ADVERTISEMENT

ವಿಶ್ಲೇಷಣೆ | ಯಶಸ್ಸಿನಲ್ಲೂ ಸಮಚಿತ್ತ: ನೀರಜ್‌ ಮಾದರಿ

ಗಿರೀಶ ದೊಡ್ಡಮನಿ
Published 19 ಸೆಪ್ಟೆಂಬರ್ 2024, 22:36 IST
Last Updated 19 ಸೆಪ್ಟೆಂಬರ್ 2024, 22:36 IST
   

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಾಗ ನನ್ನ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿಯಿತು. ಇನ್ನೊಂದೆಡೆ, ಈ ಹುಡುಗನ ಜೀವನವೇ ಬದಲಾಯಿತು. ಸಾಧಿಸಲು ಇನ್ನೇನು ಉಳಿದಿದೆ. ಜೀವನದಲ್ಲಿ ಸೆಟಲ್ ಆಗಿಬಿಟ್ಟ ಎಂದವರೂ ಬಹಳಷ್ಟು ಮಂದಿ. ಆದರೆ ಆ ಮಾತುಗಳಿಂದಾಗಿ ನಾನು ಉಬ್ಬಿಹೋಗಲಿಲ್ಲ ಮತ್ತು ಅಷ್ಟಕ್ಕೇ ತೃಪ್ತಿ ಹೊಂದಲಿಲ್ಲ. ಪ್ರತಿಯೊಂದು ಗೆಲುವು ಮತ್ತು ಪದಕ ಇನ್ನೊಂದು ಸಾಧನೆಗೆ ಮೆಟ್ಟಿಲಾಗಬೇಕು. ನನ್ನಲ್ಲಿ ಸಾಮರ್ಥ್ಯ ಇರುವವರೆಗೂ ಗೆಲ್ಲುತ್ತಲೇ ಇರಬೇಕು ಎಂದುಕೊಂಡೆ. ಅದೇ ದಾರಿಯಲ್ಲಿ ನಡೆಯುತ್ತಿರುವೆ. ಎಲ್ಲದಕ್ಕೂ ನಮ್ಮ ಮನಃಸ್ಥಿತಿಯೇ ಮುಖ್ಯ ಕಾರಣ. ಮನಸ್ಸಿದ್ದರೆ ಮಾರ್ಗ...’

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಾಡ್‌ಕಾಸ್ಟ್‌ನಲ್ಲಿ ಈಚೆಗೆ ಒಲಿಂಪಿಯನ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಹೇಳಿದ ಮಾತುಗಳಿವು. ಅವರ ಮಾತಿನಲ್ಲಿ ಯಶಸ್ಸನ್ನು ವಿನಯದಿಂದ ಸ್ವೀಕರಿಸುವ ಮತ್ತು ಅದನ್ನೇ ಮತ್ತಷ್ಟು ಉನ್ನತಿಗೆ ಏಣಿಯನ್ನಾಗಿಸುವ ಪಾಠ ಅಡಗಿದೆ. ಯಾವುದೇ ಕ್ಷೇತ್ರದಲ್ಲಿ ವೈಫಲ್ಯ ನಿಭಾಯಿಸಲು ಹತ್ತಾರು ಸಲಹೆಗಳು ಸಿಗುತ್ತವೆ. ಆದರೆ ಒಬ್ಬ ಯಶಸ್ವಿ ವ್ಯಕ್ತಿಯು ಮೈಮರೆತು ದಾರಿ ತಪ್ಪುವಾಗ ಬುದ್ಧಿ ಹೇಳಿ ಸರಿದಾರಿಗೆ ತರುವವರು ಕಡಿಮೆ. ಕ್ರೀಡಾ

ಕ್ಷೇತ್ರದಲ್ಲಿಯೇ ಉನ್ನತ ಯಶಸ್ಸು ಸಾಧಿಸಿದ ನಂತರ ಕೆಟ್ಟ ಹಾದಿ ಹಿಡಿದು ಪ್ರಪಾತಕ್ಕೆ ಉರುಳಿದವರ ಉದಾಹರಣೆಗಳು ಬಹಳಷ್ಟಿವೆ. ನಾಲ್ಕು ವರ್ಷಗಳಿಂದ ಸತತವಾಗಿ ಪದಕಗಳನ್ನು ಗೆದ್ದರೂ ಇನ್ನೂ ಹೆಚ್ಚಿನದನ್ನು ಸಾಧಿಸುವ ಛಲ ಮತ್ತು ಹುಮ್ಮಸ್ಸು ಕಾಪಾಡಿಕೊಂಡಿ

ADVERTISEMENT

ದ್ದಾರೆ ನೀರಜ್. ಅವರ ಸಾಧನೆಗೆ ಮನೋವಿಜ್ಞಾನ ಸಹ ಬಲ ತುಂಬಿದೆ. ನೀರಜ್ ಅವರಿಗೆ ತರಬೇತಿ ನೀಡುತ್ತಿದ್ದ ವಿದೇಶಿ ಕೋಚ್ ಕ್ಲಾಸ್ ಬಾರ್ಟೋನೀಜ್ ಅವರು ದೇಹಕ್ಕಿಂತಲೂ ಮನೋದಾರ್ಢ್ಯ ಬೆಳವಣಿಗೆಗೆ ಹೆಚ್ಚು ಒತ್ತು ಕೊಟ್ಟಿದ್ದು ಫಲ ನೀಡಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಅವರ ಬದುಕು ಬದಲಾಯಿತು. ಹಣ, ಕೀರ್ತಿ ಒಲಿಯಿತು. ಸವಲತ್ತುಗಳು ಹರಿದುಬಂದವು. ನೋಡಲು ಸ್ಫುರದ್ರೂಪಿಯೂ ಆಗಿರುವ ನೀರಜ್ ಅವರಿಗೆ ಹುಡುಗಿಯರೂ ಮನಸೋತರು. ‘ಮದುವೆ ಆಗ್ತೀರಾ?’ ‘ಪ್ರೀತಿಸುತ್ತೀರಾ?’ ಎಂಬ ಪ್ರಸ್ತಾವಗಳನ್ನು ಮುಂದಿಟ್ಟರು. ಇಂತಹ ಪ್ರಸ್ತಾವಗಳನ್ನು ನಯವಾಗಿ ತಿರಸ್ಕರಿಸಿದ ನೀರಜ್, ಈ ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಒಟ್ಟಾಗಿ ನೋಡಿದರೆ ಅಬ್ಬಾ ಎನಿಸದೇ ಇರದು. ಏಷ್ಯಾದ ಯಾವುದೇ ಅಥ್ಲೀಟ್ ಅಥವಾ ಕ್ರೀಡಾ ತಂಡಮಾಡದಿರುವುದನ್ನು ನೀರಜ್ ಸಾಧಿಸಿದ್ದಾರೆ. ಸ್ಥಿರತೆ, ಮನೋದಾರ್ಢ್ಯ ಮತ್ತು ಸರಳತೆಯ ರಾಯಭಾರಿ ಆಗಿದ್ದಾರೆ.

ಹಿಂದಿನ ನಾಲ್ಕು ವರ್ಷಗಳಲ್ಲಿ ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಷಿಪ್, ಏಷ್ಯನ್ ಗೇಮ್ಸ್, ಡೈಮಂಡ್ ಲೀಗ್ ಹಾಗೂ ಪಾವೊ ನುರ್ಮಿ ಗೇಮ್ಸ್‌ ಸೇರಿದಂತೆ ಐದು ಚಿನ್ನ ಮತ್ತು ನಾಲ್ಕು ಬೆಳ್ಳಿಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಬ್ರಸೆಲ್ಸ್‌ ಡೈಮಂಡ್ ಲೀಗ್‌ ಫೈನಲ್‌ನಲ್ಲಿ ಕೇವಲ ಒಂದು ಸೆಂಟಿಮೀಟರ್ ಅಂತರದಿಂದ ಅವರಿಗೆ ಚಿನ್ನ ಕೈತಪ್ಪಿತು. ಎಡಗೈ ಮೂಳೆಮುರಿತ ಮತ್ತು ತೊಡೆ ಸ್ನಾಯುವಿನ ಗಾಯದ ನೋವನ್ನು ಅವಡುಗಚ್ಚಿ ತಡೆದುಕೊಂಡೇ ಈ ಸಾಧನೆ ಮಾಡಿದ್ದಾರೆ. ಕಳೆದ ಇಡೀ ವರ್ಷ ಅವರು ಇಂತಹ ಗಾಯದ ನೋವು ಅನುಭವಿಸುತ್ತಲೇ 140 ಕೋಟಿ ಜನಸಂಖ್ಯೆಯಿರುವ ಭಾರತದ ನಿರೀಕ್ಷೆಯ ಭಾರವನ್ನು ಹೊತ್ತು ಕಣಕ್ಕಿಳಿದಿದ್ದಾರೆ.

ಕ್ರಿಕೆಟ್‌ ಆಟವನ್ನೇ ಉಸಿರಾಡುವ ದೇಶದಲ್ಲಿ ಜಾವೆಲಿನ್‌ ಥ್ರೋ ಎಂಬ ಸ್ಪರ್ಧೆಗೆ ತಾರಾಮೆರುಗು ತರುವುದೆಂದರೆ ಸುಲಭವೇನಲ್ಲ. ಈ ಹಿಂದೆ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್, ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್, ‘ಚಿನ್ನದ ಜಿಂಕೆ’ ಪಿ.ಟಿ. ಉಷಾ ಮತ್ತು ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಅವರು ತಾವು ಆಡಿದ ಕ್ರೀಡೆಗಳು ಜನಜನಿತವಾಗುವಂತೆ ಮಾಡಿದವರು. ಅದೇ ರೀತಿ ನೀರಜ್ ಕೂಡ ಜಾವೆಲಿನ್ ಥ್ರೋಗೆ ಅಂತಹ ಸ್ಥಾನಮಾನ ಗಳಿಸಿಕೊಟ್ಟಿದ್ದಾರೆ. ಭಾರತೀಯ ಅಥ್ಲೀಟ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸೋತಾಗಲೆಲ್ಲ ‘ನಮ್ಮ ದೈಹಿಕ ರಚನೆಯು ಯುರೋಪ್ ಅಥವಾ ಆಫ್ರಿಕಾದವರಂತೆ ಬಲಾಢ್ಯವಲ್ಲ. ಅಥ್ಲೆಟಿಕ್ಸ್, ಬಾಕ್ಸಿಂಗ್ ಮತ್ತಿತರ ಕ್ರೀಡೆಗಳು ನಮಗಲ್ಲ’ ಎಂಬ ಮಾತುಗಳು ಕೇಳಿಬರುತ್ತವೆ. ಇದನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗದು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದ ಈ ಕಾಲಘಟ್ಟದಲ್ಲಿ ಎಲ್ಲವೂ ಸಾಧ್ಯ ಎಂಬುದಕ್ಕೆ ನೀರಜ್ ಸಾಧನೆ ಉದಾಹರಣೆಯಾಗುತ್ತದೆ.

ಇವತ್ತು ಭಾರತದ ಕ್ರೀಡಾಕ್ಷೇತ್ರದಲ್ಲಿ ದೈಹಿಕ ತರಬೇತಿಯ ಜೊತೆಗೆ ಮನೋಬಲ ಹೆಚ್ಚಿಸುವುದಕ್ಕೂ ಒತ್ತು ನೀಡುವ ಅಗತ್ಯವಿದೆ. ಈಚೆಗೆ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಕಂಚಿನ ಪದಕ ಸುತ್ತಿನಲ್ಲಿ ಸೋತಾಗ ಕೋಚ್ ಪ್ರಕಾಶ್ ಪಡುಕೋಣೆ ಅವರು ಇದೇ ಮಾತು ಹೇಳಿದ್ದರು. ಕ್ರೀಡೆಯಲ್ಲಿ ಮನೋವಿಜ್ಞಾನದ ಬಳಕೆ ಹೆಚ್ಚಬೇಕು ಎಂಬುದು ಅವರ ಇಂಗಿತವಾಗಿತ್ತು. ಇತ್ತೀಚೆಗೆ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು 29 ಪದಕಗಳನ್ನು ಗೆದ್ದು ಇತಿಹಾಸ ಬರೆದರು. ತಮ್ಮ ಸಾಧನೆಯ ಹಿಂದೆ ಮನೋವಿಜ್ಞಾನದ ಪಾತ್ರ ಇತ್ತು ಎಂದು ಸಾಧಕರು ಹೇಳಿಕೊಂಡಿದ್ದಾರೆ.

‘ಹದಿಹರೆಯದವರಲ್ಲಿ ಹಾರ್ಮೋನುಗಳ ಬದಲಾವಣೆಯಾಗುವುದು ಸಹಜ ಪ್ರಕ್ರಿಯೆ. ಇದು ಭಾವನಾತ್ಮಕವಾದ ಕಾಲಘಟ್ಟ. ಇದೇ ಹಂತದಲ್ಲಿ ಲಭಿಸುವ ಉನ್ನತ ಯಶಸ್ಸನ್ನು ನಿಭಾಯಿಸುವುದು ಬಹಳ ಸೂಕ್ಷ್ಮವಾದ ಕಾರ್ಯ. ಸಾಧನೆಯೆಂದರೆ ಇದಷ್ಟೇ ಅಲ್ಲ, ಇನ್ನೂ ಬಹಳಷ್ಟಿದೆ, ಅದಕ್ಕಾಗಿ ಮುನ್ನಡೆಯಬೇಕು ಎಂಬ ಭಾವನೆಯನ್ನು ಕ್ರೀಡಾಪಟುಗಳಲ್ಲಿ ಮೂಡಿಸಬೇಕು. ಆಗ ಅವರು ಸರಿದಾರಿಯಲ್ಲಿ ಮುನ್ನಡೆಯುತ್ತಾರೆ’ ಎಂದು 11 ದೇಶಗಳ ಒಲಿಂಪಿಯನ್ ಅಥ್ಲೀಟ್‌ಗಳಿಗೆ ಮಾರ್ಗದರ್ಶನ ನೀಡುವ ಮೈಸೂರಿನ ಕ್ರೀಡಾ ಮನಃಶಾಸ್ತ್ರಜ್ಞೆ ಸಂಜನಾ ಕಿರಣ್ ಹೇಳುತ್ತಾರೆ.

ಉನ್ನತ ಸಾಧನೆಯ ನಂತರವಷ್ಟೇ ಅಲ್ಲ, ಪ್ರಾಥಮಿಕ ಮಟ್ಟದಿಂದಲೂ ಕ್ರೀಡಾಪಟುಗಳಿಗೆ ಮನೋವಿಜ್ಞಾನದ ನೆರವು ನೀಡುವಂತಾಗಬೇಕು ಎಂಬ ಮಾತುಗಳೂ ಕೇಳಿಬರುತ್ತಿವೆ. ವಿದೇಶಗಳಲ್ಲಿರುವ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಏಕೆಂದರೆ ಭಾರತದಲ್ಲಿ ಬಹುತೇಕ ಕ್ರೀಡಾಪ್ರತಿಭೆಗಳು ಸಿಗುವುದು ಗ್ರಾಮಾಂತರ ಪ್ರದೇಶಗಳಲ್ಲಿ. ಮಹಾನಗರಗಳ ನಡವಳಿಕೆಗೆ ಹೊಂದಿಕೊಳ್ಳುವುದು ತ್ರಾಸದಾಯಕ ಎಂಬ ಭಾವನೆ ಮತ್ತು ಕೀಳರಿಮೆಯಿಂದಾಗಿಯೇ ಬಹಳಷ್ಟು ಪ್ರತಿಭಾವಂತರು ತೆರೆಮರೆಯಲ್ಲಿ ಉಳಿದುಬಿಡುತ್ತಾರೆ. ಅವರಿಗೆ ಸೂಕ್ತ ಸಂದರ್ಭದಲ್ಲಿ ಮಾರ್ಗದರ್ಶನ ದೊರೆತರೆ ಉತ್ತಮ ಫಲಿತಾಂಶ ಸಿಗಬಹುದು. ನೀರಜ್ ಕೂಡ ಹರಿಯಾಣದ ಪುಟ್ಟ ಹಳ್ಳಿಯೊಂದರಿಂದಲೇ ಬಂದವರು. ಆದರೆ ಅಪ್ಪ ಮತ್ತು ಅಮ್ಮ ನೀಡಿದ ಮಾರ್ಗದರ್ಶನ ಅವರ ಜೀವನದ ದಿಕ್ಕು ಬದಲಿಸಿತು. ಯಶಸ್ವಿ ಕ್ರೀಡಾಪಟುವಾಗುವುದರ ಜೊತೆಗೆ ಉತ್ತಮ ವ್ಯಕ್ತಿತ್ವವೂ ಅವರದ್ದಾಗಿದೆ. ತಮ್ಮ ಪ್ರತಿಸ್ಪರ್ಧಿ ಪಾಕಿಸ್ತಾನದ ಅರ್ಷದ್ ನದೀಂ ಅವರೊಂದಿಗೆ ನೀರಜ್ ತೋರಿದ ಸಹೋದರತ್ವದ ನಡವಳಿಕೆ ಕ್ರೀಡಾಸ್ಫೂರ್ತಿಗೆ ಉತ್ತಮ ನಿದರ್ಶನ.

ಕೆಲವು ಹಿರಿಯ ಕ್ರೀಡಾಪಟುಗಳು ಒತ್ತಡ ಅಥವಾ ಮೆಂಟಲ್ ಕೋಚಿಂಗ್ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಆದರೆ ಇವತ್ತಿನ ಕಾಲಘಟ್ಟದಲ್ಲಿ ಕ್ರೀಡೆ ಬರೀ ದೈಹಿಕ ಚಟುವಟಿಕೆಯಾಗಿ ಉಳಿದಿಲ್ಲ. ವಾಣಿಜ್ಯಕ ಅಂಶಗಳೂ ಒಳಗೊಂಡಿರುವುದರಿಂದ ಸ್ಪರ್ಧೆಯ ಮಟ್ಟ ಹೆಚ್ಚಾಗಿದೆ. ಪೈಪೋಟಿಯ ಒತ್ತಡ ತಡೆದುಕೊಳ್ಳುವುದು ಸುಲಭವಲ್ಲ. ಈ ನಡುವೆ ಕೆಲವು ಯಶಸ್ವಿ ಕ್ರೀಡಾಪಟುಗಳೂ ಆತ್ಮಹತ್ಯೆ ಮತ್ತು ಅಪರಾಧ ಚಟುವಟಿಕೆಗಳಿಗೆ ಬಲಿಯಾಗಿರುವ ಉದಾಹರಣೆಗಳೂ ಇವೆ. ಆದ್ದರಿಂದ ಮನೋವಿಜ್ಞಾನದ ನೆರವು ಅತ್ಯಗತ್ಯ ಎಂಬುದು ನಿಸ್ಸಂಶಯ. ಇಂದಿನ ಮಕ್ಕಳಲ್ಲಿ ಆಟದ ಕುರಿತ ಜ್ಞಾನ ಮತ್ತು ತರಬೇತಿಯ ಕುರಿತ ಅರಿವು ಸಾಕಷ್ಟಿದೆ. ಆದರೆ ಪ್ರಮುಖ ಹಂತಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಾರೆ. ಕ್ರೀಡಾಪಟುವಿನಲ್ಲಿ ಸ್ವಸಾಮರ್ಥ್ಯದ ಅರಿವು ಮೂಡಿಸಬೇಕು. ಭಾವನಾತ್ಮಕವಾದ ಬೆಂಬಲ ನೀಡುವುದು ಮುಖ್ಯವಾಗುತ್ತದೆ. ಉತ್ತಮ ಸಾಮರ್ಥ್ಯ ಅಥವಾ ಕೊರತೆ ಯಾವುದೇ ಇರಲಿ ಅದನ್ನು ಸ್ವಯಂಪ್ರೇರಿತವಾಗಿ ಒಪ್ಪಿಕೊಳ್ಳುವ ಮನೋಭಾವ ಬೆಳೆಸಬೇಕು. ಯಶಸ್ಸನ್ನು ಗಳಿಸುವುದು ಎಷ್ಟು ಕಷ್ಟವೋ ಅದನ್ನು ಕಾಪಿಟ್ಟುಕೊಳ್ಳುವುದು ಅದಕ್ಕಿಂತಲೂ ಹೆಚ್ಚು ಕಷ್ಟ. ಈ ಸವಾಲನ್ನು ಮೀರಿ ನಿಂತಿರುವ ನೀರಜ್ ಪ್ರೇರಣೆಯಾಗುತ್ತಾರಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.