, ಹೃದಯ ಕುರಿತು ಆಕರ ಗ್ರಂಥಗಳನ್ನೇ ಹೊರತಂದಿದ್ದಾರೆ. ಅವರು ಆಗಾಗ ಸಭೆ, ಸಮಾರಂಭಗಳಲ್ಲಿ ಹೇಳುವ ಮಾತು: ‘ಹಳೆಯ ವೈದ್ಯ ಲ್ಯಾಟಿನ್‌ನಲ್ಲಿ ಮಾತನಾಡಿದ, ಹೊಸ ವೈದ್ಯ ಇಂಗ್ಲಿಷ್‌ನಲ್ಲಿ ಮಾತನಾಡಿದ. ಒಳ್ಳೆಯ ವೈದ್ಯ ರೋಗಿಯೊಂದಿಗೆ ಮಾತನಾಡಿದ’. ಇದನ್ನು ಸಮರ್ಥಿಸಲೋ ಎಂಬಂತೆ ಶಂಕರ್ ಅವರು ರಾಜೀವ್ ಗಾಂಧಿ ಆರೋಗ್ಯ
ವಿಶ್ವವಿದ್ಯಾಲಯದಲ್ಲಿ ಒಂದು ಪ್ರಯೋಗ ಮಾಡಿದ್ದಾರೆ. ‘ಬಳಕೆ ಕನ್ನಡ’ ಮತ್ತು ‘ಸಾಂಸ್ಕೃತಿಕ ಕನ್ನಡ’ ಎಂಬ ಪ್ರಕಟಣೆ ತಂದಿದ್ದಾರೆ. ವೈದ್ಯರು ರೋಗಿಗಳೊಂದಿಗೆ ಮಾತನಾಡಲು ‘ಬಳಕೆ ಕನ್ನಡ’ ಬಳಸಬಹುದು. ಕನ್ನಡ ಬಲ್ಲ ವೈದ್ಯರು, ವಿದ್ಯಾರ್ಥಿಗಳು ‘ಸಾಂಸ್ಕೃತಿಕ ಕನ್ನಡ’ವನ್ನೇ ಬಳಸಿ, ವೈದ್ಯವಿಜ್ಞಾನದ ಗ್ರಹಿಕೆಯನ್ನು ಇನ್ನಷ್ಟು ವಿಸ್ತರಿಸಬಹುದು.
ಮನೋವೈದ್ಯ ಪ್ರೊ. ಸಿ.ಆರ್.ಚಂದ್ರಶೇಖರ್, 80ರ ದಶಕದಲ್ಲೇ ಡಾ. ಡಿ.ಶಿವಪ್ಪ ಅವರು ಹೊರತಂದ 40,000 ವೈದ್ಯ ಪದಗಳಿಗೆ ಅರ್ಥವಿರುವ ‘ಇಂಗ್ಲಿಷ್– ಕನ್ನಡ ವೈದ್ಯ ಪದಕೋಶ’ದತ್ತ ಕೈಮಾಡಿ ತೋರಿಸುತ್ತಾರೆ. ಅತಿಯಾಗಿ ಕನ್ನಡ ಸಮಾನಪದಗಳನ್ನು ಟಂಕಿಸುವ ಬದಲು ಕೆಲವು ಪದಗಳನ್ನು, ಉದಾಹರಣೆಗೆ ಅಲರ್ಜಿ, ಲಿವರ್ ಮುಂತಾದವನ್ನು ನೇರವಾಗಿಯೇ ಬಳಸಿಕೊಳ್ಳಬಹುದು, ಆಗ ಗ್ರಹಿಕೆ ಸುಲಭವಾಗುತ್ತದೆ ಎನ್ನುತ್ತಾರೆ. ಹೌದು, ಯಾವುದೇ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಸರಿಸುಮಾರು ಶೇ 25ರಷ್ಟು ವಿದ್ಯಾರ್ಥಿಗಳು ಹೊರಗಿನವರಿರುತ್ತಾರೆ. ಖಾಸಗಿ ಕಾಲೇಜುಗಳಲ್ಲಿ ಈ ಪ್ರಮಾಣವು ಶೇ 50ಕ್ಕೂ ಏರಬಹುದು. ಅಂತಹವರಿಗೆ ಸುಲಭವಾಗಿ ಸಂವಹನ ಸಾಧ್ಯವಾಗುವ ಕನ್ನಡ ಭಾಷೆಯನ್ನು ಬಳಸಬೇಕಾಗುತ್ತದೆ ಎನ್ನುವುದು ಇಂದಿನ ವಾಸ್ತವವನ್ನು ಆಧರಿಸಿದ ಸಲಹೆ.
ಕರ್ನಾಟಕದಲ್ಲಿ ನಿಜವಾದ ಸಮಸ್ಯೆ ಬೇರೆಯದೇ ಇದೆ. ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ವೈದ್ಯಕೀಯ ಕಾಲೇಜು ಸೇರಿದಾಗ ಹೆಚ್ಚು ಕಡಿಮೆ ಕನ್ನಡ ಓದಲು, ಬರೆಯಲು ಮರೆತೇಬಿಟ್ಟಿರುತ್ತಾರೆ. ವೈದ್ಯವಿಜ್ಞಾನವನ್ನು ಇವರಿಗೆ ಕನ್ನಡದಲ್ಲಿ ಬೋಧಿಸುವುದೆಂತು? ಇದೇ ಮಾತನ್ನು ಕನ್ನಡ ಬಲ್ಲ ವೈದ್ಯಕೀಯ ಶಿಕ್ಷಕರಿಗೂ ಅನ್ವಯಿಸಬಹುದು. ಅವರೆಲ್ಲರೂ ಇಂಗ್ಲಿಷ್ ಮೂಲಕ ಬೋಧಿಸುವುದಕ್ಕೇ ಹೆಚ್ಚು ಒಲವು ತೋರುತ್ತಾರೆ. ಇದು ಕನ್ನಡದ ಬಗ್ಗೆ ಪ್ರೀತಿ ಇರುವ ಮತ್ತು ಕನ್ನಡದಲ್ಲಿ ಬರೆಯುತ್ತಿರುವ ಅನೇಕ ವೈದ್ಯರು ವ್ಯಕ್ತಪಡಿಸಿರುವ ಅಭಿಪ್ರಾಯ. ಇಲ್ಲಿ ಕನ್ನಡ ಸೇರಿದಂತೆ ಭಾರತೀಯ ಬೇರೆ ಬೇರೆ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಕೊಡಲು ಹೊರಟರೆ ಇನ್ನೊಂದು ಬಗೆಯ ಗೊಂದಲವೂ ಎದುರಾಗುತ್ತದೆ. ಇಂಗ್ಲಿಷ್‌ನಲ್ಲಿ ಬೋಧಿಸುವವರಿಗೆ ವಾರ ವಾರವೂ ‘ದಿ ಬ್ರಿಟಿಷ್ ಮೆಡಿಕಲ್ ಜರ್ನಲ್’, ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ಮುಂತಾದ ಅಂತರರಾಷ್ಟ್ರೀಯ ಪತ್ರಿಕೆಗಳು ಸುಲಭ ಲಭ್ಯ. ಹೊಸ ಹೊಸ ವೈದ್ಯಕೀಯ ಸಂಶೋಧನೆಗಳನ್ನು ಇವು ಪ್ರಕಟಿಸುತ್ತಿರುತ್ತವೆ. ಇಂಥ ಸಂಶೋಧನೆಗಳನ್ನು ಆಯಾ ಭಾಷೆಗಳಲ್ಲೇ ಸಂಗ್ರಹಿಸಿ ಹೇಳಲು ಅಧ್ಯಾಪಕರು ಅಷ್ಟು ಸಮಯ ಮುಡಿಪಿಟ್ಟಿರುತ್ತಾರೆಯೇ ಎಂಬುದು ಗಮನಿಸಬೇಕಾದ್ದೇ.
ಈಗ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಹೊಂದಿರುವ ರಾಜ್ಯಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲೇ ಕೊಡುವ ಯೋಜನೆಯನ್ನು ಕೂಡ ಒಂದು ಪ್ರಯೋಗ ಎಂದು ಪರಿಗಣಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.