-ರಾಹುಲ್ ಗಾಂಧಿ
ಹಿಂದೂ ಧರ್ಮದ ಕುರಿತು ಚರ್ಚೆ ನಿರಂತರವಾಗಿ ಇರುವಂಥದ್ದು. ರಾಜಕೀಯವಾಗಿಯೂ ಇದು ಚರ್ಚೆಗೆ ವಸ್ತುವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡ, ಸಂಸದ ರಾಹುಲ್ ಗಾಂಧಿ ಅವರು ಹಿಂದೂ ಧರ್ಮದ ಕುರಿತು ಬರೆದ ವಿಶ್ಲೇಷಣಾತ್ಮಕ ಬರಹವೊಂದು ಇಲ್ಲಿದೆ...
ಜೀವನವೆಂದರೆ ಸಂತಸ, ಪ್ರೀತಿ ಮತ್ತು ಭೀತಿ ತುಂಬಿರುವ ವಿಶಾಲವಾದ ಸಾಗರದಲ್ಲಿ ಈಜುವುದು ಎಂದು ಭಾವಿಸಿ. ನಾವು ಈ ಸಾಗರದ ಸುಂದರವೂ ಭೀತಿ ಸೃಷ್ಟಿಸುವಂಥದ್ದೂ ಆದ ಆಳವನ್ನು ಅನುಭವಿಸುತ್ತ ಒಟ್ಟಾಗಿ ಬದುಕುತ್ತಿರುತ್ತೇವೆ. ಈ ಸಾಗರದಲ್ಲಿನ ಬಲಿಷ್ಠವಾದ, ನಿರಂತರವಾಗಿ ಬದಲಾಗುತ್ತ ಇರುವ ನೀರಿನ ಒಳಹರಿವನ್ನು ಎದುರಿಸಿ ಬದುಕಲು ಯತ್ನಿಸುತ್ತ ಇರುತ್ತೇವೆ. ಈ ಸಾಗರದಲ್ಲಿ ಪ್ರೀತಿ ಇದೆ, ನಂಟುಗಳು ಇರುತ್ತವೆ ಮತ್ತು ಅಪಾರ ಪ್ರೀತಿಯೂ ಇರುತ್ತದೆ. ಆದರೆ, ಇಲ್ಲಿ ಭೀತಿಯೂ ಇದೆ.
ಸಾವಿನ ಭಯ, ಹಸಿವಿನ ಭಯ, ಕಳೆದುಕೊಳ್ಳುವ ಭಯ, ನೋವು ಅನುಭವಿಸಬೇಕಾಗಬಹುದು ಎಂಬ ಭಯ, ಸೋಲುವ ಭಯ, ತಿರಸ್ಕಾರಕ್ಕೆ ಒಳಗಾಗುವ ಭಯ ಇಲ್ಲಿವೆ. ನಮ್ಮ ಬದುಕು ಎಂದರೆ ಈ ಸುಂದರ ಸಾಗರದಲ್ಲಿನ ಸಹಪಯಣ. ನಾವೆಲ್ಲ ಇಲ್ಲಿ ಒಟ್ಟಾಗಿ ಈಜುತ್ತಿದ್ದೇವೆ. ಇದು ಸುಂದರವಾಗಿರುವಂತೆಯೇ ಭಯ ಸೃಷ್ಟಿಸುವಂತೆಯೂ ಇದೆ. ಏಕೆಂದರೆ, ಜೀವನ ಎಂದು ಕರೆಸಿಕೊಳ್ಳುವ ಈ ಸಾಗರದಲ್ಲಿ ಕೊನೆಗೆ ಉಳಿದುಕೊಳ್ಳುವ ವ್ಯಕ್ತಿ ಯಾರೂ ಇಲ್ಲ. ಇಲ್ಲಿ ಯಾರೂ ಉಳಿದುಕೊಳ್ಳುವುದಿಲ್ಲ.
ತನ್ನೊಳಗಿನ ಭಯವನ್ನು ಮೀರಿನಿಂತು, ಈ ಸಾಗರವನ್ನು ನಿಜವಾಗಿ ನೋಡಲು ಸಮರ್ಥಳಾದ ವ್ಯಕ್ತಿಯೇ ಹಿಂದೂ. ಹಿಂದೂ ಧರ್ಮ ಅಂದರೆ ಸಾಂಸ್ಕೃತಿಕ ನಿಯಮಗಳ ಒಂದು ಗುಚ್ಛ ಎಂದು ಕರೆಯುವುದು ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಮ. ಈ ಧರ್ಮವನ್ನು ಒಂದು ದೇಶಕ್ಕೆ ಅಥವಾ ಒಂದು ಪ್ರದೇಶಕ್ಕೆ ಕಟ್ಟಿಹಾಕುವುದು ಅದರ ವ್ಯಾಪ್ತಿಯನ್ನು ಸೀಮಿತಗೊಳಿಸಿದಂತೆ. ನಮ್ಮೊಳಗಿನ ಭಯದೊಂದಿಗಿನ ಸಂಬಂಧವನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ, ಅದರ ಪರಿಣಾಮವನ್ನು ಹೇಗೆ ನಿಯಂತ್ರಿಸುತ್ತೇವೆ ಅದು ಹಿಂದೂ ಧರ್ಮ. ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಕಡೆ ಸಾಗುವ ಹಾದಿ ಹಿಂದೂ ಧರ್ಮ. ಇದು ಯಾರಿಗೂ ಸೇರಿದ್ದಲ್ಲ. ಆದರೆ ಇದರೊಂದಿಗೆ ಹೆಜ್ಜೆ ಹಾಕುವ ಮನಸ್ಸು ಇರುವ ಎಲ್ಲರಿಗೂ ಇದು ಮುಕ್ತವಾಗಿದೆ.
ಹಿಂದೂವಾದವಳು ಈ ಜೀವನ ಸಾಗರದಲ್ಲಿ ತನ್ನನ್ನೂ, ಇಲ್ಲಿನ ಎಲ್ಲರನ್ನೂ ಪ್ರೀತಿಯಿಂದ, ಸಹಾನುಭೂತಿಯಿಂದ ಮತ್ತು ಗೌರವದಿಂದ ಕಾಣುತ್ತಾಳೆ. ಏಕೆಂದರೆ, ನಾವೆಲ್ಲರೂ ಈಜುತ್ತಿರುವ ಮತ್ತು ಮುಳುಗುತ್ತಿರುವ ನೀರು ಒಂದೇ ಎಂಬುದು ಆಕೆಗೆ ಗೊತ್ತಿರುತ್ತದೆ. ಈಜುವ ಸಂದರ್ಭದಲ್ಲಿ ತನ್ನ ಸುತ್ತ ಸಮಸ್ಯೆಗೆ ಸಿಲುಕುವ ಎಲ್ಲರನ್ನೂ ರಕ್ಷಿಸಲು ಆಕೆ ಮುಂದಾಗುತ್ತಾಳೆ. ಅತ್ಯಂತ ಪಿಸುದನಿಯ ಆತಂಕವನ್ನೂ ತೀರಾ ಮೌನವಾದ ಚೀರುವಿಕೆಯನ್ನೂ ಆಕೆ ಗುರುತಿಸಬಲ್ಲಳು.
ಇತರರನ್ನು ರಕ್ಷಿಸಲು ಮುಂದಾಗುವುದು, ಇತರರನ್ನು ರಕ್ಷಿಸುವ ಕರ್ತವ್ಯಪ್ರಜ್ಞೆಯನ್ನು ಹೊಂದಿರುವುದು, ಅದರಲ್ಲೂ ಮುಖ್ಯವಾಗಿ ದುರ್ಬಲರನ್ನು ರಕ್ಷಿಸಲು ಮುಂದಾಗುವುದು ತನ್ನ ಧರ್ಮ ಎಂದು ಹಿಂದೂ ಹೇಳಿಕೊಳ್ಳುತ್ತಾಳೆ. ಜಗತ್ತಿನಲ್ಲಿ ಕಣ್ಣಿಗೆ ಕಾಣದ ಸಂಕಟಗಳಿಗೆ ಕಿವಿಗೊಡುವುದು ಹಾಗೂ ಸತ್ಯ ಮತ್ತು ಅಹಿಂಸೆಯ ಮಸೂರದ ಮೂಲಕ ಅವುಗಳಿಗೆ ಸ್ಪಂದಿಸಲು ಮುಂದಾಗುವುದು ಇದು.
ತನ್ನಲ್ಲಿನ ಭೀತಿಯ ಮೇಲೊಂದು ಆಳವಾದ ನೋಟ ಹರಿಸುವ ಮತ್ತು ಆ ಭೀತಿಯನ್ನು ಅಪ್ಪಿಕೊಳ್ಳುವ ಧೈರ್ಯ ಹಿಂದೂಗೆ ಇದೆ. ಶತ್ರುವಾಗಿರುವ ತನ್ನೊಳಗಿನ ಭೀತಿಯನ್ನು ಆಪ್ತ ಸ್ನೇಹಿತೆಯನ್ನಾಗಿ ಪರಿವರ್ತಿಸಿಕೊಳ್ಳುವುದನ್ನು ಆಕೆ ಕಲಿಯುತ್ತಾಳೆ. ಆ ಭೀತಿಯನ್ನು ಜೀವನದ ಮಾರ್ಗದರ್ಶಕ ಆಗಿಸಿಕೊಂಡು, ಅದನ್ನು ತನ್ನ ಜೀವನದುದ್ದಕ್ಕೂ ಜೊತೆಗಿರಿಸಿಕೊಳ್ಳುವುದನ್ನು ಕಲಿಯುತ್ತಾಳೆ. ಭೀತಿಯು ತನ್ನನ್ನು ಸೆರೆಹಿಡಿದು ಇರಿಸಿಕೊಂಡು, ತನ್ನನ್ನು ಕೋಪದ, ದ್ವೇಷದ ಮತ್ತು ಹಿಂಸೆಯ ವಾಹಕ ಆಗಿಸದಂತೆ ನೋಡಿಕೊಳ್ಳುತ್ತಾಳೆ.
ಜ್ಞಾನ ಯಾವುದೇ ಇರಲಿ ಅದು ಮೂಡುವುದು ಸಾಗರದ ಸಮಷ್ಟಿಯಿಂದ ಎಂಬುದು ಹಿಂದೂವಿಗೆ ಗೊತ್ತಿರುತ್ತದೆ. ಜ್ಞಾನವು ತನ್ನ ಸ್ವತ್ತು ಮಾತ್ರವೇ ಅಲ್ಲ ಎಂಬುದು ಆಕೆಗೆ ತಿಳಿದಿರುತ್ತದೆ. ಸಾಗರದೊಳಗಿನ ಹರಿವಿನಲ್ಲಿ ಎಲ್ಲವೂ ನಿರಂತರವಾಗಿ ವಿಕಾಸ ಹೊಂದುತ್ತ ಇರುತ್ತವೆ, ಅಲ್ಲಿ ಯಾವುದೂ ನಿಶ್ಚಲವಾಗಿ ಇರುವುದಿಲ್ಲ ಎಂಬುದು ಆಕೆಗೆ ಗೊತ್ತಿರುತ್ತದೆ. ಅರ್ಥ ಮಾಡಿಕೊಳ್ಳುವ ವಿಚಾರದಲ್ಲಿ ಮನಸ್ಸನ್ನು ಯಾವತ್ತೂ ತೆರೆದು ಇರಿಸಿಕೊಳ್ಳುವ ಕುತೂಹಲ ಆಕೆಗೆ ದಕ್ಕಿದೆ. ಹಿಂದೂವಾಗಿ ಆಕೆ ಯಾವತ್ತೂ ವಿನೀತಳಾಗಿರುತ್ತಾಳೆ. ಮಹಾಸಾಗರದಲ್ಲಿ ಈಜುತ್ತಿರುವ ಇತರ ಯಾವುದೇ ಜೀವಿಯಿಂದ ಹೊಸದನ್ನು ಕಲಿತುಕೊಳ್ಳಲು ಹಾಗೂ ಆ ಜೀವಿಯ ದನಿಗೆ ಕಿವಿಗೊಡಲು ಆಕೆ ಸದಾ ಸಿದ್ಧಳಿರುತ್ತಾಳೆ.
ಆಕೆ ಪ್ರತಿ ಜೀವಿಯನ್ನೂ ಪ್ರೀತಿಸುತ್ತಾಳೆ. ಸಾಗರದಲ್ಲಿ ಮುಂದಕ್ಕೆ ಸಾಗಲು ಹಾಗೂ ಸಾಗರವನ್ನು ಅರ್ಥ ಮಾಡಿಕೊಳ್ಳಲು ಪ್ರತಿ ಜೀವಿಗೂ ತನ್ನದೇ ಆದ ಮಾರ್ಗವನ್ನು ಅನುಸರಿಸುವ ಹಕ್ಕು ಇದೆ ಎಂಬುದನ್ನು ಆಕೆ ಒಪ್ಪುತ್ತಾಳೆ. ಎಲ್ಲ ಮಾರ್ಗಗಳೂ ತನ್ನವೇ ಎಂಬಂತೆ ಆಕೆ ಸ್ವೀಕರಿಸುತ್ತಾಳೆ, ಅವುಗಳನ್ನು ಗೌರವಿಸುತ್ತಾಳೆ, ಪ್ರೀತಿಸುತ್ತಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.