1995. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗಾಗಲಿ, ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕಾಗಲಿ ಬಹುಮತ ಸಿಗಲಿಲ್ಲ. ಪಕ್ಷೇತರರು ರಾಜ್ಯದಲ್ಲಿ ಆವರೆಗೆ ಅತಿಹೆಚ್ಚು ಎನ್ನಬಹುದಾದ 45 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರು. ಮೈತ್ರಿಕೂಟ ಅಧಿಕಾರಕ್ಕೆ ಬರಲು ಅವರ ಬೆಂಬಲ ಅತ್ಯಗತ್ಯವಾಗಿತ್ತು. ಪಕ್ಷೇತರರ ಸಹಯೋಗದಿಂದ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು.
29 ವರ್ಷಗಳ ನಂತರ ಈ ಬಾರಿ ಪಕ್ಷೇತರರು ಮತ್ತೆ ನಿರ್ಣಾಯಕ ಪಾತ್ರ ವಹಿಸಿದರೂ ಆಶ್ಚರ್ಯವಿಲ್ಲ. ಇದೇ 20ರಂದು ರಾಜ್ಯದ 288 ಕ್ಷೇತ್ರಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳ ಉಮೇದುವಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರಲ್ಲಿ ಅನೇಕರು ಗೆದ್ದರೂ ಆಶ್ಚರ್ಯವಿಲ್ಲ. ಈ ಬಾರಿ ಎರಡು ಮೈತ್ರಿಕೂಟಗಳ 6 ಪಕ್ಷಗಳು ಸ್ಪರ್ಧಿಸಿದ್ದು, ಬಹಳಷ್ಟು ಆಕಾಂಕ್ಷಿಗಳು ಪಕ್ಷದಿಂದ ಟಿಕೆಟ್ ಸಿಗದಿದ್ದ ಕಾರಣದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಎರಡೂ ಕೂಟಗಳಲ್ಲಿ ಇಲ್ಲದ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಆಘಾಡಿ, ರಾಜ್ ಠಾಕ್ರೆ ಅವರ ಎಂಎನ್‌ಎಸ್ ಶೇ 5-6ರಷ್ಟು ಮತಗಳನ್ನು ಸೆಳೆದರೂ ಅನೇಕ ಕಡೆ ಫಲಿತಾಂಶ ಹೆಚ್ಚುಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.
ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಮಹಾಯುತಿ (ಮಹಾಮೈತ್ರಿ) ಮೈತ್ರಿಕೂಟ (ಬಿಜೆಪಿ, ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ) ಹಾಗೂ ಮಹಾ ವಿಕಾಸ ಆಘಾಡಿ (ಎಂವಿಎ– ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ)– ಈ ಎರಡೂ ಮೈತ್ರಿಕೂಟಗಳಿಗೆ ಪಕ್ಷೇತರರ ಬಿಸಿ ತಟ್ಟಿದೆ. ಅಕ್ಟೋಬರ್‌ನಲ್ಲಿ ಹರಿಯಾಣ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ, ಗೆಲುವು ನಿಶ್ಚಿತವೆಂದೇ ನಂಬಿದ್ದ ಕಾಂಗ್ರೆಸ್, ಹಲವು ಮಂದಿ ಪಕ್ಷೇತರರು ಮತ್ತು ಬಂಡಾಯ ಅಭ್ಯರ್ಥಿಗಳ ಕಾರಣದಿಂದಾಗಿ ಸೋಲನುಭವಿಸಬೇಕಾಯಿತು.
ಮಹಾರಾಷ್ಟ್ರ ರಾಜಕೀಯವು ಅನೇಕ ವರ್ಷಗಳಿಂದ ನೈತಿಕತೆಯ ಅಧಃಪತನವನ್ನು ಕಂಡಿದೆ. ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ, ಬೆಳಿಗ್ಗೆ 5 ಗಂಟೆಗೆ ಬಿಜೆಪಿಯ ದೇವೇಂದ್ರ ಫಡಣವೀಸ್ ಅವರನ್ನು ತರಾತುರಿಯಲ್ಲಿ ಮುಖ್ಯಮಂತ್ರಿಯನ್ನಾಗಿ ನೇಮಿಸಿ, ರಾಜಭವನದಲ್ಲಿ ಪ್ರಮಾಣವಚನ ಬೋಧಿಸಲಾಯಿತು. ಒಟ್ಟು ಈ 5 ವರ್ಷಗಳಲ್ಲಿ ಮಹಾರಾಷ್ಟ್ರ ಕಂಡದ್ದು ಮೂವರು ಮುಖ್ಯಮಂತ್ರಿಗಳು, ಐವರು ಉಪಮುಖ್ಯಮಂತ್ರಿಗಳು, ಮೂವರು ವಿರೋಧ ಪಕ್ಷದ ನಾಯಕರು, ಇಬ್ಬರು ವಿಧಾನಸಭಾ ಅಧ್ಯಕ್ಷರು, ಅಷ್ಟಲ್ಲದೆ ಮೂವರು ರಾಜ್ಯಪಾಲರನ್ನು! ಒಬ್ಬ ನೇತಾರ (ಅಜಿತ್ ಪವಾರ್) ಎರಡು ಬಾರಿ ವಿರೋಧ ಪಕ್ಷದ ನಾಯಕ ಹಾಗೂ ಮೂರು ಬಾರಿ ಉಪಮಖ್ಯಮಂತ್ರಿಯಾದರೆ, ಇನ್ನೊಬ್ಬ ಮುಖಂಡ (ಫಡಣವೀಸ್) ಮುಖ್ಯಮಂತ್ರಿಯಾದ ನಂತರ ಉಪಮುಖ್ಯಮಂತ್ರಿ ಆದವರು! ಫಡಣವೀಸ್ ಈ ಐದು ವರ್ಷಗಳಲ್ಲಿ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದದ್ದು ಬರೀ 80 ಗಂಟೆ! ಇಷ್ಟೇ ಅಲ್ಲ, ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳು 2022ರಲ್ಲಿ ಹೋಳಾಗಿ, ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದವು.
ಪಶ್ಚಿಮದ ಈ ರಾಜ್ಯದಲ್ಲಿ 1990ರಿಂದ ಯಾವುದೇ ಒಂದು ಪಕ್ಷ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ರಾಜ್ಯ ಕಂಡದ್ದು 14 ಚುನಾವಣೆಗಳು ಹಾಗೂ 20 ಮಖ್ಯಮಂತ್ರಿಗಳನ್ನು. ಇವರಲ್ಲಿ ಕೆಲವರು ಒಂದಕ್ಕಿಂತ ಹೆಚ್ಚು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದವರು. ಇಬ್ಬರು ಮಾತ್ರ ಐದು ವರ್ಷದ ಪೂರ್ಣ ಅಧಿಕಾರಾವಧಿ ಪೂರೈಸಿದವರು.
ಮಹಾರಾಷ್ಟ್ರ ಚುನಾವಣೆ ಅನೇಕ ದೃಷ್ಟಿಯಿಂದ ಬಹಳ ಮಹತ್ವದ್ದು. ಉತ್ತರಪ್ರದೇಶದ ನಂತರ ಮಹಾರಾಷ್ಟ್ರವು ಹೆಚ್ಚು ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ. ಪ್ರಗತಿಪರ ಹಾಗೂ ಸಂಪನ್ಮೂಲಭರಿತ ರಾಜ್ಯವೆಂದೇ ಇದು ಹೆಗ್ಗಳಿಕೆ ಪಡೆದಿದೆ. ಮುಂಬೈ, ಮಹಾರಾಷ್ಟ್ರದ ರಾಜಧಾನಿಯಷ್ಟೇ ಅಲ್ಲ, ದೇಶದ ಹಣಕಾಸು ರಾಜಧಾನಿಯೆಂದೇ ಖ್ಯಾತಿ ಪಡೆದಿದೆ. ಆದರೆ ಇಲ್ಲಿನ ರಾಜಕೀಯ ಕ್ಷೇತ್ರದಲ್ಲಿ ಹಿಂದಿನ ಕೆಲವು ವರ್ಷಗಳಿಂದ ಆದ ರಾಡಿ, ಕೆಸರೆರಚಾಟ, ‘ಆಪರೇಷನ್ ಕಮಲ’ದಂತಹ ಬೆಳವಣಿಗೆಗಳು ರಾಜ್ಯದ ಘನತೆ, ಗೌರವವನ್ನು ಕಾಪಾಡಲು ಅಥವಾ ಮುನ್ನಡೆಸಲು ವಿಫಲವಾಗಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ವರ್ಷದ ಲೋಕಸಭಾ ಚುನಾವಣೆಯು ಮಹಾಯುತಿ ಹಾಗೂ ಎಂವಿಎ ಮೈತ್ರಿಕೂಟ ಎದುರಿಸಿದ ಮೊದಲ ಚುನಾವಣೆ. ಇಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಹಿನ್ನಡೆ ಅನುಭವಿಸಿದವು. ರಾಜ್ಯದ 48 ಕ್ಷೇತ್ರಗಳಲ್ಲಿ ಎಂವಿಎ 30 ಸ್ಥಾನಗಳನ್ನು ಗೆದ್ದರೆ, ಮಹಾಯುತಿ ಬರೀ 17 ಸ್ಥಾನಗಳನ್ನು ಗಳಿಸಿತು. ಆದರೆ ಮತಗಳಿಕೆಯಲ್ಲಿ ಹೆಚ್ಚು ವ್ಯತ್ಯಾಸವೇನೂ ಇರಲಿಲ್ಲ– ಎಂವಿಎ ಶೇ 43.71ರಷ್ಟು ಹಾಗೂ ಮಹಾಯುತಿ ಶೇ 43.55ರಷ್ಟು ಮತಗಳನ್ನು ಗಳಿಸಿದವು. ಪಕ್ಷವಾರು ಮತಗಳಿಕೆ ಪ್ರಮಾಣವನ್ನು ಗಮನಿಸಿದರೆ, ಬಿಜೆಪಿ 28 ಸ್ಥಾನಗಳಲ್ಲಿ ಸ್ಪರ್ಧಿಸಿ, ಎಲ್ಲಾ ಪಕ್ಷಗಳಿಗಿಂತ ಹೆಚ್ಚು ಎನಿಸಿದ ಶೇ 26.2ರಷ್ಟು ಮತಗಳನ್ನು ಗಳಿಸಿತು.
ಹಾಗಾದರೆ, ಈ ಚುನಾವಣೆಯಲ್ಲಿಯೂ ಮಹಾಯುತಿ ಸೋಲನುಭವಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರ ಸುಲಭವಿಲ್ಲ. ಹರಿಯಾಣ ವಿಧಾನಸಭೆಯ ಅನಿರೀಕ್ಷಿತ ಫಲಿತಾಂಶದ ನಂತರ ಯಾವುದೇ ಲೆಕ್ಕಾಚಾರ ತಲೆಕೆಳಗಾಗಬಹುದು. ಲೋಕಸಭೆ ಚುನಾವಣೆಯ ಸೋಲಿನಿಂದ ಪಾಠ ಕಲಿತಂತಿರುವ ಮಹಾಯುತಿ ಸಾಧ್ಯವಾದಷ್ಟೂ ಎಚ್ಚರಿಕೆಯ ಹೆಜ್ಜೆಯಿಟ್ಟಿದೆ. 288 ಕ್ಷೇತ್ರಗಳಿಗೆ ಲಗ್ಗೆಯಿಟ್ಟಿರುವ ಒಟ್ಟು 4,136 ಉಮೇದುವಾರರು, ರಾಜ್ಯದ 9.7 ಕೋಟಿ ಮತದಾರರ ಆಶೀರ್ವಾದ ಬೇಡುತ್ತಿದ್ದಾರೆ.
ಎರಡೂ ಮೈತ್ರಿಕೂಟಗಳಿಗೆ ಸೇರಿದ ಪಕ್ಷಗಳ ನೇರ ಹಣಾಹಣಿ ಮತ್ತು ಅದರ ಪರಿಣಾಮವನ್ನು ಕುತೂಹಲದಿಂದ ನೋಡಲಾಗುತ್ತಿದೆ. 75 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್, 49 ಕ್ಷೇತ್ರಗಳಲ್ಲಿ ಶಿವಸೇನಾ ಬಣಗಳು ಹಾಗೂ 38 ಕ್ಷೇತ್ರಗಳಲ್ಲಿ ಎನ್‌ಸಿಪಿ ಬಣಗಳು ಪರಸ್ಪರ ನೇರ ಹಣಾಹಣಿಯಲ್ಲಿವೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾರನ್ನೂ ಘೋಷಿಸಲಾಗಿಲ್ಲ.
ಮಹಾರಾಷ್ಟ್ರದ 5 ಭೌಗೋಳಿಕ ಪ್ರದೇಶಗಳಾದ ಕೊಂಕಣ್ (ಕರಾವಳಿ), ಪಶ್ಚಿಮ ಮಹಾರಾಷ್ಟ್ರ (ಪುಣೆ ವಿಭಾಗ), ಉತ್ತರ ಮಹಾರಾಷ್ಟ್ರ (ನಾಸಿಕ್), ಮರಾಠವಾಡ (ಔರಂಗಾಬಾದ್) ಮತ್ತು ವಿದರ್ಭ (ನಾಗಪುರ ಮತ್ತು ಅಮರಾವತಿ) ರಾಜಕೀಯ, ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ವಿಭಿನ್ನ. ಈ ಐದೂ ಪ್ರದೇಶಗಳು ಒಂದು ರಾಜ್ಯದ ಒಳಗಿರುವ ಬೇರೆ ಬೇರೆ ರಾಜ್ಯಗಳ ರೀತಿಯಲ್ಲಿಯೇ ಇವೆ. 62 ಕ್ಷೇತ್ರಗಳನ್ನು ಹೊಂದಿರುವ ವಿದರ್ಭ ಹಾಗೂ 46 ಕ್ಷೇತ್ರಗಳಿರುವ ಮರಾಠವಾಡ ಬಹಳ ಮಹತ್ವ ಹೊಂದಿವೆ. ಇಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆದ್ದವರು ಸರ್ಕಾರ ರಚಿಸುವ ಸಾಧ್ಯತೆ ಜಾಸ್ತಿ.
ಮರಾಠಿಗರ ಮೀಸಲಾತಿ ಆಂದೋಲನಕ್ಕೆ ಮರಾಠವಾಡವೇ ಹೃದಯ ಭಾಗ. ಈ ಆಂದೋಲನದ ನೇತೃತ್ವ ವಹಿಸಿರುವ ಜರಂಗೇ ಪಾಟೀಲ್ ಇಲ್ಲಿಯವರೇ. 2023ರಲ್ಲಿ ಆತ್ಮಹತ್ಯೆ ಮಾಡಿಕೊಂಡ 2,851 ರೈತರಲ್ಲಿ 1,088 ಮಂದಿ ಈ ಬರಪೀಡಿತ ಪ್ರದೇಶದವರು.
ಈ ಚುನಾವಣೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಹೆಚ್ಚಾಗಿ ಸ್ಥಳೀಯ ಸಮಸ್ಯೆಗಳು– ಈರುಳ್ಳಿ ಬೆಳೆಗಾರರ ಸಮಸ್ಯೆ, ರೈತರ ಆತ್ಮಹತ್ಯೆ, ಮರಾಠ ಮೀಸಲಾತಿ, ರಾಜ್ಯಕ್ಕೆ ಘೋಷಿಸಲಾಗಿದ್ದ ಯೋಜನೆಗಳನ್ನು ಗುಜರಾತ್‌ಗೆ ವರ್ಗಾಯಿಸಿದಂತಹ ಸಂಗತಿಗಳು ಇದರಲ್ಲಿ ಸೇರಿವೆ. ಹಿಂದುತ್ವ, ಮತಾಂತರ ವಿರೋಧಿ ಕಾಯ್ದೆ, ಗ್ಯಾರಂಟಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಹಣಕಾಸಿನ ಮುಗ್ಗಟ್ಟು, ಕರ್ನಾಟಕದ ವಕ್ಫ್ ಗೊಂದಲದಂತಹ ವಿಷಯಗಳು ಕೂಡ ಸದ್ದು ಮಾಡಿವೆ.
ಶಿಂದೆ ನೇತೃತ್ವದ ಸರ್ಕಾರ ಮಹಿಳೆಯರಿಗಾಗಿ ಜಾರಿ ಮಾಡಿರುವ ‘ಲಡ್ಕಿ ಬಹೀಣ್ ಯೋಜನ’ (ಪ್ರತಿ ಮಹಿಳೆಗೆ ತಿಂಗಳಿಗೆ ₹ 1,500) ಈಗಾಗಲೇ 2.5 ಕೋಟಿ ಫಲಾನುಭವಿಗಳನ್ನು ಹೊಂದಿದೆ. ಈ ಯೋಜನೆ ಮತ್ತು ಚುನಾವಣೆಯಲ್ಲಿ ಆರ್‌ಎಸ್‌ಎಸ್ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಮಹಾಯುತಿಗೆ ಬಲ ತಂದಿವೆ ಎನ್ನಲಾಗಿದೆ. ಎರಡೂ ಮೈತ್ರಿಕೂಟಗಳು ಭರಪೂರ ಭರವಸೆಗಳನ್ನು ನೀಡಿವೆ.
ಸುಮಾರು ಶೇ 28ರಷ್ಟಿರುವ ಮರಾಠ ಮತಗಳು, ಶೇ 52ರಷ್ಟಿರುವ ಹಿಂದುಳಿದ ವರ್ಗಗಳ ಮತಗಳು ಮತ್ತು ಶೇ 15ರಷ್ಟಿರುವ ದಲಿತ ಮತಗಳು ಚುನಾವಣೆಯ ಮೇಲೆ ನಿರ್ಣಾಯಕ ಪರಿಣಾಮ ಬೀರಬಹುದು.
ಒಂದುವೇಳೆ ವಿಧಾನಸಭೆ ಅತಂತ್ರವಾದರೆ? ಆಗ ಏನು ಬೇಕಾದರೂ ಆಗಬಹುದು. ಪಕ್ಷೇತರರ ಪಾತ್ರದ ಜೊತೆಗೆ, ಹೋಳಾದ ಎರಡು ಪಕ್ಷಗಳ ನಾಲ್ಕು ಗುಂಪುಗಳು ಯಾವುದೇ ಪಕ್ಷದ ಜೊತೆ ಕೈಜೋಡಿಸಿ ಅಧಿಕಾರ ಹಿಡಿಯಬಹುದು. ಪಕ್ಷಗಳು ಒಡೆದು ಶಾಸಕರು ಗೆದ್ದೆತ್ತಿನ ಬಾಲ ಹಿಡಿಯಬಹುದು.
ಲೇಖಕ: ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.