ವಿಶ್ವದಲ್ಲೇ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ಭಾರತದಲ್ಲಿ ಈ ವರ್ಷದ ಮೊದಲ ತಿಂಗಳಲ್ಲೇ ದೇಶದಾದ್ಯಂತ 24 ಹುಲಿಗಳು ಮೃತಪಟ್ಟಿರುವುದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಹೋದ ವರ್ಷ 16 ಹುಲಿಗಳು ಮೃತಪಟ್ಟಿದ್ದರೆ, 2021ರಲ್ಲಿ 20 ಹುಲಿಗಳು ಜೀವ ಕಳೆದುಕೊಂಡಿದ್ದವು.
ಹೆಚ್ಚು ಸಾಂದ್ರತೆಯಿರುವ ಹುಲಿಗಳ ಆವಾಸಸ್ಥಾನದಲ್ಲಿ ಇದೊಂದು ನೈಸರ್ಗಿಕ ವಿದ್ಯಮಾನವೆಂದು ಪರಿಗಣಿಸಬಹುದಾದರೂ, ಈ ವರದಿ ಬರುವ ಹೊತ್ತಿನಲ್ಲೇ, ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಯುವಕನನ್ನು ಹುಲಿ ಬಲಿ ತೆಗೆದುಕೊಂಡಿದೆ. ಈ ಯುವಕನ 75 ವರ್ಷದ ಅಜ್ಜನೂ ಮಾರನೆಯ ದಿನ ಹುಲಿಯ ಬಾಯಿಗೆ ತುತ್ತಾದ ದಾರುಣ ಸುದ್ದಿ ರಾಜ್ಯದಾದ್ಯಂತ ಸುದ್ದಿ ಮಾಡಿತು. ರೋಷಗೊಂಡ ಸಾರ್ವಜನಿಕರು ಆ ಹುಲಿಯನ್ನು ಸೆರೆ ಹಿಡಿಯದೆ ಕೊಂದು ಹಾಕಬೇಕು ಎಂದು ಒತ್ತಾಯಿಸಿದ್ದನ್ನು ಮಾಧ್ಯಮಗಳು ಬಿತ್ತರಿಸಿದವು.
ಹುಲಿ ಮತ್ತು ಮಾನವ ಸಂಘರ್ಷ ಹೀಗೆ ವಿಕೋಪಕ್ಕೆ ಹೋಗುತ್ತಿದೆ. ಹುಲಿಯ ಬಾಯಿಗೆ ಮನುಷ್ಯ ಆಹುತಿಯಾಗುವುದು ಮತ್ತು ಮಾನವನ ಹಸ್ತಕ್ಷೇಪಕ್ಕೆ ಹುಲಿಗಳು ಬಲಿಯಾಗುತ್ತಿರುವ ವಿದ್ಯಮಾನ ಕಳವಳಕಾರಿ. ನೈಸರ್ಗಿಕ ವಾತಾವರಣದಲ್ಲಿ ವಾಸಿಸುವ ಹುಲಿಯು ಅತ್ಯಂತ ನಾಚಿಕೆ ಸ್ವಭಾವದ, ಮನುಷ್ಯನ ಕಣ್ಣಿಗೆ ಕಾಣಿಸಿಕೊಳ್ಳಲು ಇಷ್ಟಪಡದೇ ಇರುವ ಪ್ರಾಣಿಯಾಗಿದೆ. ಹುಲಿಯ ಆಹಾರದ ಪಟ್ಟಿಯಲ್ಲಿ ಮನುಷ್ಯನಿಗೆ ಸ್ಥಾನವೇ ಇಲ್ಲವೆಂಬುದು ವೈಜ್ಞಾನಿಕವಾಗಿ ಪ್ರಚುರಗೊಂಡ ವಿಷಯ. ಆದರೂ ಸಂಘರ್ಷವೇಕೆ? ಇದೊಂದು ಅತ್ಯಂತ ಸಂಕೀರ್ಣ ವಿಷಯವಾಗಿ ಮಾರ್ಪಟ್ಟು ದಶಕಗಳೇ ಕಳೆದಿವೆ. ದಿನೇ ದಿನೇ ಸಂಘರ್ಷ ಹೆಚ್ಚುತ್ತಲೇ ಇದೆ. ಪರಿಹಾರ ಮರೀಚಿಕೆಯಾಗಿದೆ.
‘ಮಲೆನಾಡಿನ ಹೆಬ್ಬಾಗಿಲು’ ಎಂದು ಕರೆಯಲಾಗುವ ಶಿವಮೊಗ್ಗ ಜಿಲ್ಲೆಯಲ್ಲಿ ನೂರು ವರ್ಷಗಳ ಹಿಂದೆ ನೂರಾರು ಹುಲಿಗಳು ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಂಡು ಮೆರೆಯುತ್ತಿದ್ದವು. ಶಿವಮೊಗ್ಗದಿಂದ ಸಾಗರದವರೆಗೆ ಹಾಗೂ ಅತ್ತ ಆಯನೂರಿನಿಂದ ಶಿಕಾರಿಪುರದವರೆಗಿನ ದಟ್ಟಕಾಡುಗಳು ಹುಲಿಗಳ ಬಹುಮುಖ್ಯ ನೆಲೆಯಾಗಿದ್ದವು. ನರಭಕ್ಷಕಗಳನ್ನು ಬೇಟೆಯಾಡಿ ಕೊಲ್ಲುತ್ತಿದ್ದ ಕೆನೆತ್ ಆ್ಯಂಡರ್ಸನ್‌ಗೆ ಶಿವಮೊಗ್ಗ ಜಿಲ್ಲೆಯಿಂದ ಒಂದೇ ದಿನ ಎಂಟು ಪತ್ರಗಳು ಬರುತ್ತವೆ. ಆ ಎಲ್ಲ ಪತ್ರಗಳಲ್ಲೂ ಹುಲಿಗಳು ಹಸುಗಳನ್ನು ಕೊಂದು ತಿಂದ ವಿಷಯವೇ ಇರುತ್ತದೆ. ಆ್ಯಂಡರ್ಸನ್‌ಗೆ ಅತ್ಯಂತ ಆಶ್ಚರ್ಯ ಹುಟ್ಟಿಸಿದ ಸಂಗತಿ ಇದಾಗಿರುತ್ತದೆ. ವಯಸ್ಸಾದ ಹುಲಿಯೊಂದು ಈ ಕೆಲಸ ಮಾಡಿರಬಹುದೇ ಎಂದು ಶಂಕಿಸಿದ ಆತ, ಇಡೀ ಪ್ರಕರಣವನ್ನು ಕೂಲಂಕಷವಾಗಿ ತನಿಖೆಗೆ ಒಳಪಡಿಸುತ್ತಾನೆ. ಬೇರೆ ಬೇರೆ ಕಡೆಗಳಲ್ಲಿ ಹಸುಗಳನ್ನು ಬೇಟೆಯಾಡಿದ ಹುಲಿ ಒಂದೇ ಅಲ್ಲ, ಬದಲಿಗೆ ಎಂಟು ಬೇರೆ ಬೇರೆ ಹುಲಿಗಳು ಎಂಬುದನ್ನು ಕಂಡುಕೊಳ್ಳುತ್ತಾನೆ. ಅಂದರೆ, ಶಿವಮೊಗ್ಗ ಜಿಲ್ಲೆಯು ಹುಲಿಗಳಿಗೆ ಬದುಕಲು ಹೇಳಿ ಮಾಡಿಸಿದ ಪ್ರದೇಶ
ವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.
ಈ ಜಿಲ್ಲೆಯಲ್ಲಿ ಸಂರಕ್ಷಣೆಗೊಳಪಟ್ಟ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಹಾಗೂ ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯ ಇವೆ. ಆದರೆ ಈ ವ್ಯಾಪ್ತಿಯಲ್ಲಿ ಈಗ ಹುಲಿಗಳು ಕಾಣಸಿಗುವುದು ಕಷ್ಟಸಾಧ್ಯ. ಒಂದು ಹುಲಿಗೆ ಕನಿಷ್ಠ 500 ಬಲಿಪ್ರಾಣಿಗಳು ಅಥವಾ ಗೊರಸುಳ್ಳ ಪ್ರಾಣಿಗಳ ಸಂಖ್ಯೆ ಇದ್ದರೆ ಅದು ಹುಲಿಯ ಜೀವನ ನಿರ್ವಹಣೆಗೆ ಪೂರಕವಾದ ಸಂಗತಿಯಾಗುತ್ತದೆ. ಅಣೆಕಟ್ಟು ನಿರ್ಮಾಣ, ಜನಸಂಖ್ಯೆ ಹೆಚ್ಚಳದಿಂದ ಆದ ಕಾಡಿನ ಒತ್ತುವರಿ, ಏಕಜಾತಿಯ ನೆಡುತೋಪು ಹಾಗೂ ಅಭಿವೃದ್ಧಿಯ ಕಾರಣಕ್ಕೆ ಸಂಕುಚಿತಗೊಂಡ ನೈಸರ್ಗಿಕ ಅರಣ್ಯ ಪ್ರದೇಶ, ಚರ್ಮ, ಉಗುರು, ಹಲ್ಲುಗಳಿಗಾಗಿ ನಿರಂತರ ಬೇಟೆಯ ಕಾರಣಕ್ಕೆ ಹುಲಿಗಳ ಸಂಖ್ಯೆ ಮಲೆನಾಡಿನಲ್ಲಿ ಗಣನೀಯವಾಗಿ ಕುಸಿದಿದೆ.
ಇಡೀ ಭಾರತಕ್ಕೆ ಅನ್ವಯಿಸುವಂತೆ ಹುಲಿಯನ್ನು ಮೇರುಜೀವಿಯೆಂದು ಪರಿಗಣಿಸಬಹುದಾದರೆ, ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಸಿಂಗಳೀಕಗಳು, ದೊಡ್ಡಮಂಗಟ್ಟೆ ಹಕ್ಕಿಗಳು, ಬಯಲುನಾಡಿನ ಹುಲ್ಲುಗಾವಲಿನಲ್ಲಿ ಕಂಡುಬರುವ ದೊರೆವಾಯನ ಪಕ್ಷಿಗಳು, ತೋಳಗಳು ಹಾಗೂ ಹಿಮಾಲಯದ ಹಿಮಚಿರತೆಗಳು, ಬ್ರಹ್ಮಪುತ್ರ ನದಿಪಾತ್ರದ ಹುಲ್ಲುಗಾವಲಿನಲ್ಲಿ ವಾಸಿಸುವ ಘೇಂಡಾಮೃಗಗಳಂತಹವು ಒಟ್ಟಾರೆ ಸಮೃದ್ಧವಾದ ಜೀವಿವೈವಿಧ್ಯವನ್ನು ಪ್ರತಿನಿಧಿಸುವ ಮೇರುಜೀವಿಗಳು. ಇವುಗಳ ಸರಾಗ ಸಮೃದ್ಧ ಬದುಕು ವೈವಿಧ್ಯಮಯವಾದ ಅರಣ್ಯಗಳನ್ನು, ವಿಸ್ತಾರವಾದ ಹುಲ್ಲುಗಾವಲುಗಳನ್ನು, ಜನರಹಿತ ಹಿಮಪರ್ವತಗಳನ್ನು, ನದಿಪಾತ್ರಗಳ ಸಮೃದ್ಧ ಹುಲ್ಲುಗಾವಲುಗಳನ್ನು ಅವಲಂಬಿಸಿದೆ.
ಎರಡು ಉದಾಹರಣೆಗಳನ್ನು ಇಲ್ಲಿ ನೀಡಬಹುದು. ಮೊದಲನೆಯದಾಗಿ, ಎಂದೆಂದೂ ನೆಲಕ್ಕೆ ಇಳಿಯಲು ಬಯಸದ ಸಿಂಗಳೀಕಗಳು ಬದುಕುಳಿಯಲು ಕನಿಷ್ಠ 425 ವಿವಿಧ ಜಾತಿಯ ವೃಕ್ಷಗಳಿರುವ ವಿಸ್ತಾರವಾದ ಅರಣ್ಯ ಇರಬೇಕು. ಅವಿಭಜಿತ ಹಾಗೂ ಅಭಿವೃದ್ಧಿರಹಿತ ಅರಣ್ಯ ಪ್ರದೇಶಗಳು ಇವು ವಾಸಿಸಲು ಅತ್ಯಂತ ಯೋಗ್ಯವಾಗಿವೆ. ಎರಡನೆಯದಾಗಿ, ಎರಡೂವರೆ ಅಡಿ ಎತ್ತರದಷ್ಟು ಬೆಳೆಯುವ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುವ ಅತ್ಯಪರೂಪದ ದೊರೆವಾಯನ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಪಕ್ಷಿಗಳ ಸಂತತಿಯನ್ನು ಉಳಿಸಿಕೊಳ್ಳಲೇಬೇಕು ಎಂದು ಖುದ್ದು ಸರ್ಕಾರವೇ ಕೋಟಿ ಕೋಟಿ ಹಣ ಎತ್ತಿಡುತ್ತಿದೆ. ಆದರೆ, ಅವುಗಳ ಸ್ವಾಭಾವಿಕ ಆವಾಸಸ್ಥಾನವನ್ನು ರಕ್ಷಣೆಗೊಳಪಡಿಸದ ವಿನಾ ಅವುಗಳನ್ನು ನೈಸರ್ಗಿಕ ನೆಲೆಯಲ್ಲಿ ಉಳಿಸಿಕೊಳ್ಳುವುದು ಅಸಾಧ್ಯ.
ನಮ್ಮಲ್ಲಿಯ ನೈಸರ್ಗಿಕ ಸಂಪತ್ತನ್ನು ಬಗೆದು ವಿದೇಶಕ್ಕೆ ರಫ್ತು ಮಾಡುವ ಒಂದೇ ಉದ್ದೇಶಕ್ಕಾಗಿ, ಪಶ್ಚಿಮಘಟ್ಟಗಳಲ್ಲಿರುವ ಹುಲಿ, ಆನೆ ಪಥಗಳು ಹಾಗೂ ಸಿಂಗಳೀಕಗಳ ಆವಾಸಸ್ಥಾನಗಳು ಛಿದ್ರವಾಗುತ್ತಿವೆ. ಮನುಷ್ಯ ಬದುಕಿದರೆ ಮಾತ್ರ ಪ್ರಾಣಿಗಳು ಬದುಕಲು ಅವಕಾಶ ಎಂಬ ಕೆಲವು ರಾಜಕಾರಣಿಗಳ ಅಧಿಕಾರಕೇಂದ್ರಿತ ನವನಾಣ್ನುಡಿಯ ಹಿಂದಿನ ಉದ್ದೇಶವು ಲಭ್ಯವಿರುವ ಅರಣ್ಯ ಪ್ರದೇಶ
ಗಳನ್ನು ಕಬಳಿಸುವ ಹುನ್ನಾರವೇ ಆಗಿದೆ.
ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಕಾಫಿ ತೋಟಗಳನ್ನು ಮಾರಾಟ ಮಾಡುವ ನೂರಾರು ಜನ ಸಿಗುತ್ತಾರೆ. ಈ ಭಾಗಗಳು ಹುಲಿ, ಆನೆ ಮತ್ತು ಮಾನವ ಸಂಘರ್ಷವಿರುವ ಕೇಂದ್ರಸ್ಥಾನಗಳೂ ಆಗಿವೆ. ರೈತರ ನಷ್ಟಕ್ಕೆ ಕಾರಣವಾಗಿರುವ ಕಾಫಿ ತೋಟಗಳನ್ನು ಖರೀದಿಸಿ ಕಾಡಿನ ವ್ಯಾಪ್ತಿಗೆ ಸೇರಿಸುವುದು ಸರ್ಕಾರಕ್ಕೆ ದುಬಾರಿ ವಿಷಯವೇನಲ್ಲ. ಆದರೆ, ಸರ್ಕಾರದ ಆದ್ಯತೆಗಳು ಮಾನವಕೇಂದ್ರಿತ ಹಾಗೂ ಮತಕೇಂದ್ರಿತ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿವೆ.
ಜಗತ್ತಿನ 800 ಕೋಟಿ ಜನಸಂಖ್ಯೆಯೂ ಭೂಮಿಯಲ್ಲಿನ ವನ್ಯಜೀವಿ ಹಾಗೂ ಜೀವಿವೈವಿಧ್ಯ ಆಧಾರಿತ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ. ಜಗತ್ತಿನ ಜನಸಂಖ್ಯೆಗೆ ಈ ಕುರಿತು ಅರಿವು ಮೂಡಿಸಲು ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್ 3ರಂದು ನಿಗದಿಪಡಿಸಲಾಗಿದ್ದು, ‘ವನ್ಯಜೀವಿ ಸಂರಕ್ಷಣೆಯಲ್ಲಿ ಭಾಗಿದಾರರು’ ಎಂಬುದು ಈ ಸಾಲಿನಘೋಷವಾಕ್ಯವಾಗಿದೆ.
ಮಾನವ ಮತ್ತು ವನ್ಯಜೀವಿಗಳ ಅನುಪಾತದ ಲೆಕ್ಕಾಚಾರದಲ್ಲಿ ವನ್ಯಜೀವಿಗಳ ಸಂಖ್ಯೆ ಹಾಗೂ ಅವುಗಳ ಆವಾಸಸ್ಥಾನಗಳ ವ್ಯಾಪ್ತಿ ತೀರಾ ಕಡಿಮೆಯಿದೆ. ಮಲೆನಾಡಿನಲ್ಲಿ ಮಂಗಗಳ ಹಾವಳಿ, ಕಾಟಿಗಳ ಕಾಟ ವಿಪರೀತವಾಗಿದೆ ಎಂಬುದು ಮಾತ್ರ ಗೋಚರಿಸುವ ಸಂಗತಿಯಾಗಿದೆ. ಮಲೆನಾಡಿನ ಕಾಡಿನಲ್ಲಿ ಮಂಗಗಳಿಗೆ ವರ್ಷಪೂರ್ತಿ ಆಹಾರ ಸಿಗುವುದಿಲ್ಲವೆಂಬುದನ್ನು, ಕಾಟಿಗಳು ಅತಿ ಇಷ್ಟಪಟ್ಟು ತಿನ್ನುವ ಶ್ರೀಗಂಧದ ಗಿಡಗಳು ಅಳಿದುಹೋಗಿರುವುದನ್ನು ಹಾಗೂ ಅವು ಅವಲಂಬಿಸಿಕೊಂಡಿದ್ದ ಜಲಮೂಲಗಳು ಕಣ್ಮರೆಯಾಗಿದ್ದನ್ನು ನಾವು ಗಮನಿಸುವುದೇ ಇಲ್ಲ. ಮಲೆನಾಡಿನಲ್ಲಿ ಸುಮಾರು ನಲವತ್ತು ವರ್ಷಗಳ ಹಿಂದೆ, ಕಾಟಿಗಳು ರೈತರ ಜಮೀನಿಗೆ ನುಗ್ಗಿದ, ಕಾಳಿಂಗ ಸರ್ಪಗಳು ಜನವಸತಿ ಪ್ರದೇಶಕ್ಕೆ ಬಂದ ಉದಾಹರಣೆಗಳು ಇರಲೇ ಇಲ್ಲ.
ಅಂದರೆ, ವನ್ಯಸಂಕುಲಗಳು ಬದುಕುಳಿಯಲು ಸ್ವಾಭಾವಿಕವಾದ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಿ, ಸಂರಕ್ಷಿಸಬೇಕಾಗುತ್ತದೆ. ಅದೇ ಸಂರಕ್ಷಿತ ಅರಣ್ಯಪ್ರದೇಶಗಳು ಮಾನವನಿಗೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಪ್ರತಿಫಲ ಬಯಸದೆ ನೀಡುತ್ತಾ ಮನುಕುಲದ ಸುಖ ಬಾಳುವೆಗೆ ಕಾರಣವಾಗುತ್ತವೆ.
ವನ್ಯಜೀವಿಗಳ ರಕ್ಷಣೆಗೆ ಪ್ರಥಮ ಆದ್ಯತೆ ನೀಡುವ ವಿಷಯದಲ್ಲಿ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸುವ ಮೂಲಕ ಮುಂದಿನ ಪೀಳಿಗೆಗೆ ಬದುಕಲು ಅವಕಾಶ ಮಾಡಿಕೊಡಬೇಕು. ವನ್ಯಜೀವಿ ಸಂರಕ್ಷಣೆಯಲ್ಲಿ ನಾವೂ ಭಾಗಿದಾರರಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.