ಭಾರತವು 1949ರ ನವೆಂಬರ್ 26ರಂದು ಸಂವಿಧಾನವನ್ನು ವಿಧ್ಯುಕ್ತವಾಗಿ ಅಳವಡಿಸಿಕೊಂಡಿದ್ದೇ ಒಂದು ದಿಟ್ಟ ಪಯಣದ ಆರಂಭ. ಭಾರತದಲ್ಲಿ ಆಗ ಬಡತನ ವ್ಯಾಪಕವಾಗಿತ್ತು. ಅನಕ್ಷರಸ್ಥರೇ ಬಹುಸಂಖ್ಯೆಯಲ್ಲಿದ್ದರು. ಮೇಲಾಗಿ ಭಾರತವು ವಿವಿಧ ನಂಬಿಕೆಗಳ, ಭಾಷೆಗಳ ನೆಲವೀಡಾಗಿತ್ತು. ಯಾವ ದೃಷ್ಟಿಯಿಂದ ನೋಡಿದರೂ ಸಾಂವಿಧಾನಿಕ ಪ್ರಜಾಪ್ರಭುತ್ವ ಸ್ಥಾಪನೆಗೆ ನೆಲ ಹದಗೊಂಡಿರಲಿಲ್ಲ. ಹಾಗಾಗಿ, ಇದು ಜಗತ್ತಿನಲ್ಲೇ ಆ ಹಿಂದೆ ಕಂಡುಕೇಳರಿಯದಂತಹ ಪ್ರಯೋಗವಾಗಿತ್ತು.
ಸಾಂವಿಧಾನಿಕ ಪ್ರಜಾಪ್ರಭುತ್ವವಾಗುವ ಭಾರತದ ಪ್ರಯತ್ನವು ವಿಫಲವಾಗಲಿದೆ ಎಂಬುದು ಹಲವರ ಊಹೆಯಾಗಿತ್ತು. ಅಷ್ಟಕ್ಕೂ ಜಗತ್ತಿನ ವಿವಿಧ ದೇಶಗಳಲ್ಲಿನ ಲಿಖಿತ ಸಂವಿಧಾನದ ಸರಾಸರಿ ಬಾಳಿಕೆ ಅವಧಿಯು ಬರೀ 18 ವರ್ಷಗಳು. ಈ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನವು 75 ವರ್ಷಗಳನ್ನು ತಲುಪಿರುವುದೇ ಒಂದು ದೊಡ್ಡ ಸಾಧನೆ. ಈ ಕಾರಣಕ್ಕಾಗಿ, ಭಾರತದ ಸಂವಿಧಾನದ ಕ್ಷಮತೆಯನ್ನು ಸಂಭ್ರಮಿಸುತ್ತಿರುವ ಸಂದರ್ಭದಲ್ಲೇ, ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿ ಇರುವುದರ ನಿಜವಾದ ಅರ್ಥವೇನು ಎಂಬುದನ್ನು ಅವಲೋಕಿಸುವ ಅಗತ್ಯವಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ರಾಜಕಾರಣದಲ್ಲಿ ಸಂವಿಧಾನದ ಪ್ರಸ್ತಾಪವು ಹೆಚ್ಚೆಚ್ಚು ಕೇಳಿಬರುತ್ತಿದೆ. ವಿವಿಧ ರಾಜಕೀಯ ಪಕ್ಷಗಳು, ಅದರಲ್ಲೂ ಪ್ರತಿಪಕ್ಷಗಳು 2024ರ ಚುನಾವಣೆ ವೇಳೆ ಸಂವಿಧಾನವನ್ನು ಪರಮಪವಿತ್ರವೆಂದು ಆರಾಧಿಸಿ, ಚುನಾವಣೆಯು ‘ಸಂವಿಧಾನ ರಕ್ಷಣೆ’ಗಾಗಿನ ಸಮರವಾಗಿದೆ ಎಂದು ಪ್ರಚಾರ ಮಾಡಿದ್ದವು. ಜೇಬಲ್ಲಿ ಇರಿಸಿಕೊಳ್ಳಬಹುದಾದ ಪುಟಾಣಿ ಗಾತ್ರದ ಸಂವಿಧಾನದ ಪ್ರತಿಯನ್ನು ರಾಹುಲ್ ಗಾಂಧಿ ಅವರು ಹೋದೆಡೆಗಳಲ್ಲಿ ಪ್ರದರ್ಶಿಸುವುದಿರಬಹುದು ಅಥವಾ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಮುನ್ನ ಸಂಸತ್ತಿನಲ್ಲಿ ಅದಕ್ಕೆ ಶಿರಬಾಗಿ ನಮಸ್ಕರಿಸಿದ್ದಿರಬಹುದು, ಸಂವಿಧಾನದ ಸಾಂಕೇತಿಕ ಬಳಕೆಯು ಎಲ್ಲ ರಾಜಕೀಯ ಪಕ್ಷಗಳಲ್ಲೂ ಕಂಡುಬರುತ್ತಿದೆ; ಇಂತಹ ಸಾಂಕೇತಿಕ ನಡೆಗಳು ರಾಜಕೀಯ ಸ್ವಾರ್ಥದ ಉದ್ದೇಶ ಹೊಂದಿದ ಪ್ರದರ್ಶನಗಳಾಗಿ ಇರಬಹುದಾದರೂ ರಾಜಕೀಯ ಪಕ್ಷಗಳು ಸಂವಿಧಾನದ ಬಗ್ಗೆ ಈ ಮಟ್ಟಿಗಿನ ಆಸ್ಥೆ ತೋರುತ್ತಿರುವುದು ಒಂದು ಹೊಸ ಬೆಳವಣಿಗೆ.
ಈ ಬೆಳವಣಿಗೆಗಳು ಸ್ವಾಗತಾರ್ಹವೇ. ಆದರೆ ಇವುಗಳಾಚೆಗೆ ಸಂವಿಧಾನದ ನಿಜ ಪರಿಕಲ್ಪನೆಯನ್ನು ಇಂದಿನ ಸಾಮಾಜಿಕ–ರಾಜಕೀಯ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಅಂದರೆ, ಸಂವಿಧಾನದಲ್ಲಿ ಅಂತರ್ಗತವಾಗಿರುವ ಮೌಲ್ಯಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ ಇವೇ ಆ ಮೌಲ್ಯಗಳಾಗಿವೆ. ಈ ಮೌಲ್ಯಗಳ ಬಗ್ಗೆ ಯಾರಿಗೂ ತಕರಾರು ಇರಲು ಸಾಧ್ಯವಿಲ್ಲ. ಆದರೆ, ಅವುಗಳ ವ್ಯಾಖ್ಯಾನ ಹಾಗೂ ಅನುಸರಣೆಗೆ ಸಂಬಂಧಿಸಿದಂತೆ ವಾದ–ವಿವಾದ, ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಲೇ ಇವೆ. ಮುಖ್ಯವಾಗಿ ಭಾರತವು ಇಂತಹ ಮೌಲ್ಯಗಳುಳ್ಳ ಸಂವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವೇನಿತ್ತು ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು.
ಬಿ.ಆರ್.ಅಂಬೇಡ್ಕರ್ ಅವರು 1949ರ ಸೆ. 17ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿ, ‘ಪ್ರಭುತ್ವದ ಅಂಗಗಳನ್ನು ಸೃಷ್ಟಿಸುವುದಷ್ಟೇ ಸಂವಿಧಾನದ ಉದ್ದೇಶವಲ್ಲ. ಬದಲಿಗೆ, ಸಂವಿಧಾನ ನಮಗೆ ಬೇಕಾಗಿರುವುದು ಅಧಿಕಾರಸ್ಥರು ತಮ್ಮ ವ್ಯಾಪ್ತಿಯನ್ನು ಮೀರಿ ಶೋಷಣೆ ಮತ್ತು ದಬ್ಬಾಳಿಕೆಯಲ್ಲಿ ತೊಡಗುವುದನ್ನು ತಡೆಯುವುದಕ್ಕಾಗಿ. ಪ್ರಭುತ್ವದ ಅಧಿಕಾರಕ್ಕೆ ಪರಿಮಿತಿ ನಿಗದಿಗೊಳಿಸದಿದ್ದರೆ ಸಂಪೂರ್ಣ ನಿರಂಕುಶ ಆಡಳಿತ ಮತ್ತು ದಬ್ಬಾಳಿಕೆ ಉಂಟಾಗುತ್ತದೆ’ ಎಂದಿದ್ದರು. ಇದು, ಸಾಂವಿಧಾನಿಕತೆ (Constitutionalism) ಎಂಬ ಪರಿಕಲ್ಪನೆ.
ಸಾಂವಿಧಾನಿಕತೆ ಎಂಬುದು, ಅದರ ಶಾಸ್ತ್ರೀಯ ದೃಷ್ಟಿಕೋನದಲ್ಲಿ, ಅಧಿಕಾರಗಳನ್ನು ಚಲಾಯಿಸುವುದಕ್ಕೆ ಸಂಬಂಧಿಸಿದಂತೆ ಪ್ರಭುತ್ವಕ್ಕೆ ಕಾನೂನಾತ್ಮಕವಾಗಿ ಕಡಿವಾಣ ಹಾಕಬೇಕು ಎಂಬ ತತ್ವವನ್ನು ಉಲ್ಲೇಖಿಸುತ್ತದೆ. ಜೊತೆಗೆ, ಪ್ರಭುತ್ವವು ಈ ಪರಿಮಿತಿಗಳನ್ನು ಗೌರವಿಸುವುದರಿಂದ ಪ್ರಜೆಗಳಿಂದ ಸ್ವೀಕಾರಾರ್ಹತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿ, ಸಂವಿಧಾನ ಬೇಕಾಗಿರುವುದು ಜನರನ್ನು ಅಧಿಕಾರಸ್ಥರ ಬೇಕಾಬಿಟ್ಟಿ ಪ್ರವೃತ್ತಿಗಳಿಂದ ರಕ್ಷಿಸುವ ಸಲುವಾಗಿ ಹಾಗೂ ಚುನಾಯಿತ ಸರ್ಕಾರಗಳನ್ನು ಕಾನೂನಿನ ಪರಿಮಿತಿಯಲ್ಲಿ ಇರಿಸಿಕೊಳ್ಳುವುದಕ್ಕಾಗಿ. ಸಂವಿಧಾನವು ಜನರಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಮೂಲಭೂತ ಹಕ್ಕುಗಳೆಂದರೆ ಜನರಿಗೆ ಪ್ರಭುತ್ವದ ದಾಳಿಯಿಂದ ರಕ್ಷಿಸಿಕೊಳ್ಳಲು ಇರುವ ಅಸ್ತ್ರಗಳು.ಪ್ರಭುತ್ವದ ಅಧಿಕಾರವನ್ನು ಈ ರೀತಿ ಪ್ರತಿಬಂಧಿಸುವುದು ಅಷ್ಟೇ ಸಂವಿಧಾನದ ಉದ್ದೇಶವಲ್ಲ. ಇದರಾಚೆಗೆ ಸಂವಿಧಾನಕ್ಕೆ ಒಂದು ‘ಸಕಾರಾತ್ಮಕ’ ಉದ್ದೇಶವೂ ಇದೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಸಾಮಾಜಿಕ ಪರಿವರ್ತನೆಯು ಕಾನೂನಿನ ಮೂಲಕವೇ ಆಗಬೇಕಿರುವುದರಿಂದ ಸಂವಿಧಾನವು ಅಂತಹದ್ದೊಂದು ಸಾಧನವಾಗಿಯೂ ಪರಿಣಮಿಸಿದೆ. ಭಾರತೀಯ ಸಮಾಜವು ಇಂದು ಸಾಧಿಸಿದಷ್ಟಾದರೂ ಸಮಾನತೆಯನ್ನು ಈ ಸಂವಿಧಾನ ಇಲ್ಲದೇ ಹೋಗಿದ್ದರೆ ನಾವು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ.
ಮೂರನೆಯದಾಗಿ, ಸಂವಿಧಾನವು ಒಂದು ಒಡಂಬಡಿಕೆ. ಈ ಒಡಂಬಡಿಕೆಯಿಂದಾಗಿಯೇ ಭಾರತದ ವಿವಿಧ ಸಮುದಾಯಗಳು, ವಿವಿಧ ಧರ್ಮಗಳು, ವಿವಿಧ ಭಾಷೆಗಳನ್ನು ಆಡುವ ಜನರು, ವಿವಿಧ ಜನಾಂಗಗಳು, ಜಾತಿಗಳು ಪರಸ್ಪರ ಭೇದವನ್ನು ಮರೆತು ಭಾರತೀಯರಾಗಿ 75 ವರ್ಷಗಳ ಕಾಲ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಧ್ಯವಾಗಿದ್ದು ಮತ್ತು ಭಾರತದ ಪ್ರಭುತ್ವದೊಂದಿಗೆ ಒಂದು ಅವಿನಾಭಾವ ಸಂಬಂಧವನ್ನು ಉಳಿಸಿಕೊಂಡಿದ್ದು. ಸಂವಿಧಾನ ಎತ್ತಿ ಹಿಡಿಯುವ ಒಕ್ಕೂಟ ತತ್ವ ಕೂಡ ಈ ಒಡಂಬಡಿಕೆಯ ಮಹತ್ವದ ಅಂಶ. ಈ ತತ್ವದ ಮೂಲಕವೇ ವಿವಿಧ ರಾಜ್ಯಗಳನ್ನು ಬೆಸೆದು ಸಂವಿಧಾನವು ಭಾರತ ಎಂಬ ದೇಶವನ್ನು ರೂಪಿಸಿದ್ದು.
ರಾಜಕೀಯ ನಾಯಕರು ಇಂದು ಸಂವಿಧಾನದ ಬಗ್ಗೆ ಉದಾತ್ತ ಮಾತುಗಳನ್ನು ಆಡುವಾಗ ಜನ ಅವುಗಳನ್ನು ಕೇಳಿ ಬೆರಗಾಗುವುದರ ಬದಲು, ಸಂವಿಧಾನವು ಮೇಲಿನ ಮೂರು ಉದ್ದೇಶಗಳನ್ನು ಈಡೇರಿಸುವಲ್ಲಿ ಇಂದಿನ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತಿದೆ ಎಂಬುದರ ಬಗ್ಗೆ ಯೋಚಿಸಬೇಕಿದೆ. ಸಂವಿಧಾನದ ಮೂರು ಮೂಲ ಉದ್ದೇಶಗಳು ಅಂದರೆ ಪ್ರಭುತ್ವದ ಅಧಿಕಾರದ ಮೇಲೆ ನಿಯಂತ್ರಣ ಸಾಧಿಸುವುದು, ಸಾಮಾಜಿಕ ಪರಿವರ್ತನೆಯನ್ನು ಆಗುಮಾಡುವುದು ಮತ್ತು ವಿವಿಧ ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಯ್ದುಕೊಳ್ಳುವುದು – ಇವು ಇಂದು ಸವಾಲುಗಳನ್ನು ಎದುರಿಸುತ್ತಿವೆ. ಸಾಂವಿಧಾನಿಕ ಪ್ರಜಾತಂತ್ರದ ಎಲ್ಲ ಸಾಂಸ್ಥಿಕ ಪರಿಕರಗಳು ದುರ್ಬಲಗೊಳ್ಳುತ್ತಿವೆ. ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಮಹಾಲೇಖಪಾಲ ವ್ಯವಸ್ಥೆ (ಸಿಎಜಿ) ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಿರುವಾಗ ಸಂವಿಧಾನಕ್ಕೆ ಪ್ರಭುತ್ವದ ನಿರಂಕುಶ ಪ್ರವೃತ್ತಿಗಳ ಮೇಲೆ ಹಿಡಿತ ಸಾಧಿಸುವುದಕ್ಕೆ ಎಷ್ಟರಮಟ್ಟಿಗೆ ಸಾಧ್ಯ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ದೇಶದಲ್ಲಿ ಕಾಣಿಸುತ್ತಿರುವ ಅಧಿಕಾರ ಕೇಂದ್ರೀಕರಣ ಪ್ರವೃತ್ತಿಯು ಇದೇ ರೀತಿ ಮುಂದುವರಿದರೆ ಸಂವಿಧಾನವು ವಿವಿಧ ಸಮುದಾಯಗಳನ್ನು ಬೆಸೆಯುವ ಒಂದು ಒಡಂಬಡಿಕೆಯಾಗಿ ಉಳಿಯುವುದಾದರೂ ಹೇಗೆ? ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ಪೋಷಿಸುವ ಬೆಳವಣಿಗೆಗಳನ್ನು ನೋಡಿದರೆ ಸಂವಿಧಾನವು ಸಾಮಾಜಿಕ ಪರಿವರ್ತನೆಯ ಅಸ್ತ್ರವಾಗಿ ಪರಿಣಾಮಕಾರಿ ಆಗಿ ಹೇಗೆ ಉಳಿಯುತ್ತದೆ ಎಂಬ ಪ್ರಶ್ನೆಯೂ ಮೂಡುತ್ತದೆ. ಸಂವಿಧಾನಕ್ಕೆ 75 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ನಮ್ಮನ್ನು ಗಾಢವಾಗಿ ಕಾಡಬೇಕಿರುವ ಪ್ರಶ್ನೆಗಳಿವು.
ಲೇಖಕ: ಕಾನೂನು ಸಲಹೆಗಾರ ಹಾಗೂ ಸಂವಿಧಾನ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.