ADVERTISEMENT

ಚೀನಾ ಕಲಿಯಬೇಕಾದ ಆರೋಗ್ಯ ಪಾಠ

ಮಾಹಿತಿ ಮುಚ್ಚಿಡುವ ತನ್ನ ಚಾಳಿಯನ್ನು ಈ ದೇಶ ಹೇಗೆ ಸಮರ್ಥಿಸಿಕೊಳ್ಳುತ್ತದೆ?

ಟಿ.ಆರ್.ಅನಂತರಾಮು
Published 5 ಏಪ್ರಿಲ್ 2020, 21:00 IST
Last Updated 5 ಏಪ್ರಿಲ್ 2020, 21:00 IST
   
""

ಜಗತ್ತಿನ ವಿವಿಧ ವೈರಸ್ ಪ್ರಯೋಗಾಲಯಗಳಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ಈಗ ಒಂದು ಮಟ್ಟಿಗೆ ನಿಟ್ಟುಸಿರುಬಿಟ್ಟಿದ್ದಾರೆ. ಕೊರೊನಾ ವೈರಸ್ ಮೂಲ ಯಾವುದೆಂದು ಕಗ್ಗಂಟಾಗಿದ್ದ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ. ಈ ಪ್ರಯತ್ನದಲ್ಲಿ ಎರಡು ಜೀವಿಗಳ ಕಡೆ ಬೊಟ್ಟು ಮಾಡಿದ್ದಾರೆ. ಒಂದು, ಕೊರೊನಾ ವೈರಸ್ಸನ್ನು ಹೊತ್ತಿರುವ ಬಾವಲಿಗಳು. ಇನ್ನೊಂದು, ಅನಿರೀಕ್ಷಿತ ಮೂಲ– ಇರುವೆಬಾಕ ಎಂದೇ ಪ್ರಸಿದ್ಧವಾಗಿರುವ ಪಂಗೋಲಿನ್‍ಗಳು. ಮನುಷ್ಯನ ಜೊತೆ ಹೊಂದಿಕೊಂಡಿರುವ ಬಾವಲಿಗಳಲ್ಲಿ ಈ ವೈರಸ್ ಇಲ್ಲ. ಆದರೆ ಕಾಡುಬಾವಲಿಗಳಲ್ಲಿ ಖಚಿತಪಟ್ಟಿದೆ. ಬಾವಲಿಗಳನ್ನು ಕಂಡರೆ ಶುಭ ಎನ್ನುತ್ತಿದ್ದ ಅದೇ ಚೀನೀಯರು ಈಗ ಅವಕ್ಕೆ ರಕ್ಕಸ ಸ್ಥಾನ ಕೊಟ್ಟಿದ್ದಾರೆ.

ಮತ್ತೆ ಅದೇ ಮೂಲದ ಪ್ರಶ್ನೆ. ಕೊರೊನಾ ವೈರಸ್‍ನ ತವರಾಗಿದ್ದ ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ಕಾಡುಬಾವಲಿಗಳು, ಪಂಗೋಲಿನ್‍ಗಳು ಇದ್ದವು. ಅಲ್ಲಿನ ಮಾರುಕಟ್ಟೆಯಲ್ಲಿ ನರಿ, ಹಾವು, ಕಾಡುಬೆಕ್ಕು, ನರಿಗಳನ್ನು ಹೋಲುವ ರಕೋನ ನಾಯಿ, ಮುಳ್ಳುಹಂದಿ- ಇವುಗಳಿಗೆ ಉಸಿರಾಡಲು ಜಾಗವೇ ಇಲ್ಲದಂತೆ ಪಂಜರಗಳನ್ನು ಒತ್ತೊತ್ತಾಗಿ ಇಡಲಾಗಿತ್ತು. ಈ ಪ್ರಾಣಿಗಳನ್ನು ಗಿರಾಕಿಗಳ ಎದುರಿಗೇ ಕತ್ತರಿಸಿಕೊಡುವ ಪರಿಪಾಟ ಅಲ್ಲಿ ನೈತಿಕತೆಯ ಪ್ರಶ್ನೆಯನ್ನೇನೂ ಏಳಿಸಿರಲಿಲ್ಲ. ಇಲ್ಲಿಂದಲೇ ಶುರು ಎಡವಟ್ಟು. ಆದರೆ, ಪ್ರಾಣಿ-ಪಕ್ಷಿಗಳಲ್ಲಿರುವ ವೈರಸ್‌ ನೇರವಾಗಿ ಆರೋಗ್ಯವಂತ ಮನುಷ್ಯನಲ್ಲಿ ಸೇರುವುದಿಲ್ಲ. ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುವವನಿಗೆ ನೆಗಡಿ-ಜ್ವರ ಇದ್ದರೆ, ಅಥವಾ ಬೇರೇನಾದರೂ ಕಾರಣದಿಂದ ಆತನಲ್ಲಿ ರೋಗನಿರೋಧಕಶಕ್ತಿ ಕುಗ್ಗಿದ್ದಿದ್ದರೆ ಪ್ರಾಣಿಯಲ್ಲಿದ್ದ ವೈರಸ್‌ ಅಪರೂಪಕ್ಕೆ ಈತನಿಗೆ ದಾಟುತ್ತದೆ. ನಂತರ ಅವನ ಮನೆಯವರಿಗೆ. ಹೀಗೆಯೇ ಚೀನಾದಲ್ಲೂ ಆಗಿರುವುದನ್ನು ಪ್ರಯೋಗಾಲಯಗಳು ಖಚಿತಪಡಿಸಿವೆ. ಈ ಹಂತದಲ್ಲಿ ಅದು ಅಲ್ಲಿಂದ ಇಡೀ ಜಗತ್ತಿಗೆ ಬಹುಬೇಗ ಹರಡಿಬಿಟ್ಟಿತು.

ನಮ್ಮಲ್ಲಿ ಕೋಳಿಫಾರ್ಮ್‌ಗಳು ಇರುವಂತೆ ಚೀನಾದಲ್ಲಿ ವನ್ಯಜೀವಿಗಳನ್ನೇ ಬೆಳೆಸುವ ಫಾರ್ಮ್‌ಗಳುಂಟು. ಇದಕ್ಕೆ ಸರ್ಕಾರವೂ ಕುಮ್ಮಕ್ಕು ಕೊಡುತ್ತಿದೆ. ಇದು ಬಹು ದೊಡ್ಡ ವಾಣಿಜ್ಯೋದ್ಯಮವಾಗಿ ಬೆಳೆದಿದೆ. ಕನಿಷ್ಠ ಹತ್ತು ಲಕ್ಷ ಜನ ಈ ಉದ್ಯೋಗದಲ್ಲಿ ತೊಡಗಿದ್ದಾರೆ. ಬೀಜಿಂಗ್‍ನ ನಾರ್ಮಲ್ ವಿಶ್ವವಿದ್ಯಾಲಯವು 2012ರಲ್ಲೇ ಚೀನಾದ ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಅಲ್ಲಿನ ಮುಕ್ಕಾಲು ಪಾಲು ಜನ ವನ್ಯಜೀವಿ ಮಾಂಸದ ರುಚಿ ನೋಡಿರುವ ಅಂಶ ಬೆಳಕಿಗೆ ಬಂದಿತ್ತು. ಒಂದಲ್ಲ ಇಪ್ಪತ್ತು ಸಾವಿರ ವನ್ಯಜೀವಿಗಳ ಫಾರ್ಮ್ ಇರುವುದೂ ಖಚಿತಪಟ್ಟಿದೆ. ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಸುದ್ದಿ ಮಾಡಲು ಪ್ರಾರಂಭವಾದಾಗ ಇಷ್ಟೂ ವನ್ಯಜೀವಿ ಫಾರ್ಮ್‌ಗಳನ್ನು ಚೀನಾ ಮುಚ್ಚಿಬಿಟ್ಟಿತು.

ADVERTISEMENT

ಈಗಂತೂ ವುಹಾನ್ ಮಾರುಕಟ್ಟೆ ಯಾವುದೆಂಬುದೂ ಗುರುತೂ ಸಿಗದಂತೆ ಶುದ್ಧೀಕರಣ ಮಾಡಿದೆ. ನರಿ, ಜಿಂಕೆ, ಆಮೆ, ನವಿಲುಗಳನ್ನು ಬೆಳೆಸುವ ಫಾರ್ಮ್‌ಗಳು ಪ್ರತಿಷ್ಠಿತ ಫಾರ್ಮ್‌ಗಳೆಂದೇ ಚೀನಾದಲ್ಲಿ ಭಾವಿಸಲಾಗಿದೆ. ಅವುಗಳ ಮಾಂಸದ ಬೆಲೆಯೂ ಹೆಚ್ಚು. ವನ್ಯಜೀವಿಗಳ ಫಾರ್ಮ್‌ಗಳನ್ನು ಶಾಶ್ವತವಾಗಿ ಮುಚ್ಚಬೇಕು, ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಚೀನಾ ಸೈನ್ಸ್ ಅಕಾಡೆಮಿಯ ವಿಜ್ಞಾನಿಗಳು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದರು. ಈಗ ಕೊರೊನಾ ವೈರಸ್ ದಾಂದಲೆ ಮಾಡಲು ಪ್ರಾರಂಭಿಸಿದೊಡನೆ
ಪಂಗೋಲಿನ್ ಮಾಂಸ ತಿನ್ನುವುದನ್ನು ಸರ್ಕಾರ ನಿಷೇಧಿಸಿದೆ. ವಿಚಿತ್ರವೆಂದರೆ ಅದರ ಮೈಮೇಲಿನ ಹುರುಪೆಯನ್ನು ಔಷಧಿಯಾಗಿ ಬಳಸುವುದು ಅಪರಾಧವಲ್ಲ. ಬಾವಲಿಯನ್ನು ತಿಂದರೆ ಕ್ಯಾನ್ಸರ್ ಗುಣಪಡುತ್ತದೆ ಎಂಬ ಮೌಢ್ಯವು ಚೀನೀಯರಲ್ಲಿ ಲಾಗಾಯ್ತಿನಿಂದ ಬೇರೂರಿದೆ. ಹಾಗೆಯೇ ಸಂಧಿವಾತಕ್ಕೆ ಹಾವಿನ ಸೂಪ್‌ ದಿವ್ಯೌಷಧ ಎಂಬುದು ಅವರ ತಲೆಯಲ್ಲಿ ಹೊಕ್ಕುಬಿಟ್ಟಿದೆ.

ಚೀನಾದ ವನ್ಯಜೀವಿ ಸಂರಕ್ಷಣಾ ನೀತಿಗಳು ಅರ್ಥ ಕಳೆದುಕೊಂಡಿವೆ. ಏಕೆಂದರೆ ಈಗಲೂ ಹುಲಿಗಳನ್ನು ಫಾರ್ಮ್‌ಗಳಲ್ಲಿ ಬೆಳೆಸಲು ಉತ್ತೇಜಿಸಲಾಗುತ್ತಿದೆ. ಈಗ ಹುಲಿಗಳನ್ನು ಮಾಂಸಕ್ಕಾಗಿ ಕೊಲ್ಲಬೇಡಿ ಎಂಬ ಕರಾರು ಹಾಕಿದರೂ ಹುಲಿಯ ಚರ್ಮದ ಉದ್ಯಮಕ್ಕೆ ನಿಷೇಧ ಹೇರಿಲ್ಲ. ಚೀನಾ ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?ಫಾರ್ಮ್‌ನಿಂದ ಈ ಜೀವಿಗಳನ್ನೆಲ್ಲ ಮುಕ್ತ ಮಾಡಿ ಕಾಡಿಗೆ ಬಿಟ್ಟರೆ ಅವಕ್ಕೆ ಹೊಂದಿಕೊಳ್ಳಲು ಸಾಧ್ಯವೇ ಇಲ್ಲ ಅಥವಾ ಸಹಜ ಆವಾಸದಲ್ಲಿರುವ ವನ್ಯಜೀವಿಗಳಿಗೆ ಇವುಗಳಿಂದಲೇ ರೋಗ ಹರಡಬಹುದು ಎನ್ನುವ ನೆಪವನ್ನು ಮುಂದೊಡ್ಡುತ್ತಿದೆ.

ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬ ಜಾಣ ಸೂತ್ರವನ್ನು ಚೀನಾ ಅನುಸರಿಸುತ್ತಿದೆ. ಫಾರ್ಮ್‌ಗಳಲ್ಲಿ ವನ್ಯಜೀವಿಗಳನ್ನು ಅಭಿವೃದ್ಧಿಪಡಿಸುವುದನ್ನು ನಿಷೇಧಿಸುವುದು ಬೇಡ, ಆದರೆ ಅವು ಮಾಂಸದ ಮಾರುಕಟ್ಟೆಗೆ ಬರುತ್ತಲೇ, ಅಂದರೆ ಜೀವಂತವಾಗಿರುವಾಗಲೇ ವೈರಸ್ ಇದೆಯೇ ಇಲ್ಲವೇ ಎಂದು ಕೂಲಂಕಷವಾಗಿ ಅಧ್ಯಯನ ಮಾಡಿ ಖಚಿತಪಡಿಸಿಕೊಂಡ ನಂತರವೇ ಕತ್ತರಿಸಬಹುದು ಎಂದಿದೆ. ವನ್ಯಜೀವಿ ಫಾರ್ಮ್‌ಗಳಿಗೆ ನಿಷೇಧ ಹೇರಿದರೆ ಅದು ಕಳ್ಳದಂಧೆಗೆ ಕಾರಣವಾಗುತ್ತದೆ ಎಂಬ ಇನ್ನೊಂದು ಸಬೂಬು ಹೇಳುತ್ತಿದೆ.

ಸದ್ಯಕ್ಕೆ ಚೀನಾ ಒಂದು ದೊಡ್ಡ ಅಪವಾದದಿಂದ ಪಾರಾಗಿದೆ. ವುಹಾನ್‍ನಲ್ಲಿ ಆ ದೇಶದ ಬಹುದೊಡ್ಡ ವೈರಸ್ ಸಂಶೋಧನಾ ಕೇಂದ್ರವಿದೆ. ಅಲ್ಲಿ ವಿಜ್ಞಾನಿಗಳು ಸಂಶೋಧನೆ ಮಾಡುವಾಗ ಕೊರೊನಾ ವೈರಸ್‍ ನಿಯಂತ್ರಣ ತಪ್ಪಿ ಪ್ರಯೋಗಾಲಯಗಳಿಂದ ಹೊರಬಿದ್ದ ಕಾರಣವಾಗಿಯೇ ವೈರಸ್ ವ್ಯಾಪಕವಾಗಿ ಹರಡಿತು ಎಂಬ ಮಾತು ಬಹುಬೇಗ ಜಗತ್ತಿಗೆ ಹಬ್ಬಿತು. ಚೀನೀಯರು ಜೈವಿಕ ಸಮರಾಸ್ತ್ರವನ್ನಾಗಿ ಈ ವೈರಸ್ಸನ್ನು ಮಾರ್ಪಡಿಸಿದಾಗ ಹುಟ್ಟಿರಬಹುದು ಎಂಬ ಗುಮಾನಿಯೂ ಇದರ ಹಿಂದೆಯೇ ಚಾಲ್ತಿ ಪಡೆಯಿತು. ಅಮೆರಿಕ ಮತ್ತು ಕೆಲವು ಯುರೋಪ್ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಕುರಿತು ಅಧ್ಯಯನ ಮಾಡಿ, ಇವು ಸಂಪೂರ್ಣವಾಗಿ ಹೊಸ ತಳಿಗಳು, ಮನುಷ್ಯ ಸೃಷ್ಟಿಯಲ್ಲ ಎಂದು ಘೋಷಿಸಿದಾಗ, ಅಷ್ಟರಮಟ್ಟಿಗೆ ಚೀನಾ ಆರೋಪದಿಂದ ಮುಕ್ತವಾಯಿತು. ಸದ್ಯ ಅಪಾರ ನಷ್ಟವನ್ನು ಜಗತ್ತಿಗೆ ಚೀನಾ ಬಳುವಳಿಯಾಗಿ ಕೊಟ್ಟಿರುವುದನ್ನು ಯಾವ ದೇಶವೂ ಕ್ಷಮಿಸುವುದಿಲ್ಲ. ಕೊರೊನಾ ಅಬ್ಬರ ನಿಂತ ಮೇಲಾದರೂ ಅಲ್ಲಿನ ವನ್ಯಜೀವಿ ಫಾರ್ಮ್‌ಗಳನ್ನು ಶಾಶ್ವತವಾಗಿ ಮುಚ್ಚದಿದ್ದರೆ, ಈಗಾಗಲೇ ಕೊರೊನಾದಿಂದ ನೊಂದು ಬೆಂದಿರುವ ದೇಶಗಳು ಆರ್ಥಿಕ ದಿಗ್ಬಂಧನ ಹೇರಬಹುದು. ಆದರೆ ಇದು ಸುಲಭಸಾಧ್ಯವಲ್ಲ. ಇಡೀ ಜಗತ್ತಿನ ಆಟೊಮೊಬೈಲ್ ಕೈಗಾರಿಕೆ
ಗಳು ಚೀನಾದಿಂದ ವಾರ್ಷಿಕ ನೂರಾರು ಕೋಟಿ ಡಾಲರ್ ಮೌಲ್ಯದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಈ ಕ್ಷೇತ್ರದ ಪಾಡು? ಇತ್ತೀಚೆಗಷ್ಟೇ ಕೊರೊನಾ ತಂದ ಸಾವು ನೋವಿನಲ್ಲಿ ಎರಡನೇ ಸ್ಥಾನಕ್ಕೆ ಏರಿದ ಸ್ಪೇನ್, ಕೊರೊನಾ ವೈರಸ್ ನಿರ್ಬಂಧಕ್ಕೆ ಬೇಕಾದ ಉಪಕರಣಗಳನ್ನು ಕೊಳ್ಳಲು ಚೀನಾದೊಂದಿಗೆ ವ್ಯವಹಾರಕ್ಕೆ ಮುಂದಾಗಿತ್ತು ಎಂದರೆ, ಜಗತ್ತು ಚೀನಾದ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಕೊರೊನಾ ವೈರಸ್ ಅಮೆರಿಕವನ್ನು ಅಮರಿಕೊಂಡ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನೇಕ ವೇದಿಕೆಗಳಲ್ಲಿ ಚೀನಾದ ಮೇಲೆ ಬಹಿರಂಗವಾಗಿಯೇ ಆಪಾದನೆಯನ್ನು ಹೊರಿಸಿದ್ದಾರೆ- ‘ಚೀನಾ ಮೂಲದಿಂದಲೇ ಬಂದ ಕೊರೊನಾ ವೈರಸ್ಸನ್ನು ‘ಚೀನಾ ವೈರಸ್’ ಎಂದೇಕೆ ಕರೆಯಬಾರದು?’ ಇದಕ್ಕೆ ಅಮೆರಿಕದ ಅನೇಕ ಸೆನೆಟರ್‌ಗಳೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಕೊಳಕು ರಾಜಕೀಯ ಎಂದಿದ್ದಾರೆ. ಅಮೆರಿಕದಲ್ಲೇ 25 ಲಕ್ಷ ಚೀನೀಯರಿದ್ದಾರೆ. ಅದು ಜನಾಂಗೀಯ ನಿಂದನೆಯಾಗುತ್ತದೆ ಎಂದು ಒಂದು ಬಣ ವಾದಿಸುತ್ತಿದೆ. ಆದರೂ ಚೀನಾದ ಮಾಹಿತಿ ಮುಚ್ಚಿಡುವ ಚಾಳಿಯ ಬಗ್ಗೆ ವ್ಯಾಪಕವಾದ ಟೀಕೆಗಳು ಬರುತ್ತಿವೆ. ಕೊರೊನಾ ವೈರಸ್ ವ್ಯಾಪಿಸಿದ ಆರಂಭದಲ್ಲೇ ಜಗತ್ತಿಗೆ ಚೀನಾ ಎಚ್ಚರಿಕೆ ಕೊಡಲಿಲ್ಲ. ಜೊತೆಗೆ ಈಗಲೂ ಕೊರೊನಾ ಪಿಡುಗಿಗೆ ಎಷ್ಟು ಮಂದಿ ಬಲಿಯಾಗಿದ್ದಾರೆಂಬ ನಿಖರ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ದೇಶಗಳೂ ಚೀನಾದ ಈ ನಡೆಗೆ ಬೇಸರವನ್ನಷ್ಟೇ ಅಲ್ಲ, ರೋಷವನ್ನೂ ಹೊರಹಾಕುತ್ತಿವೆ. ಇದು ನಿರೀಕ್ಷಿತವಾದದ್ದೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.