ಮುದ್ದು ಕಂದಮ್ಮಗಳೇ, ಹೇಗಿದ್ದೀರಾ? ಎಲ್ಲಿದ್ದೀರಾ? ಏನು ಮಾಡುತ್ತಿದ್ದೀರಾ?
ಅಪ್ಪನ ತೋಳಲ್ಲೋ, ಅಮ್ಮನ ಸೆರಗಲ್ಲೋ, ಹಚ್ಚ ಬೆಚ್ಚಗೆ ಅವುಚಿಕೊಂಡು ಕಣ್ತುಂಬಾ ಕನಸುಗಳನ್ನು ನೇಯುತ್ತಿದ್ದೀರಾ? ಅಜ್ಜಿ ತಾತರ ಕೊರಳಿಗೆ ಜೋತುಕೊಂಡು ಜೋಕಾಲಿ ಆಡುತ್ತಿದ್ದೀರಾ? ನಿಮ್ಮಂಥವೇ ಇನ್ನಷ್ಟು ಹಕ್ಕಿಮರಿಗಳನ್ನು ಕೂಡಿಕೊಂಡು, ಅಂಗಳದ ತುಂಬಾ ಕಿಚಪಿಚ ಹಾಡಿಕೊಂಡು ಗದ್ದಲ ಎಬ್ಬಿಸಿದ್ದೀರಾ? ನಿಮ್ಮ ಪುಟಾಣಿ ಟೇಬಲ್ ಮೇಲೆ ಇರೋ ಬರೋ ಪುಸ್ತಕ ಎಲ್ಲಾ ಹರಡಿಕೊಂಡು ಹೋಂ ವರ್ಕ್ ಮಾಡ್ತಾ ಇದ್ದೀರಾ? ಯಾರಿಗೂ ಕಾಣದ ಹಾಗೆ, ಅಪ್ಪನ ಸೆಲ್ ಫೋನ್ ತಕ್ಕೊಂಡು ಟಾಮ್ ಅಂಡ್ ಜೆರ್ರಿ, ಕಾರ್ ರೇಸ್, ಬೈಕ್ ರೇಸ್ ನೋಡ್ತಾ ಇದ್ದೀರಾ? ಮತ್ತೆ ನಿಮ್ ಮ್ಯಾಮ್ ಸ್ಕೂಲ್‌ನಲ್ಲಿ ತುಂಬಾ ಬಯ್ತಾರ? ಅಥವಾ ನಿಮಗೇನೇ ಹೆದರಕೋತಾರ? ಕಾಲಲ್ಲಿ ತರಚಿ ಗಾಯ ಆಗಿತ್ತಲ್ಲ, ಅದೆಲ್ಲ ವಾಸಿ ಆಗಿದೇಯಾ?
ಸಾಕು ಬಿಡಿ. ತುಂಬಾ ಕ್ವಶ್ಚನ್ ಕೇಳಬಾರದು. ಈ ದೊಡ್ಡವರಿಗೆಲ್ಲ ಚಿಕ್ಕವರಿಗೆ ಏನೇನಾದ್ರೂ ಬರೀ ಕ್ವಶ್ಚನ್ಸ್ ಕೇಳೋದೇ ಕೆಲಸ ಅಂತ ಬಯ್ಕೋಬೇಡಿ.
ನಿಮ್ಮನ್ನು ನೋಡಿದ್ರೆ ನಮಗೆ ಎಷ್ಟ್ ಖುಷಿ ಆಗುತ್ತೆ ಗೊತ್ತಾ? ನಾವೆಲ್ಲಾ ಆಗ ನಿಮ್ಮ ಹಾಗಿರಲಿಲ್ಲ. ಈಗ ನಿಮಗೆ ಸಿಕ್ಕಿದ್ದೆಲ್ಲಾ ನಮಗೆ ಸಿಕ್ಕಿರ್ಲಿಲ್ಲ. ನಾವೆಲ್ಲಾ ಸ್ಲೇಟು ಬಳಪದಲ್ಲಿ ಬರೆಯೋಕೆ ಶುರು ಮಾಡಿದ್ದು. ಕಲ್ಲಿನ ಸ್ಲೇಟು ಬೇಗ ಒಡೆದುಹೋಗೋವು. ಡಬ್ಬದ ಸ್ಲೇಟ್ ಆದರೆ ಅಕ್ಷರಗಳೇ ಹತ್ತುತ್ತಾ ಇರ್ಲಿಲ್ಲ. ಆಮೇಲೆ ಸ್ಕೂಲ್ ಶುರು ಆಗಿ ಮೂರು ತಿಂಗಳಾದ್ರೂ ಅಪ್ಪ ಪುಸ್ತಕಾನೇ ಕೊಡಿಸ್ತಾ ಇರಲಿಲ್ಲ. ನಮಗೆ ಈ ಬಾಲ್ ಪೆನ್ ಅನ್ನೋದು ಇರಲಿಲ್ಲ, ಇಂಕ್ ಪೆನ್ನು. ವರ್ಷಕ್ಕೆ ಒಂದ್ ಪೆನ್ ಕೊಡಿಸಿದ್ರೆ ಹೆಚ್ಚು. ಅದೂ ಲೀಕ್ ಆಗಿ ಕೈಯೆಲ್ಲಾ ಇಂಕ್ ಆಗೋದು. ಪೆನ್ನಿನ ಮುಳ್ಳು ನಾಲಗೆ ಮುರಿದು ಹೋದ್ರೆ ಅದು ಇನ್ನೊಂದ್ ಪಂಚಾಯ್ತಿ. ಹಾಳೆ ಮೇಲೇ ಇಂಕು ಧುಮುಕಿ ಬಿಡೋದು.
ಆಗ ಯಾರಾದ್ರೂ ಮಕ್ಕಳು ಬೀದಿಗೆ ಹೆಚ್ಚಿಗೆ ಬರದೇ ಇದ್ರೆ ಅಂಥವರನ್ನ ಕಾವಿ ಕೋಳಿಗಳು ಅಂತಲೂ, ಬೀದೀಲೆ ಇರೋರನ್ನ ತೊಂಡು ದನಗಳು ಅಂತಲೂ ಅನ್ನೋರು. ಕೋಣೆ ಮಕ್ಕಳು ಕೊಳೆತೋ, ಬೀದಿ ಮಕ್ಕಳು ಬೆಳೆದೋ ಅಂತ ಒಂದು ಗಾದೆಯಿತ್ತು ಆವಾಗ. ನಾವೆಲ್ಲಾ ಧೂಳಲ್ಲಿ ಬಿದ್ದದ್ದನ್ನ ತಿಂತಿದ್ದೋ, ಹಳ್ಳಕೊಳ್ಳದ ನೀರು ಕುಡೀತಿದ್ದೋ. ಒಂದು ದಿನಾನೂ ನೆಗಡಿ ಕೆಮ್ಮು ಅಂತ ಇರಲಿಲ್ಲ. ಬೆಳಗ್ಗೆ ಮನೇಲಿ ಬ್ರೆಕ್ ಫಾಸ್ಟ್ ಮಾಡೋ ಅಭ್ಯಾಸ ಇರಲಿಲ್ಲ. ಮಾಡಿದ್ರೂ ರೊಟ್ಟಿ, ದ್ವಾಸೆ ಅಷ್ಟೆ. ತಂಗಳು ಉಂಡು ಸ್ಕೂಲ್‌ಗೆ ಹೋಗ್ತಾ ಇದ್ದದ್ದೇ ಜಾಸ್ತಿ.
ಎಲ್ ಕೇ ಜಿಗೇ ಬೂಟ್ ಹಾಕೊಂಡು ಸ್ಕೂಲಿಗೆ ಹೋಗತೀರಿ ನೀವು. ನಾವೆಲ್ಲ ಕಾಲಿಗೆ ಚಪ್ಪಲಿ ಅಂತ ಹಾಕಿದ್ದೇ ಹೈಸ್ಕೂಲ್‌ಗೆ ಬಂದಾಗ. ಕೆಲವರಿಗೆ ಹೈಸ್ಕೂಲ್ ಮುಗಿದ ಮೇಲೂ ಕಾಲಿಗೆ ಚಪ್ಪಲಿ ಇರಲಿಲ್ಲ ಅಂದರೆ ನೀವು ನಂಬುತ್ತೀರೋ ಇಲ್ಲವೋ!
ಮತ್ತೆ ಚಿನ್ನು ಬಂಗಾರಗಳಾ, ಈಗ ನೀವು ಅಂಗಡಿಯಿಂದ ತರುವಾಗಲೇ ಹರಕಲಾಗಿರೋ ಜೀನ್ಸ್ ಹಾಕ್ಕೋತೀರಿ. ಆಗ ನಾವು ಹಾಕ್ಕೊಂಡ ಮೇಲೆ ನಮ್ ಚಡ್ಡಿ, ಅಂಗಿ ಹರಿದೋಗುತ್ತಿದ್ದೋ. ಅದರಲ್ಲೂ ಚಡ್ಡಿ, ಕುಂಡೆ ಹತ್ತಿರವೇ ಹರಿದು ಹೋಗೋದು ಹಾಳಾದ್ದು! ನಮ್ ಮೇಷ್ಟ್ರುಗಳೋ, ಆ ಹರಿದ ಜಾಗದಲ್ಲೇ ಬಿದಿರು ಕೋಲಿಂದ ಬಾಸುಂಡೆ ಬರೋ ಹಂಗೆ ಬಾರಿಸೋರು.
ನೀವೀಗ ಆಟ ಆಡಬೇಕು ಅಂದ್ರೆ ನಿಮಗೇನು ಬೇಕು ಅದನ್ನೆಲ್ಲಾ ಅಪ್ಪ ಅಮ್ಮ ನೀವು ಕೇಳೋಕ್ ಮುಂಚೆನೇ ತಂದು ಕೊಡ್ತಾರೆ. ನಾವು ಕೇಳಿದ್ರೆ ಮೈ ತುಂಬಾ ‘ಪ್ರಸಾದ’ ಬೀಳ್ತಿದ್ದೋ. ಅದಕ್ಕೆ ನಾವು ನಮಗೆ ಬೇಕಾದ ಆಟದ ಸಾಮಾನುಗಳನ್ನೆಲ್ಲ ನಾವೇ ಮಾಡ್ಕೊಳ್ತಿದ್ದೋ. ಗೊಬ್ಬಳಿ ಗೂಟದಲ್ಲಿ ಬುಗುರಿ, ತೆಂಗಿನ ಗುದಮಟ್ಟೆಯಲ್ಲಿ ಬ್ಯಾಟು, ಹಳೆ ಬಟ್ಟೆ ಸುತ್ತಿ ಬಾಲು, ಹೀಗೆ.... ನೀವು swimming ಕಲಿಯೋಕೆ Poolಗೆ ಹೋಗ್ತೀರಿ. ನಾವು ಕೆರೆ, ಕಟ್ಟೆ, ಕಾಲುವೆ,ಕಪಿಲೆ ಬಾವಿಯಲ್ಲಿ ಈಜು ಕಲಿತದ್ದು. ನೀವು ನಿಮ್ಮ ಫ್ರೀ ಟೈಮ್‌ನಲ್ಲಿ ಈಗ online gameಗಳನ್ನ ಆಡ್ತೀರಿ. ನಾವು ನಮ್ಮ ಫ್ರೀ ಟೈಮ್‌ನಲ್ಲಿ ಚಿಟ್ಟೆ ಹಿಡಿಯೋದು, ಜೀರುಂಬೆ ಹಿಡಿದು ಕಡ್ಡಿ ಪೊಟ್ಟಣದೊಳಗೆ ಕೂಡಿಟ್ಟು ಸಾಕೋದು, ದುಂಬಿ ಹಿಡಿದು ಅದರ ಸೊಂಟಕ್ಕೆ ದಾರ ಕಟ್ಟಿ ಹಾರಿಸೋದು ಇಂಥಾದ್ದೆಲ್ಲ ಮಾಡ್ತಿದ್ದೋ. ನಿಮಗೆ ಆಟ ಆಡಬೇಕು ಅಂದ್ರೆ ಏನೇನೋ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳೆಲ್ಲಾ ಇವೆ. ನಮಗೆ ಅವೆಲ್ಲಾ ಇರಲಿಲ್ಲ.
ನಮ್ಮ ಕಾಲ ಚೆನ್ನಾಗಿತ್ತು, ನಿಮ್ಮದು ಚೆನ್ನಾಗಿಲ್ಲ ಅಂತಾಗಲೀ, ನಿಮ್ಮ ಕಾಲವೇ ಚೆನ್ನಾಗಿದೆ ನಮ್ಮದು ಚೆನ್ನಾಗಿರಲಿಲ್ಲ ಅಂತೇನೂ ನಾನು ಹೇಳಲ್ಲ. ಸರಿ ತಪ್ಪು, ಒಳ್ಳೆಯದು ಕೆಟ್ಟದ್ದು, ಮಾಡಬೇಕಾದ್ದು, ಮಾಡಬಾರದ್ದು ಅನ್ನೋದು ಎಲ್ಲಾ ಕಾಲದಲ್ಲೂ ಇರುತ್ತೆ. ನಾವು ಅಟ್ಟ ಹತ್ತೋಕೇ ಕಷ್ಟ ಪಡುತಿದ್ದೋ. ನೀವೀಗ ಬೆಟ್ಟ ಹಾರೋಕೆ ಆಸೆ ಪಡತೀರಿ. ನಾವು ಹಳ್ಳ ಹಾರೋಕೇ ಹೆದರತಿದ್ದೋ, ನೀವೀಗ ಸಮುದ್ರ ಹಾರುತೀರಿ. ನಮಗೆ ನಮ್ಮೂರೇ ಪ್ರಪಂಚ ಆಗಿತ್ತು, ಈಗ ನಿಮಗೆ ಪ್ರಪಂಚವೇ ನಮ್ಮೂರು ಅನ್ನಿಸ್ತಿದೆ.
ನಿಮ್ಮ ಬದುಕಿನಲ್ಲಿ ಹಾಲು ಹಳ್ಳವಾಗಲಿ. ಬೆಣ್ಣೆ ಬೆಟ್ಟವಾಗಲಿ. ಎಲ್ಲಾ ಒಳ್ಳೆಯದಾಗಲಿ. ಮತ್ತೆ ಯಾವಾಗಲಾದರೂ ಸಿಕ್ತೀನಿ. ಈಗ ಹೋಗಿ ಬರಲಾ.
ಬಾಯ್!!
ಇಂತಿ ನಿಮ್ಮ ಪ್ರೊ. ಎಂ. ಕೃಷ್ಣೆಗೌಡ
––––
****** ****** ******
ಹಾಡಿಗೂ ಸೈ, ನೃತ್ಯಕ್ಕೂ ಜೈ
–ಕೃಷ್ಣಿ ಶಿರೂರ
ದಿಯಾ ಹೆಗಡೆ ಎಂಟರ ಹರೆಯದಲ್ಲೇ ಸಂಗೀತ ಕ್ಷೇತ್ರದ ದಿಗ್ಗಜರೆದರು ಹಾಡಿ ಭೇಷ್ ಎನಿಸಿಕೊಂಡ ಬಾಲೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬಂದಗದ್ದೆ ಎಂಬ ಅಪ್ಪಟ ಹಳ್ಳಿ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಗುರುತಿಸಬಲ್ಲ ಸೆಲೆಬ್ರಿಟಿ.
ಜೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ ಸೀಸನ್ –19 ರಿಯಾಲಿಟಿ ಶೋದಲ್ಲಿ ಬೆಸ್ಟ್ ಎಂಟರ್‌ಟೇನರ್ ಟ್ರೋಫಿ ಗೆದ್ದ ದಿಯಾ ಕನ್ನಡ ನಾಡಿನ ಮನೆಮಾತಾಗಿದ್ದಾಳೆ. ಸೋನಿ ಎಂಟರ್‌ಟೈನ್ಮೆಂಟ್ ಟೆಲಿವಿಷನ್‌ನ ಜನಪ್ರಿಯ ಕಾರ್ಯಕ್ರಮ ‘ಸೂಪರ್ ಸ್ಟಾರ್ ಸಿಂಗರ್’ ಸ್ಪರ್ಧೆಗೆ ಆಯ್ಕೆಯಾಗಿ ಟಾಪ್– 15ರಲ್ಲಿ ಹಾಡಿ ರಾಷ್ಟ್ರಮಟ್ಟದಲ್ಲೂ ಮನಗೆದ್ದವಳು. ರಿಯಾಲಿಟಿ ಷೋನಲ್ಲಿ ತನ್ನ ಪ್ರಬುದ್ಧ ಗಾಯನವನ್ನು ಹೆಜ್ಜೆಸಮೇತ ಪ್ರಸ್ತುತಪಡಿಸುತ್ತಿದ್ದರೆ ಅತ್ತ ಜಡ್ಜ್ ಸೀಟ್‌ನಲ್ಲಿ ಕೂತವರು ಫಿದಾ ಆಗಿದ್ದರು. ಮುಂದೆ ಇಂಡಿಯನ್ ಐಡಲ್ ಸೀಸನ್ –14 ಗ್ರಾಂಡ್ ಫಿನಾಲೆಯಲ್ಲಿ ಹಾಡು–ನೃತ್ಯ–ಅಭಿನಯನದ ಮೂಲಕ ಸಂಗೀತದ ದಿಗ್ಗಜರ ಮನಗೆದ್ದಿದ್ದು ಹೆಮ್ಮೆಯ ಕ್ಷಣ. ದಿಯಾ ನೃತ್ಯ, ಕವಿತೆ ರಚನೆ, ಭಾಷಣ ಕಲೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಂದಗದ್ದೆಯ ಬಾಲಭಾರತಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದು, ಕಲಿಕೆಯಲ್ಲೂ ಈಕೆ ಮೊದಲ ರ‍್ಯಾಂಕ್ ಬಿಟ್ಟುಕೊಡದವಳು. ಮಗಳ ಪ್ರತಿಭೆ ಗುರುತಿಸಿ ಸಾಧನೆಗೆ ಪ್ರೋತ್ಸಾಹಿಸಿದ ಶ್ರೇಯಸ್ಸು ಅಮ್ಮ ಅಪರ್ಣಾ ಹಾಗೂ ತಂದೆ ಬಿ.ಎಂ. ವೆಂಕಟೇಶ ಅವರಿಗೆ ಸಲ್ಲುತ್ತದೆ.
ದಿಯಾಳ ಅಕ್ಕ ದಿಶಾ ಶಾಸ್ತ್ರೀಯ ಸಂಗೀತದ ತರಗತಿಗೆ ಹೋಗಿ ಪ್ರಾಕ್ಟೀಸ್ ಮಾಡುವ ವೇಳೆ ದಿಯಾ ಇನ್ನೂ ಸಣ್ಣಾಕಿ. ತೊದಲು ನುಡಿಯಲ್ಲೇ ಈಕೆಯೂ ಹಾಡಲು ಶುರು ಮಾಡಿದಳು. ದಿಯಾಳಿಗೆ ಸಂಗೀತ, ನೃತ್ಯದ ಮೇಲಿನ ಆಸಕ್ತಿ ಕಂಡು ಪ್ರೋತ್ಸಾಹಿಸಿದರು. ಕೋವಿಡ್ ಸಮಯದಲ್ಲಿ ‘Flairs of DishaDiya Sisters’ ಎಂಬ ಯುಟ್ಯೂಬ್ ಚಾನೆಲ್ ಆರಂಭಿಸಿ, ಅಕ್ಕ–ತಂಗಿ ಹಾಡಿದ ಹಾಡುಗಳನ್ನು ಅಪ್‌ಲೋಡ್ ಮಾಡಿದಾಗ ಕೇಳುಗರು ಮೆಚ್ಚಿದರು. 2022ರಲ್ಲಿ ಜೀ ಕನ್ನಡ ಸರಿಗಮಪ ಆಡಿಷನ್ ಹಾಗೂ ಡ್ರಾಮಾ ಜೂನಿಯರ್ ಆಡಿಷನ್‌ನಲ್ಲಿ ಆಯ್ಕೆಯಾದರೂ ಸರಿಗಮಪ ಸೀಸನ್ ಲಿಟಲ್ ಚಾಂಪ್ –19ರಲ್ಲಿ ಮುಂದುವರಿಯಬೇಕಾಯಿತು. ಯುವ ನಕ್ಷತ್ರ, ಮಗ್ಗಿ ಪುಸ್ತಕ, ಹ್ಯಾಷ್‌ಟ್ಯಾಗ್ ಪಾರು–ಪಾರ್ವತಿ ಸಿನಿಮಾಗಳಿಗೆ ಹಾಡಿದ್ದಾಳೆ.
ಕಠಿಣ ಸವಾಲು ಮೀರಿದ ಗೋಲ್‌ಕೀಪರ್ ತೇಜಸ್
–ಗಿರೀಶ್ ದೊಡ್ಡಮನಿ
ಶಿಕಾರಿಪುರದ ಚನ್ನಮಲ್ಲಿಕಾರ್ಜುನ ಶಾಲೆಯಲ್ಲಿ ಅವತ್ತು ತರಗತಿ ಕೋಣೆಗೆ ಬಂದ ದೈಹಿಕ ಶಿಕ್ಷಕರೊಬ್ಬರು ‘ಶಿವಮೊಗ್ಗದ ಕ್ರೀಡಾ ಶಾಲೆಗೆ ಆಯ್ಕೆ ನಡೀತಾ ಇದೆ. ಆಸಕ್ತಿ ಇದ್ದವರು ಹೆಸರು ಕೊಡ್ರಿ’ ಎಂದರು.
ಒಂದಿಷ್ಟು ಹುಡುಗರು ಕೈ ಎತ್ತಿ ಸಮ್ಮತಿ ಸೂಚಿಸಿದರು. ಅದರಲ್ಲೊಬ್ಬನಾಗಿದ್ದ ತೇಜಸ್ ರಾಜಶೇಖರ್ ಪವಾರ್ ಜೀವನಕ್ಕೆ ಆ ದಿನ ಪ್ರಮುಖ ತಿರುವು ಲಭಿಸಿತು. ಆಯ್ಕೆ ಟ್ರಯಲ್ಸ್‌ಗೆ ಹೋದಾಗ ಓಟದ ವಿಭಾಗಕ್ಕೆ ಆಯ್ಕೆಯಾಗಿದ್ದರು. ಆದರೆ ತಮಗೆ ಅಸ್ತಮಾ ಸಮಸ್ಯೆ ಇದ್ದ ಕಾರಣ ಓಟದ ಬದಲಿಗೆ ಹಾಕಿ ಕ್ರೀಡೆಯಲ್ಲಿ ಆಡಲು ಅವಕಾಶ ಕೊಡುವಂತೆ ವಸತಿ ಶಾಲೆಯ ಅಧಿಕಾರಿಗಳಿಗೆ ಮನವಿಪತ್ರ ನೀಡಿದರು. ತೇಜಸ್‌ಗೆ ಅವಕಾಶ ದೊರೆಯಿತು. ಆದರೆ ಹಾಕಿ ತಂಡದಲ್ಲಿದ್ದವರಿಗಿಂತ ಭಿನ್ನವಾಗಿ ಸಾಧಿಸಬೇಕೆಂದುಕೊಂಡ ತೇಜಸ್, ಗೋಲ್‌ಕೀಪರ್ ಆಗಲು ನಿರ್ಧರಿಸಿದರು.
ಈಗ; ತೇಜಸ್‌ಗೆ 16 ವರ್ಷ. ಈಚೆಗೆ ನಡೆದ ಸಬ್ ಜೂನಿಯರ್ ರಾಷ್ಟ್ರೀಯ ಹಾಕಿ ಕೂಟದಲ್ಲಿ ಕರ್ನಾಟಕದ ನಾಯಕತ್ವ ವಹಿಸಿದ್ದರು. ಶಿಕಾರಿಪುರ ತಾಲ್ಲೂಕಿನ ಸಾಲೂರು ಗ್ರಾಮದ ರಾಜಶೇಖರ್ ಮತ್ತು ಮಾಯಾ ದಂಪತಿಯ ಮಗ ತೇಜಸ್ ಸದ್ಯ ಬೆಂಗಳೂರಿನ ಡಿವೈಎಸ್‌ಎಸ್ ಕ್ರೀಡಾ ವಸತಿ ಶಾಲೆಯಲ್ಲಿದ್ದಾರೆ. ಪ್ರಥಮ ಪಿಯು ವಿದ್ಯಾರ್ಥಿ ಕೂಡ ಹೌದು.
‘ನಮ್ಮದು ಕೃಷಿಕರ ಕುಟುಂಬ. ನಮಗಿರುವ ಸಣ್ಣ ಪ್ರಮಾಣದ ಜಮೀನು ಮತ್ತು ಕೂಲಿ ಕೆಲಸದಿಂದ ಸಿಗುವ ಆದಾಯದಲ್ಲಿ ಅಪ್ಪ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಅಮ್ಮ ಮತ್ತು ತಂಗಿ ಇದ್ದಾರೆ. ಶಿವಮೊಗ್ಗದಲ್ಲಿ ಶ್ರೀಕಾಂತ್ ಮತ್ತು ಈಗ ಬೆಂಗಳೂರಿನಲ್ಲಿ ವಿಜಯಕೃಷ್ಣ ಅವರು ತರಬೇತಿ ನೀಡುತ್ತಿದ್ದಾರೆ’ ಎಂದು ತೇಜಸ್ ಹೇಳುತ್ತಾರೆ.
ಭಾರತ ತಂಡದ ದಿಗ್ಗಜ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರೇ ತಮ್ಮ ಆದರ್ಶ ಎಂದು ತೇಜಸ್ ಹೇಳುತ್ತಾರೆ. ಈಚೆಗೆ ದಕ್ಷಿಣ ಭಾರತ ಹಾಕಿಯಲ್ಲಿ ಚಿನ್ನ ಗೆದ್ದ ಕರ್ನಾಟಕ ಜೂನಿಯರ್ ತಂಡದಲ್ಲಿ ತೇಜಸ್ ಗೋಲ್‌ಕೀಪರ್ ಆಗಿದ್ದರು. 5 ಎ ಸೈಡ್ ಸೇರಿದಂತೆ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿದ್ದಾರೆ. ಭಾರತ ಜೂನಿಯರ್ ತಂಡದಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ನೃತ್ಯ ಕುವರಿ; ಹುಲಿ ಕುಣಿತದ ಪೋರಿ
–ವಿಕ್ರಂ ಕಾಂತಿಕೆರೆ
ಕಳೆದ ಬಾರಿಯ ಅಷ್ಟಮಿ ಸಂದರ್ಭ. ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಹುಲಿವೇಷಧಾರಿಗಳ ಕುಣಿತ ರಂಗೇರಿತ್ತು. ದರ್ಪಣ ನೃತ್ಯಶಾಲೆಯ ಮಹಿಳಾ ತಂಡ ಪ್ರದರ್ಶಿಸಿದ ಕುಣಿತದಲ್ಲಿ ಪಿರಮಿಡ್ ರಚನೆ ಮಾಡಿದಾಗ ತುತ್ತತುದಿಗೆ ಪುಟ್ಟ ಬಾಲೆಯೊಬ್ಬಳು ಸರಸರನೆ ಏರಿ ಹೋದಳು. ಅಕ್ಕಂದಿರ ತೋಳು ಹಿಡಿದು, ಹೆಗಲ ಮೇಲೆ ಕಾಲಿರಿಸಿ ಮೇಲೆ ಸಾಗಿ ನೃತ್ಯ ಮಾಡಿದ ಆಕೆ ನಂತರ ಸಾಮಾಜಿಕ ತಾಣಗಳಲ್ಲಿ ಮಿನುಗಿದಳು.
ಹುಲಿ ಕುಣಿತದ ತರಬೇತಿಗೆ ಸೇರಿ ಎರಡೇ ವರ್ಷಗಳಲ್ಲಿ ತಾಸೆ ಪೆಟ್ಟಿನ ಲಯವನ್ನೂ ನೃತ್ಯದ ಪಟ್ಟುಗಳನ್ನೂ ಕರಗತ ಮಾಡಿಕೊಂಡ ಉಡುಪಿಯ ಸನ್ನಿಧಿಗೆ ಕೇವಲ 10 ವರ್ಷ. ತಂದೆ ಸುಧೀಂದ್ರ, ತಾಯಿ ಸ್ವಾತಿ.
ಪಿಲಿನಲಿಕೆ (ಹುಲಿ ಕುಣಿತ) ನೋಡುತ್ತಲೇ ಬೆಳೆದ ಸನ್ನಿಧಿಯ ಪಾದಗಳು ಸಣ್ಣವಯಸ್ಸಿನಲ್ಲೇ ಹೆಜ್ಜೆ ಹಾಕತೊಡಗಿದ್ದವು. ಅದನ್ನರಿತ ಪೋಷಕರು ದರ್ಪಣ ನೃತ್ಯಶಾಲೆಗೆ ಸೇರಿಸಿದರು. ಶಾಸ್ತ್ರೀಯ ನೃತ್ಯ ಕಲಿಸುವ ಆ ಶಾಲೆಯಲ್ಲಿ ಮಹಿಳೆಯರ ಹುಲಿ ಕುಣಿತದ ತಂಡವೇ ಇದೆ. ಆ ತಂಡ ಸನ್ನಿಧಿಯ ಆಕಾಂಕ್ಷೆಗೆ ಬೆಂಬಲವಾಗಿ ನಿಂತಿತು.
ಗುಂಡಿಬೈಲ್ ವಿಜಯಧ್ವಜ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ, ಕಳೆದ ವರ್ಷ ಉಡುಪಿ ಪರ್ಯಾಯ ಉತ್ಸವದ ಸಂದರ್ಭದಲ್ಲಿ ಪ್ರದರ್ಶಿಸಿದ ಹುಲಿ ಕುಣಿತವೂ ಗಮನ ಸೆಳೆದಿತ್ತು. ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೊಗಳು ಹರಿದಾಡತೊಡಗಿದ್ದವು.
‘ಸಣ್ಣವಳಿದ್ದಾಗಲೇ ಹುಲಿ ಕುಣಿತ ತುಂಬ ಇಷ್ಟ ಆಗುತ್ತಿತ್ತು. ವೇಷಧಾರಿಗಳು ಮನೆಯ ಹತ್ತಿರ ಬಂದು ಕುಣಿಯುವುದು ನೋಡಿದಾಗ ನನಗೂ ಆಸೆ ಆಗುತ್ತಿತ್ತು. ಈಗ ನಾನೇ ಕುಣಿಯುತ್ತಿದ್ದೇನೆ. ಹುಲಿವೇಷದ ಖುಷಿಯನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದೇನೆ’ ಎಂದು ಸನ್ನಿಧಿ ಹೇಳಿದರು. ದೇಹವಿಡೀ ಕಂಪಿಸುತ್ತ ತಾಸೆಯ ಪೆಟ್ಟಿನ ಝೇಂಕಾರ ಮತ್ತು ಲಯಕ್ಕೆ ಸರಿಯಾಗಿ ಸನ್ನಿಧಿ ಹೆಜ್ಜೆ ಹಾಕುತ್ತಿದ್ದರೆ ಅನುಭವಿ ಕಲಾವಿದರ ಕುಣಿತಕ್ಕೆ ಸರಿಸಮವಾದ ಲಾಸ್ಯ ಕಂಡುಬರುತ್ತದೆ. ಹುಲಿ ಹೆಜ್ಜೆಯಂತೆ ಕಾಲುಗಳನ್ನು ಎತ್ತಿ ಗಂಭೀರವಾಗಿ ಮುಂದೆ ಇರಿಸುತ್ತ ಗತಿಯನ್ನು ಹೆಚ್ಚಿಸುತ್ತ ಸಾಗುವ ಕುಣಿತಕ್ಕೆ ಕಲಾಶಾಲೆಯಲ್ಲಿ ಕಲಿತ ನೃತ್ಯದ ಸೂಕ್ಷ್ಮ ಅಂಶಗಳು ಕಸುವು ತುಂಬುತ್ತದೆ. ಹೀಗಾಗಿ ನೋಡುಗರಿಗೆ ಮುದ ನೀಡುತ್ತದೆ.
ಸಾಹಿತ್ಯವಲ್ಲ, ಕ್ರಿಕೆಟ್ ಹುಚ್ಚು ಹೆಚ್ಚೇ ಇತ್ತು
––ಕವಿರಾಜ್, ಗೀತಸಾಹಿತಿ, ನಿರ್ದೇಶಕ
ಬಾಲ್ಯದಲ್ಲಿ ನನಗೆ ಕ್ರಿಕೆಟ್ ಹುಚ್ಚು ಹೆಚ್ಚಾಗಿತ್ತು. ಎಲ್ಲರೂ ಬ್ಯಾಟಿಂಗ್, ಬೌಲಿಂಗ್‌ಗೆ ಕಾದರೆ ನಾನು ಫೀಲ್ಡಿಂಗ್ ಹುಚ್ಚು ಇಟ್ಟುಕೊಂಡಿದ್ದವ. ಅದೂ ಬ್ಯಾಟ್ಸ್‌ಮ್ಯಾನ್‌ಗೆ ಬಹಳ ಹತ್ತಿರದಲ್ಲಿ ಅಂದರೆ ಕವರ್, ಗಲ್ಲಿ, ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡಲು ಹಾತೊರೆಯುತ್ತಿದ್ದೆ. ಡೈವ್ ಮಾಡಿ ಕ್ಯಾಚ್ ಹಿಡಿಯುವುದು ಬಹಳ ಇಷ್ಟವಾಗಿತ್ತು. ಇದರಿಂದ ಮಾಡಿಕೊಂಡ ಗಾಯಗಳೇ ನನಗೆ ಪದಕಗಳಂತೆ ಅನಿಸುತ್ತಿದ್ದವು. ಈ ರೀತಿ ಕ್ಯಾಚ್ ಹಿಡಿಯುವುದರಿಂದ ಬಹಳ ರೋಮಾಂಚನವಾಗುತ್ತಿತ್ತು. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಎಂದರೆ ನನಗೆ ಕ್ರಿಕೆಟ್ ಹಾಗೂ ನಾನು ಹಿಡಿದ ಡೈವ್ ಕ್ಯಾಚ್‌ಗಳೇ ನನಗೆ ಮೊದಲಿಗೆ ನೆನಪಿಗೆ ಬರುತ್ತವೆ.
ಈ ಮಟ್ಟಿಗೆ ಕ್ರಿಕೆಟ್ ಹುಚ್ಚಿಗೆ ಕಾರಣ ಏನು ಎಂದು ಈಗಲೂ ತಿಳಿದಿಲ್ಲ. ಈ ನೆನಪುಗಳು ಮರುಪ್ರಸಾರದಂತೆ ಮನಸ್ಸಿನಲ್ಲಿ ಮೇಳೈಸುತ್ತವೆ. ನಮ್ಮ ಶಾಲೆಯ ವಾತಾವರಣ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಬಾಲ್ಯದಲ್ಲೇ ಓದಿನ ಮೇಲೆ ಆಸಕ್ತಿ ಇತ್ತು. ನಮ್ಮ ಊರಿನಲ್ಲಿ ಎರಡು ಅಂಗಡಿಯಿತ್ತು. ಒಬ್ಬರು ಯೋಗೀಶ್ ಶೆಣೈ ಹಾಗೂ ಇನ್ನೊಬ್ಬರು ರೆಹಮಾನ್ ಅವರ ಅಂಗಡಿ. ಇವರ ಅಂಗಡಿಗೆ ಪ್ರಜಾವಾಣಿ, ಮತ್ತೊಂದು ದಿನಪತ್ರಿಕೆ ಬರುತ್ತಿತ್ತು. ಬಸ್ ಕಂಡಕ್ಟರ್ ಎಸೆದ ದಿನಪತ್ರಿಕೆಯನ್ನು ಕ್ಯಾಚ್ ಹಿಡಿದು ಓದುತ್ತಿದ್ದವನಲ್ಲಿ ನಾನೇ ಮೊದಲಿಗ. ಜೊತೆಗೆ ಅಂಗಡಿಯಿಂದ ತರುವ ವಸ್ತುಗಳನ್ನು ಪೇಪರ್ ಪೊಟ್ಟಣಗಳಲ್ಲಿ ಕಟ್ಟಿಕೊಡುತ್ತಿದ್ದರು. ಅವುಗಳನ್ನು ಮನೆಗೆ ತಂದ ಮೇಲೆ ವಸ್ತುಗಳನ್ನು ತೆಗೆದಿಟ್ಟು, ಆ ಪೇಪರ್‌ನಲ್ಲಿರುವ ಪ್ರತಿ ಪದಗಳನ್ನು ಓದುತ್ತಿದ್ದೆ. ಶ್ರದ್ಧಾಂಜಲಿ ಕಾಲಂ ಅನ್ನೂ ನಿಯತ್ತಾಗಿ ಓದುತ್ತಿದ್ದೆ! ದಾರಿಯಲ್ಲಿ ಪೇಪರ್ ತುಂಡುಗಳು ಸಿಕ್ಕಿದರೂ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಓದುತ್ತಿದ್ದೆ. ಇದಕ್ಕೆ ಅಮ್ಮನಿಂದ ಬೈಸಿಕೊಂಡದ್ದೂ ಇದೆ.
ಸಾಹಿತ್ಯದ ಆಸಕ್ತಿ ಎನ್ನುವುದಕ್ಕಿಂತ ಓದುವ ಆಸಕ್ತಿ ಹುಟ್ಟಿಕೊಂಡಿದ್ದೇ ಇಲ್ಲಿಂದ ಎನ್ನಬಹುದು. ಬಾಲಮಂಗಳದಲ್ಲಿನ ಡಿಂಗ ಹಾಗೂ ಇತರೆ ಕಥೆಗಳನ್ನು ಓದುತ್ತಿದ್ದೆ. ಅಮ್ಮ ಹೆಚ್ಚಿನ ವಿದ್ಯಾಭ್ಯಾಸ ಪಡೆಯದೇ ಇದ್ದರೂ ಸುಧಾ ತರಿಸಿಕೊಂಡು ಧಾರಾವಾಹಿ ಓದುತ್ತಿದ್ದರು. ಇವುಗಳನ್ನು ನಾನೂ ಗಮನಿಸುತ್ತಿದ್ದೆ. ಹೀಗೆ ಸಾಹಿತ್ಯದ ಬಗ್ಗೆ ಒಲವು ಮೂಡಿತು ಎನ್ನಬಹುದು. ⇒v
ನಿರೂಪಣೆ: ಅಭಿಲಾಷ್ ಪಿ.ಎಸ್.
ಮಕ್ಕಳ ರಾಜ್ಯದಲ್ಲಿ ಎಷ್ಟೊಂದು ಸೊಗಸು
–ನವ್ಯ ಆರ್ ಕತ್ತಿ
ನಾನು ಒಮ್ಮೊಮ್ಮೆ ಮಕ್ಕಳ ರಾಜ್ಯದ ಕಲ್ಪನೆ ಮಾಡಿಕೊಳ್ಳುತ್ತ, ಅದು ಯಾವಾಗ ನಮ್ಮ ಕಣ್ಣ ಮುಂದಿನ ಜಗತ್ತಾಗುತ್ತದೆ ಎಂದು ಧ್ಯಾನಿಸುತ್ತಿರುತ್ತೇನೆ. ಈಗಿನ ರಾಜ್ಯದಲ್ಲಿ ಮಕ್ಕಳಿಗೆ ಮುಕ್ತ ಅವಕಾಶಗಳಿಲ್ಲ ಎನ್ನುವುದಕ್ಕಿಂತ ಒತ್ತಡದ ಹೇರಿಕೆ, ಶೋಷಣೆಗಳ ಭಾರದ ಬೀಗವಿದೆ ಎಂಬ ಕೊರಗಿದೆ.
ಶಾಲೆಯಲ್ಲಿ ಮಕ್ಕಳ ವಿಧಾನಸಭೆ ಅಣುಕು ಪ್ರದರ್ಶನ ನಿಜವಾಗಿಯೂ ಮಕ್ಕಳನ್ನು ಅಣಕಿಸಲು ಮಾಡಿದಂತೆ ನನಗೆ ತೋರಿದೆ. ಮಕ್ಕಳ ದಿನಾಚರಣೆ ಸಂಭ್ರಮದ ಹೊತ್ತಲ್ಲಿ ಮಕ್ಕಳ ರಾಜ್ಯ ಸ್ಥಾಪನೆಯಾಗಿ ಮಕ್ಕಳ ವಿಧಾನಸಭೆ ಹೇಗೆ ಇರುತ್ತದೆ, ಏನೆಲ್ಲ ಬಯಸುತ್ತೇವೆ ಎಂಬುದನ್ನು ತಿಳಿಸಿ ಬಿಡುತ್ತೇನೆ.
ಮಕ್ಕಳ ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾದ ಮೊದಲ ದಿನವೇ ವಿಶೇಷ ಆಟ–ಪಾಠ ಕಲಿಕಾ ಶಾಲೆಗಳು ತೆರೆದು ಮಕ್ಕಳ ಅಭಿರುಚಿಗೆ ತಕ್ಕ ಪಾಠಗಳು, ಜೊತೆಗೆ ಆಟಗಳು ಅವುಗಳು ಬೇಕೆಂದಾಗ ಸಿಗಲು ಅನುಕೂಲ ಇರುತ್ತದೆ. ಶಾಲೆಗಳು ಆಡಿಕಲಿ ನೋಡಿಕಲಿ ಪರಿಕಲ್ಪನೆಯಲ್ಲಿ ದಿನದ ಚಟುವಟಿಕೆಗಳು ಸದಾ ನಡೆಯುತ್ತಿರುತ್ತವೆ. ಸುಂದರವಾದ ಆಟದ ಮೈದಾನದಲ್ಲಿ ಆಟ ಆಡುತ್ತಾ, ಉದ್ಯಾನದಲ್ಲಿನ ಪ್ರಾಣಿಪಕ್ಷಿಗಳ ಜೊತೆಗೆ ಬೆರೆತು ಪ್ರಕೃತಿ ಬಗ್ಗೆ ತಿಳಿದುಕೊಳ್ಳುವ ಗಿಡಮರಗಳಿಂದ ಕಂಗೊಳಿಸುವ ಹಸಿರುಮಯ ವಾತಾವರಣದಲ್ಲಿ ಬೇಕೆನ್ನುವ ಪಾಠ, ಹೊರೆಯಿಲ್ಲದ ಹೋಂವರ್ಕ್, ಸರಳವಾದ ಬದುಕಿನ ಪಾಠಗಳು, ಮಕ್ಕಳ ಮನಸ್ಸನ್ನು ಸದಾ ಅರಳಿಸುವ ಶಿಕ್ಷಣ ಇಲ್ಲಿ ಇರುತ್ತದೆ.
ಮಕ್ಕಳ ರಾಜ್ಯದಲ್ಲಿ ಉಚಿತವಾಗಿ ಆರೋಗ್ಯ, ಶಿಕ್ಷಣ ಮತ್ತು ರೈತರಿಗೆ ಬೀಜ, ಗೊಬ್ಬರ, ವಿದ್ಯುತ್, ಅಗತ್ಯವಿರುವ ಎಲ್ಲವುಗಳನ್ನು ನೀಡಲಾಗುವುದು. ಇವುಗಳನ್ನು ಹೊರತುಪಡಿಸಿದರೆ ಇಲ್ಲಿ ಯಾವುದೂ ಪುಕ್ಕಟೆ ಸಿಗುವುದಿಲ್ಲ.
ವೃದ್ಧರು ಮತ್ತು ಅನಾಥರನ್ನು ಸಾಕುವ ಹೊಣೆ ಸರ್ಕಾರದ್ದೇ ಆಗಿರುತ್ತದೆ. ಪರಿಸರ ದಿನಾಚರಣೆಯಂದು ಪ್ರತಿ ಮನೆಗೂ ಒಂದೊಂದು ಗಿಡ ಕೊಡುವ ಸಂಪ್ರದಾಯವಿರುತ್ತದೆ. ಅದನ್ನು ಬೆಳೆಸಿ ಪೋಷಣೆ ಮಾಡಲು ಸರ್ಕಾರವೇ ವಿಶೇಷ ಗಮನ ಕೊಡುತ್ತದೆ.
ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿ ಸಂಪೂರ್ಣ ಸರ್ಕಾರದ್ದು. ದೌರ್ಜನ್ಯ ಹಾಗೂ ಅತ್ಯಾಚಾರ ನಡೆದರೆ ಅಪರಾಧಿಗೆ ಎರಡು ದಿನದಲ್ಲಿ ಗಲ್ಲುಶಿಕ್ಷೆ ನೀಡಲಾಗುವುದು. ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಕಾನೂನು ಇರುತ್ತದೆ. ಹೆಣ್ಣು ಗಂಡು ಎಂಬ ಭೇದವಿಲ್ಲ, ಇಲ್ಲಿ ಎಲ್ಲರೂ ಸಮಾನರೇ.
‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸುಗಳೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲಿ’ ಎನ್ನುವ ಗಿರೀಶ ಕಾರ್ನಾಡ ಅಜ್ಜರ ಮಾತು ಪದೇಪದೇ ನೆನಪಾಗುತ್ತದೆ.
ಬಾಲ್ಯವೆಂಬ ಬದುಕಿನ ರಂಗಭೂಮಿ...
–ಅನನ್ಯಾ ಭಟ್, ಗಾಯಕಿ
ಬಾಲ್ಯವೆಂದರೆ ಈಗ ನಡೆದು ಬಂದ ದಾರಿಯನ್ನು ತಿರುಗಿ ನೋಡುತ್ತಾ, ನೆನಪುಗಳನು ಬೆನ್ನತ್ತುವ ಯಾನ. ಮೈಸೂರಿನ ಅಗ್ರಹಾರದ ಮನೆಯಲ್ಲಿ ಕರೆಂಟ್ ಹೋದಾಗ ಕತ್ತಲಲ್ಲಿ ತಂದೆಗೆ ಒಪ್ಪಿಸಿದ ಹಾಡುಗಳು, ಸಂಸ್ಕೃತ ಶ್ಲೋಕಗಳು ಈಗಲೂ ಒಂದು ಪದ ಆಚೀಚೆಯಾಗದು. ಬಾಲ್ಯದ ಕಲಿಕೆಯೇ ಅಚ್ಚುಕಟ್ಟು, ಶಿಸ್ತು!
‘ನಟನ’ ರಂಗಶಾಲೆಯಲ್ಲಿ ವೇದಿಕೆಯೇರಿ ಅಭಿನಯಿಸಿದ ‘ಮಣ್ಣಿನ ಮನೆ’ ನಾಟಕದ ಸಂಭಾಷಣೆಯ ದನಿ ಈಗಲೂ ಅನುರಣಿಸುತ್ತದೆ. ‘ರಜಾ ಮಜಾ’ ಬೇಸಿಗೆ ಶಿಬಿರದಲ್ಲಿ ಕಟ್ಟಿದ ಆಟಗಳು, ಹಾಡು, ನಾಟಕಗಳು ನೆನಪಾಗುತ್ತವೆ. ಎಲ್ಲರಂತೆ ನನ್ನ ಬಾಲ್ಯವೂ ಸಮೃದ್ಧ. ತಾಯಿ ರೇವತಿ ಬಟ್ಟೆ ಅಂಗಡಿ ಇಟ್ಟಿದ್ದರು. ಟೇಲರಿಂಗ್ ಮಿಷಿನ್ ಪೆಡಲ್ ತುಳಿಯುತ್ತಾ, ಸೂಜಿ– ದಾರದಲ್ಲಿ ನಮ್ಮ ಬದುಕನ್ನೂ ಹೊಲಿದರು. ನಾನೂ ಅವರಿಗೆ ಸಹಾಯ ಮಾಡುತ್ತಿದ್ದೆ. ನನ್ನ ಬೊಂಬೆಗಳಿಗೆ ಮಿಡಿ, ಫ್ರಾಕೂ ಹೊಲಿದುಕೊಳ್ಳುತ್ತಿದ್ದೆ. ಕಲಿತದ್ದೆಲ್ಲವೂ ಕಲೆ. ಅದಕ್ಕೆ ಒಪ್ಪಿಸಿಕೊಳ್ಳುತ್ತ ಹೋಗುವುದು ನಮ್ಮ ಅಭಿವ್ಯಕ್ತಿ.
ತಂದೆ ವಿಶ್ವನಾಥ ಭಟ್ ಸಂಸ್ಕೃತ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಪೋಷಕರು ಅವರ ಕೆಲಸಗಳಲ್ಲಿ ಬ್ಯುಸಿ. ನನ್ನ ಬಾಲ್ಯ ಕಳೆದದ್ದೆಲ್ಲ ನಾಟಕ, ನೃತ್ಯ, ಸಂಗೀತ, ಹಾಡುಗಾರಿಕೆಯಲ್ಲೇ. ಬೆಳಿಗ್ಗೆ ಶಾಲೆಗೆ ಹೋದರೆ ಸಂಜೆ ನೃತ್ಯ– ಸಂಗೀತ ತರಗತಿಗಳನ್ನು ಮುಗಿಸಿಕೊಂಡು ರಾತ್ರಿ ವಾಪಾಸಾಗುತ್ತಿದ್ದೆ.
ಈಗ ಪ್ರತಿ ಹಾಡು, ಕಾರ್ಯಕ್ರಮಕ್ಕೂ ಸಿಗುವ ಚಪ್ಪಾಳೆ ಕೇಳಿದಾಗ ಪೂರ್ಣಿಮಾ ಅವರ ನಿರ್ದೇಶನದಲ್ಲಿ ನಾನು ಮೊದಲು ಅಭಿನಯಿಸಿದ್ದ ‘ಮಣ್ಣಿನ ಮನೆ’ ನಾಟಕ ಮುಗಿದಾಗ ಹೊಮ್ಮಿದ ಪ್ರೇಕ್ಷಕರ ಕರತಾಡನವೇ ನೆನಪಾಗುತ್ತದೆ. ರಾಜು ಅನಂತಸ್ವಾಮಿ, ಶಿವಾಜಿರಾವ್ ಜಾಧವ್, ನಾಗೇಶ್ ಕಂದೇಗಾಲ, ಮಹಾಲಿಂಗ, ದೇವಾನಂದ ವರಪ್ರಸಾದ್ ಹಾಡುಗಳನ್ನು ಹೇಳಿಕೊಟ್ಟವರು. ಅವರಿಂದ ಹಾಡಷ್ಟೇ ಅಲ್ಲ ಕಂಸಾಳೆ, ಪೂಜಾ ಕುಣಿತ, ನಂದಿಧ್ವಜ ಕುಣಿತ, ವೀರಗಾಸೆ ಸೇರಿದಂತೆ ಹಲವು ಜಾನಪದ ಕಲೆಗಳನ್ನೂ ಕಲಿತೆ. ಈ ರಂಗಭೂಮಿ ಎಲ್ಲವನ್ನು ಕಲಿಸುತ್ತದೆ. ಅದು ನನ್ನ ಸ್ಟೇಜ್ ಫಿಯರ್ ಅನ್ನು ಮಾಯಮಾಡಿಬಿಟ್ಟಿತು. ಇಲ್ಲಿ ಎಲ್ಲರೂ ಸಮಾನರು. ಶ್ರೇಣಿ, ಜಾತಿ ಭೇದವೆಂಬುದಿಲ್ಲ. ನಾವು ಕಲೆಯ ಮಕ್ಕಳು.⇒ v
ನಿರೂಪಣೆ: ಮೋಹನ್ ಕುಮಾರ ಸಿ.
ಡಾನ್ಸ್ ಮಾಡುವ ಉತ್ಸಾಹ ಹೆಚ್ಚಿತ್ತು
–ವಿಜಯ್ ಸೂರ್ಯ, ನಟ
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನನಗೆ ಬಾಲ್ಯ ಅಂದರೆ, ಜಯನಗರ 9ನೇ ಬ್ಲಾಕ್ ನೆನಪಾಗುತ್ತದೆ. ಸುಮಾರು 10ವರ್ಷ ನಮ್ಮ ಮನೆ ಅಲ್ಲಿತ್ತು. ನಂತರ ಜೆ.ಪಿ.ನಗರಕ್ಕೆ ಬದಲಿಸಿದೆವು. ಅಪ್ಪನ ಕೆಲಸದ ಅನುಕೂಲಕ್ಕೆ ಮನೆ ಬದಲಿಸಿದ್ದು ಮುಖ್ಯ ಕಾರಣ. ಆದರೂ ಶಾಲೆಗೆ ರಜೆ ಇದ್ದಾಗೆಲ್ಲ ಗೆಳೆಯರ ಜೊತೆ ಕ್ರಿಕೆಟ್‌ನಲ್ಲೇ ಮುಳುಗಿರುತ್ತಿದ್ದೆ. ಅದಕ್ಕೆ ‘ಇಲ್ಲೇ ಬಿಟ್ಟರೆ ನನ್ನ ಮಗ ಬೀದಿಯಲ್ಲೇ ಇರ್ತಾನೆ’ ಎನ್ನುವ ಕಾರಣಕ್ಕೇ ಮನೆ ಬದಲಿಸಿದ್ದು ಎಂಬ ಮತ್ತೊಂದು ಕಾರಣವನ್ನು ಅಮ್ಮ ನೀಡುತ್ತಾರೆ.
ಪೋಷಕರು ಯಾವುದಕ್ಕೂ ಕೊರತೆ ಮಾಡಲಿಲ್ಲ. ಹಾಗೆಂದು ನಾವು ಕೇಳಿದ್ದೆಲ್ಲ ಕೊಡಿಸಲಿಲ್ಲ. ಯಾವುದು ಮುಖ್ಯ ಯಾವುದು ಅಮುಖ್ಯ ಎನ್ನುವ ಸ್ಪಷ್ಟತೆ ಅವರಿಗಿತ್ತು. ಈಗ ನಾನು ಒಬ್ಬ ತಂದೆಯಾಗಿ ಆ ವಿಚಾರದಲ್ಲಿ ಗೊಂದಲವಿದೆ. ಮನೆ ಬದಲಾದ ಮೇಲೆ ಸ್ನೇಹಿತರು ಕಡಿಮೆಯಾದರು. ಆಡಲು ಹೊರಗೆ ಹೋಗುತ್ತಿರಲ್ಲ. ಅಮ್ಮ ತಮ್ಮ ಕಣ್ಣಳತೆಯಲ್ಲೇ ಇಟ್ಟುಕೊಳ್ಳಲು ಬಯಸುತ್ತಿದ್ದರು. ಸ್ನೇಹಿತರು ಎಂದರೆ ತಾಯಿ ಮತ್ತು ಅಣ್ಣ. ಮನೆಯ ಕಾಂಪೌಂಡ್ ಒಳಗೆ ಅಣ್ಣ ರವಿ ಸೂರ್ಯನ ಜೊತೆ ಆಡುತ್ತಿದ್ದೆ. ಡ್ರಾಯಿಂಗ್ ಮಾಡುವ ಹವ್ಯಾಸ ಆಗಿತ್ತು.
1995ರ ಸುಮಾರು ನಮ್ಮ ಮನೆಗೆ ಮೊದಲ ಕಲರ್ ಟಿ.ವಿ. ಬಂತು. ಆಗ ನಮ್ಮ ಬಡಾವಣೆಯ ಅನೇಕ ಮಕ್ಕಳು ಟೀವಿ ನೋಡಲು ಬರುತ್ತಿದ್ದರು. ಅದು ತುಂಬ ಖುಷಿ ಕೊಡುತ್ತಿತ್ತು. ಲ್ಯಾಂಡ್ ಲೈನ್ ಫೋನ್ ಬಂದಾಗ, ಫೋನ್ ಪಕ್ಕದಲ್ಲೇ ಕೂತಿರುತ್ತಿದ್ದೆ.
ಶಾಲೆ ಅಂದ ತಕ್ಷಣ ವಾರ್ಷಿಕೋತ್ಸವ ನೆನಪಾಗುತ್ತದೆ. ಏಕೆಂದರೆ ನನಗೆ ಡಾನ್ಸ್ ಮಾಡುವುದು ಖುಷಿ ಕೊಡುತ್ತಿತ್ತು. ವರ್ಷವಿಡೀ ಆ ಒಂದು ದಿನಕ್ಕಾಗಿ ಕಾಯುತ್ತಿದ್ದೆ. ಐಸಿಎಸ್‌ಇ ಪಠ್ಯ ಓದಿದ್ದರಿಂದ ಪರೀಕ್ಷಾ ಭಯವೂ ಇರುತ್ತಿತ್ತು. ಆದರೆ ಓದುವುದು ನನಗೆ ಹೊರೆ ಅನ್ನಿಸುತ್ತಿರಲಿಲ್ಲ. ಯಾವತ್ತೂ ಓದಿನಲ್ಲಿ ಹಿಂದೆ ಬೀಳಲೂ ಇಲ್ಲ. ತರಗತಿಯಲ್ಲಿ ಗಮನ ಇಟ್ಟು ಪಾಠ ಕೇಳುತ್ತಿದ್ದೆ ಮನೆಗೆ ಬಂದು ಓದುತ್ತಿದ್ದೆ. ಒಳ್ಳೆಯ ಅಂಕವನ್ನೂ ತೆಗೆದುಕೊಳ್ಳುತ್ತಿದ್ದೆ. ಎಂದೂ ತರ್ಲೆ ಮಾಡಿದವನಲ್ಲ. ಜಾಸ್ತಿ ಮಾತನಾಡುತ್ತಿದ್ದೆ ಎಂದು ಹುಡುಗಿಯರ ಮಧ್ಯೆ ಕೆಲವೊಮ್ಮೆ ಕೂರಿಸುತ್ತಿದ್ದರು. ಅದು ಮುಜುಗರ ಅನ್ನಿಸುತ್ತಿತ್ತು. ಅದೇ ಆಗ ನನಗೆ ಕೊಡುತ್ತಿದ್ದ ಶಿಕ್ಷೆ.
ನಿರೂಪಣೆ: ರಾಘವೇಂದ್ರ ಕೆ. ತೊಗರ್ಸಿ
ಕಷ್ಟಗಳಿಗೆ ರಾಜೀ ಆಗದ ರಾಜೇಶ್ವರಿ
–ರಾಜೇಶ್ವರಿ ಗಾಯಕವಾಡ ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್
ನಮ್ಮದು ಮಧ್ಯಮವರ್ಗದ ಕುಟುಂಬ. ಅಪ್ಪ, ಅಮ್ಮನಿಗೆ ನಾನು ಸೇರಿ ಒಟ್ಟು ಐದು ಜನ ಮಕ್ಕಳು. ಅಪ್ಪ ಶಿಕ್ಷಕರಾಗಿದ್ದರು. ಅವರ ಪಗಾರದಲ್ಲಿಯೇ ಕುಟುಂಬ ನಡೆಯಬೇಕಿತ್ತು. ಎಲ್ಲ ಮಕ್ಕಳ ಶಾಲಾ ಶುಲ್ಕ, ಮನೆಯ ಖರ್ಚುಗಳನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು. ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ನನಗೆ ಶಾಲೆಯಲ್ಲಿದ್ದಾಗಿನಿಂದಲೂ ಕ್ರೀಡೆ ಮೇಲೆ ಪ್ರೀತಿ ಹೆಚ್ಚು. ಎಲ್ಲ ಆಟಗಳ ಸ್ಪರ್ಧೆಗಳಲ್ಲಿಯೂ ಭಾಗವಹಿಸುತ್ತಿದ್ದೆ. ಆಗ ನಮ್ಮ ಊರಲ್ಲಿ ಹುಡುಗಿಯರಿಗೆ ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ಶುರುವಾಯಿತು. ಈ ಆಟವನ್ನು ಕಲಿಯಬೇಕು ಎಂಬ ಆಸಕ್ತಿಯಿಂದ ಸೇರಿದೆ. ದೊಡ್ಡ ಕ್ರಿಕೆಟಿಗಳಾಗಬೇಕೆಂಬ ಯೋಚನೆಯೇ ಇರಲಿಲ್ಲ. ಖುಷಿಗಾಗಿ ಆಡುತ್ತಿದ್ದೆ. ಭಾರತ ತಂಡದ ಬೌಲರ್ ಜಹೀರ್ ಖಾನ್ ಅವರ ಬೌಲಿಂಗ್ ಶೈಲಿ ಇಷ್ಟವಾಗಿತ್ತು. ನಾನೂ ಅವರಂತೆಯೇ ವೇಗದ ಬೌಲಿಂಗ್ ಮಾಡುವ ಪ್ರಯತ್ನ ಮಾಡುತ್ತಿದ್ದೆ. ಸಣ್ಣ ವಯಸ್ಸಿನ ಕಾರಣ ರಟ್ಟೆಗಳಲ್ಲಿ ಶಕ್ತಿ ಕಡಿಮೆಯಿತ್ತು. ಸ್ಪಿನ್ನರ್ ಆಗು, ವೇಗದ ಬೌಲರ್ ಬೇಡ ಎಂದು ತರಬೇತುದಾರರು ಸಲಹೆ ಮಾಡಿದರು. ನಾನು ಒಪ್ಪಲಿಲ್ಲ. ಆದರೆ ಅಪ್ಪಾಜಿ ನನ್ನ ಮನವೊಲಿಸಿದರು. ಆಗ ಸ್ಪಿನ್ ಬೌಲಿಂಗ್ ಆರಂಭಿಸಿದೆ.
ನನ್ನ ತಂಗಿ ರಾಮೇಶ್ವರಿ ಕೂಡ ಆಡುತ್ತಿದ್ದಳು. ನಮ್ಮಿಬ್ಬರನ್ನೂ ಕ್ರಿಕೆಟ್ ತರಬೇತಿಗೆ ಕರೆದುಕೊಂಡು ಹೋಗಿಬರುವುದು ಅಪ್ಪನ ಕೆಲಸವಾಗಿತ್ತು. ಅಪ್ಪನೇ ನಾನು ಕ್ರಿಕೆಟಿಗಳಾಗಲು ಕಾರಣ. ಅಮ್ಮ ನನ್ನ ಊಟ, ತಿಂಡಿಯ ಬಗ್ಗೆ ಕಾಳಜಿ ವಹಿಸುತ್ತಿದ್ದರು. ನಮ್ಮೂರು ಬಿಜಾಪುರ (ವಿಜಯಪುರ)ದಲ್ಲಿ ಒಳ್ಳೆಯ ಮೈದಾನಗಳು ಇರಲಿಲ್ಲ. ಬಿಸಿಲು, ಮಳೆ ಏನೂ ಲೆಕ್ಕಿಸದೆ ಆಡುತ್ತಿದ್ದೆ. ಬಿದ್ದು, ಎದ್ದು ಮೈಕೈ ಗಾಯವಾದರೂ ಆಟದ ಪ್ರೀತಿಗಾಗಿ ಸಹಿಸಿಕೊಳ್ಳುತ್ತಿದ್ದೆ. ಅದರಿಂದಾಗಿಯೇ ಕಷ್ಟಗಳನ್ನು ಸಹಿಸಿಕೊಂಡು ಗೆಲ್ಲುವ ಮನೋಭಾವ ಬೆಳೆಯಿತು. ಇವತ್ತು ಅಂತರರಾಷ್ಟ್ರೀಯ ಮೈದಾನಗಳಲ್ಲಿ ಆಡುವಾಗ ಏನೂ ಕಷ್ಟವಾಗುವುದಿಲ್ಲ. ಬದಲಿಗೆ ಆ ಕ್ಷಣಗಳನ್ನು ಮನತುಂಬಿ ಆನಂದಿಸುತ್ತೇನೆ. ಬಾಲ್ಯ ಅಥವಾ ಕಲಿಕೆ ಹಂತದಲ್ಲಿ ಯಾವುದೇ ಸಮಸ್ಯೆ ಬಂದರೂ ಎದೆಗುಂದದೇ ಮುನ್ನುಗ್ಗಬೇಕು. ಅಪ್ಪ ತೀರಿಹೋದ ಮೇಲೆ ಮನೆಯ ಹೊಣೆಯನ್ನು ನಾನು ನಿಭಾಯಿಸಿದೆ. ಇದರಿಂದಾಗಿ ಸದ್ಯ ಕುಟುಂಬವು ಸುಸ್ಥಿರವಾಗಿದೆ. ⇒v
ನಿರೂಪಣೆ: ಗಿರೀಶ ದೊಡ್ಡಮನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.