ADVERTISEMENT

ಕೋವಿಡ್ ಲಸಿಕೆ ಡೋಸ್‌ಗಳ ನಡುವೆ ಅಂತರ ಹೆಚ್ಚಳ: ‘ಗಿಮಿಕ್‌’ ಅಲ್ಲ, ತಜ್ಞರ ಶಿಫಾರಸು

ಡಾ.ಸಿ.ಎನ್‌.ಅಶ್ವತ್ಥನಾರಾಯಣ
Published 17 ಮೇ 2021, 19:30 IST
Last Updated 17 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವುದೇ ಕಾಯಿಲೆಗೆ ಲಸಿಕೆ ಅಭಿವೃದ್ಧಿಪಡಿಸುವುದು ಒಂದುಸಂಕೀರ್ಣ ಪ್ರಕ್ರಿಯೆ. ಇದಕ್ಕೆ ದಶಕ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಸಹಭಾಗಿತ್ವದಲ್ಲಿ ಇದು ನಡೆಯಬೇಕಾಗುತ್ತದೆ. ಅಭಿವೃದ್ಧಿ ಪಡಿಸಿದ ಲಸಿಕೆಯು ಬಳಕೆಗೆ ಸುರಕ್ಷಿತ ಎಂದು ಘೋಷಿಸಬೇಕಾದರೆ ಹಲವು ಹಂತಗಳ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಸಂಶೋಧನಾ ಹಂತದಿಂದ ಚಿಕಿತ್ಸಾಪೂರ್ವ ಹಂತದವರೆಗೆ ನಡೆಯುವ ಹಲವಾರು ಪರೀಕ್ಷೆಗಳಿಗೆ ವರ್ಷಗಳೇ ಬೇಕಾಗುತ್ತವೆ. ಇತರ ಸಾಮಾನ್ಯ ಔಷಧಗಳಿಗಿಂತ ವಿಸ್ತೃತ ಹಾಗೂ ಸಮಗ್ರ ಪರೀಕ್ಷೆಗೆ ಲಸಿಕೆಯನ್ನು ಒಳಪಡಿಸಲಾಗುತ್ತದೆ.

ಕೊರೋನಾ ವೈರಾಣು ತಡೆಗೆ ನಡೆದ ಲಸಿಕೆಯ ಆವಿಷ್ಕಾರವು 2020ರಲ್ಲಿ ಜಗತ್ತಿನ ಗಮನ ಸೆಳೆಯಿತು. ಕೊರೋನಾ ಲಸಿಕೆಯು ಅತ್ಯಂತ ತ್ವರಿತವಾಗಿ ಅಭಿವೃದ್ಧಿಗೊಂಡ ಲಸಿಕೆ ಎಂದು ವೈದ್ಯಕೀಯ ಇತಿಹಾಸದಲ್ಲಿ ದಾಖಲಾಗಲಿದೆ. ಸಂಬಂಧಪಟ್ಟ ನಿಯಂತ್ರಕ ಸಂಸ್ಥೆಗಳು ಕ್ಷಿಪ್ರವಾಗಿ ಅನುಮತಿಗಳನ್ನು ನೀಡಿದ್ದು ಹಾಗೂ ವಿಳಂಬಕ್ಕೆ ಆಸ್ಪದವಾಗದಂತೆ ಪ್ರತಿ ಹಂತದಲ್ಲೂ ಕಾರ್ಯನಿರ್ವಹಿಸಿದ್ದು ಇದಕ್ಕೆ ಕಾರಣ. ಹಾಗೆಂದಮಾತ್ರಕ್ಕೆ ವೈದ್ಯಕೀಯ ಸಂಹಿತೆಯ ಪಾಲನೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದಾಗಲಿ, ಲಸಿಕೆಯ ಅಪೇಕ್ಷಿತ ಫಲಿತಾಂಶವನ್ನು ಕಡೆಗಣಿಸಲಾಗಿದೆ ಎಂದಾಗಲಿ ಭಾವಿಸಬೇಕಾಗಿಲ್ಲ. ಸಿಡುಬನ್ನು ಹೇಗೆ ನಿರ್ಮೂಲನೆ ಮಾಡಲಾಯಿತು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಸಿಡುಬಿನಿಂದ ಸೋಂಕಿತರಾಗಿದ್ದ ಪ್ರತಿಯೊಬ್ಬರನ್ನೂ ಗುರುತಿಸಿ, ತಡಮಾಡದೆ ಅಂಥವರಿಗೆ ಲಸಿಕೆ ಹಾಕಲಾಯಿತು. ಈ ಕಾರ್ಯತಂತ್ರವು ಸೋಂಕಿನ ವಿರುದ್ಧದ ಹೋರಾಟದಲ್ಲಿ ಯಶಸ್ಸನ್ನು ತಂದುಕೊಟ್ಟಿತು. ಪ್ರತಿಯೊಂದು ವೈಜ್ಞಾನಿಕ ಆವಿಷ್ಕಾರವನ್ನೂ ಆರಂಭದಲ್ಲಿ ಅನುಮಾನದ ಕಣ್ಣುಗಳಿಂದಲೇ ನೋಡಲಾಗುತ್ತದೆ. ಆದರೆ, ಕಾಲಾಂತರದಲ್ಲಿ ಇಂಥ ಅನುಮಾನಗಳು ಅರ್ಥಹೀನ ಎಂಬುದು ಸಾಬೀತಾಗುತ್ತಲೇ ಬಂದಿದೆ.

ADVERTISEMENT

ರೋಗದ ವಿರುದ್ಧ ಗರಿಷ್ಠ ರಕ್ಷಣೆ ಲಭಿಸಬೇಕೆಂದಾದರೆ ಕೆಲವು ಲಸಿಕೆಗಳನ್ನು ಕೆಲವು ವಾರಗಳ ಅಥವಾ ತಿಂಗಳುಗಳ ಅಂತರದಲ್ಲಿ ಹಲವು ಡೋಸ್‌ಗಳಲ್ಲಿ ಕೊಡಬೇಕಾಗುತ್ತದೆ. ಲಸಿಕೆಯನ್ನು ಹಾಕಿಸಿಕೊಂಡ ವ್ಯಕ್ತಿಯ ದೇಹದೊಳಗೆ ಪ್ರತಿಕಾಯಗಳು ಬೆಳೆಯಲು ಡೋಸ್‌ಗಳ ನಡುವೆ ನಿಗದಿತ ಅಂತರ ಪಾಲಿಸುವುದು ಅಗತ್ಯ.

ಅದೇ ರೀತಿ, ಕೋವಿಡ್‌ಗೆ ಕೊಡಲಾಗುತ್ತಿರುವ ಕೋವಿಷೀಲ್ಡ್‌ ಲಸಿಕೆಯ ಡೋಸ್‌ಗಳ ನಡುವೆ ಹೆಚ್ಚಿನ ಅಂತರವಿದ್ದರೆ ಫಲಿತಾಂಶವು ಶೇ 90ರಷ್ಟು ಇರುತ್ತದೆ ಎಂಬ ಅಧ್ಯಯನ ವರದಿಯು ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್‌’ನಲ್ಲಿ ಈಚೆಗೆ ಪ್ರಕಟವಾಗಿದೆ. ‘ಕೋವಿಷೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವೆ 4ರಿಂದ 6 ವಾರಗಳ ಅಂತರ ಇರಬೇಕು’ ಎಂದು ಈ ಹಿಂದೆ ಶಿಫಾರಸು ಮಾಡಲಾಗಿತ್ತು. ಆದರೆ, ‘ಎರಡು ಡೋಸ್‌ಗಳ ನಡುವಿನ ಅಂತರವು 6ರಿಂದ 12 ವಾರಗಳಷ್ಟು ಇದ್ದರೆ ಉತ್ತಮ’ ಎಂದು ಇತ್ತೀಚೆಗೆ ನಡೆಸಿದ ಅಧ್ಯಯನದ ವರದಿಗಳು ಹೇಳಿವೆ.

ಲಸಿಕೆಯ ಡೋಸ್‌ಗಳ ನಡುವೆ ಇಂತಿಷ್ಟೇ ಅಂತರ ಇರಬೇಕು ಎಂಬ ನಿಯಮವೇನೂ ಇಲ್ಲ. ಆದರೂ, ದೇಹದಲ್ಲಿ ಪ್ರತಿರೋಧ ಶಕ್ತಿ ಬೆಳೆಯಬೇಕೆಂದರೆ ಕನಿಷ್ಠ 3 ವಾರಗಳ ಸಮಯ ಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ. ಇದೇ ವೇಳೆ, ಲಸಿಕೆ ಹಾಕಿಸಿಕೊಂಡ ಮೇಲೆ, ದೇಹದಲ್ಲಿ ಪ್ರತಿಕಾಯಗಳು ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಲು ಎಂಟು ವಾರಗಳು ಬೇಕಾಗುತ್ತವೆ ಎಂಬುದು ಪರಿಣತರ ಅಭಿಪ್ರಾಯವಾಗಿದೆ.

ಲಸಿಕೆಯ ಡೋಸ್‌ಗಳ ನಡುವೆ ಅವಧಿ ಹೆಚ್ಚಿದ್ದಷ್ಟೂ ಅದರ ಪರಿಣಾಮ ಹಾಗೂ ಸುರಕ್ಷತೆ ಹೆಚ್ಚು ಎಂಬುದನ್ನು ನಾವು ಮರೆತುಬಿಡುತ್ತೇವೆ. ಇದೀಗ ಕೋವಿಷೀಲ್ಡ್‌ ಡೋಸ್‌ಗಳ ನಡುವೆ ಅಂತರವನ್ನು ಹೆಚ್ಚಿಸಿರುವುದಕ್ಕೆ ಕೆಲವರು ತಮ್ಮದೇ ರೀತಿಯಲ್ಲಿ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು, ಕೇಂದ್ರ ಸರ್ಕಾರವು ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಲಸಿಕೆಯ ಡೋಸ್‌ಗಳ ನಡುವಿನ ಅಂತರವನ್ನು ಎರಡು ಸಲ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಡೋಸ್‌ಗಳ ನಡುವೆ 28 ದಿನಗಳ ಅಂತರವಿರಬೇಕು ಎಂದು ಆರಂಭದಲ್ಲಿ ತೀರ್ಮಾನಿಸಲಾಗಿತ್ತು. ಆ ಅವಧಿಯನ್ನು 6ರಿಂದ 8 ವಾರಗಳಿಗೆ ಹೆಚ್ಚಿಸಿ ಮಾರ್ಚ್‌ನಲ್ಲಿ ಆದೇಶ ನೀಡಲಾಯಿತು. ಇದೀಗ ಆ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಲಾಗಿದೆ. ರೋಗ ನಿರೋಧಕತೆ ಸಂಬಂಧವಾಗಿ ಕಾರ್ಯನಿರ್ವಹಿಸುವ ‘ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ’ವು ನೀಡಿದ ಸಲಹೆಗೆ ಅನುಸಾರವಾಗಿ ಈ ಪರಿಷ್ಕರಣೆಗಳನ್ನು ಮಾಡಲಾಗಿದೆ.

ಈ ಸಲಹೆ ಹಾಗೂ ನಿರ್ಧಾರವನ್ನು ಸಮರ್ಥಿಸುವಂತಹ ಕೆಲವು ಉದಾಹರಣೆಗಳನ್ನು ನಾವು ಗಮನಿಸಬೇಕಾಗಿದೆ. ಕೋವಿಷೀಲ್ಡ್‌ ಲಸಿಕಾ ಅಭಿಯಾನವನ್ನು ನಡೆಸುತ್ತಿರುವ ಬ್ರಿಟನ್‌ ಮತ್ತು ಕೆನಡಾ ದೇಶಗಳು, ಡೋಸ್‌ಗಳ ನಡುವಿನ ಅಂತರವನ್ನು ಈಗಾಗಲೇ 4 ತಿಂಗಳಿಗೆ ಹೆಚ್ಚಿಸಿವೆ. ಕೆನಡಾದಲ್ಲಿ ಕೋವಿಡ್‌ನ ಎಲ್ಲಾ ಲಸಿಕೆಗಳ ಎರಡು ಡೋಸ್‌ಗಳ ನಡುವಿನ ಅಂತರವನ್ನು 4 ತಿಂಗಳಿಗೆ ನಿಗದಿಗೊಳಿಸುವ ನೀತಿಯನ್ನು ಜಾರಿಗೆ ತರಲಾಗಿದೆ. ಬ್ರಿಟನ್‌ನಲ್ಲಿ ಎರಡನೇ ಡೋಸ್‌ ನೀಡುವ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ. ಅಲ್ಲಿ ಮೊದಲ ಡೋಸ್‌ ನೀಡಿದ ನಂತರ ಮರಣ ಪ್ರಮಾಣ ಇಳಿಮುಖವಾಗಿರುವುದು ಅಂಕಿ-ಅಂಶಗಳಿಂದ ಕಂಡುಬಂದಿದೆ. ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯೂ (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದೆ. ಇದರ ಹೊರತಗಿಯೂ, ಭಾರತದಲ್ಲಿ ಅಂತಹ ನಿರ್ಧಾರ ತೆಗೆದುಕೊಂಡರೆ ಅದನ್ನು ‘ರಾಜಕೀಯ ಗಿಮಿಕ್‌’ ಎಂದು ಮೂದಲಿಸಲಾಗುತ್ತದೆ ಎಂಬುದು ವಿಪರ್ಯಾಸ.

ಲಸಿಕೆ ಎಂಬುದು ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇರುವ ಮಾರ್ಗಗಳಲ್ಲಿ ಒಂದು. ಇದನ್ನೇ ಮಾಸ್ಕ್‌ ಧರಿಸದೇ ಇರಲು, ವ್ಯಕ್ತಿ-ವ್ಯಕ್ತಿಗಳ ನಡುವೆ ಭೌತಿಕ ಅಂತರ ಪಾಲಿಸದೇ ಇರಲು ಅಥವಾ ಸ್ವಚ್ಛತೆಯನ್ನು ನಿರ್ಲಕ್ಷಿಸಲು ನೀಡುವ ಪರವಾನಗಿ ಎಂದು ಭಾವಿಸಬಾರದು. ಲಸಿಕೆ ಹಾಕಿಸಿದರೂ ಕೊರೊನಾ ಸಂಪೂರ್ಣ ನಿರ್ಮೂಲನೆಯಾಗುವವರೆಗೆ ಈ ಅಭ್ಯಾಸಗಳನ್ನು ಪಾಲಿಸಲೇಬೇಕಾಗುತ್ತದೆ.

ಕೊರೊನಾ ತೊಡೆದುಹಾಕಲು ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಕೋವಿಡ್‌ ಲಸಿಕೆ ಹಾಕಿಸಿಕೊಂಡ ಮೇಲೆ ಸೋಂಕಿನ ಬಾಧೆಗೆ ಒಳಗಾಗುವ ಸಾಧ್ಯತೆ ಶೇ 5ರಷ್ಟು ಮಾತ್ರ ಇರುತ್ತದೆ ಎಂಬುದು ದೃಢಪಟ್ಟಿದೆ. ಲಸಿಕೆಗೆ ಸಂಬಂಧಿಸಿದಂತೆ ನಾಗರಿಕರಿಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಸಂಗತಿ ಎಂಬ ಅರಿವು ಸರ್ಕಾರಕ್ಕಿದೆ. ಈ ವಿಷಯವಾಗಿ ಪರಿಣತರು, ವಿಜ್ಞಾನಿಗಳು ಹಾಗೂ ಸರ್ಕಾರದ ಮೇಲೆ ವಿಶ್ವಾಸ ಇಡಬೇಕು. ‘ಸೋಂಕನ್ನು ಭೂಮಿಯ ಮೇಲಿನಿಂದ ನಿರ್ಮೂಲನೆ ಮಾಡುವ ಶಕ್ತಿ- ಸಾಮರ್ಥ್ಯ ಮನುಷ್ಯನಿಗೆ ಇದೆ’ ಎಂದು ಲೂಯಿಸ್‌ ಪಾಶ್ಚರ್‌ ಹೇಳಿದ್ದರು. ಅದರಂತೆ, ಕೋವಿಡ್‌-19 ನಿರ್ಮೂಲನೆಗೆ ನಾವೆಲ್ಲರೂ ಪಣತೊಡಬೇಕಾಗಿದೆ. ಒಗ್ಗಟ್ಟಿನಿಂದ ಹೋರಾಡಿದರೆ ಇದು ಸಾಧ್ಯ.

(ಲೇಖಕರು ಉಪ ಮುಖ್ಯಮಂತ್ರಿ, ಕೋವಿಡ್ ಕಾರ್ಯಪಡೆ ಅಧ್ಯಕ್ಷರು, ಕಸ್ತೂರಬಾ ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.